More

    ಸಮ್ಮೋಹನವೆಂಬ ಪರದೆ ಸರಿಸಿ: ಮಹಿಳೆಯರಿಗೆ ಕೆಲ ಧಾರ್ಮಿಕ ಕ್ಷೇತ್ರಗಳೇ ಶಾಪವಾಗುತ್ತಿವೆಯಾ?

    ಬದುಕಿನ ಜಂಜಾಟದಿಂದ ನೊಂದಿರುವ ಮಹಿಳೆಯರ ಮನಸ್ಸಿಗೆ ನೆಮ್ಮದಿ ನೀಡಬೇಕಿದ್ದ ಕೆಲವು ಧಾರ್ವಿುಕ ಕ್ಷೇತ್ರಗಳು, ಮಠಗಳು ಇಂದು ಅವರಿಗೆ ಶಾಪವಾಗಿ ಪರಿಣಮಿಸುತ್ತಿವೆೆ. ಸಕಾರಾತ್ಮಕ ಸಮ್ಮೋಹನದಿಂದ ಖಿನ್ನತೆಯನ್ನು ದೂರಮಾಡಬೇಕಿರುವ ಈ ಸ್ಥಳಗಳಲ್ಲಿ ಅತ್ಯಾಚಾರ, ಅನಾಚಾರಗಳು ಸಾಮಾನ್ಯ ಎನಿಸಿಬಿಟ್ಟಿವೆ. ಇಂಥ ಸಂದರ್ಭದಲ್ಲಿ ಮಹಿಳೆ ಹೇಗೆ ಎಚ್ಚರಿಕೆ ವಹಿಸಬೇಕು? ಸಮ್ಮೋಹನಕ್ಕೆ ಒಳಗಾಗುವುದನ್ನು ಹೇಗೆ ಗುರುತಿಸಬೇಕು? ಇಲ್ಲಿದೆ ಮಾಹಿತಿ…

    ಒಬ್ಬರು ವಯಸ್ಸಾದ ಮಹಿಳೆ. ವಿಪರೀತ ಕಾಲು ನೋವಿನಿಂದ ಬಳಲುತ್ತಿದ್ದರು. ಒಂದು ಹೆಜ್ಜೆಯನ್ನೂ ಮುಂದಕ್ಕೆ ಇಡಲು ಆಗುತ್ತಿರಲಿಲ್ಲ. ತೀರಾ ಕಷ್ಟಪಟ್ಟು ಪ್ರವಚನ ಕೇಳಲು ಹೋದರು. ಕೆಲವೊಂದು ಪ್ರವಚನಗಳ ಅಂತ್ಯದಲ್ಲಿ ಆನಂದ ನರ್ತನ ನಡೆಯುತ್ತದೆ. ಅಂದು ನಡೆದ ಆನಂದ ನರ್ತನದಲ್ಲಿ ಈ ಮಹಿಳೆ ಎಲ್ಲಕ್ಕಿಂತ ಹೆಚ್ಚಾಗಿ ಕುಣಿದು ಕುಪ್ಪಳಿಸಿದರು, ಹಾಗಿದ್ದರೆ ಅವರು ಕಾಲು ನೋವೆಂದು ಸುಳ್ಳು ಹೇಳಿದ್ದರೆ? ಖಂಡಿತಾ ಇಲ್ಲ…

    ಹಾಗಿದ್ದರೆ ಅವರಿಗೆ ಆಗಿದ್ದೇನು?

    ನೀವು ಗಂಡನ ಜತೆಯೋ ಇಲ್ಲಾ ಮನೆಯಲ್ಲಿ ಇನ್ನಾರದೋ ಜತೆಯಲ್ಲಿಯೋ ಸಿಕ್ಕಾಪಟ್ಟೆ ಜಗಳ ಮಾಡಿಕೊಂಡು ಆಫೀಸಿಗೆ ಹೋಗುತ್ತೀರಿ ಎಂದುಕೊಳ್ಳಿ. ಆ ಜಗಳದಿಂದ ನಿಮಗೆ ಸಹಿಸಲಾರದಷ್ಟು ತಲೆನೋವು ಬಂದಿರುತ್ತದೆ. ಅದೆಷ್ಟೇ ಮಾತ್ರೆ, ಔಷಧ ತೆಗೆದುಕೊಂಡರೂ ತಲೆನೋವು ಕಡಿಮೆ ಆಗುವುದೇ ಇಲ್ಲ. ಸಂಜೆ ವಾಪಸ್ ಮನೆಗೆ ಹೋದಾಗ ಯಾರ ಜತೆಯಲ್ಲಿ ಜಗಳವಾಡಿದ್ದೀರೋ ಅವರ ಬಳಿಯೇ ಸಮಾಧಾನವಾಗಿ ಮಾತನಾಡಿ ಜಗಳ ಪರಿಹಾರ ಮಾಡಿಕೊಂಡರೆ ತಂತಾನೇ ತಲೆನೋವು ಕಡಿಮೆಯಾಗುತ್ತದೆ, ಇದು ನಿಮ್ಮ ಗಮನಕ್ಕೆ ಬಂದಿರಬೇಕಲ್ಲವೆ? ಏಕೆ ಹೀಗೆ…?

    ಇದೇ ಮನೋ ದೈಹಿಕ ಕಾಯಿಲೆ. ಮನಸ್ಸಿನಲ್ಲಿ ನಮಗೆ ಗೊತ್ತೋ, ಗೊತ್ತಿಲ್ಲದೆಯೋ ಕಾಡುತ್ತಿರುವ ಸಮಸ್ಯೆಗಳಿಗೆ ಶಾಂತಿ ಸಿಕ್ಕಾಗ ಯಾವುದೇ ಔಷಧಗಳಿಲ್ಲದಿದ್ದರೂ ಸಮಸ್ಯೆ ಪರಿಹಾರವಾಗಿಬಿಡುತ್ತದೆ. ಇದರ ಅರ್ಥ ನಾವು ಆ ಶಾಂತಿಯೆಂಬ ಸಮ್ಮೋಹನಕ್ಕೆ ಒಳಗಾಗಿ ಬಿಡುತ್ತೇವೆ. ಮನೋ ದೈಹಿಕ ಕಾಯಿಲೆಗಳಿಗೆ ಮಾತ್ರವಲ್ಲದೇ, ಸಂಸಾರದಲ್ಲಿನ ಜಂಜಡಗಳಿಂದ ಬಸವಳಿದು ಹೋದಾಗಲೂ ಶಾಂತಿಗಾಗಿ ತಡಕಾಡುವುದು ಸಹಜವೇ.

    ಹೊರಗಡೆ ಹೋಗಿ ದುಡಿಯುವ ಮಹಿಳೆಗೆ ತನ್ನ ಕೆಲಸದ ಸ್ಥಳದಲ್ಲಿ ಕಷ್ಟಗಳನ್ನು ಹೇಳಿಕೊಳ್ಳಲು ಜನರು ಸಿಗುತ್ತಾರೆ ಇಲ್ಲವೇ ಸ್ವಲ್ಪ ಮಟ್ಟಿಗಾದರೂ ವಾತಾವರಣ ಬದಲಾಗುವ ಕಾರಣ, ಅಷ್ಟೊಂದು ಮಾನಸಿಕ ಸಮಸ್ಯೆ ಬಾಧಿಸದೇ ಇರಬಹುದು. ಆದರೆ ಮನೆಯಲ್ಲಿರುವ ಮಹಿಳೆಯ ಜತೆ ಮಾತನಾಡಲು ಎಷ್ಟೋ ಮನೆಗಳಲ್ಲಿ ಗಂಡನಾದವನಿಗೆ ಸಮಯವೇ ಇರುವುದಿಲ್ಲ (ಮುಂದುವರೆದಿರುವ ತಂತ್ರಜ್ಞಾನವೂ ಇದಕ್ಕೊಂದು ಕಾರಣ!) ಹೆಂಡತಿ ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದಾಗ ಅಥವಾ ತನಗೆ ಮನೆಯಲ್ಲಿದ್ದು ಬೋರ್ ಆಗುತ್ತಿದೆ ಎಂದು ಹೇಳಿದರೆ ಟಿ.ವಿ.ನೋಡು, ಕ್ಲಬ್​ಗೆ ಹೋಗು, ಶಾಪಿಂಗ್ ಮಾಡು… ಇತ್ಯಾದಿ ಮಾತುಗಳು ಬರುತ್ತವೆ. ಆದರೆ ಮನಸ್ಸಿನಲ್ಲಿ ಕಾಡುವ ಸಮಸ್ಯೆಗಳನ್ನು ತೋಡಿಕೊಳ್ಳಲು ಇದು ಪರ್ಯಾಯ ಹೇಗೆ ತಾನೆ ಆದೀತು? ತನ್ನ ಸಮಸ್ಯೆಗಳನ್ನು ಆಕೆಯ ಯಾರ ಬಳಿಯಾದರೂ ಹೇಳಿಕೊಳ್ಳಲೇ ಬೇಕಿರುತ್ತದೆ, ಈ ಮೂಲಕ ತನ್ನ ದುಗುಡವನ್ನು ಹೊರಹಾಕಬೇಕಾಗಿರುತ್ತದೆ. ಮನಸ್ಸಿನ ಶಾಂತಿಗಾಗಿ, ಬದುಕಿನ ಜಂಟಾಟಗಳನ್ನು ದೂರ ಮಾಡಿಕೊಳ್ಳುವ ಸಲುವಾಗಿ ಆಕೆ ಆರಿಸಿಕೊಳ್ಳುವುದೇ ಧಾರ್ವಿುಕ ಕ್ಷೇತ್ರಗಳು, ಮಠ-ಮಂದಿರಗಳು.

    ಹೆಚ್ಚಿನ ಮಠಗಳು ಮಹಿಳೆಯರಿಗೆ ನೆಮ್ಮದಿ ನೀಡುತ್ತಿವೆಯಾದರೂ, ಎಲ್ಲಾ ಸ್ಥಳಗಳೂ ಸುರಕ್ಷಿತವಾಗಿ ಉಳಿದಿಲ್ಲ ಎನ್ನುವ ಬಗ್ಗೆ ದಿನನಿತ್ಯ ವರದಿಯಾಗುವ ಘಟನೆಗಳನ್ನು ಓದಿದರೆ ಅರ್ಥವಾದೀತು. ಹಿಂದೂಗಳಲ್ಲಿ ಮಾತ್ರಲ್ಲದೇ, ರ್ಚಚಿಗೆ ಹೋಗುವ ಮಹಿಳೆಯರು, ಮಸೀದಿಗೆ ಹೋಗುವುದಕ್ಕೆ ನಿಷೇಧ ಇರುವುದರಿಂದ ಮೌಲ್ವಿಗಳೇ ಮನೆಗೆ ಬಂದು ಕುರಾನ್ ಹೇಳಿಕೊಡುವ ಕಾರಣ ಮುಸ್ಲಿಂ ಮಹಿಳೆಯರು… ಹೀಗೆ ಅತ್ಯಾಚಾರಗಳು ನಡೆಯುತ್ತಲೇ ಇವೆ. ಸರಿಯಾದ ಸಾಕ್ಷ್ಯಾಧಾರಗಳಿಲ್ಲದೇ ಅಥವಾ ಇನ್ನಾವುದೋ ಕಾರಣಕ್ಕೆ ‘ನ್ಯಾಯ’ ಸಿಗದಿರುವುದು ಒಂದೆಡೆಯಾದರೆ, ಸಂತ್ರಸ್ತೆಯರ ಕುಟುಂಬ, ಸಮಾಜಕ್ಕೆ ಅಂಜಿ ತಮ್ಮ ನೋವನ್ನು ಹೊರಹಾಕಲಾಗದೆ ಕಣ್ಣೀರು ಸುರಿಸುತ್ತಿರುವುದು ಇನ್ನೊಂದೆಡೆ. ಸಮಾಜವನ್ನು ರಕ್ಷಿಸಬೇಕಾದ ಸ್ಥಾನದಲ್ಲಿರುವವರು ಭಕ್ಷಕರಾಗುತ್ತಿರುವುದೂ ಅಪಾಯಕಾರಿ ಬೆಳವಣಿಗೆ. ಬೇಲಿಯೇ ಎದ್ದು ಹೊಲ ಮೇಯ್ದರೆ ರಕ್ಷಣೆ ಮಾಡುವವರು ಯಾರು ಎಂಬ ಪ್ರಶ್ನೆ ಮೂಡುತ್ತದೆ.

    ಏನೀ ಸಮ್ಮೋಹನ ಅಥವಾ ವಶೀಕರಣ?: ಈ ಉದಾಹರಣೆ ನೋಡಿ. ಅದೊಂದು ಕಾರ್ಯಕ್ರಮ. ವೇದಿಕೆಯ ಮೇಲಿರುವ ವ್ಯಕ್ತಿಯೊಬ್ಬ ಏಕತಾನದಲ್ಲಿ ಸ್ಪಷ್ಟವಾಗಿ ಮಾತನಾಡುತ್ತಿದ್ದಾನೆ. ಸಭಿಕರನ್ನೆಲ್ಲಾ ಎದ್ದು ನಿಲ್ಲಿಸಿ, ‘ವೇದಿಕೆಯ ಬಲಭಾಗದಲ್ಲಿ ದೀಪವೊಂದು ಕಾಣುತ್ತಿದೆಯಲ್ಲವೇ’ ಎನ್ನುತ್ತಾನೆ. ಅನೇಕರು ‘ಹೌದು’ ಎಂದು ತಲೆಯಾಡಿಸುತ್ತಾರೆ. ಕೆಲವರಿಗೆ ದೀಪ ಕಾಣಿಸುವುದಿಲ್ಲ ಆದರೂ ಅನಿವಾರ್ಯವಾಗಿ ‘ಹೌದು’ ಎನ್ನುತ್ತಾರೆ! ಅಲ್ಲಿ ಯಾವ ದೀಪವೂ ಇಲ್ಲ, ಆದರೆ ದೀಪವಿದೆ ಎಂದು ನಂಬಿಸಬೇಕಿದ್ದ ವ್ಯಕ್ತಿಯ ಉದ್ದೇಶ ಈಡೇರಿತು. ಇದೇ ರೀತಿ ಸಭಿಕರನ್ನು ಉದ್ದೇಶಿಸಿ ಅನೇಕ ಸೂಚನೆಗಳನ್ನು ಆ ವ್ಯಕ್ತಿ ಕೊಡುತ್ತಾನೆ. ಅಲ್ಲಿರುವ ಹೆಚ್ಚಿನ ಜನರು ಅದನ್ನು ಪಾಲಿಸುತ್ತಾರೆ.

    ಇನ್ನೊಂದು ಪ್ರಸಂಗ. ಜಾದೂಗಾರನೊಬ್ಬ ಸಭಿಕರ ಗುಂಪಿನಿಂದ ಒಬ್ಬನನ್ನು ಕರೆದು ಅವನಿಗೆ ಕೆಲವು ಸೂಚನೆಗಳನ್ನು ಕೊಡುತ್ತಾನೆ. ಆ ವ್ಯಕ್ತಿ ಅವನು ಹೇಳಿದ್ದನ್ನು ಚಾಚೂ ತಪ್ಪದೇ ಪಾಲಿಸುತ್ತಾನೆ. ‘ನಿನ್ನ ಕಾಲುಗಳು ಅತ್ಯಂತ ಭಾರವಾಗಿವೆ’ ಎನ್ನುತ್ತಾನೆ. ಆ ವ್ಯಕ್ತಿ ಅದೇ ರೀತಿ ಭ್ರಮಿಸುತ್ತಾನೆ ಹಾಗೂ ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾನೆ. ನೀನೀಗ ಒಂದು ಕೋಳಿ ಎಂದಾಗ ಆತ ಕೋಳಿಯಂತೆಯೇ ಕೂಗುತ್ತಾನೆ…

    ಹೀಗೇ ನಮ್ಮ ದಿನ ನಿತ್ಯದ ಜೀವನದಲ್ಲಿ ಇಂತಹ ಅನೇಕ ಘಟನೆಗಳನ್ನು ನಾವು ನೋಡುತ್ತೇವೆ. ಇವುಗಳನ್ನು ಅವಲೋಕಿಸಿದರೆ ಈ ಎಲ್ಲಾ ಪ್ರಸಂಗಗಳಲ್ಲಿ ಒಂದು ವಿಷಯ ಸಾಮಾನ್ಯವಾಗಿ ಕಂಡುಬರುತ್ತದೆ. ಅದೇ ಸಮ್ಮೋಹನ ಅಥವಾ ವಶೀಕರಣ. ಅಂದರೆ, ಬೇರೊಬ್ಬ ವ್ಯಕ್ತಿಯ ಇಂದ್ರಿಯಗಳನ್ನು ನಿಗ್ರಹಿಸಿ ಅವನ ಗಮನವನ್ನು ಒಂದೇ ವಿಷಯ, ವಸ್ತು ಅಥವಾ ವ್ಯಕ್ತಿಯ ಕಡೆಗೆ ಕೇಂದ್ರೀಕರಿಸುವಂತೆ ಮಾಡಿ, ಅವನು ಸಮ್ಮೋಹಕ ಹೇಳಿದ ಸೂಚನೆಗಳನ್ನು ಯಥಾವತ್ತಾಗಿ ಪಾಲಿಸುವಂತೆ ಪ್ರೇರೇಪಿಸುವುದು.

    ವೈಜ್ಞಾನಿಕ ವಿವರಣೆ ಏನು?: ವೈಜ್ಞಾನಿಕವಾಗಿ ಹೇಳಬೇಕೆಮದರೆ ಸಮ್ಮೋಹನವೆಂದರೆ ನಮ್ಮ ಚೇತನಾವಸ್ಥೆಯಲ್ಲಿನ ಒಂದು ಬದಲಾವಣೆ ಅಷ್ಟೆ. ಸಮ್ಮೋಹನಕ್ಕೆ ಒಳಗಾದ ವ್ಯಕ್ತಿ ನಿದ್ರಾಸ್ಥಿತಿಯಲ್ಲಿ ಇರುವುದಿಲ್ಲ. ಆದರೆ ಸಂಪೂರ್ಣ ವಿರಾಮ ಸ್ಥಿತಿಗೆ ತಲುಪಿರುತ್ತಾನೆೆ. ಕಲ್ಪನಾ ಲೋಕದಲ್ಲಿ ವಿಹರಿಸುತ್ತಿರುತ್ತಾನೆೆ. ಅವನ ಗಮನ ಕೇವಲ ಒಂದು ವಿಷಯ, ವಸ್ತು, ವ್ಯಕ್ತಿಯ ಕಡೆಗೆ ಕೇಂದ್ರೀಕೃತವಾಗಿರುತ್ತದೆ. ಬಾಹ್ಯ ಪ್ರಪಂಚದ ಬಗ್ಗೆ ಅರಿವು ಕಡಿಮೆಯಾಗಿರುತ್ತದೆ. ಅಂದರೆ ಮನಸ್ಸಿನ ಒಂದು ಭಾಗ ಸಮ್ಮೋಹಕನ ಆಜ್ಞೆಯನ್ನು ಪಾಲಿಸುತ್ತಿದ್ದರೆ ಇನ್ನೊಂದು ಭಾಗ ಪ್ರೇಕ್ಷಕನಂತೆ ಕೆಲಸ ಮಾಡುತ್ತಿರುತ್ತದೆ. ಸಮ್ಮೋಹನ ಸ್ಥಿತಿಯಲ್ಲಿ ವ್ಯಕ್ತಿಗೆ ನೋವಿನ ಸಂವೇದನೆಯ ಗ್ರಹಿಕೆ ಕಡಿಮೆಯಾಗುವುದರಿಂದ ಶಸ್ತ್ರಚಿಕಿತ್ಸೆಗಳಲ್ಲಿ, ದಂತ ಚಿಕಿತ್ಸೆಗಳಲ್ಲಿ, ಪ್ರಸವದ ಸಮಯದಲ್ಲಿ ಅರಿವಳಿಕೆಗಳ ಉಪಯೋಗವಿಲ್ಲದೆ ಸಮ್ಮೋಹನವನ್ನು ಉಪಯೋಗಿಸಿದ ಬಗ್ಗೆ ಪುರಾವೆಗಳಿವೆ. ಅದಲ್ಲದೆ ದೀರ್ಘ ಕಾಲಿಕ ನೋವುಗಳನ್ನು, ಧೂಮಪಾನ, ಮದ್ಯ, ಮಾದಕ ವಸ್ತು ವ್ಯಸನವನ್ನು ಹೋಗಲಾಡಿಸಲೂ ಇದನ್ನು ಬಳಸಬಹುದು.

    ಯಾರು ಸಮ್ಮೋಹನಕ್ಕೆ ಒಳಪಡುತ್ತಾರೆ?

    ಅರ್ನೆಸ್ಟ್ ಮತ್ತು ಹಿಲ್ಗಾರ್ಡ ಎಂಬ ವಿಜ್ಞಾನಿಗಳು ಸಮ್ಮೋಹನಕ್ಕೆ ಒಳಗಾಗುವವರಲ್ಲಿನ ವಿಭಿನ್ನತೆಗಳನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ. ಶೇ. 10ರಷ್ಟು ಜನರನ್ನು ಸಮ್ಮೋಹನಕ್ಕೆ ಒಳಪಡಿಸುವುದು ಅತ್ಯಂತ ಸುಲಭ. ಶೇ. 10 ಜನರು ಸಮ್ಮೋಹನಕ್ಕೆ ಒಳಗಾಗುವುದಿಲ್ಲ. ಇನ್ನುಳಿದ ಶೇ. 80ರಷ್ಟು ಜನರನ್ನು ಸಮ್ಮೋಹನಕ್ಕೆ ಒಳಪಡಿಸಲು ಸಾಧ್ಯ ಎನ್ನುತ್ತಾರೆ. ಇದನ್ನು ಮಾಪನ ಮಾಡಲು ಅನೇಕ ಪ್ರಶ್ನಾವಳಿಗಳೂ ಇವೆ. ಉದಾಹರಣೆಗೆ(SHSS-Stanford hypnotic susceptibility scale) ಯಾವುದಾದರೂ ವಿಷಯ ಅಥವಾ ಘಟನೆಯ ಬಗ್ಗೆ ಅತಿಯಾಗಿ ಯೋಚಿಸುವವರು, ತಮ್ಮ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳಲು ಅಸಮರ್ಥರಾದವರು, ಅತ್ಯಂತ ಭಾವನಾ ಜೀವಿಗಳು, ಕಲ್ಪನಾ ಲೋಕದಲ್ಲಿ ವಿಹರಿಸುವವರು, ವಯಸ್ಕರಿಗೆ ಹೋಲಿಸಿದರೆ ಮಕ್ಕಳು, ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚುಬೇಗ ವಶೀಕರಣಕ್ಕೆ ಒಳಗಾಗುತ್ತಾರೆ ಎಂದು ಅವರು ಹೇಳಿದ್ದಾರೆ.

    ನಕಾರಾತ್ಮಕ ಸಮ್ಮೋಹನ ಗುರುತಿಸುವುದು ಹೇಗೆ?

    • ಅಗತ್ಯಕ್ಕಿಂತ ಹೆಚ್ಚಿಗೆ ಸಮ್ಮೋಹನಕ್ಕೆ ಒಳಗಾಗುತ್ತಿರುವುದನ್ನು ಕೂಡ ನೀವು ಗುರುತಿಸುವುದು. ನೀವು ಯಾರನ್ನು ಗುರು ಎಂದು ನಂಬಿರುತ್ತೀರೋ ಆ ವ್ಯಕ್ತಿಯ ಲಕ್ಷಣ ನೋಡಿ. ಅವರು ಬಳಸುವ ಸಾಮಾನ್ಯ ತಂತ್ರಗಳೆಂದರೆ:
    • ಏರಿಳಿತವಿಲ್ಲದೇ ಏಕತಾನದಲ್ಲಿ ಸೂಚನೆಗಳನ್ನು ಕೊಡುವುದು/ಮಂತ್ರಗಳನ್ನು ಪಠಿಸುವುದು. 
    • ಯಾವುದಾದರೂ ವಸ್ತುವನ್ನು ಉದಾಹರಣೆಗೆ ಅಡಿಕೆ, ಲವಂಗ, ಹೂವು, ಪ್ರಸಾದ ಇತ್ಯಾದಿಗಳನ್ನು ಬಳಸಿ ವ್ಯಕ್ತಿಯ ಗಮನವನ್ನು ಒಂದೇ ಕಡೆಗೆ ಕೇಂದ್ರೀಕರಿಸುವುದು.
    • ಸುತ್ತಲಿನ ಬೇರೆಲ್ಲಾ ಪ್ರಚೋದನೆಗಳನ್ನು/ವಿಷಯಗಳನ್ನು ಅಲಕ್ಷಿಸುವಂತೆ ಸೂಚಿಸುವುದು. ಪುನರಾವರ್ತಿತ ಸೂಚನೆ/ಕ್ರಿಯೆಗಳಿಂದ ವ್ಯಕ್ತಿ ವಿಶ್ರಾಂತ ಸ್ಥಿತಿ ತಲುಪುವಂತೆ ಮಾಡುವುದು. ಈ ಸ್ಥಿತಿಯಲ್ಲಿ ವ್ಯಕ್ತಿ ಸಮ್ಮೋಹಕನ ಸೂಚನೆಯನ್ನು ಯಾವುದೇ ವಿರೋಧ ವ್ಯಕ್ತಪಡಿಸದೇ ಪಾಲಿಸುತ್ತಾನೆ. ವ್ಯಕ್ತಿ ಸಮ್ಮೋಹನ ಸ್ಥಿತಿಯಲ್ಲಿರುವಾಗ ಪಾಲಿಸಬೇಕಾದ ಸೂಚನೆಗಳಲ್ಲದೆ ಸಮ್ಮೋಹನದ ನಂತರ (ಸಮ್ಮೋಹನೋತ್ತರ) ಪಾಲಿಸಬೇಕಾದ ಸೂಚನೆಗಳನ್ನೂ ಈ ಸ್ಥಿತಿಯಲ್ಲಿ ನೀಡಬಹುದು.
    ಪರಿಹಾರವೇನು?

    ಧಾರ್ವಿುಕ ಕ್ಷೇತ್ರಗಳು, ಮಠ-ಮಂದಿರಗಳು ನಿಮ್ಮ ಮಾನಸಿಕ ಶಾಂತಿಗಾಗಿ ಇರುವ ಸ್ಥಳಗಳೇ ವಿನಾ ನಿಮ್ಮ ಸಮಸ್ಯೆ ಬಗೆಹರಿಸುವ ಜಾಗ ಎಂದು ಭ್ರಮಿಸಬೇಡಿ. ನಿಮ್ಮ ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳಲು ಬೇಕಾದ ಸಿದ್ಧತೆ ಮಾಡಿಕೊಳ್ಳಿ. ಒಳ್ಳೆಯ ಹವ್ಯಾಸಗಳಿಗೆ ಸಮಯ ಮೀಸಲಿಡಿ. ಇಂತಹ ವಶೀಕರಣಕ್ಕೆ ಒಳಗಾಗಬಾರದೆಂದರೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು. ಮನಃಶಾಂತಿ ಕಾಪಾಡಿಕೊಳ್ಳಲು ಬೇಕಾದ ಧ್ಯಾನ, ಯೋಗ ಇವುಗಳನ್ನು ರೂಢಿಸಿಕೊಳ್ಳಿ. ಕುಟುಂಬದ ಸದಸ್ಯರೊಡನೆ ಗುಣಾತ್ಮಕ ಸಮಯವನ್ನು ಹಂಚಿಕೊಳ್ಳಿ. ಇಷ್ಟಾಗಿಯೂ ಪ್ರತಿಕೂಲ ವಾತಾವರಣವನ್ನು ಎದುರಿಸಲು ಬೇಕಾದ ಆತ್ಮಸ್ಥೈರ್ಯವನ್ನು ನೀವು ರೂಢಿಸಿಕೊಳ್ಳಬೇಕೇ ಹೊರತು ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರೆ ವ್ಯರ್ಥವಾದೀತು.

    ಸಕಾರಾತ್ಮಕ- ನರಾಕಾತ್ಮಕ ಸಮ್ಮೋಹನ

    ಮನೋಶಾಸ್ತ್ರಜ್ಞರ ಬಳಿ ಹೋಗುವವರೆಲ್ಲ ಹುಚ್ಚರೇ ಆಗಬೇಕೆಂದೇನಿಲ್ಲ. ಆದರೆ ಸಮಾಜ? ಪದೇ ಪದೇ ಮನೋಶಾಸ್ತ್ರಜ್ಞರ ಬಳಿ ಹೋದರೆ ಯಾರು ಏನಂದುಕೊಳ್ಳುತ್ತಾರೋ ಎಂಬ ಹೆದರಿಕೆಯಿಂದಲೇ ಮಹಿಳೆಯರು ಅಲ್ಲಿಗೆ ಹೋಗುವುದಿಲ್ಲ. ಆಗ ಅವರ ನೆರವಿಗೆ ಬರುವುದೇ ಮಠ, ಮಂದಿರಗಳು. ಮಠ-ಮಂದಿರಗಳಿಗೆ ಹೆಚ್ಚೆಚ್ಚು ಹೋದರೆ ಅಂಥ ಮಹಿಳೆಯರಿಗೆ ಗೌರವವೂ ಹೆಚ್ಚು ಸಿಗುತ್ತದಲ್ಲ! ಅಲ್ಲಿ ನಡೆಯುವ ಭಜನೆ, ಅಲ್ಲಿಯ ವಾತಾವರಣ ಎಲ್ಲವೂ ಮನಸ್ಸಿಗೆ ಹಿತ ನೀಡುತ್ತವೆ, ಮಾನಸಿಕ ಸಮಾಧಾನವೂ ಸಿಗುತ್ತದೆ. ಅವರು ಆ ವಾತಾವರಣದಲ್ಲಿ ಸಮ್ಮೋಹನಕ್ಕೆ ಒಳಗಾಗುತ್ತಾರೆ. ಇದು ಸಕಾರಾತ್ಮಕ ಸಮ್ಮೋಹನ. ಮನೋ ದೈಹಿಕ ಸಮಸ್ಯೆಗೆ ಒಳಗಾದವರಿಗೆ ಎಲ್ಲರಿಗೂ ಇದರ ಅಗತ್ಯ ಇದ್ದೇ ಇದೆ. ಆದರೆ ಇಂಥ ಮಹಿಳೆಯರನ್ನೇ ಗುರಿಯಾಗಿಟ್ಟುಕೊಂಡು ನಡೆಯುವ ಅನಾಚಾರ, ನಕಾರಾತ್ಮಕ ಸಮ್ಮೋಹನಗಳ ಬಗ್ಗೆಯೂ ಮಹಿಳೆಯಾದವಳು ಗಮನ ಹರಿಸಬೇಕಲ್ಲವೆ?

    | ಡಾ. ರೋಹಿಣಿ ಶಿವಾನಂದ (ಉಪನ್ಯಾಸಕಿ, ಮನೋವಿಜ್ಞಾನಿ)

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts