Friday, 16th November 2018  

Vijayavani

Breaking News

ಕಣ್ಣು ಹೊಡೆಯುವ ಹುಡುಗಿ, ಕಣ್ಣು ತೆರೆಸುವ ಮಹಿಳೆ

Wednesday, 21.02.2018, 3:03 AM       No Comments

| ನಾಗರಾಜ ಇಳೆಗುಂಡಿ

ಅವಳು ಬಂದಳು, ನೋಡಿದಳು, ಕಣ್ಣು ಹೊಡೆದಳು, ಪಡ್ಡೆಹುಡುಗರಾದಿಯಾಗಿ ಎಲ್ಲರ ಹೃದಯವನ್ನೇ ಘಾಸಿಗೊಳಿಸಿದಳು!

ನೀವೂ ಈ ಕಣ್ಣೋಟದ, ಕಣ್ಣಾಟದ ಹಾಡನ್ನು ನೋಡಿರಬಹುದು. ಈವರೆಗೆ ಹೆಸರು ಕೇಳಿರದ, ಮುಖ ಕಂಡಿರದ ಪ್ರಿಯಾ ಪ್ರಕಾಶ ವಾರಿಯರ್ ಎಂಬ ನಟಿ ರಾತ್ರೋರಾತ್ರಿ ಸದ್ದು ಮಾಡಿದಳು, ಸುದ್ದಿಯಾದಳು. ಅಷ್ಟಕ್ಕೂ ಆಕೆ ಮಾಡಿದ ಸಾಧನೆಯಾದರೂ ಏನು? ಕೇವಲ ಕಣ್ಣು ಹೊಡೆದದ್ದು! ಹೌದು, ‘ಒರು ಅಡಾರ್ ಲವ್’ ಹೆಸರಿನ ಮಲಯಾಳಂ ಸಿನಿಮಾಕ್ಕೆ ಪ್ರಿಯಾ ನಾಯಕಿ. ಅದರಲ್ಲೊಂದು ಹಾಡು- ‘ಮಾಣಿಕ್ಯ ಮಲರಯ ಪೂವಿ’. ಆ ಹಾಡಿನ ಒಂದು ದೃಶ್ಯದಲ್ಲಿ ನಾಯಕಿ ನಾಯಕನಿಗೆ ಆಪ್ತವಾಗಿ ಕಣ್ಣು ಹೊಡೆಯುತ್ತಾಳೆ. ಆ ಒಂದೇ ಒಂದು ಸನ್ನಿವೇಶ ಎಷ್ಟರಮಟ್ಟಿಗೆ ಕ್ರೇಜ್ ಸೃಷ್ಟಿಸಿತೆಂದರೆ, ಆ ಹಾಡಿನ ವೀಡಿಯೊ ಲಕ್ಷಲಕ್ಷ ಸಂಖ್ಯೆಯಲ್ಲಿ ವೀಕ್ಷಿಸಲ್ಪಟ್ಟಿತು. ಪಡ್ಡೆಹುಡುಗರನ್ನು ಬಿಡಿ, ನಡುವಯದವರು, ಮುದುಕರು ಸಹ ಆ ಸೀನ್ ನೋಡಿ ಪುಳಕಗೊಂಡರು. ಎಷ್ಟೋ ಮಂದಿ ಕನ್ನಡಿಯೆದುರು ನಿಂತು ಕಣ್ ಹೊಡೆದು ತಮ್ಮಲ್ಲಿನ ರೊಮ್ಯಾಂಟಿಕ್ ಭಾವ ಜಾಗೃತವಾಗಿದೆಯೇ ಎಂದು ಪರೀಕ್ಷಿಸಿಕೊಂಡರು; ಇನ್ನು ಎಷ್ಟೋ ಮಂದಿ ಯೌವನದ ದಿನಗಳಿಗೆ ಜಾರಿ ಮುದ ಅನುಭವಿಸಿದರು! ಈ ಎಲ್ಲ ಅಬ್ಬರಗಳ ನಡುವೆ ಆ ಸೀನ್ ಕಲ್ಪಿಸಿದ ನಿರ್ದೇಶಕ ಯಾರೆಂಬ ಬಗ್ಗೆ ಯಾರೂ ಹೆಚ್ಚು ಯೋಚಿಸಲಿಲ್ಲ ಕೂಡ. ನಮ್ಮಲ್ಲಿ ಕೆಲವು ಸಂಗತಿಗಳು ಹಾಗೇ; ಹಿನ್ನೆಲೆಯ ವಿಷಯ ಮುನ್ನೆಲೆಗೆ ಬರುವುದೇ ಇಲ್ಲ. ಇದೆಲ್ಲದರ ನಡುವೆ, ಆ ಹಾಡು ಮುಸ್ಲಿಮರ ಧಾರ್ವಿುಕ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿದೆ ಎಂದು ಆಕ್ಷೇಪಿಸಿ ಪ್ರಿಯಾ ವಾರಿಯರ್ ವಿರುದ್ಧ ದೂರು ದಾಖಲಾಗಿ, ಆ ಎಫ್​ಐಆರ್ ಅನ್ನು ರದ್ದುಪಡಿಸಬೇಕೆಂದು ಕೋರಿ ಆಕೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದು ಕೂಡ ನಡೆದಿದೆ ಎನ್ನಿ.

ಪ್ರಿಯಾ ವಾರಿಯರ್ ಕಣ್ಸೆಳೆತಕ್ಕೆ ಒಳಗಾದವರು ಇರುವಂತೆ, ಅದು ಸಿನಿಮಾ ಸನ್ನಿವೇಶ ಎಂಬುದನ್ನೂ ಲೆಕ್ಕಿಸದಂತೆ, ‘ಅಯ್ಯೋ, ಈಗಿನ ಕಾಲದ ಹೆಣ್ಣುಮಕ್ಕಳು ನೋಡಿ, ಎಷ್ಟು ಜೋರಿರ್ತಾರೆ ಅಂತ. ಇವರಿಗೆ ಹೇಳೋರು ಕೇಳೋರು ಯಾರೂ ಇಲ್ಲ. ಗಟ್ಟಿಯಾಗಿ ಹೇಳಿದರೆ ‘ನಮ್ ಜಮಾನಾ, ನಮ್ ಸ್ವಾತಂತ್ರ್ಯ ಅಂತಾರೆ’ ಎಂದು ಹಳಹಳಿಸಿದವರೂ ಕಮ್ಮಿಯಿಲ್ಲ. ಗಂಡುಮಕ್ಕಳಿಗಿಂತ ಒಂದು ಕೈಮೇಲೇ ಇರುವ, ತಾವುಂಟು ಮೂರುಲೋಕವುಂಟು ಎಂದು ವರ್ತಿಸುವ ಹೆಣ್ಮಕ್ಕಳನ್ನು ಕಂಡಾಗ ಈ ಆಕ್ಷೇಪದಲ್ಲಿ ಹುರುಳಿರಬಹುದು ಎಂದೆನಿಸುವುದು ಸಹಜವೇ. ಆದರೆ ಹುಡುಗಿಯರೆಂದರೆ ಅಷ್ಟೇನಾ?

