Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ದೇಸಿ ಸಂಸ್ಕೃತಿಯ ತವರು ಹಾವೇರಿ ಪ್ರಾಂತ್ಯ

Sunday, 19.08.2018, 3:05 AM       No Comments

ಮೊನ್ನೆ ಆಗಸ್ಟ್ 9ರಂದು ವಿನಾಯಕ ಕೃಷ್ಣ ಗೋಕಾಕರ 109ನೇ ಜನ್ಮದಿನ. ಅವರು ಜನ್ಮತಳೆದು ಬಾಲ್ಯ ಕಳೆದ ಸವಣೂರಿನಲ್ಲಿ ಈ ಸಂಬಂಧ ಕಾರ್ಯಕ್ರಮವೊಂದನ್ನು ವಿ.ಕೆ. ಗೋಕಾಕ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಏರ್ಪಡಿಸಿತ್ತು. ಗೋಕಾಕ್ ಟ್ರಸ್ಟ್ ಸವಣೂರಿನಲ್ಲಿ ಗೋಕಾಕರ ನೆನಪಿನಲ್ಲಿ ಸೊಗಸಾದ ಭವನವೊಂದನ್ನು ನಿರ್ಮಿಸಿದೆ. ನೆಲಹಂತದಲ್ಲಿ ಸಭೆ-ಸಮಾರಂಭ ಏರ್ಪಡಿಸಲು ಸಭಾಭವನವಿದೆ. ಮೊದಲನೇ ಮಹಡಿಯಲ್ಲಿ ಗ್ರಂಥಾಲಯ, ವಾಚನಾಲಯ ರೂಪಿಸಲು ಆಲೋಚಿಸಲಾಗಿದೆ. ಎರಡನೇ ಮಹಡಿಯಲ್ಲಿ ಗೋಕಾಕರಿಗೆ ಸಂಬಂಧಿಸಿದ ವಸ್ತುಪ್ರದರ್ಶನ, ಅತಿಥಿಗಳಿಗೆ ವಸತಿಸೌಲಭ್ಯ ಇತ್ಯಾದಿ ಕಲ್ಪಿಸುವ ಆಲೋಚನೆಯಿದೆ. ಸಭಾಭವನ ಸಿದ್ಧವಿದೆ. ಉಳಿದಂತೆ ಅವರ ಯೋಜನೆಗಳು ಕಾರ್ಯಗತವಾಗಬೇಕಿದೆ. ಗ್ರಾಮೀಣ ಪ್ರದೇಶದ ತಾಲೂಕು ಕೇಂದ್ರವೊಂದರಲ್ಲಿ ಈ ಬಗೆಯ ಸಾಂಸ್ಕೃತಿಕ ಭವನಗಳ ನಿರ್ಮಾಣದ ಪ್ರಾಮುಖ್ಯವನ್ನು ವಿವರಿಸುವ ಅಗತ್ಯವಿಲ್ಲ. ಸುತ್ತಮುತ್ತಲ ಪ್ರದೇಶದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಇದು ಅವಕಾಶ ಕಲ್ಪಿಸುತ್ತದೆ ಮಾತ್ರವಲ್ಲ, ಒಂದು ಬಗೆಯ ಸೃಜನಶೀಲ ವಾತಾವರಣ ನಿರ್ಮಿಸುತ್ತದೆ. ಲೋಹಿಯಾ ಹೇಳುತ್ತಿದ್ದಂತೆ ‘ಜಡವಾದ ಸಮಾಜದಲ್ಲಿ ಹಿಂಸೆ, ಕ್ರೌರ್ಯ ಸಹಜ. ಸಮಾಜವನ್ನು ಚಲನಶೀಲಗೊಳಿಸಿದರೆ, ಸೃಜನಶೀಲ ವಾತಾವರಣ ನಿರ್ಮಿಸಿದರೆ ಅದು ಆರೋಗ್ಯಕರ ಸುಸಂಸ್ಕೃತ ಸಮಾಜಕ್ಕೆ ದಾರಿ ಮಾಡಿಕೊಡುತ್ತದೆ’. ನಮ್ಮ ಜನಪ್ರತಿನಿಧಿಗಳು, ಅಧಿಕಾರಿವರ್ಗ ಈ ದಿಕ್ಕಿನಲ್ಲಿ ಚಿಂತಿಸಿ ಕಾರ್ಯಪ್ರವೃತ್ತರಾಗಬೇಕು.

ಗೋಕಾಕರು ಆಧುನಿಕ ಕನ್ನಡ ಸಾಹಿತ್ಯ ಕಂಡ ಧೀಮಂತ ಪ್ರತಿಭೆ. ಪೂರ್ವ-ಪಶ್ಚಿಮವನ್ನು ಮುಖಾಮುಖಿಯಾಗಿಸುತ್ತ, ಪರಂಪರೆ ಹಾಗೂ ಆಧುನಿಕತೆಗಳ ನಡುವೆ ಅರ್ಥಪೂರ್ಣ ಅನುಸಂಧಾನ ಮಾಡಲೆತ್ನಿಸಿದ ಗೋಕಾಕರು ತಮ್ಮ ನಿರಂತರ ಪ್ರಯೋಗಗಳ ಮೂಲಕ ಕನ್ನಡ ಸಂಸ್ಕೃತಿಯನ್ನು ಸಮೃದ್ಧಗೊಳಿಸಿದವರು. ನವ್ಯಸಾಹಿತ್ಯ ಸಂದರ್ಭದಲ್ಲಿ ಗೋಪಾಲಕೃಷ್ಣ ಅಡಿಗರದು ಸಾಕ್ಷಿಪ್ರಜ್ಞೆಯಾದರೆ, ಕೆ.ಎಸ್. ನರಸಿಂಹ ಸ್ವಾಮಿ ಅವರದು ಕುಟುಂಬಪ್ರಜ್ಞೆ, ಗೋಕಾಕರದು ವಿಶ್ವಾಮಿತ್ರಪ್ರಜ್ಞೆ. ಇವೆಲ್ಲವನ್ನೂ ಒಳಗೊಂಡ ಸ್ವಾಯತ್ತಪ್ರಜ್ಞೆ ಇಂದಿನ ಅಗತ್ಯವಾಗಿದೆ.

ಗೋಕಾಕರು ನವೋದಯ ಪರಿಸರದಲ್ಲಿ ಕಾವ್ಯಕೃಷಿಯನ್ನು ಆರಂಭಿಸಿ ಆದರ್ಶದ ಹಂಬಲ, ಸೌಂದರ್ಯಾರಾಧನೆಯ ಅನೇಕ ಗೀತೆಗಳನ್ನು ರಚಿಸಿದರು. ‘ಸಮುದ್ರ ಗೀತೆಗಳು’ ಮೂಲಕ ಹೊಸಬಗೆಯ ಪ್ರಯೋಗ ಮಾಡಿ ನವ್ಯಮಾರ್ಗಕ್ಕೆ ಮಾದರಿಯನ್ನು ಒದಗಿಸಿದರು. ಈ ನಡುವೆ ಪ್ರಗತಿಶೀಲ ಆಶಯದ ಕಾವ್ಯವನ್ನೂ ಬರೆದರು. ಭಾರತೀಯ ಸಾಹಿತ್ಯದಲ್ಲೇ ಹೊಸದೆನ್ನಬಹುದಾದ ವಸ್ತುವನ್ನಾರಿಸಿಕೊಂಡು ‘ಭಾರತ ಸಿಂಧುರಶ್ಮಿ’ ಮಹಾಕಾವ್ಯ, ‘ಸಮರಸವೇ ಜೀವನ’ ಮಹಾಕಾದಂಬರಿ ರಚಿಸಿದರು. ವ್ಯವಸ್ಥೆಯನ್ನು ವಿರೋಧಿಸಿ ನಾಟಕ ರಚನೆ ಮಾಡಿದರು. ಕಾವ್ಯ ಹಾಗೂ ಕಲಾಮೀಮಾಂಸೆಗೂ ಅವರ ಕೊಡುಗೆ ಗಮನಾರ್ಹ. ಹೀಗೆ ಕನ್ನಡ ಸಂಸ್ಕೃತಿಗೆ ವೈವಿಧ್ಯಮಯ ಕೃತಿಗಳ ಮೂಲಕ ಮಹತ್ವದ ಕೊಡುಗೆ ನೀಡಿದ ಗೋಕಾಕರ ಬಗ್ಗೆ ಮಾತನಾಡಲು ಸವಣೂರಿಗೆ ಅವರ ಮಗ ಅನಿಲ್ ಗೋಕಾಕ್ ನನ್ನನ್ನು ಆಹ್ವಾನಿಸಿದಾಗ ಸಂತೋಷದಿಂದಲೇ ಒಪ್ಪಿಕೊಂಡೆ. ಗೋಕಾಕರ ಮರುಅಧ್ಯಯನಕ್ಕೆ ಇದೊಂದು ಅವಕಾಶ ಎಂಬುದು ಒಂದು ಕಾರಣವಾದರೆ, ಈ ನೆಪದಲ್ಲಿ ಅವರ ಹುಟ್ಟೂರಾದ ಸವಣೂರನ್ನು ನೋಡಬಹುದೆಂಬ ಆಸೆಯೂ ಮತ್ತೊಂದು ಕಾರಣ. ಜತೆಗೆ ಹಾವೇರಿ ಪ್ರಾಂತ್ಯದಲ್ಲಿರುವ ಬಾಡ, ಕಾಗಿನೆಲೆ, ಶಿಶುವಿನಹಾಳ, ಅಬ್ಬಲೂರು ಮೊದಲಾದ ಸ್ಥಳಗಳನ್ನೂ ನೋಡುವ ಅಪೇಕ್ಷೆಯಿತ್ತು. ನಾವು ಅನೇಕ ವೇಳೆ ಅಂತಾರಾಷ್ಟ್ರೀಯ ನೆಲೆಯಲ್ಲಿ ಮಾತನಾಡುತ್ತೇವೆ, ಸ್ಥಳೀಯ ದರ್ಶನವೇ ನಮಗೆ ಸರಿಯಾಗಿ ಆಗಿರುವುದಿಲ್ಲ.

ಇತ್ತೀಚೆಗೆ ನನ್ನ ಮನಸ್ಸಿನಲ್ಲಿ ಬಹುವಾಗಿ ಕಾಡುತ್ತಿರುವ ಸಂಗತಿಯೆಂದರೆ- ನಮ್ಮಲ್ಲಿ ರಾಜಕೀಯ ಭೂಪಟವಿದೆ. ಧಾರ್ವಿುಕ ಕ್ಷೇತ್ರಗಳ ಮಾರ್ಗಸೂಚಿಯೂ ಇದೆ. ಆದರೆ ಸಾಂಸ್ಕೃತಿಕ ಭೂಪಟವಿಲ್ಲ. ರಾಜ್ಯದ, ರಾಷ್ಟ್ರದ ಪ್ರಮುಖ ಸಾಂಸ್ಕೃತಿಕ ಮಹತ್ವದ ಸ್ಥಳಗಳನ್ನು ನೋಡಿಬರಲು ಅಗತ್ಯವಾದ ಮಾಹಿತಿ ಒದಗಿಸುವ ಒಂದು ‘ಸಾಂಸ್ಕೃತಿಕ ರೂಟ್​ವ್ಯಾಪ್’ನ ಅಗತ್ಯ ಬಹಳವಿದೆ. ಒಂದು ಪ್ರದೇಶದಿಂದ ಹೊರಟರೆ ನೋಡಬಹುದಾದ, ನೋಡಲೇಬೇಕಾದ ಸಾಂಸ್ಕೃತಿಕ ಸ್ಥಳಗಳಿಗೆ ಭೇಟಿ ನೀಡಿಬರಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಉದಾಹರಣೆಗೆ ಹಾವೇರಿಯ ಸುತ್ತಮುತ್ತ ಅನೇಕ ಸಾಂಸ್ಕೃತಿಕ ಮಹತ್ವದ ಸ್ಥಳಗಳಿವೆ. ಹಾವೇರಿಗೆ ಹೋದವರು ಇವುಗಳನ್ನೆಲ್ಲ ನೋಡಿ ಬರಲು ಸಾಧ್ಯವಾಗಬೇಕು. ಜಿಲ್ಲಾ ಕೇಂದ್ರದಿಂದ ಹೊರಟರೆ ಒಂದು ದಿನದಲ್ಲಿ ಈ ಸ್ಥಳಗಳನ್ನೆಲ್ಲ ನೋಡಿ ಬರುವಂತೆ ಅನುಕೂಲವನ್ನು ಸರ್ಕಾರ ಕಲ್ಪಿಸಿದರೆ ಪ್ರವಾಸೋದ್ಯಮವೂ ಬೆಳವಣಿಗೆ ಹೊಂದುತ್ತದೆ, ಪ್ರವಾಸಿಗರಿಗೂ ಸಂತೋಷವಾಗುತ್ತದೆ. ಹಾಗೆ ನೋಡಿದರೆ ಪಾಶ್ಚಾತ್ಯ ದೇಶಗಳಲ್ಲಿ ಪ್ರವಾಸ ಒಂದು ಪ್ರಮುಖ ಉದ್ಯಮವಾಗಿ ರೂಪುಗೊಂಡಿದೆ. ಸರ್ಕಾರದ ಬೊಕ್ಕಸಕ್ಕೆ ಆದಾಯ ತರುವ ಒಂದು ಪ್ರಮುಖ ವಲಯವಾಗಿದೆ. ಆದರೆ ಭಾರತದಲ್ಲಿ ಅತ್ಯಂತ ಸೊರಗಿರುವ ವಲಯವೆಂದರೆ ಪ್ರವಾಸೋದ್ಯಮ. ಕರ್ನಾಟಕದಲ್ಲಿಯೇ ಅನೇಕ ಪ್ರೇಕ್ಷಣೀಯ ಪ್ರವಾಸಿತಾಣಗಳಿವೆ. ಆದರೆ ಅವುಗಳ ಬಗ್ಗೆ ಸರಿಯಾದ ಮಾಹಿತಿಯಿಲ್ಲ, ಹೋಗಿ ಬರಲು ಸೌಕರ್ಯಗಳಿಲ್ಲ, ಅಲ್ಲಿ ಪ್ರವಾಸಿಗರಿಗೆ ಬೇಕಾದ ಮೂಲಭೂತ ಅಗತ್ಯಗಳನ್ನು ಒದಗಿಸಿಲ್ಲ- ಹೀಗಾಗಿ ಅವುಗಳೆಲ್ಲ ಅನಾಥಶಿಶುಗಳಂತಾಗಿವೆ.

ನಾನು ಈ ಬಗ್ಗೆ ಹಾವೇರಿಯ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಹಾಗೂ ಅಡಿಷನಲ್ ಜಿಲ್ಲಾಧಿಕಾರಿ ಶಾಂತಾ ಹುಲಮನಿ ಅವರೊಂದಿಗೆ ಮಾತನಾಡಿದೆ. ಅವರಿಬ್ಬರೂ ಸಂಸ್ಕೃತಿಪ್ರಿಯ ಜನಸ್ಪಂದನವಿರುವ ಉತ್ತಮ ಅಧಿಕಾರಿಗಳೆನ್ನಿಸಿತು. ಅವರು ಹಾವೇರಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳನ್ನೆಲ್ಲ ಕೂಡಿಸುವ ಒಂದು ಮಾರ್ಗವಿವರದ ಬಗ್ಗೆ ಆಲೋಚಿಸುತ್ತಿರುವುದಾಗಿ ತಿಳಿಸಿದರು. ಸಚಿವಾಲಯ ಈ ಬಗ್ಗೆ ಆಸಕ್ತಿ ವಹಿಸಬೇಕೆನ್ನುವುದು ನಿಜವಾದರೂ, ಪ್ರತಿ ಜಿಲ್ಲೆಯಲ್ಲೂ ಅಲ್ಲಿನ ಜಿಲ್ಲಾಡಳಿತ ಆ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಅಭಿವೃದ್ಧಿಪಡಿಸುವ ಮನಸ್ಸು ಮಾಡಿದರೆ ಪ್ರವಾಸೋದ್ಯಮಕ್ಕೆ ಚೈತನ್ಯ ತುಂಬಿದಂತಾಗುತ್ತದೆ. ಜಿಲ್ಲಾಡಳಿತ ಮನಸ್ಸು ಮಾಡಿದರೆ ಇದು ಅಸಾಧ್ಯವೇನಲ್ಲ. ದೂರುತ್ತ ಕೂರುವ ಬದಲು ಕಾರ್ಯಪ್ರವೃತ್ತರಾಗುವ ದಿಕ್ಕಿನತ್ತ ಚಿಂತಿಸುವುದು ಒಳ್ಳೆಯದು.

ಹಾವೇರಿಯ ಪ್ರವೇಶದ್ವಾರದಲ್ಲಿ ‘ಏಲಕ್ಕಿ ಕಂಪಿನ ನಾಡು’ ಎಂಬ ಬರಹ ನೋಡಿದೆ. ಏಲಕ್ಕಿ ಬೆಳೆ ಇಲ್ಲಿಯ ಪ್ರಾಂತ್ಯದಲ್ಲಿ ನನಗೆ ಕಾಣಲಿಲ್ಲ. ಆದರೆ ಏಲಕ್ಕಿಯನ್ನು ಸಂಸ್ಕರಿಸುವ, ಏಲಕ್ಕಿ ಹಾರ ತಯಾರಿಸುವ ಉದ್ಯೋಗ ಇಲ್ಲಿದೆ. ಹಾಗೆ ನೋಡಿದರೆ ಬ್ಯಾಡಗಿಯ ಮೆಣಸಿನಕಾಯಿ ತಕ್ಷಣ ನಮ್ಮ ನೆನಪಿಗೆ ಬರುತ್ತದೆ. ಅಕ್ಕಿ ಆಲೂರು ಹೆಸರೇ ಸೂಚಿಸುವಂತೆ ಅಕ್ಕಿಯ ಕಣಜ. ರಾಣಿಬೆನ್ನೂರು ಈ ಜಿಲ್ಲೆಯ ಪ್ರಮುಖ ವಾಣಿಜ್ಯಕೇಂದ್ರ. ಹೈನು, ಎಣ್ಣೆ, ಹತ್ತಿ ಇವುಗಳಿಗೆ ಸಂಬಂಧಿಸಿದ ಉದ್ಯಮ ಇಲ್ಲಿದೆ. ಇವೆಲ್ಲವುಗಳಿಗಿಂತ ಹಾವೇರಿ ಪ್ರಾಂತ್ಯ ‘ದೇಸಿ’ ಚಳವಳಿಯ ಕೇಂದ್ರವಾಗಿ ನನಗೆ ಮುಖ್ಯವೆನ್ನಿಸಿತು.

ಪ್ರಧಾನ ಸಂಸ್ಕೃತಿಗೆ ಎದುರಾಗಿ ನಿಂತು ಪರ್ಯಾಯ ಸಂಸ್ಕೃತಿ ರೂಪಿಸಲು ಪ್ರಯತ್ನಿಸಿದ ಕನಕನ ನಾಡು ಇದು. ಗರ್ವದಿಂದಲ್ಲದೆ ಸರ್ವರೊಳಗೊಂದೊಂದು ನುಡಿಗಲಿತು ವಿದ್ಯೆಯಾ ಪರ್ವತವೆ ಆದ ನೆಲಸಂವೇದನೆಯ ಜನಪರ ಕವಿ ಸರ್ವಜ್ಞನ ನೆಲೆವೀಡು ಇದು. ಎಲ್ಲ ಮತಗಳ ಎಲ್ಲೆ ಮೀರಿ ನಿಂತು ವಸಾಹತುಶಾಹಿಗೆ ಜನಪದ ಸತ್ವವನ್ನು ಎದುರಾಗಿಸಿದ ತತ್ತ್ವಪದಕಾರ ಶರೀಫಜ್ಜನ ಕರ್ಮಭೂಮಿಯಿದು. ಅನೇಕ ಹೋರಾಟಗಳಿಗೆ ಹೆಸರಾದ ಬಂಕಾಪುರ ಈ ಪ್ರಾಂತ್ಯದಲ್ಲಿದೆ. ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧೀಜಿಯ ಸಂಗಾತಿಯಾದ ಮೈಲಾರ ಮಹದೇವನಿಗೆ ಜನ್ಮನೀಡಿದ ನೆಲವಿದು. ಗಳಗನಾಥರು, ಗವಾಯಿಗಳಿದ್ದ ಪ್ರದೇಶವಿದು. ಪಶ್ಚಿಮಕ್ಕೆ ಎದುರಾಗಿ ನಿಂತು ಪೂರ್ವವನ್ನು ಸಮರ್ಥವಾಗಿ ಪ್ರತಿನಿಧಿಸಿದ ಗೋಕಾಕರ ತವರು ಇದು. ಈಗ ಇಲ್ಲಿ ನಾಡಿನ ಹೆಮ್ಮೆಯ ಜಾನಪದ ವಿಶ್ವವಿದ್ಯಾಲಯವಿದೆ. ಅದರ ಪಕ್ಕದಲ್ಲಿಯೇ ನೆಲಸಂಸ್ಕೃತಿಯನ್ನು ಬಿಂಬಿಸುವ ರಾಕ್ ಗಾರ್ಡನ್ ಇದೆ. ನೆಲವನ್ನೇ ನಂಬಿ ಉದ್ಯಮ ರೂಪಿಸುತ್ತಿರುವ ಅಗಡಿ ತೋಟವಿದೆ. ಇವೆಲ್ಲವೂ ಏನು ಹೇಳುತ್ತವೆ? ದೇಸಿ ಸಂಸ್ಕೃತಿಯನ್ನು ಇದಕ್ಕಿಂತ ಸಮರ್ಥವಾಗಿ ಪ್ರತಿನಿಧಿಸುವುದು ಕಷ್ಟಸಾಧ್ಯ.

ಸವಣೂರಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾವು ಅಂದರೆ ನಾನು, ರಜನಿ, ಅಭಿನವ ರವಿಕುಮಾರ್, ಚಂದ್ರಿಕಾ ಹೊರಟಿದ್ದರೂ ಹಾವೇರಿಯ ಸುತ್ತಮುತ್ತಲ ಸ್ಥಳಗಳನ್ನು ನೋಡುವ ಯೋಜನೆಯಿದ್ದುದರಿಂದ ಮೊದಲು ಕಾಗಿನೆಲೆಯಿಂದ ಆರಂಭಿಸಿದೆವು. ಕಳೆದ ಐದಾರು ವರ್ಷಗಳಲ್ಲಿ ಕಾಗಿನೆಲೆ ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಅದನ್ನು ಒಂದು ಪ್ರಮುಖ ಪ್ರವಾಸಿತಾಣವಾಗಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ದೇವಾಲಯಗಳು ನವೀಕೃತಗೊಂಡಿವೆ, ಪ್ರವಾಸಿ ಉದ್ಯಾನವೊಂದು ರೂಪುಗೊಳ್ಳುತ್ತಿದೆ. ಸರೋವರ ನಿರ್ಮಾಣಗೊಳ್ಳುತ್ತಿದೆ. ಈ ಎಲ್ಲ ಕಾರ್ಯಯೋಜನೆ ಪೂರ್ಣಗೊಂಡರೆ ಕಾಗಿನೆಲೆಯ ಸ್ವರೂಪವೇ ಬದಲಾಗುವ ಸಾಧ್ಯತೆಯಿದೆ. ಬಾಡದಲ್ಲಿಯೂ ಕನಕನಾಯಕನ ಅರಮನೆಯನ್ನು ಪುನಾರಚಿಸಲಾಗಿದೆ. ಈ ಅರಮನೆಯ ಸಭಾಂಗಣದಲ್ಲಿ ಸಾಂಸ್ಕೃತಿಕ ಸಮಾವೇಶಗಳು ನಡೆಯುವಂತಾದರೆ ಚಂದ. ಅಂತಹ ಪ್ರಯತ್ನ ನಡೆದಿತ್ತೆಂದು ನಮಗೆ ಮಾರ್ಗದರ್ಶಕರಂತಿದ್ದ, ಹಾವೇರಿ ಪ್ರಾಂತ್ಯದ ಬಗ್ಗೆ ಆಳ ತಿಳಿವಳಿಕೆ ಹೊಂದಿರುವ, ಅಲ್ಲಿಯ ಸಂಸ್ಕೃತಿ ಪ್ರತಿನಿಧಿಯಂತಿರುವ ನಮ್ಮ ಪ್ರಮುಖ ಕವಿಗಳಲ್ಲೊಬ್ಬರಾದ ಸತೀಶ ಕುಲಕರ್ಣಿ ತಿಳಿಸಿದರು. ಅವರು ಈ ಭಾಗದಲ್ಲಿ ಕನ್ನಡ ಸಂಸ್ಕೃತಿಯನ್ನು ಜೀವಂತವಾಗಿಡಲು ಶ್ರಮಿಸುತ್ತಿರುವ ಸಂವೇದನಾಶೀಲ ಸಜ್ಜನರು. ಮೂಲತಃ ಬಂಡಾಯ ಮನೋಧರ್ಮದ ಸತೀಶ್ ಜನಪರ ಕಾಳಜಿಯಿಂದ ಅಲ್ಲಿ ಸೃಜನಶೀಲ ವಾತಾವರಣ ನಿರ್ಮಿಸಲು ಪ್ರಯತ್ನ ಮಾಡುತ್ತಿದ್ದಾರೆ. ಒಂದು ರೀತಿ ಅಲ್ಲಿಯ ಸಾಂಸ್ಕೃತಿಕ ಚಳುವಳಿಯ ಬೆನ್ನೆಲುಬಿನಂತಿದ್ದಾರೆ. ಶಿಶುವಿನಹಾಳ ಸೌಹಾರ್ದದ ಸಂಕೇತ. ಶರೀಫಜ್ಜನ ವಂಶಸ್ಥರೊಬ್ಬರು ಅಲ್ಲಿ ನಮಗೆ ಭೇಟಿಯಾದರು. ಅಲ್ಲಿಯೂ ಒಂದು ವಸ್ತುಪ್ರದರ್ಶನಾಲಯವಿದೆ. ಅದನ್ನು ಒಂದು ಸಂಸ್ಕೃತಿಕೇಂದ್ರವಾಗಿ ರೂಪಿಸಲು ಎಲ್ಲ ಸಾಧ್ಯತೆಗಳಿವೆ ಅನ್ನಿಸಿತು.

ನಾವು ನೋಡಿದ ಮತ್ತೆರಡು ಸ್ಥಳಗಳ ಬಗ್ಗೆ ಇಲ್ಲಿ ಪ್ರಸ್ತಾಪಿಸಬೇಕು. ಮೊದಲನೆಯದು ‘ರಾಕ್​ಲ್ಯಾಂಡ್’, ಮತ್ತೊಂದು ‘ಅಗಡಿ ತೋಟ’. ನಾನು ನಾಗಾಲ್ಯಾಂಡ್​ಗೆ ಹೋಗಿದ್ದಾಗ ಅಲ್ಲಿ ಕೊಹಿಮಾದಲ್ಲಿರುವ ‘ಹೆರಿಟೇಜ್ ವಿಲೇಜ್’ ನೋಡಿದ್ದೆ. ಹೆರಿಟೇಜ್ ವಿಲೇಜ್ ನಾಗಾಲ್ಯಾಂಡ್​ನ ಗುಡ್ಡಗಾಡು ಸಂಸ್ಕೃತಿಯ ಮೂಲಸ್ವರೂಪವನ್ನು ತೋರಿಸುವ ಮರುರಚನೆ. ಅಂಗಾಮಿ, ಆವೋ, ಕಚಾರಿ, ಸುಮಿ, ಕುಕಿ ಮೊದಲಾದ ಹದಿನಾರು ಬುಡಕಟ್ಟು ಜನಾಂಗದ ಸಂಸ್ಕೃತಿ ಇಲ್ಲಿ ಅನಾವರಣಗೊಂಡಿದೆ. ಪ್ರತಿ ಬುಡಕಟ್ಟಿಗೂ ಅದರದೇ ಆದ ಅನನ್ಯತೆಯಿದೆ. ಪ್ರತಿವರ್ಷ ನಿಯಮಿತವಾಗಿ ಡಿಸೆಂಬರ್ 1ರಿಂದ 10ರವರೆಗೆ ಇಲ್ಲಿ ‘ಹಾರ್ನ್​ಬಿಲ್ ಫೆಸ್ಟಿವಲ್’ ನಡೆಯುತ್ತದೆ. ಇದು ಜಗತ್ತಿನಾದ್ಯಂತ ಪ್ರವಾಸಿಗರನ್ನು ಆಕರ್ಷಿಸುವ ಸಂಸ್ಕೃತಿಹಬ್ಬ. ‘ರಾಕ್ ಗಾರ್ಡನ್’ ನೋಡಿದಾಗ ಸಹಜವಾಗಿಯೇ ನನಗೆ ಹೆರಿಟೇಜ್ ವಿಲೇಜ್ ನೆನಪಾಯಿತು. ರಾಕ್​ಗಾರ್ಡನ್ ನಮ್ಮ ಗ್ರಾಮೀಣ ಸಂಸ್ಕೃತಿಯನ್ನು ಕಲೆಯ ಮೂಲಕ ಅನಾವರಣಗೊಳಿಸಿರುವ ಒಂದು ಅಪರೂಪದ ಪ್ರಯತ್ನ. ಇಲ್ಲಿಯೂ ಅಂತಹ ‘ದೇಸಿಸಂಸ್ಕೃತಿಹಬ್ಬ’ ನಡೆಯುವಂತಾದರೆ?

ಕಲಾವಿದ ಸೊಲಬಕ್ಕನವರ್ ಇದರ ರೂವಾರಿ. ಮಗ ರಾಜ್​ಹರ್ಷ, ಮಗಳು ವೇದರಾಣಿ, ಅಳಿಯ ಪ್ರಕಾಶ್ ದಾಸನೂರ್ ಅವರು ಸೊಲಬಕ್ಕನವರ್ ಪರಿಕಲ್ಪನೆಗೆ ಕೈ ಜೋಡಿಸಿದ್ದಾರೆ. ‘ಒಂದು ಕಾಲದಲ್ಲಿ ಕಲೆಗೂ ನಮ್ಮ ಬದುಕಿಗೂ ನೇರಸಂಬಂಧವಿತ್ತು. ಕಲೆ ನಮ್ಮ ಜೀವನವಿಧಾನವಾಗಿ ಬದುಕಿನ ಒಂದು ಭಾಗವಾಗಿತ್ತು. ಕ್ರಮೇಣ ಕಲೆ ಜನಬದುಕಿನಿಂದ ದೂರವಾಗುತ್ತ ಹೋಯಿತು. ಮತ್ತೆ ಜನರ ಬಳಿಗೆ ಕಲೆಯನ್ನು ಕೊಂಡೊಯ್ಯುವ ಪ್ರಯತ್ನವಾಗಿ ರಾಕ್ ಗಾರ್ಡನ್ ರೂಪುಗೊಂಡಿದೆ’ ಎಂಬುದು ಸೊಲಬಕ್ಕನವರ್ ನಮ್ಮೊಡನೆ ಹಂಚಿಕೊಂಡ ಅಭಿಪ್ರಾಯ. ನಿಜಕ್ಕೂ ಇದು ಗ್ರಾಮ ಸಂಸ್ಕೃತಿಯನ್ನು ಪುನಾರಚಿಸಿರುವ ಮಹತ್ವದ ಪ್ರಯತ್ನ. ಇಲ್ಲಿ ಕಲೆಯ ಪ್ರದರ್ಶನವೂ ಇದೆ. ದೇಸಿ ಸಂಸ್ಕೃತಿಯ ಪ್ರಸಾರವೂ ಇದೆ. ಪ್ರವಾಸಿತಾಣವಾಗಿ ಒಂದು ಉದ್ಯಮವಾಗಿಯೂ ಇದು ಯಶಸ್ವಿಯಾಗಿದೆ. ಯಾರ ಹಂಗಿಲ್ಲದೆ ಜನಸಾಮಾನ್ಯರ ಕಲಾಭಿರುಚಿಯನ್ನು ಆಧರಿಸಿ ಯಶಸ್ವಿಯಾಗಬಹುದೆನ್ನುವುದಕ್ಕೆ ರಾಕ್ ಗಾರ್ಡನ್ ಒಂದು ಅತ್ಯುತ್ತಮ ನಿದರ್ಶನ. ಬೇರೆ ಬೇರೆ ಪ್ರಕಾರಗಳನ್ನೂ ಹೀಗೆ ಜನಮಾನಸದ ಬಳಿಗೆ ಕರೆದೊಯ್ಯಲು ಸಾಧ್ಯವಾಗಬೇಕು ಎಂಬುದಕ್ಕೆ ಇದೊಂದು ಮಾದರಿ.

ಈ ಆಧುನಿಕ ತಂತ್ರಜ್ಞಾನದ ಯುಗದಲ್ಲೂ ನೆಲವನ್ನೇ ನಂಬಿ ಬದುಕಬಹುದೆನ್ನುವುದಕ್ಕೆ ಉದಾಹರಣೆ- ಅಗಡಿ ತೋಟ. ಸುಮಾರು 30 ಎಕರೆ ಪ್ರದೇಶದಲ್ಲಿ ಪ್ರಗತಿಪರ ಕೃಷಿಕ, ಎಂಬಿಎ ಪದವೀಧರ ಜಯದೇವ ಅಗಡಿ ರೂಪಿಸಿರುವ ತೋಟ, ಬೇಸಾಯವೂ ಒಂದು ಯಶಸ್ವಿ ಉದ್ಯಮ ಎಂಬುದಕ್ಕೆ ಮಾದರಿಯಾಗಿದೆ. ಮಾತ್ರವಲ್ಲ, ವಸಾಹತೋತ್ತರ ಸಂದರ್ಭದಲ್ಲಿ ದೇಸಿ ಸಂಸ್ಕೃತಿಯನ್ನು ಎತ್ತಿಹಿಡಿಯುವ ಪ್ರಯತ್ನವೂ ಆಗಿದೆ. ಜಯದೇವ್ ಇದನ್ನು ಪ್ರವಾಸಿತಾಣವಾಗಿ ರೂಪಿಸುವುದರ ಮೂಲಕ ತಾವು ಬೆಳೆದ ಉತ್ಪನ್ನಗಳಿಗೆ ಅಲ್ಲಿಯೇ ಮಾರುಕಟ್ಟೆಯನ್ನೂ ಸೃಷ್ಟಿಸಿದ್ದಾರೆ. ಏಕಬೆಳೆಯ ಪದ್ಧತಿಗೆ ಬದಲಾಗಿ ಬಹುಬೆಳೆಯ ಕ್ರಮವನ್ನು ಅಳವಡಿಸಿಕೊಂಡಿರುವ ಜಯದೇವ ಬೇಸಾಯಗಾರ ಮಾತ್ರವಲ್ಲ, ದೇಸಿ ಸಂಸ್ಕೃತಿಯ ಪ್ರತಿಪಾದಕರೂ, ಯಶಸ್ವಿ ಉದ್ಯಮಿಯೂ ಹೌದು.

ಹಾವೇರಿ ಪ್ರಾಂತ್ಯ ಹೀಗೆ ಎಲ್ಲ ನೆಲೆಗಳಲ್ಲಿ ದೇಸಿ ಸಂಸ್ಕೃತಿಯನ್ನು ಒಡಲಲ್ಲಿ ಕಟ್ಟಿಕೊಂಡಿರುವ ನಾಡು. ಸವಣೂರಿನಲ್ಲಿ ನಡೆದ ಕಾರ್ಯಕ್ರಮವೂ ಇದನ್ನೇ ಹೇಳುವಂತಿತ್ತು. ಚೆನ್ನವೀರ ಕಣವಿ, ಅನಿಲ್ ಗೋಕಾಕ್, ಶಾಂತಾ ಹುಲಮನಿ, ಎನ್.ಪಿ. ಭಟ್ ಮೊದಲಾದವರು ಪಾಲ್ಗೊಂಡ ಈ ಕಾರ್ಯಕ್ರಮವನ್ನು ಸತೀಶ ಕುಲಕರ್ಣಿ ಗೆಳೆಯರು ಶ್ರದ್ಧೆಯಿಂದ ಆಯೋಜಿಸಿದ್ದರು. ಒಟ್ಟಾರೆ ಪ್ರವಾಸ ಹಾವೇರಿ ನಾಡಿನ ಜನಸಂಸ್ಕೃತಿ ಒಡನಾಟದಲ್ಲಿ ಪಾಲ್ಗೊಂಡ ಅನುಭವ ನೀಡಿತು.

(ಲೇಖಕರು ಖ್ಯಾತ ವಿಮರ್ಶಕರು)

Leave a Reply

Your email address will not be published. Required fields are marked *

Back To Top