ರಾಜಕೀಯ ಎನ್​ಕೌಂಟರ್ ಕುರಿತಾದ ಐತಿಹಾಸಿಕ ತೀರ್ಪು

ರಾಜ್ಯವೊಂದರ ಮುಖ್ಯಮಂತ್ರಿ ಹಾಗೂ ಗೃಹಸಚಿವರು ಜನಪ್ರಿಯತೆಯ ತುತ್ತತುದಿಯಲ್ಲಿರುವಾಗ ಅವರನ್ನು ಗುರಿಯಾಗಿಸಿ ಯಾವುದೇ ಸರ್ಕಾರ ಹೀಗೆ ನಡೆದುಕೊಳ್ಳುವುದನ್ನು ಊಹಿಸಲೂ ಆಗದು. ಶ್ರೀಸಾಮಾನ್ಯರಲ್ಲಿ ಹೊಮ್ಮಿರುವ ಈ ಭಯ, ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರಿಂದ ಬರುವ ಪ್ರಶ್ನೆಯೂ ಹೌದು.

ಇದು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲೇ ಐತಿಹಾಸಿಕ ತೀರ್ಪು ಎನ್ನಲಡ್ಡಿಯಿಲ್ಲ. ಸೊಹ್ರಾಬುದ್ದೀನ್ ಎನ್​ಕೌಂಟರ್ ಪ್ರಕರಣದಲ್ಲಿ, ಅಂದು ಗುಜರಾತ್ ರಾಜ್ಯದ ಗೃಹಸಚಿವರಾಗಿದ್ದ ಅಮಿತ್ ಷಾರನ್ನು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಿಲುಕಿಸಿದ ಕಾಂಗ್ರೆಸ್​ನ ಆಡಳಿತಾರೂಢ ನಾಯಕರು ಹಾಗೂ ಸಿಬಿಐನಲ್ಲಿರುವ ಅವರ ‘ಕೈಗೊಂಬೆ’ ಅಧಿಕಾರಿಗಳ ಪಿತೂರಿಯನ್ನೂ ಇದು ಬಟಾಬಯಲು ಮಾಡಿತು. ಸೊಹ್ರಾಬುದ್ದೀನ್ ಲಷ್ಕರ್-ಎ-ತೊಯ್ಬ ಸಂಘಟನೆಯೊಂದಿಗೆ ನಂಟುಹೊಂದಿದ್ದ ಭಯೋತ್ಪಾದಕನಾಗಿದ್ದು, ಎಕೆ 47 ಬಂದೂಕುಗಳು, ಹ್ಯಾಂಡ್ ಗ್ರೆನೇಡುಗಳಂಥ ಶಸ್ತ್ರಾಸ್ತ್ರಗಳು ಮತ್ತು ಸ್ಪೋಟಕ ಸಾಮಗ್ರಿಗಳ ಭಾರಿ ಸಂಗ್ರಹವನ್ನೇ ಹೊಂದಿದ್ದ. ದೇಶದ ಪಾಲಿಗೆ ಅಪಾಯಕಾರಿ ವ್ಯಕ್ತಿಯಾಗಿದ್ದ. ಆದರೆ, ಅಂದು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು, ಅಮಿತ್ ಷಾ ವಿರುದ್ಧದ ‘ರಾಜಕೀಯ ಎನ್​ಕೌಂಟರ್’ ಅಸ್ತ್ರವಾಗಿಸಲೆಂದೇ ಸೊಹ್ರಾಬುದ್ದೀನ್ ಪ್ರಕರಣವನ್ನು ಬಳಸಿಕೊಳ್ಳಲಾಯಿತು.

ಸಿಬಿಐ ಇಂಥದೊಂದು ವ್ಯವಸ್ಥಿತ ಕಾರ್ಯಾಚರಣೆ ಮಾಡಲೆಂದು, ಕಾಂಗ್ರೆಸ್ ನೇತೃತ್ವದ ಯುಪಿಎ ಸಿದ್ಧಪಡಿಸಿದ ‘ಚಿತ್ರಕತೆ’ ಅದೆಷ್ಟು ನಿರ್ಲಜ್ಜವಾಗಿ ಕಾರ್ಯರೂಪಕ್ಕೆ ಬಂತೆಂದರೆ, ನರೇಂದ್ರ ಮೋದಿಯವರನ್ನು ಅಂತಿಮವಾಗಿ ದೋಷಾರೋಪಣೆಯ ಬಲೆಯಲ್ಲಿ ಸಿಲುಕಿಸುವುದಕ್ಕೆ ಅಮಿತ್ ಷಾರನ್ನು ಹೀಗೆ ಬಲಿಪಶುವಾಗಿಸಬೇಕಾದ್ದು ಅತ್ಯಗತ್ಯ ಎಂಬರ್ಥದ ಟಿಪ್ಪಣಿಯನ್ನು ತನ್ನ ಕಡತದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸುವಷ್ಟರ ಮಟ್ಟಿಗೆ ಸಿಬಿಐ ಮುಂದುವರಿಯಿತು. ಇದು ಆಘಾತಕಾರಿ ಸಂಗತಿಯಲ್ಲದೆ ಮತ್ತೇನು?

ಹೀಗೆ, ಅಮಿತ್ ಷಾರ ರಾಜಕೀಯ ಜೀವನವನ್ನು ಹಾಳುಗೆಡವಲೆಂದು ಯುಪಿಎ ಸರ್ಕಾರ ತನಗೆ ನೀಡಿದ್ದ ರೂಪುರೇಷೆಯ ಒಂದು ಭಾಗವಾಗಿ, ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿದ್ದ ಧೀರೋದಾತ್ತ ಪೊಲೀಸ್ ಅಧಿಕಾರಿಗಳನ್ನು ಬಂಧಿಸುವಂಥ ಅತಿರೇಕದ ಕ್ರಮಕ್ಕೂ ಸಿಬಿಐ ಮುಂದಾಯಿತು. ಗುಜರಾತ್ ಮಾತ್ರವಲ್ಲದೆ ರಾಜಸ್ಥಾನಕ್ಕೆ ಸೇರಿದ ಹಾಗೂ ಡಿಐಜಿ ಶ್ರೇಣಿಯಿಂದ ಮೊದಲ್ಗೊಂಡು ಸಶಸ್ತ್ರ ಪೇದೆಗಳವರೆಗಿನ ಸ್ತರದ ಹಲವಾರು ಪೊಲೀಸ್ ಅಧಿಕಾರಿಗಳು ಹೀಗೆ ಸಿಬಿಐನಿಂದ ಬಂಧಿಸಲ್ಪಟ್ಟರು; ಭಯೋತ್ಪಾದಕ ಶಕ್ತಿಗಳ ವಿರುದ್ಧ ಸೆಣಸುತ್ತಿದ್ದ ಪೊಲೀಸ್ ಪಡೆಯ ನೈತಿಕ ಸ್ಥೈರ್ಯವನ್ನು ಈ ನಡೆ ಸಂಪೂರ್ಣ ಹಾಳುಗೆಡವಿದ್ದು ಸುಳ್ಳಲ್ಲ. ಈ ಪ್ರಕರಣದ ಒಂದು ಸ್ವಾರಸ್ಯಕರ ಅಂಶವನ್ನಿಲ್ಲಿ ಗಮನಿಸಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2010ರಲ್ಲಿ ನೀಡಿದ್ದ ಹೇಳಿಕೆಯಲ್ಲಿ, ತನ್ನ ಸೋದರನ ಎನ್​ಕೌಂಟರ್ ವಿಷಯದಲ್ಲಿ ಅಮಿತ್ ಷಾ ಹಾಗೂ ಇತರ ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಸೇರಿಸಿದ್ದು ಸಿಬಿಐ ಅಧಿಕಾರಿಗಳೇ ವಿನಾ, ತಾನಲ್ಲ ಎಂಬುದಾಗಿ ಸೊಹ್ರಾಬುದ್ದೀನ್​ನ ಖಾಸಾ ಸೋದರ ನಯಾಮುದ್ದೀನ್ ಶೇಖ್ ಎಂಬಾತನೇ ಸವೋಚ್ಚ ನ್ಯಾಯಾಲಯದಲ್ಲಿ ಹೇಳಿಕೊಂಡಿದ್ದ. ಇಲ್ಲಿನ ಘಟನಾವಳಿಗಳನ್ನೇ ಕೊಂಚ ಅವಲೋಕಿಸಿ- ಸದರಿ ಘಟನೆ ನಡೆದಿದ್ದು 2005ರಲ್ಲಿ; 5 ವರ್ಷಗಳ ತರುವಾಯ, ಕಟ್ಟುಕತೆಯ ರೂಪದಲ್ಲಿದ್ದ ಹೇಳಿಕೆಗಳನ್ನು ಅತ್ಯಂತ ಗಂಭೀರ ಸ್ವರೂಪದಲ್ಲಿ ದಾಖಲಿಸಿಕೊಳ್ಳಲಾಯಿತು. ಅಂದು ಕೇಂದ್ರ ಗೃಹ ಸಚಿವರಾಗಿದ್ದ ಪಿ. ಚಿದಂಬರಂ ಎಸಗಿದ ಹೀನಕಾರ್ಯವಿದು ಎಂಬುದಾಗಿ ಕಾನೂನು ಪರಿಣತರು ಮತ್ತು ರಾಜಕೀಯ ಪಕ್ಷಗಳು ಶಂಕಿಸುವುದಕ್ಕೆ ಗ್ರಾಸ ಒದಗಿಸಿರುವುದು ಈ ಸಮಂಜಸ ಕಾರಣವೇ. ಗುಜರಾತ್​ನಲ್ಲಿ, ಅಷ್ಟೇಕೆ ದೇಶದ ಇತರ ಭಾಗಗಳಲ್ಲೂ ನರೇಂದ್ರ ಮೋದಿಯವರ ಜನಪ್ರಿಯತೆ ಬೆಳೆಯುತ್ತಲೇ ಇದ್ದುದನ್ನು ಕಂಡು ಅವರು ಮತ್ತು ಅವರ ಆಪ್ತ ನಾಯಕರು ಚಿಂತಿತರಾಗಿದ್ದುದು ದಿಟ; ಅಷ್ಟೇ ಏಕೆ, ಮಾನವ ಹಕ್ಕುಗಳ ಹೆಸರಲ್ಲಿ, ನಕ್ಸಲರು ಮತ್ತಿತರ ಉಗ್ರವಾದಿ ಗುಂಪುಗಳಿಗೂ ಕೆಲವೊಂದು ಹಿರಿಯ ರಾಜಕೀಯ ನಾಯಕರು ಮತ್ತು ಅಧಿಕಾರಿಗಳು ಬೆಂಬಲ ನೀಡುತ್ತಿದ್ದರು ಎಂಬುದು ಪುರಾವೆಗಳಿಂದ ಸಾಬೀತಾಗಿದೆ. ದೇಶದ ವಿಭಿನ್ನ ಭಾಗಗಳಲ್ಲಿ ನೂರಾರು ಮುಗ್ಧಜನರ ಹತ್ಯೆಯಾಗುವಂತಾಯಿತು ಎಂದರೆ ಅದಕ್ಕೆ ಇಂಥ ಪ್ರಮಾದಗಳೇ ಕಾರಣ. ಅಪರಾಧಿಗಳ ಪ್ರತಿಯೊಂದು ಎನ್​ಕೌಂಟರನ್ನೂ ‘ವಾಡಿಕೆಯ ಪರಿಪಾಠ’ ಮತ್ತು ‘ಖೋಟಾ ಪ್ರಕರಣ’ವೆಂದು ನಮ್ಮ ಜನರು ಗ್ರಹಿಸುವುದು ದುರದೃಷ್ಟಕರ. ಇಂಥ ಪ್ರಕರಣಗಳನ್ನು ನಿರ್ಣಯಿಸಲು ನಮ್ಮ ಕಾನೂನು ವ್ಯವಸ್ಥೆಯೂ ವರ್ಷಗಳನ್ನೇ ತೆಗೆದುಕೊಳ್ಳುವುದರಿಂದ, ಕೆಲವೊಮ್ಮೆ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳು ಮತ್ತು ಅವರು ಕುಟುಂಬಿಕರು ಅಗಾಧ ನೋವನ್ನು ಅನುಭವಿಸಬೇಕಾಗಿ ಬರುತ್ತದೆ.

ಮೊದಲೇ ಉಲ್ಲೇಖಿಸಿದಂತೆ, ತನಗಿತ್ತ ‘ರಾಜಕೀಯ ಚಿತ್ರಕತೆ’ಯ ಅನುಸಾರ ಅಮಿತ್ ಷಾರನ್ನು ಸಿಬಿಐ ಬಂಧಿಸಿತು. ಇದಕ್ಕಿಂತಲೂ ಆಘಾತಕಾರಿ ಸಂಗತಿಯೆಂದರೆ, ಷಾ ಜಾಮೀನು ಅರ್ಜಿಗೆ ವಿರೋಧ/ಆಕ್ಷೇಪಣೆ ಒಡ್ಡುವುದಕ್ಕೆ ಹಾಗೂ ಮ್ಯಾಜಿಸ್ಟ್ರೇಟರ ಸಮ್ಮುಖದಲ್ಲಿ ಸಲ್ಲಿಕೆಯಾಗುವ ಹವಾಲತ್ತು (ರಿಮ್ಯಾಂಡ್) ಅರ್ಜಿಯಂಥ ಸಣ್ಣಪುಟ್ಟ ಅಹವಾಲುಗಳ ವಿಷಯದಲ್ಲಿ ವಾದಿಸುವುದಕ್ಕೆ ಅಹಮದಾಬಾದ್​ನಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರಾಗಲೆಂದು ಸವೋಚ್ಚ ನ್ಯಾಯಾಲಯದ ಶ್ರೇಷ್ಠ ವಕೀಲರುಗಳು ನವದೆಹಲಿಯಿಂದ ಹಾರಿಬಂದರು. ಅಂತಿಮವಾಗಿ, ಗುಜರಾತ್ ಉಚ್ಚ ನ್ಯಾಯಾಲಯ ಅಮಿತ್ ಷಾರನ್ನು ನಿಯತ ಜಾಮೀನಿನ ಮೇಲೆ ಬಿಡುಗಡೆ ಮಾಡಿತು. ಅಮಿತ್ ಷಾರನ್ನು ಗುರಿಯಾಗಿಸಿಕೊಳ್ಳುವುದು ಇಷ್ಟಕ್ಕೇ ಕೊನೆಗೊಳ್ಳಲಿಲ್ಲ. 2012ರ ಸೆಪ್ಟೆಂಬರ್ 4ರಂದು ಮತ್ತೊಂದು ಆರೋಪಪಟ್ಟಿ ಸಲ್ಲಿಸಿದ ಸಿಬಿಐ, ಸೊಹ್ರಾಬುದ್ದೀನ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯೆನಿಸಿದ್ದ ತುಳಸೀರಾಂ ಪ್ರಜಾಪತಿ ಸಾವಿನಲ್ಲಿನ ಓರ್ವ ಆರೋಪಿ ಎಂಬ ಹಣೆಪಟ್ಟಿಯನ್ನು ಅವರಿಗೆ ಕಟ್ಟಿಬಿಟ್ಟಿತು. ಸಿಬಿಐ ಸಲ್ಲಿಸಿದ್ದ 29.04.2011ರ ದಿನಾಂಕವಿದ್ದ ಎಫ್​ಐಆರ್​ಗೆ ಪ್ರತಿಯಾಗಿ ಅಮಿತ್ ಷಾ ಹೊಸ ರಿಟ್ ಸಲ್ಲಿಸಿದರು. ಈ ಸಂಬಂಧದ ನ್ಯಾಯಾಲಯ ಕಲಾಪಗಳನ್ನು ಊರ್ಜಿತವಲ್ಲವೆಂದು ರದ್ದುಗೊಳಿಸಿದ ಸವೋಚ್ಚ ನ್ಯಾಯಾಲಯ, ‘ಎರಡನೇ ಎಫ್​ಐಆರ್ ಮತ್ತು ಹೊಸದಾಗಿ ಸಲ್ಲಿಕೆಯಾಗಿರುವ ಆರೋಪಪಟ್ಟಿಯ ಅಭಿಪ್ರಾಯವು, ಸಂವಿಧಾನದ 14, 20 ಮತ್ತು 21ನೇ ವಿಧಿಗಳ ಅನುಸಾರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ರೀತಿಯಲ್ಲಿದೆ; ಏಕೆಂದರೆ, ಈಗಾಗಲೇ ಒಂದು ಎಫ್​ಐಆರ್ ಸಲ್ಲಿಕೆಯಾಗಿರುವ ಆರೋಪಿತ ಅಪರಾಧವೊಂದಕ್ಕೆ ಇದು ಸಂಬಂಧಿಸಿದೆ’ ಎಂದಿತು.

ತುಳಸೀರಾಂ ಪ್ರಜಾಪತಿ ಪ್ರಕರಣದಲ್ಲಿ ತಮ್ಮನ್ನು ಮತ್ತೊಮ್ಮೆ ಬಂಧಿಸುವ ಸಿಬಿಐನ ಎರಡನೇ ಪ್ರಯತ್ನ ವಿಫಲವಾದಾಗ ಮತ್ತು ವಿಚಾರಣೆಗಳು ಶುರುವಾದಾಗ, ತಮ್ಮನ್ನು ಆರೋಪದಿಂದ ಖುಲಾಸೆ ಮಾಡುವಂತೆ ಅಮಿತ್ ಷಾ ಅಹವಾಲು ಸಲ್ಲಿಸಿದರು. ‘ರಾಜಕೀಯ ಕಾರಣಗಳಿಗಾಗಿ ತಮ್ಮ ಹೆಸರನ್ನು ಸೇರ್ಪಡೆ ಮಾಡಲಾಗಿದೆ ಎಂಬ ಅರ್ಜಿದಾರರ/ಆಪಾದಿತರ ವಾದದಲ್ಲಿ ಹುರುಳಿದೆ ಎಂದು ಕಂಡುಬಂದಿದೆ…’ ಎನ್ನುವ ಮೂಲಕ ನ್ಯಾಯಾಲಯ ಅದಕ್ಕೆ ಅನುಮತಿಸಿತು.

ಈಗ, ಒಂದಿಡೀ ಘಟನೆಯ ಚಿತ್ರಾವಳಿಯೇ ನಮ್ಮ ಮುಂದಿದೆ. ಸಿಬಿಐನ ಕಾರ್ಯವೈಖರಿಯ ಕುರಿತಾಗಿ ನ್ಯಾಯಾಲಯ ಏನು ಹೇಳಿದೆ ಎಂಬುದನ್ನು ದೇಶ ಅರಿಯುವ ಅಗತ್ಯವಿದೆ. ಈ ಪ್ರಕರಣದಲ್ಲಿ ನ್ಯಾಯಮೂರ್ತಿಗಳು ವ್ಯಕ್ತಪಡಿಸಿದ ಸ್ಪಷ್ಟ ಅಭಿಪ್ರಾಯ ಹೀಗಿತ್ತು- ‘ಒಂದಿಡೀ ವಾದ-ಪ್ರತಿವಾದಗಳನ್ನು ಆಲಿಸಿದ ನಂತರ, ಸಾಕ್ಷಿಗಳು ‘ಪ್ರತಿಕೂಲ ಸಾಕ್ಷಿ’ಗಳಾಗಿ ಬದಲಾಗಿದ್ದಾರೆಂದು ಹೇಳಿರುವೆ. ಪ್ರತಿಕೂಲ ಸಾಕ್ಷಿಗಳಾಗಿ ಮಾರ್ಪಟ್ಟಿದ್ದಾರೆಂದರೆ, ವಿಚಾರಣೆ/ತನಿಖೆಯ ಸಂದರ್ಭದಲ್ಲಿ ಸಿಬಿಐ ದಾಖಲಿಸಿಕೊಂಡಿದ್ದ ತಂತಮ್ಮ ಹೇಳಿಕೆಗಳ ಅನುಸಾರ ಅವರು ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿಯಲಿಲ್ಲವೆಂದರ್ಥ. ನ್ಯಾಯಾಲಯದಲ್ಲಿ ಅವರು ನುಡಿಯುತ್ತಿರುವ ಸಾಕ್ಷ್ಯವು, ತನಿಖೆ/ವಿಚಾರಣೆಯ ಸಂದರ್ಭದಲ್ಲಿ ಸಿಬಿಐ ದಾಖಲಿಸಿಕೊಂಡಿರುವ ಹೇಳಿಕೆಗಳು ದಂಡ ಪ್ರಕ್ರಿಯಾ ಸಂಹಿತೆಯ ಪರಿಚ್ಛೇದ 161ರ ಅನುಸಾರ ತಪ್ಪಾಗಿವೆ ಎಂಬ ಸತ್ಯವನ್ನು ನಿಚ್ಚಳವಾಗಿ ಅನಾವರಣಗೊಳಿಸಿದೆ. ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸತ್ಯವನ್ನು ಕಂಡುಕೊಳ್ಳುವುದಕ್ಕಿಂತ ಬೇರಾವುದೋ ಸಂಗತಿಯಲ್ಲಿ ಸಿಬಿಐ ವ್ಯಸ್ತವಾಗಿತ್ತು ಎಂಬ ಸಂಗತಿಯನ್ನು ದಾಖಲಿಸಲು ನನಗಾವ ಹಿಂಜರಿಕೆಯೂ ಇಲ್ಲ. ಪೂರ್ವಭಾವಿಯಾಗಿ ಕಲ್ಪಿಸಿದ ಮತ್ತು ಪೂರ್ವಾಲೋಚಿತವಾದ ನಿರ್ದಿಷ್ಟ ಸಿದ್ಧಾಂತವೊಂದನ್ನು ಸಾಬೀತು ಮಾಡುವುದರಲ್ಲಿಯೇ ಸಿಬಿಐಗೆ ಹೆಚ್ಚಿನ ಕಾಳಜಿಯಿತ್ತೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಆರೋಪಿ ಸಂಖ್ಯೆ 16ರ ಅರ್ಜಿಗೆ ಸಂಬಂಧಿಸಿ ಖುಲಾಸೆ ಆದೇಶ ನೀಡುವಾಗ, ಸದರಿ ತನಿಖೆ ರಾಜಕೀಯ ಚಿತಾವಣೆಯನ್ನು ಒಳಗೊಂಡಿತ್ತು ಎಂಬ ಸಂಗತಿಯನ್ನು ನನ್ನ ಪೂರ್ವವರ್ತಿಯು ಸ್ಪಷ್ಟವಾಗಿ ದಾಖಲಿಸಿದ್ದಾರೆ. ಸಮಗ್ರ ಮಾಹಿತಿಯನ್ನು ಯಾವುದೇ ಪಕ್ಷಪಾತವಿಲ್ಲದೆ/ರಾಗದ್ವೇಷವಿಲ್ಲದೆ ಪರಿಗಣಿಸಿ, ಪ್ರತಿಯೊಬ್ಬ ಸಾಕ್ಷಿ ಮತ್ತು ಪ್ರತಿಯೊಂದು ಪುರಾವೆಯನ್ನೂ ನಿಕಟವಾಗಿ ಅವಲೋಕಿಸಿರುವ ನನಗೆ, ‘ಸಿಬಿಐನಂಥ ಅಗ್ರಗಣ್ಯ ತನಿಖಾಸಂಸ್ಥೆಯು ರಾಜಕೀಯ ನಾಯಕರನ್ನು ಶತಾಯಗತಾಯ ಸಿಕ್ಕಿಬೀಳಿಸುವಂಥ ಒಂದು ಪೂರ್ವಾಲೋಚಿತ ಸಿದ್ಧಾಂತವನ್ನು ಮತ್ತು ರೂಪರೇಷೆಯೊಂದನ್ನು ಹೊಂದಿತ್ತು; ತತ್ಪರಿಣಾಮವಾಗಿ, ಕಾನೂನಿನ ಅನುಸಾರವಾಗಿ ತನಿಖೆ/ವಿಚಾರಣೆಯೊಂದನ್ನು ಕೈಗೊಳ್ಳುವುದಕ್ಕಿಂತ ಹೆಚ್ಚಾಗಿ ಆ ಗುರಿಯನ್ನು ಸಾಧಿಸುವುದಕ್ಕೆ ಅಗತ್ಯವಾದ ಕಸರತ್ತುಗಳಲ್ಲೇ ವ್ಯಸ್ತವಾಯಿತು’ ಎಂಬ ಸಂಗತಿಯನ್ನು ದಾಖಲಿಸಲು ಯಾವ ಹಿಂಜರಿಕೆಯೂ ಇಲ್ಲ. ಈ ಪ್ರಕರಣದಲ್ಲಿ, ತನ್ನ ಪೂರ್ವಕಲ್ಪಿತ ಗುರಿಸಾಧನೆಗೆ ರೂಪುಗೊಂಡಿದ್ದ ರೂಪರೇಷೆಯನ್ನು ಕಾರ್ಯರೂಪಕ್ಕೆ ತರುವ ದಿಕ್ಕಿನಲ್ಲೇ ಒಂದಿಡೀ ತನಿಖಾ ಪ್ರಕ್ರಿಯೆ ಸಾಗಿತ್ತು ಮತ್ತು ಹೇಗಾದರೂ ಸರಿ ರಾಜಕೀಯ ನಾಯಕರನ್ನು ಸಿಲುಕಿಸಲೇಬೇಕು ಎಂಬ ಉತ್ಸಾಹದ ಭರದಲ್ಲಿ ಸಿಬಿಐ ಸಾಕ್ಷಿ-ಪುರಾವೆಗಳನ್ನು ಹುಟ್ಟುಹಾಕಿತು. ದಂಡ ಪ್ರಕ್ರಿಯಾ ಸಂಹಿತೆಯ ಪರಿಚ್ಛೇದ 161 ಮತ್ತು/ಅಥವಾ 164ರ ಅನುಸಾರ ದಾಖಲಿಸಿಕೊಳ್ಳಲಾಗಿದೆ ಎಂದು ತೋರಿಸಿಕೊಳ್ಳುವ ರೀತಿಯಲ್ಲಿ ಆರೋಪಪಟ್ಟಿಯಲ್ಲಿ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು ಸಾದರಪಡಿಸಿದೆ. ಇಂಥ ಸಾಕ್ಷ್ಯಗಳು ನ್ಯಾಯಾಲಯದ ಪರಿಶೀಲನೆಯನ್ನು ಎದುರಿಸಿ ನಿಲ್ಲಲಾರವು. ರಾಜಕೀಯ ನಾಯಕರನ್ನು ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶದಿಂದಾಗಿ ಸಿಬಿಐ ಹೀಗೆ ಹೇಳಿಕೆಗಳನ್ನು ತಪ್ಪಾಗಿ ದಾಖಲಿಸಿಕೊಂಡಿರುವುದು ಸಾಕ್ಷಿಗಳ ಹೇಳಿಕೆಗಳಿಂದ ಸ್ಪಷ್ಟವಾಗಿದೆ. ಹಿಂದೆ ದಾಖಲಾಗಿದ್ದ ತನಿಖಾಪ್ರಕ್ರಿಯೆಯ ನಕಲನ್ನು ಬಳಸಿಕೊಳ್ಳುವ ಮೂಲಕ ಸಿಬಿಐ ಗಡಿಬಿಡಿಯಲ್ಲಿ ತನಿಖೆಯನ್ನು ಸಂಪೂರ್ಣಗೊಳಿಸಿರುವುದು ಮತ್ತು ತನ್ಮೂಲಕ ತನಿಖೆಯ ಸಾರಭೂತ ಭಾಗದೆಡೆಗೆ ನಿರ್ಲಕ್ಷ್ಯ ತೋರಿರುವುದು, ಯಾವುದೇ ಸಂಚಿನ ಅರಿವಿರದ ಮುಗ್ಧ ಪೊಲೀಸ್ ಅಧಿಕಾರಿಗಳನ್ನು ಸಿಲುಕಿಸಿರುವುದು ಇಲ್ಲಿ ಸ್ಪಷ್ಟವಾಗಿದೆ…’.

ಮೇಲೆ ವಿವರಿಸಲಾಗಿರುವ ವಾಸ್ತವಿಕ ಘಟನಾವಳಿಗಳು ಮತ್ತು ಆ ಸಂಬಂಧವಾಗಿ ನ್ಯಾಯಾಲಯದ ಅಭಿಪ್ರಾಯಗಳು ನಿಜಕ್ಕೂ ಆಘಾತಕಾರಿ. ರಾಜ್ಯವೊಂದರ ಮುಖ್ಯಮಂತ್ರಿ ಹಾಗೂ ಗೃಹಸಚಿವರು ಜನಪ್ರಿಯತೆಯ ತುತ್ತತುದಿಯಲ್ಲಿರುವಾಗ ಅವರನ್ನು ಗುರಿಯಾಗಿಸಿ ಯಾವುದೇ ಸರ್ಕಾರ ಹೀಗೆ ನಡೆದುಕೊಳ್ಳುವುದನ್ನು ಊಹಿಸಲೂ ಆಗದು. ಶ್ರೀಸಾಮಾನ್ಯರಲ್ಲಿ ಹೊಮ್ಮಿರುವ ಈ ಭಯ, ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರಿಂದ ಹೊಮ್ಮುವ ಪ್ರಶ್ನೆಯೂ ಹೌದು.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *