More

    ಕೆಲಸಕ್ಕೆ ಗೈರಾದ್ರೆ ಪ್ರೋತ್ಸಾಹಧನ ಕಡಿತ; ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಇಲಾಖೆ ಎಚ್ಚರಿಕೆ

    ಬೆಂಗಳೂರು: ಪ್ರತಿಭಟನೆ ಸಲುವಾಗಿ ಕೆಲಸಕ್ಕೆ ಗೈರಾಗುವ ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ ಹಾಗೂ ಪ್ರೋತ್ಸಾಹಧನ ಕಡಿತಗೊಳಿಸುವಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

    ಬಾಕಿ ಇರುವ ಪ್ರೋತ್ಸಾಹಧನ ಶೀಘ್ರ ಬಿಡುಗಡೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಜ.3ರಂದು ಬೆಂಗಳೂರಿನಲಿ ಬೃಹತ್ ಮೆರವಣಿಗೆಯೊಂದಿಗೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ 12 ಬೇಡಿಕೆಗಳ ಪೈಕಿ 7ಕ್ಕೆ ಪೂರಕವಾಗಿ ಸ್ಪಂದಿಸಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು ಉಳಿದ ಬೇಡಿಕೆಯನ್ನು ಮಾರ್ಚ್ ವೇಳೆಗೆ ಈಡೇರಿಸುವ ಭರವಸೆ ನೀಡಿದ್ದರು. ಆದರೂ ಸೇವೆ ಬಹಿಷ್ಕರಿಸಿ ಮನೆಯಲ್ಲೇ ಕುಳಿತು ಪ್ರತಿಭಟಿಸುವುದಾಗಿ ರಾಜ್ಯ ಆಶಾ ಕಾರ್ಯಕರ್ತೆಯರ ಸಂಯುಕ್ತ ಸಂಘ ಹೇಳಿತ್ತು.

    ಸಂಘದ ಕರೆ ಮೇರೆಗೆ ಸೇವೆ ಬಹಿಷ್ಕರಿಸಿ ಮನೆಯಲ್ಲೇ ಪ್ರತಿಭಟಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನ ಹಾಗೂ ಪ್ರೋತ್ಸಾಹಧನ ಕಡಿತಗೊಳಿಸಬೇಕು. ಜತೆಗೆ ಆಶಾ ಕಾರ್ಯಕರ್ತೆಯರು ತೀವ್ರವಾಗಿ ವಿರೋಧಿಸುತ್ತಿರುವ ಆಶಾ ಸಾಫ್ಟ್ ಅಥವಾ ಆರ್​ಸಿಎಚ್ ಪೋರ್ಟಲ್​ಗೆ ಅವರ ಕಾರ್ಯನಿರ್ವಹಣೆ ಕುರಿತು ನಿತ್ಯ ಸಂಜೆ 5 ಗಂಟೆಯೊಳಗೆ ವರದಿ ಸಲ್ಲಿಸಬೇಕು.

    ತಪ್ಪಿದರೆ ಶಿಸ್ತು ಕ್ರಮ ಜರುಗಿಸಲಾಗುವುದು. ಕೆಲಸಕ್ಕೆ ಹಾಜರಾಗುವಂತೆ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳು ಮನವರಿಕೆ ಮಾಡಿಕೊಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಇಲಾಖೆ ಆಯುಕ್ತರು ಸೂಚಿಸಿದ್ದಾರೆ. ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಆಗದಂತೆ ತಡೆಯಲು ಈ ಸುತ್ತೋಲೆ ಹೊರಡಿಸಿದೆ.

    ಬಹುತೇಕ ಆಶಾ ಕಾರ್ಯಕರ್ತೆಯರು ಸೇವೆಗೆ ಹಿಂದಿರುಗಿದ್ದಾರೆ. ಶೇ.10-15 ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಂತಹವರಿಗೆ ಗೌರವಧನ ಕಡಿತಗೊಳ್ಳಲಿದೆ.

    | ಡಾ. ಪ್ರಭುದೇವಗೌಡ ಆಶಾ ಕಾರ್ಯಕ್ರಮದ ಅಧಿಕಾರಿ, ಆರೋಗ್ಯ ಇಲಾಖೆ

    ಬಲವಂತವಾಗಿ ಕೆಲವರು ಕೆಲಸಕ್ಕೆ ಹಾಜರಾಗಿರಬಹುದು. ಬಹುತೇಕರು ಪ್ರತಿಭಟನೆ ಮುಂದುವರಿಸಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲು ನ್ಯಾಷನಲ್ ಇನ್​ಸ್ಟಿಟ್ಯೂಷನ್ ಆಫ್ ಓಪನ್ ಸ್ಕೂಲ್ ವತಿಯಿಂದ ನಡೆಸುವ ಪರೀಕ್ಷೆಗೂ ಗೈರಾಗಿದ್ದಾರೆ. ಬೇಡಿಕೆಗಳ ಈಡೇರಿಕೆಗಾಗಿ ಆಯಾ ಜಿಲ್ಲಾಧಿಕಾರಿಗಳಿಗೆ ಮತ್ತೊಂದು ಸುತ್ತಿನ ಮನವಿ ಸಲ್ಲಿಸಲಾಗಿದೆ.

    | ಡಿ.ನಾಗಲಕ್ಷ್ಮೀ ಕಾರ್ಯದರ್ಶಿ, ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts