Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಪ್ರಗತಿಶೀಲ ದೃಷ್ಟಿಕೋನದ ಬಾಬಾಸಾಹೇಬ್ ಅಂಬೇಡ್ಕರ್

Saturday, 14.04.2018, 3:04 AM       1 Comment

| ಪ್ರಕಾಶ್​ ಅಂಬೇಡ್ಕರ್​

ಭಾರತದ ಆಂತರಿಕ ಪ್ರಜಾಪ್ರಭುತ್ವ ಮಾತ್ರವಲ್ಲದೆ ಭವಿಷ್ಯದಲ್ಲಿ ಭಾರತೀಯ ಸಮಾಜವನ್ನು ಮತ್ತು ವಿಶ್ವವನ್ನು ಆಳುವವರು ಯಾರು ಎಂಬುದರ ಕುರಿತೂ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಅವರದ್ದೇ ಆದ ದೃಷ್ಟಿಕೋನವಿತ್ತು. ಮುಂದಿನ ದಿನಗಳಲ್ಲಿ ವಿಶ್ವವನ್ನಾಳುವುದು ಲೇಖನಿಯೇ ವಿನಾ ಬಾಹುಬಲವಲ್ಲ ಎಂದು ಅವರು ಹೇಳುತ್ತಿದ್ದುದುಂಟು. ಎರಡನೇ ಮಹಾಯುದ್ಧದ ನಂತರ, ಯಾವ ರಾಷ್ಟ್ರವೂ ಮತ್ತೊಂದು ರಾಷ್ಟ್ರವನ್ನು ಅತಿಕ್ರಮಿಸಿ ವಶಕ್ಕೆ ತೆಗೆದುಕೊಳ್ಳುವುದಕ್ಕೆ ಅಥವಾ ವಸ್ತುತಃ ಆಳುವುದಕ್ಕೆ ಮುಂದಾಗುವುದಿಲ್ಲ; ಬದಲಿಗೆ ಮತ್ತೊಂದು ದೇಶದ ಆರ್ಥಿಕತೆಯನ್ನು ಅತಿಕ್ರಮಿಸಿ ತನ್ಮೂಲಕ ಅದನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವುದಕ್ಕೆ ಅವು ಆಸಕ್ತಿ ತೋರುತ್ತವೆ ಎಂಬುದು ಅವರ ಗಟ್ಟಿನಂಬಿಕೆಯಾಗಿತ್ತು.

ಅಂಬೇಡ್ಕರ್ ಅವರಿಗೆ, ಸಾಮಾಜಿಕ, ಆರ್ಥಿಕ, ರಾಜಕೀಯ ವಿಷಯಗಳಿಗೆ ಸಂಬಂಧಿಸಿದಂತೆ ವಿಶಿಷ್ಟ ದೃಷ್ಟಿಕೋನವಿತ್ತು. ರಾಜಕೀಯ ಸಾರ್ವಭೌಮತೆಗೆ ನಿಜಕ್ಕೂ ಅರ್ಥ ದಕ್ಕಬೇಕಾದರೆ, ಆರ್ಥಿಕ ವ್ಯವಸ್ಥೆಯು ಸಂವಿಧಾನದ ಒಂದು ಅಂಗವಾಗಿರಬೇಕು ಎನ್ನುತ್ತಿದ್ದರು ಅಂಬೇಡ್ಕರ್. ಸಂವಿಧಾನದಲ್ಲಿ ಆರ್ಥಿಕ ವ್ಯವಸ್ಥೆಯ ಉಪಬಂಧವನ್ನು ಪರಿಚಯಿಸುವ ಮೂಲಕ ರಾಜಕೀಯ ಸಾರ್ವಭೌಮತೆಯ ಬಲವರ್ಧಿಸುವ ಹಾಗೂ ನಿರ್ದಿಷ್ಟ ಸರಕನ್ನು ವಿದೇಶಕ್ಕೆ ರಫ್ತುಮಾಡುವುದರಿಂದ ದಕ್ಕುವ ವರಮಾನವನ್ನೇ ನೆಚ್ಚಿ ದೇಶದ ಅರ್ಥವ್ಯವಸ್ಥೆಯನ್ನು ನಿಭಾಯಿಸಲು ಹೆಣಗುವಂಥ ಸಂಕಷ್ಟಜಾಲಕ್ಕೆ ಬೀಳದಂತೆ ದೇಶವನ್ನು ಸಂರಕ್ಷಿಸುವ ಆಶಯ ಅವರದಾಗಿತ್ತು. ಆದರೆ ಅವರ ಇಂಥ ‘ತೀವ್ರ ಸುಧಾರಣಾವಾದಿ’ ದೃಷ್ಟಿಕೋನಗಳು ಮುಖ್ಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಸಂವಿಧಾನ ರಚಕ ಮಂಡಲಿಗೆ ರುಚಿಸಲಿಲ್ಲ. ಒಂದೊಮ್ಮೆ ಸಂವಿಧಾನ ರಚನೆಯ ವೇಳೆ ಅವರ ಇಂಥ ದೃಷ್ಟಿಕೋನಗಳಿಗೆ ತೆರೆದತೋಳಿನ ಸ್ವಾಗತ ಸಿಕ್ಕಿದ್ದಿದ್ದರೆ, ಪ್ರಸಕ್ತ ಕಾಲಘಟ್ಟದ ಅನೇಕ ಅನರ್ಥಗಳಿಗೆ ಆಸ್ಪದವೇ ಇರುತ್ತಿರಲಿಲ್ಲ ಎಂಬುದು ಕಹಿಸತ್ಯ.

ಭಾರತೀಯ ಸಮಾಜದ ಆಳಗ್ರಹಿಕೆಯಿದ್ದ ಅಂಬೇಡ್ಕರ್, ಭೂಸಂಪತ್ತು, ತಯಾರಿಕಾ ಘಟಕಗಳು ಸೇರಿದಂತೆ ವ್ಯವಸ್ಥೆಯ ಅನೇಕ ಮುಖ್ಯ ಸಂಪನ್ಮೂಲಗಳು ರಾಷ್ಟ್ರವೊಂದರ ಜೀವನಾಡಿಯಾಗಿದ್ದು ಇವು ಕೆಲವೇ ಬಂಡವಾಳಶಾಹಿಗಳ ಬಿಗಿಮುಷ್ಟಿಯಲ್ಲಿ ಇರುವುದರ ಬದಲು ಸರ್ಕಾರದ ನಿಯಂತ್ರಣದಲ್ಲಿರಬೇಕು ಎಂದೇ ಪ್ರತಿಪಾದಿಸುತ್ತಿದ್ದರು. ಆದ್ದರಿಂದ ಭಾರತ ರಾಷ್ಟ್ರವನ್ನು ಹಾಗೂ ಇಲ್ಲಿನ ಸಮಾಜವನ್ನು ಸಂರಕ್ಷಿಸಲು ತಮ್ಮದೇ ಆದ ಆರ್ಥಶಾಸ್ತ್ರ ಪರಿಕಲ್ಪನೆಯನ್ನು ಅಂಬೇಡ್ಕರ್ ಹುಟ್ಟುಹಾಕಿದರು. ರಾಷ್ಟ್ರದ ಇಂಥ ಜೀವನಾಡಿಯನ್ನು ‘ಸಾರಭೂತ ವಲಯ’ ಎಂದೂ, ಸಮಾಜದ ಜೀವನಾಡಿಯನ್ನು ‘ಅವಶ್ಯಕ ವಲಯ’ ಎಂದೂ ಮತ್ತು ಉಳಿದವನ್ನು ಪೂರಕ ವಲಯಗಳೆಂದೂ ಹೆಸರಿಸಿದ್ದು ಅವರ ಆಳಗ್ರಹಿಕೆಗೆ ಸಾಕ್ಷಿ. ದೇಶದ ಆರ್ಥಿಕ ಜೀವನಾಡಿಯು ಏಕಚಕ್ರಾಧಿಪತ್ಯದ ರೀತಿಯಲ್ಲಿ ಕೆಲವೇ ವ್ಯಕ್ತಿಗಳ ಹಿಡಿತದಲ್ಲಿ ಇರುವುದರ ಬದಲು ಸರ್ಕಾರ ಅದರ ಏಕಸ್ವಾಮ್ಯ ಹೊಂದುವಂತಾಗಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು.

ಭಾರತೀಯ ಸಮಾಜ ಎರಡು ತೆರನಾದ ದಾಸ್ಯ ಅಥವಾ ಗುಲಾಮಗಿರಿಯಿಂದ ಬಳಲುತ್ತಿದೆ- ಒಂದು ಶಾರೀರಿಕ ದಾಸ್ಯ, ಮತ್ತೊಂದು ಮಾನಸಿಕ/ಬೌದ್ಧಿಕ ದಾಸ್ಯ. ಈ ಎರಡನ್ನೂ ಕಿತ್ತೊಗೆಯದ ಹೊರತು ದೇಶದ ಪ್ರಗತಿ ದುಸ್ತರ ಎಂಬುದು ಅವರ ನಿಚ್ಚಳ ಅಭಿಪ್ರಾಯವಾಗಿತ್ತು. ಸಮಾಜದಲ್ಲಿ ಇಂಥದೊಂದು ‘ಅರಿವಿನ ಕಿಡಿ’ ಉಜ್ವಲ ಜ್ವಾಲೆಯಾಗಿ ಬೆಳಗಬೇಕೆಂದರೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯುವಂತಾಗಬೇಕು ಮತ್ತು ಜನಸಾಮಾನ್ಯರ ಇಂಥ ಮೂಲಭೂತ ಹಕ್ಕನ್ನು ನೆರವೇರಿಸುವುದು ಸರ್ಕಾರದ ಮೂಲಭೂತ ಹೊಣೆಗಾರಿಕೆಯಾಗಬೇಕು ಎಂದು ಅಂಬೇಡ್ಕರ್ ಒತ್ತಿಹೇಳುತ್ತಿದ್ದರು.

ವ್ಯಕ್ತಿಗಳಿಗೆ, ಅದರಲ್ಲೂ ಸಮಾಜದ ಕೆಳಸ್ತರದವರಿಗೆ ದಕ್ಕಬೇಕಾದ ಇಂಥ ಹಕ್ಕುಗಳ ಕುರಿತು ಅಂಬೇಡ್ಕರ್ ಅವರಿಗೆ ವಿಶೇಷ ಆಸ್ಥೆಯಿತ್ತು. ಇಂಥವರನ್ನು ಆಡಳಿತವರ್ಗದ ಒಂದು ಭಾಗವಾಗಿಸಬೇಕೆಂದಾದಲ್ಲಿ, ಅವರಿಗೆ ಮೊದಲು ತರಬೇತಿ ನೀಡಬೇಕು ಮತ್ತು ಆ ಸಂದರ್ಭದಲ್ಲಿ ತುಂಬಲಾದ ಅರಿವು, ತಿಳಿವಳಿಕೆಗಳು ಅವರಲ್ಲಿ ಮೈಗೂಡುತ್ತಿದ್ದಂತೆ ನಿರ್ದಿಷ್ಟ ವಿಷಯವೊಂದರ ಕುರಿತಾಗಿ ನಿರ್ಣಯ ಕೈಗೊಳ್ಳುವ ಸಾಮರ್ಥ್ಯ ಅವರಲ್ಲಿ ಚಿಗುರೊಡೆಯುತ್ತದೆ; ನಿರಂತರ ಚಿಂತನ-ಮಂಥನದ ಪರಿಣಾಮವಾಗಿ ಹಕ್ಕೊತ್ತಾಯ ಮಂಡಿಸುವ ಚಿತ್ತಸ್ಥಿತಿ ಅವರಲ್ಲಿ ರೂಪುಗೊಳ್ಳುತ್ತದೆ ಎಂಬುದು ಅಂಬೇಡ್ಕರ್ ಗ್ರಹಿಕೆಯಾಗಿತ್ತು.

ಒಂದು ಸ್ವತಂತ್ರ-ಸಾರ್ವಭೌಮ ರಾಷ್ಟ್ರವಾಗಿ ಭಾರತ ರೂಪುಗೊಂಡ ಕಾಲಘಟ್ಟದಲ್ಲಿ ನಾವು ಬಿಕ್ಕಟ್ಟಿನ ಮಡುವಿನಲ್ಲಿ ಮುಳುಗಬೇಕಾಗಿ ಬಂತು. ಇದನ್ನು ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಅಂಥ ಬಿಕ್ಕಟ್ಟುಗಳನ್ನು ನಾವೇ ಸೃಷ್ಟಿಸಿಕೊಂಡೆವು. ಇದರಲ್ಲಿ ಟಿಬೆಟ್ ಬಿಕ್ಕಟ್ಟು ಒಂದಾದರೆ, ‘ಪಾಕ್ ಆಕ್ರಮಿತ ಕಾಶ್ಮೀರ’ ಎಂಬುದು ಮತ್ತೊಂದು. ಈ ಪೈಕಿ ಟಿಬೆಟ್ ಬಿಕ್ಕಟ್ಟಿನ ಕುರಿತಾದ ಅಂಬೇಡ್ಕರ್ ದೃಷ್ಟಿಕೋನ ವಿಭಿನ್ನವಾಗಿತ್ತು- ‘‘ಟಿಬೆಟ್ ಭೂಭಾಗವನ್ನು ಒಂದು ಸ್ವತಂತ್ರ ದೇಶವಾಗಿ ನಾವು ಗುರುತಿಸಬೇಕಿತ್ತು; ಒಂದೊಮ್ಮೆ ನಾವು ಹಾಗೆ ಮಾಡಿದ್ದಿದ್ದರೆ, ವಿಶ್ವದ ಉಳಿದ ದೇಶಗಳೂ ಇದನ್ನು ಅನುಸರಿಸುತ್ತಿದ್ದುದು ಮಾತ್ರವಲ್ಲದೆ, ಭಾರತ ಮತ್ತು ಚೀನಾ ನಡುವಿನ ಪರಸ್ಪರ ಸಂಘರ್ಷವನ್ನು ತಡೆಯುವ ಒಂದು ‘ಮಧ್ಯಸ್ಥರಕ್ಷೆ’ (ಆfಛ್ಟಿ)ಯ ಪ್ರದೇಶವಾಗುತ್ತಿತ್ತು ಟಿಬೆಟ್…’’. ಚೀನಾ ವಿಷಯವನ್ನಿಟ್ಟುಕೊಂಡು ಅಂಬೇಡ್ಕರ್ 1953ರಲ್ಲೊಮ್ಮೆ ರಾಜ್ಯಸಭೆಯಲ್ಲಿ ಮಾತನಾಡುತ್ತ, ಚೀನಾದೊಂದಿಗೆ ಯುದ್ಧವಾಗುವುದರ ಕುರಿತು ಮುನ್ನುಡಿಯಲು ಸಾಧ್ಯವಾಗಿದ್ದು ಅವರಿಗಿದ್ದ ಇಂಥ ಆಳಗ್ರಹಿಕೆಯಿಂದಲೇ. ಆ ಕಾಲಘಟ್ಟದಲ್ಲೇ ಭಾರತ ಅಂಬೇಡ್ಕರ್ ಅವರ ಸಲಹೆ-ಸೂಚನೆಗಳನ್ನು ಸ್ವೀಕರಿಸಿ ಅದಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದಿದ್ದರೆ, ಭಾರತ-ಚೀನಾ ನಡುವೆ ಈಗಲೂ ಆಗಾಗ ಭುಗಿಲೇಳುವ ಸಮರೋನ್ಮಾದ ಮತ್ತಿತರ ಸಮಸ್ಯೆಗಳಿಗೆ ಆಸ್ಪದವೇ ಇರುತ್ತಿರಲಿಲ್ಲವೇನೋ? ಟಿಬೆಟ್​ಗೆ ಸಂಬಂಧಿಸಿದಂತೆ ಅವರು ನೀಡಿದ ಸೂಚನೆಗಳನ್ನು ಕಾರ್ಯರೂಪಕ್ಕೆ ತರಲಾಗದಂಥ ಒಂದು ‘ರಾಜಕೀಯ ತಪು್ಪ’ ಎಸಗಿದ್ದಕ್ಕಾಗಿ ನಮ್ಮ ಸರ್ಕಾರಿ ಬೊಕ್ಕಸ ಬೆಲೆ ತೆರುವಂತಾಗಿದೆ.

ಇನ್ನು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿಷಯಕ್ಕೆ ಬರೋಣ. ಈ ಸಮುದಾಯವನ್ನು ಕೈಗಾರಿಕೀಕರಣದ ತೆಕ್ಕೆಯೊಳಗೆ ತೆಗೆದುಕೊಳ್ಳುವಂಥ, ಅರ್ಹರನ್ನು ಫಲಾನುಭವಿಗಳಾಗಿಸುವಂಥ ಕಾರ್ಯಕ್ರಮವೊಂದಕ್ಕೆ ಭಾರತ ಸರ್ಕಾರ ಇತ್ತೀಚೆಗೆ ಚಾಲನೆ ನೀಡಿರುವುದು ಗೊತ್ತಿರುವಂಥದ್ದೇ. ಆದರೆ ಇದಕ್ಕೆ ನಿರೀಕ್ಷಿತ ವೇಗ ದಕ್ಕಿಲ್ಲ ಎಂಬುದೂ ಸತ್ಯವೇ. ಹಾಗಂತ ನಮ್ಮಲ್ಲಿ ಹಣಕಾಸು ಸಂಪನ್ಮೂಲಕ್ಕೇನೂ ಕೊರತೆಯಿಲ್ಲ, ಈ ವಿಷಯದಲ್ಲಿ ನಾನು ಸರ್ಕಾರವನ್ನೂ ದೂರುತ್ತಿಲ್ಲ. ಆದರೆ ಒಂದಿಡೀ ಯೋಜನೆಯಲ್ಲೇ ಒಂದಷ್ಟು ನ್ಯೂನತೆಗಳು ಹರಳುಗಟ್ಟಿರುವುದರಿಂದಾಗಿ ನಿರೀಕ್ಷಿತ ಫಲ ದಕ್ಕುತ್ತಿಲ್ಲ. ಜತೆಗೆ, ಯೋಜನೆಯ ರೂಪುರೇಷೆಯನ್ನು ವಿನ್ಯಾಸಗೊಳಿಸುವವರ ಆಶಯಗಳೂ ಇಲ್ಲಿ ಮುಖ್ಯವಾಗುತ್ತವೆ. ಈ ವಿಷಯವನ್ನು ಹಿನ್ನೆಲೆಯಾಗಿಟ್ಟುಕೊಂಡು ಡಾ. ಅಂಬೇಡ್ಕರ್ ಅವರ ಚಿಂತನೆಯನ್ನು ಮೆಲುಕುಹಾಕುವುದಿಲ್ಲಿ ಸೂಕ್ತವಾದೀತು. ‘ಯಾವುದೇ ಸಂವಿಧಾನ ಒಂದೊಮ್ಮೆ ಕೆಟ್ಟದಾಗಿದ್ದರೂ ಅನುಷ್ಠಾನದ ಚುಕ್ಕಾಣಿ ಹಿಡಿದವರ ಆಶಯ ಒಳ್ಳೆಯದೇ ಆಗಿದ್ದಲ್ಲಿ, ಅದು ಕಾರ್ಯರೂಪಕ್ಕೆ ತರಬಲ್ಲಂಥದ್ದಾಗಿರುತ್ತದೆ; ಆದರೆ ಸಂವಿಧಾನವೊಂದು ಎಷ್ಟೇ ಉತ್ತಮವಾಗಿದ್ದರೂ ನೇಪಥ್ಯದಲ್ಲಿರುವವರ ಆಶಯಗಳು ಕೆಟ್ಟದಾಗಿದ್ದರೆ ಅದು ಉದ್ದೇಶವನ್ನು ಹಾಳುಗೆಡಹುವುದು ನಿಶ್ಚಿತ’ ಎಂದಿದ್ದಾರೆ ಅಂಬೇಡ್ಕರ್. ಹೀಗಾಗಿ ಮಾರ್ಗದರ್ಶಿ ಸೂತ್ರಗಳು ಮಾತ್ರವಲ್ಲದೆ ನೇಪಥ್ಯದ ಆಶಯಗಳೂ ಮುಖ್ಯವಾಗುತ್ತವೆ.

ಸ್ವಾತಂತ್ರ್ಯದ ಪರಿಕಲ್ಪನೆ, ಅದರಲ್ಲೂ ನಿರ್ದಿಷ್ಟವಾಗಿ ವೈಯಕ್ತಿಕ ನೆಲೆಗಟ್ಟಿನ ಸ್ವಾತಂತ್ರ್ಯದ ಪರಿಕಲ್ಪನೆಯ ಕುರಿತು ಹೇಳುವುದಾದರೆ ನಮ್ಮಲ್ಲಿ ಇದು ಯಾವುದೇ ನಿರ್ಬಂಧಗಳಿಲ್ಲದಂಥದ್ದಾಗಿದೆ ಎನ್ನಲಡ್ಡಿಯಿಲ್ಲ; ಆದರೆ ನಾಗರಿಕ ಹಿತರಕ್ಷಣೆಯ ಪ್ರಶ್ನೆ ಬಂದಾಗ, ವ್ಯತ್ಯಾಸಕಲ್ಪನೆಗೆ ಅಥವಾ ಅಸ್ತಿತ್ವದಲ್ಲಿರುವ ವೈಲಕ್ಷಣ್ಯಗಳ ಉಲ್ಲೇಖಕ್ಕೆ ನಾವು ಶುರುವಿಟ್ಟುಕೊಳ್ಳಬೇಕಾಗುತ್ತದೆ, ಹಾಗೂ ಇಂಥ ವೈಲಕ್ಷಣ್ಯವು ಸಂವಿಧಾನದಲ್ಲಿ ಅತ್ಯುತ್ತಮವಾಗಿ ಮತ್ತು ಸ್ಪಷ್ಟವಾಗಿ ನಿರೂಪಿಸಲ್ಪಟ್ಟಿದೆ. ವೈಯಕ್ತಿಕ ಹಕ್ಕುಗಳ ವಿಷಯಕ್ಕೆ ಬಂದರೆ, ಅವು ಮೂಲಭೂತ ಹಕ್ಕುಗಳಡಿಯಲ್ಲೂ, ರಾಷ್ಟ್ರದ ಅಥವಾ ಸಮಾಜದ ಹಿತರಕ್ಷಣೆಯ ವಿಷಯ ಬಂದಾಗ ಅವು ಸರ್ಕಾರಿ ಕಾರ್ಯನೀತಿಯ ಮಾರ್ಗದರ್ಶಿ ಸೂತ್ರಗಳಡಿಯಲ್ಲೂ ಬರುವುದನ್ನು ಕಾಣಬಹುದು. ಆದ್ದರಿಂದ, ಮಾರ್ಗದರ್ಶಿ ಸೂತ್ರಗಳಡಿಯಲ್ಲಿ ಬರುವ ಯಾವುದೇ ಚರ್ಚಾವಿಷಯ ಒಂದು ಸಾಮಾಜಿಕ ಚರ್ಚಾವಿಷಯ ಎನಿಸಿಕೊಳ್ಳುತ್ತದೆ ಮತ್ತು ಇದು ಸರ್ಕಾರದ ಹಿಡಿತದಲ್ಲಿರಬೇಕೆಂದು ನಾವು ಹೇಳಲೇಬೇಕಾಗುತ್ತದೆ. ಅಂಬೇಡ್ಕರ್ ಅವರಿಗೆ ಈ ನಿಟ್ಟಿನಲ್ಲಿ ಖಚಿತ ದೃಷ್ಟಿಕೋನವಿತ್ತು. ಕೆಲವೊಂದು ಸಾಮಾಜಿಕ ಚರ್ಚಾವಿಷಯಗಳ ಕುರಿತು ಅವರು ಮಾತನಾಡುವಾಗ, ದೇಶದ ಕೆಲ ಆರ್ಥಿಕ ವಲಯಗಳು ಒಂದು ‘ರಾಷ್ಟ್ರೀಯ ಸ್ವತ್ತು’ ಆಗಿರಬೇಕು ಹಾಗೂ ಮತ್ತೆ ಕೆಲವು ವಲಯಗಳು ಸರ್ಕಾರದ ಹಿಡಿತದಲ್ಲಿರಬೇಕು ಎಂದೇ ಪ್ರತಿಪಾದಿಸುತ್ತಿದ್ದರು; ಹೀಗೆ ಹೇಳುವಾಗ, ಸರ್ಕಾರಿ ಕಾರ್ಯನೀತಿಯ ಮಾರ್ಗದರ್ಶಿ ಸೂತ್ರಗಳು ಅವರ ಮನಸ್ಸಿನಲ್ಲಿರುತ್ತಿದ್ದವು. ‘ಪ್ರಜಾಕಲ್ಯಾಣ ವ್ಯವಸ್ಥೆ’ ಎಂಬ ಪರಿಕಲ್ಪನೆಯು ದೇಶದಲ್ಲಿ ರೂಪುಗೊಂಡ ಅಂದಿನ ಕಾಲಘಟ್ಟದಲ್ಲಿ ಈ ಮಾರ್ಗದರ್ಶಿ ಸೂತ್ರಗಳು ಸಮಾನಕಾಲಿಕವಾಗಿ ರೂಪುಗೊಳ್ಳುತ್ತಿದ್ದವು ಎಂಬುದು ಗಮನಿಸಬೇಕಾದ ಅಂಶ. ಹೀಗೆ ವಿವಿಧ ವಲಯಗಳ ಕುರಿತು ಖಚಿತ ನಿಲುವು ಹೊಂದಿದ್ದ ಡಾ. ಅಂಬೇಡ್ಕರ್ ತಮ್ಮ ಈ ಸಾಮರ್ಥ್ಯದಿಂದಾಗಿಯೇ ಪ್ರಾತಃಸ್ಮರಣೀಯರೆನಿಸಿಕೊಂಡಿದ್ದಾರೆ.

(ಲೇಖಕರು ಡಾ. ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ, ಮಾಜಿ ಸಂಸದ)

(ಅನಿವಾರ್ಯ ಕಾರಣದಿಂದ ಡಾ. ವಿಜಯಲಕ್ಷಿ್ಮೕ ಬಾಳೆಕುಂದ್ರಿ ಅವರ ‘ಸುಜ್ಞಾನ ವಿಜ್ಞಾನ’ ಅಂಕಣ ಪ್ರಕಟವಾಗಿಲ್ಲ)

One thought on “ಪ್ರಗತಿಶೀಲ ದೃಷ್ಟಿಕೋನದ ಬಾಬಾಸಾಹೇಬ್ ಅಂಬೇಡ್ಕರ್

  1. ನಮ್ಮ ದೇಶಕ್ಕೆ ಯಾರ ಪ್ರಗತಿಶೀಲ ದುಷ್ಟಿಕೋನವೂ ಬೇಕಾಗಿಲ್ಲ. ಏಕೆಂದರೆ, ನಮ್ಮ ದೇಶದ ಪ್ರಗತಿ ಯಾರಿಗೂ ಬೇಕಾಗಿಲ್ಲ!

Leave a Reply

Your email address will not be published. Required fields are marked *

Back To Top