ಪಂಚೇಂದ್ರಿಯಂಗಳೊಳು ನಾಲ್ಕಧಮ ಒಂದಧಿಕವೇ?

ಭಾರತೀಯ ಕಾವ್ಯ ಚಿಂತನೆಯಲ್ಲಿ ಕಾವ್ಯ ಪ್ರಯೋಜನಗಳನ್ನು ಹೀಗೆ ಹೇಳಿದ್ದಾರೆ: ‘ಕಾವ್ಯಂ ಯಶಸೇ, ಅರ್ಥಕೃತೇ, ವ್ಯವಹಾರವಿದೇ, ಶಿವೇತರ ಕ್ಷತಯೇ, ಸದ್ಯಃಪರನಿವೃತತಯೇ, ಕಾಂತಾಸಂಮಿತತಃ ಉಪದೇಶಯುಜೇ’. ಕಾವ್ಯದಿಂದ ಕೀರ್ತಿ, ಹಣ, ವ್ಯವಹಾರಜ್ಞಾನ, ಅಮಂಗಳ ನಿವಾರಣೆ, ಆನಂದ ಹಾಗೂ ಉಪದೇಶ ಸಿಗುತ್ತದೆ ಎಂಬುದು ಬಹುಪಾಲು ಚಿಂತಕರ ನಿಲವು. ಆದರೆ ನಮ್ಮ ಕನ್ನಡ ಕವಿ ರಾಘವಾಂಕ ಮಾತ್ರ ‘ಜನ ಬದುಕಬೇಕೆಂದು ಕಾವ್ಯಮಂ ಪೇಳ್ದೆನ್’ ಎನ್ನುತ್ತಾನೆ. ‘ಜನರ ಬದುಕು ಹಸನಾಗಬೇಕೆಂದು ಕಾವ್ಯವನ್ನು ರಚಿಸುತ್ತಿದ್ದೇನೆ’ ಎಂಬ ಈ ನಿಲವು ಭಾರತೀಯ ಸಂದರ್ಭದಲ್ಲಿ ಮಾತ್ರವಲ್ಲ, ಜಾಗತಿಕ ಚಿಂತನೆಯಲ್ಲಿಯೂ ವಿಶಿಷ್ಟವಾದುದು.

ವಚನ ಚಳವಳಿಯ ನಂತರ ಬಂದ ರಾಘವಾಂಕ ಹರಿಹರನ ಶಿಷ್ಯ ಹಾಗೂ ಸೋದರಳಿಯ. ಹರಿಹರನೇ ಅದುವರೆಗಿನ ಮಾರ್ಗ ಪರಂಪರೆಯನ್ನು ಪ್ರತಿಭಟಿಸಿ ಹೊಸಹಾದಿ ಹಿಡಿದ ಕವಿಯಾದರೆ, ಅವನ ಶಿಷ್ಯನಾದ ರಾಘವಾಂಕ ಪರಂಪರೆಯ ಜೊತೆಗೆ ತನ್ನ ಗುರು ಹರಿಹರನಿಗಿಂತಲೂ ಭಿನ್ನ ನಿಲವು ತಳೆದವನು. ಮನುಜರ ಮೇಲೆ ಸಾವವರ ಮೇಲೆ ಕಾವ್ಯ ಬರೆಯಬಾರದೆನ್ನುವ ಹರಿಹರನ ನಿಲುವಿಗಿಂತ ಭಿನ್ನವಾಗಿ ಮನುಷ್ಯನ ಘನತೆಯನ್ನು ಎತ್ತಿ ಹಿಡಿದವನು. ಆ ಕಾಲದ ಬಹುಪಾಲು ಕವಿಗಳು ಕಾವ್ಯವನ್ನು ಧರ್ಮ ಪ್ರಚಾರದ ಸಾಧನವನ್ನಾಗಿ ಬಳಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ‘ಸತ್ಯವೆಂಬುದೆ ಹರನು, ಹರನೆಂಬುದೆ ಸತ್ಯ’ ಎಂದು ಘೊಷಿಸಿ ಸತ್ಯ ಪ್ರತಿಪಾದನೆಗಾಗಿ ಕಾವ್ಯ ರಚಿಸಿದವನು. ಇದು ಆಧುನಿಕ ಕಾಲದ ’’Truth is Beauty, Beauty is Truth’ ’ ಎಂಬ ಕೀಟ್ಸ್​ನ ಮಾತುಗಳನ್ನು ನೆನಪಿಸುತ್ತದೆ. ಹದಿಮೂರನೆಯ ಶತಮಾನದ ನಮ್ಮ ರಾಘವಾಂಕನೆಲ್ಲಿ, ಈ ಕಾಲದ ಕೀಟ್ಸ್ ಎಲ್ಲಿ? ಬಹುಶಃ ಕೀಟ್ಸ್​ಗೆ ಸುಪ್ತಪ್ರಜ್ಞೆಯಲ್ಲಿ ನಮ್ಮ ರಾಘವಾಂಕ ಪ್ರೇರಣೆ ನೀಡಿರಬೇಕು.

ಇಂತಹ ರಾಘವಾಂಕ ತನ್ನ ಕಾವ್ಯದಲ್ಲಿ ತೀವ್ರ ಸಾಮಾಜಿಕ ಕಾಳಜಿಯನ್ನೂ ಪ್ರಕಟಿಸಿದ್ದಾನೆ. ಶ್ರೇಣೀಕರಣ ಸಾಮಾಜಿಕ ವ್ಯವಸ್ಥೆಯನ್ನು ಪ್ರಶ್ನಿಸಿದ್ದಾನೆ. ಹೊಲತಿಯರು, ವೀರಬಾಹುಕ ಮೊದಲಾದವರು ಎತ್ತುವ ಪ್ರಶ್ನೆಗಳು ಇಂದಿಗೂ ಪ್ರಸ್ತುತ. ಅಂತಹ ಒಂದು ಪ್ರಶ್ನೆ: ‘ಪಂಚೇಂದ್ರಿಯಂಗಳೊಳು ನಾಲ್ಕಧಮ ಒಂದಧಿಕವೇ?’

ಈ ಪ್ರಶ್ನೆ ಇಂದಿಗೂ ಆಚರಣೆಯಲ್ಲಿರುವ ಅಸ್ಪಶ್ಯತೆಗೆ ಸಂಬಂಧಿಸಿದ್ದು. ಶ್ರೇಣೀಕರಣ ಸಾಮಾಜಿಕ ವ್ಯವಸ್ಥೆಯಲ್ಲಿ ಮೇಲುವರ್ಗದ ಮಂದಿ ಕೆಳವರ್ಗದವರನ್ನು ನೋಡಿ ಆನಂದಿಸಬಹುದು, ಅವರ ಮಾತುಗಳನ್ನು ಕೇಳಿಸಿಕೊಳ್ಳಬಹುದು, ಅವರೊಡನೆ ಮಾತನಾಡಬಹುದು, ಅವರತ್ತಣಿಂದ ಬಂದ ಗಾಳಿಯನ್ನು ಆಘ್ರಾಣಿಸಬಹುದು-ಆದರೆ ಅವರನ್ನು ಮುಟ್ಟುವಂತಿಲ್ಲ. ಕಣ್ಣು, ಕಿವಿ, ನಾಲಗೆ, ನಾಸಿಕ ಹಾಗೂ ಚರ್ಮ ಇವುಗಳಲ್ಲಿ ಚರ್ಮ ಮಾತ್ರ ಹೇಗೆ ಶ್ರೇಷ್ಠ? ಇದು ಹೊಲತಿಯರು ಹರಿಶ್ಚಂದ್ರನಿಗೆ ಕೇಳುವ ಪ್ರಶ್ನೆ. ಇದು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಸ್ಪರ್ಶಕ್ಕಿರುವ ಮಹತ್ವವನ್ನು ಸೂಚಿಸುತ್ತದೆ. ಕನ್ನಡದಲ್ಲಿ ‘ಮುಟ್ಟು’ ಎಂಬ ಪದ ನಾಮಪದವೂ ಹೌದು, ಕ್ರಿಯಾಪದವೂ ಹೌದು. ‘ಮುಟ್ಟು’ ಎಂದರೆ ಮೇಲುವರ್ಗದಲ್ಲಿ ‘ಮೈಲಿಗೆ’ ಎಂಬರ್ಥ. ಇದು ಹೆಣ್ಣಿನ ಋತುಸಂದರ್ಭದ ಸ್ಥಿತಿ. ಆ ಸಂದರ್ಭದಲ್ಲಿ ಅವಳನ್ನು ಮೈಲಿಗೆಯೆಂದು ದೂರವಿರಿಸುವ ಪದ್ಧತಿ ರೂಢಿಯಲ್ಲಿತ್ತು. ಆಗ ಅವಳನ್ನು ‘ಮುಟ್ಟು’ವಂತಿಲ್ಲ. ಈಗಲೂ ಆ ಪದ್ಧತಿ ಆಚರಣೆಯಲ್ಲಿರುವುದನ್ನು ನಾನು ಬಲ್ಲೆ. ಮುಟ್ಟು ಎಂದು ಹೇಳುತ್ತಲೇ ಮುಟ್ಟಬಾರದ ಸ್ಥಿತಿಯನ್ನು ಸೂಚಿಸುವುದು ಒಂದು ರೀತಿಯ ಐರನಿ. ನನಗೆ ಲಂಕೇಶರ ‘ಮುಟ್ಟಿಸಿಕೊಂಡವರು’ ಕತೆ ನೆನಪಾಗುತ್ತಿದೆ. ಹೊಲತಿಯರ ಪ್ರಶ್ನೆ ಅಸ್ಪಶ್ಯತೆಗೆ ಸಂಬಂಧಿಸಿದಂತೆ ಮಾತ್ರವಲ್ಲ, ಗಂಡು-ಹೆಣ್ಣಿನ ಸಂಬಂಧದಲ್ಲಿಯೂ ‘ಸ್ಪರ್ಶ’ಕ್ಕಿರುವ ಮಹತ್ವವನ್ನು ಸೂಚಿಸುತ್ತದೆ.

ಈ ಸಲ ನಾನು ಅಮೆರಿಕಕ್ಕೆ ಬಂದದ್ದು ಒಂದು ಉಪನ್ಯಾಸಕ್ಕಾಗಿ. ವಸಾಹತೋತ್ತರ ಚಿಂತನೆಯಲ್ಲಿ ಆಧುನಿಕ ವಸಾಹತುಶಾಹಿಯ ವಿವಿಧ ವಿನ್ಯಾಸಗಳು, ಪರಿಣಾಮಗಳನ್ನು ಕುರಿತು ನಾವು ರ್ಚಚಿಸುತ್ತಿದ್ದೆವು. ಅಲ್ಲಿ ಬೇರೆ ಬೇರೆ ದೇಶಗಳ ಪ್ರತಿನಿಧಿಗಳಿದ್ದರು. ಆಹಾರ ಕುರಿತಂತೆಯೂ ಅಲ್ಲಿ ಮಾತು ಬಂದಿತು. ನಾನು ಆಗ ಸಹಜವಾಗಿ ನಮ್ಮ ದೇಶದಲ್ಲಿನ ಆಹಾರ ರಾಜಕೀಯ ಪ್ರಸ್ತಾಪಿಸಿದೆ. ಆಹಾರದ ರಾಜಕೀಯ ನೆಲೆಗಳ ಬಗ್ಗೆ ಕುತೂಹಲ ಚರ್ಚೆ ನಡೆಯಿತು. ಆಗ ನನಗೆ ನಾಲಗೆ, ರುಚಿ, ರಾಘವಾಂಕ ಹೀಗೆ ಏನೆಲ್ಲ ಮನಸ್ಸಿಗೆ ಬಂತು. ನಮ್ಮ ಚರ್ಚೆಯ ಬಗ್ಗೆ ಹೇಳುವ ಉತ್ಸಾಹವಿದ್ದರೂ, ಈಗ ರುಚಿಯ ನನ್ನ ಅನುಭವವನ್ನು ಹಂಚಿಕೊಳ್ಳುತ್ತೇನೆ.

ಪಂಚೇಂದ್ರಿಯಗಳಲ್ಲಿ, ಪ್ರತಿಯೊಂದಕ್ಕೂ ತನ್ನದೆ ಜಗತ್ತು, ಮಹತ್ವವಿದ್ದರೂ ಎಲ್ಲಕ್ಕಿಂತ ನಾಲಗೆಯೇ ಹೆಚ್ಚು ಪ್ರಭಾವಿ ಎಂದು ಅನೇಕ ಸಲ ನನಗೆ ಅನ್ನಿಸಿದೆ. ನಾಲಗೆಗೆ ಎರಡು ನೆಲೆಗಳಿವೆ. ಒಂದು ಮಾತು ಮತ್ತೊಂದು ರುಚಿ. ಹೀಗಾಗಿ ಇದು ನಮ್ಮ ದೇಹ ಮತ್ತು ಮನಸ್ಸು ಎರಡರ ಮೇಲೂ ಪ್ರಭಾವ ಬೀರುತ್ತದೆ.

ನಾಲಗೆಯ ಮೇಲೆ ನಿಯಂತ್ರಣವಿಲ್ಲದಿದ್ದರೆ ಏನೆಲ್ಲ ಅನಾಹುತವಾಗಿಬಿಡಬಹುದು. ‘ಮಾತು ಮನೆ ಕೆಡಿಸಿತು’ ಎಂಬುದು ನಮ್ಮಲ್ಲಿ ಗಾದೆ ಮಾತು. ಒಮ್ಮೆ ಮಾತನಾಡಿದರೆ ಮತ್ತೆ ಅದರ ಪರಿಣಾಮಗಳನ್ನು ನಾವು ಎದುರಿಸಲೇ ಬೇಕಾಗುತ್ತದೆ. ಎಲುಬಿಲ್ಲದ ನಾಲಗೆ ಹೇಗೆ ಬೇಕಾದರೂ ಹೊರಳುತ್ತದೆ. ನಮ್ಮ ಸುತ್ತಮುತ್ತಲಿನ ಅನೇಕರು ಆ ಗುಂಪಿಗೆ ಸೇರುವವರು. ಅವರಿಗೆ ಯಾವ ಬಗೆಯ ನೀತಿ ಸಿದ್ಧಾಂತಗಳೂ ಇಲ್ಲ. ‘ಅಧಿಕಾರ’ (Power) ಮತ್ತು ‘ಭೋಗ’ (Sex) ಇವುಗಳಿಗಾಗಿ ಯಾವ ನೆಲೆಗೆ ಬೇಕಾದರೂ ಇಳಿಯಲು ಸಿದ್ಧರಿರುತ್ತಾರೆ. ಆಡುವ ಮಾತುಗಳಿಗೂ ಮಾಡುವ ಕ್ರಿಯೆಗೂ ಯಾವ ಸಂಬಂಧವೂ ಇರುವುದಿಲ್ಲ. ‘ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬ ಮಾತಿನಂತೆಯೇ ‘ಚೆನ್ನಾಗಿ ಮಾತನಾಡುವವನು ಚಂದ ಮೋಸ ಮಾಡಲೂ ಬಲ್ಲ’ ಎಂಬ ಮಾತೂ ಇದೆ. Words are there to cheat ಎಂಬುದು ಪ್ರಸಿದ್ಧ ಹೇಳಿಕೆ. ಈ ಎಲ್ಲ ಗಮನಿಸಿಯೇ ನಮ್ಮ ದಾಸರು ‘ಆಚಾರವಿಲ್ಲದ ನಾಲಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಗೆ’ ಎಂದು ಹೇಳಿದ್ದು.

ನಾಲಗೆಯ ಇನ್ನೊಂದು ನೆಲೆ ರಸನೆ. ಈ ನಾಲಗೆಯ ರುಚಿ ಇಲ್ಲದಿದ್ದರೆ ನಮ್ಮ ಅನೇಕ ಸಮಸ್ಯೆಗಳು ಬಗೆಹರಿಯುತ್ತಿದ್ದವು ಎಂದು ರಜನಿಯವರು ಹೇಳುತ್ತಿರುತ್ತಾರೆ. ಅವರ ಮಾತುಗಳನ್ನು ತಳ್ಳಿಹಾಕುವಂತಿಲ್ಲ. ಕೆಲವರು ಬದುಕಲಿಕ್ಕಾಗಿ ತಿನ್ನುತ್ತಾರೆ, ಮತ್ತೆ ಕೆಲವರು ಬದುಕಿರುವುದೇ ತಿನ್ನುವುದಕ್ಕಾಗಿ. ನನ್ನ ಗೆಳೆಯನೊಬ್ಬ ದೋಸೆ ತಿನ್ನಲೆಂದೇ ಬೆಂಗಳೂರಿನಿಂದ ಮೈಸೂರಿಗೆ ಹೋಗಿ ಬರುತ್ತಿದ್ದ. ಅದೇನು ಆಶ್ಚರ್ಯ! ತಿನ್ನುವುದಕ್ಕಾಗಿಯೇ ವಿದೇಶಕ್ಕೂ ಹಾರುವವರಿದ್ದಾರೆ ಎನ್ನುವಿರಾ? ನಿಜ, ಅಂಥವರನ್ನೂ ನಾನು ಬಲ್ಲೆ. ಇತ್ತೀಚೆಗೆ ನಗರವಾಸಿಗಳಲ್ಲಿ ಮನರಂಜನೆಯೆಂದರೆ ‘ತಿನ್ನುವುದು’ ಎಂಬಂತಾಗಿದೆ. ಯಾರಾದರೂ ನೆಂಟರು ಮನೆಗೆ ಬಂದರೆ ಅವರನ್ನು ಪ್ರಸಿದ್ಧ ರೆಸ್ಟುರೆಂಟ್​ಗೆ ಕರೆದುಕೊಂಡು ಹೋಗುವುದು ಫ್ಯಾಷನ್ ಆಗಿದೆ. ಇಲ್ಲಿ ಅಮೆರಿಕದಲ್ಲಿ ನನ್ನ ಮಗಳು ಮಾಡಿದ್ದೂ ಅದೇ! ಆದರೆ ಅವಳ ಉದ್ದೇಶ ನನಗೆ ವಿವಿಧ ರುಚಿಗಳನ್ನು ಪರಿಚಯಿಸುವುದು. ಅವಳೂ ಅವರಮ್ಮನ ಹಾಗೆ ರುಚಿಯಾಗಿ ಅಡುಗೆ ಮಾಡುತ್ತಾಳೆ. ಅಡುಗೆ ಮಾಡುವುದೂ ಸೃಜನಶೀಲ ಕಲೆ ಎಂಬುದು ಅವಳ ನಿಲವು.

ಅಮೆರಿಕಕ್ಕೆ ಬಂದ ಭಾರತೀಯರು ಮೊದಲು ಹುಡುಕುವುದು ಇಂಡಿಯನ್ ರೆಸ್ಟುರೆಂಟ್​ಗಳನ್ನು. ನನ್ನ ಮಗಳು ಆ ಸಂಗತಿ ಪ್ರಸ್ತಾಪಿಸಿ, ‘ಅಲ್ಲಿ ಬೆಂಗಳೂರಿನಲ್ಲಿ ಅದೆಲ್ಲ ಸಿಗುವುದಿಲ್ಲವೇ? ಇಡ್ಲಿ, ದೋಸೆ ತಿನ್ನಲು ನೀನು ಇಲ್ಲಿಗೆ ಬರಬೇಕೆ?’ ಎಂದು ಹೇಳಿ ಬೇರೆ ಬೇರೆ ದೇಶದ ರೆಸ್ಟುರೆಂಟ್​ಗಳಿಗೆ ಕರೆದುಕೊಂಡು ಹೋದಳು. ಸ್ಪಾ್ಯನಿಷ್, ಮಂಗೋಲಿಯನ್, ಇಟಾಲಿಯನ್, ಇಥಿಯೋಪಿಯನ್, ಚೈನೀಸ್, ಬರ್ವಿುಸ್, ಜಪಾನೀಸ್ ಹೀಗೆ ಹಲವು ದೇಶಗಳ ಆಹಾರ ಪದಾರ್ಥಗಳ ರುಚಿ ಅನುಭವಿಸಲು ಸಾಧ್ಯವಾಯಿತು.

ರೆಸ್ಟುರೆಂಟಿನ ಹೆಸರು ‘ಹಾಟ್​ಪಾಟ್’. ಅನ್ವರ್ಥ ಹೆಸರು. ಏಕೆಂದರೆ ಇಲ್ಲಿ ಹಾಟ್​ಪಾಟ್​ನಲ್ಲಿಯೇ ಆಹಾರ ಸರ್ವ್ ಮಾಡುವುದು. ಎಲ್ಲ ಕಡೆಯೂ ಸ್ವಾಗತಕಾರಿಣಿಗೆ ಹೆಸರು ಕೊಟ್ಟು ಕಾಯಬೇಕು. ಕಾಯುವುದು ಇಲ್ಲಿ ಒಂದು ರಿಚ್ಯುಯಲ್. ನಮ್ಮ ಸರದಿ ಬಂದಾಗ ಸ್ವಾಗತಕಾರಿಣಿ ಒಂದು ಟೇಬಲ್ ಬಳಿ ಕರೆದುಕೊಂಡು ಹೋದಳು. ನಾವು ವಿಧೇಯ ವಿದ್ಯಾರ್ಥಿಗಳಂತೆ ಅಲ್ಲಿ ಹೋಗಿ ಕುಳಿತುಕೊಂಡೆವು. ನಮ್ಮ ಟೇಬಲ್ ಮೇಲೆ ಬಾನಿಯಂತಹ ಒಂದು ಪಾಟ್ ಇತ್ತು. ಅದರಲ್ಲಿ ಎರಡು ಭಾಗಗಳು. ಎರಡೂ ಕಡೆ ಸೂಪ್ ಎಂಬ ದ್ರವವಿತ್ತು. ಅದರಲ್ಲೊಂದು ಖಾರವಾದದ್ದು. ಮತ್ತೊಂದು ಪ್ಲೇನ್. ಒಬ್ಬಾತ ಬಂದು ಟೇಬಲ್ ಕೆಳಗಿದ್ದ ಸ್ಟೌವ್ ಆನ್ ಮಾಡಿದ. ಸೂಪ್ ಬಿಸಿಯಾಗಿ ಕ್ರಮೇಣ ಕುದಿಯತೊಡಗಿತು. ಅಷ್ಟರಲ್ಲಿ ನನ್ನ ಮಗಳು ಆರ್ಡರ್ ಮಾಡಿದ್ದಳು. ಒಂದಿಷ್ಟು ಸೊಪ್ಪು ತರಕಾರಿ ಆಲೂಗೆಡ್ಡೆ ತಂದಿಟ್ಟರು. ನಾನು ಪ್ರಶ್ನಾರ್ಥಕವಾಗಿ ಅವಳತ್ತ ನೋಡಿದೆ. ಅವಳು ಅವುಗಳನ್ನೆಲ್ಲ ಆ ಬಾನಿಯಲ್ಲಿ ಹಾಕುತ್ತ, ಸ್ವಲ್ಪ ತಡಿ, ಬೇಯಲಿ, ಆಮೇಲೆ ತಿನ್ನೋಣ ಎಂದು ಬೇಯಿಸತೊಡಗಿದಳು. ನನ್ನ ಮೊಮ್ಮಗಳು ಮುದ್ದಾಗಿ ಉಲಿಯುತ್ತ ಆ ಸೊಪ್ಪು ತರಕಾರಿಗಳನ್ನು ನನಗೆ ಪರಿಚಯಿಸಿ ಯಾವುದು ತನಗಿಷ್ಟ ಎಂದು ಹೇಳುತ್ತಿದ್ದಳು. ಪಕ್ಕದ ಟೇಬಲ್ ನೋಡಿದೆ. ತರಕಾರಿಗಳ ಜೊತೆ ಯಾವುದೋ ಮಾಂಸ ಬೇಯುತ್ತಿತ್ತು. ಬಾನಿಯಲ್ಲಿ ಒಂದು ಸೌಟು, ಜಾಲರಿ ಇತ್ತು. ಈಗ ಮಗಳು ಹೇಳಿದಳು: ‘ಸೂಪ್ ಕುಡಿ, ತರಕಾರಿ ತಿನ್ನು’. ಮೊದಲೇ ಹೇಳಿದ ಹಾಗೆ ಅಲ್ಲಿ ಎರಡು ರೀತಿಯ ಹದ. ನಾನು ಕುಡಿಯುತ್ತಲೇ ತಿನ್ನತೊಡಗಿದೆ. ತರಕಾರಿ ಎರಡು ರೀತಿಯ ಸೂಪ್​ನಲ್ಲಿ ಬೆಂದಿದ್ದರಿಂದ ರುಚಿಯಲ್ಲಿ ಭಿನ್ನತೆಯಿತ್ತು. ಸೂಪ್ ಎಷ್ಟು ಬೇಕಾದರೂ ಕುಡಿಯಬಹುದು. ತಂದು ಸುರಿಯುತ್ತಿರುತ್ತಾರೆ. ತರಕಾರಿ ಅಥವಾ ಮಾಂಸ ಆರ್ಡರ್ ಮಾಡಬೇಕು. ನನಗೆ ನಮ್ಮ ಹಳ್ಳಿಯ ಕಲಗಚ್ಚಿನ ಬಾನಿ ನೆನಪಾಯಿತು. ಅಲ್ಲಿಯೂ ನೀರು, ಮಜ್ಜಿಗೆ ಮೊದಲಾದ ದ್ರವದ ಜೊತೆಗೆ ಉಳಿದ ಆಹಾರ ಪದಾರ್ಥಗಳನ್ನು ಹಾಕುತ್ತಾರೆ. ಹಸುಗಳು ಅವುಗಳನ್ನು ಚಪ್ಪರಿಸಿ ತಿಂದು ಕುಡಿಯುತ್ತವೆ. ಇದು ಆಧುನಿಕ ಬಾನಿ.

ಇದು ಇಥಿಯೋಪಿಯನ್ ರೆಸ್ಟುರೆಂಟ್. ಎಲ್ಲವೂ ಯಥಾಪ್ರಕಾರದ ರಿಚ್ಯುಯಲ್. ಇಲ್ಲಿಯ ಸಿಬ್ಬಂದಿ ಮಾತ್ರ ಕಪ್ಪು ಚೆಲುವೆಯರು, ಕಪ್ಪು ಚೆನ್ನಿಗರು. ಆರ್ಡರ್ ಮಾಡಿ ಕಾಯುವವರೆಗೆ ಮಗಳು ಸಂಬುಸಾ ಹೇಳಿದಳು. ಅದು ನಮ್ಮ ಸಮೋಸವೇ. ಅದೇ ಆಕಾರ. ಒಳಗೆ ಹೆಸರುಕಾಳು ಉಸಲಿ ಹಾಕಿ ಡೀಪ್ ಫ್ರೈ ಮಾಡಿದ್ದರು. ಅಷ್ಟರಲ್ಲಿ ಒಂದು ದೊಡ್ಡ ದುಂಡನೆಯ ಟ್ರೇ. ಅದರಲ್ಲಿ ಅದೇ ಆಕಾರಕ್ಕೆ ಅದಕ್ಕಂಟಿದ ಹಾಗೆ ದೋಸೆ. ಅದರ ಮೇಲೆ ನಾಲ್ಕೈದು ರೀತಿಯ ಪರಿಕರಗಳು. ಒಂದು ಗೊಜ್ಜು, ಮತ್ತೊಂದು ಪಲ್ಯ ಇತ್ಯಾದಿ. ಪಕ್ಕದಲ್ಲಿ ಒಂದು ಬೌಲ್​ನಲ್ಲಿ ಸುರುಳಿ ಸುತ್ತಿದ ದೋಸೆ ತುಣುಕುಗಳು. ಇದು ದೋಸೆ ಊಟ. ದೋಸೆ ಆರಿಹೋಗಿತ್ತು. ಸ್ವಲ್ಪ ಹುಳಿಯೂ ಇತ್ತು. ಆದರೂ ಒಂದು ರೀತಿಯ ರುಚಿ ಇತ್ತು. ಆದರೆ ನಮ್ಮ ಬಿಸಿಬಿಸಿ ಮಸಾಲೆದೋಸೆಗೆ ಹೋಲಿಕೆಯುಂಟೇ? ನಾನು ಪಕ್ಕದಲ್ಲಿದ್ದ ಸುರುಳಿ ಸುತ್ತಿದ ದೋಸೆಯ ಬದಲು ಟ್ರೇನಲ್ಲಿದ್ದ ದೋಸೆಯನ್ನು ಅದರ ಮೇಲಿದ್ದ ಗೊಜ್ಜು, ಪಲ್ಯಗಳನ್ನು ಸರಿಸಿ ತಿನ್ನತೊಡಗಿದೆ. ಗೊಜ್ಜು ಪಲ್ಯಗಳ ಸಾರ ಹೀರಿಕೊಂಡಿದ್ದ ಆ ನೆನೆದ ದೋಸೆಗೆ ಬೇರೊಂದು ರೀತಿಯ ರುಚಿ ಇತ್ತು.

ಇನ್ನು ಸ್ಪಾನಿಷ್, ಇಟಾಲಿಯನ್, ಜಪಾನೀಸ್ ಇವುಗಳ ರೀತಿ… ಜಪಾನಿನ ಸುಶಿ ನಮ್ಮ ಅನ್ನದ ಇಡ್ಲಿ ಇದ್ದ ಹಾಗೆ. ಅನ್ನ ಮಾಡಿ, ಕೊಟ್ಟೆಕಡುಬಿನ ಹಾಗೆ ಸುತ್ತಿ, ಒಳಗೆ ತರಕಾರಿ ಸೇರಿಸಿರುತ್ತಾರೆ. ನಾನ್​ವೆಜ್ ಆದರೆ ತರಕಾರಿ ಬದಲಿಗೆ ಮಾಂಸ ಇರುತ್ತದೆ. ಮೊಮೊಸ್ ಸಹ ಇಂಥದೇ ಇನ್ನೊಂದು ಖಾದ್ಯ. ರುಚಿಗೆ ನೀವು ಬೇರೆ ಬೇರೆ ರೀತಿಯ ಸಾಸ್ ಸೇರಿಸಿಕೊಳ್ಳಬೇಕು. ಎಲ್ಲ ಕಡೆಯೂ ತರಕಾರಿ, ಕಾಳುಗಳು, ಅಕ್ಕಿ ಇರುತ್ತದೆ. ಅದರ ಬೇರೆ ಬೇರೆ ಹದಗಳು. ತಿನ್ನುವ ರೀತಿ ಗೊತ್ತಿರಬೇಕಷ್ಟೆ.

ಮನುಷ್ಯನಿಗೆ ಮಾತನಾಡದೆ ಸುಮ್ಮನಿರುವುದು ಕಷ್ಟ. ಹಾಗೆಯೇ ಹೊಟ್ಟೆ ತುಂಬಿದ್ದರೂ, ಅನೇಕ ಸಲ ನಾಲಗೆ ರುಚಿಗಾಗಿ ತಿನ್ನುತ್ತೇವೆ. ಮಾತಿನ ಚಪಲ, ತಿನ್ನುವ ಚಪಲವೇ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗೆಂದು ಮಾತನಾಡುವುದನ್ನು, ತಿನ್ನುವುದನ್ನು ಬಿಡಲಾದೀತೆ? ಆದರೆ ನುಡಿ ನಡೆಯ ಜತೆ ಒಂದಾಗಿ, ರುಚಿ ಅಭಿರುಚಿಯಾದಾಗ ಅದು ಬೇರೆ ನೆಲೆ ಪಡೆದುಕೊಳ್ಳುತ್ತದೆ.

‘ರುಚಿ ಪುರಾಣ’ ಇನ್ನೂ ಸಾಕಷ್ಟಿದೆ. ಯಾವುದೂ ಅತಿಯಾಗಬಾರದು, ಚಪಲವಾಗಬಾರದು. ಈಗ ಇಷ್ಟು, ಮತ್ತೊಮ್ಮೆ ಇನ್ನಷ್ಟು.

(ಲೇಖಕರು ಖ್ಯಾತ ವಿಮರ್ಶಕರು)

Leave a Reply

Your email address will not be published. Required fields are marked *