Wednesday, 21st November 2018  

Vijayavani

ಕಬ್ಬು ಬೆಳೆಗಾರರ ಹೋರಾಟಕ್ಕೆ ಕೇಸರಿ ಬಲ - ರಾಜ್ಯಾದ್ಯಂತ ಇಂದು ಬಿಜೆಪಿ ಬೃಹತ್ ಪ್ರತಿಭಟನೆ        ಗದಗಿನ ಕದಡಿ ಬಳಿ ಒಡೆದ ಕಾಲುವೆ- ಜಮೀನುಗಳಿಗೆ ನುಗ್ಗಿದ ಅಪಾರ ನೀರು - ಅಧಿಕಾರಿಗಳ ವಿರುದ್ಧ ಆಕ್ರೋಶ        ದ್ರಾಕ್ಷಿ ತೋಟದಲ್ಲಿ ಕರೆಂಟೂ, ನೆಲದಲ್ಲೂ ಕರೆಂಟು - ಚಿಕ್ಕಬಳ್ಳಾಪುರದ ಪವರ್​ ಗ್ರಿಡ್ ಕಂಟಕ        ಮದ್ದೂರು ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ - ಒಬ್ಬ ಲ್ಯಾಬ್ ಟೆಕ್ನೀಷಿಯನ್ ಸ್ಥಿತಿ ಗಂಭೀರ-        ಸ್ಯಾಂಡಲ್​ವುಡ್​​ನಲ್ಲಿ ಮತ್ತೊಂದು ಗಟ್ಟಿಮೇಳ - ಡಿ.11, 12ರಂದು ಹಸೆಮಣೆ ಏರುತ್ತೆ ಐಂದ್ರಿತಾ, ದಿಗಂತ್ ಜೋಡಿ       
Breaking News

ಬಾಂಗ್ಲಾದಲ್ಲಿ ಉದ್ಯೋಗ ಮೀಸಲಾತಿ ಮೀಮಾಂಸೆ

Tuesday, 24.04.2018, 3:04 AM       No Comments

| ನಾಗರಾಜ ಇಳೆಗುಂಡಿ

ಬಾಂಗ್ಲಾದೇಶದಲ್ಲಿ ಸರ್ಕಾರಿ ನೌಕರಿಗಳಲ್ಲಿ ಶೇ.56 ಮೀಸಲಾತಿಯಿದ್ದು, ಇದರಿಂದ ಅರ್ಹರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಮೀಸಲಾತಿ ರದ್ದುಪಡಿಸಬೇಕು ಎಂಬ ಯುವಜನರ ಕೂಗಿಗೆ ಪ್ರಧಾನಿ ಶೇಖ್ ಹಸೀನಾ ಸ್ಪಂದಿಸಿ, ಮೀಸಲಾತಿ ರದ್ದುಪಡಿಸುವುದಾಗಿ ಹೇಳಿದ್ದಾರೆ. ಅಲ್ಲಿ ಮುಂದೆ ನಡೆಯುವ ಚುನಾವಣೆಯಲ್ಲಿ ನಿರುದ್ಯೋಗ ಸಮಸ್ಯೆ ಪ್ರಮುಖ ಚರ್ಚಾವಿಷಯವಾಗುವ ಸಾಧ್ಯತೆಯಿದೆ.

ಸಮೂಹ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳು ಪ್ರಬಲವಾಗಿರುವ ಈ ದಿನಮಾನದಲ್ಲಿ ಜನಾಭಿಪ್ರಾಯಗಳು ಬಹುಬೇಗನೆ ರೂಪುಗೊಳ್ಳಬಲ್ಲವು, ಹಾಗೇ ದಿಢೀರ್ ಪ್ರತಿಭಟನೆಗಳು ಕೂಡ ನಡೆದುಬಿಡಬಲ್ಲವು. ಎಷ್ಟರಮಟ್ಟಿಗೆಂದರೆ, ಸಣ್ಣ ಕಿಡಿಯಾಗಿ ಕಾಣಿಸಿಕೊಳ್ಳುವ ಇಂಥ ಪ್ರತಿಭಟನೆ ದಿನೊಪ್ಪತ್ತಿನಲ್ಲಿ ದೇಶವನ್ನೇ ವ್ಯಾಪಿಸಿಬಿಡಬಲ್ಲದು. ಇದಕ್ಕೆ ಅನೇಕ ನಿದರ್ಶನಗಳು ಈಚಿನ ವರ್ಷಗಳಲ್ಲಿಯೇ ದೊರೆಯುತ್ತವೆ. ಮಧ್ಯಪ್ರಾಚ್ಯ ಹಾಗೂ ಉತ್ತರ ಆಫ್ರಿಕಾದ ಹಲವು ದೇಶಗಳಲ್ಲಿ ಸಂಚಲನವನ್ನೇ ಮೂಡಿಸಿದ ಅರಬ್ ವಸಂತ (ಅಚಚಿ ಖಟ್ಟಜ್ಞಿಜ ಆ ದೇಶಗಳಲ್ಲಿ ಜನಾಂದೋಲನದ ಮೂಲಕ ಹೊಸ ಸಾಮಾಜಿಕ, ರಾಜಕೀಯ ಬದಲಾವಣೆ ತಂದಿದ್ದಕ್ಕಾಗಿ ಈ ಉಪಮೆ ಬಳಸಲಾಗುತ್ತದೆ) ಈ ನಿಟ್ಟಿನಲ್ಲಿ ಆರಂಭಿಕ ಪ್ರೇರಣೆಯಾಯಿತು ಎನ್ನಬೇಕು. ಟ್ಯುನೀಷಿಯಾದಲ್ಲಿ ಆರಂಭವಾದ ಈ ಜನ ಚಳವಳಿ ಅನತಿ ಕಾಲದಲ್ಲಿ ಇತರ ಹಲವು ದೇಶಗಳ ಮೇಲೂ ಪ್ರಭಾವ ಬೀರಿತು. ಪರಿಣಾಮವಾಗಿ, ಲಿಬಿಯಾ, ಈಜಿಪ್ಟ್, ಯೆಮೆನ್, ಸಿರಿಯಾ ಹಾಗೂ ಬಹರಿನ್ ದೇಶಗಳ ಆಡಳಿತದಲ್ಲೇ ಬದಲಾವಣೆಗಳು ಕಂಡುಬಂದವು.

ನಮ್ಮ ಭಾರತದ್ದೇ ಉದಾಹರಣೆ ನೀಡುವುದಾದರೆ, ಪರಿಶಿಷ್ಟ ಜಾತಿ/ಪಂಗಡಗಳ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಆಪಾದಿಸಿ ಕೆಲ ದಿನಗಳ ಹಿಂದೆ ಕೆಲ ಸಂಘಟನೆಗಳು ಭಾರತ್ ಬಂದ್​ಗೆ ಕರೆನೀಡಿದ್ದವು. ವಿಶೇಷ ಪೂರ್ವತಯಾರಿ ಇಲ್ಲದೆ ನೀಡಲಾದ ಈ ಬಂದ್ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿತ್ತಾದರೂ, ಈ ಕರೆ ಹಿಂದೆ ಕೆಲಸ ಮಾಡಿದ್ದು ಸಾಮಾಜಿಕ ಮಾಧ್ಯಮಗಳಲ್ಲಿನ ಪ್ರಚಾರಾಂದೋಲನ.

ಎರಡು ವಾರದ ಹಿಂದೆ ಬಾಂಗ್ಲಾದೇಶದಲ್ಲಿ ನಡೆದ ವಿದ್ಯಮಾನವೊಂದರ ಹಿನ್ನೆಲೆಯಲ್ಲಿ ಈ ಮೇಲಿನ ನಿದರ್ಶನಗಳನ್ನು ನೀಡಬೇಕಾಯಿತು. ಅಲ್ಲಿನ ವಿದ್ಯಾರ್ಥಿ ಚಳವಳಿ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬಹುದಾದ ತಿರುವುಗಳು ಹಾಗೂ ಉಂಟುಮಾಡಬಹುದಾದ ಪರಿಣಾಮಗಳು ಕುತೂಹಲ ಉಂಟುಮಾಡಿವೆ. ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ವಿರೋಧಿಸಿ ಏಪ್ರಿಲ್ 8ರಂದು ಢಾಕಾ ವಿಶ್ವವಿದ್ಯಾಲಯದ ಕ್ಯಾಂಪಸ್​ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಶುರುಮಾಡಿದರು. ಈ ಪ್ರತಿಭಟನೆಯ ಧ್ವನಿ ಕ್ಷಿಪ್ರವಾಗಿ ದೇಶದ ಹಲವು ಸರ್ಕಾರಿ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಪ್ರತಿಧ್ವನಿಸಿತು. ಸರ್ಕಾರ ಇದನ್ನು ನಿರ್ವಹಿಸಿದ ಬಗೆ ವಿದ್ಯಾರ್ಥಿಗಳನ್ನು ಇನ್ನಷ್ಟು ರೊಚ್ಚಿಗೆಬ್ಬಿಸಿತು. ಈ ಪ್ರತಿಭಟನೆಯ ಕಾವು ಎಷ್ಟು ಜೋರಿತ್ತೆಂದರೆ, ಮೂರೇ ದಿನದಲ್ಲಿ ಸರ್ಕಾರ ಈ ಬೇಡಿಕೆಗೆ ಸ್ಪಂದಿಸಿತು. ಸರ್ಕಾರಿ ಉದ್ಯೋಗಗಳಲ್ಲಿನ ಎಲ್ಲ ಬಗೆಯ ಮೀಸಲಾತಿಯನ್ನೂ ರದ್ದುಪಡಿಸುವುದಾಗಿ ಏಪ್ರಿಲ್ 11ರಂದು ಪ್ರಧಾನಮಂತ್ರಿ ಶೇಖ್ ಹಸೀನಾ ವಾಜಿದ್ ಅವರು ಘೋಷಿಸಿದರು. ಈ ಭರವಸೆಯಿಂದಾಗಿ ಮೀಸಲಾತಿ ವಿರೋಧಿ ಪ್ರತಿಭಟನೆಯೇನೋ ತಾತ್ಕಾಲಿಕವಾಗಿ ನಿಂತಿತು. ಆದರೆ ಸರ್ಕಾರ ಈ ಬಗ್ಗೆ ಅಧಿಕೃತವಾಗಿ ಕ್ರಮಗಳನ್ನು ಕೈಗೊಂಡಿಲ್ಲ. ಸರ್ಕಾರ ಇನ್ನೂ ಕೆಲ ದಿನ ಹೀಗೇ ಸುಮ್ಮನುಳಿದರೆ ಪ್ರತಿಭಟನೆ ಮತ್ತೆ ಚಾಲನೆ ಪಡೆದರೂ ಅಚ್ಚರಿಯಿಲ್ಲ. ಈ ನಡುವೆ, ಅಲ್ಲಿ, ಮೀಸಲಾತಿ ಪರ ಹೋರಾಟಗಾರರು ಪ್ರತಿಭಟನೆ ನಡೆಸಲು ಯೋಜಿಸುತ್ತಿದ್ದಾರಂತೆ. ಅಂದಹಾಗೆ ಅಲ್ಲಿ ಈಚಿನ ಅನೇಕ ವರ್ಷಗಳಿಂದ ಮೀಸಲಾತಿ ವಿರೋಧಿ ಹೋರಾಟ ನಡೆಯುತ್ತಿದೆ.

