ನೆಲವೊಂದೆ ಹೊಲಗೇರಿ- ಶಿವಾಲಯಕ್ಕೆ/ ಜಲವೊಂದೆ ಶೌಚಾಚಮನಕ್ಕೆ;/ ಕುಲವೊಂದೆ ತನ್ನ ತಾನರಿದವಂಗೆ,/ ಫಲವೊಂದೆ ಷಡುದರುಳನ ಮುಕ್ತಿಗೆ,/ ನಿಲುವೊಂದೆ ಕೂಡಲಸಂಗಮದೇವ/ ನಿಮ್ಮನರಿದವಂಗೆ
-ಬಸವಣ್ಣ
ಹನ್ನೆರಡನೇ ಶತಮಾನದಲ್ಲಿ ಪುರುಷ ಪ್ರಧಾನ ವ್ಯವಸ್ಥೆಯ ಎಲ್ಲಾ ಭೇದಗಳ ವಿರುದ್ಧ ವಿಭಿನ್ನವಾದ ಬೌದ್ಧಿಕ ಕ್ರಿಯೆಯನ್ನು ಮಾಡಿದ ಬಸವಣ್ಣನವರು ಇಂದು ವಿಶ್ವಮಾನ್ಯರಾಗಿದ್ದಾರೆ. ಒಂಬೈನೂರು ವರ್ಷಗಳ ನಂತರವೂ ಅವರು ಕಟ್ಟಿದ ಶರಣ ಚಳವಳಿಯ ವಿಚಾರಧಾರೆಗಳನ್ನು ಯಾರೂ ಯಾವ ಖಂಡಾಂತರಗಳಲ್ಲಿಯೂ ಅಲ್ಲಗಳೆಯುವಂತಿಲ್ಲ. ಅವರು ಬಯಸಿದ್ದಾದರೂ ಏನು? ಸಕಲ ಜೀವಾತ್ಮರಿಗೆ ಲೇಸಾಗಲಿ ಎಂಬ ‘ಸಮಾನತೆ’ ಎಂಬ ಬಹುದೊಡ್ಡ ಸ್ವರ್ಗವನ್ನು!
ಸಮಾನತೆಯ ಸ್ವರ್ಗ ಹೇಗಿರಬೇಕೆಂದರೆ, ವಿಪ್ರ ಮೊದಲಾಗಿ ಅಂತ್ಯಜ ಕಡೆಯಾಗಿರಬೇಕೆಂಬ ವರ್ಣಾಲೋಚನೆಯನ್ನು ಕಟೆದು, ಅಂದರೆ ಛಿದ್ರಗೊಳಿಸಿ ‘‘ಇವನಾರವ, ಇವನಾರವ ಎಂದೆನಿಸದೆ, ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯಾ’ ಎನ್ನುವಂತಿರಬೇಕು! ಸರ್ವರನ್ನು ಅಪ್ಪಿಕೊಳ್ಳುವ… ಒಪ್ಪಿಕೊಳ್ಳುವ ನಡೆ-ನುಡಿ ಸಿದ್ಧಾಂತವಾಗಿರಬೇಕು ಎನ್ನುತ್ತಾರೆ ಬಸವಣ್ಣನವರು. ಹೀಗಾಗಿಯೇ ಸಮಗಾರ ಹರಳಯ್ಯನವರನ್ನು ಪ್ರಧಾನವಾಗಿರಿಸಿಕೊಂಡು ಕೆಳವರ್ಗದ ವಚನಕಾರರೆಲ್ಲರನ್ನೂ ತಮ್ಮ ಕುಲದವರು ಎಂದು ಆದರಿಸುತ್ತಾ… ಹಂಬಲಿಸುತ್ತಾ ನೆತ್ತಿಯ ಮೇಲೆ ಹೊತ್ತುಕೊಂಡು ಸದಾ ಸ್ಮರಿಸುತ್ತಾರೆ.
‘‘ಅಪ್ಪನು ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯ, ಚಿಕ್ಕಯ್ಯ ನೆಮ್ಮಯ್ಯ ಕಾಣಯ್ಯ, ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ, ಎಮ್ಮನೇತಕರಿಯಿರಿ ಕೂಡಲಸಂಗಯ್ಯ?’ ವಿಧವಿಧವಾಗಿ ಅಂಗಲಾಚಿಕೊಂಡರು. ಬಸವಣ್ಣನ ಪ್ರೀತಿಪಾತ್ರರಾದ ಹಿರಿಯ ಶರಣರೆಂದರೆ ಅದು ಹರಳಯ್ಯ ಎಂಬಉದನ್ನು ಒಟ್ಟು ವಚನ ಚಳವಳಿಯೇ ಮರೆಯುವಂತಿಲ್ಲ. ಶರಣ ಚಳವಳಿಯ ಆತ್ಮಭಿತ್ತಿಯೇ ಹರಳಯ್ಯ ದಂಪತಿಗಳ ಮಗು ಮದುವೆ! ವರ್ಣಾಶ್ರಮ ಪದ್ಧತಿಯನ್ನು ಹೆಡೆಮುರಿ ಕಟ್ಟಿ ಮುರಿದ ನಡೆ-ನುಡಿ ಸಿದ್ಧಾಂತದ ಲಿಂಗಾಯತ ತತ್ವದ ಕಲ್ಯಾಣವಾದರೂ… ಅಂದು ಧರ್ವಂಧ ಪಟ್ಟಭದ್ರರ ಅಸ್ತಿತ್ವಕ್ಕೆ ದೊಡ್ಡ ಮಟ್ಟದ ಸವಾಲನ್ನು ತಂದೊಡ್ಡುತ್ತದೆ. ಜಾತಿ ಶ್ರೇಣಿಯಲ್ಲಿ ಉಚ್ಚ ಕುಲದವರಾದ ವಿಪ್ರರು ಕೀಳು ಕುಲದ ಹುಡುಗಿಯರನ್ನು ಮದುವೆಯಾಗಬಹುದು. ಆದರೆ ಕೀಳು ಕುಲದ ಯುವಕ ಉಚ್ಚ ಕುಲದ ಯುವತಿಯನ್ನು ಯಾವುದೇ ಕಾರಣಕ್ಕೆ ಮದುವೆಯಾಗುವಂತಿಲ್ಲ ಎಂಬ ನಿಯಮ ಅನಾದಿಯಿಂದ ನಡೆದುಕೊಂಡು ಬಂದಿರುತ್ತದೆ. ಆದರಿಲ್ಲಿ ಕೀಳು ಜಾತಿಯ ಸಮಗಾರ ಹರಳಯ್ಯನ ಮಗ ಬ್ರಾಹ್ಮಣ ಕುಲದ ಮಧುವರಸನ ಮಗಳಾದ ಲಾವಣ್ಯಳನ್ನು ಮದುವೆಯಾಗುವ ಪ್ರಸಂಗ ವರ್ಣಸಂಕರಕ್ಕೆ, ರಕ್ತಪಾತಕ್ಕೆ ಕಾರಣವಾಗುತ್ತದೆ.
ವಚನಚಳವಳಿಯ ಒಟ್ಟು ಧಾರೆಯಲ್ಲಿ ಹರಳಯ್ಯ ದಂಪತಿ ಮತ್ತು ಬಸವಣ್ಣನನ್ನು ನೋಡುವ ಒಂದೇ ಒಂದು ಪ್ರಸಂಗವೆಂದರೆ, ಅದು ‘ಚಮ್ಮಾವುಗೆ’ಯ ಪ್ರಸಂಗ! ಬಸವಣ್ಣನವರು ದಲಿತ ಶರಣ ಹರಳಯ್ಯನವರ ಮನೆಗೆ ಹೋಗಿ ಪ್ರಸಾದವನ್ನು ಸ್ವೀಕರಿಸಿ, ಹೊರಡುವಾಗ ಆನಂದ ತುಂದಿಲರಾದ ದಂಪತಿಗಳು ಅತ್ಯಂತ ವಿನಯ ಭಕ್ತಿಯಿಂದ ‘ಶರಣು ನನ್ನೊಡೆಯಾ’ ಎನ್ನುತ್ತಾರೆ. ಅವರ ಅತೀವ ಪ್ರೀತಿ-ವಿನಯಕ್ಕೆ ಮನಸೋತು ಬಸವಣ್ಣ ಪ್ರತಿಯಾಗಿ ‘ಶರಣು-ಶರಣಾರ್ಥಿ’ ಎನ್ನುತ್ತಾರೆ. ವಿಚಲಿತರಾಗುವ ಹರಳಯ್ಯ ದಂಪತಿಗಳು ನಮ್ಮದೊಂದು ಶರಣಾರ್ಥಿಗೆ ಬಸವಣ್ಣನವರು ಎರಡು ಶರಣಾರ್ಥಿ ಹೇಳಿದರೆಂದು ಕಸಿವಿಸಿಗೊಂಡು ಈ ಗೌರವವನ್ನು ಹೇಗೆ ಮರಳಿಸುವುದೆಂದು ತಮ್ಮ ತೊಡೆಯ ಚರ್ಮದಿಂದ ಚಮ್ಮಾವುಗೆಗಳನ್ನು ಮಾಡಿ ಬಸವಣ್ಣನಿಗೆ ಸಮರ್ಪಿಸುತ್ತಾರೆ. ಹರಳಯ್ಯ ದಂಪತಿಗಳ ಅವಿಚ್ಛಿನ್ನ ಪ್ರೀತಿಗೆ ಮತ್ತೆ ಶರಣಾಗುವ ಬಸವಣ್ಣ, ‘‘ಅಯ್ಯೋ ಹರಳಯ್ಯ ದಂಪತಿಗಳೇ ಇದೇನು ಮಾಡಿದಿರಿ, ನಿಮ್ಮ ಭಕ್ತಿ ಕಲ್ಯಾಣದಲ್ಲಿಯೇ ಶ್ರೇಷ್ಠವಾದುದು. ಹೀಗಾಗಿ ಈ ಚಮ್ಮಾವುಗೆ ನಾನು ಧರಿಸಲಾರೆ. ಇದಕ್ಕೆ ನಾನು ಯೋಗ್ಯನಲ್ಲ. ಈ ಚಮ್ಮಾವುಗೆಗಳೇನಿದ್ದರೂ ಕೂಡಲಸಂಗಯ್ಯನೇ ಧರಿಸಬೇಕು’ ಎಂದು ತಲೆಯ ಮೇಲಿರಿಸಿಕೊಂಡು ದಂಪತಿಗಳ ಭಕ್ತಿಯ ತ್ಯಾಗವನ್ನು ಕೊಂಡಾಡುತ್ತಾರೆ. ಅಂದಿನಿಂದ ಬಸವಣ್ಣನಿಗೆ ಮಾತ್ರವಲ್ಲದೆ ಒಟ್ಟು ಶರಣ ಸಂಕುಲದ ಪ್ರೀತಿಗೆ ಪಾತ್ರರಾಗುವ ತ್ಯಾಗಮಯಿ ದಂಪತಿಗಳು ಶರಣ ಪಥದ ಮುಖ್ಯ ಪಥಿಕರಾಗುತ್ತಾರೆ. ಎಲ್ಲಾ ಶರಣರೊಂದಿಗೆ ಕಳ್ಳು-ಬಳ್ಳಿಯ ಸಂಬಂಧ ಬೆಸೆದುಕೊಳ್ಳುತ್ತಾರೆ.
ಶರಣ ಚಳವಳಿಯ ನಡೆನುಡಿ ಸಿದ್ಧಾಂತಕ್ಕೆ ಬದ್ಧವಾದ ಮಧುವರಸ ದಂಪತಿಗಳು ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಕಳೆದುಕೊಂಡು ಸಮನ್ವಯ ಲಿಂಗಾಯತಕ್ಕೆ ಸಮರ್ಪಿಸಿಕೊಂಡಿದ್ದರಿಂದಾಗಿಯೇ ಜಾತ್ಯತೀತ ಸಂಬಂಧಕ್ಕೆ ಸಹಜವಾಗಿಯೇ ಒಪ್ಪಿಗೆ ಕೊಡುತ್ತಾರೆ. ಹರಳಯ್ಯ ದಂಪತಿಗಳ ಮಗ ಶೀಲವಂತ ಮಧುವರಸ ದಂಪತಿಗಳ ಮಗಳು ಲಾವಣ್ಯವತಿಯ ವಿವಾಹವನ್ನು ಸರ್ವ ಶರಣರೆಲ್ಲರೂ ಹರ್ಷ ಚಿತ್ತದಿಂದ ನೆರವೇರಿಸಿ ‘ಇನ್ನು ಕಲ್ಯಾಣದ ಬೆಳಕು ಜಗದಗಲ ಪಸರಿಸಿತು’ ಎಂದು ಸಂಭ್ರಮಿಸುತ್ತಿರುವಾಗಲೇ ಪ್ರಭುತ್ವದ ದಾಳಿ ಶುರುವಾಗುತ್ತದೆ. ಶರಣರು ಕಂಪಿಸುತ್ತಾರಾದರೂ ನಡೆನುಡಿ ಸಿದ್ಧಾಂತಕ್ಕೆ ಬದ್ಧವಾಗಿರಬೇಕೆಂಬ ಸಂಕಲ್ಪ ಕೈಗೊಳ್ಳುತ್ತಾರೆ. ಬಸವಣ್ಣನನ್ನು ವಿಚಾರ ಮಂಡನೆಗೆ ಅಣಿಗೊಳಿಸುತ್ತಾರೆ. ಈ ಪ್ರಸಂಗವೇ ಅತ್ಯಂತ ಪ್ರಾಮುಖ್ಯವಾದುದು. ಇದು ಮಾನವೀಯ ಸಂಬಂಧಗಳ ಪ್ರಮುಖ ಭಿತ್ತಿ. ಹೀಗಾಗಿ ವಿಮುಖರಾಗಬಾರದು, ಆದದ್ದಾಗಲಿ. ‘ಮರಣವೇ ಮಹಾನವಮಿ’ಯಾದರೂ ಚಿಂತೆಯಿಲ್ಲ ಎಂದು ಬಸವಣ್ಣನವರು ಸರ್ವ ಶರಣರಿಗೆ ಒಂದು ಸಂದೇಶ ರವಾನಿಸುತ್ತಾರೆ.
ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ
ತಪ್ಪಿದರೆ, ಹಿಡಿದಿರ್ಪ ಲಿಂಗ
ಘಟಸರ್ಪ ನೋಡಾ!! ಎನ್ನುವ ವಚನದೊಂದಿಗೆ…
ನಾಳೆ ಬಪ್ಪುದು ನಮಗಿಂದೇ ಬರಲಿ
ಇಂದು ಬಪ್ಪುದು ನಮಗೀಗಲೇ ಬರಲಿ
ಇದಕಾರಂಜುವರು, ಇದಕಾರಳುಕುವರು?
ಜಾತಸ್ಯ ಮರಣಂ ಧ್ರುವಂ!! ಎಂಬುದಾಗಿ ಮುಂದುವರಿಯುತ್ತಾರೆ.
‘‘ಕಲ್ಯಾಣದಲ್ಲಿ ಸರ್ವರೂ ಶರಣರು, ಎಲ್ಲರೂ ಲಿಂಗಧಾರಿಗಳಾಗಿರುವುದರಿಂದ, ಲಿಂಗಾಯತರಾಗಿದ್ದಾರೆ! ನಡೆನುಡಿ ಸಿದ್ಧಾಂತವಾಗಿದೆ. ಹೀಗಾಗಿ ಯಾರೂ ಕುಲವನ್ನರಸಬಾರದು’ ಎಂದು ಬಸವಣ್ಣ ಬಿಜ್ಜಳರಾಜನ ಪ್ರಭುತ್ವದ ಮುಂದೆ ಪರಿಪರಿಯಾಗಿ ಬೇಡಿಕೊಳ್ಳುತ್ತಾರೆ. ತಮ್ಮ ಮಾನವೀಯ ಸಿದ್ಧಾಂತವನ್ನು ಮಂಡಿಸುತ್ತಾರೆ. ಆದರೆ ಜಾತೀಯ ಕುಟಿಲರ ಕುತಂತ್ರದ ಮುಂದೆ ಜಾತಿವಾದ ಗೆದ್ದು ಹರಳಯ್ಯ ದಂಪತಿಗಳನ್ನು ಆನೆ ಕಾಲಿಗೆ ಕಟ್ಟಿ ಎಳೆಸುವ ಶಿಕ್ಷೆಯನ್ನು ವಿಧಿಸುತ್ತಾರೆ. ಕಲ್ಯಾಣ ಕ್ರಾಂತಿಯಾಗಿ ಶರಣರು ಛಿದ್ರರಾಗುತ್ತಾರೆ. ಇತಿಹಾಸದಲ್ಲಿ ಇದು ವಿಫಲ ಕ್ರಾಂತಿಯೆಂದು ದಾಖಲಾದರೂ ಇಂತಹ ಮಾನವೀಯ ಚಳವಳಿ ಖಂಡಾಂತರದಲ್ಲಿ ಎಲ್ಲಿಯೂ ನಡೆದಿಲ್ಲ. ಹೀಗಾಗಿ ಬಸವಾದ ಶರಣರು ಇನ್ನೂ ಜೀವಂತವಾಗಿದ್ದಾರೆ. ಭವಿಷ್ಯದ ಭಾರತದ ಕ್ರಾಂತಿಗೆ ಇದು ಬೀಜರೂಪ. ನಡೆನುಡಿ ಸಿದ್ಧಾಂತಕ್ಕಾಗಿ ‘ಮರಣವೇ ಮಹಾನವಮಿ’ ಎಂದು ಒಪ್ಪಿಕೊಂಡ, ಅಪ್ಪಿಕೊಂಡ ಶರಣ ಹರಳಯ್ಯನ ಸಂತತಿ, ಮಹಾಶರಣ ಅಣ್ಣ ಬಸವಣ್ಣನ ಸಂತತಿ ಬೆಳೆಯುತ್ತಲೇ ಇದೆ, ಬೀಜರೂಪವಾಗಿ… ಈ ಬೆಳವಣಿಗೆ ಭವಿಷ್ಯ ಭಾರತದ ಸಮಾನತೆಗೆ ಹಿಡಿದ ಕನ್ನಡಿ ಆಗುವುದು ಖಚಿತ.
(ಲೇಖಕರು ಪೀಠಾಧ್ಯಕ್ಷರು, ಶಿವಶರಣ ಮಾದಾರ ಚನ್ನಯ್ಯ ಗುರುಪೀಠ, ಚಿತ್ರದುರ್ಗ)