ಹಂ.ಪ. ನಾಗರಾಜಯ್ಯ ಪರಂಪರೆಯ ಪುನರ್​ವ್ಯಾಖ್ಯಾನ

| ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ

ಇದೇ ಅಕ್ಟೋಬರ್ 7ಕ್ಕೆ 82 ತುಂಬಿ 83ಕ್ಕೆ ಕಾಲಿಟ್ಟ ಹಂಪಸಂದ್ರ ನಾಗರಾಜಯ್ಯ ಅವರ ಜೀವನೋತ್ಸಾಹ ಬೆರಗು ಮೂಡಿಸುತ್ತದೆ. ಮನಸ್ಸಿಗೆ ವಯಸ್ಸಿನ ಹಂಗಿಲ್ಲ ಎಂಬುದು ನಿಜವಾದರೂ ಹಂಪನಾ ಅವರು ತಮ್ಮ ಬದುಕಿನ ಪ್ರತಿಕ್ಷಣವನ್ನೂ ಚಟುವಟಿಕೆಯಿಂದ ಜೀವಂತವಾಗಿ ಕಳೆಯುವ ಪರಿಯನ್ನು ನಾನು ಹತ್ತಿರದಿಂದ ಕಂಡು ವಿಸ್ಮಿತನಾಗಿದ್ದೇನೆ. ಎಂತಹ ಸನ್ನಿವೇಶದಲ್ಲೂ ಮುಖದ ಮಂದಹಾಸ ಮರೆಯಾಗದಂತೆ ಅವರು ಕಾಪಾಡಿಕೊಂಡಿದ್ದಾರೆ. ನನ್ನ ವಿದ್ಯಾಗುರುಗಳಾದ ‘ಎಚ್.ಪಿ.ಎನ್’ ಕಳೆದ 5 ದಶಕಗಳಿಂದ ನಾನು ಕಂಡಂತೆ ತಮ್ಮ ವಲಯಕ್ಕೆ ಬಂದವರಿಗೆ ಬೆಚ್ಚನೆಯ ಪ್ರೀತಿ, ವಿಶ್ವಾಸವನ್ನು ಧಾರೆಯೆರೆದಿದ್ದಾರೆ; ಸದ್ಭಾವದ ಮಾತುಗಳನ್ನಾಡುತ್ತ ಎಲ್ಲರನ್ನೂ ಸಮಾನ ಗೌರವದಿಂದ ಕಂಡಿದ್ದಾರೆ. ಸುಸಂಸ್ಕೃತ ನಾಗರಿಕ ನಡವಳಿಕೆ ಅವರದು.

ಹಂಪನಾ ಕನ್ನಡದ ವಿದ್ವತ್ ಪರಂಪರೆಗೆ ಸೇರಿದವರು. ಒಂದು ಕಾಲಕ್ಕೆ ಮೈಸೂರು ವಿಶ್ವವಿದ್ಯಾಲಯ ವಿದ್ವತ್ತಿನ ನೆಲೆವೀಡು. ವಿವಿಧ ವಿಷಯಗಳ ದಿಗ್ಗಜರು ಅಲ್ಲಿದ್ದರು. ಪಾಂಡಿತ್ಯವೆಂಬುದು ಪದವಿಯ ಸಂಗತಿಯಾಗಿರಲಿಲ್ಲ, ವಿದ್ವತ್ ವಿಲಾಸವಾಗಿತ್ತು. ಆ ಪರಿಸರದಲ್ಲಿ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡ ಅನೇಕರು ಮುಂದೆ ಮಹತ್ವದ ಸಾಧನೆ ಮಾಡಿದ್ದಾರೆ. ಕನ್ನಡ ಸಂಸ್ಕೃತಿಯನ್ನು ಕಟ್ಟುವಲ್ಲಿ ಕೈಗೂಡಿಸಿದ್ದಾರೆ. ಅಂಥವರಲ್ಲಿ ಹಂಪನಾ ಒಬ್ಬರು. ಪ್ರತಿಭೆಯನ್ನು ಪೋಷಿಸುವಲ್ಲಿ ಪರಿಸರದ ಪಾತ್ರವೂ ಮಹತ್ವದ್ದು ಎಂಬುದು ಸಾಧಕರ ಬದುಕನ್ನು ನೋಡಿದಾಗ ಅನುಭವಕ್ಕೆ ಬರುತ್ತದೆ. ತಮ್ಮ ಬದುಕಿನ ಸಾರವತ್ತಾದ ಆ ಕಾಲದಲ್ಲಿಯೇ ಸಹಪಾಠಿ ಕಮಲಾರನ್ನು ಹಂಪನಾ ಪ್ರೀತಿಸಿ ಮದುವೆಯಾದದ್ದು ಒಂದು ಕ್ರಾಂತಿಕಾರಕ ನಿರ್ಧಾರ. ಬಹುಶಃ ಈ ನಿರ್ಧಾರವೇ ಅವರಿಬ್ಬರ ಬದುಕಿನ ಗೊತ್ತುಗುರಿಗಳನ್ನೂ ನಿರ್ಧರಿಸಿದಂತೆ ತೋರುತ್ತದೆ. ಅಂದಿನಿಂದ ‘ಕಮಲಾ-ಹಂಪನಾ’ ಇಬ್ಬರೂ ಕನ್ನಡ ಸಂಸ್ಕೃತಿ ಕಟ್ಟುವ ‘ನೋಂಪಿ’ ಕೈಗೊಂಡು, ಅದಕ್ಕಾಗಿ ನಿರಂತರ ಶ್ರಮಿಸುತ್ತಲೇ ದಾಂಪತ್ಯ ಬದುಕಿನ ಸಾರ್ಥಕತೆ ಕಂಡುಕೊಂಡಿದ್ದಾರೆ. ಮಕ್ಕಳಿಗೂ ಸಾಹಿತ್ಯದ ದೀಕ್ಷೆ ನೀಡಿದ್ದಾರೆ.

ನವೋದಯದ ಪರಿಸರದಲ್ಲಿ ಸಾಹಿತ್ಯ ಜಗತ್ತು ಪ್ರವೇಶಿಸಿದ ಹಂಪನಾ ಆ ಮಾರ್ಗದ ಲೇಖಕರಂತೆಯೇ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಕಾವ್ಯ, ಕಾದಂಬರಿ, ಜೀವನಚರಿತ್ರೆ, ಗ್ರಂಥಸಂಪಾದನೆ, ಸಂಶೋಧನೆ, ಭಾಷಾವಿಜ್ಞಾನ, ಶಾಸನಗಳ ಅಧ್ಯಯನ- ಹೀಗೆ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸುಮಾರು ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಸಂಸ್ಕೃತ, ಪ್ರಾಕೃತ, ಕನ್ನಡ, ಇಂಗ್ಲಿಷ್ ಭಾಷೆ-ಸಾಹಿತ್ಯದಲ್ಲಿ ಇವರಿಗೆ ಪ್ರವೇಶವಿರುವುದರಿಂದ ಸಹಜವಾಗಿಯೇ ಇವರ ಅಧ್ಯಯನಕ್ಕೆ ವಿಸ್ತಾರ ಒದಗಿಬಂದಿದೆ. ನಮ್ಮ ಹಳಗನ್ನಡ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ ವಿರಳ ವಿದ್ವಾಂಸರಲ್ಲಿ ಹಂಪನಾ ಒಬ್ಬರು.

‘ಚಾರು ವಸಂತ’ ಹಂಪನಾ ಅವರ ಮಹತ್ವಾಕಾಂಕ್ಷೆಯ ಕಾವ್ಯ. ಶೂದ್ರಕನಿಗಿಂತ ಭಿನ್ನವಾಗಿ, ಗುಣಾಢ್ಯನ ‘ಬೃಹತ್ಕಥಾ’ದಿಂದ ಪ್ರಭಾವಿತವಾಗಿರುವ ಈ ಕಾವ್ಯ ಹಿಂದಿ, ತೆಲುಗು, ಮರಾಠಿ, ಒರಿಯಾ, ಬಂಗಾಳಿ, ರಾಜಸ್ಥಾನಿ, ಗುಜರಾತಿ, ಉರ್ದು, ಸಂಸ್ಕೃತ, ಪ್ರಾಕೃತ ಮೊದಲಾದ ಹಲವು ಭಾಷೆಗಳಿಗೆ ಅನುವಾದವಾಗಿದೆ. ಸಂಸ್ಕೃತ, ಪ್ರಾಕೃತದ ಕೃತಿಗಳು ಕನ್ನಡಕ್ಕೆ ಸಾಕಷ್ಟು ಬಂದಿವೆ. ಈಗ ಕನ್ನಡದಿಂದ ಆ ಭಾಷೆಗಳಿಗೆ ಕೃತಿಗಳು ಅನುವಾದವಾಗುತ್ತಿರುವುದು ಸಾಂಸ್ಕೃತಿಕವಾಗಿ ಮುಖ್ಯ ಸಂಗತಿ. ಭಾರತೀಯ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳಲ್ಲಿ ಚಾರುದತ್ತನ ಕತೆಯ ಪ್ರಸ್ತಾಪ ಬರುವುದಿಲ್ಲವೆಂಬುದು ಕುತೂಹಲಕರ ಸಂಗತಿ. ಜೈನ, ಬೌದ್ಧ ಕತೆಗಳಲ್ಲಿ ಚಾರುದತ್ತನ ಕತೆ ಕಾಣಿಸುತ್ತದೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮೊದಲು ಚಾರುದತ್ತನ ಪ್ರಸ್ತಾಪ ಬರುವುದು ‘ಚಾವುಂಡರಾಯ ಪುರಾಣ’ದಲ್ಲಿ. ನಂತರ ನೇಮಿಚಂದ್ರ, ವಿಜಯಣ್ಣಕವಿ, ಬಾಹುಬಲಿಕವಿ, ಬೊಮ್ಮಣ್ಣ ಮೊದಲಾದವರಲ್ಲಿಯೂ ಚಾರುದತ್ತನ ಪ್ರಸ್ತಾಪವಿದೆ, ಆದರೆ ಕತೆಯಿಲ್ಲ. ಚಾರುದತ್ತನ ಕತೆ ಮೊದಲು ನಮಗೆ ಸಿಗುವುದು 12ನೇ ಶತಮಾನದ ಕರ್ಣಪಾರ್ಯನಲ್ಲಿ. ನಂತರ ಬಂಧುವರ್ಮ, ಮಹಾಬಲ, ನಾಗರಾಜ, ಸಾಳ್ವ, ಮಂಗರಸ ಮೊದಲಾದವರ ಕಾವ್ಯಗಳಲ್ಲಿ ಚಾರುದತ್ತನ ಕತೆ ಬೆಳೆದುಬಂದಿದೆ. ಈ ಎಲ್ಲವನ್ನೂ ಹಂಪನಾ ಗಮನಿಸಿದ್ದಾರೆ. ಸಂಸ್ಕೃತ, ಪ್ರಾಕೃತ ಹಾಗೂ ಕನ್ನಡ ಪರಂಪರೆಯಲ್ಲಿ ಚಾರುದತ್ತನ ಕತೆ ಪಡೆದ ಸ್ವರೂಪವನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಆಧುನಿಕ ಸಂವೇದನೆಯ ನೆಲೆಯಲ್ಲಿ ಹಂಪನಾ ಅವರ ‘ಚಾರು ವಸಂತ’ ರೂಪುಗೊಂಡಿದೆ. ಪರಂಪರೆಯ ವಸ್ತುವೊಂದನ್ನು ಇವತ್ತಿನ ಕನ್ನಡ ಮನಸ್ಸು ಗ್ರಹಿಸಿ ರೂಪಿಸಿರುವ ಬಗೆ ಅಧ್ಯಯನಯೋಗ್ಯ. ಸಂಶೋಧನೆ ಹಂಪನಾ ಅವರ ಆಸಕ್ತಿಯ ಕ್ಷೇತ್ರ. ಅದರಲ್ಲೂ ಹೆಚ್ಚು ಚರ್ಚೆಗೊಳಗಾಗದ ಕವಿಗಳ ಬಗ್ಗೆ ಇವರ ಗಮನವಿದೆ. ಮೂರನೆಯ ಮಂಗರಸ, ಬಂಧುವರ್ಮ, ಸಾಳ್ವ, ಬೊಮ್ಮಣ್ಣ, ಕಮಲಭವ ಇಂಥವರ ಬಗ್ಗೆ ಹಂಪನಾ ಅಧ್ಯಯನ ಮಾಡಿದ್ದಾರೆ. ಜೀವನ ಚರಿತ್ರೆ ಬರೆಯುವಾಗಲೂ ಬಾಬು ರಾಜೇಂದ್ರಪ್ರಸಾದ್, ಅಬ್ದುಲ್ ಗಫಾರ್ ಖಾನ್, ಎ.ಎನ್. ಉಪಾಧ್ಯೆ, ಗೋವಿಂದ ಪೈ ಮೊದಲಾದವರನ್ನು ಆರಿಸಿಕೊಳ್ಳುತ್ತಾರೆ.

ಶಿವಕೋಟ್ಯಾಚಾರ್ಯನ ‘ವಡ್ಡಾರಾಧನೆ’ ಕನ್ನಡದ ಮೊದಲ ಗದ್ಯಕೃತಿ. ಹಂಪನಾ ಇದರ ಬಗ್ಗೆ ವಿವರವಾಗಿ ಅಧ್ಯಯನ ಮಾಡಿ, ‘‘ವಡ್ಡಾರಾಧನೆ ಎಂಬ ಹೆಸರಿನಿಂದ ಪ್ರಖ್ಯಾತವಾಗಿರುವ ಗ್ರಂಥದ ನಿಜವಾದ ಹೆಸರು ‘ಆರಾಧನಾ ಕರ್ಣಾಟ ಟೀಕಾ’. ಇದೊಂದು ಟೀಕಾಗ್ರಂಥ. ಪ್ರಾಕೃತ ಭಾಷೆಯಲ್ಲಿ ಶಿವಕೋಟಿ ಆಚಾರ್ಯನು ರಚಿಸಿರುವ ಪ್ರಾಚೀನ ‘ಆರಾಧನಾ’ ಎಂಬ ಧಾರ್ವಿುಕ ಮತ್ತು ತಾತ್ತಿ ್ವ ಕೃತಿಗೆ ಭ್ರಾಜಿಷ್ಣುವು ಕನ್ನಡದಲ್ಲಿ ಈ ‘ಆರಾಧನಾ ಕರ್ಣಾಟ ಟೀಕಾ’ವನ್ನು ಬರೆದಿದ್ದಾನೆ. ರಾಷ್ಟ್ರಕೂಟರ ಆಳ್ವಿಕೆಯಲ್ಲಿ, ಪ್ರಾಯಶಃ ಕ್ರಿ.ಶ. 800ರಲ್ಲಿ ರಾಜಧಾನಿ ಮಾನ್ಯಖೇಟದಲ್ಲಿ ಈ ಟೀಕಾಗ್ರಂಥವನ್ನು ಸಿದ್ಧಪಡಿಸಿದ್ದಾನೆ. ಈತ ಬೀದರ್ ಜಿಲ್ಲೆಯ ಹಳ್ಳಿಖೇಡ ಗ್ರಾಮದವನು’ ಎಂದು ಅಭಿಪ್ರಾಯ ಪಡುತ್ತಾರೆ. ಭ್ರಾಜಿಷ್ಣುವು ಅನುಸರಿಸಿರುವ ಕಥಾಸಂಪ್ರದಾಯ ಇದುವರೆಗಿನ ಸಂಸ್ಕೃತ-ಪ್ರಾಕೃತ ಕಥಾಕೋಶಗಳಿಗಿಂತ ಭಿನ್ನ. ಎಲ್ಲ ಕಥಾಕೋಶಕಾರರಿಗೂ ‘ಆರಾಧನಾ’ ಗ್ರಂಥವೇ ಮೂಲಾಧಾರವಾದರೂ ಭ್ರಾಜಿಷ್ಣುವಿನದು ದಾಕ್ಷಿಣಾತ್ಯ ರೀತಿ, ಉಳಿದವರದು ಔತ್ತರೇಯ ಸಂಪ್ರದಾಯ ಎಂಬ ಹಂಪನಾ ಅವರ ಅಭಿಪ್ರಾಯ ಅತ್ಯಂತ ಮಹತ್ವದ್ದು. ಕಾವ್ಯಮೀಮಾಂಸೆಯ ಹಿನ್ನೆಲೆಯಲ್ಲಿ ಇದನ್ನು ಬೆಳೆಸಲು ಅವಕಾಶವಿದೆ.

ಹಂಪನಾ ಅವರ ‘ಜೈನ ಕಥಾಕೋಶ’ ಹಾಗೂ ‘ಪ್ರಾಕೃತ ಕಥಾ ಸಾಹಿತ್ಯ’ ಕನ್ನಡ ಪರಂಪರೆಯನ್ನು ಪುನರ್​ವ್ಯಾಖ್ಯಾನಿಸಲು ನಮ್ಮನ್ನು ಒತ್ತಾಯಿಸುವ ಮಹತ್ವದ ಕೃತಿಗಳು. ಭಾರತೀಯ ಸಾಹಿತ್ಯಕ್ಕೆ ಪ್ರಧಾನವಾಗಿ ಎರಡು ಪರಂಪರೆಗಳಿವೆ. ವಾಲ್ಮೀಕಿ ರಾಮಾಯಣ, ವ್ಯಾಸ ಮಹಾಭಾರತಗಳ ಸಂಸ್ಕೃತ ಧಾರೆ ಒಂದು ಕಡೆಗಿದ್ದರೆ, ಗುಣಾಢ್ಯನ ‘ವಡ್ಡಕಹಾ’, ಶಿವಕೋಟಿ ಆಚಾರ್ಯನ ‘ಆರಾಧನಾ’, ಜಿನಸೇನ-ಗುಣಭದ್ರರ ‘ಮಹಾಪುರಾಣ’ಗಳ ಪ್ರಾಕೃತದ ಧಾರೆ ಮತ್ತೊಂದು ಕಡೆಗಿದೆ. ನಮಗೆ ಪರಿಚಿತವಾದ ಕಥಾಜಗತ್ತು ಸಂಸ್ಕೃತದಿಂದ ಬಂದದ್ದು. ಕನ್ನಡ ಸಾಹಿತ್ಯದ ಮೇಲೆ ಪ್ರಾಕೃತ ಜಗತ್ತಿನ ಪ್ರಭಾವದ ಬಗ್ಗೆ ನಾವಿನ್ನೂ ಅಧ್ಯಯನ ಮಾಡಬೇಕಿದೆ. ಹಂಪನಾ ಅವರ ಅಧ್ಯಯನ ಈ ದೃಷ್ಟಿಯಿಂದ ಹೊಸ ಬೆಳಕು ಚೆಲ್ಲುತ್ತದೆ.

ಷ. ಶೆಟ್ಟರ್ ಅವರು ಹೇಳುವಂತೆ ದಕ್ಷಿಣ ಭಾರತದ ಮೊತ್ತಮೊದಲ ಬರಹ ಭಾಷೆಯಾದ ಪ್ರಾಕೃತವು ಕ್ರಿ.ಪೂ. 3ನೆಯ ಶತಮಾನದಿಂದ ಕ್ರಿ.ಶ. 3ನೆಯ ಶತಮಾನದವರೆಗೆ ಏಕಸ್ವಾಮ್ಯವನ್ನು ಮೆರೆದು, ನಂತರ ಸಂಸ್ಕೃತ ಹಾಗೂ ಪ್ರಾದೇಶಿಕ ಭಾಷೆಗಳಿಗೆ ಅನುವು ಮಾಡಿಕೊಟ್ಟು, ಕ್ರಿ.ಶ. 4ನೆಯ ಶತಮಾನದ ವೇಳೆಗೆ ತನ್ನ ಪ್ರಭಾವ ಕಳೆದುಕೊಂಡಿತು. ದಕ್ಷಿಣ ಭಾರತವನ್ನು ಪ್ರವೇಶಿಸಿದ ಬೌದ್ಧರು ಹಾಗೂ ಜೈನರು ತಮ್ಮ ತಮ್ಮ ಮತಪ್ರವರ್ತಕರ ಆದೇಶದಂತೆ ಜನಭಾಷೆಯಾದ ಪ್ರಾಕೃತಗಳಲ್ಲಿ ಬಹುಕಾಲ ವ್ಯವಹರಿಸಿದ್ದರು. ಮುಂದೆ ಬೌದ್ಧರು ದಕ್ಷಿಣ ಭಾರತಕ್ಕೆ ಬಂದಾಗಲೂ ತಮ್ಮ ಭಾಷಾನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳದೆ ಪ್ರಾಕೃತವನ್ನೇ ಬಳಸಿದರು. ಆದರೆ ಜೈನರು ಇದಕ್ಕೆ ಭಿನ್ನವಾಗಿ ದಕ್ಷಿಣಕ್ಕೆ ಬಂದಾಗ ಪ್ರಾಕೃತಕ್ಕೆ ಬದಲಾಗಿ ಸಂಸ್ಕೃತ ಹಾಗೂ ದೇಶೀಭಾಷೆಗಳತ್ತ ವಾಲಿದರು. ಹೀಗಾಗಿ ದೇಶೀ ಭಾಷಾ ಸಾಹಿತ್ಯದಲ್ಲಿ ಜೈನರ ಪಾತ್ರ ಪ್ರಮುಖವಾಯಿತು. ಅದರಲ್ಲೂ ಕನ್ನಡಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಆರಂಭ ಕಾಲದ ಕನ್ನಡ ಸಾಹಿತ್ಯವನ್ನು ರೂಪಿಸಿದ ಶ್ರೇಯಸ್ಸು ನಿಸ್ಸಂದೇಹವಾಗಿ ಜೈನರಿಗೆ ಸಲ್ಲುತ್ತದೆ. ಜೈನರು ಪ್ರಾಕೃತದ ಹಿನ್ನೆಲೆಯಿಂದ ಬಂದವರು ಎಂಬುದನ್ನು ಗಮನಿಸಿದಾಗ ಕನ್ನಡ ಸಾಹಿತ್ಯದ ಮೇಲೆ ಪ್ರಾಕೃತದ ಪ್ರಭಾವದ ಬಗ್ಗೆ ನಾವು ಗಮನಿಸಲೇಬೇಕಾಗುತ್ತದೆ. ಆದರೆ ನಮ್ಮ ಇದುವರೆಗಿನ ಅಧ್ಯಯನ ಈ ದಿಕ್ಕಿನತ್ತ ಆಸಕ್ತಿ ವಹಿಸಿಲ್ಲ. ಹಂಪನಾ ಅವರ ಅಧ್ಯಯನ ಸಂಸ್ಕೃತಕ್ಕಿಂತ ಭಿನ್ನವಾದ ಪರ್ಯಾಯ ಕಥನದತ್ತ ಚಿಂತಿಸಲು ನಮ್ಮನ್ನು ಒತ್ತಾಯಿಸುವುದು ಮಾತ್ರವಲ್ಲ, ಇದು ಕನ್ನಡ ಪರಂಪರೆಯನ್ನು ಹೊಸ ಬಗೆಯಲ್ಲಿ ನೋಡಲು ಅವಕಾಶ ಮಾಡಿಕೊಡುತ್ತದೆ.

ಭಾರತೀಯ ಸಾಹಿತ್ಯ ಚಿಂತನೆಯಲ್ಲಿ ಕಾವ್ಯವೇ ಕೇಂದ್ರವೆಂಬುದು ಇದುವರೆಗಿನ ತಿಳಿವಳಿಕೆ. ಭಾರತೀಯ ಚಿಂತಕರು ಸಾಹಿತ್ಯಕ್ಕೆ ಪರ್ಯಾಯವಾಗಿ ಕಾವ್ಯ ಎಂಬ ಪದವನ್ನೇ ಬಳಸಿದ್ದಾರೆ. ಸಾಹಿತ್ಯದ ಇತರ ಪ್ರಕಾರಗಳಾದ ಗದ್ಯ, ನಾಟಕ ಎಲ್ಲವೂ ‘ಕಾವ್ಯ’ದಲ್ಲೇ ಸೇರಿವೆ. ‘ಕಾವ್ಯೇಷು ನಾಟಕಂ ರಮ್ಯಂ’ ಎಂಬ ಮಾತುಗಳನ್ನು ಗಮನಿಸಬಹುದು. ಹೀಗಾಗಿ ಭಾರತೀಯ ಚಿಂತನೆಯಲ್ಲಿ ‘ಕಥನ ಶಾಸ್ತ್ರ’ ರೂಪುಗೊಳ್ಳಲಿಲ್ಲ. ಆದರೆ ಪಾಶ್ಚಾತ್ಯರಲ್ಲಿ ಕಥನಶಾಸ್ತ್ರ (Narrotology) ಒಂದು ಪ್ರಮುಖ ಶಾಸ್ತ್ರವಾಗಿ ಬೆಳೆದುಬಂದಿದೆ ಎಂಬ ಅಭಿಪ್ರಾಯವಿದೆ. ಹಂಪನಾ ಅವರ ಅಧ್ಯಯನ ಇದನ್ನು ಪ್ರಶ್ನಿಸುವಂತಿದೆ.

ಪ್ರಾಚೀನ ಕಾಲದಿಂದಲೂ ಕಥನ ಸಾಹಿತ್ಯಕ್ಕೆ ಬೇರೆ ಯಾವ ಸಂಸ್ಕೃತಿಯಲ್ಲಿಯೂ ಕಾಣದ ಪ್ರಾಶಸ್ತ್ಯ ಭಾರತೀಯರಲ್ಲಿದೆ. ಇಲ್ಲಿ ದೊರೆತಿರುವ ಕಥನ ಪ್ರಕಾರಗಳು ಬೇರೆಲ್ಲಿಯೂ ದೊರೆತಿಲ್ಲ. ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲಿಯೂ ಕಥೆಗಳಿದ್ದರೂ ಅವುಗಳ ಸ್ವರೂಪ ಬೆಳವಣಿಗೆಗಳಲ್ಲಿ ಭಿನ್ನತೆ ಇರುವುದನ್ನು ಎಡ್ವರ್ಡ್ ಸೈದ್ ಗುರುತಿಸುತ್ತಾನೆ. ಭಾರತೀಯ ಕಥನ ಸಾಹಿತ್ಯಕ್ಕೆ ಅದರದೇ ಆದ ವಿಶಿಷ್ಟ ಲಕ್ಷಣಗಳಿವೆ ಎಂಬುದು ನಮ್ಮ ಪ್ರಾಚೀನ ಕಥಾ ಪರಂಪರೆಯನ್ನು ನೋಡಿದಾಗ ತಿಳಿಯುತ್ತದೆ. ಜಿ. ಎನ್. ದೇವಿಯವರು ಹೇಳುವಂತೆ ಭಾರತೀಯ ಸಾಹಿತ್ಯ ಕಳೆದ 2 ಶತಮಾನಗಳಲ್ಲಿ ಪಾಶ್ಚಾತ್ಯ ಮಾದರಿಯ ಗ್ರಹಿಕೆಯ ಭಾರದಿಂದ ನಲುಗುತ್ತಿದೆ. ಇದರಿಂದ ಬಿಡುಗಡೆ ಪಡೆಯಬೇಕಾದರೆ ನಾವು ನಮ್ಮ ಪರಂಪರೆಗೆ, ಅದರಲ್ಲೂ ಪ್ರಧಾನ ಪರಂಪರೆಗಿಂತ ಭಿನ್ನವಾದ ಪರ್ಯಾಯ ನೆಲೆಗೆ ಹೋಗುವುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ ಹಂಪನಾ ತಮ್ಮ ಅಧ್ಯಯನದ ಮೂಲಕ ಕಟ್ಟಿಕೊಡುವ ಪ್ರಾಕೃತ ಕಥಾ ಪರಂಪರೆಗೆ ಪ್ರಾಮುಖ್ಯವಿದೆ. ಕುತೂಹಲಕ್ಕಾಗಿ ಜೈನ ಕಥಾ ಪರಂಪರೆಯಲ್ಲಿ ಅನೇಕ ಕಥಾಸಂಪ್ರದಾಯಗಳಿರುವುದನ್ನು ಗಮನಿಸಬಹುದು- ಕಾಮಕಥೆ, ಅರ್ಥಕಥೆ, ಧರ್ಮಕಥೆ, ಮಿಶ್ರಕಥೆ, ಸಂಕೀರ್ಣಕಥೆ, ಆಕ್ಷೇಪಣಿಕಥೆ, ವಿಕ್ಷೇಪಣಿಕಥೆ, ಸಂವೇಗಜನನಿಕಥೆ, ನಿರ್ವೆಗಜನನಿಕಥೆ, ಸ್ತ್ರೀಕಥೆ, ಭಕ್ತಕಥೆ ಇತ್ಯಾದಿ. ಭದ್ರಬಾಹುವಿನ ‘ದಸವೇಯಾಲಿಯ ನಿಜ್ಜುತ್ತಿ’ಯಲ್ಲಿ ಇವುಗಳಿಗೆ ಸಂಬಂಧಿಸಿದ ವಿವರ ವ್ಯಾಖ್ಯಾನವಿದೆ. ಇದನ್ನು ಮುಂದುವರಿಸಿ ‘ಸಮರಾಇಚ್ಛಕಹಾ’ದ ಹರಿಭದ್ರಸೂರಿ ಹಾಗೂ ‘ಕುವಲಯಮಾಲಾ’ದ ಉದ್ಯೋತನಸೂರಿ ಮತ್ತಷ್ಟು ವಿವರವಾಗಿ ಕಥಾಪ್ರಕಾರಗಳನ್ನು ರ್ಚಚಿಸುತ್ತಾರೆ. ಉದ್ಯೋತನಸೂರಿಯಂತೂ ಕಥೆಯ ಆಕೃತಿ, ಕಥೆಯ ವಸ್ತು, ಕಥೆಯ ನಿರೂಪಣಾವಿಧಾನ ಇವುಗಳ ಬಗ್ಗೆಯೂ ಪ್ರಸ್ತಾಪಿಸುತ್ತಾನೆ. ಆತ ಸಯಲಕಹಾ, ಖಂಡಕಹಾ, ಉಲ್ಲಾಪಕಹಾ, ತಹಾಕಹಾ, ವರಕಹಾ ಮೊದಲಾದವುಗಳನ್ನು ನಿದರ್ಶನವನ್ನಾಗಿಟ್ಟುಕೊಂಡು ಕಥೆಯ ವಸ್ತು ತಂತ್ರಗಳಲ್ಲಿರುವ ಭಿನ್ನತೆಯನ್ನು ಗುರುತಿಸಲು ಪ್ರಯತ್ನಿಸುತ್ತಾನೆ. ಕನ್ನಡದ ‘ಚಾವುಂಡರಾಯ ಪುರಾಣ’ದಲ್ಲಿಯೂ ಇವುಗಳ ಬಗ್ಗೆ ಪ್ರಸ್ತಾಪವಿರುವುದನ್ನು ನಾವು ಗಮನಿಸಬಹುದು. ಹಂಪನಾ ಅವರ ಅಧ್ಯಯನ, ಕನ್ನಡ ಸಾಹಿತ್ಯ ಪರಂಪರೆ ಹಾಗೂ ಭಾರತೀಯ ಕಾವ್ಯಮೀಮಾಂಸೆಯನ್ನು ಇದುವರೆಗಿನ ಕ್ರಮಕ್ಕಿಂತ ಈಗ ಭಿನ್ನವಾಗಿ ನೋಡುವುದು ಅಗತ್ಯವೆಂಬುದನ್ನು ಒತ್ತಾಯಿಸುತ್ತದೆ.

ಹಂಪನಾ ಜಗತ್ತಿನ ಅನೇಕ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ ನೀಡುವುದರ ಮೂಲಕ ಕನ್ನಡ ಸಾಹಿತ್ಯದ ಮಹತ್ವವನ್ನು ನಾಡಿನಾಚೆಗೆ ಪರಿಚಯಿಸಲು ಪ್ರಯತ್ನಿಸಿದ್ದಾರೆ. ಜರ್ಮನಿ, ಜಪಾನ್, ಸ್ವೀಡನ್, ಇಟಲಿ, ಪೋಲೆಂಡ್, ಕೆನಡಾ, ರಷ್ಯಾ, ಅಮೆರಿಕ, ಚೀನಾ, ಇಂಗ್ಲೆಂಡ್, ಶ್ರೀಲಂಕಾ, ದಕ್ಷಿಣಕೊರಿಯಾ ಮೊದಲಾದ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಆಹ್ವಾನಿತರಾಗಿ ಹೋಗಿ ಅವರು ಅಲ್ಲಿಯ ವಿಶೇಷ ಉಪನ್ಯಾಸ, ಸಂಕಿರಣ, ಶಿಬಿರಗಳಲ್ಲಿ ಪಾಲ್ಗೊಂಡಿದ್ದಾರೆ. ಕನ್ನಡ ಪ್ರಾಧ್ಯಾಪಕರೊಬ್ಬರು ಹೀಗೆ ಜಗತ್ತಿನ ಅನೇಕ ವಿಶ್ವವಿದ್ಯಾಲಯಗಳ ಬೌದ್ಧಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವುದು ವಿಶೇಷವೆನ್ನಿಸುತ್ತದೆ. ಹಂಪನಾ ಆ ಮೂಲಕ ಅಲ್ಲಿಯ ಚಿಂತಕರ ಒಡನಾಟದ ಫಲವಾಗಿ ತಮ್ಮ ಅಧ್ಯಯನಕ್ಕೆ ಅಗತ್ಯವಾದ ಸಾಕಷ್ಟು ಒಳನೋಟಗಳನ್ನೂ ಪಡೆದುಕೊಂಡಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹಂಪನಾ ಅವರ 83ನೇ ವರ್ಷದ ಹುಟ್ಟುಹಬ್ಬದ ಸಮಾರಂಭದಲ್ಲಿ ಬೇರೆ ಬೇರೆ ದೇಶಗಳ ವಿದ್ವಾಂಸರು ಭಾಗವಹಿಸಿ ಅವರಿಗೆ ‘ದ ಗಿಫ್ಟ್ ಆಫ್ ನಾಲೆಡ್ಜ್’ ಎಂಬ ಗೌರವಗ್ರಂಥವನ್ನು ಅರ್ಪಿಸಿದರು. ಈ ಕೃತಿ ಪ್ರಭುತ್ವ ಮತ್ತು ಸೃಜನಶೀಲತೆಯ ಸಂಬಂಧವನ್ನು ಕುರಿತಾದ ಚಿಂತನೆಯನ್ನು ಒಳಗೊಂಡಿದೆ.

ಆಚಾರ್ಯ ಹಂಪನಾ ಅವರಿಗೆ ನಾಡವರ ಪರವಾಗಿ ಶುಭಾಶಯಗಳು.

(ಲೇಖಕರು ಖ್ಯಾತ ವಿಮರ್ಶಕರು)

Leave a Reply

Your email address will not be published. Required fields are marked *