ಅರುಣಾಚಲ ಪ್ರದೇಶದ ಭಾರತ-ಚೀನಾ ಗಡಿಯಲ್ಲಿ ಸಲ್ಮಾನ್​ ಸೈಕ್ಲಿಂಗ್​, ಸಿಎಂ ಪೆಮಾ ಸಾಥ್​

ಮೆಚುಕಾ(ಅರುಣಾಚಲ ಪ್ರದೇಶ): ಮುಂಬೈ ರಸ್ತೆಗಳಲ್ಲಿ ಸೈಕ್ಲಿಂಗ್​ ಮಾಡಿ ಪರಿಚಿತರಾಗಿದ್ದ ಬಾಲಿವುಡ್​​ ಬ್ಯಾಡ್​ ಬಾಯ್​ ಸಲ್ಮಾನ್​ ಖಾನ್​, ಹೊಸ ಬದಲಾವಣೆಯಂತೆ ಅರುಣಾಚಲ ಪ್ರದೇಶದ ಮೆಚುಕಾ ಬಳಿಯಿರುವ ಭಾರತ ಮತ್ತು ಚೀನಾ ಗಡಿ ಪ್ರದೇಶದಲ್ಲಿ ಸೈಕ್ಲಿಂಗ್​ ಮಾಡಿ ಗಮನ ಸೆಳೆದಿದ್ದಾರೆ.

ಅರುಣಾಚಲಾ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಮತ್ತು ಕೇಂದ್ರ ಸಚಿವ ಕಿರಣ್​ ರಿಜಿಜು ಅವರೊಂದಿಗೆ ಸೈಕ್ಲಿಂಗ್​ ಮಾಡುವ ಮೂಲಕ ಬಾಲಿವುಡ್​ ಸುಲ್ತಾನ್​ ಸಲ್ಮಾನ್​ ಖಾನ್ ಗಮನ ಸೆಳೆದರು. ​

ಗುರುವಾರ ನಡೆದ ದಾಲ್ಮಿಯ ಎಂಟಿಬಿ ಅರುಣಾಚಲ್​ ಹಾರ್ನ್​ಬಿಲ್​ ಫ್ಲೈಟ್​ 2018 ಸ್ಪರ್ಧೆಯ ಸಮಾರೋಪ ಸಮಾರಂಭ ಹಾಗೂ ಮೆಚುಕಾದ ಸಾಹಸೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಲ್ಮಾನ್​ ಖಾನ್​ ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡಿದರು.

ಗುರುವಾರ ಪಂಜಾಬ್​ನಿಂದ ಚಾರ್ಟೆಡ್​ ವಿಮಾನದ ಮೂಲಕ ಅಸ್ಸಾಂನ ಡಿಬ್ರುಘಡ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 10:30ಕ್ಕೆ ಬಂದಿಳಿದ ಸಲ್ಮಾನ್​ರನ್ನು ಕೇಂದ್ರ ಸಚಿವ ಕಿರಣ್​ ರಿಜು ಅವರು ಬರಮಾಡಿಕೊಂಡರು. ನಂತರ ಅಲ್ಲಿಂದ ಹೆಲಿಕಾಪ್ಟರ್​ ಮೂಲಕ ಮೆಚುಕಾಗೆ ತೆರಳಿ ಎರಡು ಕಾರ್ಯಕ್ರಮದಲ್ಲಿ ಭಾಗಿಯಾದರು. ಇದೇ ವೇಳೆ ಸಲ್ಮಾನ್​ ಅವರು ಸುಮಾರು 22 ಲಕ್ಷ ರೂ. ಹಣವನ್ನು ಕಾರ್ಯಕ್ರಮಕ್ಕೆ ಕಾಣಿಕೆಯಾಗಿ ನೀಡಿ ಗಮನ ಸೆಳೆದರು.

ಎಂಟು ದಿನಗಳ ಕಾಲ ನಡೆದ ದಾಲ್ಮಿಯ ಎಂಟಿಬಿ ಅರುಣಾಚಲ್​ ಹಾರ್ನ್​ಬಿಲ್​ ಫ್ಲೈಟ್​ 2018 ಸ್ಪರ್ಧೆಗೆ ನವೆಂಬರ್ 14 ರಂದು ಕಿರಣ್​ ರಿಜು ಅವರು ಚಾಲನೆ ನೀಡಿದ್ದರು. ಇದೊಂದು ಬೈಕ್​ ರೇಸ್​ ಸ್ಪರ್ಧೆಯಾಗಿದ್ದು,​ ಅರುಣಾಚಲ ಪ್ರದೇಶದ ಭಾರತ ಮತ್ತು ಚೀನಾ ಗಡಿಯಲ್ಲಿನ ಬೆಟ್ಟಗುಡ್ಡಗಳ ನಡುವೆ ಈ ರೇಸ್​ ಸಾಗುತ್ತದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ವಿವಿಧ ದೇಶಗಳಿಂದ ಸ್ಪರ್ಧಾಳುಗಳು ಆಗಮಿಸುತ್ತಾರೆ. (ಏಜೆನ್ಸೀಸ್​)