ಬಿಜೆಪಿ ಮಣಿಸುವ ಶಕ್ತಿ ಮಹಾಘಟಬಂಧನ್‌ಗಿದೆ

ಸಕಲೇಶಪುರ: ದೇಶದ 24ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಸೇರಿ ರಚಿಸಿಕೊಂಡಿರುವ ಮಹಾಘಟಬಂಧನ್‌ನಿಂದ ಬಿಜೆಪಿಯನ್ನು ಮಣಿಸಬಹುದು ಎಂಬುದು ಹಲವು ಚುನಾವಣೆಗಳಲ್ಲಿ ಸಾಬೀತಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ತಾಲೂಕಿನ ಹೆತ್ತೂರು ಗ್ರಾಮದಲ್ಲಿ ಬುಧವಾರ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡಿ ಮಾತನಾಡಿ, ಮಹಾಘಟಬಂಧನ್ ರಚನೆಯಾದ ನಂತರ ನಡೆದ 12 ಉಪಚುನಾವಣೆಗಳಲ್ಲಿ ಬಿಜೆಪಿ ನಾಮಾವಶೇಷವಾಗಿದೆ. ಗಟ್ಟಿಯಾಗಿ ಬೇರೂರಿದ್ದ ದೇಶದ 3 ರಾಜ್ಯಗಳಲ್ಲೂ ಬಿಜೆಪಿ ಅಧಿಕಾರದಿಂದ ಕೆಳಗಿಳಿದಿದೆ. ಕೇಂದ್ರದಲ್ಲಿ ದುರಾಡಳಿತ ನಡೆಸುತ್ತಿರುವ ಸರ್ಕಾರವನ್ನು ಕಿತ್ತೊಗೆಯುವುದೇ ನಮ್ಮೆಲ್ಲರ ಮುಖ್ಯ ಉದ್ದೇಶ ಎಂದರು.

ಮುಂಬರುವ ದಿನಗಳಲ್ಲಿ ನಾನು ಮತ್ತು ಸಿದ್ದರಾಮಯ್ಯ ಮೈತ್ರಿಕೂಟದ ಅಭ್ಯರ್ಥಿಗಳ ಪರ ರಾಜ್ಯಾದ್ಯಂತ ಪ್ರಚಾರ ನಡೆಸಿ ಬಿಜೆಪಿ ಅಭ್ಯರ್ಥಿಗಳ ಸಂಖ್ಯೆಯನ್ನು ಒಂದಂಕಿಗೆ ಇಳಿಸುತ್ತೇವೆ ಎಂದು ಸವಾಲು ಹಾಕಿದರು.
ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ಎ.ಮಂಜು ಅವರನ್ನು ಮಂತ್ರಿಯಾಗಿಸಿ ಅವಕಾಶ ನೀಡಿದ್ದೀರಿ. ನಾನು ಯುವಕ ನನಗೂ ಒಂದು ಅವಕಾಶ ನೀಡಿ. ನಿಮ್ಮ ಮನೆ ಮಗನಾಗಿ ಕೆಲಸ ಮಾಡಲಿದ್ದೇನೆ. ನಾನು ಯಾರೊಬ್ಬರನ್ನೂ ಟೀಕಿಸುವುದಿಲ್ಲ. ಅಭಿವೃದ್ಧಿ ಆಧಾರದ ಮೇಲೆ ಮತಯಾಚನೆ ಮಾಡುತ್ತೇನೆ ಎಂದರು. ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿದರು.

ಬೆಳಗ್ಗೆ 10.30ಕ್ಕೆ ತಾಲೂಕಿನ ಹೊಂಕರವಳ್ಳಿ ಗ್ರಾಮದಿಂದ ಆರಂಭವಾದ ದೇವೇಗೌಡರ ರೋಡ್‌ಶೋ ಆಲೂರು ತಾಲೂಕಿನ ಕೆ ಹೊಸಕೋಟೆ, ಕೆರೋಡಿ, ಮಾಗಲು, ಯಸಳೂರು, ಚಂಗಡಿಹಳ್ಳಿ, ಉಚ್ಚಂಗಿ, ವನಗೂರು, ಹೆತ್ತೂರು, ವಳಲಹಳ್ಳಿ, ಬ್ಯಾಕರವಳ್ಳಿ, ಕ್ಯಾನಹಳ್ಳಿ, ಹಾನುಬಾಳ್, ಸಕಲೇಶಪುರ ಹಾಗೂ ಬೆಳಗೋಡು ಗ್ರಾಮಗಳಲ್ಲಿ ನಡೆಯಿತು.

ಈ ವೇಳೆ ಜಿಪಂ ಸದಸ್ಯರಾದ,ಸುಪ್ರದೀಪ್ತಯಜಮಾನ್, ಚಂಚಲಾ ಕುಮಾರಸ್ವಾಮಿ, ಉಜ್ಮರುಜ್ವಿ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಜಗನ್ನಾಥ್, ಕೊತ್ತನಹಳ್ಳಿ ತಮ್ಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭಾಸ್ಕರ್, ಜೆಡಿಎಸ್ ಅಧ್ಯಕ್ಷ ಕೆ.ಎಲ್ ಸೋಮಶೇಖರ್, ತುಳಸಿ ಪ್ರಸಾದ್, ಸಚ್ಚಿನ್ ಪ್ರಸಾದ್ ಮುಂತಾದವರಿದ್ದರು.

ಮಠಕ್ಕೆ ಭೇಟಿ: ಯಸಳೂರು ಗ್ರಾಮದಲ್ಲಿರುವ ತೆಂಕಲಗೋಡು ಬೃಹನ್ಮಠಕ್ಕೆ ಭೇಟಿ ನೀಡಿದ ಎಚ್.ಡಿ ದೇವೆಗೌಡರು ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.