ಮೀಸಲಾತಿ ಜಿಜ್ಞಾಸೆ ಬಾಂಗ್ಲಾದೇಶದಲ್ಲಿ ಮಾತ್ರವಲ್ಲ, ನಮ್ಮಲ್ಲೂ ಇರುವುದು ಗೊತ್ತೇ ಇದೆ. ಸುಪ್ರೀಂ ಕೋರ್ಟಿನ ಆದೇಶದ ಪ್ರಕಾರ, ಸರ್ಕಾರಿ ಉದ್ಯೋಗಗಳಲ್ಲಿ ಒಟ್ಟಾರೆ ಮೀಸಲಾತಿ ಪ್ರಮಾಣ ಶೇ.50 ಮೀರುವ ಹಾಗಿಲ್ಲ. ಆದರೆ ವಾಸ್ತವದಲ್ಲಿ ಈ ಪ್ರಮಾಣದ ಮೀಸಲಾತಿ ದೊರಕುತ್ತಿಲ್ಲ, ಹೀಗಾಗಿ ಪ್ರಮಾಣ ಹೆಚ್ಚಿಸಬೇಕು ಎಂಬ ಬೇಡಿಕೆಯೂ ಕೆಲ ವಲಯಗಳಿಂದ ಇದೆ. ಇನ್ನೊಂದೆಡೆ, ಸಂವಿಧಾನ ಜಾರಿಯಾದ ಹತ್ತುವರ್ಷಗಳವರೆಗೆ ಮಾತ್ರ ಮೀಸಲಾತಿ ಎಂದಿತ್ತು, ಆದರೆ ಇನ್ನೂ ನಿಂತಿಲ್ಲ, ಆರ್ಥಿಕವಾಗಿ ಹಿಂದುಳಿದವರು ಎಲ್ಲ ಜಾತಿಗಳಲ್ಲೂ ಇದ್ದಾರೆ. ಹೀಗಾಗಿ ಅರ್ಹತೆ ಆಧಾರದ ಮೇಲೆ ಮೀಸಲಾತಿ ಕೊಡಬೇಕು ಎಂದು ವಾದಿಸುವವರೂ ಇದ್ದಾರೆ. ಅದು ಬೇರೆಯದೇ ಆದ ಚರ್ಚಾವಿಷಯ.

ಇದೆಲ್ಲ ಹೇಗೂ ಇರಲಿ, ಬಾಂಗ್ಲಾದೇಶದಲ್ಲಿ ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿ ನಿಯಮ ವಿಶಿಷ್ಟವಾಗಿದೆ. ಅಲ್ಲಿ 1971ರಲ್ಲಿ ನಡೆದ ವಿಮೋಚನಾ ಯುದ್ಧದಲ್ಲಿ ಭಾಗವಹಿಸಿದವರ ಕುಟುಂಬದವರಿಗೆಂದು ಶೇ.30 ಸರ್ಕಾರಿ ನೌಕರಿಗಳನ್ನು ಮೀಸಲಿಡಲಾಗಿದೆ. ಅಲ್ಲಿ ಆ ಹೋರಾಟವನ್ನು ಮುನ್ನಡೆಸಿದ ಆವಾಮಿ ಲೀಗ್ ಪಕ್ಷ ಈ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ವಿಮೋಚನಾ ಯುದ್ಧ ಎಂದರೆ, ಅಲ್ಲಿನ ಸ್ವಾತಂತ್ರ್ಯ ಸಮರ. ಮುಂಚೆ ಪಶ್ಚಿಮ ಪಾಕಿಸ್ತಾನದ ಆಡಳಿತಕ್ಕೆ ಒಳಪಟ್ಟಿದ್ದ ಪೂರ್ವ ಪಾಕಿಸ್ತಾನದ ಪ್ರದೇಶ ತೀವ್ರ ಶೋಷಣೆಗೆ ಒಳಗಾಗಿತ್ತು. ಪಶ್ಚಿಮ ಪಾಕಿಸ್ತಾನದ ಆಡಳಿತಗಾರರು ಇಲ್ಲಿ ದೌರ್ಜನ್ಯವೆಸಗುತ್ತಿದ್ದರು. ಈ ದೌರ್ಜನ್ಯ ಮಿತಿಮೀರಿ, 1971ರಲ್ಲಿ ತೀವ್ರ ಸ್ವರೂಪಕ್ಕೆ ತಿರುಗಿತು. ಪಾಕ್ ಸೇನೆ ಇಲ್ಲಿನ ಜನರ ಮೇಲೆ ದಾಳಿ ನಡೆಸಿ ನರಮೇಧಗೈದಿತು. ಅದು ಅಂತಿಮ ಹೋರಾಟಕ್ಕೆ (ಮುಕ್ತಿ ಯುದ್ಧ) ಕಾರಣವಾಯಿತು. ಈ ಸಮರದಲ್ಲಿ ಭಾರತ ಕೂಡ ಬಾಂಗ್ಲಾದ ಪರವಾಗಿ ನಿಂತಿತು. ಇಂದಿರಾ ಗಾಂಧಿ ಆ ಸಮಯದಲ್ಲಿ ಭಾರತದ ಪ್ರಧಾನಿಯಾಗಿದ್ದರು. ಕೊನೆಗೆ ಬಾಂಗ್ಲಾದೇಶ ಸ್ವತಂತ್ರವಾಯಿತು. ಈ ಹೋರಾಟದಲ್ಲಿ ಭಾಗವಹಿಸಿದವರಿಗೆ ಸೂಕ್ತ ಪ್ರತಿಫಲ ದೊರಕಬೇಕೆಂಬ ಆಲೋಚನೆ ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿಗೆ ದಾರಿಮಾಡಿಕೊಟ್ಟಿತು. ಬಾಂಗ್ಲಾದೇಶಕ್ಕೆ ಸಂಬಂಧಿಸಿ ಹೇಳುವುದಾದರೆ, 1971ರ ಸಮರ ಈಗಲೂ ಹಲವು ಬೆಳವಣಿಗೆಗಳಿಗೆ ಕಾರಣವಾಗುತ್ತಲೇ ಇರುವುದು ವಿಶೇಷ. ಆಗ ಪಶ್ಚಿಮ ಪಾಕಿಸ್ತಾನದ ಜತೆ ಕೈಜೋಡಿಸಿ ದೇಶದ್ರೋಹದ ಕೃತ್ಯವೆಸಗಿದ್ದಾರೆ ಎಂದು ನ್ಯಾಯಾಲಯಗಳಲ್ಲಿ ಈಗಲೂ ವಿಚಾರಣೆ ನಡೆಯುತ್ತಿದ್ದು, ಗಲ್ಲು ಸೇರಿದಂತೆ ಹಲವು ಬಗೆಯ ಶಿಕ್ಷೆಗಳು ಘೋಷಣೆಯಾಗುತ್ತಿವೆ.

ಮತ್ತೆ ಮೀಸಲಾತಿ ವಿಷಯಕ್ಕೆ ಬರುವುದಾದರೆ, 1971ರ ಹೋರಾಟದಲ್ಲಿ ಭಾಗವಹಿಸಿದ ಕುಟುಂಬಗಳವರಿಗೆ ಹೊರತುಪಡಿಸಿ, ಇತರರಿಗೂ ಮೀಸಲಾತಿ ಸವಲತ್ತು ಅಲ್ಲಿದೆ. ಇದು ಶೇ.26 ಆಗುತ್ತದೆ. ಅವೆಂದರೆ: ಮಹಿಳೆ-ಶೇ.5, ಧಾರ್ವಿುಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರು-ಶೇ.1, ಅಂಗವಿಕಲರು-ಶೇ.1 ಮತ್ತು ದೇಶದ ಎಲ್ಲ ಭಾಗಗಳ ಜನರಿಗೆ-ಶೇ.10. ಅಂದರೆ, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳು ಹಾಗೂ ಈ ವಿಭಾಗಗಳು ಸೇರಿಸಿ ಒಟ್ಟು ಶೇ.56ರಷ್ಟಾಯಿತು. ಉಳಿದಂತೆ, ಅರ್ಹತೆ ಆಧಾರದ ಮೇಲೆ ದೊರೆಯುವ ಸರ್ಕಾರಿ ನೌಕರಿ ಪ್ರಮಾಣ ಶೇ.44 ಮಾತ್ರ. ಈ ಪರಿಸ್ಥಿತಿ ಹೋಗಬೇಕು. ಕನಿಷ್ಠಪಕ್ಷ ಶೇ.90 ಉದ್ಯೋಗಗಳು ಅರ್ಹತೆ ಆಧಾರದ ಮೇಲೆ ದೊರೆಯುವಂತಾಗಬೇಕು ಎಂಬುದು ಮೀಸಲಾತಿ-ವಿರೋಧಿಗಳ ಆಗ್ರಹ. ಈ ಬಗ್ಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾಗ ಸರ್ಕಾರ ಪೊಲೀಸ್ ಬಲ ಬಳಸಿ ದೌರ್ಜನ್ಯ ನಡೆಸಿದೆ ಎಂಬುದು ಇವರ ಆಪಾದನೆ. ಹೀಗಿದ್ದರೂ, ಮೀಸಲಾತಿ ರದ್ದತಿ ವಿಚಾರದಲ್ಲಿ ಸರ್ಕಾರ ಅಧಿಕೃತ ಕ್ರಮಗಳನ್ನು ಕೈಗೊಳ್ಳದಿದ್ದರೆ ಮತ್ತೆ ಪ್ರತಿಭಟಿಸುತ್ತೇವೆ ಎಂಬುದು ಇವರು ನೀಡುವ ಎಚ್ಚರಿಕೆ. ಈ ಮಾತಿಗೆ ಪ್ರಧಾನಿ ಶೇಖ್ ಹಸೀನಾ ಹೇಗೆ ಪ್ರತಿಕ್ರಿಯಿಸುತ್ತಾರೆಂಬುದನ್ನು ಕಾದುನೋಡಬೇಕು.

ಇಲ್ಲಿ ಇನ್ನೊಂದು ಅಂಶವೂ ಗಮನಾರ್ಹ. ಈ ವರ್ಷಾಂತ್ಯದಲ್ಲಿ ಅಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಬೇಕಿದೆ. ಆವಾಮಿ ಲೀಗ್ ಕಳೆದ ಒಂಭತ್ತು ವರ್ಷಗಳಿಂದ ಆಡಳಿತ ನಡೆಸುತ್ತಿದೆ. ಈ ಜಯದ ಓಟವನ್ನು ಮುಂದುವರಿಸುವ ಇರಾದೆ ಶೇಖ್ ಹಸೀನಾ ಅವರದು. ಅವರ ಆಶಯದ ಈಡೇರಿಕೆಗೆ ತಕ್ಕ ವಾತಾವರಣ ಎಂಬಂತೆ, ಪ್ರಮುಖ ಪ್ರತಿಪಕ್ಷ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರು ಜೈಲಿನಲ್ಲಿದ್ದಾರೆ. ಅನಾಥಾಶ್ರಮಕ್ಕೆ ಸಂಗ್ರಹಿಸಿದ ನಿಧಿ ದುರ್ಬಳಕೆ ಪ್ರಕರಣದಲ್ಲಿ ಜಿಯಾ ಅವರಿಗೆ ಐದು ವರ್ಷಗಳ ಕಾರಾಗೃಹ ಶಿಕ್ಷೆಯಾಗಿದೆ. ಪ್ರಮುಖ ನಾಯಕಿಯೇ ಜೈಲುಪಾಲಾಗಿದ್ದರಿಂದ ಆ ಪಕ್ಷ ಸಹಜವಾಗೇ ಕಳೆಗುಂದಿದೆ. ಹಾಗಿದ್ದರೂ, ಶೇಖ್ ಹಸೀನಾಗೆ ಆತಂಕವೂ ಇದೆ. ಅದಕ್ಕೆ ಪ್ರಮುಖ ಕಾರಣ ದೇಶದ ಯುವಜನರು.

ಭಾರತದಂತೆ ಬಾಂಗ್ಲಾದೇಶದಲ್ಲಿಯೂ ಯುವಜನರ ಪ್ರಮಾಣ ಅಧಿಕವಾಗಿದೆ. ಲಭ್ಯ ಅಂಕಿಅಂಶಗಳ ಪ್ರಕಾರ, ಸುಮಾರು 16 ಕೋಟಿ ಜನಸಂಖ್ಯೆಯ ಆ ದೇಶದಲ್ಲಿ ಯುವಜನರ ಪ್ರಮಾಣ ಶೇ.60ರಷ್ಟಿದೆ. ಯುವಕರು ಸಹಜವಾಗಿ ಬಯಸುವುದು ಉದ್ಯೋಗವನ್ನು. ಸೂಕ್ತ ಉದ್ಯೋಗ ದೊರಕದಿದ್ದಾಗ ವ್ಯವಸ್ಥೆಯ ವಿರುದ್ಧ ಅವರ ಸಿಟ್ಟು ತಿರುಗುತ್ತದೆ. ಬಾಂಗ್ಲಾದೇಶ ಯೋಜನಾ ಆಯೋಗ ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ವರದಿ ಪ್ರಕಾರ, ಬಾಂಗ್ಲಾದಲ್ಲಿ ಯುವಕರ ನಿರುದ್ಯೋಗ ಪ್ರಮಾಣ ಶೇ.10ರಷ್ಟಿದೆ. ಭಾರತದಲ್ಲಿ 2007ರಿಂದ 2017ರವರೆಗಿನ ಒಂದು ದಶಕವನ್ನು ಪರಿಗಣಿಸಿದರೆ, ಯುವಜನರ ನಿರುದ್ಯೋಗ

ಪ್ರಮಾಣ ಶೇ.8-10ರವರೆಗೆ ಇರುವುದು ಕಂಡುಬರುತ್ತದೆ. ಬಾಂಗ್ಲಾದ ಆವಾಮಿ ಲೀಗ್ ಪಕ್ಷ ವಾರ್ಷಿಕ 20 ಲಕ್ಷ ಉದ್ಯೋಗಸೃಷ್ಟಿ ಭರವಸೆಯನ್ನು ನೀಡಿತ್ತು. ಆದರೆ ಆಗುವ ಉದ್ಯೋಗಸೃಷ್ಟಿಗಿಂತ ಅನೇಕ ಪಟ್ಟು ಪ್ರಮಾಣದಲ್ಲಿ ನಿರುದ್ಯೋಗಿಗಳು ಸೃಷ್ಟಿಯಾಗುತ್ತಿರುವುದು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಈ ಅಂಶ ಮುಖ್ಯ ಚರ್ಚಾವಿಷಯವಾದರೂ ಅಚ್ಚರಿಯಿಲ್ಲ. ಈ ಅಂಶ ರಾಜಕಾರಣಿಗಳನ್ನು ದಿಗಿಲಿಗೆ ದೂಡಿದೆ.

ಬಾಂಗ್ಲಾದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳೆಂದು ಎರಡೂವರೆ ಲಕ್ಷ ದಾಖಲೆಗಳನ್ನು ಅಧಿಕಾರಿಗಳು ವಿತರಿಸಿದ್ದಾರೆ. ಆದರೆ ಈ ಪೈಕಿ ಅನೇಕವನ್ನು ಲಂಚ ನೀಡಿ ಪಡೆದುಕೊಳ್ಳಲಾಗಿದೆ ಎಂಬ ಆರೋಪಗಳಿವೆ. ಈ ಅಂಶವೂ ಯುವಜನರನ್ನು ಕೆರಳಿಸಿದೆ. ಅರ್ಹರಲ್ಲದವರು ಸಹ ಮೀಸಲಾತಿ ಹೆಸರಿನಲ್ಲಿ ತಮ್ಮ ಅವಕಾಶವನ್ನು ಕಸಿದುಕೊಳ್ಳುತ್ತಿದ್ದಾರೆ ಎಂಬ ಅಸಹನೆ ಯುವಜನರಲ್ಲಿದೆ. ಪ್ರಧಾನಿ ಮತ್ತವರ ಸಹಯೋಗಿಗಳು ಈ ಸಿಕ್ಕನ್ನು ಹೇಗೆ ಬಿಡಿಸುತ್ತಾರೆಂಬುದು ಕುತೂಹಲಕರ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top