More

    ಹೀಗೊಂದು ಕೋವಿಡ್ ಕಥನ… ನಿಗೂಢ ಶತ್ರು, ಎಚ್ಚರವಿರಲಿ!: ಸಾಮಯಿಕ ಡಾ.ನರಹಳ್ಳಿ ಅಂಕಣ

    ಹೀಗೊಂದು ಕೋವಿಡ್ ಕಥನ... ನಿಗೂಢ ಶತ್ರು, ಎಚ್ಚರವಿರಲಿ!: ಸಾಮಯಿಕ ಡಾ.ನರಹಳ್ಳಿ ಅಂಕಣಅದೊಂದು ಸುಖೀ ಕುಟುಂಬ. ಹಳ್ಳಿಯಿಂದ ಬಂದು ನಿರಂತರ ಹೋರಾಟದ ಮೂಲಕ ನಗರದಲ್ಲಿ ನೆಮ್ಮದಿಯ ನೆಲೆ ಕಂಡುಕೊಂಡವನು ಆತ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡು ಅಣ್ಣನ ಆಶ್ರಯದಲ್ಲಿ ಬೆಳೆದು, ನಿಷ್ಠೆ, ಪ್ರಾಮಾಣಿಕತೆಗಳಿಂದ ದುಡಿದು ಮೇಲೆ ಬಂದವನು. ಬಾಲ್ಯವೆಲ್ಲ ಹಳ್ಳಿಯಲ್ಲೇ ಕಳೆದದ್ದು. ಕೃಷಿಕ ಕುಟುಂಬದ ಹಿನ್ನೆಲೆಯ ಆತನಿಗೆ ನಾಯಕತ್ವದ ಗುಣವಿತ್ತು. ತಂದೆಯಂತೆಯೇ ಯಾವುದೇ ಕೆಲಸದಲ್ಲಾದರೂ ಮುನ್ನುಗ್ಗುವ ಉತ್ಸಾಹ. ಆ ಹೊತ್ತಿನಲ್ಲಿಯೇ ತಂದೆ ಅನಾರೋಗ್ಯದಿಂದ ತೀರಿಕೊಂಡರು. ನಗರದಲ್ಲಿ ಆಗತಾನೇ ಓದು ಮುಗಿಸಿ ಕೆಲಸಕ್ಕೆ ಸೇರಿದ್ದ ಅಣ್ಣನ ಮೇಲೆ ಕುಟುಂಬದ ಜವಾಬ್ದಾರಿ ಬಿದ್ದಿತ್ತು. ಈತನೂ ಹಳ್ಳಿಯನ್ನು ಬಿಟ್ಟು ನಗರಕ್ಕೆ ಬಂದ.

    ಆತ ಹಳ್ಳಿಯಲ್ಲೇ ಬದುಕು ಕಟ್ಟಿಕೊಳ್ಳುವ ಹಂಬಲದಲ್ಲಿ ಉನ್ನತ ಶಿಕ್ಷಣಕ್ಕೆ ಹೋಗದೆ ಅಣ್ಣನ ಒತ್ತಾಯಕ್ಕೆ ಅಂಚೆಯ ಮೂಲಕ ಶಿಕ್ಷಣ ಮುಂದುವರಿಸಿ, ಪದವೀಧರನಾಗಿದ್ದ. ಆದರೆ ಲೋಕಜ್ಞಾನ ಅಪಾರವಾಗಿತ್ತು. ಅಂಗಡಿಯೊಂದರಲ್ಲಿ ಸಹಾಯಕನಾಗಿ ಕೆಲಸಕ್ಕೆ ಸೇರಿದ. ತೀರಾ ಸಣ್ಣ ಮೊತ್ತದ ಸಂಬಳ. ಸಂಜೆ ಕಾಲೇಜಿನಲ್ಲಿ ಓದು. ಆದರೆ ಆ ಸಣ್ಣ ಕೆಲಸವೇ ಆತನ ಬದುಕಿಗೆ ತಿರುವು ನೀಡಿತು.

    ಇದನ್ನೂ ಓದಿ:  ನಾಗರಹೊಳೆಯಲ್ಲಿ ಏಳು ತಿಂಗಳಿಂದ ಸ್ಥಗಿತಗೊಂಡಿದ್ದ ಸಫಾರಿ ಪುನರಾರಂಭ

    ಅಂಗಡಿಯ ಮಾಲೀಕರು ಸುಸಂಸ್ಕೃತ ಸಜ್ಜನ ಹಿರಿಯ ವ್ಯಕ್ತಿ. ಅವರ ಒಬ್ಬನೇ ಮಗ ಉನ್ನತ ಶಿಕ್ಷಣ ಪಡೆದು ಒಳ್ಳೆಯ ಉದ್ಯೋಗದಲ್ಲಿದ್ದರು. ಹೀಗಾಗಿ ಮಾಲೀಕರು ಈ ಸಹಾಯಕ ಹುಡುಗನನ್ನೇ ತಮ್ಮ ಉತ್ತರಾಧಿಕಾರಿ ಎಂಬಂತೆ ಬಿಂಬಿಸಿ ವ್ಯವಹಾರದ ಸೂಕ್ಷ್ಮಗಳನ್ನೆಲ್ಲ ಕಲಿಸಿಕೊಟ್ಟರು. ಈತನೂ ನಿಷ್ಠೆಯಿಂದ ನಡೆದುಕೊಂಡು ಅವರ ವಿಶ್ವಾಸಕ್ಕೆ ಪಾತ್ರನಾಗಿದ್ದ. ಮಾಲೀಕರು ನಿಧನರಾದ ನಂತರ ಅವರ ಮಗ ಒಂದಷ್ಟು ಹಣ ಪಡೆದು ಅಂಗಡಿಯನ್ನು ಈತನಿಗೇ ಬಿಟ್ಟುಕೊಟ್ಟರು. ವ್ಯಾಪಾರದಲ್ಲಿ ಪಳಗಿದ್ದ ಈತ ತನ್ನ ವ್ಯವಹಾರವನ್ನು ಬಹುಬೇಗ ಅಭಿವೃದ್ಧಿಗೊಳಿಸಿಕೊಂಡ, ಅಣ್ಣ-ಅತ್ತಿಗೆಯ ಸಲಹೆಯಂತೆ ಬದುಕಿನ ಭದ್ರತೆಗೆಂದು ಸರ್ಕಾರಿ ನೌಕರಿಯಲ್ಲಿರುವ ಹುಡುಗಿಯನ್ನು ಮದುವೆಯಾಗಿ ನೆಮ್ಮದಿಯ ಬದುಕು ರೂಪಿಸಿಕೊಂಡ. ಆತನಿಗೆ ಒಬ್ಬನೇ ಮಗ; ಆತನೂ ವಿದ್ಯಾವಂತ; ಇತ್ತೀಚೆಗೆ ಆತನಿಗೆ ಮದುವೆ ಮಾಡಿ ತನ್ನ ಕರ್ತವ್ಯವನ್ನು ನಿರ್ವಹಿಸಿದ ಸಮಾಧಾನದಿಂದ ಇನ್ನು ಬಿಡುವಿಲ್ಲದ ದುಡಿಮೆಯಿಂದ ವಿಶ್ರಾಂತಿ ಪಡೆಯಬಹುದೆಂಬ ಆಲೋಚನೆಯಲ್ಲಿದ್ದ.

    ಇದನ್ನೂ ಓದಿ:  ಶಿರಾದಲ್ಲಿ ಜೆಡಿಎಸ್‌ಗೆ ಸ್ಥಳೀಯ ನಾಯಕರ ಗುಡ್‌ಬೈ: ಬಿಜೆಪಿ-ಕಾಂಗ್ರೆಸ್‌ನತ್ತ ದೌಡು!