ಅದು, 1986ರ ಸೆಪ್ಟೆಂಬರ್ 5. ಮುಂಬೈಯಿಂದ ಅಮೆರಿಕಕ್ಕೆ ಹೊರಟಿದ್ದ, 365 ಮಂದಿ ಪ್ರಯಾಣಿಕರು ಹಾಗೂ 13 ಮಂದಿ ಸಿಬ್ಬಂದಿಯಿದ್ದ ಪಾನ್ ಅಮೆರಿಕನ್ ವಿಮಾನವನ್ನು ಪಾಕಿಸ್ತಾನದ ಕರಾಚಿ ವಿಮಾನನಿಲ್ದಾಣದಲ್ಲಿ ನಾಲ್ವರು ಶಸ್ತ್ರಧಾರಿ ಉಗ್ರರು ತಮ್ಮ ವಶಕ್ಕೆ ತೆಗೆದುಕೊಂಡರು. ಆ ವಿಮಾನವನ್ನು ಸೈಪ್ರಸ್​ಗೆ ಒಯ್ಯಬೇಕೆಂಬುದು ಅವರ ಬೇಡಿಕೆಯಾಗಿತ್ತು. ಸೈಪ್ರಸ್​ನಲ್ಲಿದ್ದ ಪ್ಯಾಲೆಸ್ತೇನಿಯನ್ ಬಂದಿಗಳನ್ನು ಈ ಮೂಲಕ ಬಿಡಿಸಬೇಕೆಂಬುದು ಅವರ ಯೋಜನೆಯಾಗಿತ್ತು. ಆದರೆ ವಿಮಾನ ಒತ್ತೆಯಿಟ್ಟುಕೊಂಡು 17 ತಾಸು ಕಳೆದರೂ ಬೇಡಿಕೆ ಈಡೇರುವ ಲಕ್ಷಣ ಕಾಣದಿದ್ದಾಗ ತಾಳ್ಮೆ ಕಳೆದುಕೊಂಡ ಅಪಹರಣಕಾರರು ವಿಮಾನದಲ್ಲಿದ್ದವರ ಮೇಲೆ ಗುಂಡುಹಾರಿಸತೊಡಗಿದರು ಹಾಗೂ ಸ್ಪೋಟಕಗಳನ್ನೂ ಸಿಡಿಸತೊಡಗಿದರು. ಇದರಿಂದ ಮುಂದಾಗಬಹುದಾದ ಭಾರಿ ಅಪಾಯ ಗ್ರಹಿಸಿದ ಗಗನಸಖಿ ನೀರಜಾ ಭಾನೋಟ್, ವಿಮಾನದ ಒಂದು ಬಾಗಿಲನ್ನು ತೆರೆದು, ಅದರ ಮುಖಾಂತರ ಒಬ್ಬೊಬ್ಬರೇ ಪ್ರಯಾಣಿಕರನ್ನು ಹೊರಕಳಿಸತೊಡಗಿದರು. ಆಕೆ ಮನಸ್ಸು ಮಾಡಿದ್ದರೆ ಎಲ್ಲರಿಗಿಂತ ಮೊದಲು ತಾನೇ ಹೊರತೆರಳಿ ಬಚಾವಾಗಬಹುದಿತ್ತು. ಊಹೂಂ. ಆಕೆ ತನ್ನ ಬಗ್ಗೆ ಯೋಚಿಸಲಿಲ್ಲ. ಕರ್ತವ್ಯದತ್ತ ಗಮನನೀಡಿದಳು. ಆಕೆಯ ಈ ಕೆಲಸ ಉಗ್ರರ ಕಣ್ಣಿಗೆ ಬಿತ್ತು. ಮೊದಲೇ ಕೆರಳಿದ್ದ ಅವರು ಮತ್ತಷ್ಟು ವ್ಯಗ್ರರಾದರು. ಆಕೆಯ ತಲೆಗೂದಲು ಹಿಡಿದು ದರದರನೆ ಎಳೆದೊಯ್ದು, ತೀರಾ ಸನಿಹದಿಂದ ಗುಂಡುಹಾರಿಸಿ ಕೊಂದರು. ಆ ಕೊನೆಯ ಕ್ಷಣದಲ್ಲಿಯೂ ಆಕೆ ಮೂವರು ಅಮೆರಿಕನ್ ಮಕ್ಕಳನ್ನು ರಕ್ಷಿಸುವ ಯತ್ನದಲ್ಲಿದ್ದಳು. ಆ ವಿಮಾನದಲ್ಲಿ ಅಮೆರಿಕದ ಏಳು ವರ್ಷದ ಒಬ್ಬ ಹುಡುಗನೂ ಇದ್ದ. ಆತ ಈಗ ಮುಂಚೂಣಿ ವಿಮಾನಯಾನ ಸಂಸ್ಥೆಯೊಂದರಲ್ಲಿ ಕ್ಯಾಪ್ಟನ್ ಹುದ್ದೆಯಲ್ಲಿದ್ದಾನೆ. ನೀರಜಾ ಭಾನೋಟ್ ತನಗೆ ಸದಾ ಪ್ರೇರಣೆ ಎಂದು ಆತ ಹೇಳುತ್ತಿರುತ್ತಾನೆ. ಈ ಸಾಹಸಕ್ಕಾಗಿ ಆಕೆಗೆ ಅಶೋಕಚಕ್ರ ಗೌರವ ಸಂದಿತು. ಪಾಕಿಸ್ತಾನ ಹಾಗೂ ಅಮೆರಿಕ ಸರ್ಕಾರಗಳೂ ನೀರಜಾ ತ್ಯಾಗವನ್ನು ಪ್ರಶಂಸಿಸಿದವು. ಆಕೆಯ ಕುರಿತು ಸಿನಿಮಾವೂ ತಯಾರಾಯಿತು. ಅಳಿದ ಮೇಲೂ ಉಳಿಯುವುದು ಎಂದರೆ ಇದಲ್ಲವೆ? ಅಸಲಿಗೆ ಇಂಥದೊಂದು ತ್ಯಾಗಗುಣ, ಇತರರಿಗಾಗಿ ಮಿಡಿಯುವ ಹೃದಯ ಮಹಿಳೆಯರಿಗೆ ಅಂತರ್ಗತವಾಗಿರುತ್ತದೆಯೇನೋ!

ಹಿಂದಿ ಸಿನಿಮಾ ನಿರ್ದೇಶಕ, ನಿರ್ವಪಕ ಸಂಜಯ್ ಲೀನಾ ಬನ್ಸಾಲಿ ರಾಣಿ ಪದ್ಮಾವತಿ ಕುರಿತಾದ ಸಿನಿಮಾ ಚಿತ್ರೀಕರಣ ನಡೆಸುತ್ತಿದ್ದಾಗ, ಭಾರಿ ಪ್ರತಿಭಟನೆಗಳು ನಡೆದದ್ದು ನಿಮಗೆ ಗೊತ್ತೇ ಇದೆ. ಸಿನಿಮಾದಲ್ಲಿ ಪದ್ಮಾವತಿಯನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬ ಪುಕಾರು ಈ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಕೊನೆಗೆ, ಸೆನ್ಸಾರ್ ಮಂಡಳಿ ಇಪ್ಪತ್ತಕ್ಕೂ ಹೆಚ್ಚು ದೃಶ್ಯಗಳನ್ನು ಕತ್ತರಿಸುವಂತೆ ಸೂಚಿಸಿ, ಪ್ರಮಾಣಪತ್ರ ನೀಡಿತು. ನಂತರ ಚಿತ್ರ ಬಿಡುಗಡೆಯಾಗಿ, ಭರ್ಜರಿ ಹಣ ಗಳಿಸಿದ್ದೂ ಆಯಿತು. ಆದರೆ ಅಸಲಿಗೆ ಸಿನಿಮಾದಲ್ಲಿ ಪದ್ಮಾವತಿಯನ್ನು ಅಸಭ್ಯವಾಗಿ ಚಿತ್ರಿಸಲಾಗಿತ್ತೇ ಎಂಬ ಪ್ರಶ್ನೆ ಮಾತ್ರ ಹಾಗೇ ಉಳಿಯಿತು. ಇದೆಲ್ಲ ಏನೂ ಇರಲಿ, ಪದ್ಮಾವತಿ ಪಾತ್ರಧಾರಿ ದೀಪಿಕಾ ಪಡುಕೋಣೆ, ಅಲ್ಲಾವುದ್ದೀನ್ ಖಿಲ್ಜಿಯನ್ನೇ ಆವಾಹಿಸಿಕೊಂಡಂತೆ ನಟಿಸಿದ ರಣವೀರ್ ಸಿಂಗ್ ಭಾರಿ ಪ್ರಶಂಸೆ ಗಿಟ್ಟಿಸಿದರು.

ರಾಣಿ ಪದ್ಮಾವತಿ ರಜಪೂತರ ಮಾನಸಮ್ಮಾನಗಳಿಗೆ ಸಂಕೇತದಂತಿರುವವಳು. ಆಕೆ ಅಪರೂಪದ ಸೌಂದರ್ಯವತಿ ಮಾತ್ರವಲ್ಲ, ವ್ಯವಹಾರ ಜಾಣೆ, ರಾಜತಂತ್ರ ನಿಪುಣೆ ಕೂಡ. ಪತಿ ರಾಜಾ ರತನ್ ಸಿಂಗ್​ಗೆ ಆಕೆಯೇ ಒಂದರ್ಥದಲ್ಲಿ ಮಂತ್ರಿಯೂ ಆಗಿದ್ದಳು. ಭಾರತೀಯ ಪರಂಪರೆಯಲ್ಲಿ ಮಡದಿ ಕೇವಲ ಅಡುಗೆಮನೆ ಪಾತ್ರಕ್ಕೆ ಸೀಮಿತಳಲ್ಲ ಎಂಬುದನ್ನು ಗಮನಿಸಬೇಕು. ಈ ಪ್ರಾಚೀನ ಉಕ್ತಿ ನೋಡಿ: ‘ಕಾರ್ಯುಷು ದಾಸೀ ಕರಣೇಷು ಮಂತ್ರೀ ಭೋಜ್ಯೇಷು ಮಾತಾ ಶಯನೇಷು ರಂಭಾ/ರೂಪೇಷು ಲಕ್ಷಿ್ಮೕ ಕ್ಷಮಯಾ ಧರಿತ್ರೀ ಷಟ್​ಧರ್ಮಯುಕ್ತಾ ಕುಲಧರ್ಮಪತ್ನೀ’. ಸಂದರ್ಭ ಬಂದರೆ, ಮನೆಯ ಸಮಸ್ತ ಜವಾಬ್ದಾರಿಯನ್ನೂ ಆಕೆ ಹೊರಬಲ್ಲಳು, ಪತಿಗೆ, ಮನೆಯ ಇತರ ಸದಸ್ಯರಿಗೆ ಸಲಹೆಗಳನ್ನೂ ಕೊಡಬಲ್ಲಳು. ರಾಣಿ ಪದ್ಮಾವತಿಯ ವಿಚಾರಕ್ಕೇ ಬರುವುದಾದರೆ, ಅಲ್ಲಾವುದ್ದೀನ್ ಖಿಲ್ಜಿ ಆಕೆಯ ಚೆಲುವಿನ ವರ್ಣನೆಯನ್ನು ಕೇಳಿಯೇ ಆಕೆಯನ್ನು ಪಡೆಯಬೇಕೆಂದು ಕನಸು ಕಾಣುತ್ತಾನೆ. ಚಿತ್ತೋಡಗಢಕ್ಕೆ ಬಂದು, ಯುದ್ಧ ಅಥವಾ ಪದ್ಮಾವತಿಯ ದರ್ಶನ ಎರಡು ಆಯ್ಕೆಗಳನ್ನು ರಾಜ ರತನ್ ಸಿಂಗನ ಮುಂದಿಟ್ಟ. ರಾಣಿಯ ಮುಖದರ್ಶನ ಮಾತ್ರದಿಂದಲೇ ಖಿಲ್ಜಿ ಸಂತೃಪ್ತನಾಗಿ ಯುದ್ಧಕ್ಕೆ ಬರುವುದಿಲ್ಲವಾದರೆ ಅದೇ ಒಳಿತು ಎಂದು ರಾಜ ಭಾವಿಸಿ, ಪತ್ನಿ ಬಳಿ ಪ್ರಸ್ತಾಪಿಸುತ್ತಾನೆ. ಮೊದಲಿಗೆ ಆಕೆ ಬಿಲ್​ಕುಲ್ ಒಪ್ಪಲಿಲ್ಲ. ಪರಪುರುಷನೆದುರು ನಿಲ್ಲುವುದು ಸಂಪ್ರದಾಯಕ್ಕೆ ವಿರುದ್ಧ ಎಂದು ಸಾರಾಸಗಟಾಗಿ ನಿರಾಕರಿಸುತ್ತಾಳೆ. ಆದರೂ, ಯುದ್ಧ ನಡೆದರೆ ಸಾವಿರಾರು ಜನರ ಪ್ರಾಣಹಾನಿಯಾಗುತ್ತದೆಂಬ ಪತಿಯ ಕಳವಳಕ್ಕೆ ಸ್ಪಂದಿಸಿ, ತಾನೇ ಒಂದು ಉಪಾಯ ಹೂಡುತ್ತಾಳೆ. ಖಿಲ್ಜಿಗೆ ತನ್ನನ್ನು ನೋಡಲೇಬೇಕೆಂಬ ಅತ್ಯಾಸೆಯಿದ್ದರೆ ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ನೋಡಲಿ ಎಂದು ಹೇಳುತ್ತಾಳೆ. ಇದಕ್ಕೆ ಖಿಲ್ಜಿ ಒಪ್ಪಿಕೊಳ್ಳುತ್ತಾನೆ. ಆದರೆ ರಾಣಿಯ ಪ್ರತಿಬಿಂಬ ಕಂಡ ಖಿಲ್ಜಿಗೆ ಆಕೆಯನ್ನು ಹೇಗಾದರೂ ಪಡೆಯಬೇಕೆಂಬ ಹಂಬಲ ಹೆಚ್ಚುತ್ತದೆ. ಆ ಕಾರ್ಯತಂತ್ರದ ಅಂಗವಾಗಿಯೇ ರತನ್ ಸಿಂಗ್​ನ ಜತೆ ಮಾತುಕತೆ ನೆಪದಲ್ಲಿ ಸೆರೆಹಿಡಿಯುತ್ತಾನೆ. ಆತನನ್ನು ಬಿಡಬೇಕೆಂದರೆ ಪದ್ಮಾವತಿಯನ್ನು ಒಪ್ಪಿಸಬೇಕೆಂಬ ಷರತ್ತು ವಿಧಿಸುತ್ತಾನೆ. ಆ ಅಪಾಯಕರ ಸನ್ನಿವೇಶದಲ್ಲಿಯೂ ತಂತ್ರ ಹೆಣೆದವಳು ಪದ್ಮಾವತಿಯೇ. ಆದರೆ ರಾಜನನ್ನು ತನ್ನ ಸೆರೆಯಿಂದ ಬಿಡಿಸಿಕೊಂಡು ಹೋಗಿದ್ದರಿಂದ ಕುಪಿತನಾದ ಖಿಲ್ಜಿ ಮತ್ತೊಮ್ಮೆ ಚಿತ್ತೋಡಗಢವನ್ನು ಮುತ್ತುತ್ತಾನೆ. ಯುದ್ಧದಲ್ಲಿ ಖಿಲ್ಜಿ ಗೆಲ್ಲುವ ಸುಳಿವರಿತ ರಾಣಿ ಪದ್ಮಾವತಿ ಸೇರಿದಂತೆ 16 ಸಾವಿರ ಮಂದಿ ಮಹಿಳೆಯರು ಪರಪುರುಷರ ಕೈವಶವಾಗುವುದರಿಂದ ಪಾರಾಗಲು ಅಗ್ನಿಕುಂಡಕ್ಕೆ ಹಾರಿ ಪ್ರಾಣಾರ್ಪಣೆ ಮಾಡುತ್ತಾರೆ. ಪದ್ಮಾವತಿಯಂಥ ಗುಣಶೀಲೆ ಇಂಥ ಸಾವನ್ನು ಕಾಣುವುದು ನಮ್ಮಲ್ಲಿ ಕಣ್ಣೀರು ತರಿಸುತ್ತದೆ; ಜೋಹರ್​ನಂಥ ಪದ್ಧತಿ ಬಗ್ಗೆ ಆಕ್ರೋಶವೂ ಮೂಡುತ್ತದೆ. ಅದೇ ಹೊತ್ತಿಗೆ, ಪದ್ಮಾವತಿಯ ಆದರ್ಶವೂ ಕಣ್ಣಿಗೆ ಕಟ್ಟುತ್ತದೆ.

ಹೀಗೆ ತಮ್ಮದೇ ಆದ ರೀತಿಯಲ್ಲಿ ಕಣ್ತೆರೆಸುವ ಹೆಣ್ಮಕ್ಕಳು ಭಾರತದ ಮನೆಮನೆಗಳಲ್ಲೂ ಸಿಕ್ಕಾರು! ಹುಡುಕುವ ಮನಸ್ಸು, ಕಣ್ಣು ಇರಬೇಕಷ್ಟೇ! ಮೇಲ್ನೋಟಕ್ಕೆ ಸಾಧಾರಣವಾಗಿ ಕಾಣುವ ಹೆಣ್ಮಕ್ಕಳು

ಆಂತರ್ಯದಲ್ಲಿ ಅದೆಂಥ ತಾಕತ್ತು ಹೊಂದಿರುತ್ತಾರಲ್ಲವೆ? ಪುರುಷನನ್ನು ಸಲಹುವುದು, ನಡೆಸುವುದು ಅದೇ ಬೆಳಕು.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

(ಅನಿವಾರ್ಯ ಕಾರಣದಿಂದ ‘ಸವ್ಯಸಾಚಿ’ ಅಂಕಣ ಪ್ರಕಟವಾಗಿಲ್ಲ)

Leave a Reply

Your email address will not be published. Required fields are marked *

Back To Top