ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಆಶಿಸುತ್ತೇನೆ: ಮುಲಾಯಂ ಸಿಂಗ್​ ಯಾದವ್​

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಅವಧಿಗೆ ಪ್ರಧಾನ ಮಂತ್ರಿಯಾಗಲಿ ಎಂದು ಆಶಿಸುತ್ತೇನೆ ಎಂದು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್​ ಯಾದವ್​ ಅವರು ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಬಜೆಟ್​ ಅಧಿವೇಶನ ಪ್ರಸಕ್ತ ಲೋಕಸಭೆಯ ಕೊನೆಯ ಅಧಿವೇಶನವಾಗಿರುವ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಮಾತನಾಡಿದ ಮುಲಾಯಂ ಸಿಂಗ್​ ಅವರು ಪ್ರಧಾನ ಮಂತ್ರಿಗಳು ಕಳೆದ ಐದು ವರ್ಷಗಳಲ್ಲಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಲು ಪ್ರಯತ್ನಿಸಿದರು. ನಾನು ಈ ಸದನದ ಎಲ್ಲಾ ಸದಸ್ಯರು ಮತ್ತೊಮ್ಮೆ ಗೆದ್ದು ಬರಲಿ ಎಂದು ಆಶಿಸುತ್ತೇನೆ. ಹಾಗೆಯೇ ನರೇಂದ್ರ ಮೋದಿ ಅವರೂ ಗೆದ್ದು ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಆಶಿಸುತ್ತೇನೆ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ನರೇಂದ್ರ ಮೋದಿ ಅವರು ಮುಂದಿನ ಚುನಾವಣೆಗಾಗಿ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕಿದೆ. ಮುಲಾಯಂ ಸಿಂಗ್​ ಅವರು ನನಗೆ ಆಶೀರ್ವಾದ ನೀಡಿದ್ದಾರೆ. ನಾನು ಅವರಿಗೆ ಆಭಾರಿಯಾಗಿರುತ್ತೇನೆ ಎಂದು ತಿಳಿಸಿದರು.

ಮುಲಾಯಂ ಸಿಂಗ್​ ಅವರ ಪುತ್ರ ಅಖಿಲೇಶ್​ ಯಾದವ್​​ ಮತ್ತು ಬಿಎಸ್​ಪಿಯ ಮಾಯಾವತಿ ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಲು ಸಕಲ ಸಿದ್ಧತೆ ನಡೆಸಿದ್ದು, ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದಾರೆ. ಕಳೆದ ಬಾರಿ ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಸೀಟು ಗಳಿಸಿದ್ದ ಬಿಜೆಪಿಯನ್ನು ಕಟ್ಟಿಹಾಕಲು ಉಭಯ ನಾಯಕರು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್​ ಸಹ ಪ್ರಿಯಾಂಕ ವಾದ್ರಾ ಸಾರಥ್ಯದಲ್ಲಿ ಹೊಸ ಹುರುಪಿನೊಂದಿಗೆ ತಮ್ಮ ಕಾರ್ಯತಂತ್ರವನ್ನು ಹೆಣೆಯುತ್ತಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *