ಕೆಸಿಆರ್​ಗೆ ಜೈ ಎಂದ ಅಖಿಲೇಶ್​: ಬಿಜೆಪಿ ವಿರುದ್ಧದ ಮೈತ್ರಿಕೂಟದಲ್ಲೇ ಈಗ ಎರಡು ಭಾಗ

ದೆಹಲಿ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್​ ಪಕ್ಷವೂ ಸೇರಿದಂತೆ ವಿಪಕ್ಷಗಳೆಲ್ಲವೂ ಮಹಾ ಮೈತ್ರಿಕೂಟ ರಚಿಸಿಕೊಳ್ಳುತ್ತಿರುವಾಗಲೇ, ತೆಲಂಗಾಣದ ಸಿಎಂ ಕೆ.ಚಂದ್ರಶೇಖರ್​ ರಾವ್​ ಅವರು ಕಾಂಗ್ರೆಸ್​, ಬಿಜೆಪಿಯೇತರ ಮೈತ್ರಿಕೂಟ ಸಂಘಟಿಸುತ್ತಿದ್ದಾರೆ. ಈ ಮೈತ್ರಿಗೆ ಉತ್ತರಪ್ರದೇಶದ ಎಸ್​ಪಿ, ಬಿಎಸ್​ಪಿಗಳು ಸೇರಬಹುದು ಎಂಬ ಊಹಾಪೋಹಗಳ ನಡುವೆಯೇ ಎಸ್​ಪಿಯ ವರಿಷ್ಠ ಅಖಿಲೇಶ್​ ಯಾದವ್​ ಕೆಸಿಆರ್​ ಅವರನ್ನು ಹಾಡಿ ಹೊಗಳಿದ್ದಾರೆ.

ಬಿಜೆಪಿ ವಿರುದ್ಧದ ಮೈತ್ರಿಕೂಟ ಎರಡು ಭಾಗವಾಗುತ್ತಿರುವ ಈ ಹೊತ್ತಿನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಎಸ್​ಪಿ ವರಿಷ್ಠ ಅಖಿಲೇಶ್​, “ವಿಪಕ್ಷಗಳನ್ನೆಲ್ಲವೂ ಒಂದೇ ವೇದಿಕೆಗೆ ತರುವ ಪ್ರಯತ್ನಗಳು ಹಲವು ತಿಂಗಳಿನಿಂದಲೂ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿರುವ ತೆಲಂಗಾಣದ ಸಿಎಂ ಚಂದ್ರಶೇಖರ್​ ರಾವ್​ ಅವರನ್ನು ನಾನು ಅಭಿನಂದಿಸುತ್ತೇನೆ. ಕೆಸಿಆರ್​ ಫೆಡರಲ್​ ಫ್ರಂಟ್​ ಎಂಬ ಪ್ರತ್ಯೇಕ ಕೂಟವನ್ನು ರಚಿಸಲು ಪ್ರಯತ್ನಿಸುತ್ತಿದ್ದಾರೆ. ಇದೇ ವಿಚಾರವಾಗಿ ನಾನು ಹೈದರಾಬಾದ್​ಗೆ ತೆರಳಿ ಅವರೊಂದಿಗೆ ಚರ್ಚೆ ನಡೆಸುತ್ತೇನೆ,” ಎಂದು ಹೇಳಿದ್ದಾರೆ.


https://twitter.com/ANI/status/1077863292444393478

ವರ್ಷದ ಹಿಂದೆ ಕಾಂಗ್ರೆಸ್​ ಜತೆಗೆ ಮೈತ್ರಿ ಮಾಡಿಕೊಳ್ಳುವ ಇರಾದೆಯಲ್ಲಿದ್ದ ಎಸ್ಪಿ ಮತ್ತು ಬಿಎಸ್​ಪಿ ಪಕ್ಷಗಳು ಈಗ ಪ್ರಧಾನಿ ಹುದ್ದೆಯ ಕಾರಣಕ್ಕಾಗಿಯೋ ಅಥವಾ ಉತ್ತರ ಪ್ರದೇಶದ ಸೀಟು ಹಂಚಿಕೆಯ ಕಾರಣಕ್ಕೋ ಕಾಂಗ್ರೆಸ್​ನೊಂದಿಗೆ ಅಷ್ಟಾಗಿ ಗುರುತಿಸಿಕೊಳ್ಳುತ್ತಿಲ್ಲ. ಇದೇ ಹೊತ್ತಿನಲ್ಲಿ ಕಾಂಗ್ರೆಸ್​, ಬಿಜೆಪಿಯೇತರ ಮೈತ್ರಿಕೂಟ ರಚನೆಯಲ್ಲಿ ತೊಡಗಿರುವ ಕೆಸಿಆರ್​ ಅವರ ಸ್ನೇಹ ಉತ್ತರಪ್ರದೇಶದ ಈ ಎರಡೂ ಪ್ರಬಲ ಪಕ್ಷಗಳಿಗೆ ಹತ್ತಿರವಾಗುತ್ತಿದೆ. ಅವರ ನಡುವಿನ ಇತ್ತೀಚಿನ ಹಲವು ಭೇಟಿ ಮಾತುಗಳೂ ಅದನ್ನು ಸಾಬೀತು ಮಾಡುತ್ತಿವೆ.

ಕೆಸಿಆರ್​ ಕೂಡ ವರ್ಷದ ಹಿಂದೆ ಮಹಾಮೈತ್ರಿ ಕೂಟದಲ್ಲೇ ಗುರುತಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ, ಯಾವಾಗ ತಮ್ಮ ರಾಜಕೀಯ ಬದ್ಧ ವೈರಿ ಆಂಧ್ರದ ಚಂದ್ರಬಾಬು ನಾಯ್ಡು ಅವರು ಮಹಾಮೈತ್ರಿ ಕೂಟದಲ್ಲಿ ಮುನ್ನೆಲೆಗೆ ಬಂದರೋ ಆಗಿನಿಂದ ತಮ್ಮದೇ ಪ್ರತ್ಯೇಕ ಕೂಟ ರಚನೆಯತ್ತ ಹೆಜ್ಜೆ ಹಾಕಿದ್ದಾರೆ. ಇದರೊಂದಿಗೆ ಬಿಜೆಪಿ ವಿರುದ್ಧದ ಮೈತ್ರಿಕೂಟ ಚುನಾವಣೆಗೂ ಮೊದಲೇ ಎರಡು ಭಾಗಗಳಾಗಿರುವುದು ಸ್ಪಷ್ಟವಾಗುತ್ತಿದೆ.