ರೈತನ ಜೇಬು ತುಂಬಿಸಿದ ಸಾಲ್ವಿಯಾ

| ಚಂದ್ರಶೇಖರ ಪಡುವಳಲು ಹಗರೆ

ವ್ಯವಸಾಯವೆಂದರೆ ನಷ್ಟವೆಂದೇ ನಂಬಿರುವ ಬಹುಸಂಖ್ಯಾತ ರೈತರ ನಡುವೆ ಇಲ್ಲೊಬ್ಬರು ಕೇವಲ 1 ಎಕರೆ ಜಮೀನಿನಲ್ಲಿ ಔಷಧೀಯ ಬೆಳೆ ಬೆಳೆದು 6 ತಿಂಗಳಲ್ಲಿ 3 ಲಕ್ಷ ರೂ. ಆದಾಯ ಗಳಿಸಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲೂಕು ಸಂಕೇನಹಳ್ಳಿ ಗ್ರಾಮದ ಎಸ್.ಜಿ. ಪುಪ್ಪೇಗೌಡ, ಸಾಲ್ವಿಯಾ ಹಿಸ್ಪಾನಿಕ್ (ಚಿಯಾಚಿಯಾ ಬೀಜ) ಬೆಳೆದು ಸೈ ಎನಿಸಿಕೊಂಡಿದ್ದಾರೆ. ಕ್ಯಾನ್ಸರ್​ಗೆ ರಾಮಬಾಣವಾಗಿರುವ ಸಾಲ್ವಿಯಾ ಹಿಸ್ಪಾನಿಕ್​ಗೆ ರಾಜ್ಯ ಮಾತ್ರವಲ್ಲದೆ, ಹೊರ ರಾಜ್ಯಗಳಲ್ಲೂ ಅಧಿಕ ಬೇಡಿಕೆಯಿದೆ.

ಸಾಧಕ ರೈತನ ಯಶೋಗಾಥೆ: 55 ವರ್ಷಗಳಿಂದ ಕೃಷಿ ಕಾಯಕದಲ್ಲಿ ತೊಡಗಿರುವ ಪುಪ್ಪೇಗೌಡ ಎಸ್​ಎಸ್​ಎಲ್​ಸಿ ವ್ಯಾಸಂಗ ಪೂರ್ಣಗೊಳಿಸಿದ್ದಾರೆ. 20 ವರ್ಷಗಳ ಹಿಂದೆ ಸ್ನೇಹಿತರ ಮೂಲಕ ಚಿಕ್ಕಮಗಳೂರಿನ ನಾಮಧಾರಿ ಸೀಡ್ಸ್ ಕಂಪನಿಯ ಸಂಪರ್ಕ ಸಾಧಿಸಿದ ಇವರಿಗೆ ಸಾಲ್ವಿಯಾ ಬೆಳೆ ಒಲಿದಿದೆ. 20 ವರ್ಷಗಳಿಂದ ತಮ್ಮ 1 ಎಕರೆ ಜಮೀನಿನಲ್ಲಿ ಸಾಲ್ವಿಯಾ ಬೆಳೆಯುತ್ತಿದ್ದು, ಸುತ್ತಲಿನ ರೈತರಿಗೆ ಮಾದರಿ ಎನಿಸಿದ್ದಾರೆ. ಜಮೀನಿನಲ್ಲಿ ಬೋರ್​ವೆಲ್ ಇರುವುದರಿಂದ ತುಂತುರು ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಒಂದು ಎಕರೆಯಲ್ಲಿ ಸಾಲ್ವಿಯಾ ಬೆಳೆಯಲು 50 ಸಾವಿರ ರೂ. ಖರ್ಚು ಮಾಡಿದರೆ 3 ಲಕ್ಷ ರೂ. ಆದಾಯ ಗಳಿಸಬಹುದು. ಪ್ರತಿ ಕೆ.ಜಿ.ಗೆ 6 ಸಾವಿರ ರೂ.ನಂತೆ ಮಾರಾಟವಾಗುವ ಸಾಲ್ವಿಯಾ ಬೀಜ ಪುಪ್ಪೇಗೌಡರ ಪಾಲಿಗೆ ಅದೃಷ್ಟದ ದೇವತೆ ಆಗಿದೆ.

ಬೆಳೆಯುವ ಕ್ರಮ: ‘ಕ್ಯಾನ್ಸರ್ ಮತ್ತಿತರ ಕಾಯಿಲೆಗಳ ಔಷಧೋಪಚಾರಕ್ಕೆ ಸಾಲ್ವಿಯಾ ಬೀಜ ಬಳಕೆಯಾಗುತ್ತದೆ. ಈ ಗಿಡ ಬೆಳೆೆಯಲು ಉತ್ತಮ ಹವಾಮಾನದ ಅವಶ್ಯಕತೆ ಇದ್ದು, ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ನಾಟಿ ಮಾಡಬೇಕು. ತುಂತುರು ನೀರಾವರಿ ಜತೆಗೆ, ಒಂದೆರಡು ಮಳೆ ಸುರಿದರೆ ಉತ್ತಮ ಇಳುವರಿ’ ಎನ್ನುತ್ತಾರೆ ಪುಪ್ಪೇಗೌಡ. ಒಂದು ಎಕರೆಗೆ 20-22 ಸಾವಿರ ಸಸಿ ನೆಡಬೇಕಾಗುತ್ತದೆ. ಹವಾಮಾನ ವೈಪರೀತ್ಯವಾಗದಿದ್ದಲ್ಲಿ 50 ಕೆ.ಜಿ.ವರೆಗೂ ಔಷಧ ಬೀಜಗಳನ್ನು ಪಡೆಯಬಹುದು. ಇದರಲ್ಲಿ ಜೇನುಹುಳುಗಳ ಪರಾಗಸ್ಪರ್ಶ ಪ್ರಮುಖವಾಗಿದ್ದು, ಲಾಭ ನಷ್ಟವೂ ಅವುಗಳನ್ನೇ ಅವಲಂಬಿಸಿದೆ. ಚಿಕ್ಕಮಗಳೂರು ಮಾರುಕಟ್ಟೆಯಲ್ಲಿ ಗುಣಮಟ್ಟ ಪರೀಕ್ಷಿಸಿ ಬೆಲೆ ನಿಗದಿ ಮಾಡಲಾಗುತ್ತದೆ. ಗರಿಷ್ಠ ಎಂದರೆ ಎಕರೆಗೆ 60, ಕನಿಷ್ಠ 20 ಕೆಜಿ ಪಡೆಯುತ್ತೇನೆ ಎಂದು ಹೇಳುತ್ತಾರೆ ಪುಪ್ಪೇಗೌಡ. ಜೇಣುನೊಣಗಳು ನೇರಳೆ ಬಣ್ಣದ ಸಸಿಗಳ ಮೇಲೆ ಹೆಚ್ಚು ಸಮಯ ಕೂರುತ್ತವೆ ಎಂಬ ಕಾರಣಕ್ಕಾಗಿ ಕೆಂಪು ಔಷಧ ಗಿಡಗಳ ನಡುವೆ ನೇರಳೆ ಬಣ್ಣದ ಸಸಿಗಳ ಸಾಲನ್ನು ಮಾಡಲಾಗುತ್ತದೆ. ಆ ಸಮಯದಲ್ಲಿ ಕೆಂಪು ಗಿಡಗಳನ್ನು ದಾಟಿ ಬರುವುದರಿಂದ ಗಿಡಗಳಿಗೆ ಸುಲಭವಾಗಿ ಪರಾಗಸ್ಪರ್ಶ ಆಗುತ್ತದೆ.

ಆಕರ್ಷಕ ತಾಣ
ಮೂಡಿಗೆರೆ, ಚಿಕ್ಕಮಗಳೂರು ಮತ್ತಿತರ ಕಡೆ ಹೋಗುವ ಪ್ರಯಾಣಿಕರಿಗೆ ಸಂಕೇನಹಳ್ಳಿ ಗ್ರಾಮದ ಸಾಲ್ವಿಯಾ ತೋಟ ಸೆಲ್ಪಿ ವಲಯವಾಗಿದೆ. ಕೆಂಪು ಹೂ ಸಾಲುಗಳ ಮಧ್ಯೆ ಇರುವ ನೇರಳೆ ಬಣ್ಣದ ಗಿಡಗಳು ಸಾರ್ವಜನಿಕರ ಆಕರ್ಷಣೆಗೆ ಕಾರಣವಾಗಿವೆ. ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನಿನಲ್ಲಿರುವ ಹೂವುಗಳ ಸೌಂದರ್ಯಕ್ಕೆ ಸೋತು ನಿತ್ಯ ನೂರಾರು ಜನ ಇಲ್ಲಿ ಭೇಟಿ ನೀಡುತ್ತಾರೆ. ಸಂಪರ್ಕಕ್ಕೆ: 9448772148.

‘ಕಳೆದ ವರ್ಷ ಒಂದು ಎಕರೆ ಜಮೀನಿನಲ್ಲಿ 20 ಸಾವಿರ ಸಾಲ್ವಿಯಾ ಸಸಿ ನೆಟ್ಟು ಬೆಳೆ ಮಾಡಿದ್ದರಿಂದ 50 ಕೆ.ಜಿ. ಬೀಜ ದೊರೆಯಿತು. ಕೆ.ಜಿ.ಗೆ ಆರು ಸಾವಿರ ರೂ.ಗಳಂತೆ ಮಾರಾಟ ಮಾಡಿ ಲಕ್ಷಾಂತರ ರೂ. ಗಳಿಸಿದ್ದೇನೆ. ಸಾಲ್ವಿಯಾ ಬೆಳೆಯುವ ಪ್ರಾರಂಭಿಕ ಹಂತದಲ್ಲಿ ಎಚ್ಚರಿಕೆ ವಹಿಸಿದರೆ ಆ ಬಳಿಕ ಅಷ್ಟೇನೂ ಕಷ್ಟಪಡುವ ಅಗತ್ಯವಿಲ್ಲ’.

| ಎಸ್.ಜಿ. ಪುಪ್ಪೇಗೌಡ ಸಂಕೇನಹಳ್ಳಿ ರೈತ