ಕುಟುಂಬಕಾರಣ ಪ್ರಜಾಪ್ರಭುತ್ವದ ಅಣಕ

| ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ

ಭಾರತೀಯ ಸಮಾಜದ ಅತ್ಯಂತ ಪ್ರಭಾವಿ ಘಟಕ- ಕುಟುಂಬ. ನಮ್ಮ ಸಾಮಾಜಿಕ ಸಂಬಂಧಗಳ ವಿನ್ಯಾಸ ಬಹುಮಟ್ಟಿಗೆ ಕುಟುಂಬವನ್ನು ಮೂಲನೆಲೆಯಾಗಿಟ್ಟುಕೊಂಡು ರೂಪುಗೊಳ್ಳುತ್ತದೆ. ಸಹಬಾಳ್ವೆಯ ಪರಿಕಲ್ಪನೆಗೆ ಕುಟುಂಬವೇ ಆಧಾರ. ಗಂಡು ಹೆಣ್ಣಿನ ಆಕರ್ಷಣೆ ಪ್ರಕೃತಿ ಸಹಜವಾದುದು. ಆದರೆ ಹೀಗೆ ಆಕರ್ಷಣೆಗೊಳಗಾದ ಅವರಿಬ್ಬರ ಸಂಬಂಧ ದೀರ್ಘಕಾಲ ಉಳಿಯಲು ಕುಟುಂಬ ಎಂಬ ‘ವ್ಯವಸ್ಥೆ’ಯನ್ನು ಕ್ರಮೇಣ ಮಾನವ ಸಮುದಾಯ ರೂಪಿಸಿಕೊಂಡಿತು. ಸಾಮಾಜಿಕ ಬದುಕಿನ ಮೊದಲ ಘಟ್ಟ ಇಲ್ಲಿಂದ ಆರಂಭವಾಯಿತು. ನಂತರದಲ್ಲಿ ಪುರುಷ-ಪ್ರಕೃತಿ ಮಿಲನ ಹೊಸ ಜೀವ ಸೃಷ್ಟಿಗೆ ಕಾರಣವಾಗಿ, ನವಜಾತ ಜೀವಗಳನ್ನು ಸಾಕಿ ಸಲಹುವ ಜವಾಬ್ದಾರಿಯನ್ನು ‘ಕುಟುಂಬ’ ವಹಿಸಿಕೊಂಡಿತು. ಕ್ರಮೇಣ ಕುಟುಂಬ ಒಂದು ಸಮುದಾಯವಾಗಿ ಬೆಳೆಯುತ್ತಿದ್ದಂತೆ ಸಹಬಾಳ್ವೆಗೆ ಬೇಕಾದ ಬೇರೆ ಬೇರೆ ಸಾಮಾಜಿಕ ವ್ಯವಸ್ಥೆಗಳು ರೂಪುಗೊಂಡವು. ಪರಿಣಾಮವೇ ಹಳ್ಳಿ, ಪಟ್ಟಣ, ನಗರ, ದೇಶ ಇತ್ಯಾದಿ ಘಟಕಗಳು.

ಮಾನವ ಇತಿಹಾಸದ ಬೆಳವಣಿಗೆಯಲ್ಲಿ ಅನೇಕ ಪಲ್ಲಟಗಳಾದರೂ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಇಂದಿಗೂ ಸಮಾಜದ ಮೂಲಘಟಕವಾದ ‘ಕುಟುಂಬ’ಕ್ಕೆ ಮಹತ್ವದ ಸ್ಥಾನವಿದೆ. ಭಾರತದಲ್ಲಂತೂ ಕೌಟುಂಬಿಕ ಸಂಬಂಧ ಅತ್ಯಂತ ಗಾಢವಾದುದು. ಕುಟುಂಬ ಸಂಬಂಧಗಳನ್ನು ಸೂಚಿಸುವ ನೂರಾರು ಪದಗಳು ನಮ್ಮಲ್ಲಿವೆ. ತಂದೆ, ತಾಯಿ, ಮಗ, ಮಗಳು, ತಾತ, ಅಜ್ಜಿ, ಮೊಮ್ಮಗ, ಮೊಮ್ಮಗಳು, ಮರಿಮಕ್ಕಳು, ಅಣ್ಣ, ತಮ್ಮ, ಅಕ್ಕ, ತಂಗಿ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಮಾವ, ಅತ್ತೆ, ಅತ್ತಿಗೆ, ಮೈದುನ, ನಾದಿನಿ, ಭಾವ, ಸೊಸೆ, ಅಳಿಯ, ಓರಗಿತ್ತಿ, ಸವತಿ, ಷಡ್ಡಕ, ಬೀಗರು, ಸೋದರಮಾವ, ಸೋದರತ್ತೆ- ಹೀಗೆ. ನನಗೆ ಕುಮಾರವ್ಯಾಸನ ಪದ್ಯವೊಂದು ನೆನಪಾಗುತ್ತಿದೆ- ‘ವೇದಪುರುಷನ ಸುತನ ಸುತನ ಸಹೋದರನ ಹೆಮ್ಮಗನ ಮಗನ ತಳೋದರಿಯ ಮಾತುಳನ ರೂಪನನತುಳ ಭುಜಬಲದಿ ಕಾದಿ ಗೆಲಿದವನಣ್ಣನವ್ವೆಯ ನಾದಿನಿಯ ಜಠರದಲಿ ಜನಿಸಿದ ಆದಿಮೂರುತಿ ಸಲಹೊ ಗದುಗಿನ ವೀರನಾರಯಣ’. ಕೃಷ್ಣನನ್ನು ಸ್ತುತಿಸುವ ಈ ಷಟ್ಪದಿ ಸಂಬಂಧಗಳ ಸರಮಾಲೆಯನ್ನು ಕಟ್ಟಿಕೊಡುತ್ತದೆ. ಬಹುಶಃ ದ್ರಾವಿಡ ಭಾಷೆಗಳಲ್ಲಿರುವಷ್ಟು ಸಂಬಂಧಸೂಚಕ ಪದಗಳು ಬೇರೆ ಭಾಷೆಗಳಲ್ಲಿದ್ದಂತೆ ಕಾಣಿಸುವುದಿಲ್ಲ. ಈ ಎಲ್ಲ ಪದಗಳೂ ಈಗ ಕಣ್ಮರೆಯಾಗುತ್ತಿವೆ. ಬದಲಾಗಿ ಆಂಟಿ, ಅಂಕಲ್, ಕಸಿನ್ ಪದಗಳು ಇವೆಲ್ಲಕ್ಕೂ ಪರ್ಯಾಯವೆಂಬಂತೆ ಬಳಕೆಯಾಗುತ್ತಿವೆ. ಇದು ಪದಗಳ ಕಣ್ಮರೆ ಮಾತ್ರವಲ್ಲ, ಸಂಬಂಧಗಳು ನಾಶವಾಗುತ್ತಿರುವುದರ ಸೂಚನೆಯೂ ಹೌದು. ಒಮ್ಮೆ ಎಲ್.ಎಸ್. ಶೇಷಗಿರಿರಾವ್ ಅವರು ನನ್ನೊಡನೆ ಮಾತನಾಡುತ್ತಾ ಹೇಳಿದ್ದರು- ‘ಇನ್ನು ಕೆಲವು ವರ್ಷಗಳ ನಂತರ ಅಣ್ಣ, ತಮ್ಮ ಎಂಬ ಪದಗಳ ಅರ್ಥವನ್ನೂ ನಾವು ವಿವರಿಸಿ ಹೇಳಬೇಕಾಗುತ್ತದೆ. ಏಕೆಂದರೆ ಈಗ ತಂದೆ ತಾಯಂದಿರಿಗೆ ಒಂದೇ ಮಗು. ಅದಕ್ಕೆ ಅಣ್ಣ, ತಮ್ಮ, ಅಕ್ಕ, ತಂಗಿ ಎಂಬ ಕಲ್ಪನೆಯೇ ಇರುವುದಿಲ್ಲ. ಆಗ ಅಣ್ಣ ಎಂಬ ಪದ ಹೇಗೆ ಆ ಮಗುವಿಗೆ ಅರ್ಥವಾಗುತ್ತದೆ? ಹೀಗಾಗಿ ಮುಂದಿನ ತಲೆಮಾರಿಗೆ ಅಣ್ಣ ಎಂಬುದರ ಅರ್ಥವನ್ನು ವಿವರಿಸದಿದ್ದರೆ ಅರ್ಥವಾಗುವುದು ಕಷ್ಟ’. ಈಗಾಗಲೇ ನಮ್ಮಲ್ಲಿ ಅನೇಕ ಸಂಬಂಧಸೂಚಕ ಪದಗಳು ಬಳಕೆಯಲ್ಲಿಲ್ಲ.

ಮೊದಲು ಕೂಡುಕುಟುಂಬವಿದ್ದು, ಇದು ಸಹಬಾಳ್ವೆಯ ಅನೇಕ ಪ್ರಾಥಮಿಕ ಪಾಠಗಳನ್ನು ಕಲಿಸುತ್ತಿತ್ತು. ಭಿನ್ನ ರೀತಿಯ ವ್ಯಕ್ತಿತ್ವಗಳೊಡನೆ ಹೊಂದಿಕೊಂಡು ಹೋಗಬೇಕಾದ ಅರಿವನ್ನು ಕೂಡುಕುಟುಂಬದ ಅನುಭವವೇ ಹೇಳಿಕೊಡುತ್ತಿತ್ತು. ನನ್ನ ಹಳ್ಳಿಯಲ್ಲಿ ಸುಮಾರು 40-50 ಜನರಿದ್ದ ಕೆಲವು ಕೂಡುಕುಟುಂಬಗಳಿದ್ದವು. ಒಬ್ಬೊಬ್ಬರು ಒಂದೊಂದು ಜವಾಬ್ದಾರಿಯನ್ನು ವಹಿಸಿಕೊಂಡು ನಿರ್ವಹಿಸುತ್ತಿದ್ದರು. ಕುರಿಮಂದೆ ನೋಡಿಕೊಳ್ಳುವವನೊಬ್ಬ, ದನಗಳ ಜವಾಬ್ದಾರಿ ಮತ್ತೊಬ್ಬನಿಗೆ, ಎಲೆತೋಟದ ನಿರ್ವಹಣೆ ಇನ್ನೊಬ್ಬನದು ಹೀಗೆ… ಆದರೆ ಒಟ್ಟು ಕೆಲಸದಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಿದ್ದರು. ನಾಟಿ ಸಮಯದಲ್ಲಿ ಬೇರೆಯವರು ಕೆಲಸದಾಳುಗಳನ್ನು ಅವಲಂಬಿಸಿದ್ದರೆ ಇವರ ಮನೆಯಲ್ಲಿ ಆ ಸಮಸ್ಯೆಯೇ ಬರುತ್ತಿರಲಿಲ್ಲ. ಮನೆಯವರೆಲ್ಲ ಕೂಡಿದರೆ ಒಪ್ಪತ್ತಿನಲ್ಲಿ ನಾಟಿ ಮುಗಿಯುತ್ತಿತ್ತು. ಕೃಷಿ ಕೆಲಸದಲ್ಲಿ ಕೂಡುಕುಟುಂಬ ಒಂದು ವರ. ಈ ಕೂಡುಕುಟುಂಬದ ಪರಿಕಲ್ಪನೆ ಹಳ್ಳಿಗೂ ವಿಸ್ತಾರಗೊಂಡಿತ್ತೆಂಬುದು ಗಮನಿಸಬೇಕಾದ ಸಂಗತಿ.

ನನ್ನ ಹಳ್ಳಿಯಲ್ಲಿ ಮೊನ್ನೆ ಮೊನ್ನೆಯವರೆಗೆ ಯಾವ ಜಾತಿಯ ಯಾರ ಮನೆಯಲ್ಲಿ ಯಾವುದೇ ಸಮಾರಂಭವಾದರೂ ಇಡೀ ಹಳ್ಳಿಯವರೆಲ್ಲ ಪಾಲ್ಗೊಳ್ಳುತ್ತಿದ್ದರು. ಈಗಿನ ಹಾಗೆ ಊಟದ ಸಮಯಕ್ಕೆ ಸರಿಯಾಗಿ ಬರದೆ, ಮೊದಲೇ ಹಾಜರಿದ್ದು, ಪ್ರತಿಯೊಬ್ಬರೂ ಒಂದೊಂದು ಜವಾಬ್ದಾರಿಯನ್ನು ವಹಿಸಿಕೊಂಡು ಸಮಾರಂಭ ಯಶಸ್ವಿಯಾಗಲು ನೆರವಾಗುತ್ತಿದ್ದರು. ಯಾರದಾದರೂ ಮನೆಯಲ್ಲಿ ಸಾವು ಸಂಭವಿಸಿದರೆ ಒಪ್ಪವಾಗುವವರೆಗೆ ಅಂದರೆ ಸಂಸ್ಕಾರವಾಗುವವರೆಗೆ ಇಡೀ ಊರಿನ ಯಾರ ಮನೆಯಲ್ಲೂ ಒಲೆ ಹಚ್ಚುತ್ತಿರಲಿಲ್ಲ, ಬಾವಿಯಲ್ಲಿ ನೀರು ಸೇದುತ್ತಿರಲಿಲ್ಲ. ನಮ್ಮ ಹಳ್ಳಿಯಲ್ಲಿ ನನ್ನ ಜಾತಿಯ ನಮ್ಮದೊಂದೇ ಕುಟುಂಬ. ಆದರೆ ನನ್ನ ತಂದೆ ಸತ್ತಾಗ ಇಡೀ ಊರು ನಮ್ಮ ಮನೆಯ ಜವಾಬ್ದಾರಿ ತೆಗೆದುಕೊಂಡಿದ್ದನ್ನು ನಾನೆಂದೂ ಮರೆಯಲಾರೆ. ಇದು ‘ಕುಟುಂಬ’ದ ಪರಿಕಲ್ಪನೆ ವಿಸ್ತಾರಗೊಂಡ ಬಗೆ. ಗಾಂಧಿಯಂಥವರಿಗೆ ವಿಶ್ವವೇ ತನ್ನ ಕುಟುಂಬವೆನ್ನಿಸಿತ್ತು. ಕುವೆಂಪು ಅವರ ‘ವಿಶ್ವಮಾನವ’ ಪರಿಕಲ್ಪನೆ, ಪುತಿನ ಅವರ ‘ವಿಶ್ವಕುಟುಂಬಿ’ ಕವಿತೆ ನೆನಪಾಗುತ್ತಿದೆ. ಕೆ.ಎಸ್. ನರಸಿಂಹಸ್ವಾಮಿಯವರ ಕಾವ್ಯದ ಕೇಂದ್ರ ಪ್ರತೀಕವೇ ಕುಟುಂಬ. ಆರಂಭದ ಕವಿತೆಗಳಲ್ಲಿ ವಾಸ್ತವವಾಗಿ ಕುಟುಂಬವೇ ಕಾವ್ಯದ ವಸ್ತು. ‘ಒಂದು ಹೆಣ್ಣು ಒಂದು ಗಂಡು /ಹೇಗೊ ಸೇರಿ ಹೊಂದಿಕೊಂಡು/ ಕಾಣದೊಂದು ಕನಸ ಕಂಡು/ ಮಾತಿಗೊಲಿಯದಮೃತವುಂಡು/ ದುಃಖ ಹಗುರವೆನುತಿರೆ/ ಪ್ರೇಮವೆನಲು ಹಾಸ್ಯವೇ?/’ ಎಂದು ಗಂಡು-ಹೆಣ್ಣಿನ ಪ್ರೀತಿಯನ್ನು ಒಂದು ತಾತ್ವಿಕ ನೆಲೆಗೆ ಕೊಂಡೊಯ್ದು, ದಾಂಪತ್ಯದ ಹಿನ್ನೆಲೆಯಲ್ಲಿ ಕುಟುಂಬದ ಗಾಢತೆಯನ್ನು ಕಟ್ಟಿಕೊಡುವ ಕೆಎಸ್​ನ ಅವರ ಕಾವ್ಯದಲ್ಲಿ ಮುಂದೆ ಕುಟುಂಬ ಒಂದು ಆರ್ಷೆಯ ಪ್ರತೀಕವಾಗಿ ಚಿತ್ರಿತವಾಗುತ್ತದೆ. ಕುಟುಂಬದ ಪರಿಕಲ್ಪನೆ ದೇವರು ತಂದೆ, ಭೂಮಿ ತಾಯಿ, ಮನುಷ್ಯ ಮಗ ಎಂಬ ವಿಸ್ತಾರ ಪಡೆದುಕೊಳ್ಳುತ್ತದೆ.

ಆಧುನಿಕ ನಾಗರಿಕತೆಯ ಬೆಳವಣಿಗೆಯೆಂದರೆ ಅವಿಭಕ್ತ ಕುಟುಂಬ ಛಿದ್ರವಾದ ಕತೆ ಎಂಬುದು ಸಮಾಜಶಾಸ್ತ್ರಜ್ಞರ ಒಂದು ವ್ಯಾಖ್ಯಾನ. ಇದರ ಮತ್ತೊಂದು ನೆಲೆಯೆಂದರೆ ಅಧಿಕಾರ ಕೇಂದ್ರಿತ ಕುಟುಂಬ ರಾಜಕಾರಣ. ಇತಿಹಾಸದುದ್ದಕ್ಕೂ ನಾವು ಕಾಣುವುದು ಅಧಿಕಾರಕ್ಕಾಗಿ ನಡೆಯವ ಕುಟುಂಬ ಹೋರಾಟ. ರಾಮಾಯಣ, ಮಹಾಭಾರತಗಳೇ ಇದಕ್ಕೆ ಅತ್ಯುತ್ತಮ ಉದಾಹರಣೆ. ಇತಿಹಾಸದ ಪುಟಗಳನ್ನು ದಾಯಾದಿ ಕಲಹವೇ ಆವರಿಸಿಕೊಂಡಿದೆ.

