ಶಿವಮೊಗ್ಗ: ದೇವರ ಸಾಕ್ಷಾತ್ಕಾರ ಹಾಗೂ ಮೋಕ್ಷ ಪಡೆಯಲು ಆಚಾರ್ಯತ್ರಯರು ಮೂರು ವಿಭಿನ್ನ ಮಾರ್ಗಗಳನ್ನು ತೋರಿದ್ದಾರೆ. ನಾವು ಯಾವ ಮಾರ್ಗದಲ್ಲಿ ಸಾಗಿದರೂ ಮೋಕ್ಷ ಸಾಧ್ಯ. ನಮ್ಮ ಅಂತಿಮ ಗುರಿ ಮೋಕ್ಷ ಆಗಿರಬೇಕೇ ಹೊರತು ಮಾರ್ಗ ಯಾವುದು ಎಂಬ ಚರ್ಚೆ ಸರಿಯಲ್ಲ ಎಂದು ವಾಗ್ಮಿ, ಪ್ರಾಚಾರ್ಯ ಪ್ರೊ. ಪವನ್ ಕಿರಣಕೆರೆ ಅಭಿಪ್ರಾಯಪಟ್ಟರು.
ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಏರ್ಪಡಿಸಿದ್ದ ಆಚಾರ್ಯತ್ರಯರ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಆಚಾರ್ಯ ತ್ರಯರು ನೀಡದ ಸಂದೇಶಗಳನ್ನು ವಿಮರ್ಶೆ ಮಾಡುವ ಬದಲು ಅವುಗಳ ದರ್ಶನ ಮಾಡುವ ಪ್ರಯತ್ನ ನಡೆಯಬೇಕು ಎಂದರು.
ಶೈವ, ವೈಷ್ಣವ ಪರಂಪರೆ ಎಂಬ ಮೇಲಾಟದಿಂದ ನಮ್ಮಲ್ಲಿ ಒಗ್ಗಟ್ಟು ನಾಶವಾಗುತ್ತಿದೆ. ಇಡೀ ಬ್ರಾಹ್ಮಣ ಸಮುದಾಯ ಒಂದೇ ಎಂಬ ಭಾವನೆ ಕಡಿಮೆಯಾಗುತ್ತಿದೆ. ನಮಗೆ ಈ ಸನ್ನಿವೇಶದಲ್ಲಿ ಸೂಕ್ತ ಮಾರ್ಗದರ್ಶನ ಮಾಡಬೇಕಿದ್ದ ಕೆಲವು ಮಠಾಧೀಶರು, ಆರಾಧನೆಯ ಶಕ್ತಿ ಕೇಂದ್ರಗಳ ಪ್ರಮುಖರು ಕೂಡ ಮೇಲಾಟದಲ್ಲಿ ತೊಡಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬ್ರಾಹ್ಮಣ್ಯ ಹಾಗೂ ಬ್ರಾಹ್ಮಣ ಎರಡಕ್ಕೂ ವ್ಯತ್ಯಾಸವಿದೆ. ಬ್ರಾಹ್ಮಣ ನಾಶವಾಗಬಹುದು. ಆದರೆ ಇನ್ನು ಸಾವಿರ ವರ್ಷ ಕಳೆದರೂ ಬ್ರಾಹ್ಮಣ್ಯ ನಾಶವಾಗುವುದಿಲ್ಲ. ಅದಕ್ಕೆ ಅಂತಹ ತಪೋಶಕ್ತಿಯಿದೆ. ಬ್ರಾಹ್ಮಣ ಹಾಗೂ ಬ್ರಾಹ್ಮಣ್ಯಕ್ಕೆ ವೇದದಲ್ಲಿ ವಿಶೇಷ ಸ್ಥಾನ ನೀಡಲಾಗಿದೆ. ಆದರೆ ಇಂದು ಬ್ರಾಹ್ಮಣರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದರ್ಭ ಎದುರಾಗಿದೆ ಎಂದು ಹೇಳಿದರು.
ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ.ನಟರಾಜ ಭಾಗವತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನವರಾತ್ರಿ ಸಂದರ್ಭದಲ್ಲಿ ಏರ್ಪಡಿಸಿದ್ದ ದೇವಿ ಸ್ತುತಿಗಳ ಗೀತೆಗಳ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಭೆಯ ಆರಂಭದಲ್ಲಿ ಆಚಾರ್ಯ ತ್ರಯರ ಭಾವಚಿತ್ರಗಳಿಗೆ ವೇದ ಘೋಷಗಳೊಂದಿಗೆ ಪೂಜೆ ಸಲ್ಲಿಸಲಾಯಿತು.
ಪರಿಸ್ಥಿತಿ ಕಷ್ಟ…ಕಷ್ಟ: ಓಂಕಾರಗಳು ಮೊಳಗಬೇಕಿದ್ದ ಬ್ರಾಹ್ಮಣರ ಮನೆಗಳಲ್ಲಿ ಇಂದು ಮಕ್ಕಳು ಆಂಗ್ಲ ಪದ್ಯಗಳನ್ನು ಕಲಿಯುತ್ತಿದ್ದಾರೆ. ನಮ್ಮ ಧರ್ಮದಲ್ಲಿ ಉದಾತ್ತ ಹಾಗೂ ತಾತ್ವಿಕ ಚಿಂತನೆಗಳಿವೆ. ಆದರೆ ಅವುಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಹೀಗಾಗಿ ಧರ್ಮದ ವಿಚಾರದಲ್ಲಿ ಎದುರಾಗುವ ಪ್ರಶ್ನೆಗಳಿಗೆ ನಾವು ಸಮರ್ಪಕ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣದಿಂದ ನಮ್ಮ ಮಕ್ಕಳು ನಮ್ಮದು ಉತ್ತರವೇ ಇಲ್ಲದ ಧರ್ಮ ಎಂಬ ತಪ್ಪು ಗ್ರಹಿಕೆಗೆ ಒಳಗಾಗುತ್ತಿದ್ದಾರೆ. ಇಂದು ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ಒಂದು ವೇಳೆ ಆಚಾಯ ತ್ರಯರು ಮತ್ತೆ ಅವತಾರ ತಾಳಿ ಬಂದರೂ ಈ ವ್ಯವಸ್ಥೆಯನ್ನು ಸರಿಪಡಿಸುವುದು ಕಷ್ಟ ಎಂಬಂತಾಗಿದೆ ಎಂದು ಪವನ್ ಕಿರಣಕೆರೆ ಹೇಳಿದರು.
ಭಾಷಣದಿಂದ ಸಾಧ್ಯವಿಲ್ಲ: ಆಶಯಗಳ ಅನುಸಂಧಾನ ಹಾಗೂ ಆಚಾರದ ಪಾಲನೆಯಿಂದ ಮಾತ್ರ ಸಮಾಜ ಸುಧಾರಣೆಯಾಗಬಹುದೇ ಹೊರತು ಪ್ರಚೋದನಕಾರಿ ಭಾಷಣದಿಂದಲ್ಲ. ಬ್ರಾಹ್ಮಣರು ಇಂದು ಆಚಾರ್ಯ ತ್ರಯರ ಹೆಸರಿನಲ್ಲಿ ಪರಸ್ಪರ ವರ್ಗೀಕರಣ ಮಾಡಿಕೊಂಡಿದ್ದಾರೆ. ಗುರುಗಳು, ಮಠಗಳ ಹೆಸರಿನಲ್ಲಿ ಭಿನ್ನ ನೆಲೆಯಲ್ಲಿ ನಿಂತಿದ್ದಾರೆ. ಐಕ್ಯತೆಯಿಲ್ಲದ ಕಾರಣ ಬ್ರಾಹ್ಮಣರು ನಾಶವಾಗುವ ಅಪಾಯವಿದೆ. ಶಾಸ್ತ್ರದಲ್ಲಿ ಯಾವುದೇ ತಪ್ಪಿಲ್ಲ. ಆದರೆ ತಪ್ಪುಗಳಾಗುತ್ತಿರುವುದು ಶಾಸ್ತ್ರಗಳನ್ನು ಪಾಲಿಸುವವರಿಂದ ಎನ್ನುವ ಮೂಲಕ ಪವನ್ ಕಿರಣಕೆರೆ ಪ್ರಸ್ತುತ ಸನ್ನಿವೇಶವನ್ನು ಬಿಡಿಸಿಟ್ಟರು.
ಟೀಕೆ ಮಾಡುವ ಪ್ರವೃತ್ತಿ: ಪ್ರಸ್ತುತ ಸಂದರ್ಭದಲ್ಲಿ ಆಚಾರ್ಯ ತ್ರಯರ ಸಂದೇಶಗಳನ್ನು ಟೀಕೆ, ಟಿಪ್ಪಣಿ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಆಚಾರ್ಯರು ಇದ್ದ ಕಾಲಘಟ್ಟ, ಅಂದಿನ ಸಾಮಾಜಿಕ ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳದೆ ಅವರ ಸಂದೇಶಗಳನ್ನೂ ತಪ್ಪು ಗ್ರಹಿಸುತ್ತಿರುವುದು ಹಲವು ಅಚಾತುರ್ಯಗಳಿಗೆ ಕಾರಣವಾಗುತ್ತಿದೆ. ತಂತ್ರಜ್ಞಾನದಿಂದಲೇ ಜಗತ್ತನ್ನು ಗೆಲ್ಲಬಲ್ಲೆವು ಎನ್ನುವ ಸಂದರ್ಭದಲ್ಲಿ ನಾವಿದ್ದೇವೆ. ಆದರೆ ಸಾವಿರಾರು ವರ್ಷಗಳಿಂದ ಆಚಾರ್ಯ ತ್ರಯರ ಸಂದೇಶಗಳು ನಿರಂತರವಾಗಿ ಸಮಾಜದೊಳಗೆ ಸಾಗಿ ಬಂದಿದೆ ಎಂದು ಕೆ.ಸಿ.ನಟರಾಜ ಭಾಗವತ್ ಹೇಳಿದರು.