ಲಭಂತೇ ಬ್ರಹ್ಮನಿರ್ವಾಣಮೃಷಯಃ ಕ್ಷೀಣಕಲ್ಮಷಾಃ |
ಛಿನ್ನದ್ವೈಧಾ ಯತಾತ್ಮಾನಃ ಸರ್ವಭೂತಹಿತೇ ರತಾಃ || 5.25
‘ಕಲ್ಮವಿಲ್ಲದವರೂ ದ್ವಂದ್ವರಹಿತರೂ ಜಿತೇಂದ್ರಿಯರೂ ಸರ್ವಪ್ರಾಣಿಗಳ ಹಿತದಲ್ಲಿ ನಿರತರೂ ಆದ ಋಷಿಗಳು ಮುಕ್ತಿಯನ್ನು ಪಡೆಯುತ್ತಾರೆ.’ ಈ ಹಿಂದಿನ ಶ್ಲೋಕದ ಬ್ರಹ್ಮನಿರ್ವಾಣವೇ ಈ ಶ್ಲೋಕದಲ್ಲೂ ಬಂದಿದೆ. ಇಲ್ಲಿ ಐದು ಗುಣಗಳನ್ನು ಹಾಗೂ ಆ ಗುಣಗಳಲ್ಲಿರುವ ವ್ಯಕ್ತಿಯನ್ನು ಸೂಚಿಸಲಾಗಿದೆ. ಈ ಐದೂ ಗುಣಗಳಿರುವ ಒಬ್ಬ ಅಥವಾ ಈ ಐದರಲ್ಲಿ ಒಂದೊಂದು ಗುಣ ಇರುವ ಐದು ವ್ಯಕ್ತಿಗಳು ಬ್ರಹ್ಮನಿರ್ವಾಣ ಪಡೆಯುವರೆಂದು ಭಾವಿಸಬಹುದು. ನಿಸ್ವಾರ್ಥಭಾವದಿಂದ ಎಲ್ಲ ಪ್ರಾಣಿಗಳ ಹಿತಕ್ಕಾಗಿ ಶ್ರಮಿಸುವವರು ಕೆಲವು ವಿಶೇಷ ಗುಣಗಳನ್ನು ಹೊಂದಿರಬೇಕು. ಮನಸ್ಸನ್ನು ಏಕಾಗ್ರಗೊಳಿಸಲು ಪತಂಜಲಿ ಅನೇಕ ಮಾರ್ಗಗಳನ್ನು ಸೂಚಿಸಿದ್ದಾರೆ. ಅದು ಕಷ್ಟಸಾಧ್ಯ. ಒಂದು ಸುಲಭದ ಮಾರ್ಗ ತೋರಿಸುವನು. ‘ಮೈತ್ರೀಕರುಣಾಂ ಉದಿತೋಪೇಕ್ಷಾಣಾಂ ಸುಖ-ದುಃಖ-ಪುಣ್ಯ-ಅಪುಣ್ಯ ವಿಷಯಾಣಾಂ ಭಾವನಾತಃ ಚಿತ್ತ ಪ್ರಸಾದನಮ್ ಇದೊಂದು ಯೋಗಸೂತ್ರ. ಮನಸ್ಸು ಶಾಂತವಾಗಿ, ಏಕಾಗ್ರವಾಗಲು ಮುಂದಿನ ನಾಲ್ಕರಲ್ಲಿ ಯಾವುದನ್ನಾದರೂ ಆಚರಿಸಬಹುದು. ಅವುಗಳೆಂದರೆ ಸುಖಿಗಳಲ್ಲಿ ಮೈತ್ರಿಯನ್ನೂ, ದುಃಖಿಗಳಲ್ಲಿ ಕರುಣೆಯನ್ನೂ, ಪುಣ್ಯವಂತರಲ್ಲಿ ಹರ್ಷವನ್ನೂ, ಪಾಪಿಗಳಲ್ಲಿ ಉಪೇಕ್ಷೆಯನ್ನೂ ಭಾವಿಸುವುದರ ಮೂಲಕ ಚಿತ್ತಶಾಂತಿ ಸಾಧ್ಯ. ಆನಂದದಲ್ಲಿರುವವರ ಬಗ್ಗೆ ಅಸೂಯೆ, ದುಃಖದಲ್ಲಿರುವವರ ಬಗ್ಗೆ ಹಂಗಿಸದೆ, ಸಂತೋಷಪಡದೆ, ದಯೆ, ಸಾಧ್ಯವಾದಲ್ಲಿ ಸಹಾಯದ ಪ್ರಯತ್ನ, ಪ್ರಾರ್ಥನೆ, ಪುಣ್ಯವಂತನ ನೋಡಿ ಆನಂದಪಟ್ಟು ಸಮಾಧಾನಗೊಂಡು, ಪಾಪಿಯ ಬಗ್ಗೆ ದ್ವೇಷ ಮಾಡದೆ ತೊರೆಯಬೇಕು. ಹೀಗೆ ಭಾವಿಸಿ ನಡೆದಲ್ಲಿ ಮನಸ್ಸಿಗೆ ಶಾಂತಿ ಲಭಿಸುವುದು. ಇದೇ ‘ಸರ್ವಭೂತಹಿತೇರತಾಃ’. ಅದ್ವೆ ೖತದ ಸಾರ-ಸರ್ವಸ್ವವೆಂದರೆ ತನ್ನೊಳಗಿನ ಅಂತರಾತ್ಮನೇ (ಪರಮಾತ್ಮ) ಎಲ್ಲ ಜೀವಿಗಳಿದ್ದಾನೆಂದು ಅರಿತು, ತನ್ನನ್ನು ಮರೆತು ಜೀವಿಗಳಲ್ಲಿನ ಪರಮಾತ್ಮನನ್ನು ಆರಾಧಿಸುವುದೇ ಆಗಿದೆ.
ಋಷಿಗಳು: ‘ಋಷ್’ ಎಂದರೆ ಜ್ಞಾನ. ಆತ್ಮಜ್ಞಾನ ಸಂಪಾದಿಸಿಕೊಂಡವರೇ ನಿಜವಾದ ಋಷಿಗಳು. ಇವರು ಆತ್ಮಜ್ಞಾನಕ್ಕೆ ಸಹಾಯಕವಾದ ಇತರ ಜ್ಞಾನಿಗಳೊಡನೆ ಜೀವಿಸುವರು. ‘ಋಣಕಲ್ಮಷರು’ ಎಂದರೆ ಮನಸ್ಸಿನಲ್ಲಿ ಕೊಳೆಯನ್ನು ಸಂಪೂರ್ಣವಾಗಿ ತೊಳೆದುಕೊಂಡವರು. ಅರ್ಥಾತ್ ಅರಿಷಡ್ವರ್ಗಗಳನ್ನು ಗೆದ್ದವರು. ಪ್ರತಿ ಕೆಟ್ಟ ಗುಣಕ್ಕೂ ಒಂದು ಒಳ್ಳೆಯ ಗುಣವನ್ನು ಮನಸ್ಸಿನಲ್ಲಿ ಹಾಕಿ ಜಯಿಸಿದ್ದಾರೆ. ಭಕ್ತಿಮಾರ್ಗದಂತೆ, ಭಗವಂತನ ಅನುಗ್ರಹದಿಂದ, ಭಕ್ತಿಯ ಪ್ರಭಾವದಿಂದ ಅರಿಷಡ್ವರ್ಗಗಳನ್ನು ಗೆಲ್ಲಬಹುದು. ಶ್ರೀರಾಮಕೃಷ್ಣ ಪರಮಹಂಸರು ‘ಅರಿಷಡ್ವರ್ಗದ ಪ್ರತಿಯೊಂದು ಗುಣವನ್ನೂ ಭಗವಂತನೆಡೆಗೆ ತಿರುಗಿಸಿದರೆ ಅದೇ ಸದ್ಗುಣವಾಗುವುದು’ ಎನ್ನುತ್ತಿದ್ದರು. ‘ನನಗೇಕೆ ಇನ್ನೂ ಸಾಕ್ಷಾತ್ಕಾರವಾಗಿಲ್ಲ’ ಎಂದು ಭಗವಂತನಲ್ಲಿಯೇ ಕೋಪ ಮಾಡಿಕೊಳ್ಳುವುದು. ಸಂಶಯರಹಿತರು, ಸಮಾಧಾನಿಗಳು ಮುಕ್ತಿ ಪಡೆಯುವರು. ಕೆಲವರಿಗೆ ಭಗವಂತ ಎಲ್ಲ ಕೊಟ್ಟಿದ್ದರೂ ಮನಸ್ಸು ದುರ್ಬಲವಾಗಿ ಹೊಯ್ದಾಡುವುದು. ಇದು ಬಹಳ ಕೆಟ್ಟದ್ದು. ‘ಸಂಶಯಾತ್ಮಾ ವಿನಶ್ಯತಿ’ ಎಂದಿದ್ದಾನೆ ಭಗವಂತ. ದ್ವಂದ್ವರಹಿತರಲ್ಲಿ ಗೊಂದಲವೇ ಇರದು, ತಮ್ಮ ಮನಸ್ಸು ಯಾವುದರಿಂದ ಪರಿಶುದ್ಧವಾಗಿ ಭಗವಂತನನ್ನು ಪಡೆಯಬಹುದೆಂದು ಸ್ಪಷ್ಟವಾಗಿ ತಿಳಿದಿರುತ್ತಾರೆ. ಸಂಶಯರಹಿತರಾಗಿ, ಜ್ಞಾನಿಗಳಾಗಿ, ಕ್ಷೀಣಕಲ್ಮಷರಾಗಿ ಬ್ರಹ್ಮನಿರ್ವಾಣ ಪಡೆಯಲು ಸಾಧ್ಯವೆಂದು ಭಗವಂತ ಇಲ್ಲಿ ಸ್ಪಷ್ಟಪಡಿಸಿದ್ದಾನೆ. ನಾಲ್ಕನೆಯವರು ಯತಾತ್ಮರು. ಇಲ್ಲಿ ಆತ್ಮ ಎಂದರೆ ಮನಸ್ಸು. ಈ ಮನಸ್ಸನ್ನು ಇವರು ಗೆದ್ದಿರುತ್ತಾರೆ. ಕೆಟ್ಟ-ಭಾವನೆ ಬಂದಾಗ ಕೆಟ್ಟದ್ದನ್ನು, ಒಳ್ಳೆಯ ಭಾವನೆ ಬಂದಾಗ ಒಳ್ಳೆಯದನ್ನು ಮಾಡಲು ಉದ್ಯುಕ್ತರಾದರೂ, ಅನೇಕ ಬಾರಿ ಕೆಟ್ಟದ್ದೇ ಹೆಚ್ಚಾಗಿರುವುದು. ಆದ್ದರಿಂದ ಮನಸ್ಸನ್ನು ಪ್ರಯತ್ನದಿಂದ ಬಲವಂತವಾಗಿ ನಿಯಂತ್ರಿಸಬೇಕು. ಮನಸ್ಸಿನಲ್ಲಿನ ಉತ್ತಮ ಯೋಚನೆ ಬಲಪಡಿಸುತ್ತಿದ್ದಲ್ಲಿ ಕೆಟ್ಟ ಯೋಚನೆ ಬಂದಾಗ ಒಳ್ಳೆಯ ಮನಸ್ಸು ಸಹಾಯಕ್ಕೆ ಧಾವಿಸಿ, ಗೆಲ್ಲಲು ಪ್ರಯತ್ನಿಸುವುದು, ಶಕ್ತಿ ಕೊಡುವುದು. ಎಲ್ಲ ಪ್ರಾಣಿಗಳಿಗೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸುವವರು ಐದನೆಯವರು. ಇವರೂ ಬ್ರಹ್ಮನಿರ್ವಾಣ ಪಡೆಯುವರು.
ಕಾಮಕ್ರೋಧವಿಯುಕ್ತಾನಾಂ ಯತೀನಾಂ ಯತಚೇತಸಾಂ |
ಅಭಿತೋ ಬ್ರಹ್ಮನಿರ್ವಾಣಂ ವರ್ತತೇ ವಿದಿತಾತ್ಮನಾಮ್ || 5.26
‘ಅರಿಷಡ್ವರ್ಗಗಳಾದ ಕಾಮ-ಕ್ರೋಧಾದಿಗಳಿಂದ ಬಿಡುಗಡೆಯಾಗಿರುವರೂ ಮನಸ್ಸನ್ನು ವಶದಲ್ಲಿಟ್ಟುಕೊಂಡಿರುವವರೂ, ಆತ್ಮನನ್ನು ಸರಿಯಾಗಿ ತಿಳಿದುಕೊಂಡಿರುವವರೂ ಆದ ಯತಿಗಳಿಗೆ ಸರ್ವತ್ರ (ಬದುಕಿರುವಾಗಲೂ, ಮರಣಾನಂತರದಲ್ಲಿಯೂ) ಬ್ರಹ್ಮನಿರ್ವಾಣ ಇರುತ್ತದೆ.’ ಇಲ್ಲಿ ಭಗವಂತ ಕಾಮ-ಕ್ರೋಧಗಳೆಂಬ ಎರಡು ಶಬ್ದಗಳನ್ನು ಮಾತ್ರ ಬಳಸಿದ್ದಾನೆ. ಆರು ಕೆಟ್ಟ ಗುಣಗಳಲ್ಲಿ ಇವೆರಡು ಬಹಳ ಕೆಟ್ಟದ್ದು. ತೀವ್ರ ಆಸೆ ಬಂದಾಗ ತಡೆಯಲಾಗದು. ಆಸೆಗೆ ಭಂಗವಾದಾಗ ಕ್ರೋಧ ಉಂಟಾದವರು ಬುದ್ಧಿಯನ್ನು ಕಳೆದುಕೊಳ್ಳುತ್ತಾರೆಂದು ಮನು ಹೇಳಿದ್ದಾನೆ. ಬುದ್ಧಿಶೂನ್ಯವಾದಾಗ ತಂದೆ, ತಾಯಿ, ಗುರುಗಳ ಮೇಲೂ ಹಿಂಸೆಮಾಡುವರು. ಕಾಮಕ್ಕೆ ಒಳಗಾದವರಿಗೆ ಭಯ-ಲಜ್ಜೆಗಳು ಇರವು. ಇವುಗಳಿಂದ ಅನಾಹುತವಾಗಬಾರದೆಂದಿದ್ದರೆ ಅವು ಮನಸ್ಸಿನಲ್ಲಿ ಇರಲೇಬಾರದು. ‘ಯತೀನಾಂ’ ಎಂದರೆ ಸಂನ್ಯಾಸಿಗಳು ಎನ್ನುವರು ಶ್ರೀ ಶಂಕರಾಚಾರ್ಯರು. ಸರ್ವಕರ್ಮ ತ್ಯಜಿಸಿ ಭಗವಂತನಿಗಾಗಿ, ಸಾಕ್ಷಾತ್ಕಾರಕ್ಕಾಗಿ ಜೀವನವನ್ನು ಮುಡಿಪಾಗಿಟ್ಟು ಸತತ ಪ್ರಯತ್ನದಲ್ಲಿರುವುದರಿಂದ ಇವರನ್ನು ‘ಯತಿ’ ಎನ್ನುವರು. ಪ್ರಯತ್ನ ಶಬ್ದದಲ್ಲಿ ‘ಯತ್’ ಇದೆ. ಆಧ್ಯಾತ್ಮಿಕ ಜೀವನದಲ್ಲಿ ಪ್ರಗತಿಗಾಗಿ ಸಂನ್ಯಾಸ (ಆಂತರ್ಯದಲ್ಲಾದರೂ) ಮುಖ್ಯವೆನ್ನುವರು ವ್ಯಾಖ್ಯಾನಕಾರರು. ‘ಯತ್ ಚೇತಸಾಂ’ ಎಂದರೆ ಮನಸ್ಸನ್ನು ಗೆದ್ದು ಹತೋಟಿಯಲ್ಲಿಟ್ಟುಕೊಂಡು ನಿಯಂತ್ರಿಸುತ್ತಿದ್ದಾರೆ. ಮನಸ್ಸನ್ನು ಜಯಿಸಿದರೆ ಇಡೀ ಜಗವನ್ನೇ ಜಯಿಸಿದಂತೆ. ಇವೆಲ್ಲ ಸಾಧಿಸಿರುವುದರಿಂದ ಆತ್ಮವನ್ನು ಅನುಭವಕ್ಕೆ ತಂದುಕೊಂಡು ಆತ್ಮಜ್ಞಾನಿಗಳಾಗಿದ್ದಾರೆ. ಈ ಹಂತದಲ್ಲಿದ್ದಾಗ ಬ್ರಹ್ಮನಿರ್ವಾಣ ಇವರನ್ನು ಅರಸಿಕೊಂಡು ಬಂದು ಹರಸುವುದು. ಇದು ಜೀವಂತವಿರುವಾಗಲೇ ಅಥವಾ ಜೀವತ್ಯಾಗ ಮಾಡುವಾಗ ಲಭಿಸುವುದು. ಇದು ತಾನಾಗಿಯೇ ಸಹಜವಾಗಿ ಬರುವುದು.
ಸ್ಪರ್ಶಾನ್ ಕೃತ್ವಾ ಬಹಿರ್ಬಾಹ್ಯಾಂಶ್ಚಕ್ಷುಶ್ಚೈ ವಾಂತರೇ ಭ್ರುವೋಃ | ಪ್ರಾಣಾಪಾನೌ ಸಮೌ ಕೃತ್ವಾ ನಾಸಾಭ್ಯಂತರಚಾರಿಣೌ || ಯತೇಂದ್ರಿಯಮನೋಬುದ್ಧಿಃ ಮುನಿಮೋಕ್ಷಪರಾಯಣಃ | ವಿಗತೇಚ್ಛಾಭಯಕ್ರೋಧೋ ಯಃ ಸದಾ ಮುಕ್ತ ಏವ ಸಃ || 5.28
‘ಹೊರಗಿನ ಇಂದ್ರಿಯವಿಷಯಗಳನ್ನು ದೂರಗೊಳಿಸಿ ದೃಷ್ಟಿಯನ್ನು ಹುಬ್ಬುಗಳ ನಡುವೆ (ಅಥವಾ ಮೂಗಿನ ತುದಿಯಲ್ಲಿ) ನಿಲ್ಲಿಸಿ, ಪ್ರಾಣಾಯಾಮದ ಮೂಲಕ ಮೂಗಿನೊಳಗೆ ಸಂಚರಿಸುವ ಪ್ರಾಣ-ಅಪಾನಗಳನ್ನು ಸಮವಾಗಿ ಮಾಡಿ, ಫಲವಾಗಿ ಇಂದ್ರಿಯ-ಮನೋಬುದ್ಧಿಗಳನ್ನು ನಿಯಮಿಸುವ ಮೋಕ್ಷಪರಾಯಣನಾದ ಇಚ್ಛಾಭಯಕ್ರೋಧರಹಿತನಾದ ಯಾವ ಮುನಿ ಇರುವನೋ ಅವನು ಯಾವಾಗಲೂ ಮುಕ್ತನೇ.’ ಈ ಶ್ಲೋಕಗಳಲ್ಲಿ ಸ್ವಲ್ಪ ಪ್ರಾಣಾಯಾಮದ ವಿಚಾರವಿದೆ. ಪ್ರಾಣಾಯಾಮವನ್ನು ಗುರುಗಳ ಮೂಲಕ ಅಭ್ಯಾಸ ಮಾಡಬೇಕು. ಮನಸ್ಸಿಗೂ ಉಸಿರಾಟಕ್ಕೂ ಸಂಬಂಧವಿದೆ. ದುಃಖ ಕೋಪಗಳಿದ್ದಾಗ ಉಸಿರಾಟ ವೇಗವಾಗಿರುವುದು. ಶಾಂತವಾಗಿದ್ದಾಗ ನಿಧಾನವಾಗಿರುವುದು. ಉಸಿರಾಟವನ್ನು ನಿಗ್ರಹಿಸುವುದರ ಮೂಲಕ ಮನಸ್ಸನ್ನು ನಿಗ್ರಹಿಸಬಹುದು. ಇದೇ ಪ್ರಾಣಾಯಾಮದ ಹಿಂದಿರುವ ತತ್ತ್ವ ಮೋಕ್ಷವನ್ನೇ ಗುರಿಯಾಗಿಟ್ಟುಕೊಂಡ ಮುನಿ ಈ ಎಲ್ಲ ಸಾಧನೆಗಳನ್ನು ಅದಕ್ಕಾಗಿಯೇ ಮಾಡುತ್ತಾನೆ. ಕೋಪ-ಭಯ-ಆಸೆಗಳು ಮೋಕ್ಷಕ್ಕೆ ಮಾರಕವಾದುವು. ಸಾಧನೆಯಲ್ಲಿ ನೈತಿಕ ನಿಯಮಗಳಿದ್ದಾಗ ಮಾತ್ರ ಮುಕ್ತಿ ಲಭ್ಯ. ಮುಂದಿನ ಅಧ್ಯಾಯ ಸಂಪೂರ್ಣ ಯೋಗಕ್ಕೆ ಸಂಬಂಧಿಸಿದ್ದರಿಂದ ಈ ವಿಷಯಗಳನ್ನು ಭಗವಂತ ಇಲ್ಲಿ ಹೇಳಿದ್ದಾನೆ.
ಭೋಕ್ತಾರಂ ಯಜ್ಞತಪಸಾಂ ಸರ್ವಲೋಕಮಹೇಶ್ವರಂ | ಸುಹೃದಂ ಸರ್ವಭೂತಾನಾಂ ಜ್ಞಾತ್ವಾ ಮಾಂ ಶಾಂತಿಮೃಚ್ಛತಿ || 5.29 ‘ಯಜ್ಞ ತಪಸ್ಸುಗಳ ಭೋಕ್ತೃೆಂದೂ, ಸರ್ವಲೋಕಗಳ ಮಹೇಶ್ವರನೆಂದೂ, ಸರ್ವಪ್ರಾಣಿಗಳ ಸುಹೃತ್ (ಪ್ರತ್ಯುಪಕಾರ ಬಯಸದೆ ಉಪಕಾರಿಯಾಗಿರುವವನು) ಎಂದೂ ನನ್ನನ್ನು ಅರಿತು (ಯೋಗಿಯು) ಶಾಂತಿಯನ್ನು ಹೊಂದುತ್ತಾನೆ.’ ಫಲಪ್ರಾಪ್ತಿಗಾಗಿ ಯಜ್ಞ, ತಪಸ್ಸುಗಳನ್ನು ಮಾಡಿದಾಗ ಅವುಗಳ ಫಲ ಅನುಭವಿಸುವವನು ಭಗವಂತನೇ. ನಮ್ಮ ಫಲ ಅವನಿಗೇಕೆ ಎಂಬ ಪ್ರಶ್ನೆ ಬರುವುದು. ಯಜ್ಞ, ತಪಸ್ಸುಗಳ ಫಲವನ್ನು ಕರ್ತೃ ಅನುಭವಿಸಿದರೂ ಅವನ ಮೂಲಕ ಅದು ಅಂತಿಮವಾಗಿ ಭಗವಂತನಿಗೆ ತಲುಪುವುದು. ನಾವು ಮಾಡುವ ಯಜ್ಞ, ತಪಸ್ಸುಗಳಿಗೆ ಭಗವಂತ ರಕ್ಷಣೆ ಕೊಟ್ಟಾಗ ಮಾತ್ರ ಅವು ಫಲಿಸುವುವು. ರಾಮಕೃಷ್ಣ ಆಶ್ರಮದಲ್ಲಿ ಬ್ರಹ್ಮಚರ್ಯೆ ದೀಕ್ಷೆ ಕೊಡುವಾಗ ಮಾಡುವ ಪ್ರತಿಜ್ಞೆಯನ್ನು ಆಜೀವ ಪಾಲಿಸಬೇಕು. ಆಗ ಪ್ರತಿ ಮಂತ್ರ ಹೇಳಿದ ನಂತರ ‘ಶ್ರೀರಾಮಕೃಷ್ಣರು ನನಗೆ ಸಹಾಯ ಮಾಡಲಿ’ ಎಂದು ಬಿಲ್ವಪತ್ರೆಯನ್ನು ಹೋಮದಲ್ಲಿ ಅರ್ಪಿಸಬೇಕು. ನಾನು ಆಜೀವ ಮಾಡುವ ವ್ರತಕ್ಕೆ ಶ್ರೀರಾಮಕೃಷ್ಣರು, ಪರಮಾತ್ಮ ಸಹಾಯ ಮಾಡಿದಲ್ಲಿ ಮಾತ್ರ ಈ ವ್ರತ ನಡೆಸಲು ಸಾಧ್ಯ. ಈ ಭಗವಂತ ಹದಿನಾಲ್ಕು ಲೋಕಗಳಿಗೂ ಅಧಿಪತಿ. ಎಲ್ಲ ಪ್ರಾಣಿಗಳಿಗೂ ಸಹೃದಯ ಪ್ರೀತಿಯ ಸಹಾಯಕ ಪರಮಾತ್ಮ. ಇವೆಲ್ಲವನ್ನೂ ತಿಳಿದುಕೊಂಡವರು ಶಾಂತಿಯನ್ನು (ಮೋಕ್ಷ) ಪಡೆಯುವರು. ಒಟ್ಟಿನಲ್ಲಿ ಪರಮಾತ್ಮನಲ್ಲಿ ಸಂಪೂರ್ಣ ಶರಣಾಗತಿ ಮಾಡಿ, ಅವನ ಕರುಣೆ, ಕೃಪೆಗಳಿಂದ ಮೋಕ್ಷ ಪಡೆಯಬಹುದು. ಈ ದಿಕ್ಕಿನಲ್ಲಿ ಭಗವಂತನನ್ನು ಮರೆಯದೆ ನಾಮಸ್ಮರಣೆ, ಸತತ ಪ್ರಯತ್ನ, ಶಕ್ತಿಯಿದ್ದಷ್ಟು ತಪಸ್ಸನ್ನು ಅವನ ಕೃಪೆಯಿಂದ ಮಾಡಿ ಮೋಕ್ಷ ಪಡೆಯಬಹುದು. ಇಲ್ಲಿ ಭಗವಂತ ತನ್ನ ಬಗ್ಗೆ ಹೇಳಿಕೊಂಡು, ಅದನ್ನರಿತಾಗ, ಆ ಮೂಲಕ ತನ್ನನ್ನು ಆಶ್ರಯಿಸಿದಾಗ ಮೋಕ್ಷ ಪಡೆದವರೆಂದು ಘೊಷಿಸಿದ್ದಾನೆ. (ನಿರೂಪಣೆ: ರಾಮಾಯಣ ಸುರೇಶ್ಕುಮಾರ್)