ನಮ್ಮ ಆದಿಕವಿ ಪಂಪ ಇದರ ಎರಡು ಮಾದರಿಗಳನ್ನು ನೀಡುತ್ತಾನೆ. ಮೊದಲನೆಯದು ಅಧಿಕಾರಕ್ಕಾಗಿ ನಡೆಯುವ ಕುಟುಂಬ ಕಲಹದ ಅಣ್ಣತಮ್ಮಂದಿರ ಹೋರಾಟ ಚಿತ್ರಿಸುವ ಮಹಾಭಾರತದ ಕತೆ. ಇದು ನಮಗೆಲ್ಲ ಗೊತ್ತಿರುವಂಥದೇ. ಮತ್ತೊಂದು ಅಧಿಕಾರ ತ್ಯಾಗಮಾಡುವ ಆದಿಪುರಾಣದ ಭರತ-ಬಾಹುಬಲಿ ಅಣ್ಣತಮ್ಮಂದಿರ ಕತೆ. ಚಕ್ರವರ್ತಿಯಾಗಲು ಬಯಸಿದ ಭರತನನ್ನು ಸೋಲಿಸಿದ ಬಾಹುಬಲಿಯ ಮೂಲಕ ಪಂಪ ಹೇಳುತ್ತಾನೆ- ‘ಸೋದರರೊಳ್ ಸೋದರರಂ/ ಕಾದಿಸುವುದು ಸುತನ ತಂದೆಯೊಳ್ ಬಿಡದು/ ಉತ್ಪಾದಿಸುವುದು ಕೋಪಮನ್ ಅಳ/ವೀ ದೊರೆತೆನೆ ತೊಡರ್ವದೆಂತು ರಾಜ್ಯಶ್ರೀಯೊಳ್/’. ಹೀಗೆ ಭಾವಿಸಿದ ಬಾಹುಬಲಿ ತಾನು ಅಣ್ಣನಿಂದ ಗೆದ್ದ ರಾಜ್ಯ, ತನ್ನ ತಂದೆ ತನಗೆ ನೀಡಿದ್ದ ರಾಜ್ಯ ಎಲ್ಲವನ್ನೂ ಅಣ್ಣ ಭರತನಿಗೆ ಒಪ್ಪಿಸಿ ತಪಸ್ಸಿಗೆ ಹೊರಟುಬಿಡುತ್ತಾನೆ. ಅವನೇ ಶ್ರವಣಬೆಳಗೊಳದ ಗೊಮ್ಮಟ. ಇತ್ತೀಚೆಗೆ ನಾವು ಅವನಿಗೆ ಮಜ್ಜನ ಮಾಡಿ ಸಂಭ್ರಮಿಸಿದೆವು. ಆದರೆ ಅವನು ಹಾಕಿಕೊಟ್ಟ ಮಾದರಿ ಅನುಸರಿಸುತ್ತೇವೆಯೇ? ರಾಮಾಯಣವೂ ಕುಟುಂಬ ರಾಜಕಾರಣದ ಕತೆಯೇ ಅಲ್ಲವೇ? ಕಿರಿಯ ಹೆಂಡತಿ ಅಧಿಕಾರ ಬಯಸಿದರೆ ಅವಳ ಮಗ ಅಧಿಕಾರದ ಬಗ್ಗೆ ತಾತ್ಸಾರ ಪ್ರಕಟಿಸುತ್ತಾನೆ. ಹಿರಿಯ ಹೆಂಡತಿಯ ಮಗ ಅಧಿಕಾರವನ್ನೇ ತ್ಯಜಿಸಿ ದೂರಹೋಗುತ್ತಾನೆ. ಯಾರು ನಮಗೆ ಮಾದರಿ?

ಸ್ವಾತಂತ್ರಾ್ಯನಂತರದ ಭಾರತದಲ್ಲಿ ರಾಜಪ್ರಭುತ್ವ ಕೊನೆಯಾಗಿ ಪ್ರಜಾಪ್ರಭುತ್ವ ನೆಲೆಗೊಂಡಿತು. ‘ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ’ ಎಂಬ ಘೊಷವಾಕ್ಯದೊಡನೆ ನವಭಾರತ ನಿರ್ವಣದ ಕನಸು ಗರಿಗೆದರಿತು. ವಂಶವಾಹಿ ಆಡಳಿತಕ್ಕೆ ಇತಿಶ್ರೀ ಹಾಡಲಾಯಿತು. ಆದರೆ ಕಳೆದ ಏಳು ದಶಕಗಳಲ್ಲಿ ಆದದ್ದೇನು? ಕುಟುಂಬ ರಾಜಕಾರಣ ಪ್ರಬಲವಾಗುತ್ತಲೇ ಇದೆ. ಅಧಿಕಾರದಲ್ಲಿರುವವರ ಮಕ್ಕಳನ್ನು ‘ಯುವರಾಜ’ ಎಂದು ನಾವು ಮತ್ತೆ ಲಜ್ಜೆಯಿಲ್ಲದೆ ಕರೆಯಲಾರಂಭಿಸಿದ್ದೇವೆ. ನಮ್ಮ ಜನಪ್ರತಿನಿಧಿಗಳಿಗೆ ರಾಜಸೂಚಕ ಕಿರೀಟ ತೊಡಿಸಿ ಕತ್ತಿ ಗದೆಗಳನ್ನು ಕೊಟ್ಟು ರಾಜಪ್ರಭುತ್ವವನ್ನು ಮತ್ತೆ ಆಚರಿಸಲಾರಂಭಿಸಿದ್ದೇವೆ. ನಮ್ಮ ದೃಶ್ಯಮಾಧ್ಯಮಗಳಲ್ಲಿ ಮುಂಚೂಣಿಯ ಜನಪ್ರತಿನಿಧಿಗಳಿಗೆ ರಾಜಪೋಷಾಕುಗಳನ್ನು ತೊಡಿಸಿ ‘ರಾಜ’ರಂತೆ ತೋರಿಸುತ್ತಿದ್ದೇವೆ. ಇದು ಯಾವ ಮನಸ್ಥಿತಿಯನ್ನು ಸೂಚಿಸುತ್ತದೆ?

ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ನಮ್ಮ ಜನಪ್ರತಿನಿಧಿಗಳು ತಮ್ಮ ಮಕ್ಕಳಿಗೆ ಚುನಾವಣೆಯಲ್ಲಿ ತಮ್ಮ ತಮ್ಮ ಪಕ್ಷದ ಟಿಕೆಟ್ ಕೊಡಿಸಲು ‘ಹೋರಾಟ’ ನಡೆಸಿದ್ದು, ಪ್ರಭಾವಿಗಳು ಅದರಲ್ಲಿ ಯಶಸ್ವಿಯೂ ಆದದ್ದು ಪ್ರಜಾಪ್ರಭುತ್ವದ ಅಣಕದಂತೆ ತೋರುತ್ತದೆ. ಚುನಾವಣೆಯಲ್ಲಿ ಯಾರು ಬೇಕಾದರೂ ಸ್ಪರ್ಧಿಸಬಹುದು. ರಾಜಕಾರಣಿಯ ಮಕ್ಕಳಾದ ಮಾತ್ರಕ್ಕೆ ಅವರು ಸ್ಪರ್ಧಿಸಬಾರದೆಂದೇನೂ ಇಲ್ಲ. ಹಾಗೆ ಹೇಳುವುದೂ ಪ್ರಜಾಪ್ರಭುತ್ವವಿರೋಧಿ ನಿಲುವು. ಅದು ಅವರ ಹಕ್ಕು. ಆದರೆ ನಮ್ಮ ಪ್ರಭಾವಿ ಜನನಾಯಕರು ಮಕ್ಕಳನ್ನು ತಮ್ಮ ಉತ್ತರಾಧಿಕಾರಿಗಳಂತೆ ಬಿಂಬಿಸುತ್ತಿರುವುದು ಮಾತ್ರ ಅಪಾಯಕಾರಿ ಬೆಳವಣಿಗೆ. ಅವರಿಗೆ ಆಸಕ್ತಿ ಇರಲಿ, ಇಲ್ಲದಿರಲಿ ಅವರನ್ನು ಎಳೆದುತಂದು ಅಧಿಕಾರ ಕೇಂದ್ರದಲ್ಲಿ ಪ್ರತಿಷ್ಠಾಪಿಸಲು ಪ್ರಯತ್ನಿಸುತ್ತಿರುವುದು ಏನನ್ನು ಸೂಚಿಸುತ್ತದೆ? ಸಂದರ್ಶನವೊಂದನ್ನು ನೋಡುತ್ತಿದ್ದೆ- ‘ನನಗೆ ರಾಜಕೀಯದಲ್ಲಿ ಕಿಂಚಿತ್ತೂ ಆಸಕ್ತಿ ಇರಲಿಲ್ಲ, ಕುಟುಂಬದ ಒತ್ತಡಕ್ಕೆ ಸಿಲುಕಿ ಬರಬೇಕಾಯಿತು’ ಎಂದು ಪ್ರತಿಭಾವಂತನಂತೆ ಕಾಣುತ್ತಿದ್ದ, ತನಗಿಷ್ಟವಾದ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಪ್ರಭಾವಿ ರಾಜಕಾರಣ ಕುಟುಂಬದ ಯುವಕನೊಬ್ಬ ಪ್ರಾಮಾಣಿಕವಾಗಿ ಹೇಳುತ್ತಿದ್ದ. ಅವನಿಗೆ ಬಲವಂತದ ಮಾಘಸ್ನಾನ ಮಾಡಿಸುತ್ತಿದ್ದರು. ರಾಜ್ಯ, ರಾಷ್ಟ್ರದ ಅಧಿಕಾರ ತಮ್ಮ ಕುಟುಂಬದಲ್ಲಿಯೇ ಉಳಿಯಬೇಕೆಂದು ಬಯಸುವುದು ಪ್ರಜಾಪ್ರಭುತ್ವವೋ, ರಾಜಪ್ರಭುತ್ವದ ಮುಂದುವರಿಕೆಯೋ? ನಮ್ಮ ‘ಯುವರಾಜ’ರುಗಳ ‘ಪರಾಕ್ರಮ’ಗಳನ್ನು ನೋಡುತ್ತಿದ್ದರೆ ಆತಂಕವಾಗುತ್ತದೆ.

ಯಾಕೆ ಹೀಗೆ? ಇದರ ಹಿಂದಿನ ರಹಸ್ಯವಾದರೂ ಏನು? ಇದಕ್ಕೆ ಪರಿಣತರ ಅಭಿಪ್ರಾಯದ ಅಗತ್ಯವಿಲ್ಲ. ನಾಡಿನ ಸಾಮಾನ್ಯ ಜನರ ಅಭಿಪ್ರಾಯದಂತೆ ಇದರ ಹಿಂದಿನ ಕಾರಣ ಸಂಪಾದಿಸಿದ ಅಪಾರ ಆಸ್ತಿಯನ್ನು ರಕ್ಷಿಸಿಕೊಳ್ಳಬೇಕಾದರೆ ‘ಅಧಿಕಾರ’ ಇರಲೇಬೇಕು. ಅಕ್ರಮ ಆಸ್ತಿ ಸಂಪಾದನೆ ಹಾಗೂ ಅಧಿಕಾರ ಇವೆರಡಕ್ಕೂ ಇರುವ ಸಂಬಂಧ ರಹಸ್ಯವೇನಲ್ಲ. ನಮ್ಮ ಜನಪ್ರತಿನಿಧಿಗಳ ‘ಆಸ್ತಿಯ ಗಳಿಕೆ’ಯ ಪ್ರಮಾಣದಲ್ಲಿ ಆಗುತ್ತಿರುವ ಹೆಚ್ಚಳವನ್ನು ಗಮನಿಸಿದಾಗ ಆಶ್ಚರ್ಯವಾಗುತ್ತದೆ. ಈ ಸಂದರ್ಭದಲ್ಲಿ ನಮ್ಮ ಹಿರಿಯರೊಬ್ಬರು ಕೇಳಿದ ಪ್ರಶ್ನೆ ನೆನಪಾಗುತ್ತದೆ. ಆ ಹಿರಿಯರು ಹಾಗೂ ಮಂತ್ರಿಯೊಬ್ಬರು ಸಹಪಾಠಿಗಳು, ಆತ್ಮೀಯ ಗೆಳೆಯರು. ಹಿರಿಯರು ಪ್ರತಿಭಾವಂತ ವಿದ್ಯಾರ್ಥಿ. ಮಂತ್ರಿಯಾಗಿದ್ದಾತ ಫೇಲಾದವ. ತಮ್ಮ ವಿದ್ಯಾರ್ಥಿದೆಸೆಯ ನಂತರ ಪ್ರತಿಭಾವಂತ ಪ್ರಾಧ್ಯಾಪಕನಾಗುತ್ತಾನೆ. ಫೇಲಾದವ ರಾಜಕೀಯ ಸೇರಿ ಮಂತ್ರಿಯಾಗುತ್ತಾನೆ. ಇಬ್ಬರೂ ಸಾಮಾನ್ಯ ಕುಟುಂಬದಿಂದ ಬಂದವರು. 30 ವರ್ಷಗಳ ನಂತರದಲ್ಲಿ ಮಂತ್ರಿಯ ಆಸ್ತಿ 300 ಕೋಟಿಗೂ ಮಿಕ್ಕಿರುತ್ತದೆ. ಪ್ರತಿಭಾವಂತನಿಗೆ ನಗರದಲ್ಲಿ ಸ್ವಂತಮನೆಯೂ ಇರುವುದಿಲ್ಲ. ಹಿರಿಯರ ಪ್ರಶ್ನೆ- ‘ಗೆಳೆಯ, ಇಷ್ಟು ಹಣ ಹೇಗೆ ಸಂಪಾದಿಸಿದೆ? ನನಗೂ ಹೇಳಿಕೊಡು’. ಮಂತ್ರಿ ನಸುನಕ್ಕು ಮೌನವಾಗುತ್ತಾನೆ. ನ್ಯಾಯಯುತ ಮಾರ್ಗದಲ್ಲಿ ಇಷ್ಟೊಂದು ಹಣಸಂಪಾದನೆ ಸಾಧ್ಯವೇ ಎಂಬುದು ಗೆಳೆಯನ ಸಂಶಯ. ನಿಮಗೆ ಉತ್ತರ ಗೊತ್ತಿದ್ದೂ ಹೇಳದಿದ್ದರೆ ನಿಮ್ಮ ತಲೆ ಸಹಸ್ರ ಹೋಳಾಗುತ್ತದೆ.

ಇಂದಿನ ರಾಜಕೀಯವೆಂದರೆ ಭ್ರಷ್ಟರ ಒಕ್ಕೂಟ ಎಂಬ ಅಭಿಪ್ರಾಯವಿದೆ. ಹಣ ಮತ್ತು ಅಧಿಕಾರವಿಲ್ಲದೆ ಚುನಾವಣೆ ಗೆಲ್ಲುವುದು ಸುಲಭವಲ್ಲ ಎಂಬುದು ಕಠೋರಸತ್ಯ. ಹಣವಂತರು ತಮ್ಮ ಸಂಪತ್ತು ರಕ್ಷಿಸಿಕೊಳ್ಳಲು ಅಧಿಕಾರ ಬಯಸುತ್ತಾರೆ. ಅಧಿಕಾರದಲ್ಲಿರುವವರು ತಮ್ಮ ಅಧಿಕಾರ ಉಳಿಸಿಕೊಳ್ಳಲು ಹಣದ ಮೊರೆ ಹೋಗುತ್ತಾರೆ. ದೇಶದ ಸಂಪತ್ತು ಮತ್ತು ಅಧಿಕಾರ ಕೆಲವೇ ಕೆಲವು ‘ಕುಟುಂಬ’ಗಳ ಬಳಿ ಕೇಂದ್ರೀಕೃತವಾಗುತ್ತಿದೆ. ಇದು ಪ್ರಜಾಪ್ರಭುತ್ವವಲ್ಲ, ಕುಟುಂಬಪ್ರಭುತ್ವ. ರಾಜಕಾರಣ ‘ಕುಟುಂಬಕಾರಣ’ವಾಗಿ ರೂಪಾಂತರವಾಗುತ್ತಿರುವುದು ಪ್ರಜಾಪ್ರಭುತ್ವದ ಅವಸಾನದಂತೆಯೂ ರಾಜಸತ್ತೆಯ ಪುನರಾಗಮನದಂತೆಯೂ ಕಾಣಿಸುತ್ತಿದೆ.

(ಲೇಖಕರು ಖ್ಯಾತ ವಿಮರ್ಶಕರು)

Leave a Reply

Your email address will not be published. Required fields are marked *