ಬುಡಕಟ್ಟುಗಳ ನಾಡು ನಾಗಾಲ್ಯಾಂಡ್

| ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ

ಕೇಂದ್ರ ಸಾಹಿತ್ಯ ಅಕಾದೆಮಿ ಸುಮಾರು ಆರು ದಶಕಗಳ ತನ್ನ ದೀರ್ಘ ಇತಿಹಾಸದಲ್ಲಿ ಮೊದಲ ಬಾರಿಗೆ ನಾಗಾಲ್ಯಾಂಡ್​ನಲ್ಲಿ ಅಖಿಲ ಭಾರತ ಬರಹಗಾರರ ಸಮಾವೇಶ ಏರ್ಪಡಿಸಿತ್ತು. ನಾಗಾಲ್ಯಾಂಡ್ ವಿಶ್ವವಿದ್ಯಾಲಯದ ಸಹಯೋಗದೊಡನೆ ನಡೆದ ಈ ಸಮಾವೇಶದಲ್ಲಿ ಭಾಗವಹಿಸಲು ಅಕಾದೆಮಿ ನನ್ನನ್ನು ಆಹ್ವಾನಿಸಿದಾಗ ಸಂತೋಷದಿಂದಲೇ ಒಪ್ಪಿಕೊಂಡೆ. ಅದಕ್ಕೆ ಪ್ರಮುಖವಾಗಿ ಎರಡು ಕಾರಣಗಳು. ಮೊದಲನೆಯದು ನಾಗಾಲ್ಯಾಂಡ್ ನೋಡಬಹುದೆನ್ನುವ ಉತ್ಸಾಹ. ಈಶಾನ್ಯ ಭಾರತದ ಕೆಲ ರಾಜ್ಯಗಳನ್ನು ನಾನು ನೋಡಿದ್ದೆನಾದರೂ ನಾಗಾಲ್ಯಾಂಡ್ ನೋಡಿರಲಿಲ್ಲ. ನಾವು ಬೇರೆ ಬೇರೆ ದೇಶಗಳಿಗೆ ಹೋಗುತ್ತೇವೆ. ಆ ದೇಶಗಳ ಬಗ್ಗೆ ಮಾತನಾಡುತ್ತೇವೆ. ಆದರೆ ನಮ್ಮ ದೇಶವನ್ನೇ ನಾವು ಸರಿಯಾಗಿ ನೋಡಿರುವುದಿಲ್ಲ. ಕರ್ನಾಟಕದಲ್ಲೇ ಹುಟ್ಟಿ ಬೆಳೆದ ನನ್ನ ಅನೇಕ ಬಂಧುಮಿತ್ರರು ಕರ್ನಾಟಕದ ಅನೇಕ ಚೆಲುವಾದ ತಾಣಗಳನ್ನು ಇದುವರೆಗೆ ನೋಡಿಲ್ಲ. ನಾನು ನಾಗಾಲ್ಯಾಂಡ್​ಗೆ ಹೋಗುತ್ತಿದ್ದೇನೆ ಎಂದಾಗ ಗೆಳೆಯರೊಬ್ಬರು ‘ವೀಸಾ ಮಾಡಿಸಿದ್ದೀರಾ?’ ಎಂದು ಕೇಳಿದರು. ಅವರ ಪ್ರಕಾರ ನಾಗಾಲ್ಯಾಂಡ್ ಪರದೇಶ. ಅದು ಭಾರತದ ಒಂದು ರಾಜ್ಯ ಎಂಬುದು ಅವರ ಮನಸ್ಸಿನಲ್ಲಿಲ್ಲ. ಇದು ಅವರ ಅಜ್ಞಾನವಲ್ಲ, ನಮ್ಮಲ್ಲಿನ ಅನೇಕರ ಮನಃಪರಿಸ್ಥಿತಿ. ‘ದೇಶ ಸುತ್ತು ಕೋಶ ಓದು’ ಎಂಬ ನಾಣ್ಣುಡಿ ಉಲ್ಲೇಖ ಮಾಡಲಷ್ಟೆ! ಭಾರತೀಯರಲ್ಲಿ ಬಹುಪಾಲು ಮಂದಿ ಪ್ರವಾಸಪ್ರಿಯರಲ್ಲ. ಪ್ರವಾಸ ಮಾಡಿದರೂ ಅದು ಪುಣ್ಯಸಂಪಾದನೆಗಾಗಿ ಹೋಗುವ ‘ತೀರ್ಥಯಾತ್ರೆ’ ಮಾತ್ರವಾಗಿರುತ್ತದೆ.

ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮತ್ತೊಂದು ಕಾರಣವೆಂದರೆ ನಾಡಿನ ಬೇರೆ ಬೇರೆ ಭಾಷೆಯ ಸಹಲೇಖಕರನ್ನು ಭೇಟಿಯಾಗುವ ಅವಕಾಶ. ಭಾರತೀಯ ಸಂದರ್ಭದಲ್ಲಿ ಪ್ರಾದೇಶಿಕ ಭಾಷೆಗಳ ಲೇಖಕರ ಪರಸ್ಪರ ಒಡನಾಟಕ್ಕೆ ಅವಕಾಶಗಳು ತೀರಾ ವಿರಳ. ಇತ್ತೀಚೆಗೆ ನಡೆಯುತ್ತಿರುವ ಕೆಲವು ಲಿಟರರಿ ಫೆಸ್ಟ್​ಗಳಲ್ಲಿ ಬೇರೆ ಬೇರೆ ಭಾಷೆಯ ಲೇಖಕರು ಒಟ್ಟಿಗೇ ಸೇರಿ ಸಂವಾದ ನಡೆಸುವ ಅವಕಾಶ ಎಂಬ ಆಶಯ ಘೊಷಿತ ಸಂಗತಿಯಾದರೂ, ಅಲ್ಲಿ ಇಂಗ್ಲಿಷ್​ಗೇ ಮನ್ನಣೆ. ಕಾರ್ಪೇರೇಟ್ ಕಲ್ಚರ್ ಎಲ್ಲವನ್ನೂ ನಿಯಂತ್ರಿಸುತ್ತಿರುತ್ತದೆ. ದೇಸಿಯ ಚೆಲುವು ಅಲ್ಲಿ ಅಸಹಜ ಪ್ರದರ್ಶನದ ಅಣಕ. ಪ್ರಾದೇಶಿಕ ಭಾಷೆಯ ಪ್ರತಿಭಾವಂತರೂ ಅಲ್ಲಿ ಕೀಳರಿಮೆಯಿಂದ ನರಳುತ್ತಾರೆ. ಇಂಗ್ಲಿಷ್ ಬಲ್ಲ ತೀರಾ ಸಾಮಾನ್ಯ ಲೇಖಕರೂ ವಿಜೃಂಭಿಸುತ್ತಾರೆ. ನನ್ನ ಗೆಳೆಯನೊಬ್ಬ ಹೇಳುತ್ತಿದ್ದ: ‘ಆಧುನಿಕ ಬದುಕಿನಲ್ಲಿ ಪ್ರತಿಭೆಯಿದ್ದರೆ ಸಾಲದು, ಅದನ್ನು ಮಾರ್ಕೆಟಿಂಗ್ ಮಾಡುವ ಕಲೆಯೂ ಗೊತ್ತಿರಬೇಕು’. ಇಂತಹ ಕಡೆ ಪ್ರತಿಭೆಗಿಂತ ಮಾರ್ಕೆಟಿಂಗ್ ಕಲೆಯೇ ಪ್ರಧಾನವಾಗಿರುವಂತೆ ತೋರುತ್ತದೆ. ಹಾಗೆ ನೋಡಿದರೆ ನಮ್ಮ ಕಾಲದಲ್ಲಿ ಮಾರ್ಕೆಟಿಂಗ್ ಕಲೆಯೇ ಆಳುತ್ತಿರುವುದು. ಕೇಂದ್ರ ಸಾಹಿತ್ಯ ಅಕಾದೆಮಿ ಭಾರತೀಯ ಭಾಷೆಗಳ ಲೇಖಕರ ಒಡನಾಟಕ್ಕೆ ವೇದಿಕೆ ಕಲ್ಪಿಸುವ ಪ್ರಾತಿನಿಧಿಕ ಸಾಹಿತ್ಯಕ ಸಂಸ್ಥೆ. ಬಹುಶಃ ನಾಡಿನ ಏಕೈಕ ಸಂಸ್ಥೆಯೆಂದರೂ ತಪ್ಪಲ್ಲ. ಅಕಾದೆಮಿಯ ರಚನೆಯ ಸ್ವರೂಪದಲ್ಲಿಯೇ ಈ ಅಂಶ ಅಡಕವಾಗಿದೆ. ಅಲ್ಲಿಯ ಕಾರ್ಯಕಾರಿ ಸಮಿತಿಯಲ್ಲಿ ಸರ್ಕಾರದ ಮಾನ್ಯತೆ ಪಡೆದ ಎಲ್ಲ ಭಾಷೆಗಳ ಪ್ರತಿನಿಧಿಗಳಿರುತ್ತಾರೆ. ಪ್ರಾದೇಶಿಕ ಭಾಷಾ ಸಾಹಿತ್ಯ ಸಂಸ್ಕೃತಿಯ ಸಂವರ್ಧನೆಯೇ ಅಕಾದೆಮಿಯ ಆದ್ಯತೆ. ಹೀಗಾಗಿ ನಾಡಿನುದ್ದಗಲಕ್ಕೂ ಅಕಾದೆಮಿ ಲೇಖಕರ ಸಮಾವೇಶ ಏರ್ಪಡಿಸಿ ಪರಸ್ಪರ ಸಂವಾದಕ್ಕೆ ಅವಕಾಶ ಕಲ್ಪಿಸುತ್ತದೆ. ಅನುವಾದಗಳ ಮೂಲಕ ಸಾಹಿತ್ಯ ಚರ್ಚೆಗೆ ವೇದಿಕೆ ನಿರ್ಮಿಸುತ್ತದೆ. ಇಲ್ಲಿ ಅಬ್ಬರದ ಪ್ರಚಾರವಿರುವುದಿಲ್ಲ, ಆದರೆ ಅರ್ಥಪೂರ್ಣ ಸಂವಾದವಿರುತ್ತದೆ. ನಿಕಟ ಒಡನಾಟ ಸಾಧ್ಯವಾಗುವ ವಾತಾವರಣವಿರುತ್ತದೆ.

ಸಮಾವೇಶ ಏರ್ಪಡಿಸಿದ್ದುದು ಕೊಹಿಮಾದಲ್ಲಿ. ಅದು ನಾಗಾಲ್ಯಾಂಡ್​ನ ರಾಜಧಾನಿಯಾದರೂ ಅಲ್ಲಿಗೆ ವಿಮಾನದ ಸೌಲಭ್ಯವಿಲ್ಲ. ಅಲ್ಲಿಂದ ಸುಮಾರು ಎಪ್ಪತ್ತು ಕಿಲೋಮೀಟರ್ ದೂರದ ದಿಮಾಪುರದಲ್ಲಿ ವಿಮಾನ ನಿಲ್ದಾಣವಿದೆ. ಬೆಂಗಳೂರಿನಿಂದ ಕೊಲ್ಕತಾಗೆ ಹೋಗಿ ಅಲ್ಲಿ ವಿಮಾನ ಬದಲಾಯಿಸಿ ನಾನು ದಿಮಾಪುರ ತಲುಪಿದಾಗ ಮಟಮಟ ಮಧ್ಯಾಹ್ನ. ಆದರೆ ಬಿಸಿಲಿನ ತಾಪವಿರಲಿಲ್ಲ. ಅದೊಂದು ಪುಟ್ಟ ನಿಲ್ದಾಣ. ವಿಮಾನ ಇಳಿದು ಕಾಲ್ನಡಿಗೆಯಲ್ಲಿಯೇ ನಿಲ್ದಾಣದೊಳಹೊಕ್ಕು ಈಚೆ ಬಂದಾಗ ಅಕಾದೆಮಿಯ ಸಿಬ್ಬಂದಿ ನನಗಾಗಿ ಕಾದಿದ್ದರು. ಅದೇ ವಿಮಾನದಲ್ಲಿ ಬಂದಿದ್ದ ತೆಲುಗಿನ ಚೈತನ್ಯ ಪಿಂಗಳಿ ನನ್ನ ಜೊತೆಗೂಡಿದರು. ಉತ್ತರದ ಆ ತುದಿಯಲ್ಲಿ ದಕ್ಷಿಣದವರೊಬ್ಬರು ಜೊತೆಯಾದದ್ದು ಅಕಾರಣವಾಗಿ ಸಂತೋಷವುಂಟುಮಾಡಿತು. ಕೊಹಿಮಾ ತಲುಪುವುದು ತಡವಾಗುತ್ತದೆ, ರಸ್ತೆ ಬಹಳ ಖರಾಬಾಗಿದೆ, ಎಪ್ಪತ್ತು ಕಿಲೋಮೀಟರ್ ಕ್ರಮಿಸಲು ಕಡಿಮೆಯೆಂದರೆ ಮೂರು ಗಂಟೆ ಬೇಕಾಗುತ್ತದೆ, ಹೀಗಾಗಿ ದಾರಿಯಲ್ಲೇ ಊಟ ಮಾಡುವುದು ಒಳ್ಳೆಯದು ಎಂಬುದು ಡ್ರೆ›ೖವರ್ ಸಲಹೆ. ದಿಮಾಪುರದಿಂದ ಸ್ವಲ್ಪ ದೂರದಲ್ಲೇ ನದೀ ತೀರದ ಹೋಟೆಲೊಂದರ ಬಳಿ ಕಾರು ನಿಲ್ಲಿಸಿದ. ನಾಗಾಲ್ಯಾಂಡ್​ನಲ್ಲಿ ಅನ್ನ ಪ್ರಧಾನ ಆಹಾರ. ಎಲ್ಲ ಕಡೆಗಳಲ್ಲಿಯಂತೆ ಇಲ್ಲಿಯೂ ಮಾಂಸಾಹಾರಿಗಳಿಗೆ ವೈವಿಧ್ಯಮಯ ತಿನಿಸು ಸಿಗುತ್ತದೆ. ಅದರಲ್ಲಿಯೂ ಹಂದಿ ಮತ್ತು ಮೀನಿನ ಆಹಾರ ಹೆಚ್ಚು. ಎಳೆಯ ಬಿದಿರಿನಿಂದ(ಕಳಲೆ) ಮಾಡಿದ ಆಹಾರ ಇಲ್ಲಿ ಪ್ರಖ್ಯಾತ ಎಂಬುದು ನನಗೆ ಗೊತ್ತಿತ್ತು. ಚೈತನ್ಯ ಸಹ ಸಸ್ಯಾಹಾರಿಯಾದುದರಿಂದ, ಜೊತೆಗೆ

ಪ್ರಯೋಗಶೀಲ ಮನಃಸ್ಥಿತಿ ಆಗ ನಮಗಿಲ್ಲದಿದ್ದುದರಿಂದ ಪರಿಚಿತ ಫ್ರೈಡ್ ರೈಸ್ ತೆಗೆದುಕೊಂಡೆವು. ಜೊತೆಗೆ ಮಸಾಲಾ ಟೀ. ಇಲ್ಲಿ ಶುಂಠಿಯನ್ನು ಎಲ್ಲ ಖಾದ್ಯಗಳಿಗೂ ವಿಶೇಷವಾಗಿ ಬಳಸುತ್ತಾರೆ.

ನಾಗಾಲ್ಯಾಂಡ್ ಬೆಟ್ಟ ಕಣಿವೆಗಳ ನಾಡು. ದಾರಿಯುದ್ದಕ್ಕೂ ಒಂದು ಕಡೆ ಹಸಿರಿನಿಂದಾವೃತವಾದ ಬೆಟ್ಟಶಿಖರಗಳ ಔನ್ನತ್ಯದ ನಿಲವು. ಮತ್ತೊಂದು ಕಡೆ ಪಾತಾಳದಾಳದ ಕಣಿವೆಯ ವಿಸ್ತಾರ ಚೆಲುವು. ಆದರೆ ರಸ್ತೆಯ ಧೂಳು ಇವೆಲ್ಲವನ್ನೂ ನುಂಗಿಹಾಕಿತ್ತು. ಕೊಹಿಮಾ-ದಿಮಾಪುರದ ನಡುವೆ ನಾಲ್ಕುಪಥಗಳ ಹೊಸ ರಸ್ತೆಯಾಗುತ್ತಿದೆ. ಹೀಗಾಗಿ ಉದ್ದಕ್ಕೂ ಬೆಟ್ಟಗಳನ್ನು ಆಧುನಿಕ ಯಂತ್ರಗಳು ಕೊರೆಯುತ್ತಿದ್ದವು. ಪ್ರಕೃತಿಯ ಜೊತೆಗೆ ನಮಗೂ ಧೂಳಿನ ಸ್ನಾನ. ಪ್ರಕೃತಿ ಮಲಿನವಾಗಿದ್ದಳು. ಅವಳ ಚೆಲುವು ಮಾಸಿತ್ತು. ಹಳ್ಳ ಗುಂಡಿಗಳ ರಸ್ತೆ ವಾಹನ ಸಂಚಾರವನ್ನು ನರಕವನ್ನಾಗಿಸಿತ್ತು. ಚೈತನ್ಯ ಹಿಡಿಶಾಪ ಹಾಕುತ್ತಾ ಕೆರಳಿದ್ದರು. ಅವರು ಹವ್ಯಾಸಿ ಪತ್ರಕರ್ತೆ, ಅಂಕಣಗಾರ್ತಿ, ಕವಿ. ನಾಗಾಲ್ಯಾಂಡ್ ಬಗ್ಗೆ ಸಾಕಷ್ಟು ಮಾಹಿತಿ ಅವರಲ್ಲಿತ್ತು. ಅದೆಲ್ಲವನ್ನೂ ನನ್ನೊಡನೆ ಹಂಚಿಕೊಳ್ಳುತ್ತಾ, ಪ್ರಗತಿಯ ಹೆಸರಿನಲ್ಲಿ ಆಗುತ್ತಿರುವ ಅನಾಹುತಗಳ ಬಗ್ಗೆ ಸಿಡಿಮಿಡಿಗೊಳ್ಳುತ್ತಿದ್ದರು. ನಿಸ್ಸಂದೇಹವಾಗಿ ರಸ್ತೆಗಳು ಅಭಿವೃದ್ಧಿಗೆ ರಹದಾರಿ. ಆದರೆ ಈ ರಹದಾರಿ ಯಾವ ಬಗೆಯ ಪ್ರಗತಿಯನ್ನು ತರಬಹುದು? ನಮ್ಮ ಪ್ರಗತಿಯ ಪರಿಕಲ್ಪನೆಯ ಸ್ವರೂಪ ಯಾರಿಗೆ ಲಾಭದಾಯಕ? ಭೋಗಸಂಸ್ಕೃತಿ ನಮ್ಮ ಹಳ್ಳಿಗಳನ್ನೂ ಆವರಿಸುತ್ತಿರುವ ಕ್ರಮ ಆತಂಕದ ಸಂಗತಿ. ಕುವೆಂಪು ಅವರ ಕವಿತೆಯ ಸಾಲುಗಳು ನೆನಪಾದವು. ‘ಅತಿಭೋಗವದು ರೋಗ, ಕೊಲ್ಲುವುದು ಬೇಗ/ ಪುರಗಳಿಂದೈತಂದಿರುವುದು ಹಳ್ಳಿಗೀಗ/ಸಾಮಾನ್ಯ ಜೀವನವು ಪರಮ ಸುಧೆಯಂತೆ/ಮಿತಿಮೀರಿದತಿಭೋಗ ಘೊರ ವಿಷದಂತೆ/ದೇಶಗಳು ಹಾಳಾದುದತಿ ಭೋಗದಿಂದ/ನೀತಿ ನಾಶವು ಕೀರ್ತಿ ನಾಶವದರಿಂದ/’.

ಹಾದಿಪಯಣ ಮಾತ್ರವಲ್ಲ, ಕೊಹಿಮಾ ನಗರದ ರಸ್ತೆಗಳೂ ದುಸ್ಥಿತಿಯಲ್ಲಿವೆ. ಅಭಿವೃದ್ಧಿಯ ಪಥದಲ್ಲಿ ನಾಗಾಲ್ಯಾಂಡ್ ಸಾಕಷ್ಟು ಹಿಂದುಳಿದಿರುವಂತೆ ಮೇಲ್ನೋಟಕ್ಕೆ ಗೋಚರವಾಗುತ್ತಿತ್ತು. ಆದರೆ ಬ್ರಿಟಿಷರ ದಟ್ಟ ಪ್ರಭಾವದಿಂದ ಆಧುನಿಕತೆ ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಅಲ್ಲಿಯ ಆಡಳಿತ ಭಾಷೆ ಇಂಗ್ಲಿಷ್. ಕ್ರಿಶ್ಚಿಯನ್ನರ ಸಂಖ್ಯೆ ಅಧಿಕವಾಗಿದೆ. ನಾವು ಇಳಿದುಕೊಂಡಿದ್ದ ಹೋಟೆಲ್ ಸಹ ಆಧುನಿಕವಾಗಿತ್ತು. ಅದು ರಾಜ್ಯದ ಪ್ರಭಾವಿ ರಾಜಕಾರಣಿಯ ಒಡೆತನದ್ದು ಎಂಬ ಮಾಹಿತಿ ನನಗೆ ಆಶ್ಚರ್ಯವುಂಟುಮಾಡಲಿಲ್ಲ. ನಮ್ಮ ರಾಜ್ಯದಲ್ಲಿಯೂ ಸೇವಾ ಕ್ಷೇತ್ರಗಳಾಗಿದ್ದ ಶಿಕ್ಷಣ, ಆರೋಗ್ಯ, ಆತಿಥ್ಯ ಮೊದಲಾದ ಕ್ಷೇತ್ರಗಳನ್ನೆಲ್ಲಾ ಉದ್ಯಮವಾಗಿ ರೂಪಾಂತರಿಸಿ ಯಾವ ಶ್ರಮವೂ ಇಲ್ಲದೆ ಕೋಟಿಗಟ್ಟಲೆ ಲಾಭ ಮಾಡಿಕೊಳ್ಳುತ್ತಿರುವವರು ಯಾರೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ! ಭಾರತದಲ್ಲಿ ಹಣ, ಅಧಿಕಾರ, ಉದ್ಯಮ, ರಾಜಕೀಯ, ಧರ್ಮ- ಇವೆಲ್ಲವುಗಳ ನಡುವೆ ಒಳಒಪ್ಪಂದವಿರುವುದು ರಹಸ್ಯವೇನಲ್ಲ. ಮತ್ತೆ ನನಗೆ ಕುವೆಂಪು ಅವರ ‘ಧನ್ವಂತರಿಯ ಚಿಕಿತ್ಸೆ’ ಕತೆ ನೆನಪಿಗೆ ಬಂದಿತು. ಅಲ್ಲಿ ರೈತನೊಬ್ಬ ನರಳುತ್ತಿರುತ್ತಾನೆ. ಯಾವ ಔಷಧದಿಂದಲೂ ಅವನ ನರಳುವಿಕೆ ನಿಲ್ಲುವುದಿಲ್ಲ. ಏಕೆಂದರೆ ಆತನ ಎದೆಯ ಮೇಲೆ ಸಮಸ್ತ ಚಕ್ರಾಧಿಪತ್ಯವೂ ಮಹಾಪರ್ವತಾಕಾರವಾಗಿ ನಿಂತಿರುತ್ತದೆ. ದೇವಾಲಯಗಳು, ವಿದ್ಯಾಲಯಗಳು, ಕರ್ಮಸೌಧಗಳು, ಕಾರ್ಖಾನೆಗಳು, ಪ್ರಮೋದವನಗಳು, ರಾಜಭವನಗಳು- ಎಲ್ಲವೂ ರೈತನ ಎದೆಯ ಮೇಲೆ ತಮ್ಮ ಭಾರವನ್ನೆಲ್ಲಾ ಹಾಕಿ ಸಂಸ್ಕೃತಿ ಮತ್ತು ನಾಗರಿಕತೆ ಎಂಬ ಕೀರ್ತಿಯಿಂದ ಮೆರೆಯುತ್ತಿರುತ್ತವೆ. ವಿಶ್ವಾಮಿತ್ರ ಆ ಭಾರವನ್ನೆಲ್ಲ ಉರುಳಿಸಿದಾಗ ಆ ರೈತ ನರಳುವಿಕೆಯಿಂದ ಪಾರಾಗುತ್ತಾನೆ. ನಮ್ಮ ಸಂದರ್ಭದಲ್ಲಿ ಅಂತಹ ವಿಶ್ವಾಮಿತ್ರನನ್ನು ಎಲ್ಲಿ ತರೋಣ?

ಸಮಾವೇಶ ನಗರದ ಹೊರವಲಯದ ಗುಡ್ಡ ಕಣಿವೆಗಳ ನಡುವಿನ ಸುಂದರ ಪ್ರಶಾಂತ ಪರಿಸರದ ನಾಗಾಲ್ಯಾಂಡ್ ವಿಶ್ವವಿದ್ಯಾಲಯದ ಆವರಣದಲ್ಲಿತ್ತು. ಸಮಾವೇಶದ ಬಗ್ಗೆ ವಿವಿ ಪೊ›.ಚಾನ್ಸಲರ್ ರಮೇಶ್ ಗುಪ್ತ ಅವರೇ ಸ್ವತಃ ಆಸಕ್ತಿ ಹೊಂದಿದ್ದರಿಂದ ಡಿ. ಕೊಯ್ಲಿ ಅವರ ನೇತೃತ್ವದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಿದ್ದರು. ಅದೊಂದು ರೀತಿ ಕ್ಲೋಸ್ಡ್ ಡೋರ್ ಸೆಷನ್ ಇದ್ದಂತಿತ್ತು. ಸುಮಾರು ನಲವತ್ತು-ಐವತ್ತು ಸಾಹಿತ್ಯಾಸಕ್ತರು ಗಂಭೀರವಾಗಿ ಸಾಹಿತ್ಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ನಮ್ಮ ಸಂದರ್ಭದಲ್ಲಿ ಸಾಹಿತ್ಯದ ಪ್ರಸ್ತುತತೆ ಯಾವ ಬಗೆಯದೆಂಬುದರ ಬಗ್ಗೆ, ಆಧುನಿಕ ಸಂದರ್ಭದಲ್ಲಿ ಸಾಹಿತ್ಯ ಪಡೆದುಕೊಳ್ಳುತ್ತಿರುವ ಸ್ವರೂಪ ಹಾಗೂ ಜಾಗತೀಕರಣದ ಹಿನ್ನೆಲೆಯಲ್ಲಿ ದೇಸಿ ಸಾಹಿತ್ಯದ ಮಹತ್ವವನ್ನು ಸ್ಥಾಪಿಸುವ ಸಾಧ್ಯತೆಗಳ ಬಗ್ಗೆ ಗಂಭೀರ ಚರ್ಚೆಗಳಾದವು. ಅಸ್ಸಾಮಿ, ಆವೊ, ಬೋಡೋ, ಡೋಗ್ರಿ, ತಮಿಳು, ತೆಲುಗು, ಉರ್ದು, ಬೆಂಗಾಲಿ, ಗುಜರಾತಿ, ಹಿಂದಿ, ಕೊಂಕಣಿ, ಸಿಂಧಿ, ಮಣಿಪುರಿ, ನೇಪಾಳಿ, ಸಂತಾಲಿ, ಅಂಗಾಮಿ – ಹೀಗೆ ಹಲವು ಭಾಷೆಯ ಸಂವೇದನಾಶೀಲ ಲೇಖಕರು ಸಕ್ರಿಯವಾಗಿ ಭಾಗವಹಿಸಿದ್ದರು. ಪ್ರಸಿದ್ಧ ಲೇಖಕಿ ತೆಮ್ಸುಲಾ ಆವೊ, ಅಕಾದೆಮಿಯ ಉಪಾಧ್ಯಕ್ಷರಾದ ಮಾಧವ್ ಕೌಶಿಕ್, ಕಾರ್ಯದರ್ಶಿ ಶ್ರೀನಿವಾಸರಾವ್ ಎರಡೂ ದಿವಸ ನಮ್ಮೊಟ್ಟಿಗಿದ್ದು ಆಪ್ತ ವಾತಾವರಣ ಸೃಷ್ಟಿಸಿದ್ದರು.

ನಾಗಾಲ್ಯಾಂಡ್ ಪುಟ್ಟ ರಾಜ್ಯಗಳಲ್ಲೊಂದು. ಒಟ್ಟು ಜನಸಂಖ್ಯೆ 20 ಲಕ್ಷ ದಾಟುವುದಿಲ್ಲ. ಹದಿನಾರಕ್ಕೂ ವಿವಿಧ ಬಗೆಯ ಗುಡ್ಡಗಾಡಿನ ಜನರಿಂದಾವೃತವಾದ ನಾಗಾಲ್ಯಾಂಡ್ ಸಮುದಾಯ ಎರಡನೆಯ ಮಹಾಯುದ್ಧದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಬ್ರಿಟಿಷರ ಜೊತೆಗೂಡಿ ಜಪಾನಿನ ಸೈನ್ಯವನ್ನು ಹಿಮ್ಮೆಟ್ಟಿಸಿತ್ತು. ನಂತರ ಇಲ್ಲಿ ಕ್ರಿಶ್ಚಿಯನ್ ಧರ್ಮದ ಗಾಢ ಪ್ರಭಾವವನ್ನು ಕಾಣುತ್ತೇವೆ. ಎರಡನೆಯ ಮಹಾಯುದ್ಧದ ಸ್ಮಾರಕವೆಂಬಂತಿರುವ ವಾರ್ ಸಿಮೆಟ್ರಿ ಇಲ್ಲಿನ ಪ್ರವಾಸಿ ತಾಣಗಳಲ್ಲೊಂದು. ಎತ್ತರದ ಪ್ರದೇಶದಲ್ಲಿರುವ ಈ ಸ್ಮಶಾನವನ್ನು ಒಂದು ಆಕರ್ಷಕ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿದ್ದಾರೆ. ಅಲ್ಲಿಗೆ ನಾವು ಭೇಟಿ ನೀಡಿದಾಗ ಯುದ್ಧ, ಅದರ ಭೀಕರ ಪರಿಣಾಮ, ಮನುಷ್ಯನ ಆಕ್ರಮಣಕಾರೀ ಪ್ರವೃತ್ತಿ- ಹೀಗೆ ಅನೇಕ ಸಂಗತಿಗಳು ಸುಳಿದಾಡಿದವು.ಹೆರಿಟೇಜ್ ವಿಲೇಜ್ ನಾಗಾಲ್ಯಾಂಡ್​ನ ಗುಡ್ಡಗಾಡು ಸಮುದಾಯ ಸಂಸ್ಕೃತಿಯ ಮೂಲಸ್ವರೂಪವನ್ನು ತೋರಿಸುವ ಮರುರಚನೆ. ಅಂಗಾಮಿ, ಆವೊ, ಕಚಾರಿ, ಸುಮಿ, ರೆಂಗ್ಮಾ, ಕುಕಿ, ಲೋತಾ, ಚಾಂಗ್- ಹೀಗೆ ಹದಿನಾರು ಬುಡಕಟ್ಟು ಜನಾಂಗದ ಸಂಸ್ಕೃತಿ ಇಲ್ಲಿ ಅನಾವರಣಗೊಂಡಿದೆ. ಪ್ರತಿ ಬುಡಕಟ್ಟಿಗೂ ಅದರದೇ ಆದ ಅನನ್ಯತೆಯಿದೆ. ಅಶೀಸ್ ನಂದಿ ಹೇಳುವಂತೆ ಪ್ರಗತಿ ಮೈದಾನದಲ್ಲಿ ಹಳ್ಳಿ ಸೃಷ್ಟಿಸಿ, ಇದು ಹಳ್ಳಿ ಎಂದು ತೋರಿಸುವಂತೆ ಗುಡ್ಡಗಾಡು ಸಂಸ್ಕೃತಿ ನಾಶಮಾಡಿ ಅದನ್ನು ಇಲ್ಲಿ ಮರುಸೃಷ್ಟಿಸಿ ತೋರಿಸುವ ಪ್ರಯತ್ನ. ಹಾರ್ನ್​ಬಿಲ್ ಫೆಸ್ಟಿವಲ್ ಇಲ್ಲಿನ ಅತ್ಯಂತ ಪ್ರಸಿದ್ಧ ಹಬ್ಬ. ಪ್ರತಿವರ್ಷ ಡಿಸೆಂಬರ್ ಒಂದರಿಂದ ಹತ್ತರವರೆಗೆ ನಡೆಯುವ ಈ ಜಾತ್ರೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆಗ ಈ ಸಂಸ್ಕೃತಿಗಳ ದರ್ಶನದ ಒಂದು ಝುಲಕ್ ಸಿಗುತ್ತದೆ ಎಂದು ಸ್ಥಳೀಯ ವಿದ್ವಾಂಸರಾದ ಕೊಯ್ಲಿ ಹೇಳಿದರು. ನಾಗಾ ಸಮುದಾಯ ಚೆಲುವು, ಸ್ಥೈರ್ಯಗಳಿಗೆ ಮತ್ತೊಂದು ಹೆಸರು. ನಮ್ಮ ಕೊಡಗಿನವರ ಹಾಗೆ. ಸೇನಾ ತುಕಡಿಗಳು ಅಲ್ಲಲ್ಲಿ ಕಂಡರೂ, ಹಿಂಸಾಚಾರದ ಬಗ್ಗೆ ಸುದ್ದಿಯಿದ್ದರೂ ನಾಗಾಲ್ಯಾಂಡ್ ನಮಗೆ ಸಂಸ್ಕೃತಿಯ ತವರಿನಂತೆ ಕಂಡಿತು.

(ಲೇಖಕರು ಖ್ಯಾತ ವಿಮರ್ಶಕರು)

Leave a Reply

Your email address will not be published. Required fields are marked *