ಹುಬ್ಬಳ್ಳಿ: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಇಲ್ಲಿಯ ಕೆಎಲ್ಇ ಸಂಸ್ಥೆಯ ಎಂ.ಆರ್. ಸಾಖರೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಿ. 13ರಂದು ಸಂಜೆ 4ಕ್ಕೆ ಸುವರ್ಣ ಉತ್ಸವ ಸ್ನೇಹ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಪ್ರಾಚಾರ್ಯ ಡಾ. ಶೀತಲ್ ತಿವಾರಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ಸವದ ಅಂಗವಾಗಿ ಕಳೆದ ಜನೆವರಿಯಿಂದ ಇಲ್ಲಿಯವರೆಗೆ ವರ್ಷಪೂರ್ತಿ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದೀಗ 50 ವರ್ಷಗಳ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದರು.
ಚಿತ್ರನಟ, ಸ್ಪೂರ್ತಿದಾಯಕ ಮಾತುಗಾರ ರಮೇಶ ಅರವಿಂದ ಅವರು ವಿಶೇಷ ಅತಿಥಿಯಾಗಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಕರ್ನಾಟಕ ವಿಶ್ವವಿದ್ಯಾಲಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡೀನ್ ಡಾ. ಅರವಿಂದ ಮೂಲಿಮನಿ ಅತಿಥಿಗಳಾಗಿ ಭಾಗವಹಿಸುವರು. ಕೆಎಲ್ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸುವರು. ಹಳೇ ವಿದ್ಯಾರ್ಥಿಗಳು, ಹಿರಿಯ ಶಿಕ್ಷಕರು, ಪಾಲಕರು ಸೇರಿದಂತೆ ಸುಮಾರು 3 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ ಎಂದರು.
ಹಳೇ ವಿದ್ಯಾರ್ಥಿಗಳ ಸಭೆ:
ಸುವರ್ಣ ಉತ್ಸವದ ಅಂಗವಾಗಿ ಶಾಲೆಯ ಹಳೇ ವಿದ್ಯಾರ್ಥಿಗಳ ಸಮ್ಮೇಳನವನ್ನು ಡಿ. 22ರಂದು ಬೆಳಗ್ಗೆ 10.30ಕ್ಕೆ ಶಾಲೆ ಆವರಣದಲ್ಲಿ ಏರ್ಪಡಿಸಲಾಗಿದೆ. ಅಂತಾರಾಷ್ಟ್ರೀಯ ಹಿಂದುಸ್ತಾನಿ ಶಾಸ್ತ್ರೀಯ ಗಾಯಕ ಪಂ. ಮೃತ್ಯುಂಜಯ ಶೆಟ್ಟರ್, ಮಿಸ್ ಯುನಿವರ್ಸ್ ಪೆಟೈಟ್ ಶ್ರುತಿ ಹೆಗಡೆ ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು. ಕೆಎಲ್ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸುವರು ಎಂದು ಡಾ. ತಿವಾರಿ ತಿಳಿಸಿದರು.
ಈಗಾಗಲೇ 350ಕ್ಕೂ ಹೆಚ್ಚು ಹಳೇ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಸಾಧಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದರು.
ಸಂಜಯ ಕುಂಬಾರ, ಮಹೇಶ್ವರಿ ಹೊನ್ನಣ್ಣವರ, ಸುಶೀಲಾ ಭಟ್ಟ, ಡಾ. ಬಿ.ಎಸ್. ಮಾಳವಾಡ ಗೋಷ್ಠಿಯಲ್ಲಿದ್ದರು.