    ಒಂದು ಸಂಜೆ ಅಂಗಡಿಯಿಂದ ಮನೆಗೆ ಬಂದವನಿಗೆ ಆಯಾಸವಾಗಿದೆ. ಆ ದಿನ ಅಂಗಡಿಯಲ್ಲಿ ಹೆಚ್ಚು ರಷ್ ಇತ್ತು. ಹೀಗಾಗಿ ಆಯಾಸವಾಗಿದೆ ಎಂದು ಸುಮ್ಮನಾದ. ಮಾರನೆಯ ದಿನ ಮೈಕೈನೋವು ಕಾಣಿಸಿಕೊಂಡಿದೆ. ಅಂದೂ ಅಂಗಡಿಯಲ್ಲಿ ರಷ್ ಇದ್ದುದರಿಂದ ಮತ್ತಷ್ಟು ಆಯಾಸವಾಯಿತು. ರೆಸ್ಟ್ ತೆಗೆದುಕೊಂಡರೆ ಸರಿಹೋಗುತ್ತದೆಂದುಕೊಂಡ. ಮಾರನೆಯ ದಿನ ಅಂಗಡಿಯಲ್ಲಿ ಕುಳಿತುಕೊಳ್ಳುವುದೂ ಕಷ್ಟವಾಗಿದೆ. ಪರಿಚಿತ ಡಾಕ್ಟರನ್ನು ಸಂರ್ಪಸಿ, ಮಾತ್ರೆ ತೆಗೆದುಕೊಂಡಿದ್ದಾನೆ. ಸಂಜೆ ಮನೆಗೆ ಬರುವಷ್ಟರಲ್ಲಿ ಮೈ ಬೆಚ್ಚಗಾಗಿತ್ತು. ಮಗ ಆತಂಕಗೊಂಡು ಕೋವಿಡ್ ಟೆಸ್ಟ್ ಮಾಡಿಸಿದ್ದಾನೆ. ಪಾಸಿಟಿವ್ ಬಂದಿದೆ. ತಕ್ಷಣ ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾನೆ. ಮನೆಯವರೆಲ್ಲರೂ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಆತನ ಹೆಂಡತಿಗೆ ಪಾಸಿಟಿವ್ ಬಂದಿದೆ. ಮಗ ಸೊಸೆಗೆ ನೆಗೆಟಿವ್ ಬಂದಿದೆ. ಆಸ್ಪತ್ರೆಯಲ್ಲಿದ್ದ ಅಪ್ಪನಿಗೆ ಉಸಿರಾಟದ ಸಮಸ್ಯೆ ಶುರುವಾಗಿದೆ. ಆ ಆಸ್ಪತ್ರೆಯಲ್ಲಿ ಹೆಚ್ಚಿನ ವ್ಯವಸ್ಥೆ ಇರಲಿಲ್ಲ, ತಕ್ಷಣ ಅನೇಕ ಒಳ್ಳೆಯ ಆಸ್ಪತ್ರೆಗಳನ್ನು ಸಂರ್ಪಸಿದ್ದಾನೆ. ಎಲ್ಲರದೂ ಒಂದೇ ಉತ್ತರ- ಬೆಡ್ ಇಲ್ಲ. ಕಡೆಗೆ ಪರಿಚಿತರಿಂದ ಶಿಫಾರಸು ಮಾಡಿಸಿ ಒಳ್ಳೆಯ ಆಸ್ಪತ್ರೆಗೆ ತಂದೆ ತಾಯಿ ಇಬ್ಬರನ್ನೂ ಸೇರಿಸಿದ್ದಾನೆ.

    ಇದನ್ನೂ ಓದಿ:  ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಭಾರಿ ಮಳೆ! ಯಾವ್ಯಾವ ಭಾಗದಲ್ಲಿ? ಇಲ್ಲಿದೆ ಮಾಹಿತಿ…

    ವಿಷಯ ತಿಳಿದ ಹತ್ತಿರದ ಬಂಧುಗಳಿಗೆ ಅವರನ್ನು ನೇರ ಸಂರ್ಪಸಿ ಮಾತನಾಡಲು ಆತಂಕ. ಏಕೆಂದರೆ ಮಗ ಸೊಸೆ ಪ್ರೈಮರಿ ಕಾಂಟ್ಯಾಕ್ಟ್ ಆದ್ದರಿಂದ ಅವರಿಂದ ಉಳಿದವರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಏನಿದ್ದರೂ ಫೋನಿನಲ್ಲಿಯೇ ಮಾತುಕತೆ, ಸಂತೈಸುವಿಕೆ. ಅವರು ಸೇರಿದ್ದ ವಾರ್ಡಿಗೂ ಯಾರಿಗೂ ಪ್ರವೇಶವಿಲ್ಲ. ಅವರನ್ನು ನೋಡುವ ಹಾಗಿಲ್ಲ, ಧೈರ್ಯ ಹೇಳಿ ಸಮಾಧಾನ ಮಾಡುವ ಅವಕಾಶವಿಲ್ಲ. ಅಲ್ಲಿಯ ಡಾಕ್ಟರು ದಿನಕ್ಕೆರಡು ಬಾರಿ ದೂರವಾಣಿ ಮೂಲಕ ವಿಷಯ ತಿಳಿಸುತ್ತಿದ್ದರು, ಅದೂ ಮಗನಿಗೆ ಮಾತ್ರ.

    ಇದನ್ನೂ ಓದಿ:  ಕರೊನಾ ಎಫೆಕ್ಟ್: ಪ್ರಥಮ ಪಿಯು ವಿದ್ಯಾರ್ಥಿಗಳೆಲ್ಲರೂ ಪಾಸ್!

    ಆಸ್ಪತ್ರೆಗೆ ಸೇರಿದ ಆತನ ಸ್ಥಿತಿ ಹೇಗಿದೆ? ಸರಿಯಾದ ಟ್ರೀಟ್​ವೆುಂಟ್ ಸಿಗುತ್ತಿದೆಯೇ, ಆಸಕ್ತಿಯಿಂದ ನೋಡಿಕೊಳ್ಳುತ್ತಿದ್ದಾರೆಯೇ ಎಂಬುದರ ಬಗ್ಗೆ ಯಾರಿಗೂ ನೇರವಾದ ಖಚಿತ ಮಾಹಿತಿಯಿಲ್ಲ. ಆಸ್ಪತ್ರೆಯ ಆಡಳಿತ ಮಂಡಲಿಯ ಅಧಿಕಾರಿಗಳೊಂದಿಗೆ ಗೆಳೆಯರ ಮೂಲಕ ಸಂಪರ್ಕ ಸಾಧಿಸಿ, ಜೋಪಾನವಾಗಿ ನೋಡಿಕೊಳ್ಳಬೇಕೆಂದು ಶಿಫಾರಸು ಮಾಡಿಸಲಾಯಿತು. ಸೇರಿದ ಮೊದಲೆರಡು ದಿನ ಆತ ಮಗನೊಂದಿಗೆ ಫೋನಿನಲ್ಲಿ ಮಾತನಾಡಿ ಸುಧಾರಿಸಿಕೊಳ್ಳುತ್ತಿರುವುದಾಗಿ ಹೇಳುತ್ತಿದ್ದ.

    ಇದನ್ನೂ ಓದಿ:  ಅವಿವಾಹಿತರೇ ಜೀವದ ಬಗ್ಗೆ ಇರಲಿ ಎಚ್ಚರ…!

    ನಾಲ್ಕನೆಯ ದಿನ ಡಾಕ್ಟರು ದೂರವಾಣಿ ಕರೆ ಮಾಡಿ ಐಸಿಯುಗೆ ಶಿಫ್ಟ್ ಮಾಡುತ್ತಿದ್ದೇವೆ, ಆತಂಕವಿಲ್ಲ, ಹೆಚ್ಚಿನ ನಿಗಾ ವಹಿಸಬೇಕಾಗಿದೆ ಎಂದರು. ಏನಾಗಿದೆ, ಯಾಕೆ ಐಸಿಯುಗೆ ಶಿಫ್ಟ್ ಮಾಡುತ್ತಿದ್ದಾರೆ ಎಂಬುದರ ಖಚಿತ ಮಾಹಿತಿ ದೊರಕುತ್ತಿರಲಿಲ್ಲ. ಉಸಿರಾಟದ ಸಮಸ್ಯೆ ಇದೆ ಎಂದು ಗೊತ್ತಾಯಿತು. ಡಾಕ್ಟರುಗಳೂ ಒತ್ತಡದಲ್ಲಿದ್ದರು.

    ಇದನ್ನೂ ಓದಿ:  ಒಂದೂಮುಕ್ಕಾಲು ವರ್ಷದ ಹುಡುಗನಿಂದ 5 ದಾಖಲೆ; ಅಬ್ಬಬ್ಬಾ.. ಏನು ನೆನಪಿನ ಶಕ್ತಿ?!

    ಆತನಿಗೆ ಮಧುಮೇಹವಿದ್ದರೂ ನಿಯಂತ್ರಣದಲ್ಲಿತ್ತು. ಮಧುಮೇಹ ಕ್ರಮೇಣ ದೇಹದ ಉಳಿದ ಅಂಗಾಂಗಗಳನ್ನು ದುರ್ಬಲಗೊಳಿಸುತ್ತದೆ, ಆದ್ದರಿಂದ ಸಮಸ್ಯೆಯಾಗುತ್ತಿದೆ ಎಂಬ ಮಾಹಿತಿ ದೊರಕಿತು. ಮೊದಲೆರಡು ದಿನಗಳ ನಂತರ ಆತನೊಡನೆ ನೇರ ಸಂಪರ್ಕ ತಪ್ಪಿಹೋಗಿತ್ತು. ಮತ್ತೊಂದು ಕಡೆ ಆತನ ಹೆಂಡತಿಯೂ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತ ಗುಣಮುಖರಾಗುತ್ತಿದ್ದರು. ಆತನ ಹತ್ತಿರದ ಸಂಬಂಧಿ ವೈದ್ಯನಾಗಿದ್ದರೂ ಆತನೂ ಅಸಹಾಯಕನಾಗಿದ್ದ. ಭರವಸೆ ನೀಡುವುದಷ್ಟೇ ಆತನಿಗೆ ಸಾಧ್ಯವಿದ್ದದ್ದು.

    ಇದನ್ನೂ ಓದಿ:  ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ ಸ್ವಿಯಾಟೆಕ್, ಚೊಚ್ಚಲ ಗ್ರಾಂಡ್ ಸ್ಲಾಂ ಸಂಭ್ರಮ

    ಐದನೆಯ ದಿನ ಡಾಕ್ಟರು ಕರೆಮಾಡಿ ಪರಿಸ್ಥಿತಿ ಗಂಭೀರವಾಗಿದೆ, ಇಂಜೆಕ್ಷನ್ ನೀಡಬೇಕಾಗಿದೆ ಅನುಮತಿ ಬೇಕೆಂದು ಕೇಳಿದರು. ಆಗ ಎಲ್ಲರಿಗೂ ಆತಂಕ. ಆ ವೇಳೆಗಾಗಲೇ ವೆಂಟಿಲೇಟರ್ ವ್ಯವಸ್ಥೆ ಮಾಡಿದ್ದರೆಂಬ ಮಾಹಿತಿ. ಎಲ್ಲವೂ ಮಾಹಿತಿಗಳೇ! ಒಳಗೆ ಏನಾಗುತ್ತಿದೆ ಎಂಬುದು ಮಾತ್ರ ನಿಗೂಢ ರಹಸ್ಯವಾಗಿಯೇ ಇತ್ತು. ಆ ಸಂಜೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿ ಪ್ಲಾಸ್ಮಾ ಚಿಕಿತ್ಸೆಯನ್ನೂ ನೀಡಲಾಯಿತು. ಆ ದಿನ ಜೋರು ಮಳೆ. ಆ ಮಳೆಯಲ್ಲಿಯೇ ಮಗ ಎಲ್ಲ ಕಡೆ ಸಂರ್ಪಸಿ, ಓಡಾಡಿ, ಪ್ಲಾಸ್ಮಾ ಒದಗಿಸಿದ್ದ. ನಡುರಾತ್ರಿಯವರೆಗೆ ಆಸ್ಪತ್ರೆಯ ಹೊರಗೆ ಕಾರಿನಲ್ಲಿಯೇ ಕುಳಿತು ಮಾಹಿತಿ ಪಡೆಯುವ ಪ್ರಯತ್ನ ಮಾಡುತ್ತಲೇ ಇದ್ದ.
    ಮಾರನೆಯ ದಿನ ಮಗ ಆಸ್ಪತ್ರೆಗೆ ಹೋಗುವ ಸಿದ್ಧತೆಯಲ್ಲಿದ್ದ. ಆಸ್ಪತ್ರೆಗೆ ಹೋಗುವುದೆಂದರೆ ಅಲ್ಲಿಯ ಹೊರಾವರಣದಲ್ಲಿ ಭರವಸೆಯ ನಿರೀಕ್ಷೆಯಲ್ಲಿ ಕಾಯುತ್ತ ಕೂರುವುದು. ಅಷ್ಟರಲ್ಲಿ ಡಾಕ್ಟರ ಕರೆ ಬಂತು. ಅದು ಭರವಸೆಯ ಕರೆಯಾಗಿರಲಿಲ್ಲ. ಆಸ್ಪತ್ರೆಗೆ ಓಡಿದ. ಅವರು ನೀಡಿದ ಸುದ್ದಿ ಆತನ ಜಂಘಾಬಲವನ್ನೇ ಉಡುಗಿಸಿತು.

    ಇದನ್ನೂ ಓದಿ:  ಕರೊನಾ ಬುಲೆಟಿನ್​: ಸತತ ನಾಲ್ಕನೇ ದಿನವೂ 10 ಸಾವಿರಕ್ಕೂ ಅಧಿಕ ಸೋಂಕು!

    ಹತ್ತಿರದ ಬಂಧುಗಳು ಬಂದರು. ನಿಜವಾದ ಸಮಸ್ಯೆಯೆಂದರೆ ಅಂತಿಮದರ್ಶನಕ್ಕಾದರೂ ಅವಕಾಶ ಬೇಕಿತ್ತು. ಅದೇ ಆಸ್ಪತ್ರೆಯಲ್ಲಿದ್ದ ಹೆಂಡತಿಗೆ ವಿಷಯ ತಿಳಿಸಬೇಕು; ಆದರೆ ಆಕೆಯನ್ನು ಅಲ್ಲಿ ಯಾರು ಸಮಾಧಾನಪಡಿಸಬೇಕು? ದುಃಖದಲ್ಲಿ ಪಾಲ್ಗೊಳ್ಳಲೂ ಅವಕಾಶವಿಲ್ಲದ ಪರಿಸ್ಥಿತಿ. ಆಕೆ ಕೋವಿಡ್ ವಾರ್ಡಿನಿಂದ ಹೊರಬರುವಂತಿಲ್ಲ. ಹೇಗೋ ಅಲ್ಲಿಯೇ ಆಕೆಗೆ ಅಂತಿಮದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಐದಾರು ದಿನಗಳ ಹಿಂದೆ ಆರೋಗ್ಯವಾಗಿದ್ದ ಗಂಡನ ಕಳೇಬರವನ್ನು ಆಕೆ ಆಪ್ತರು ಯಾರೂ ಜೊತೆಯಿಲ್ಲದೆ ಏಕಾಂಗಿಯಾಗಿ ನೋಡಬೇಕಾದ ಪರಿಸ್ಥಿತಿಯೇ ಹೃದಯ ತಟ್ಟುವಂಥದು.

    ಇದನ್ನೂ ಓದಿ:  ಮದ್ಯದಂಗಡಿ ಓಪನ್​, ಸಾಂತ್ವನ ಕೇಂದ್ರ ಕ್ಲೋಸ್​!- ಇದ್ಯಾವ ನ್ಯಾಯ? ಎಚ್​ಡಿಕೆ ಪ್ರಶ್ನೆ

    ಆತ ಎಲ್ಲರಿಗೂ ಬೇಕಾದವನಾಗಿದ್ದ. ಸಂಬಂಧದವರ ಯಾರ ಮನೆಯಲ್ಲಿ ಯಾವುದೇ ಶುಭ ಅಶುಭ ಇರಲಿ, ಮುಂದೆ ನಿಂತು ಜವಾಬ್ದಾರಿ ತೆಗೆದುಕೊಂಡು ನಿರ್ವಹಿಸುತ್ತಿದ್ದ. ಹೀಗಾಗಿ ಆತನಿದ್ದಾನೆ ಎಂದರೆ ಉಳಿದವರಿಗೆ ನಿರಾಳ. ಆದರೆ ಈಗ ಆತನ ಅಂತ್ಯಸಂಸ್ಕಾರಕ್ಕೆ ಯಾರೂ ಬರುವ ಹಾಗಿಲ್ಲ. ಅದು ನಿಯಮ; ಬಂದರೆ ಅವರಿಗೆ ಅಪಾಯ.

    ಇದನ್ನೂ ಓದಿ:  ಗಡಿಯಲ್ಲಿ ಚೀನಾ ಯೋಧರ ಜಮಾವಣೆ: ಪ್ರತೀಕಾರಕ್ಕೆ ಭಾರತವೂ ಸನ್ನದ್ಧ

    ತಾಯಿ ಆಸ್ಪತ್ರೆಯಲ್ಲಿ; ಹೆಂಡತಿ ಮನೆಯಲ್ಲಿ; ಬಂಧುಗಳು ದೂರದಲ್ಲಿ. ಒಂದಿಬ್ಬರು ಮಾತ್ರ ಹತ್ತಿರದಲ್ಲಿ. ಇದು ಮಗನ ಪರಿಸ್ಥಿತಿ. ಸಂಸ್ಕಾರ ಮುಗಿಸಿ ಮನೆಗೆ ಹೋದರೆ ಅಲ್ಲಿ ಹೆಂಡತಿಯನ್ನು ಬಿಟ್ಟು ಯಾರೂ ಇಲ್ಲ. ಯಾರೂ ಆ ಮನೆಗೆ ಬರುವಂತಿಲ್ಲ. ದುಃಖವನ್ನು ಯಾರೊಡನೆ ಹಂಚಿಕೊಳ್ಳುವುದು? ಹೇಗೆ ತಾಳಿಕೊಳ್ಳುವುದು? ಈ ಅನಿರೀಕ್ಷಿತ ಆಘಾತದಿಂದ ಚೇತರಿಸಿಕೊಳ್ಳುವ ಹಾದಿಯಾದರೂ ಯಾವುದು? ಸಹಜೀವಿಗಳ ಸಮಾಧಾನದ ಆಸರೆಯೂ ಇಲ್ಲದೆ ಏಕಾಂಗಿಯಾಗಿ ಇದನ್ನೆಲ್ಲ ಸಹಿಸಬೇಕಾದ ಸನ್ನಿವೇಶವನ್ನು ಈ ಸಂದರ್ಭ ಸೃಷ್ಟಿಸಿದೆ.

    ಇದನ್ನೂ ಓದಿ:  ದೇವೇಗೌಡರ ಪಾರ್ಟಿ ಸೇರಿಕೋ ಅಂತ ಸಿ.ಟಿ. ರವಿಗೆ ಹೇಳಿದ್ದರಂತೆ ಅವರ ತಂದೆ!

    ಇದು ಹೊರಗಿನ ಪರಿಸ್ಥಿತಿ; ತನ್ನ ಬದುಕಿನ ಕಡೆಯಲ್ಲಿದ್ದೇನೆಂದು ಅರಿವಾದಾಗ ಆತನ ಮನಃಸ್ಥಿತಿ ಹೇಗಿರಬೇಕು? ಕುಟುಂಬದವರ ಯಾರ ಜೊತೆಯೂ ಸಂಪರ್ಕವಿಲ್ಲ, ನೋಡುವ ಹಾಗಿಲ್ಲ, ಭಾವನೆಗಳನ್ನು ಹಂಚಿಕೊಳ್ಳುವಂತಿಲ್ಲ, ಯಾವ ಬಗೆಯ ಸಂವಹನಕ್ಕೂ ಅವಕಾಶವಿಲ್ಲದೆ ಬದುಕಿಗೆ ವಿದಾಯ ಹೇಳುವ ಆ ಸ್ಥಿತಿಯನ್ನು ಊಹಿಸುವುದೂ ಕಷ್ಟ. ಹುಷಾರಾಗಿ ಮನೆಗೆ ಹಿಂತಿರುಗುತ್ತೇನೆಂದು ಹೋದವನು ಹೀಗೆ ಅನಾಥನಂತೆ ಅಗಲಬೇಕಾದ ಸಂದರ್ಭ ಕರುಳು ಕಲಕುತ್ತದೆ.

    ಇದನ್ನೂ ಓದಿ: ಅ.12 ರಿಂದ 14ರವರೆಗೆ ತೋಟಗಳಿಗೆ ಕಾಫಿ ಮಂಡಳಿ ಸಿಇಒ ಭೇಟಿ

    ಆತನನ್ನು ಹೀಗಾಗುವ ಕೆಲ ದಿನಗಳ ಮೊದಲು ನಾನು ಭೇಟಿಯಾಗಿದ್ದೆ. ಲವಲವಿಕೆಯಿಂದಲೇ ಇದ್ದ. ಒಟ್ಟಿಗೇ ಊಟ ಮಾಡಿದ್ದೆವು. ಅನಾರೋಗ್ಯದ ಯಾವ ಸೂಚನೆಯೂ ಇರಲಿಲ್ಲ. ನಾನು ಎಂದಿನಂತೆ ‘ಇದುವರೆಗೆ ದುಡಿದದ್ದು ಸಾಕು, ಇನ್ನಾದರೂ ಸ್ವಲ್ಪ ಬಿಡುವು ಮಾಡಿಕೋ’ ಎಂದು ಸೂಚಿಸಿದ್ದೆ. ಆಗ ಆತ ವ್ಯವಹಾರವನ್ನು ಕ್ರಮೇಣ ಕಡಿಮೆ ಮಾಡಿಕೊಂಡು, ಈ ಒತ್ತಡದಿಂದ ಬಿಡುಗಡೆ ಪಡೆದು ವಿಶ್ರಾಂತ ಜೀವನ ನಡೆಸುವ ಅಪೇಕ್ಷೆ ವ್ಯಕ್ತಪಡಿಸಿದ್ದ. ಆದರೆ ಹೀಗೆ ಚಿರವಿಶ್ರಾಂತಿಗೆ ಜಾರಬಹುದೆಂದು ಯಾರು ಭಾವಿಸಿದ್ದರು!
    ಆತ ಆಯಾಸವೆಂದ ಐದಾರು ದಿನಗಳಲ್ಲಿಯೇ ಈ ಎಲ್ಲವೂ ಸಂಭವಿಸಿದ್ದು. ಬಹುಶಃ ಆತ ಮೊದಲೆರಡು ದಿನಗಳು ನಿರ್ಲಕ್ಷಿಸಿದ್ದು ಇದಕ್ಕೆ ಕಾರಣವಾಯಿತೇ? ನನ್ನ ಅನೇಕ ಪರಿಚಿತರು ಈ ಕೋವಿಡ್​ನಿಂದ ಪಾರಾಗಿ ಬಂದಿರುವುದು ನನಗೆ ಗೊತ್ತು. ಆತನೂ ಎಲ್ಲರನ್ನೂ ಹೀಗೆ ಭಯ ಪಡಿಸುವಷ್ಟು ಇದು ಗಂಭೀರವೇ ಎಂದು ಕೇಳಿದ್ದ. ಹತ್ತಿರದ ಬಂಧುವೊಬ್ಬರು ಸಮಾರಂಭ ಏರ್ಪಡಿಸಿದಾಗ ತಾನೇ ದೇಹದ ಉಷ್ಣಾಂಶವನ್ನು ಅಳೆಯುವ ಯಂತ್ರವನ್ನು ಅವರಿಗೆ ಒದಗಿಸಿ, ಬಂದವರನ್ನು ಪರೀಕ್ಷಿಸಿಯೇ ಒಳಬಿಡಬೇಕೆಂದು ಎಚ್ಚರ ವಹಿಸಿದ್ದ. ಉಳಿದವರ ಬಗ್ಗೆ ಇಷ್ಟೆಲ್ಲ ಕಾಳಜಿ ವಹಿಸಿದವನು ತನ್ನನ್ನು ತಾನೇ ನಿರ್ಲಕ್ಷಿಸಿದನೇ?

    ಇದನ್ನೂ ಓದಿ:  ದೇವೇಗೌಡರಿಗೆ ಟಾಂಗ್ ಕೊಟ್ರು ಕುಮಾರಸ್ವಾಮಿ

    ರೋಗ ಸಂಪರ್ಕಕ್ಕೆ ಒಳಗಾದವರ ಸಂಖ್ಯೆ, ಗುಣಮುಖರಾದವರ ಸಂಖ್ಯೆ, ಸಾವಿಗೊಳಗಾದವರ ಸಂಖ್ಯೆ ಇವನ್ನೆಲ್ಲ ಪ್ರತಿನಿತ್ಯ ನೋಡುತ್ತಿರುತ್ತೇವೆ, ಓದುತ್ತಿರುತ್ತೇವೆ. ಆದರೆ ಅವೆಲ್ಲ ನಮಗೆ ಸುದ್ದಿ. ಆರಂಭದ ದಿನಗಳ ಎಚ್ಚರ, ಆತಂಕ ಮರೆಯಾಗಿ ನಾವು ಎಂದಿನ ಬದುಕಿನ ಲಯಕ್ಕೆ ಒಗ್ಗಿಹೋಗುತ್ತಿದ್ದೇವೆ. ಆದರೆ ಕೋವಿಡ್ ಮೊದಲಿಗಿಂತ ಭೀಕರವಾಗಿ ಅಟ್ಟಹಾಸಗೈಯುತ್ತಿದೆ. ಹಣ, ಅಧಿಕಾರ, ಪ್ರಭಾವ ಎಲ್ಲವೂ ಇಲ್ಲಿ ನಿರುಪಯುಕ್ತ. ವೈಯಕ್ತಿಕ ಎಚ್ಚರ ಅತ್ಯಗತ್ಯ. ಮನೆಯಂಗಳಕ್ಕೆ ಕರೊನಾ ಕಾಲಿಟ್ಟಾಗಲೇ ಅದರ ಭೀಕರ ಪರಿಣಾಮ ಅನುಭವಕ್ಕೆ ಬರುವಂಥದು. ಇದು ರೋಗ ಮಾತ್ರವಲ್ಲ, ನಮ್ಮ ಭಾವಜಗತ್ತನ್ನು ಅಲ್ಲೋಲಕಲ್ಲೋಲಗೊಳಿಸುವ, ಬದುಕಿನ ಲಯವನ್ನೆ ಹದಗೆಡಿಸುವ ನಿಗೂಢ ಶತ್ರು. ಜೊತೆಗಿರುವವರು ಇದ್ದಕ್ಕಿದ್ದಂತೆ ಬದುಕಿನಿಂದಲೇ ಕಣ್ಮರೆಯಾಗುವ ದುರಂತ.
    ಆತ ನಾನು ಗಾಢವಾಗಿ ಪ್ರೀತಿಸುತ್ತಿದ್ದ, ನನ್ನ ಕಣ್ಣೆಚ್ಚರದಲ್ಲಿ ಬೆಳೆದ, ನನಗೆ ಶಕ್ತಿಯಾಗಿದ್ದ ನನ್ನ ತಮ್ಮ ಸೋಮೇಶ ನರಹಳ್ಳಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts