More

    ಧರ್ಮ ವಿರುದ್ಧವಲ್ಲದ ಅರ್ಥ ಮತ್ತು ಕಾಮ…

    ಧರ್ಮ ವಿರುದ್ಧವಲ್ಲದ ಅರ್ಥ ಮತ್ತು ಕಾಮ...

    ‘ಧರ್ಮಾರ್ಥಕಾಮವೆಂಬಿವು / ಧರ್ಮಾರ್ಥಿಜನಕ್ಕೆ ನೆರೆದ ನೆರ್ಮಂತವರೊಳ್ / ಧರ್ಮ ಪ್ರಧಾನಮರ್ಥಂ / ಧರ್ಮಾಂಘ್ರಿಪಫಲಮದರ್ಕೆ ರಸಮದು ಕಾಮಂ’

    ಪಂಪ (ಆದಿಪುರಾಣ, ದಶಮಾಶ್ವಾಸ, ಪದ್ಯ 50)

    ಕನ್ನಡ ಮನಸ್ಸು ಪುರುಷಾರ್ಥವನ್ನು ವಿವರಿಸಿಕೊಂಡಿರುವ ಈ ಬಗೆ ಅರ್ಥ, ಕಾಮ, ಧರ್ಮ ಹಾಗೂ ಮೋಕ್ಷ ಇವುಗಳ ಅರ್ಥಪೂರ್ಣ ಸಂಬಂಧದ ಅತ್ಯುತ್ತಮ ವ್ಯಾಖ್ಯಾನವೆನ್ನಬಹುದು. ಧರ್ಮ, ಅರ್ಥ ಮತ್ತು ಕಾಮ ಎಂಬ ಇವು ಧರ್ವರ್ಥಿ ಜನಕ್ಕೆ ಸಿದ್ಧಿಸುವ ಫಲಗಳು. ಇವುಗಳಲ್ಲಿ ಧರ್ಮ ಪ್ರಧಾನವಾದುದು. ಅರ್ಥ ಧರ್ಮವೆಂಬ ವೃಕ್ಷದ ಫಲ; ಆ ಅರ್ಥವೆಂಬ ಫಲಕ್ಕೆ ಕಾಮವೆಂಬುದು ರಸ. ಮನುಷ್ಯನ ಮೂಲಭೂತ ಪ್ರವೃತ್ತಿಗಳಲ್ಲಿ ಅರ್ಥ ಮತ್ತು ಕಾಮದ ಸೆಳೆತ ಅಪರಿಮಿತವಾದುದು. ಇವುಗಳ ಆಕರ್ಷಣೆ ಅನಿಯಂತ್ರಿತ. ಪಂಪನಿಗೆ ಇದರ ಅರಿವಿದೆ. ಜೊತೆಗೆ ಅದರಿಂದುಂಟಾಗುವ ನೋವು, ಅನಾಹುತಗಳನ್ನೂ ಆತ ಬಲ್ಲ. ಭೋಗ ಬದುಕಿನ ಅನಿವಾರ್ಯ ಭಾಗ; ಅದನ್ನು ಅನುಭವಿಸಲು ಅರ್ಥ, ಕಾಮ ಅತ್ಯಗತ್ಯ. ಆದರೆ ಅರ್ಥ, ಕಾಮ ಧರ್ಮ ಮಾರ್ಗದಲ್ಲಿದ್ದಾಗ ಬದುಕು ಚಂದವಾಗುತ್ತದೆ ಎಂದು ಆತ ಪ್ರತಿಪಾದಿಸುತ್ತಾನೆ. ಹಾಗಾದರೆ ಧರ್ಮವೆಂದರೆ ಏನು?

    ‘ಯತೋಭ್ಯುದಯ ನಿಃಶ್ರೇಯಸ ಸಿದ್ಧಿಃ ಸ ಧರ್ಮಃ’ ಎಂಬುದು ಪ್ರಸಿದ್ಧವಾದ ಹೇಳಿಕೆ. ಅಂದರೆ ಬದುಕಿನಲ್ಲಿ ನಮಗೆ ಆಸರೆಯಾಗಿ ನಿಂತು, ನಾವು ಬೀಳದಂತೆ ಹಿಡಿದೆತ್ತಿ ನಿಲ್ಲಿಸುವುದು, ನಮ್ಮ ಅಭ್ಯುದಯಕ್ಕೆ, ಶ್ರೇಯಸ್ಸಿಗೆ ನೆರವಾಗುವುದು ಧರ್ಮ ಎಂಬುದು ಇದರ ವಿವರಣೆ. ವೈಚಾರಿಕ ಜಗತ್ತಿಗೆ ಧರ್ಮ ಅಪ್ರಸ್ತುತವೆಂದೂ, ಧರ್ಮನಿರಪೇಕ್ಷತೆಯ ರಾಷ್ಟ್ರನಿರ್ವಣವಾಗಬೇಕೆಂಬುದು ಆಧುನಿಕರ ಅಭಿಮತ. ಜನರನ್ನು ಒಡೆಯುವ, ಅಸಮಾನತೆ ಸೃಷ್ಟಿಸುವ, ಶೋಷಣೆಗೆ ದಾರಿ ಮಾಡಿಕೊಡುವ ಸಂಕುಚಿತ ಧರ್ಮಗಳ ಹಿನ್ನೆಲೆಯಲ್ಲಿ ಈ ವಿಚಾರವನ್ನು ನಾವು ಒಪ್ಪಬೇಕಾಗುತ್ತದೆ. ಈಗ ಧರ್ಮ ತನ್ನ ಆಧ್ಯಾತ್ಮಿಕ ಶಕ್ತಿಯನ್ನೆಲ್ಲ ಕಳೆದುಕೊಂಡು ಶಬ್ದಲೋಲುಪತೆಯಲ್ಲಿ ಮುಳುಗಿ ಸತ್ತಕೋಶದಂತಾಗಿದೆ. ಮತಧರ್ಮಗಳು ಈಗಿರುವ ರೀತಿಯಲ್ಲಿ ಸಮಾಜದ ಉನ್ನತಿಗೆ ಯಾವುದೇ ನೆರವು ನೀಡುತ್ತವೆಂದು ಭಾವಿಸುವುದು ಸರಿಯಾಗಲಾರದು. ವ್ರತಾಚರಣೆ ಮತ್ತು ಸಂಪ್ರದಾಯಕ್ಕೆ ಶರಣಾಗಬೇಕೆಂದು ಮಾತ್ರ ಹೇಳುವ ಮತಧರ್ಮಕ್ಕೂ, ನಮ್ಮ ಪ್ರಜ್ಞೆಯಲ್ಲಿ ಪಲ್ಲಟವುಂಟಾಗಿ ವೈಯಕ್ತಿಕ ಆಸೆ ಆಮಿಷಗಳಿಂದ ಬಿಡುಗಡೆ ಪಡೆದು, ಸಮಷ್ಟಿನೆಲೆಯ ಉನ್ನತ ಚಿಂತನೆಗೆ ಅವಕಾಶ ಕಲ್ಪಿಸುವ ಧರ್ಮಕ್ಕೂ ಅಪಾರ ಅಂತರವಿದೆ. ಕನ್ನಡ ಪರಂಪರೆಯನ್ನೇ ಗಮನಿಸಿದರೂ ಧರ್ಮ ಸಾಮಾಜಿಕ ಬದುಕಿನಲ್ಲಿ, ಸಂಸ್ಕೃತಿ ಚಿಂತನೆಯಲ್ಲಿ, ಸಾಹಿತ್ಯ ಸೃಷ್ಟಿಯಲ್ಲಿ ಅನೇಕ ಇತ್ಯಾತ್ಮಕ ಬದಲಾವಣೆಗಳಿಗೆ ಕಾರಣವಾಗಿದೆ. ನಮ್ಮ ಆಧ್ಯಾತ್ಮಿಕ ಶ್ರದ್ಧೆ ಸೃಜನಶೀಲ ಪ್ರತಿಭೆಯನ್ನು ಮಂಕಾಗಿಸಲಿಲ್ಲ, ಬದಲಿಗೆ ತೇಜಸ್ಸು ಹಾಗೂ ವೈವಿಧ್ಯಮಯ ವರ್ಚಸ್ಸು ನೀಡಿದೆ.

    ‘ಆಹಾರ ನಿದ್ರಾ ಭಯ ಮೈಥುನಂ ಚ ಸಾಮಾನ್ಯ ಮೇತತ್ಪಶುಭಿರ್ನರಾಣಾಂ / ಜ್ಞಾನಂ ಹಿ ತೇಷಾಂ ಅಧಿಕೋ ವಿಶೇಷಃ ಜ್ಞಾನೇನ ಹೀನಾಃ ಪಶುವೋ ಭವಂತಿ’. ಹಸಿವು, ನಿದ್ರೆ, ಹೆದರಿಕೆ, ಮೈಥುನಗಳು ಮನುಷ್ಯರಿಗೂ ಪಶುಗಳಿಗೂ ಸಮಾನವಾಗಿವೆ. ಜ್ಞಾನವು ಮಾನವನ ವಿಶೇಷ ಲಕ್ಷಣವಾಗಿದೆ. ಅದಿಲ್ಲದವರು ಪಶುಗಳಿಗೆ ಸಮಾನರಾಗಿರುತ್ತಾರೆ. ಇಲ್ಲಿ ಜ್ಞಾನ ಎಂದರೆ ಧರ್ಮ, ನೀತಿ, ವಿಚಾರ ಎಂಬ ಅರ್ಥಛಾಯೆಗಳಿವೆ.

    ವಸಾಹತುಶಾಹಿಯ ಪ್ರಮುಖ ಪರಿಣಾಮವೆಂದರೆ ನಮ್ಮ ಪೂರ್ವಸೂರಿಗಳ ಜ್ಞಾನ ಸಂಪತ್ತಿನ ಬಗ್ಗೆ ಒಂದು ಬಗೆಯ ಕುರುಡು ಅವಜ್ಞತೆಯನ್ನು ಮೂಡಿಸಿದ್ದು; ಯಾವುದೇ ರೀತಿಯ ಆಳ ಅಧ್ಯಯನದ ವಿಮರ್ಶಾತ್ಮಕ ಅರಿವಿಲ್ಲದೆ ನಿರಾಕರಣೆಗೆಂದೇ ಅವಗಣನೆಯಿಂದ ಕಾಣುವ ಈ ಬಗೆ ಪಶ್ಚಿಮದ ಕೊಡುಗೆ.

    ನಿಸ್ಸಂದೇಹವಾಗಿ ಇದು ವೈಜ್ಞಾನಿಕ ಯುಗ. ತಂತ್ರಜ್ಞಾನ ನಮಗೆ ಅನೇಕ ಸವಲತ್ತುಗಳನ್ನು ಒದಗಿಸಿಕೊಟ್ಟಿದೆ, ನಿಜ. ಆದರೆ ಇಂದು ವಿಜ್ಞಾನನಾಗರಿಕತೆ ತನ್ನಲ್ಲೇ ಬೆಳೆಯಗೊಟ್ಟ ವಿಕೃತಿಗಳಿಂದಾಗಿ ಸವಾಲುಗಳನ್ನೂ ನಾವು ಎದುರಿಸುತ್ತಿದ್ದೇವೆ. ದಾರಿ ತಪ್ಪಿದ ವಿಜ್ಞಾನ ಸ್ಪರ್ಧಾಕಣವನ್ನು ಸೃಷ್ಟಿಸಿ ಅಸೂಯೆ, ದ್ವೇಷ, ಹಿಂಸೆಗಳನ್ನು ಬೆಳಸಿ ಜಗತ್ತನ್ನು ಸದಾ ಯುದ್ಧಸನ್ನದ್ಧವನ್ನಾಗಿ ಇಟ್ಟಿದೆ. ಮನುಷ್ಯನ ದುರಾಸೆಗಳನ್ನು ಪೋಷಿಸಿ ಆತನನ್ನು ಯಂತ್ರನಾಗರಿಕತೆ ಅಥವಾ ಸರಕುಸಂಸ್ಕೃತಿಯ ದಾಸನನ್ನಾಗಿಸಿದೆ. ಅಧಿಕಾರ ಸಂಪತ್ತುಗಳ ಕೇಂದ್ರೀಕರಣ, ಸಂಯಮವಿಲ್ಲದ ಭೋಗಲಾಲಸೆ ಇವು ವಿಜ್ಞಾನನಾಗರಿಕತೆ ಬಿತ್ತಿದ ವಿಷಬೀಜಗಳು. ಇವುಗಳನ್ನು ಎದುರಿಸುವುದು ಹೇಗೆ?

    ಪೂರ್ವಸೂರಿಗಳ ವಿವೇಕದ ಹಿನ್ನೆಲೆಯಲ್ಲಿ ಈ ಸಮಸ್ಯೆಗಳನ್ನಿಟ್ಟು ನೋಡಿದ ಗಾಂಧೀಜಿ ‘ವಿಕೇಂದ್ರೀಕರಣ’ ಹಾಗೂ ‘ಆತ್ಮಸಂಯಮ’ ಪರಿಹಾರವೆಂದು ಸೂಚಿಸಿದರು. ಅವರು ಟಾಲ್​ಸ್ಟಾಯ್ನ ‘ದ ಕಿಂಗ್​ಡಮ್ ಆಫ್ ಗಾಡ್ ವಿಥಿನ್ ಯು’ ಹಾಗೂ ರಸ್ಕಿನ್​ನ ‘ಅನ್ ಟು ದಿಸ್ ಲಾಸ್ಟ್’ ಕೃತಿಗಳಿಂದ ಪ್ರಭಾವಿತರಾದಂತೆ ಭಗವದ್ಗೀತೆ, ಉಪನಿಷತ್, ಬೈಬಲ್, ಕುರಾನ್​ಗಳ ಪ್ರಭಾವಕ್ಕೂ ಒಳಗಾಗಿದ್ದರು. ನಮ್ಮ ಕಾಲದ ಸೂಕ್ಷ್ಮ ಚಿಂತಕರಾಗಿದ್ದ ಕೆ ವಿ ಸುಬ್ಬಣ್ಣ, ‘ನಮ್ಮ ನಮ್ಮ ವಿವಿಧ ಪರಂಪರೆಯ ಗತಿ (ಥೀಸಿಸ್), ವಿಜ್ಞಾನ ಸಂಸ್ಕೃತಿಯ ವಿಗತಿ (ಆಂಟಿಥೀಸಿಸ್)ಯೊಡನೆ ಸಂಘರ್ಷಿಸಿ ಹೊಸ ಸಂಗತಿ (ಸಿಂಥೆಸಿಸ್)ಯನ್ನು ಸೃಜಿಸುವ ಪ್ರಕ್ರಿಯೆ’ ಇಂದಿನ ಅಗತ್ಯವೆಂದು ಪ್ರತಿಪಾದಿಸುತ್ತಾರೆ. ಹೀಗಾಗಿ ಪರಂಪರೆಯ ಅರಿವು, ಆಧುನಿಕ ವಿಜ್ಞಾನನಾಗರಿಕತೆಯ ಅನುಕೂಲ ಹಾಗೂ ಎಚ್ಚರ ಇವೆರಡೂ ಒಂದು ಹದದಲ್ಲಿ ಸೇರುವುದು ನಮ್ಮ ಬದುಕನ್ನು ಹಸನುಗೊಳಿಸಲು ಅತ್ಯಗತ್ಯ.

    ವೇದಗಳನ್ನು ಅಪೌರುಷೇಯ ಎಂದು ಕರೆಯುವ ರೂಢಿಯೇ ಅದಕ್ಕೊಂದು ಧಾರ್ವಿುಕ ಪರಿವೇಷ ಕಲ್ಪಿಸಿ, ಅದೊಂದು ಜ್ಞಾನಸಂಚಯ ಎಂಬ ಅಂಶ ಹಿಂದೆ ಸರಿಯಿತು. ಯಾಸ್ಕರು ತಮ್ಮ ನಿರುಕ್ತದಲ್ಲಿ ವೇದದ ಅರ್ಥವನ್ನು ವಿವರಿಸುವ ಪ್ರಯತ್ನ ಮಾಡಿದರೂ, ಸಾಯಣರ ಕಾಲಕ್ಕೆ ಅರ್ಥಕ್ಕಿಂತ ಅದರ ಪಠಣವೇ ಪ್ರಾಮುಖ್ಯ ಪಡೆದು, ವೇದಾಧ್ಯಯನ ವೇದಘೊಷದ ರೂಪ ಪಡೆದುಕೊಂಡುಬಿಟ್ಟಿತು. ಈಗಲೂ ವೇದಘೊಷದಲ್ಲಿ ಕರ್ಣಾನಂದಕ್ಕೆ ಮಹತ್ವವೇ ಹೊರತು ಚಿಂತನಶೀಲ ನೆಲೆಯ ಪ್ರಾಮುಖ್ಯವನ್ನು ನಾವು ಮನಗಾಣುತ್ತಿಲ್ಲ. ಪುರಾಣವೂ ಹೀಗೆಯೇ ಧಾರ್ವಿುಕ ಪ್ರವಚನಕ್ಕೆ ಸೀಮಿತವಾಯಿತು. ಪುರಾಣವೆಂದರೇ ಸಮಕಾಲೀನವಲ್ಲದ್ದು ಎಂಬರ್ಥವಿದೆ. ಆದರೆ ಪುರಾಣಗಳು ಸಂಸ್ಕೃತಿಯ ಸಾರವೆಂಬುದನ್ನು ನಾವು ಗಮನಿಸಿದಂತಿಲ್ಲ. ವೇದ, ಉಪನಿಷತ್ತು, ಪುರಾಣ, ಮಹಾಕಾವ್ಯಗಳು ನಮ್ಮ ಸಂವೇದನಾಶೀಲ ಮನಸ್ಸುಗಳ ಚಿಂತನೆಯೆಂದು ಪರಿಭಾವಿಸಿದಾಗ ಅವುಗಳ ಉಪಯುಕ್ತತೆಯ ಮಹತ್ವದ ಅರಿವಾಗುತ್ತದೆ. ಅಲ್ಲಿರುವ ಎಲ್ಲವನ್ನೂ ನಾವು ಒಪ್ಪಬೇಕೆಂದಿಲ್ಲ; ಹಾಗೆಂದು ಇಡಿಯಾಗಿ ತಿರಸ್ಕರಿಸುವುದೂ ಉಚಿತವಲ್ಲ. ವಿಮರ್ಶಾವಿವೇಕದಿಂದ ಸಮಕಾಲೀನ ಬದುಕಿನ ಅಗತ್ಯಗಳಿಗೆ ಬೇಕಾದ್ದನ್ನು ಪಡೆದುಕೊಳ್ಳಬಹುದು. ಗೋಪಾಲಕೃಷ್ಣ ಅಡಿಗರು ಹೇಳುವ ಹಾಗೆ ‘ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು / ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ / ಕಂಡೀತು ಗೆರೆಮಿರಿವ ಚಿನ್ನದದಿರು / ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ / ಇನ್ನಾದರೂ ಕೊಂಚ ಕಲಿಯಬೇಕು. / ಹೊನ್ನ ಕಾಯಿಸಿ ಹಿಡಿದು ಬಡಿದಿಷ್ಟದೇವತಾ / ವಿಗ್ರಹಕ್ಕೊಗ್ಗಿಸುವ ಅಸಲು ಕಸುಬು’. (ಭೂತ, ಪುಟ 279, ಅಡಿಗರ ಸಮಗ್ರ ಕಾವ್ಯ)

    ವೇದ ಎಂಬ ಸಂಸ್ಕೃತ ಮಾತಿಗೆ ಮೂಲ ‘ವಿಧ್’ ಎಂಬ ಧಾತು; ಹಾಗೆಂದರೆ ‘ತಿಳಿದುಕೊಳ್ಳುವುದು’ ಎಂಬ ಅರ್ಥ. ಧರ್ಮದ ಸ್ವರೂಪವನ್ನು, ಅದರ ಅಗತ್ಯವನ್ನು ತಿಳಿಯ ಹೇಳಿ, ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಬಗೆಯನ್ನು ತೋರಿಸಿಕೊಡುವುದು ವೇದ ಎಂಬ ವ್ಯಾಖ್ಯಾನವಿದೆ. ವೇದವಾಙ್ಮ ಯವನ್ನು ಸಂಹಿತೆಗಳು, ಬ್ರಾಹ್ಮಣಗಳು, ಆರಣ್ಯಕಗಳು ಹಾಗೂ ಉಪನಿಷತ್ತು ಎಂದು ವಿಭಾಗ ಮಾಡುವುದು ರೂಢಿ. ಸಂಹಿತೆಗಳು ಮಂತ್ರಭಾಗ; ಬ್ರಾಹ್ಮಣಗಳ ಉಪಯೋಗವಿರುವುದು ಯಜ್ಞಯಾಗಾದಿಗಳ ಸಂದರ್ಭದಲ್ಲಿ. ಅದನ್ನು ಕರ್ಮಕಾಂಡವೆನ್ನುತ್ತಾರೆ. ಬ್ರಾಹ್ಮಣಗಳು ಹೇಳುವ ಯಜ್ಞ ಯಾಗಾದಿಗಳಲ್ಲಿ ತೊಡಗದೆ ಅವುಗಳ ಸಾಂಕೇತಿಕ ಅರ್ಥವನ್ನು ಗ್ರಹಿಸಿ ಚಿಂತಿಸುವುದು ಆರಣ್ಯಕ. ಆರಣ್ಯಕಗಳಿಗೆ ಹೊಂದಿ ಕೊಂಡಂತೆ ಕಡೆಯ ಭಾಗದಲ್ಲಿ ಬರುವಂಥದು ಉಪನಿಷತ್ತು. ಇದು ಯಜ್ಞಯಾಗಾದಿಗಳನ್ನು ಕೈಬಿಟ್ಟು, ಅದರ ಹಿಂದಿನ ತಾತ್ವಿಕ ನೆಲೆಯನ್ನು ಅರಿತುಕೊಳ್ಳಲು ಹವಣಿಸಿದ್ದರಿಂದ ಉಪನಿಷತ್ತನ್ನು ಜ್ಞಾನಕಾಂಡವೆಂದು ಕರೆಯುತ್ತಾರೆ. ಹಾಗೆ ನೋಡಿದರೆ ಉಪನಿಷತ್ತುಗಳೇ ವೇದದ ಸಾರ. ಉಪನಿಷತ್ತು ಎಂದರೆ ಗುರುವಿನ ಹತ್ತಿರದಲ್ಲಿ ಕುಳಿತು ಸಾವಧಾನದಿಂದ, ಏಕಾಗ್ರತೆಯಿಂದ ಆತನ ಉಪದೇಶವನ್ನು ಕೇಳುವುದು; ‘ಏಷ ಆದೇಶಃ, ಏಷ ಉಪದೇಶಃ, ಏಷಾ ವೇದೋಪನಿಷತ್’ ಎಂಬ ಮಾತುಗಳನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ರಾಜಕೀಯವಾಗಿ ನಾವು ಏನೆಲ್ಲ ಕಾನೂನುಗಳನ್ನು ತಂದು ಬದಲಾವಣೆಗೆ ಪ್ರಯತ್ನಿಸಿದರೂ, ಅದಕ್ಕಿಂತಲೂ ಅತಿಶಯವಾದ ಪರಿಣಾಮ ‘ಆತ್ಮಸಂಯಮ’ವನ್ನು ಪ್ರತಿಪಾದಿಸುವ ಮಹಾಕೃತಿಗಳಿಂದ ಸಾಧ್ಯವಾಗುತ್ತದೆ.

    ಧರ್ಮವೆಂದರೆ ಆಮಿಷಗಳಿಗೆ ಬಲಿಯಾಗದೆ ಮನಸ್ಸನ್ನು ನಿಗ್ರಹಿಸಿ ಕೊಂಡು ಬದುಕನ್ನು ಚಂದ ಮಾಡಿಕೊಳ್ಳುವ ಲೋಕನೀತಿ ಎಂಬ ನೆಲೆಯಲ್ಲಿ ಗ್ರಹಿಸಿದಾಗ ನಮ್ಮ ಬದುಕಿನಲ್ಲಿ ಧರ್ಮದ ಮಹತ್ವದ ಅರಿವಾಗುತ್ತದೆ. ಧರ್ಮ ಇಹದ ಬದುಕಿಗೆ ಪರಿಮಳ ತುಂಬುವ ಸಾಧನವಾಗಬೇಕು ಎಂಬುದು ಹನ್ನೆರಡನೆಯ ಶತಮಾನದಲ್ಲಿ ಕನ್ನಡ ಮನಸ್ಸು ಚಿಂತಿಸಿದ ಬಗೆ. ‘ಕಳಬೇಡ, ಕೊಲಬೇಡ; ಹುಸಿಯ ನುಡಿಯಲು ಬೇಡ / ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ / ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ / ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ / ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ’. (246, ವಚನಕಮ್ಮಟ). ಇಲ್ಲಿಯ ಎಲ್ಲವೂ ಸಮಾಜದಲ್ಲಿ ವ್ಯಕ್ತಿ ನಡೆದುಕೊಳ್ಳಬೇಕಾದ ರೀತಿಯನ್ನು ಹೇಳುವಂಥವು; ಇವುಗಳೇ ಸಾಮಾಜಿಕ ಮೌಲ್ಯಗಳು. ಆದರೆ ವಚನದ ಕಡೆಯ ಸಾಲು ಈ ಸಾಮಾಜಿಕ ಮೌಲ್ಯಗಳನ್ನು ಧಾರ್ವಿುಕ ಮೌಲ್ಯವನ್ನಾಗಿ ರೂಪಾಂತರಿಸಿಬಿಡುತ್ತದೆ ಎನ್ನುವುದು ನಾವು ಗಮನಿಸಬೇಕಾದ ಸಂಗತಿ. ‘ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ’ ಎಂಬುದು ಮಹತ್ವದ ಮಾತು. ಇಹದ ಬದುಕಿನಲ್ಲಿ ನಾವು ಒಪ್ಪಿಕೊಂಡಿರುವ ಸಾಮಾಜಿಕ ಮೌಲ್ಯಗಳನ್ನು ಸಮರ್ಪಕವಾಗಿ ಪರಿಪಾಲಿಸಿದರೆ ಅದೇ ದೈವಸಾಕ್ಷಾತ್ಕಾರಕ್ಕೆ ಹಾದಿ ಎಂಬುದು ಧರ್ಮಕ್ಕೂ ಲೋಕನೀತಿಗೂ ಇರುವ ಅನ್ಯೋನ್ಯ ಸಂಬಂಧವನ್ನು ಸೂಚಿಸುತ್ತದೆ.

    ಜೀವನದಲ್ಲಿ ಧರ್ಮದ ಸ್ಥಾನವನ್ನು ಕುರಿತು ಚಿಂತಿಸುವಾಗ ಆತ್ಯಂತಿಕವಾಗಿ ಅದು ಸಾಮಾಜಿಕ ಬದುಕಿನಲ್ಲಿ ನಮ್ಮ ಪ್ರವೃತ್ತಿ ಸಹಜ ಬಯಕೆಗಳನ್ನು ನಿಯಂತ್ರಿಸಿಕೊಂಡು ಎಲ್ಲರೊಡನೆ ಸೌಹಾರ್ದದಿಂದ ಸಹಬಾಳ್ವೆ ನಡೆಸುವ ಸಾಧನವಾಗಿ ಕಾಣಿಸುತ್ತದೆ. ಇದು ಅಧ್ಯಾತ್ಮವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಕ್ರಮ. ಆದರೆ ಧರ್ಮ ಈ ಅಧ್ಯಾತ್ಮದ ನೆಲೆಯಿಂದ ‘ಮತ’ದ ನೆಲೆಗಿಳಿದಾಗ ಆಗುವ ಅಪಾಯ ಈಗ ನಾವು ಅನುಭವಿಸುತ್ತಿರುವಂಥದು. ‘ಮತ’ವೆಂದರೆ ಓಟು ಎಂಬ ಅರ್ಥವೂ ಇದೆ. ಈ ‘ಮತಭ್ರಾಂತಿ’ಯಿಂದ ಲೋಕಕ್ಕೆ ಆಗಿರುವಷ್ಟು ಹಾನಿ ಮತ್ತೆ ಯಾವುದರಿಂದಲೂ ಆಗಿಲ್ಲ. ಹೀಗಾಗಿ ‘ಅಧ್ಯಾತ್ಮ’ದ ಆತ್ಮಶಕ್ತಿಯನ್ನು ಉಳಿಸಿಕೊಂಡು ಅದರೊಂದಿಗೆ ಸಂಬಂಧ ಹೊಂದಿರುವ ಮತಮೌಢ್ಯವನ್ನು ನಿರಾಕರಿಸುವುದು ಅತ್ಯಗತ್ಯ.

    ಪಶ್ಚಿಮಬುದ್ಧಿಯ ನಾವು ಇನ್ನಾದರೂ ಪೂರ್ವ ಮೀಮಾಂಸೆಯನ್ನು ಬಗೆದು ನೋಡುವ ಅಗತ್ಯವಿದೆ. ಪೂರ್ವ ಮೀಮಾಂಸೆ ಎನ್ನುವಾಗ ಜನಪದಸಂತರು, ಶರಣರು, ದಾಸರು, ಭಕ್ತಕವಿಗಳು, ತತ್ವಪದಕಾರರು… ಹೀಗೆ ಎಲ್ಲರನ್ನೂ ಒಳಗೊಂಡ ಜಗತ್ತು ಎಂಬುದನ್ನು ಮರೆಯದಿರೋಣ.

    ‘ತನ್ನ ತಾನರಿದಡೆ ನುಡಿಯೆಲ್ಲ ತತ್ವ ನೋಡಾ / ತನ್ನ ತಾಮರೆದಡೆ ನುಡಿಯೆಲ್ಲ ಮಾಯೆ ನೋಡಾ’-ಅಲ್ಲಮಪ್ರಭು.

    (ಲೇಖಕರು ಖ್ಯಾತ ವಿಮರ್ಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts