ನಾಗರಿಕ ಪ್ರಜ್ಞೆ ಮತ್ತು ಸಾಮಾಜಿಕ ಬದ್ಧತೆ

| ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ

ನಾವು ಈ ಜಗತ್ತಿಗೆ ಬಂದಾಗ ಈ ಜಗತ್ತು ಹೇಗಿತ್ತೋ ಅದಕ್ಕಿಂತ ಕೊಂಚವಾದರೂ ಅದನ್ನು ಉತ್ತಮಗೊಳಿಸುವಂತೆ ನಾವು ಬದುಕಬೇಕೇ ಹೊರತು ಅದನ್ನು ಮತ್ತಷ್ಟು ಹೊಲಸುಗೊಳಿಸಿ ಹೋಗಬಾರದು. ಇದು ಸಾರ್ಥಕ ಬದುಕಿನ ಪರಿಕಲ್ಪನೆ. ಸುತ್ತಮುತ್ತಲಿನವರಿಗೆ ಹಿಂಸೆಯಾಗದ ಹಾಗೆ, ಅವರ ಬದುಕನ್ನು ಅಸಹನೀಯಗೊಳಿಸದ ಹಾಗೆ ನಮ್ಮ ಬದುಕಿನ ರೀತಿಯನ್ನು ರೂಪಿಸಿಕೊಳ್ಳುವುದು ಸಮಾಜ ಜೀವಿಗಳಾದ ನಮ್ಮೆಲ್ಲರ ಕರ್ತವ್ಯ. ನಾವು ಸಂತೋಷವಾಗಿರಬಾರದು ಎಂದು ಯಾರೂ ಹೇಳುವುದಿಲ್ಲ. ಆದರೆ ನಮ್ಮ ಸಂತೋಷ ಬೇರೆಯವರಿಗೆ ತೊಂದರೆ ಉಂಟುಮಾಡುವಂತಿರಬಾರದು ಎಂಬ ಎಚ್ಚರ ನಮಗಿರಬೇಕು. ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲೂ ಎರಡು ನೆಲೆಗಳಿರುತ್ತವೆ. ಒಂದು ವೈಯಕ್ತಿಕ, ಮತ್ತೊಂದು ಸಾಮಾಜಿಕ. ಇವೆರಡರ ಹೊಂದಾಣಿಕೆಯೇ ನಿಜವಾದ ಸವಾಲು. ನಮಗೆಲ್ಲರಿಗೂ ವೈಯಕ್ತಿಕ ಆಸೆ ಅಪೇಕ್ಷೆಗಳು ಇರುತ್ತವೆ. ಆದರೆ ಆ ಆಸೆ ಅಪೇಕ್ಷೆಗಳು ಸಾಮಾಜಿಕ ರಚನೆಯ ಹದವನ್ನು ಕೆಡಿಸುವಂತಿರಬಾರದು; ಸಮಾಜದ ಹಿತವನ್ನು ಬಲಿಕೊಡಬಾರದು. ಹಾಗೆಯೇ ನಮ್ಮ ಸಾಮಾಜಿಕ ನಿಲುವುಗಳು ವ್ಯಕ್ತಿಯ ಬದುಕಿನ ಘನತೆಯನ್ನು ಹಾಳು ಮಾಡುವಂತಿರಬಾರದು.

ನನ್ನ ವಿದ್ಯಾರ್ಥಿಯೊಬ್ಬರು ಒಮ್ಮೆ ಒಂದು ಪ್ರಶ್ನೆ ಕೇಳಿದರು- ‘ಸರ್, ನಾವು ಬೇರೆಯವರನ್ನು ಕೊಲೆ ಮಾಡಿದರೆ ಅದು ಅಪರಾಧ, ಅದಕ್ಕೆ ಶಿಕ್ಷೆ ನೀಡುವುದು ಸರಿ. ಆದರೆ ಬದುಕು ಬೇಡವೆನ್ನಿಸಿದಾಗ ನಾವು ಆತ್ಮಹತ್ಯೆಗೆ ಮುಂದಾಗಿ ಸತ್ತುಹೋದರೆ ಇಹಲೋಕದ ನಮ್ಮ ಸಮಸ್ಯೆ ಬಗೆಹರಿದಂತೆ. ಆದರೆ ಬದುಕಿ ಉಳಿದರೆ ಆತ್ಮಹತ್ಯೆಯ ಪ್ರಯತ್ನ ಶಿಕ್ಷಾರ್ಹ ಅಪರಾಧವೆಂದು ಕೇಸು ಹಾಕಲಾಗುತ್ತದೆ. ಇದು ಸರಿಯೇ? ನಾವೇನು ಬೇರೆಯವರನ್ನು ಕೊಂದಿಲ್ಲ. ಬದುಕು ಅಸಹನೀಯವೆನ್ನಿಸಿದಾಗ ನಮ್ಮ ಜೀವವನ್ನು ನಾವು ಕೊನೆಗಾಣಿಸಿಕೊಳ್ಳಲೂ ಅವಕಾಶ ಇಲ್ಲವೇ? ಆತ್ಮಹತ್ಯೆಯನ್ನು ಏಕೆ ಅಪರಾಧವೆಂದು ಪರಿಗಣಿಸುತ್ತಾರೆ?’. ಕಾನೂನಿನ ವ್ಯಾಪ್ತಿಯ ಸಂಗತಿ ಒತ್ತಟ್ಟಿಗಿರಲಿ. ಸಹಜವಾಗಿ ನೋಡಿದಾಗ ಈ ಪ್ರಶ್ನೆ ನಾವೆಲ್ಲರೂ ಎದುರಿಸಿ ಚಿಂತಿಸಬೇಕಾದ್ದು ಅನ್ನಿಸಿತು.

ಒಂದು ಘಟನೆ ಇಂದಿಗೂ ನನ್ನನ್ನು ಗಾಢವಾಗಿ ಕಲಕುತ್ತಿದೆ- ನನ್ನ ಗೆಳೆಯರ ಒಬ್ಬನೇ ಮಗ ಪ್ರತಿಭಾವಂತ. ಅವರದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬ. ಆತ ತನ್ನ ಪ್ರಯತ್ನದಿಂದಾಗಿಯೇ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ದೊರಕಿಸಿಕೊಂಡು ಉತ್ತಮ ರೀತಿಯಲ್ಲಿ ಪಾಸು ಮಾಡಿದ್ದ. ಮುಂದೆ ತನಗಿಷ್ಟವಾದ ವಿಷಯದಲ್ಲಿ ಸ್ನಾತಕೋತ್ತರ ಅಧ್ಯಯನಕ್ಕೆ ಪ್ರಯತ್ನಿಸಿದ. ಆದರೆ ಅವನಿಗೆ ಪ್ರವೇಶ ಸಿಗಲಿಲ್ಲ. ಆತನ ಸಿರಿವಂತ ಗೆಳೆಯರು ಕೋಟಿಗಟ್ಟಲೆ ಹಣ ಕೊಟ್ಟು ಸೀಟು ಪಡೆದರು. ಅವರೆದುರು ಈತನದು ಅಸಹಾಯಕ ಸ್ಥಿತಿ. ಸಂದರ್ಭವನ್ನು ಆತ ಎದುರಿಸಬೇಕಾಗಿತ್ತು ಎಂಬುದು ಸಹಜ ಅಭಿಪ್ರಾಯ. ಆದರೆ ಒಂದು ದುರ್ಬಲ ಕ್ಷಣದಲ್ಲಿ ಆತ ಮನಸ್ಸಿನ ಸ್ಥಿಮಿತ ಕಳೆದುಕೊಂಡು ತನ್ನ ಬದುಕು ಅರ್ಥಹೀನ ಎಂಬ ನಿಲುವು ತಾಳಿ ಆತ್ಮಹತ್ಯೆಯ ಕಠಿಣ ನಿರ್ಧಾರಕ್ಕೆ ಬಂದು ಜೀವ ಕಳೆದುಕೊಂಡ. ಬದುಕಿನ ಭರವಸೆಯಾಗಿದ್ದ ಮಗನನ್ನು ಕಳೆದುಕೊಂಡ ತಂದೆ ತಾಯಂದಿರ ಬದುಕು ದುರ್ಭರವಾಯಿತು. ಸಾಯುವ ಧೈರ್ಯವಿಲ್ಲ; ಬದುಕುವ ಅಪೇಕ್ಷೆಯಿಲ್ಲ. ಹೇಗೋ ಅವರು ಜೀವನ ಸಾಗಿಸುತ್ತಿದ್ದಾರೆ. ಜತೆಗೆ ಆ ಹುಡುಗನ ಸ್ನೇಹಿತರು, ಆಪ್ತ ಬಳಗದವರು ಎಲ್ಲರೂ ಇದರಿಂದ ಆಘಾತಕ್ಕೊಳಗಾದರು. ಅವನೊಬ್ಬನ ಈ ನಿರ್ಧಾರ ಅನೇಕರ ಬದುಕಿನ ಮೇಲೆ ಪ್ರಭಾವ ಬೀರಿ, ಅವರೆಲ್ಲರ ಬದುಕಿನ ಲಯ ತಪ್ಪಿಸಿತು.

ನಮ್ಮ ಬದುಕು ನಮ್ಮದು ಮಾತ್ರವೇ ಅಲ್ಲ. ಸಾಮಾಜಿಕ ಬದುಕಿನಲ್ಲಿ ನಮ್ಮ ಬದುಕಿನ ರೀತಿ ಸುತ್ತಮುತ್ತಲಿನ ಅನೇಕರ ಬದುಕಿನ ಗತಿಯನ್ನು ರೂಪಿಸುತ್ತಿರುತ್ತದೆ. ಹೀಗಾಗಿಯೇ ನಮ್ಮ ನಿರ್ಧಾರಗಳಿಗೆ ಒಂದು ಸಾಮಾಜಿಕ ಬದ್ಧತೆಯೂ ಇರಬೇಕಾಗುತ್ತದೆ. ನಮ್ಮ ನಡವಳಿಕೆಯಿಂದ ಇತರರ ಮೇಲಾಗುವ ಪರಿಣಾಮಗಳನ್ನೂ ಗಮನಿಸಬೇಕಾಗುತ್ತದೆ. ಆದ್ದರಿಂದಲೇ ಆತ್ಮಹತ್ಯೆ ಮಾಡಿಕೊಳ್ಳುವಾಗ ಅದರಿಂದ ಇತರರ ಬದುಕನ್ನು ಅಸಹನೀಯಗೊಳಿಸುವ ಅಪರಾಧವೂ ಸೇರಿಕೊಳ್ಳುತ್ತದೆ. ಅರ್ಥವಿಷ್ಟೇ- ನಮಗೊಂದು ಸಾಮಾಜಿಕ ಜವಾಬ್ದಾರಿಯಿದೆ. ಇಷ್ಟೆಲ್ಲ ಏಕೆ ಹೇಳಬೇಕಾಯಿತೆಂದರೆ ನಾಗರಿಕ ಪ್ರಜ್ಞೆಯಿಲ್ಲದ, ಸಾಮಾಜಿಕ ಕಾಳಜಿಯಿರದ ಕೆಲವರ ತೆವಲು ಅನೇಕರ ಬದುಕನ್ನು ಅಸಹನೀಯಗೊಳಿಸುತ್ತಿರುವ ಪರಿಯನ್ನು ಕಂಡು. ಅಂತಹ ಒಂದು ಸಂಗತಿಯ ಬಗ್ಗೆ ನಾನಿಲ್ಲಿ ರ್ಚಚಿಸುತ್ತೇನೆ.

ಬೆಂಗಳೂರು ಮಾತ್ರವಲ್ಲ, ನಾಡಿನ ಹಳ್ಳಿ ಪಟ್ಟಣಗಳನ್ನೆಲ್ಲ ಆವರಿಸಿ ಅಂದಗೆಡಿಸುತ್ತಿರುವ ಸಾಮಾಜಿಕ ಪಿಡುಗೆಂದರೆ ಪೋಸ್ಟರ್, ಫ್ಲೆಕ್ಸ್, ಜಾಹೀರಾತುಗಳ ಹಾವಳಿ. ಇದರ ಪರಿಣಾಮ ಎರಡು ರೀತಿ- ಮೊದಲನೆಯದು ಅದರಿಂದಾಗುವ ಅಪಘಾತಗಳು, ಜೀವಹಾನಿ. ಇದರ ಪರಿಣಾಮವನ್ನು ನಾವು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಅನೇಕ ಅಪಘಾತಗಳು ಸಂಭವಿಸುವುದು ಹಾದಿಬದಿಯ, ಕೆಲವೊಮ್ಮೆ ದಾರಿಮಧ್ಯೆಯೇ ರಾರಾಜಿಸುವ ಇಂತಹ ಪ್ರಚಾರ ಸಾಧನಗಳಿಂದ. ಬೇಡವೆಂದರೂ ಇವು ನಮ್ಮ ಗಮನ ಸೆಳೆಯುತ್ತವೆ. ಅನೇಕ ಸಂದರ್ಭಗಳಲ್ಲಿ ಇವು ಅತ್ಯಂತ ಆಕರ್ಷಕವೂ, ಮನೋಪ್ರಚೋದನಕಾರಿಯೂ ಆಗಿರುವುದರಿಂದ ಅದನ್ನು ಗಮನಿಸದೆ, ನಿರ್ಲಕ್ಷಿಸಿ ಮುಂದೆ ಹೋಗುವುದು ಸಾಧ್ಯವೇ ಇಲ್ಲ. ನಮ್ಮ ಪರಿಸರದಲ್ಲಿ ಕಿಂಚಿತ್ತು ಗಮನ ಅತ್ತಿತ್ತ ಹೋದರೂ ಅಪಘಾತ ತಪ್ಪಿದ್ದಲ್ಲ. ಅಂತಹುದರಲ್ಲಿ ಕಣ್ಣನ್ನು ರಾಚುವ ಹಾಗೆ ಎದುರಿಗೆ ಕಾಣಿಸುವ ಇವುಗಳಿಂದ ಬಿಡುಗಡೆ ಸಾಧ್ಯವೇ? ಅದರಲ್ಲೂ ಹದಿಹರೆಯದವರು ಇದಕ್ಕೆ ಬಲಿಯಾಗುವುದೇ ಹೆಚ್ಚು.

ಇದರ ಮತ್ತೊಂದು ಪರಿಣಾಮ- ಅಂದ ಹಾಳುಮಾಡುವುದು. ರಸ್ತೆ ಬದಿಯ ಜಾಗವಾಗಲಿ, ಮನೆ ಹಾಗೂ ಕಾಂಪೌಂಡ್ ಗೋಡೆಗಳಿರಲಿ, ಮಾರ್ಗಸೂಚಿ ಫಲಕಗಳಾಗಲಿ ಎಲ್ಲ ಕಡೆ ಲಜ್ಜೆಯಿಲ್ಲದೆ ಅಂಟಿಸುತ್ತಾರೆ. ರಿಂಗ್ ರೋಡಿನಲ್ಲಿ ದಾರಿ ತೋರಿಸುವ ದೊಡ್ಡ ಮಾರ್ಗಫಲಕ. ಅದರ ಮೇಲೆ ಯಾರದೋ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳುವ ಪೋಸ್ಟರ್ ಅಂಟಿಸಿದ್ದರು. ದಾರಿ ಕಾಣದಾಗಿದೆ! ಇದರಲ್ಲಿ ಬಹುಪಾಲು ರಾಜಕೀಯ ವಲಯಕ್ಕೆ ಸೇರಿದವರದೇ ಇರುತ್ತದೆ. ಕೆಲಮಟ್ಟಿಗೆ ಸಿನಿಮಾ ಮಂದಿ. ವಾಣಿಜ್ಯದವರ ಪಾಲೂ ಸಾಕಷ್ಟಿದೆ.

ಇವುಗಳ ಸ್ವರೂಪವನ್ನು ಗಮನಿಸಿ; ಬಹುಪಾಲು ಜಾಹೀರಾತುಗಳು ಅಧಿಕಾರದಲ್ಲಿರುವರನ್ನು ಮೆಚ್ಚಿಸಲು ಹಾಗೂ ಅಧಿಕಾರವನ್ನು ಪಡೆಯಲು ಒಂದು ನೆಪವಾಗಿ ರೂಪುಗೊಳ್ಳುತ್ತವೆ. ಹೀಗಾಗಿ ರಾಜಕೀಯ ವಲಯಕ್ಕೆ ಸೇರಿರುವವರದೇ ಇದರಲ್ಲಿ ಸಿಂಹಪಾಲು. ಹಬ್ಬಗಳಿಗೆ ಜನರಿಗೆ ಶುಭಾಶಯ ಹೇಳುವ ನೆಪದಲ್ಲಿ ತಮ್ಮ ಭಾವಚಿತ್ರಗಳನ್ನು ದೊಡ್ಡದಾಗಿ ಹಾಕಿಕೊಂಡು ಮೆರೆಯುವುದು, ಅಧಿಕಾರದಲ್ಲಿರುವವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುವ ನೆಪದಲ್ಲಿ ಅವರ ಭಾವಚಿತ್ರದ ಜತೆ ತಮ್ಮ ಭಾವಚಿತ್ರವನ್ನೂ ಪ್ರಧಾನವಾಗಿ ಕಾಣುವ ಹಾಗೆ ಪ್ರಕಟಿಸಿಕೊಳ್ಳುವುದು, ಹಿಂಬಾಲಕರ ಹೆಸರಿನಲ್ಲಿ ತಾವೇ ತಮ್ಮ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳಿಸಿಕೊಳ್ಳುವುದು, ಯಾವುದೋ ಸಮಾರಂಭ ಏರ್ಪಡಿಸಿ, ಆ ನೆಪದಲ್ಲಿ ತಮ್ಮ ಭಾವಚಿತ್ರಗಳನ್ನು ಹಾಕಿಕೊಂಡು ಮೂಲ ಉದ್ದೇಶವೇ ಮರೆಯಾಗುವಂತೆ ತಮ್ಮನ್ನು ವೈಭವಿಸಿಕೊಳ್ಳುವುದು ಇತ್ಯಾದಿ…. ಇನ್ನು ನೇರವಾಗಿ ರಾಜಕೀಯ ಪ್ರಚಾರದ ರೀತಿಯಂತೂ ಇಡೀ ಪರಿಸರವನ್ನು ವ್ಯಾಪಿಸಿಕೊಳ್ಳುತ್ತದೆ. ಎಲ್ಲ ಕಡೆ ಬಾವುಟಗಳ ಭರಾಟೆಯಿಂದ ಆರಂಭವಾಗಿ ಪೋಸ್ಟರ್ ಫ್ಲೆಕ್ಸ್​ಗಳು ಖಾಲಿ ಇರುವ ಜಾಗವನ್ನೆಲ್ಲ ಆಕ್ರಮಿಸಿಕೊಳ್ಳುತ್ತವೆ. ಅದು ಸಾಲದೆಂಬಂತೆ ಮರ, ಗಿಡ, ಮನುಷ್ಯನ ದೇಹವನ್ನೂ ಆವರಿಸಿಕೊಳ್ಳುತ್ತವೆ. ಚುನಾವಣೆ ಈಗ ಹತ್ತಿರ ಬರುತ್ತಿದೆ- ಇನ್ನು ಇವರ ಹಾವಳಿಗೆ ಇತಿಮಿತಿ ಇದೆಯೇ? ಇದು ಪರಿಸರ ಹಾಳುಮಾಡುವುದಷ್ಟೇ ಅಲ್ಲ, ಆರ್ಥಿಕವಾಗಿಯೂ ಇದರ ಪರಿಣಾಮವನ್ನು ನಾವು ಗಮನಿಸಬೇಕು.

ಇದಕ್ಕೆ ಅಂಕುಶ ಹಾಕುವವರು ಯಾರು? ಪುರಸಭೆಗೆ ಇದರ ಜವಾಬ್ದಾರಿ ಇರಬೇಕು. ಅಲ್ಲಿರುವವರು ಯಾರು? ಈ ಅನಾಹುತಕ್ಕೆ ಕಾರಣರಾಗಿರುವ ಮಹಾಶಯರೇ! ಇನ್ನು ಇದನ್ನು ನಿಯಂತ್ರಿಸಬೇಕಾಗಿರುವ ಅಧಿಕಾರಿ ವಲಯ. ಅಲ್ಲಿರುವ ಬಹುಪಾಲು ಮಂದಿ ಅರೆರಾಜಕಾರಣಿಗಳು. ರಾಜಕೀಯ ವ್ಯಕ್ತಿಗಳ ವ್ಯವಹಾರದಲ್ಲಿ ಪಾಲುದಾರರು. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ನಮ್ಮ ಅಧಿಕಾರಿ ವರ್ಗ ನಿವೃತ್ತಿ ಹತ್ತಿರವಾಗುತ್ತಿದ್ದಂತೆ ಯಾವುದಾದರೂ ರಾಜಕೀಯ ಪಕ್ಷ ಸೇರಿ ಮತ್ತೆ ಅಧಿಕಾರದಲ್ಲಿರುವ ಪ್ರಯತ್ನ ಮಾಡುತ್ತಿರುವಂತೆ ತೋರುತ್ತದೆ. ಇದೆಲ್ಲದರ ಪರಿಣಾಮ ಸಾಮಾನ್ಯ ಜನರ ಪರದಾಟ.

ಹಾಗಿದ್ದರೆ ಪರಿಹಾರವೇ ಇಲ್ಲವೇ? ಇದೆ. ಸಾಮಾನ್ಯ ಜನ ಇದರ ವಿರುದ್ಧ ಸಿಡಿದು ನಿಲ್ಲಬೇಕು. ಸಾಮಾಜಿಕ ಸಂಘ ಸಂಸ್ಥೆಗಳು ಸಮರ ಸಾರಬೇಕು. ಸಂವೇದನಾಶೀಲ ಮನಸ್ಸುಗಳು ಒಂದು ಚಳವಳಿಯ ರೀತಿಯಲ್ಲಿ ಇದರಲ್ಲಿ ಪಾಲ್ಗೊಳ್ಳಬೇಕು. ಅಧಿಕಾರದಲ್ಲಿರುವವರು ಏನು ಮಾಡಿದರೂ ಜನ ತಾಳಿಕೊಳ್ಳುತ್ತಾರೆ ಎಂಬ ಮನೋಭಾವವನ್ನು ಬದಲಾಯಿಸಬೇಕು. ಯಾರ ಭಾವಚಿತ್ರ ಇಂಥ ಜಾಹೀರಾತುಗಳಲ್ಲಿ ಪ್ರಕಟವಾಗುತ್ತದೋ ಅಂಥವರಿಗೆ ಸಾಮಾಜಿಕ ಬಹಿಷ್ಕಾರ ಹಾಕಬೇಕು. ನಮ್ಮ ಜನನಾಯಕರೆನ್ನಿಸಿಕೊಂಡವರಿಗೆ ಕಿಂಚಿತ್ ಮಾನ ಮರ್ಯಾದೆ ಇದ್ದರೆ ತಮ್ಮ ಹಿಂಬಾಲಕರನ್ನು ಇಂತಹ ಅಕೃತ್ಯಗಳಿಂದ ತಡೆಯಬೇಕು. ಪರಿಸರವನ್ನು ಅಂದಗೆಡಿಸದಂತೆ ಸೂಚಿಸಬೇಕು. ಆದರೆ ಅಂತಹ ವಿವೇಕಿ ರಾಜಕಾರಣಿಗಳನ್ನು ಎಲ್ಲಿ ಹುಡುಕೋಣ?

ನಮ್ಮ ಸಂದರ್ಭದಲ್ಲಿ ಜಾಹೀರಾತು ಬಹುಮುಖ್ಯ ಸಂವಹನ ಸಾಧನ. ಇದನ್ನು ಒಪ್ಪೋಣ. ಇಂತಹ ಜಾಹೀರಾತುಗಳಿಗೆ ನಿರ್ದಿಷ್ಟ ಸ್ಥಳ ನಿಗದಿ ಮಾಡಬೇಕು. ಅದಕ್ಕೆ ಶುಲ್ಕ ವಿಧಿಸಿ ಅಲ್ಲಿ ಯಾರು ಬೇಕಾದರೂ ತಮ್ಮ ತುತ್ತೂರಿ ಊದಲು ಅವಕಾಶ ಕಲ್ಪಿಸಬೇಕು. ಇದನ್ನೆಲ್ಲ ಯಾರಿಗೆ ಹೇಳುವುದು? ಅಧಿಕಾರದಲ್ಲಿರುವವರಿಗೆ ಇದೆಲ್ಲ ತಿಳಿಯದೆಂದೇನಿಲ್ಲ. ನಮ್ಮ ಅಧಿಕಾರಿಗಳು ನಿಸ್ಸಂದೇಹವಾಗಿ ನಿಶಿತಮತಿಗಳು. ತಿಳಿಯದವರಿಗೆ ತಿಳಿಹೇಳಿ ತಿದ್ದಬಹುದು. ಆದರೆ ಎಲ್ಲ ಗೊತ್ತಿದ್ದೂ ತಪ್ಪು ಮಾಡುವವರನ್ನು ತಿದ್ದುವುದು ಹೇಗೆ? ನಮ್ಮ ಹಳ್ಳಿಯವರಲ್ಲಿ ಒಂದು ಮಾತಿದೆ- ‘ನಿದ್ದೆ ಮಾಡುತ್ತಿರುವವರನ್ನು ಏಳಿಸಬಹುದು, ಆದರೆ ನಿದ್ದೆ ಮಾಡುತ್ತಿರುವಂತೆ ನಟಿಸುತ್ತಿರುವವರನ್ನು ಏಳಿಸುವುದು ಹೇಗೆ?’.

ನಮ್ಮ ಕಾಲದ ಮತ್ತೊಂದು ದುರಂತವೆಂದರೆ ಮಾಡುವ ಕೆಲಸಕ್ಕಿಂತ ಪ್ರಚಾರದ ಅಬ್ಬರವೇ ಜಾಸ್ತಿಯಾಗಿರುವುದು. ಪ್ರಚಾರದಿಂದಲೇ ಜನರನ್ನು ಮರುಳು ಮಾಡಬಹುದು ಎಂದು ನಮ್ಮ ‘ನಾಯಕ’ರೆನ್ನಿಸಿಕೊಂಡವರು ಭಾವಿಸಿದಂತಿದೆ. ಇದು ಸ್ವಲ್ಪ ಮಟ್ಟಿಗೆ ನಿಜ ಎಂದು ಅನ್ನಿಸುವ ವಾತಾವರಣವಿದೆ. ಇದು ಜಾಹೀರಾತು ಯುಗ. ನಾವು ಚಿಕ್ಕವರಿದ್ದಾಗ ಈ ಬಗೆ ಇರಲಿಲ್ಲ. ಇಂಗ್ಲಿಷಿನಲ್ಲಿ ‘ಗ್ರೇಪ್ ವೈನ್ ಕಲ್ಚರ್’ ಎಂಬುದು ಪ್ರಸಿದ್ಧ ಹೇಳಿಕೆ. ಅದರರ್ಥ ಬಾಯಿಂದ ಬಾಯಿಗೆ ಹಬ್ಬುವುದು. ಹೀಗೆ ಜನಪದರ ಮಾತುಗಳ, ಅಭಿಪ್ರಾಯದ ಮೂಲಕ ಒಂದು ಸಂಗತಿ ಜನಮನದಲ್ಲಿ ದಾಖಲಾಗುತ್ತದೆ. ಯಾವ ವ್ಯಕ್ತಿಯ ಬಗ್ಗೆಯಾಗಲಿ, ಸಂಸ್ಥೆಯ ಬಗ್ಗೆಯಾಗಲಿ ಜನರು ತಮಗೆ ತಾವೇ ಒಂದು ಅಭಿಪ್ರಾಯ ರೂಢಿಸಿಕೊಂಡು ಅದನ್ನು ಸಹಜೀವಿಗಳಿಗೆ ಹೇಳುತ್ತ ಹೋಗುತ್ತಾರೆ.

ಇದೇ ಸರಿಯಾದ ಪ್ರಚಾರ. ಇದರಲ್ಲಿ ಸತ್ಯಾಂಶವಿರುತ್ತದೆ. ಅನೇಕ ಸಂದರ್ಭಗಳಲ್ಲಿ ನಾವು ನಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುವುದು ಈ ತೆರನ ಸದ್ದುಗದ್ದಲವಿಲ್ಲದ ಪ್ರಚಾರದಿಂದಾಗಿ. ಆದರೆ ಇಂದು ಜಾಹೀರಾತುಲೋಕ ಜನರ ಮನಸ್ಸನ್ನು ಬೇರೆಯದೇ ಬಗೆಯಲ್ಲಿ ಪ್ರಭಾವಿಸುತ್ತಿದೆ. ಒಂದು ಸುಳ್ಳನ್ನು ಹತ್ತು ಬಾರಿ ಹೇಳಿದರೆ ಅದು ‘ನಿಜ’ ಎಂಬ ಭ್ರಮೆ ಮೂಡುತ್ತದೆ. ಇಂತಹ ‘ಭ್ರಮಾಲೋಕ’ವನ್ನು ಕೆಲ ಜಾಹೀರಾತುಗಳು ಸೃಷ್ಟಿಸುತ್ತಿವೆ. ‘ತಂತ್ರಜ್ಞಾನ’ದ ಬಳಕೆ ಇಂತಹ ಭ್ರಮಾಲೋಕ ಸೃಷ್ಟಿಸಲು ನೆರವಾಗಿದೆ. ಯಾವುದೋ ಪಾನೀಯ ಕುಡಿದರೆ ಶ್ರೇಷ್ಠ ಕ್ರೀಡಾಪಟುವಾಗಬಹುದು ಎಂಬುದನ್ನು ಮಕ್ಕಳ ಮನಸ್ಸಿನಲ್ಲಿ ಮಾತ್ರವಲ್ಲ ದೊಡ್ಡವರ ಮನದಲ್ಲೂ ಮೂಡಿಸುತ್ತಿರುವ ಅಪಾಯವನ್ನು ನಾವು ಗಮನಿಸಬೇಕು. ಶ್ರೇಷ್ಠ ಕ್ರೀಡಾಪಟುವಾಗಲು ನಿರಂತರ ಸಾಧನೆ ಅತ್ಯಗತ್ಯ ಎಂಬುದನ್ನು ಪರೋಕ್ಷವಾಗಿ ಇಂತಹ ಜಾಹೀರಾತು ಅಲ್ಲಗಳೆಯುತ್ತಿರುತ್ತದೆ. ವಾಸ್ತವದಿಂದ ದೂರ ಮಾಡುವ, ಭ್ರಮಾಲೋಕಕ್ಕೆ ಕರೆದೊಯ್ಯುವ ಇಂತಹ ಜಾಹೀರಾತುಗಳು ಸಾಮಾಜಿಕವಾಗಿಯೂ ಅಪಾಯಕಾರಿ.

ಹೀಗೆ ಅನೇಕ ನೆಲೆಗಳಲ್ಲಿ ಈ ಜಾಹೀರಾತು ಸಾಧನಗಳು ನಮ್ಮ ಬದುಕನ್ನು ಪ್ರಭಾವಿಸಿವೆ. ಬಿಡುಗಡೆಯ ಮಾರ್ಗ ಅಸ್ಪಷ್ಟವಾಗಿದೆ. ಪರಿಹರಿಸಬೇಕಾದವರೇ ಇದರಲ್ಲಿ ಪಾಲುದಾರರು. ದನಿಯೆತ್ತಬೇಕಾದ ನಮ್ಮ ಸೆಲೆಬ್ರಿಟಿಗಳಿಗೆ ಇದು ಆದಾಯಸಾಧನ. ತಮ್ಮ ಶ್ರಮಕ್ಕಿಂತ ಹೆಚ್ಚು ಹಣವನ್ನು ಅವರು ಇದರಿಂದ ಪಡೆಯುತ್ತಿದ್ದಾರೆ. ಹೀಗಾಗಿ ಅವರೂ ಮಾರಾಟದ ಸರಕಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ಜನರ ವಿವೇಕವೇ ಬದಲಾವಣೆಗೆ ಕಾರಣವಾಗಬಲ್ಲದು. ಅಂತಹ ಜನವಿವೇಕ ಜಾಗೃತವಾಗಲಿ ಎಂದು ಆಶಿಸೋಣ.

(ಲೇಖಕರು ಖ್ಯಾತ ವಿಮರ್ಶಕರು)

Leave a Reply

Your email address will not be published. Required fields are marked *