ಎಸ್‌ಬಿಐನಲ್ಲಿ ಕೇಳೋರಿಲ್ಲ ಗ್ರಾಹಕರ ಗೋಳು

ಸಿಬ್ಬಂದಿ ಕೊರತೆ, ಹೆಚ್ಚಿದ ಅಧಿಕಾರಿಗಳ ಬೇಜವಾಬ್ದಾರಿತನ

ಕಾಂತರಾಜ್‌ಹೊನ್ನೇಕೋಡಿ ಸಕಲೇಶಪುರ
ಕಳೆದ ವರ್ಷ ಎಸ್‌ಬಿಐ ನೊಳಗೆ ಎಸ್‌ಬಿಎಂ ವಿಲೀನಗೊಂಡ ಪರಿಣಾಮ ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಿಬ್ಬಂದಿ ಕೊರತೆ, ಮೂಲಸೌಕರ್ಯದ ಕೊರತೆ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳಿಗೆ ಗ್ರಾಹಕರು ಹಿಡಿಶಾಪ ಹಾಕುತ್ತಿದ್ದಾರೆ.
ಸುಮಾರು ಮೂರು ಸಾವಿರಕ್ಕೂ ಅಧಿಕ ಖಾತೆದಾರರು ಹಾಗೂ ನೂರಾರು ಸರ್ಕಾರಿ ಖಾತೆಗಳನ್ನು ಹೊಂದಿರುವ ಬ್ಯಾಂಕ್ ಶಾಖೆಯಲ್ಲಿ ನಿತ್ಯ ನೂಕು ನುಗ್ಗಲು ಉಂಟಾಗುತ್ತಿದೆ. ಖಾತೆದಾರರ ಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿಗಳಿಲ್ಲದಿರುವುದು ಇದಕ್ಕೆಲ್ಲ ಕಾರಣವಾಗಿದ್ದು, ಜನರ ಗೋಳು ಹೇಳತೀರದಾಗಿದೆ. ಇರುವ ನಾಲ್ಕು ಕ್ಯಾಷ್ ಕೌಂಟರ್‌ಗಳ ಪೈಕಿ ಒಂದು ಕೌಂಟರ್‌ನಲ್ಲಿ ಮಾತ್ರ ವ್ಯವಹಾರ ನಡೆಯುತ್ತಿದೆ. ಇದರಿಂದ ಹಣ ಡ್ರಾ ಮಾಡಲು ಹಾಗೂ ಸಂದಾಯ ಮಾಡಲು ಸರತಿ ಸಾಲಿನಲ್ಲಿ ನಿಲ್ಲುವ ಗ್ರಾಹಕರು ಸಂಜೆವರೆಗೂ ಕಾದು ಬಸವಳಿಯುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಡಿಡಿ, ನೆಫ್ಟ್‌ನಂತಹ ಕೆಲಸಗಳಿಗೆ ಬ್ಯಾಂಕ್‌ಗೆ ಹೋದರೆ ದಿನವೇ ಕಳೆದು ಹೋಗುತ್ತಿದೆ ಎಂಬ ದೂರು ವ್ಯಾಪಕವಾಗಿದೆ. ಎಸ್‌ಬಿಎಂ ಎಸ್‌ಬಿಐ ನೊಳಗೆ ವಿಲೀನವಾಗಿರುವುದರಿಂದ ಖಾತೆದಾರರ ಸಂಖ್ಯೆ ಹೆಚ್ಚಾಗಿ ತೊಂದರೆ ಅನುಭವಿಸುವಂತಾಗಿದೆ. ವಾರದ ಸಂತೆಯ ದಿನವಂತೂ ಬ್ಯಾಂಕ್‌ನೊಳಗೆ ಕಾಲಿಡಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಬಗ್ಗೆ ದೂರು ನೀಡಲು ಹೋದರೆ ವ್ಯವಸ್ಥಾಪಕರೇ ಇರುವುದಿಲ್ಲ. ಇದ್ದರೂ ಗ್ರಾಹರೊಂದಿಗೆ ಬೇಜವಬ್ದಾರಿತನದಿಂದ ವರ್ತಿಸುತ್ತಾರೆ. ಕೆಲ ಸಿಬ್ಬಂದಿ ರಜೆ ಮೇಲೆ ಹೋಗಿದ್ದರು. ಈಗ ಕರ್ತವ್ಯಕ್ಕೆ ಹಾಜರಾಗಿದ್ದು, ಸಿಬ್ಬಂದಿ ಸಮಸ್ಯೆ ಇಲ್ಲ. ಬ್ಯಾಂಕ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ ಬ್ಯಾಂಕ್ ವ್ಯವಸ್ಥಾಪಕ. ದೈನಂದಿನ ಬ್ಯಾಂಕ್ ವ್ಯವಹಾರದ ಬಗ್ಗೆ ಸಮಸ್ಯೆ ಪರಿಹರಿಸಲು ಸಾರ್ವಜನಿಕ ಸಂಪರ್ಕ ಅಧಿಕಾರಿಗಳಿಲ್ಲ. ಇನ್ನು ಶಾಖೆಯ ಸಿಬ್ಬಂದಿಯಂತೂ ಗ್ರಾಹಕರ ಜತೆ ಸರಿಯಾಗಿ ಮಾತನಾಡುವುದೇ ಇಲ್ಲ ಎಂಬ ಆರೋಪ ನಾಗರಿಕ ವಲಯದಿಂದ ವ್ಯಕ್ತವಾಗಿದೆ.
ಇದಲ್ಲದೆ ಬ್ಯಾಂಕ್ ಎಟಿಎಂನಲ್ಲಿ ಹರಿದ ಹಾಗೂ ಮಾಸಿದ ನೋಟುಗಳು ಬರುತ್ತಿದ್ದು ಇವುಗಳನ್ನು ಬದಲಿಸಲು ಹೋದರೆ ಎಟಿಎಂ ನಲ್ಲಿ ಬರುವ ಚೀಟಿಗಳನ್ನು ಕೇಳುತ್ತಾರೆ. ಆದರೆ, ಎಟಿಎಂ ನಲ್ಲಿ ಚೀಟಿಗಳೇ ಬರುವುದಿಲ್ಲ ಎಂಬುದು ಗ್ರಾಹಕರ ದೂರು. ಆಧಾರ್ ನೋಂದಣಿಗೆಂದು ಬ್ಯಾಂಕ್‌ಗೆ ಬಂದರೆ ಕನಿಷ್ಠ ಒಂದು ತಿಂಗಳಿನಿಂದ ಮೂರು ತಿಂಗಳವರಗೆ ದಿನಾಂಕ ನಿಗದಿ ಮಾಡಿ ಟೋಕನ್ ನೀಡುತ್ತಿದ್ದು, ಗ್ರಾಮಾಂತರ ಪ್ರದೇಶದಿಂದ ಬರುವ ಜನರಿಗೆ ತೊಂದರೆಯಾಗುತ್ತಿದೆ. ಸಾರ್ವಜನಿಕರ ಕೆಲಸವನ್ನು ನಿರ್ವಹಿಸಲು ವಿಫಲವಾಗಿರುವ ಬ್ಯಾಂಕ್‌ನ ಆಧಾರ್ ನೋಂದಣಿ ಕೇಂದ್ರವನ್ನು ಬೇರೆ ಬ್ಯಾಂಕ್‌ಗೆ ವರ್ಗಾಯಿಸಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.