ಸ್ವಯಂ ಸೇವೆಯಿಂದ ಮೋಕ್ಷ: ಡಾ.ಡಿ.ವೀರೇಂದ್ರ ಹೆಗ್ಗಡೆ

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಸ್ವಯಂ ಸೇವೆಯೇ ನಿತ್ಯ ಸಾಧನೆ. ಸ್ವಯಂ ಸೇವೆಯಿಂದ ಮೋಕ್ಷ ಸಾಧ್ಯ. ಸ್ವಯಂ ಸೇವೆಯಿಂದ ಧರ್ಮ ರಕ್ಷಣೆ, ಸಮಾಜದ ರಕ್ಷಣೆ ಆಗಬೇಕು. ಸ್ವಯಂಸೇವೆ ವ್ಯಕ್ತಿತ್ವ ನಿರ್ಮಾಣ ಮಾಡಿದರೆ, ಸ್ವಸಹಾಯ ಸಂಘಗಳು ಸಂಸಾರ, ಸಮಾಜವನ್ನು ಕಟ್ಟುತ್ತವೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಕರ್ನಾಟಕ ಜೈನ ಸ್ವಯಂ ಸೇವಾ ಚಾರಿಟೆಬಲ್ ಟ್ರಸ್ಟ್ ಮೂಡುಬಿದಿರೆ ಪದ್ಮಾವತಿ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸ್ವಸಹಾಯ ಸಂಘ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಬೇರೆ ಸಮುದಾಯದವರೊಂದಿಗೆ ಜೈನ ಸಮುದಾಯ ಕೂಡ ಪ್ರಗತಿ ಕಾಣಬೇಕು. ರಾಜಕಾರಣಿಗಳನ್ನು, ಅಧಿಕಾರಿಗಳನ್ನು ನಕಾರಾತ್ಮಕವಾಗಿ ನೋಡುವ ನಮ್ಮ ಮನಸ್ಥಿತಿ ಬದಲಾಗಬೇಕು. ಜೈನ ಸಮುದಾಯಕ್ಕೆ ಹಿಂದೆ, ಈಗ, ಮುಂದೆ ಕೂಡ ಸರ್ಕಾರ ಸಹಕಾರ ನೀಡುತ್ತದೆ ಎನ್ನುವ ಭರವಸೆ ಇರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಸ್ವಸಹಾಯ ಸಂಘಗಳ ಸ್ಥಾಪನೆಯಿಂದಾಗಿ ಮಹಿಳೆಯರಲ್ಲಿ ಸಮಾನತೆಯ ಭಾವ ಮೂಡಿದೆ ಎಂದರು.

ಜೈನ ಸಮುದಾಯದ ನಿಗಮ ಸ್ಥಾಪನೆ, 2ಬಿ ವರ್ಗಕ್ಕೆ ಸೇರಿಸುವುದು ಸಹಿತ ಹಲವು ಬೇಡಿಕೆಗಳ ಹಕ್ಕೋತ್ತಾಯ ಮಂಡನೆ ಮಾಡಲಾಯಿತು. ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕ ಶ್ರೀಧರ ಭಂಡಾರಿ, ದ.ಕ. ಜಿಲ್ಲೆ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮಾಹಿತಿ ಸಂಚಾಲಕ ಅಬ್ದುಲ್ ಖಾದರ್, ಮೂಡುಬಿದಿರೆ ಜೈನ್ ಮಿಲನ್ ಅಧ್ಯಕ್ಷೆ ಶ್ವೇತಾ ಜೈನ್, ಸಂಘದ ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಸಲಹಾ ಸಮಿತಿ ಅಧ್ಯಕ್ಷೆ ಶ್ವೇತಾ ಪ್ರವೀಣ್, ಸಂಚಾಲಕ ಸುದೀಪ್ ಜೈನ್, ಸ್ವಸಹಾಯ ಸಂಘಗಳ ಮೇಲ್ವಿಚಾರಕ ಶಿವರಾಜ್ ಜೈನ್, ಕರ್ನಾಟಕ ಜೈನ ಸ್ವಯಂ ಸೇವಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ನೇಮಿರಾಜ್ ಆರಿಗ, ಟ್ರಸ್ಟಿಗಳಾದ ಎ.ವಿ.ಶೆಟ್ಟಿ ಧರ್ಮಸ್ಥಳ, ಶಶಿಕಿರಣ್, ಶಮಂತ್ ಕುಮಾರ್ ಜೈನ್, ಸುಜಾತಾ ಎನ್.ಆರಿಗ ಉಪಸ್ಥಿತರಿದ್ದರು. ಸಹನಾ ಸಂಪತ್ ಸ್ವಾಗತಿಸಿದರು. ಜೀವಿತಾ, ಅಭಿಲಾಷಾ ಕಾರ್ಯಕ್ರಮ ನಿರೂಪಿಸಿದರು. ತ್ರಿಶಾಲ ವಂದಿಸಿದರು.

ಸಾಧಕರಿಗೆ ಸನ್ಮಾನ: ಸಮಾವೇಶದಲ್ಲಿ ಶಮಂತ್ ಕುಮಾರ್ ಜೈನ್, ಅಂತಾರಾಷ್ಟ್ರೀಯ ಕರಾಟೆ ಸಾಧಕ ಸುಪಾರ್ಶ್ವ ಕೊಂಬೆ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಪ್ರತಿಭೆ ಪಂಚಮಿ ಮಾರೂರು, ಮಂಗಳೂರು ಎಪಿಎಂಸಿ ನೂತನ ಅಧ್ಯಕ್ಷ ಪ್ರವೀಣ್ ಜೈನ್, ಕಾರ್ಕಳ ಎಪಿಎಂಸಿ ಅಧ್ಯಕ್ಷ ಮಪಾಲು ಜಯವರ್ಮ ಜೈನ್ ಅವರನ್ನು ಸನ್ಮಾನಿಸಲಾಯಿತು.

ಮಸ್ತಾಭಿಷೇಕದಲ್ಲಿ ಪಂಚಮಹಾವೈಭವ: ಶ್ರಾವಕರಲ್ಲಿ ಸಂಸ್ಕಾರ, ಧರ್ಮವನ್ನು ಪ್ರೇರೆಪಿಸುವ ಉದ್ದೇಶದಿಂದ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಈ ಬಾರಿಯ ಮಹಾಮಸ್ತಾಭಿಷೇಕ ಸಂದರ್ಭ ಭಗವಾನ್ ಶ್ರೀ ಮಹಾವೀರರ ಬಗ್ಗೆ ತತ್ವಾದರ್ಶ ಪ್ರಚಾರಪಡಿಸಲು ದೃಶ್ಯ ರೂಪದಲ್ಲಿ ಪಂಚಮಹಾವೈಭವ ಆಯೋಜಿಸಲಾಗಿದೆ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.

ಸಮುದಾಯ ಪ್ರಮುಖರು ಸೇರಿ ಟ್ರಸ್ಟ್ ಸ್ಥಾಪಿಸುವ ಮೂಲಕ ಸಮಾಜವನ್ನು ಮುನ್ನಡೆಸುವ ಕೆಲಸ ಶ್ಲಾಘನೀಯ. ಪ್ರಸ್ತುತ ನಾನು ರಾಜ್ಯ ಹಿಂದುಳಿದು ವರ್ಗ, ಅಲ್ಪಸಂಖ್ಯಾತ ಸಮಿತಿ ಸದಸ್ಯನಾಗಿರುವುದರಿಂದ ಜೈನ ಸಮುದಾಯದ ಬೇಡಿಕೆಗಳನ್ನು ಮುಂದಿನ ಸಭೆಯಲ್ಲಿ ಸರ್ಕಾರದ ಮುಂದಿಡುತ್ತೇನೆ.
– ಉಮಾನಾಥ ಕೋಟ್ಯಾನ್, ಶಾಸಕ