ಪ್ರತೀಕಾರ ತೀರಿಸಿದ ಸೇನೆಗೆ ನಮಿಸಿದ ಕರಾವಳಿ

ಮಂಗಳೂರು/ಉಡುಪಿ: ಭಾರತೀಯ ವಾಯುಸೇನೆ ಎಲ್‌ಒಸಿ ದಾಟಿ ಪಾಕಿಸ್ತಾನದ ಉಗ್ರರ ಮೇಲೆ ವೈಮಾನಿಕ ದಾಳಿ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ಮಂಗಳವಾರ ಸಂಭ್ರಮಾಚರಣೆ ನಡೆಯಿತು. ರಾಜಕೀಯ ಪಕ್ಷಗಳು, ಸಂಘಟನೆಗಳು ಬೀದಿಗಿಳಿದು ವಿಜಯೋತ್ಸವ ಆಚರಿಸಿ, ಸೈನಿಕರ ಸಾಹಸವನ್ನು ಕೊಂಡಾಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಚೇರಿ ಎದುರು ನಡೆದ ವಿಜಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಬಿ.ರಮಾನಾಥ ರೈ, ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಕವಿತಾ ಸನಿಲ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ ಮತ್ತಿತರರಿದ್ದರು.
ಮಂಗಳೂರಿನಲ್ಲಿ ಟೀಮ್ ಮೋದಿ ಸಂಘಟನೆ ಕಾರ್ಯಕರ್ತರು ರಥಬೀದಿ ವೆಂಕಟರಮಣ ದೇವಸ್ಥಾನ ಮುಂಭಾಗ, ಮಲ್ಲಿಕಟ್ಟೆ ವೃತ್ತದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು, ವಿಶ್ವ ಹಿಂದು ಪರಿಷತ್-ಬಜರಂಗದಳ ವತಿಯಿಂದ ಪಿವಿಎಸ್ ವೃತ್ತದಲ್ಲಿ, ಪುತ್ತೂರಿನಲ್ಲಿ ಹಿಂದೂ ಜಾಗರಣ ವೇದಿಕೆ, ಬಜರಂಗದಳ ಮತ್ತಿತರ ಸಂಘಟನೆಗಳು, ಉಡುಪಿ ನಗರದಲ್ಲಿ ಕರವೇ, ಜಿಲ್ಲಾ ಬಿಜೆಪಿ ಯುವಮೋರ್ಚಾ, ಕಾರ್ಕಳದಲ್ಲಿ ಬಜರಂಗದಳ, ಬಿಜೆಪಿ ಯುವಮೋರ್ಚಾ ಮತ್ತಿತರ ಸಂಘಟನೆಗಳ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿಂ ಹಂಚಿ ಸಂಭ್ರಮಾಚರಿಸಿದರು.
* ನಳಿನ್ ಸ್ವಾಗತ: ಭಾರತದ ವೀರಯೋಧರು ಪಾಕ್ ಪ್ರೇರಿತ ಭಯೋತ್ಪಾದಕರ ನೆಲೆ ದ್ವಂಸ ಮಾಡುವ ಮೂಲಕ ತಮ್ಮ ಶೌರ್ಯ ಪ್ರದರ್ಶಿಸಿದ್ದಾರೆ. ವೈರಿಗಳನ್ನು ಸದೆಬಡಿಯಲು ಭಾರತ ಸಮರ್ಥವಾಗಿದೆ ಎಂಬ ಸಂದೇಶ ಜಗತ್ತಿಗೆ ಸಾರಲಾಗಿದೆ. ದೇಶದೊಳಗಿದ್ದು ಪಾಕ್ ಪರ ಮೃದು ಧೋರಣೆ ಹೊಂದಿರುವ ಪ್ರಗತಿಪರರಿಗೆ ಸೂಕ್ತ ಪಾಠ ಕಲಿಸಲು ಎಲ್ಲ ದೇಶಪ್ರೇಮಿಗಳು ಒಂದಾಗಬೇಕು. ತನ್ಮೂಲಕ ಭಾರತೀಯ ಸೇನೆಗೆ ಇನ್ನಷ್ಟು ಬಲ ತುಂಬಬೇಕು ಎಂದು ಸಂಸದ ನಳಿನ್‌ಕುಮಾರ್ ಕಟೀಲು ತಿಳಿಸಿದ್ದಾರೆ.
ನಮ್ಮ ಸೈನಿಕರನ್ನು ಬಲಿ ಪಡೆದ ಪಾಕ್ ಉಗ್ರರ ವಿರುದ್ಧ ಕಾರ್ಯಾಚರಣೆ ದೇಶಕ್ಕೆ ಹೆಮ್ಮೆಯ ವಿಷಯ. ಪ್ರಧಾನಿ ನರೇಂದ್ರ ಮೋದಿಯವರು ಶತ್ರುಗಳನ್ನು ಹಾಗೂ ಟೀಕಾಕಾರರನ್ನು ಮೆಟ್ಟಿ ನಿಂತಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.

ಮಂಗಳೂರು, ಉಡುಪಿಯಲ್ಲಿ ಬಂದೋಬಸ್ತ್ : ಭಾರತೀಯ ವಾಯುಸೇನೆ ಪಾಕಿಸ್ತಾನದ ಉಗ್ರರ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮಂಗಳೂರು ನಗರ ಕಮಿಷನರೆಟ್ ಹಾಗೂ ಉಡುಪಿ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ನಿರ್ದೇಶನದಂತೆ ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್, ಎಸಿಪಿ, ಇನ್‌ಸ್ಪೆಕ್ಟರ್‌ಗಳ ತಂಡ ನಗರದಲ್ಲಿ ಗಸ್ತು ತಿರುಗಿದರು. ತಡರಾತ್ರಿವರೆಗೂ ನಗರದಲ್ಲಿ ಪೊಲೀಸರು ಬಿಗು ಬಂದೋಬಸ್ತ್ ನಡೆಸಿದರು. 2 ಕೆಎಸ್‌ಆರ್‌ಪಿ, 8 ಸಿಆರ್ ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ವಿಮಾನ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಬಂದರು ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ. ನಗರದ ಒಳಗಡೆ ಬರುವ ಹಾಗೂ ತೆರಳುವ ವಾಹನಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ಆಯಕಟ್ಟಿನ ಸ್ಥಳ, ಸೂಕ್ಷ್ಮಪ್ರದೇಶದಲ್ಲಿ ನಾಕಾಬಂಧಿ ಹಾಕಿ ವಿಶೇಷ ತಪಾಸಣೆ ನಡೆಸಿದರು.

ಉಡುಪಿ ಜಿಲ್ಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಚೆಕ್ ಪೋಸ್ಟ್, ಧಾರ್ಮಿಕ, ಬಸ್ಸು ನಿಲ್ದಾಣಗಳಲ್ಲಿ ಅಲರ್ಟ್ ಆಗಿರಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯ ಕುಂದಾಪುರ, ಉಡುಪಿ, ಕಾರ್ಕಳ ಭಾಗದ 34 ಚೆಕ್‌ಪೋಸ್ಟ್ ಅಲರ್ಟ್ ಮಾಡಿದ್ದೇವೆ. ಬಂದರು, ಸಮುದ್ರ ವ್ಯಾಪ್ತಿಯಲ್ಲಿ ಕರಾವಳಿ ಕಾವಲು ಪೊಲೀಸರು ಅಲರ್ಟ್ ಆಗಿದ್ದಾರೆ. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ರೌಂಡ್ಸ್‌ನಲ್ಲಿದ್ದಾರೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ ವಿಜಯವಾಣಿಗೆ ತಿಳಿಸಿದ್ದಾರೆ.
ವೀರಪ್ಪ ಮೊಯಿ ಸ್ವಾಗತ: ಗಡಿಯಾಚೆ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯು ಸೇನೆ ನಡೆಸಿದ ದಾಳಿಯನ್ನು ಕೇಂದ್ರದ ಮಾಜಿ ಸಚಿವ ಡಾ.ಎಂ.ವೀರಪ್ಪ ಮೊಯ್ಲಿ ಸ್ವಾಗತಿಸಿದ್ದಾರೆ. ಪಾಕಿಸ್ತಾನ ಹತಾಶ ಹಾಗೂ ಉಗ್ರರನ್ನು ಹೊಂದಿರುವ ದೇಶ. ಆದ್ದರಿಂದ ಆ ದೇಶದಿಂದ ಎದುರಾಗಬಹುದಾದ ಪ್ರತಿದಾಳಿಯನ್ನು ಎದುರಿಸಲು ಭಾರತ ಸಜ್ಜಾಗಿರುವುದು ಅಗತ್ಯ. ಆದರೆ ಪಾಕ್ ಮೇಲೆ ದಾಳಿ ಮೊದಲು ಭಾರತೀಯ ಸೇನೆ ಸೂಕ್ತ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ವಿಶ್ವಾಸವಿದೆ. ದೇಶದ ಭದ್ರತೆ ವಿಚಾರದಲ್ಲಿ ರಾಜಕೀಯವಿಲ್ಲ ಎಂದು ಮಂಗಳವಾರ ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಿಂದಲೇ ಸ್ಪರ್ಧಿಸುವುದಾಗಿ ಪ್ರಶ್ನೆಗೆ ಪ್ರತಿಕ್ರಿಯಿಸಿದರು.