ಹುತ್ತವ ಬಡಿದೊಡೆ ಹಾವು ಸಾಯಬಲ್ಲುದೇ?

ಮತ್ತೆ ಅದೇ ಕತೆ! ಇದು ಇಂದು ನಿನ್ನೆಯದಲ್ಲ; ನಮ್ಮ ನಾಡು ಸ್ವತಂತ್ರವಾದಾಗಿನಿಂದ ಈ ಭೂತದಿಂದ ಪಾರಾಗಲು ಪ್ರಯತ್ನಿಸುತ್ತಿದ್ದೇವೆ. ಆದರೆ ಪ್ರಯತ್ನಿಸಿದಷ್ಟೂ ಅದರೊಳಗೇ ಸಿಲುಕುತ್ತಿದ್ದೇವೆ. ಪಂಕದಲ್ಲಿ ಬಿದ್ದ ಬಡಪಶುವಿನಂತೆ. ಕಾಲ ಬಡಿವುದಲ್ಲದೆ ಬೇರೆ ಗತಿಯುಂಟೇ? ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡು; ತೇಲಲೀಯದು ಗುಂಡು, ಮುಳುಗಲೀಯದು ಬೆಂಡು, ಈ ಸಮಸ್ಯೆಯಿಂದ ಪಾರಾಗುವುದೆಂತು? ಬಸವಣ್ಣನಿಗಾದರೋ ‘ಈ ಸಂಸಾರ ಸಾಗರದಿಂದ ರಕ್ಷಿಸು’ ಎಂದು ಮೊರೆಯಿಡಲು ಕೂಡಲಸಂಗನಿದ್ದ! ನಮಗೆ? ರಕ್ಷಿಸಬೇಕಾದವರೆ ಭಕ್ಷಕರಾಗಿ ರೂಪಾಂತರಗೊಂಡ ಸ್ಥಿತಿಯಲ್ಲಿ ನಾವಿದ್ದೇವೆ. ನಮ್ಮ ಪ್ರಮುಖ ಕವಿ ಚಂದ್ರಶೇಖರ ಕಂಬಾರರು ತಮ್ಮ ‘ಹೇಳತೇನ ಕೇಳ’ದಲ್ಲಿ ಚಿತ್ರಿಸುವಂತೆ ಕಾಯಬೇಕಾದ ಊರಗೌಡನ ರೂಪದಲ್ಲಿ ರಾಕ್ಷಸ ಬಂದಿದ್ದಾನೆ. ನಮ್ಮನ್ನು ರಕ್ಷಿಸುತ್ತಿದ್ದೇನೆಂದೇ ನಮ್ಮ ನೆಲೆಗಳನ್ನು ನಾಶಮಾಡುತ್ತಿದ್ದಾನೆ. ಈತ ನಿಜಗೌಡನೆಂದೇ ನಂಬಿರುವ ನಾವು ಇಂತಹ ಬದಲಾವಣೆಗಳಿಂದ ಪುಳಕಗೊಳ್ಳುತ್ತಿದ್ದೇವೆ. ಪರಿಣಾಮ, ವಸಾಹತೋತ್ತರ ಪ್ರಮುಖ ಚಿಂತಕ ಫ್ಯುಕೋ ಹೇಳುವಂತೆ ಕಪ್ಪು ಮುಖಕ್ಕೆ ಬಿಳಿಯ ಮುಖವಾಡ ಹಾಕಿಕೊಂಡು ಇತ್ತ ಕಪ್ಪು ಜನರಿಂದಲೂ ದೂರವಾಗಿ, ಅತ್ತ ಬಿಳಿಯ ಜನರಿಂದಲೂ ತಿರಸ್ಕೃತರಾಗಿ ಅತಂತ್ರ ಸ್ಥಿತಿ ತಲುಪುತ್ತಿದ್ದೇವೆ.

ನಾನು ಮಾತನಾಡುತ್ತಿರುವುದು ನಮ್ಮ ಶಿಕ್ಷಣ ಪದ್ಧತಿಯ ಬಗ್ಗೆಯೆಂಬುದು ನಿಮಗೆ ಹೊಳೆದಿರಬೇಕು. ಮೆಕಾಲೆಪ್ರಣೀತ ಪದ್ಧತಿಯಿಂದ ಪಾರಾಗುವುದು ಇಂದಿಗೂ ನಮಗೆ ಸಾಧ್ಯವಾಗಿಲ್ಲ. ಸ್ವಾತಂತ್ರ್ಯಪೂರ್ವ ಕಾಲದಲ್ಲಿಯೇ ಗಾಂಧೀಜಿ ಹೀಗೆ ಹೇಳಿದ್ದರು- ‘ಪರಭಾಷೆಯ ಮೂಲಕದ ಶಿಕ್ಷಣ ನಮ್ಮ ಮಕ್ಕಳ ಬುದ್ಧಿಶಕ್ತಿಯನ್ನು ಬೆಂಡುಮಾಡಿದೆ. ಅವರ ನರಗಳನ್ನು ದುರ್ಬಲಗೊಳಿಸಿದೆ. ಅವರನ್ನು ಬಾಯಿಪಾಠ ಮಾಡುವ ಗಿಳಿಗಳನ್ನಾಗಿ ಮಾಡಿದೆ; ಪ್ರತಿಭಾನ್ವಿತವಾದ ಸೃಷ್ಟಿಕಾರ್ಯಕ್ಕೆ ಅನರ್ಹರನ್ನಾಗಿ ಮಾಡಿದೆ. ನಾನಿಂದು ಸರ್ವಾಧಿಕಾರಿಯಾಗಿದ್ದಿದ್ದರೆ ಈ ಕೂಡಲೆ ಪರಭಾಷೆಯ ಮೂಲಕದ ವಿದ್ಯಾಭ್ಯಾಸವನ್ನು ನಿಲ್ಲಿಸುತ್ತಿದ್ದೆ. ಈ ಮಾರ್ಪಾಡಿನಿಂದ ಅಲ್ಪಸ್ವಲ್ಪ ಗೊಂದಲವುಂಟಾಗಬಹುದು. ಆದರೆ ಪರಭಾಷೆಯ ವ್ಯಾಮೋಹದಿಂದ ಕ್ರಮೇಣ ಸರ್ವನಾಶವಾಗುವುದಕ್ಕಿಂತ ಕೆಲಕಾಲ ಈ ಗೊಂದಲದ ಪರಿಸ್ಥಿತಿಯನ್ನು ಎದುರಿಸುವುದೇ ಮೇಲು. ಈ ದೇಶ ಸ್ವತಂತ್ರವಾದ ಕೂಡಲೆ ಶಿಕ್ಷಣಮಾಧ್ಯಮದ ಪ್ರಶ್ನೆ ಪ್ರಶ್ನೆಯಾಗುಳಿಯುವುದಿಲ್ಲ’.

ಗಾಂಧೀಜಿ ಹೀಗೆ ಹೇಳಿ 7 ದಶಕಗಳೇ ಕಳೆದವು. ಈ ಪ್ರಶ್ನೆ ಈಗ ಮತ್ತಷ್ಟು ಬೃಹದಾಕಾರವಾಗಿ ಬೆಳೆದು ನಿಂತಿದೆ. ಶಿಕ್ಷಣಕ್ರಮದಲ್ಲಿ ಪ್ರಾದೇಶಿಕ ಭಾಷೆಗಳೇ ಮಾಧ್ಯಮವಾಗಬೇಕೆಂದು ದೇಶ ವಿದೇಶದ ಎಲ್ಲ ಶಿಕ್ಷಣತಜ್ಞರು, ಮನಃಶಾಸ್ತ್ರಜ್ಞರು, ರಾಷ್ಟ್ರನಿರ್ವಪಕರು, ಚಿಂತಕರು ಎಲ್ಲರೂ ಹೇಳಿದ್ದಾರೆ. ಇಂಗ್ಲಿಷಿನ ಕೃತಕ ಪ್ರಾಮುಖ್ಯವನ್ನು ಏಕಕಂಠದಿಂದ ಖಂಡಿಸಿದ್ದಾರೆ. ಆದರೆ ಇಂಗ್ಲಿಷಿನ ಸಂಕೋಲೆಯಿಂದ ನಾವಿನ್ನೂ ಬಿಡುಗಡೆ ಪಡೆಯಲು ಸಾಧ್ಯವಾಗಿಲ್ಲ. ಬದಲಾಗಿ ಸಂಕೋಲೆ ಮತ್ತಷ್ಟು ಬಿಗಿಯಾಗುತ್ತಿದೆ. ಯಾಕೆ ಹೀಗೆ?

ಇಂಗ್ಲಿಷ್ ಇಂಡಿಯಾಕ್ಕೆ ಬಂದದ್ದು ಮುಖ್ಯವಾಗಿ ರಾಜಕೀಯ ಕಾರಣಗಳಿಂದಾಗಿ; ಮೇಲುವರ್ಗದವರು ಇಂಗ್ಲಿಷ್ ಕಲಿತದ್ದೂ ಇದೇ ಕಾರಣದಿಂದ, ಜತೆಗೆ ಅದರಿಂದ ಸಿಗುವ ಆರ್ಥಿಕ ಪ್ರಯೋಜನಕ್ಕಾಗಿ. ಈಗಲೂ ನಮ್ಮ ಜನರು ಇಂಗ್ಲಿಷ್ ಕಲಿಯಬಯಸುತ್ತಿರುವುದು ಇದೇ ಉದ್ದೇಶದಿಂದಲೇ! ಇಂಗ್ಲಿಷ್ ಕಲಿಯುವುದರಿಂದ ಹಣ ಸಂಪಾದನೆ ಮಾಡಬಹುದು ಎಂಬ ಹಂಬಲ, ಅದರೊಟ್ಟಿಗೆ ಅದರಿಂದ ಸಿಗುವ ಹುಸಿಪ್ರತಿಷ್ಠೆಯೂ ಕಾರಣವಿರಬಹುದು. ಆದರೆ ಶಿಕ್ಷಣದ ಉದ್ದೇಶ ಹಣಸಂಪಾದನೆ ಮಾತ್ರವೇ? ಹಣಸಂಪಾದನೆ ಮಾಡಲು ಶಿಕ್ಷಣವೇ ಬೇಕೆ? ಶಿಕ್ಷಣ ಪಡೆದು ನಮ್ಮ ಮಕ್ಕಳು ಹಣಸಂಪಾದನೆ ಮಾಡುವ ಯಂತ್ರಗಳಾಗಬೇಕೆ? ಇಂತಹ ಪ್ರಶ್ನೆಗಳನ್ನು ನಾವಿಂದು ಜರೂರು ಕೇಳಿಕೊಳ್ಳಬೇಕಾಗಿದೆ.

ಈ ಹಿನ್ನೆಲೆಯಲ್ಲಿಯೇ ಕುವೆಂಪು ಹೇಳುತ್ತಾರೆ- ‘ವಿದ್ಯೆಯ ಉದ್ದೇಶವೇನು? ನಮ್ಮ ಮಕ್ಕಳು ಏಕೆ ಓದಬೇಕು? ಎರಡು ಕಾರಣಗಳಿಗಾಗಿ- ಅವುಗಳಲ್ಲಿ ಒಂದು ಲೌಕಿಕೋದ್ದೇಶ. ಮತ್ತೊಂದು ಆಧ್ಯಾತ್ಮಿಕ ಉದ್ದೇಶ. ನಮ್ಮ ಹೊಟ್ಟೆ ಬಟ್ಟೆಗಳಿಗೆ ಸಂಪಾದನೆ ಮಾಡಿಕೊಂಡು ಜೀವನವನ್ನು ಸುಖಮಯವನ್ನಾಗಿ ಮಾಡಿಕೊಳ್ಳಬೇಕೆಂಬ ಉದ್ದೇಶವೇ ಬಹುಜನರ ಆಶಯ. ಇದು ನ್ಯಾಯವೇ. ಹೊಟ್ಟೆಗೆ ಇಲ್ಲದವನು ಆತ್ಮಜ್ಞಾನವನ್ನೇನು ಸಾಧಿಸಿಯಾನು? ಆದ್ದರಿಂದ ಹೊಟ್ಟೆಬಟ್ಟೆಗೆ ವಿದ್ಯೆ ಬೇಕು. ಆದರೆ ಅದಷ್ಟೇ ಸಾಲದು. ವಿದ್ಯೆ ನಮ್ಮ ಭಾವಶಕ್ತಿಯನ್ನು ವಿಕಾಸಗೊಳಿಸಬೇಕು. ಭಾವಶಕ್ತಿಯ ವಿಕಾಸದಿಂದ ನಮ್ಮ ಆತ್ಮಚೈತನ್ಯ ಬಲ ಪಡೆಯುತ್ತದೆ’. ಲೋಹಿಯಾ ಹೇಳಿದ್ದೂ ಇದನ್ನೇ! ಸಮಾಜ ಜಡವಾಗಿಬಿಟ್ಟಾಗ ಕ್ರೌರ್ಯ, ಹಿಂಸೆ ತಾಂಡವವಾಡುತ್ತವೆ. ಮನುಷ್ಯನ ಮನಸ್ಸನ್ನು ಸೃಜನಶೀಲಗೊಳಿಸಿದಾಗ ಸಮಾಜದಲ್ಲಿ ಚಲನೆಯುಂಟಾಗುತ್ತದೆ. ಸಮಾಜ ಚಲನಶೀಲವಾದಾಗ ಪಲ್ಲಟ ಸಂಭವಿಸುತ್ತದೆ. ವಿದ್ಯೆ ಹೀಗೆ ನಮ್ಮನ್ನು ಸೃಜನಶೀಲವಾಗಿಸಬೇಕು. ಆದ್ದರಿಂದಲೇ ಕುವೆಂಪು ಹೇಳುತ್ತಾರೆ- ‘ಇಂಗಿಹೋಗುತಿದೆ ಇಂಗ್ಲಿಷಿನ ಮರುಭೂಮಿಯಲಿ | ನಿನ್ನ ಮಕ್ಕಳ ಶಕ್ತಿ-ಬುದ್ಧಿ-ಪ್ರತಿಭಾ | ರಾಷ್ಟ್ರನಾಯಕ ಮನದಿ ವಿವೇಕರೂಪದಿ ಮೂಡಿ | ಓ ರಸಮಯೀ ಸರಸತಿಯೆ, ಪೊರೆ ಬಾ | ಕಲ್ಲಕುಂಡದಿ ನೆಟ್ಟ ಅಶ್ವತ್ಥಸಸಿಯಂತೆ | ಕಿಮುಳ್ಚಿ ಗುಜ್ಜಾಗುತಿದೆ ಮೊಳೆವ ಚೈತನ್ಯ | ಭೂಮಿಯಲಿ ಬೇರೂರಿ, ಬಾನೆಡೆಗೆ ತಲೆಯೆತ್ತಿ | ನಿಲುವವರಿಗೇಕೀ ದಾಸ್ಯದೈನ್ಯ | ಗಾಂಧಿಯಿಂದಿಂಗ್ಲಿಷರ ದಾಸ್ಯದಿಂ ಪಾರಾದೆ | ಅವನಕೊಂದಿಂಗ್ಲಿಷಿಗೆ ದಾಸಿಯಾದೆ | ಓ ತಾಯಿ ಭಾರತಿಯೆ, ಚೀಣೀಯರನೆ ಮೀರಿ | ಹಿಂಡುತಿದೆ ಕಂದರನು ಇಂಗ್ಲಿಷಿನ ಮಾರಿ’.

ಕುವೆಂಪು ಸ್ಪಷ್ಟ ಮಾತುಗಳಲ್ಲಿ- ‘ನಾನು ಇಂಗ್ಲಿಷ್ ಭಾಷೆಯ ದ್ವೇಷಿಯಲ್ಲ, ನಮಗೆ ಇಂಗ್ಲಿಷ್ ಬೇಕೇ ಬೇಕು. ಆದರೆ ಎಷ್ಟು ಬೇಕು? ಖಚಿತವಾಗಿ ಹೇಳುವುದಾದರೆ ಇನ್ನುಮುಂದೆ ಇಂಗ್ಲಿಷ್ ಹಲವರು ಕಲಿಯುವ ಭಾಷೆಯಲ್ಲ, ಕೆಲವರು ಕಲಿಯುವ ಭಾಷೆ. ಶಿಕ್ಷಣತಜ್ಞರ, ಚಿಂತಕರ ಅಭಿಪ್ರಾಯಗಳನ್ನು ಮಾನ್ಯ ಮಾಡದೆ, ನಮ್ಮ ದೇಶದ ಪ್ರಚ್ಛನ್ನ ಶತ್ರುಗಳಾದ ಸ್ವಾರ್ಥಸಾಧಕ ಪಟ್ಟಭದ್ರ ಹಿತಾಸಕ್ತಿ ಪ್ರತಿಗಾಮಿ ಶಕ್ತಿಗಳು, ಮಕ್ಕಳಿಗೆ ಹಾಲುಣಿಸುವ ನೆಪದಿಂದ ಅವುಗಳನ್ನು ಕೊಲ್ಲುತ್ತಿದ್ದ ಪೂತನಿಯಂತೆ, ಬಲಾತ್ಕಾರದ ಇಂಗ್ಲಿಷ್ ಮಾಧ್ಯಮದಿಂದ ನಮ್ಮ ಎಳೆಯ ಮಕ್ಕಳ ಜೀವಹರಣ ಮಾಡುತ್ತಿವೆ’ ಎಂದು ಕಟುವಾಗಿಯೇ ಆಕ್ರೋಶದ ದನಿಯಲ್ಲಿ ಹೇಳುತ್ತಾರೆ.

ಇತ್ತೀಚೆಗೆ ನಮ್ಮ ರಾಜ್ಯ ಸರ್ಕಾರ ನಾಡಿನ ಒಂದು ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಜಾರಿಗೊಳಿಸಲು ತೀರ್ಮಾನಿಸಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದನ್ನು ನಾಡಿನ ಹಿರಿಯ ಸಾಹಿತಿಗಳು, ಶಿಕ್ಷಣತಜ್ಞರು ವಿರೋಧಿಸಿದ್ದಾರೆ. ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಹೋರಾಟ ಮಾಡುವುದಾಗಿಯೂ ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಾಹಿತ್ಯ ಪರಿಷತ್ತು ಘೊಷಿಸಿದೆ. ಸರ್ಕಾರ ಒಂದು ಕಡೆ ಕನ್ನಡ ಮಾಧ್ಯಮದ ಶಾಲೆಗಳನ್ನು ವಿದ್ಯಾರ್ಥಿಗಳಿಲ್ಲವೆಂದು ಮುಚ್ಚುತ್ತಿದೆ. ಮತ್ತೊಂದು ಕಡೆ ನಮ್ಮ ಮಕ್ಕಳು ಖಾಸಗಿ ಶಾಲೆಗಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಲು ಹೋಗುವ ಬದಲು ಸರ್ಕಾರಿ ಶಾಲೆಗಳಲ್ಲಿಯೇ ಕಲಿಯಲಿ ಎಂದು ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸುತ್ತಿದೆ. ಅಂದರೆ ಖಾಸಗಿ ಶಾಲೆಗಳ ಜತೆ ಪೈಪೋಟಿಗಿಳಿದಿದೆ. ಇದು ಹೀಗೇ ಮುಂದುವರಿದರೆ ಕ್ರಮೇಣ ನಾಡಿನಾದ್ಯಂತ ಇಂಗ್ಲಿಷ್ ಮಾಧ್ಯಮದ ಶಾಲೆಗಳೇ ಉಳಿದು ಕನ್ನಡ ಮಾಧ್ಯಮ ಶಾಲೆಗಳು ಸಂಪೂರ್ಣ ಮಾಯವಾಗಿಬಿಡಬಹುದು. ವಾಸ್ತವವಾಗಿ ಇದು ತಿರುವುಮುರುವು ಆಗಬೇಕಿತ್ತು. ಖಾಸಗಿ ಶಾಲೆಗಳಲ್ಲಿಯೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ದೊರೆಯುವಂತೆ ಮಾಡುವ ಕ್ರಮ ಕೈಗೊಳ್ಳುವ ಬದಲು ತಾನೇ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಆರಂಭಿಸುತ್ತಿರುವುದು ವಿರೋಧಾಭಾಸದ ಸಂಗತಿಯಾಗಿ ಕಾಣಿಸುತ್ತಿದೆ.

ಇಲ್ಲಿ ಒಂದು ಸಂಗತಿ ಸ್ಪಷ್ಟ- ಇಂಗ್ಲಿಷ್ ಮಾಧ್ಯಮವನ್ನು ವಿರೋಧಿಸುತ್ತಿರುವವರು ಇಂಗ್ಲಿಷಿನ ವಿರೋಧಿಗಳಲ್ಲ. ಅದನ್ನು ಒಂದು ಭಾಷೆಯಾಗಿ ಕಲಿಸಲು ಅವರ ವಿರೋಧವಿಲ್ಲ. ಆದರೆ ಇಂಗ್ಲಿಷ್ ಮಾಧ್ಯಮ ಅಗತ್ಯವಿಲ್ಲ ಎಂಬುದು ಅವರ ವಾದ.

ಇಲ್ಲಿಯೇ ಮತ್ತೊಂದು ರೀತಿಯ ವಾದವಿರುವುದನ್ನೂ ನಾವು ಗಮನಿಸಬೇಕು- ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿರುವ ಬಹುಪಾಲು ಮಕ್ಕಳು ಮೇಲುವರ್ಗ ಹಾಗೂ ಮಧ್ಯಮವರ್ಗಕ್ಕೆ ಸೇರಿದವರು. ಇತ್ತೀಚೆಗೆ ಸಾಮಾನ್ಯ ಕುಟುಂಬದವರೂ ಹೊಟ್ಟೆ ಕಟ್ಟಿ ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕೆಂಬ ಹಂಬಲದಿಂದ ಕೈಲಾಗದಿದ್ದರೂ ಹೆಚ್ಚು ಹಣ ತೆತ್ತು ಖಾಸಗಿ ಶಾಲೆಗಳಿಗೆ ಕಳಿಸುತ್ತಿದ್ದಾರೆ. ಅಲ್ಲಿ ಓದಿದ ಮಕ್ಕಳು ವಿದ್ಯಾವಂತರಾಗಿ ಉತ್ತಮ ಉದ್ಯೋಗ ಪಡೆದು ಸುಖಜೀವನ ನಡೆಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಸರ್ಕಾರಿ ಶಾಲೆಗಳಿಗೆ ಹೋಗುವ ಮಕ್ಕಳು ಕಡುಬಡವರು ಹಾಗೂ ಕೆಳವರ್ಗದವರು. ಇವರು ಮೊದಲೇ ಉತ್ತಮ ಶಿಕ್ಷಣದಿಂದ ವಂಚಿತರು. ಈಗ ಕನ್ನಡ ಉಳಿಸುವ ಹೊಣೆಯನ್ನೂ ಇವರ ಹೆಗಲಿಗೆ ಹೊರಿಸಲಾಗುತ್ತಿದೆ. ಉಳ್ಳವರು ಖಾಸಗಿ ಶಾಲೆಗಳಲ್ಲಿ ಯಾವ ಅಡ್ಡಿ ಆತಂಕವಿಲ್ಲದೆ ಇಂಗ್ಲಿಷಿನಲ್ಲಿ ಕಲಿಯಬಹುದು; ಕನ್ನಡಕ್ಕೂ ಅವರಿಗೂ ಯಾವ ಸಂಬಂಧವೂ ಇಲ್ಲ. ಕಡುಬಡವ ಮಕ್ಕಳು ಮಾತ್ರ ಕನ್ನಡ ಉಳಿಸುವ ಹೊಣೆ ಹೊತ್ತು ಇಂಗ್ಲಿಷ್ ಕಲಿಕೆಯಿಂದ ವಂಚಿತರಾಗಬೇಕೆ? ಇದು ಸಾಮಾಜಿಕ ನ್ಯಾಯವೇ?

ನಿಜವಾದ ಸಮಸ್ಯೆ ಇರುವುದೇ ಇಲ್ಲಿ. ಹುತ್ತವನ್ನು ಬಡಿದರೆ ಹಾವು ಸಾಯಬಲ್ಲುದೇ? ಇಡೀ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವವರು ಖಾಸಗಿ ವಲಯದವರು. ಅವರಿಗೆ ಶಿಕ್ಷಣ ಒಂದು ಉದ್ಯಮವೇ ಹೊರತು ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ಭವಿಷ್ಯದ ಬಗೆಗಾಗಲೀ, ಕುವೆಂಪು ಹೇಳುವ ಶಿಕ್ಷಣದ ನಿಜಾಶಯದ ಬಗೆಗಾಗಲೀ ಕಾಳಜಿಯಿಲ್ಲ. ಅವರ ಏಕೈಕ ಗುರಿ ಹಣಸಂಪಾದನೆ. ಒಂದು ಕಾಲಕ್ಕೆ ಶಿಕ್ಷಣ ಹಾಗೂ ಆರೋಗ್ಯ ವಲಯಗಳು ಸೇವಾಕ್ಷೇತ್ರಗಳಾಗಿದ್ದವು. ಆಧುನಿಕ ಸಂದರ್ಭದಲ್ಲಿ ಇವೆರಡೂ ‘ಉದ್ಯಮ’ಗಳಾಗಿ ರೂಪಾಂತರವಾಗಿ ಲಾಭಬಡುಕತನವೇ ಗುರಿಯಾಗಿಬಿಟ್ಟಿತು. ಇದಕ್ಕೆ ಉದ್ಯಮಪತಿಗಳ ಜತೆ ನಮ್ಮ ಜನಪ್ರತಿನಿಧಿಗಳೂ ಕೈಜೋಡಿಸಿದ್ದಾರೆ. ಧರ್ಮಪೀಠಾಧಿಪತಿಗಳೂ ಇವರ ಜತೆಗಿದ್ದಾರೆ. ಶಿಕ್ಷಣ ಹಾಗೂ ಆರೋಗ್ಯ ವಲಯದ ಒಡೆತನ ಯಾರ ಬಳಿ ಇದೆ ಎಂಬುದನ್ನು ವಿಶ್ಲೇಷಿಸಿದರೆ ಸಮಸ್ಯೆಯ ಸ್ವರೂಪ ತಿಳಿಯುತ್ತದೆ. ಸರ್ಕಾರವನ್ನು ನಿಯಂತ್ರಿಸುತ್ತಿರುವ ಈ ‘ಗಣ್ಯರು’ ಮೌನವಾಗಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ನಮ್ಮ ಮಕ್ಕಳಿಗೆ ಕುವೆಂಪು ಹೇಳುವ ಹಾಗೆ ಹಾಲಿನ ಹೆಸರಿನಲ್ಲಿ ಹಾಲಾಹಲ ಉಣಿಸುತ್ತಿದ್ದೇವೆಂದು ಶಿಕ್ಷಣದ ಬಗ್ಗೆ ನಿಜಕಾಳಜಿ ಇರುವವರೆಲ್ಲರೂ ಬೊಬ್ಬೆ ಹೊಡೆಯುತ್ತಿದ್ದರೂ ಇಂತಹವರ ಕೂಗು ಅರಣ್ಯರೋದನ ಮಾತ್ರವಾಗುತ್ತದೆ.

ಖಾಸಗಿ ಶಾಲೆಗಳ ಬಗ್ಗೆ ಜಾಣಮೌನ ವಹಿಸಿ ಸರ್ಕಾರಿ ಶಾಲೆಗಳ ಬಗ್ಗೆ ಉಗ್ರಹೋರಾಟ ನಡೆಸುತ್ತೇವೆ ಎಂಬ ನಮ್ಮ ಹಿರಿಯ ಸಾಹಿತಿಗಳ ನಿಲುವು ಹೇಗೆ ಪ್ರಶ್ನಾರ್ಹವೋ, ಹಾಗೆಯೇ ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯ ಮವಿದೆ, ಸರ್ಕಾರಿ ಶಾಲೆಗಳಲ್ಲಿ ಯಾಕಿರಬಾರದು ಎಂಬ ನಿಲುವೂ ಪ್ರಶ್ನಾರ್ಹ. ಇವರಿಬ್ಬರಿಗೂ ಶತ್ರು ಯಾರೆಂಬುದು ಗೊತ್ತು. ಆದರೆ ನಿಜಶತ್ರುವನ್ನು ಎದುರಿಸದೆ ಹೊರವಲಯದಲ್ಲಿ ನಿಂತೇ ಇವರು ತಮ್ಮ ಪ್ರತಿಭಟನೆಯನ್ನು ರೂಪಿಸುತ್ತಿರುವಂತೆ ತೋರುತ್ತಿದೆ.

ಹಾಗಿದ್ದರೆ ಆಗಬೇಕಾದುದೇನು? ನಮ್ಮ ಎಲ್ಲ ಮಕ್ಕಳಿಗೂ ತಾರತಮ್ಯವಿಲ್ಲದೆ ಸಮಾನ ರೀತಿಯ ಶಿಕ್ಷಣ ಸಾಧ್ಯವಾಗಬೇಕು. ಉಳ್ಳವರ ಮಕ್ಕಳಿಗೊಂದು ರೀತಿಯ ಶಾಲೆ, ಬಡಮಕ್ಕಳಿಗೆ ಮತ್ತೊಂದು ರೀತಿಯ ಶಾಲೆ, ಈ ಅಸಮಾನ ವ್ಯವಸ್ಥೆಯ ವಿರುದ್ಧ ಹೋರಾಟ ರೂಪಿಸಬೇಕು. ಇದು ಸಾಧ್ಯವೇ ಎಂಬ ಅನುಮಾನ ಬೇಡ. ಇಚ್ಛಾಶಕ್ತಿ ಇದ್ದರೆ ಎಲ್ಲವೂ ಸಾಧ್ಯ. ಒಂದು ಕಾಲಕ್ಕೆ ಶಿಕ್ಷಣ ಕೆಲವರ ಸ್ವತ್ತಾಗಿತ್ತು. ಈಗ ಎಲ್ಲರೂ ಶಿಕ್ಷಣ ಪಡೆಯಬಹುದು ಎಂಬ ವಾತಾವರಣ ಸೃಷ್ಟಿಯಾಗಿದೆ. ಮುಂದೆ ‘ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣ’ ಸಾಧ್ಯವಾಗುವತ್ತ ಹೆಜ್ಜೆ ಇಡುವುದು ಇಂದಿನ ಅಗತ್ಯ.

ಈ ಹೋರಾಟ ಕೆಲವರದು ಮಾತ್ರವಲ್ಲ, ಮಕ್ಕಳ ಭವಿಷ್ಯ ಎಲ್ಲರಿಗೂ ಸೇರಿದ್ದು. ಸಮೂಹಸನ್ನಿಗೆ ಒಳಗಾಗಿ ತಕ್ಷಣದ ಲಾಭದ ಬಗ್ಗೆ ಮಾತ್ರ ಯೋಚಿಸದೆ ದೀರ್ಘಾವಧಿ ಪರಿಣಾಮದ ಬಗ್ಗೆ ಜನಸಮುದಾಯ ಚಿಂತಿಸುವಂತಾಗಬೇಕು. ಎಲ್ಲ ವರ್ಗದ ಜನರೂ ಇದರಲ್ಲಿ ಪಾಲ್ಗೊಳ್ಳುವಂತಾಗಬೇಕು. ನಮ್ಮ ಕಾಲದ ದುರಂತವೆಂದರೆ ಗರಿಷ್ಠ ಮಟ್ಟದ ‘ಸ್ವಹಿತಾಸಕ್ತಿ’, ಸಾಮಾಜಿಕ ಸಮಸ್ಯೆಗಳ ಬಗ್ಗೆ ತೀವ್ರ ‘ನಿರಾಸಕ್ತಿ’.

ಆರೋಗ್ಯ ನಮ್ಮ ಮಕ್ಕಳ ದೇಹವನ್ನು ದೃಢಗೊಳಿಸಿದರೆ, ಶಿಕ್ಷಣ ಅವರ ವ್ಯಕ್ತಿತ್ವವನ್ನು ರೂಪಿಸುತ್ತದೆ. ಇವೆರಡರ ಬಗ್ಗೆಯೂ ನಮ್ಮದು ದಿವ್ಯನಿರ್ಲಕ್ಷ್ಯ. ಜನಸಮುದಾಯ ಸಿಡಿದೆದ್ದರೆ ಪ್ರಭುತ್ವ ಸ್ಪಂದಿಸಲೇಬೇಕು. ಇತಿಹಾಸದಲ್ಲಿ ಇದಕ್ಕೆ ಸಾಕಷ್ಟು ನಿದರ್ಶನಗಳಿವೆ. ‘ಸಮಾನ ಶಿಕ್ಷಣ ಚಳವಳಿ’ ಎಲ್ಲ ನೆಲೆಯ ಜನಸಮುದಾಯವನ್ನೂ ಒಳಗೊಳ್ಳುವಂತೆ ಪ್ರಜ್ಞಾವಂತರು ಈ ಚಳವಳಿಯ ಸ್ವರೂಪವನ್ನು ರೂಪಿಸುವುದು ಇಂದಿನ ಅಗತ್ಯ. ಚಳವಳಿಯೂ ಕೆಲವರ ಸ್ವತ್ತಾಗಬಾರದು.

(ಲೇಖಕರು ಖ್ಯಾತ ವಿಮರ್ಶಕರು)

One Reply to “ಹುತ್ತವ ಬಡಿದೊಡೆ ಹಾವು ಸಾಯಬಲ್ಲುದೇ?”

  1. ಸರ್ ಈ ಕನಸನ್ನು ನನಸಾಗಿಸುವಲ್ಲಿ, ಜನಸಾಮಾನ್ಯರ ಪಾತ್ರ ವೇನು?.ಒಬ್ಬ.ಸಾಮಾನ್ಯ ಮನುಷ್ಯ. ಈಯಜ್ಞದಲ್ಲಿ ವಹಿಸಬೆಕಾದ ಪಾತ್ರ ವೇನು?. ಈ ಬಗ್ಗೆ ನೀವೂ ಹಾಗೂ ಸಮಾನ ಮನಸ್ಕರೂ, ಸಾಮಾನ್ಯ‌ನಿಗೆ ಮನ ಮುಟ್ಟುವಂತೆ ಬಿಡಿಸಿ ಸರಳ ರಿತಿಯಲ್ಲಿ,ಎಲ್ಲರೂ ಎಚ್ಚೆತ್ತು ಕೊಳ್ಳುವವರೆಗೆ ನಿಲ್ಲಿಸದೆ ಪ್ರತಿದಿನವೂ ಬರೆಯಬೇಕೆಂದು ಕೋರುತ್ತೇನೆ.
    ಇಂತೀ ಭವ್ಯ ಭಾರತದ ಕನಸಿಗ
    ಜೈ ಹಿಂದ್
    ವಂದೇಮಾತರಂ

Comments are closed.