Sakhi mathagatte kendra davanagere

ದಾವಣಗೆರೇಲಿ ಮಹಿಳಾಸ್ನೇಹಿ ಸಖಿ ಬೂತ್‌ಗಳು

ರಮೇಶ್ ಜಹಗೀರದಾರ್ ದಾವಣಗೆರೆ
ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ಮತಗಟ್ಟೆಗಳಿಗೆ ಆಕರ್ಷಿಸಿ ಮತದಾನ ಪ್ರಮಾಣ ಹೆಚ್ಚಾಗುವಂತೆ ಮಾಡಲು ಜಿಲ್ಲೆಯಲ್ಲಿ 16 ಸಖಿ ಬೂತ್‌ಗಳನ್ನು ಸ್ಥಾಪಿಸಲಾಗುತ್ತಿದೆ.

ಜಿಲ್ಲೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2 ಸಖಿ ಬೂತ್‌ಗಳು ಅಸ್ತಿತ್ವಕ್ಕೆ ಬರಲಿವೆ. ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲಾಡಳಿತ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಸಂಪೂರ್ಣ ಮಹಿಳಾ ಸಿಬ್ಬಂದಿಯೆ ಕಾರ್ಯ ನಿರ್ವಹಿಸುವುದು ಈ ಮತಗಟ್ಟೆಗಳ ವಿಶೇಷತೆಯಾಗಿದೆ. ಮಹಿಳೆಯರು ಭಯ, ಸಂಕೋಚವಿಲ್ಲದೇ ಬಂದು ತಮ್ಮ ಹಕ್ಕು ಚಲಾಯಿಸಲು ಪೂರಕ ವಾತಾವರಣ ಈ ಮತಗಟ್ಟೆಯಲ್ಲಿ ಇರಲಿದೆ. ಅತಿಹೆಚ್ಚು ಮಹಿಳಾ ಮತದಾರರು ಇರುವ, ಕಡಿಮೆ ಮತದಾನ ಆಗುವ ಪ್ರದೇಶಗಳನ್ನು ಗುರುತಿಸಿ ಸಖಿ ಬೂತ್‌ಗಳನ್ನು ಮಾಡಲಾಗುತ್ತಿದೆ.

ಬಣ್ಣ, ಅಲಂಕಾರದ ಮೆರುಗು: ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಹಿಳಾ ಮತದಾರರಿಗಾಗಿ ಆಯ್ದ ಸ್ಥಳಗಳಲ್ಲಿ ಪಿಂಕ್ ಬೂತ್‌ಗಳನ್ನು ಸ್ಥಾಪಿಸಲಾಗಿತ್ತು. ಮತಗಟ್ಟೆ ಒಳಗಿನ ಮ್ಯಾಟ್, ಅಲ್ಲಿರುವ ಬಟ್ಟೆಗಳು, ಟೇಬಲ್ ಕ್ಲಾತ್, ಕುರ್ಚಿಗಳು ಎಲ್ಲವೂ ಪಿಂಕ್ ಬಣ್ಣದಿಂದ ಕೂಡಿದ್ದವು.

ಅಲಂಕಾರಕ್ಕಾಗಿ ಬಲೂನ್‌ಗಳನ್ನು ಕಟ್ಟಲಾಗಿತ್ತು. ಮಹಿಳೆಯರ ಜತೆಗೆ ಬರುವ ಪುಟ್ಟ ಮಕ್ಕಳಿಗಾಗಿ ಆಟದ ಸಾಮಾನುಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಈ ಬಾರಿಯ ವಿನ್ಯಾಸ ಹೇಗಿರಬೇಕು ಎಂಬ ಮಾಹಿತಿ ಆಯೋಗದಿಂದ ಬರಬೇಕಿದೆ.

ಸಖಿ ಬೂತ್‌ಗಳು: ಈ ಬಾರಿ ಗುರುತಿಸಲಾಗಿರುವ ಸಖಿ ಬೂತ್‌ಗಳ ವಿಧಾನಸಭಾವಾರು ವಿವರ ಹೀಗಿದೆ.
ಜಗಳೂರು: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಹೊಸ ಕಟ್ಟಡ) ಬಿಳಿಚೋಡು, ಜಗಳೂರು ಪಟ್ಟಣದ ಸಂತೆಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ಹರಪನಹಳ್ಳಿ: ನಂದಿಬೇವೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹರಪನಹಳ್ಳಿ ಉಪ್ಪಾರಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ಹರಿಹರ: ಕೊಂಡಜ್ಜಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹರಿಹರದ ಮೈಸೂರು ಕಿರ್ಲೋಸ್ಕರ್ ಪ್ರೌಢಶಾಲೆ.

ದಾವಣಗೆರೆ ಉತ್ತರ: ದೊಡ್ಡಬಾತಿಯ ಸರ್ಕಾರಿ ಪ್ರೌಢಶಾಲೆ, ವಿನೋಬನಗರ 4ನೇ ಮೇನ್, 1ನೇ ಕ್ರಾಸ್‌ನ ಸೇಂಟ್ ಮೇರೀಸ್ ಕಾನ್ವೆಂಟ್. ದಾವಣಗೆರೆ ದಕ್ಷಿಣ: ಜಾಲಿನಗರದ ದುರ್ಗಾಂಬಿಕಾ ಟ್ರಸ್ಟ್ ಕಮಿಟಿ ಶಾಲೆ, ಶಿರಮಗೊಂಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಮಾಯಕೊಂಡ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಣಜಿ. ತ್ಯಾವಣಿಗೆಯ ಸರ್ಕಾರಿ ಪ್ರೌಢಶಾಲೆ. ಚನ್ನಗಿರಿ: ಕೆರೆಬಿಳಚಿ ಗ್ರಾಮೀಣ ಪ್ರೌಢಶಾಲೆ, ಚನ್ನಗಿರಿಯ ಸರ್ಕಾರಿ ಸಂಯುಕ್ತ ಬಾಲಕಿಯರ ಪ್ರೌಢಶಾಲೆ. ಹೊನ್ನಾಳಿ: ಹೊನ್ನಾಳಿಯ ಶ್ರೀ ಚನ್ನಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆ, ಸುರಹೊನ್ನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ಜಿಲ್ಲಾದ್ಯಂತ ಸಖಿ ಬೂತ್‌ಗಳನ್ನು ಈಗಾಗಲೇ ಗುರುತಿಸಲಾಗಿದೆ. ಆಯೋಗದ ಸೂಚನೆಯಂತೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗುವುದು.
ಎಚ್.ಬಸವರಾಜೇಂದ್ರ ಜಿಪಂ ಸಿಇಒ

Leave a Reply

Your email address will not be published. Required fields are marked *