Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಚಂದನವನದ ದೊಡ್ಡಣ್ಣ ಈ ಕಣಗಾಲ್ ಪುಟ್ಟಣ್ಣ

Tuesday, 05.06.2018, 3:05 AM       No Comments

|ಯಗಟಿ ರಘು ನಾಡಿಗ್​

‘ಈಗ ಅವರು ಇರಬೇಕಾಗಿತ್ತು. ಇನ್ನೂ ಎಂಥೆಂಥ ಫಿಲಂ ತೆಗೀತಿದ್ರೋ ಏನೋ?’ ಅಂತ ಒಬ್ಬರು ಹೇಳಿದ್ರೆ, ‘ಅಯ್ಯೋ ಬ್ಯಾಡಾ ಗುರೂ… ಈಗ ಬರ್ತಿರೋ ಸಿನಿಮಾಗಳನ್ನೇನಾದ್ರೂ ನೋಡಿದ್ದಿದ್ರೆ ಅವರು ಖಂಡಿತ ಬೇಜಾರು ಮಾಡಿಕೊಳ್ತಿದ್ರು…’ ಅಂತ ಮತ್ತೊಬ್ಬರು ಉದ್ಗಾರ ತೆಗೆಯುತ್ತಾರೆ. ಇಬ್ಬರೂ ಅವರ ಉತ್ಕಟ ಅಭಿಮಾನಿಗಳೇ. ಒಬ್ಬರ ಮಾತಲ್ಲಿ ಅವರ ಕುರಿತಾದ ಹೆಮ್ಮೆಯಿದ್ದರೆ, ಮತ್ತೊಬ್ಬರಿಗೆ ಅವರು ಹಾಕಿಕೊಟ್ಟ ಹಾದಿಯಲ್ಲಿ ಚಿತ್ರರಂಗ ಸಾಗುತ್ತಿಲ್ಲವಲ್ಲ ಎಂಬ ವಿಷಾದವಿದೆ. ಉತ್ತಮ ಚಲನಚಿತ್ರಗಳನ್ನು ನಿರೀಕ್ಷಿಸುತ್ತಿರುವ ಚಿತ್ರರಸಿಕರ ಹೃನ್ಮನಗಳನ್ನು ಈ ಹೆಮ್ಮೆ-ವಿಷಾದಗಳು ಅನುದಿನವೂ ಕಾಡುತ್ತಲೇ ಇರುತ್ತವೆ. ಇಂಥದೊಂದು ಭಾವ ಪದೇಪದೆ ಸ್ಪುರಿಸಲು ಕಾರಣರಾಗುವವರು ಖ್ಯಾತ ಚಿತ್ರನಿರ್ದೇಶಕ ಪುಟ್ಟಣ್ಣ ಕಣಗಾಲರು.

ಪುಟ್ಟಣ್ಣ ನಮ್ಮನ್ನಗಲಿ ಜೂನ್ 5ಕ್ಕೆ 33 ವರ್ಷಗಳಾಗುತ್ತವೆ (ಮರಣ: 05-06-1985). ಇಷ್ಟಾಗಿಯೂ ಅವರು ಬಿಟ್ಟುಹೋದ ಸ್ಥಾನ ಈಗಲೂ ಬಹುತೇಕ ಖಾಲಿಯಾಗೇ ಉಳಿದಿದೆ ಎಂದರೆ ಅತಿಶಯೋಕ್ತಿಯಲ್ಲ. ಹಾಗಂತ ಕನ್ನಡದಲ್ಲಿ ಪ್ರತಿಭಾವಂತ ನಿರ್ದೇಶಕರೇ ಇಲ್ಲವೆಂದಲ್ಲ; ಆದರೆ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗಳ ಕುರಿತಾದ ಆಳವಾದ ಜ್ಞಾನ ಮಾತ್ರವಲ್ಲದೆ, ಕತೆ-ಚಿತ್ರಕತೆ-ಸಾಹಿತ್ಯ-ಸಂಗೀತ-ಛಾಯಾಗ್ರಹಣ-ಸಂಕಲನ…. ಹೀಗೆ ಹಲವು ವಲಯಗಳಲ್ಲಿ ಅಧಿಕಾರಯುತವಾಗಿ ಮಾತನಾಡಬಲ್ಲ, ಸಂಬಂಧಪಟ್ಟ ತಂತ್ರಜ್ಞರಿಂದ ತಮಗೆ ಬೇಕಾದ ರಿಸಲ್ಟ್ ಪಡೆಯಬಲ್ಲ, ತನ್ಮೂಲಕ ಚಿತ್ರಬಿಂಬದಲ್ಲಿ ತಮ್ಮದೇ ಛಾಪನ್ನು ಒತ್ತಬಲ್ಲ ಆಲ್-ಇನ್-ಒನ್ ನಿರ್ದೇಶಕರು ಈಗ ವಿರಳ ಎನ್ನುವುದು ಕಹಿಸತ್ಯ.

ಕಸುಬುಗಾರಿಕೆಗೆ ಮತ್ತೊಂದು ಹೆಸರು: ಪುಟ್ಟಣ್ಣನವರ ಜನಪ್ರಿಯ ಚಿತ್ರಗಳಲ್ಲೊಂದು ‘ನಾಗರಹಾವು’. ಮನೆಯವರಿಗೇ ಬೇಡದವನಾಗಿ, ವಿಧಿಯಾಟದ ಶಿಶುವಾಗಿ, ರೋಷಾವೇಶಗಳ ಜ್ವಾಲೆಯಾಗಿ ‘ರಾಮಾಚಾರಿ’ ಪಾತ್ರವನ್ನೂ, ಓರ್ವ ಗುರು-ತಂದೆ-ಸ್ನೇಹಿತನ ವೈಶಿಷ್ಟ್ಯಗಳನ್ನು ಹದವಾಗಿ ಬೆರೆಸಿ ‘ಚಾಮಯ್ಯ ಮೇಷ್ಟ್ರು’ ವ್ಯಕ್ತಿತ್ವವನ್ನೂ ಪುಟ್ಟಣ್ಣನವರು ಈ ಚಿತ್ರದಲ್ಲಿ ಕೆತ್ತಿರುವ ಪರಿ ಹೃದಯಂಗಮವಾಗಿದೆ. ಈ ಪಾತ್ರಗಳಲ್ಲಿ ವಿಷ್ಣುವರ್ಧನ್ ಮತ್ತು ಅಶ್ವತ್ಥ್ ಅವರು ಅಭಿನಯಿಸಿಲ್ಲ, ಬದಲಿಗೆ ಪಾತ್ರವೇ ತಾವಾಗಿದ್ದಾರೆ ಎಂದರೆ ಅದರ ಹಿಂದಿನ ಪ್ರೇರಕಶಕ್ತಿ ಪುಟ್ಟಣ್ಣ.

ಈ ಚಿತ್ರದ ‘ಬಾರೇ ಬಾರೇ ಚೆಂದದ ಚೆಲುವಿನ ತಾರೆ..’ ಗೀತೆಯನ್ನು ನೀವು ನೋಡಿರಬಹುದು. ಅದರಲ್ಲಿ ಚಿತ್ರಪಟದ ಒಂದು ಭಾಗದಲ್ಲಿ ರಾಮಾಚಾರಿ ಹಾಡು ಹೇಳುತ್ತ ಸಹಜವೇಗದಲ್ಲಿ ನಡೆದು ಬರುತ್ತಿದ್ದರೆ, ಮತ್ತೊಂದು ಭಾಗದಲ್ಲಿ ಅಲಮೇಲು ಸ್ಲೋಮೋಷನ್​ನಲ್ಲಿ ಓಡುತ್ತ ಬರುತ್ತಿರುತ್ತಾಳೆ. ಒಂದೇ ಫ್ರೇಂನಲ್ಲಿ ಈ ಬಗೆಯ ಭಿನ್ನವೇಗದ ಚಿತ್ರಿಕೆಯನ್ನು ಮಿಳಿತಗೊಳಿಸಿ ಚಿತ್ರೀಕರಿಸಿದ್ದು, ಚಿತ್ರೀಕರಣದ ಸಮಯದಲ್ಲಿನ ಕಹಿ-ಕಷ್ಟಗಳನ್ನು ಬಲ್ಲವರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿತ್ತು. ಚಲನಚಿತ್ರ ತಂತ್ರಜ್ಞಾನ ಮುಂದುವರಿದಿರುವ ಈ ಸಮಯದಲ್ಲಿ ಇದೇನೂ ಹೆಚ್ಚುಗಾರಿಕೆ ಅಲ್ಲದಿರಬಹುದು. ಆದರೆ, ಲಭ್ಯವಿದ್ದ ಪರಿಕರಗಳಲ್ಲೇ ಹೊಸತೊಂದನ್ನು ಸೃಜಿಸುವ ಪುಟ್ಟಣ್ಣನವರ ಈ ಬಗೆಯ ಕಸುಬುಗಾರಿಕೆಯೇ ಅವರನ್ನು ಚಿತ್ರರಸಿಕರ ಹೃದಯದಲ್ಲಿ ಚಿರಕಾಲ ನಿಲ್ಲಿಸಿತು ಎನ್ನಬಹುದು. ಅವರು ಬಯಸಿದ್ದರೆ ಇದನ್ನೊಂದು ಮಾಮೂಲಿ ಮರಸುತ್ತುವ ಗೀತೆಯಂತೆ ಚಿತ್ರಿಸಿ ಸುತ್ತಿಡಬಹುದಿತ್ತು. ಆದರೆ ಅವರು ತಮ್ಮ ಕೆಲಸವನ್ನು ಹಗುರವಾಗಿ ತೆಗೆದುಕೊಂಡಿರಲಿಲ್ಲ; ಅವರ ಪಾಲಿಗೆ ಅದೊಂದು ತಪಸ್ಸಾಗಿತ್ತು. ಹೀಗಾಗಿಯೇ, ಕತೆಗೆ ಲಗತ್ತಾಗಿರುತ್ತದೆ ಎಂದೇ ‘ಉಪಾಸನೆ’ ಚಿತ್ರದಲ್ಲಿನ ‘ಭಾರತ ಭೂಶಿರ ಮಂದಿರ ಸುಂದರಿ ಭುವನ ಮನೋಹರಿ ಕನ್ಯಾಕುಮಾರಿ’ ಹಾಡಿನ ಚಿತ್ರೀಕರಣವನ್ನು ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ರಮಣೀಯವಾಗಿ ಮಾಡಿದ್ದು.

‘ನಾಗರಹಾವು’ ಚಿತ್ರದ ಚಿತ್ರೀಕರಣ ಚಿತ್ರದುರ್ಗ ಕೋಟೆಯಲ್ಲಿ ನಡೆಯುತ್ತಿತ್ತು. ಕಡಿದಾದ ಬಂಡೆ ಏರಿದ ಪುಟ್ಟಣ್ಣ, ನಿರ್ದಿಷ್ಟ ಜಾಗವೊಂದರಿಂದ ದೃಶ್ಯದ ಕೋನವನ್ನು ನಿರ್ಧರಿಸಿ, ‘ಈ ಷಾಟ್ ಬೇಕು, ತೆಗೆದುಕೊಡಿ’ ಎಂದು ಛಾಯಾಗ್ರಾಹಕರಿಗೆ ಆಗ್ರಹಿಸಿದರು. ‘ಅಲ್ಲಿ ನಿಂತ್ಕೊಳ್ಳೋಕ್ಕೇ ಆಗಲ್ಲ, ಕ್ಯಾಮರಾ ಎಲ್ಲಿಡ್ಲಿ?’ ಅಂತ ಛಾಯಾಗ್ರಾಹಕರು ಕಕ್ಕಾಬಿಕ್ಕಿಯಾಗಿದ್ದಕ್ಕೆ ‘ಇಡೋಕ್ಕಾಗದಿದ್ರೆ ಹೆಗಲಮೇಲೆ ಹೊತ್ಕೊಳ್ಳಿ, ನನಗೆ ಆ ಷಾಟ್ ಬೇಕೇ ಬೇಕು’ ಅಂದರಂತೆ ಪುಟ್ಟಣ್ಣ!

ಇಂಥದೇ ಮತ್ತೊಂದು ಪ್ರಸಂಗ. ‘ಶರಪಂಜರ’ ಚಿತ್ರೀಕರಣ ಕಾಡಿಗೆ ಹೊಂದಿಕೊಂಡಿದ್ದ ತಾಣವೊಂದರಲ್ಲಿ ನಡೆಯುತ್ತಿತ್ತು. ನೋಡನೋಡುತ್ತಿದ್ದಂತೆ ಕಾಳ್ಗಿಚ್ಚು ಕಾಣಿಸಿಕೊಂಡಿತು, ಹಬ್ಬುವುದಕ್ಕೂ ಮೊದಲಿಟ್ಟಿತು. ಎಷ್ಟರ ಮಟ್ಟಿಗೆ ಎಂದರೆ ಅದರ ಬಿಸಿ ಚಿತ್ರತಂಡಕ್ಕೆ ತಾಕುವಷ್ಟು! ಪುಟ್ಣಣ್ಣ ಮಾತ್ರ ನಿರುಮ್ಮಳವಾಗಿದ್ದರು. ಅಷ್ಟೇ ಅಲ್ಲ, ಕಾಡಿನಬೆಂಕಿಯನ್ನು ಚಿತ್ರೀಕರಿಸಿಕೊಳ್ಳುವಂತೆ ಛಾಯಾಗ್ರಾಹಕರಿಗೆ ಆದೇಶಿಸಿದರು. ಎಲ್ಲರಿಗೂ ಇದೇನು ನಡೆಯುತ್ತಿದೆ ಎಂದು ಗ್ರಹಿಸಲಾಗದಷ್ಟು ಅಯೋಮಯ. ಹಾಗಂತ ಕೆಲಸದ ವಿಷಯದಲ್ಲಿ ಕಟ್ಟುನಿಟ್ಟಾಗಿದ್ದ, ಅಂದುಕೊಂಡಂತೆ ಅದು ನಡೆಯದಿದ್ದರೆ ‘ದೂರ್ವಾಸ ಮುನಿ’ಯ ಅಪರಾವತಾರವೇ ಆಗಿಬಿಡುತ್ತಿದ್ದ ಅವರ ಆದೇಶವನ್ನು ಅನುಸರಿಸದೆ ಇರಲಾದೀತೇ? ಕಾಳ್ಗಿಚ್ಚಿನ ಚಿತ್ರೀಕರಣವೂ ನಡೆದುಹೋಯಿತು. ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಬಂತು. ಕಾಳ್ಗಿಚ್ಚಿನ ದೃಶ್ಯಗಳು ‘ಶರಪಂಜರ’ದಂಥ ಸಾಂಸಾರಿಕ ಮತ್ತು ಮನೋವೈಜ್ಞಾನಿಕ ಚಿತ್ರದಲ್ಲಿ ಹೇಗೆ ಬಳಕೆಯಾಗಿದ್ದಿರಬಹುದು ಎಂಬ ಕುತೂಹಲ ಎಲ್ಲರಿಗೂ. ಆ ಚಿತ್ರದ ‘ಬಿಳಿಗಿರಿ ರಂಗಯ್ಯ, ನೀನೇ ಹೇಳಯ್ಯ…’ ಎಂಬ ಗೀತೆಯಲ್ಲಿ ಬರುವ ‘ಬೆಟ್ಟದಾ ಕಾಳ್ಗಿಚ್ಚು ದೀಪವೇ? ಬಿರುಗಾಳಿ ಕೆಂಧೂಳಿ ಧೂಪವೇ?’ ಎಂಬ ಸಾಲುಗಳಿಗೆ ಚಿತ್ರೀಕೃತ ಕಾಳ್ಗಿಚ್ಚಿನ ದೃಶ್ಯ ಬಳಕೆಯಾಗಿತ್ತು. ಪ್ರೇಕ್ಷಕರು, ತಂತ್ರಜ್ಞರು, ಕಲಾವಿದರು, ವಿಮರ್ಶಕರಾದಿಯಾಗಿ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟರು!

ಹೊಸ ಪ್ರತಿಭೆಗಳನ್ನು ಪರಿಚಯಿಸುವುದರಲ್ಲೂ ಪುಟ್ಟಣ್ಣ ಎತ್ತಿದಕೈ ಆಗಿದ್ದರು. ‘ವಂಶವೃಕ್ಷ’ ಚಿತ್ರದ ಪುಟ್ಟಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ಸಂಪತ್​ಕುಮಾರ್ ಎಂಬ ಹುಡುಗನನ್ನು, ವಿಷ್ಣುವರ್ಧನ್ ಎಂಬ ಹೊಸ ನಾಮಕರಣದೊಂದಿಗೆ ‘ನಾಗರಹಾವು’ ಚಿತ್ರದ ನಾಯಕನನ್ನಾಗಿಸಿದ್ದು ಹಾಗೂ ಇದೇ ಚಿತ್ರದ ಜಲೀಲ ಖಳಪಾತ್ರದಲ್ಲಿ ಅಂಬರೀಷ್​ರನ್ನು ಮಿಂಚಿಸಿದ್ದು, ಶುಭಾ ಮತ್ತು ಧೀರೇಂದ್ರ ಗೋಪಾಲ್​ರನ್ನೂ ಪರಿಚಯಿಸಿದ್ದು ಗೊತ್ತಿರುವಂಥದ್ದೇ. ಇದೇ ರೀತಿಯಲ್ಲಿ, ಜೈಜಗದೀಶ್ (ಫಲಿತಾಂಶ), ವಜ್ರಮುನಿ (ಸಾವಿರ ಮೆಟ್ಟಿಲು/ಮಲ್ಲಮ್ಮನ ಪವಾಡ), ಪದ್ಮಾ ವಾಸಂತಿ (ಮಾನಸ ಸರೋವರ), ಅಪರ್ಣಾ (ಮಸಣದ ಹೂವು), ಶ್ರೀಧರ್ (ಅಮೃತ ಘಳಿಗೆ) ಮೊದಲಾದ ಕಲಾವಿದರಿಗೆ ಬೆಳ್ಳಿತೆರೆಯ ‘ಅರಂಗೇಟ್ರಂ’ ಆಗಿದ್ದು ಪುಟ್ಟಣ್ಣನವರಿಂದಲೇ. ಪಟ್ಟಿ ಇಷ್ಟಕ್ಕೇ ನಿಲ್ಲುವುದಿಲ್ಲ, ‘ಗೆಜ್ಜೆಪೂಜೆ’ ಚಿತ್ರದಲ್ಲಿ ಆರತಿ, ಸುಂದರಕೃಷ್ಣ ಅರಸ್, ಗಂಗಾಧರ್ ಹಾಗೂ ಲೋಕನಾಥ್, ‘ಕಥಾಸಂಗಮ’ ಚಿತ್ರದ ‘ಮುನಿತಾಯಿ’ ಭಾಗದಲ್ಲಿ ಈಗಿನ ಸೂಪರ್​ಸ್ಟಾರ್ ರಜನಿಕಾಂತ್, ‘ಉಪಾಸನೆ’ ಚಿತ್ರದ ಮೂಲಕ ಸೀತಾರಾಂ ಹಾಗೂ ಡಾ. ಮಣ್ಣೂರ್, ‘ಬಿಳೀಹೆಂಡ್ತಿ’ ಚಿತ್ರದಲ್ಲಿ ಅನಿಲ್ ಕುಮಾರ್ ಮೊದಲಾದವರು ಪುಟ್ಟಣ್ಣ ಎಂಬ ಮಾಂತ್ರಿಕಶಿಲ್ಪಿಯ ಸ್ಪರ್ಶಕ್ಕೆ ಒಳಗಾಗಿ ಕಲಾಮೂರ್ತಿಗಳಾಗಿ ರೂಪುಗೊಂಡವರೇ. ‘ಮಾನಸ ಸರೋವರ’ ಚಿತ್ರದ ಮೂಲಕ ಛಾಯಾಗ್ರಾಹಕ ಬಿ.ಎಸ್. ಬಸವರಾಜ್, ‘ಅಮೃತ ಘಳಿಗೆ’ ಚಿತ್ರದ ಮೂಲಕ ಗಾಯಕಿ ಬಿ.ಆರ್. ಛಾಯಾ ಬೆಳಕುಕಂಡರು. ಇನ್ನು ಚಿತ್ರಸಾಹಿತಿಗಳ ವಿಷಯಕ್ಕೆ ಬರುವುದಾದರೆ, ಎಚ್.ವಿ. ಸುಬ್ಬರಾವ್, ಟಿ.ಜಿ. ಅಶ್ವತ್ಥನಾರಾಯಣ, ಯೋಗಾನರಸಿಂಹ, ಟಿ.ಎನ್. ಸೀತಾರಾಂ ಮತ್ತು ನವರತ್ನರಾಂ ಮೊದಲಾದವರು ‘ಪುಟ್ಟಣ್ಣ ಗರಡಿಮನೆ’ಯ ಉಸ್ತಾದ್​ಗಳೇ! ಇಷ್ಟೇ ಅಲ್ಲದೆ, ಅಷ್ಟೊತ್ತಿಗಾಗಲೇ ಚಿತ್ರರಂಗ ಪ್ರವೇಶಿಸಿ ದಿನದೂಡುತ್ತಿದ್ದ ಹಲವರಿಗೆ ತಮ್ಮ ಚಿತ್ರಗಳ ಮೂಲಕ ಉಜ್ವಲ ಭವಿಷ್ಯ ಕಲ್ಪಿಸಿದ ದಾಖಲೆಗಳೂ ಪುಟ್ಟಣ್ಣನವರ ಖಾತೆಯಲ್ಲಿವೆ.

ಆ ಕಾಲವೊಂದಿತ್ತು, ದಿವ್ಯ ತಾನಾಗಿತ್ತು: ಪುಟ್ಟಣ್ಣನವರ ಚಿತ್ರಗಳು ಬಿಡುಗಡೆಯಾಗುತ್ತಿದೆಯೆಂದರೆ, ನೆರೆರಾಜ್ಯದ ಕೆ. ಬಾಲಚಂದರ್​ರಂಥ ಅತಿರಥ-ಮಹಾರಥರು ಅದರ ಮೊದಲ ಪ್ರೇಕ್ಷಕರಾಗಲು ತವಕಿಸುತ್ತಿದ್ದ ಕಾಲವೊಂದಿತ್ತು. ಹಿಂದಿಯ ಪೃಥ್ವೀರಾಜ್ ಕಪೂರ್ ‘ಸಾಕ್ಷಾತ್ಕಾರ’ ಚಿತ್ರದಲ್ಲಿ ಅಭಿನಯಿಸಿದ್ದು, ಆ ಚಿತ್ರದ ಮುಹೂರ್ತಕ್ಕೆ ಸಾಕ್ಷಾತ್ ರಾಜ್​ಕಪೂರ್ ಆಗಮಿಸಿದ್ದು ಪುಟ್ಟಣ್ಣ ಎಂಥ ಮೇರುಪ್ರತಿಭೆ ಎಂದು ಗೊತ್ತಿದ್ದರಿಂದಲೇ. ಈ ಬಾಂಧವ್ಯ ಮತ್ತಷ್ಟು ಮುಂದುವರಿದು, ಕನ್ನಡದ ‘ನಾಗರಹಾವು’ ಚಿತ್ರ ಹಿಂದಿಯಲ್ಲಿ ‘ಜಹ್ರೀಲಾ ಇನ್ಸಾನ್’ ಹೆಸರಲ್ಲಿ ರೀಮೇಕ್ ಆಗುವಾಗ, ಅದರ ನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಕಪೂರ್ ಕುಟುಂಬದ ಕುಡಿ ರಿಷಿಕಪೂರ್. ‘ಸಾಕ್ಷಾತ್ಕಾರ’ದಲ್ಲಿ ತೆಲುಗಿನ ಜಮುನಾ, ‘ಫಲಿತಾಂಶ’ದಲ್ಲಿ ಹಿಂದಿಯ ಅಮರೀಶ್ ಪುರಿ ಹಾಗೂ ಅರುಣಾ ಇರಾನಿಯವರನ್ನು ಕನ್ನಡದ ಬೆಳ್ಳಿತೆರೆಯಲ್ಲಿ ಮಿಂಚಿಸಿದ್ದು ಕಣಗಾಲ್ ಎಂಬ ಈ ಕನಸುಗಾರನೇ. ಅಧ್ಯಯನ ಪ್ರವಾಸಕ್ಕೆಂದು ಭಾರತಕ್ಕೆ ಬಂದಿದ್ದ ಮಾರ್ಗರೇಟ್ ಥಾಮ್ಸನ್ ಎಂಬ ವಿದೇಶಿ ವಿದ್ಯಾರ್ಥಿನಿಯಲ್ಲಿ ತಮ್ಮ ಕಲ್ಪನೆಯ ‘ಬಿಳೀಹೆಂಡ್ತಿ’ಯನ್ನು ಕಂಡ ಕಣಗಾಲರು ಆ ಚಿತ್ರದ ಆ ಪಾತ್ರಕ್ಕೆ ಅವರನ್ನು ಒಗ್ಗಿಸಿ ಚಿತ್ರರಸಿಕರ ಮನಸೂರೆಗೊಂಡರು.

ಹೆಡ್ಡನಹಟ್ಟಿಯಲ್ಲಿ ಕೊನೆಯ ದಿನಗಳು: ತಮ್ಮ ಚಿತ್ರಗಳಲ್ಲಿ ಕಾಣಬರುತ್ತಿದ್ದ ಭಾವುಕತೆಯನ್ನೇ ನಿಜಜೀವನದಲ್ಲೂ ಅಗತ್ಯಕ್ಕಿಂತ ಹೆಚ್ಚಾಗಿ ಅಳವಡಿಸಿಕೊಂಡರೇನೋ ಎಂದು ಜನರು ಭಾವಿಸುವುದಕ್ಕೆ ಕನ್ನಡಿ ಹಿಡಿಯುವಂತೆ ಅವರ ಕೊನೆಯ ದಿನಗಳು ಕಂಡುಬಂದವು. ಬೆಂಗಳೂರಿನ ಜಯನಗರದಲ್ಲಿದ್ದ ತಮ್ಮ ಮನೆಗೆ ಪುಟ್ಟಣ್ಣನವರು ಇಟ್ಟುಕೊಂಡ ಹೆಸರು ‘ಹೆಡ್ಡನಹಟ್ಟಿ’ ಅಂತ..! ‘ಹೀಗೇಕೆ?’ ಎಂದು ಯಾರೋ ಕೇಳಿದ್ದಕ್ಕೆ, ‘ಎಂಥೆಂಥವರನ್ನೋ ಚಿತ್ರರಂಗಕ್ಕೆ ಪರಿಚಯಿಸಿದೆ; ಸಾವಿರ ರೂಪಾಯಿ ಬಿತ್ತಿ, ಲಕ್ಷ ರೂಪಾಯಿಯ ಬೆಳೆ ತೆಗೆಯುವುದು ಹೇಗೆಂದು ತೋರಿಸಿಕೊಟ್ಟೆ. ಆದರೆ, ಚಿತ್ರರಂಗದವರು ಅಗತ್ಯ ಬಿದ್ದಾಗ ಹಾಲನ್ನು ಹಿಂಡಿಕೊಂಡು ನನಗೆ ಹಸಿವಾಗಿದ್ದಾಗ ಹಿಡಿ ಹುಲ್ಲನ್ನೂ ಹಾಕಲಿಲ್ಲ. ನನ್ನಂಥ ಹೆಡ್ಡ ಇನ್ಯಾರಾದರೂ ಇರಲು ಸಾಧ್ಯವೇ? ಅದಕ್ಕೇ ನನ್ನ ಮನೆಗೆ ಹೆಡ್ಡನ ಹಟ್ಟಿ ಎಂಬ ಹೆಸರಿಟ್ಟಿದ್ದೇನೆ’ ಎಂದು ನುಡಿದು ವಿಷಾದದ ನಗೆ ನಕ್ಕರಂತೆ..!! ಇಂಥಾ ‘ವಿಷಾದಯೋಗಿ’ ಕೊನೆಕೊನೆಗೆ ಮಲಗುವಾಗ ತಲೆಯಡಿಗೆ ಇಟ್ಟುಕೊಳ್ಳುತ್ತಿದ್ದುದು ದಿಂಬನ್ನಲ್ಲ, ಇಟ್ಟಿಗೆಯನ್ನು..!!

ಕೀಳು ಅಭಿರುಚಿಯ ಪದಗಳನ್ನು ಸಂಭಾಷಣೆಯಲ್ಲಿ ಹೇರಳವಾಗಿ ಒಳಗೊಂಡಿರುವ, ‘ಶೃಂಗಾರ’ದ ಪರಿಕಲ್ಪನೆಯ ಜಾಗವನ್ನು ‘ಅಶ್ಲೀಲ ದೃಶ್ಯಗಳೇ’ ಆಕ್ರಮಿಸಿಕೊಂಡಿರುವ, ಮಾತೆತ್ತಿದರೆ ‘ಹೊಡಿ-ಬಡಿ-ಕಡಿ’ ಧ್ವನಿಗಳೇ ಪ್ರತಿಧ್ವನಿಸುವ, ಪರಭಾಷಿಕ/ಪರದೇಶಿ ಚಿತ್ರಗಳ ಪ್ರಭಾವಕ್ಕೆ ಸಿಲುಕಿ ಕನ್ನಡ ಭಾಷೆ-ಸಂಸ್ಕೃತಿ-ಪರಂಪರೆಗಳ ಚಿತ್ರಣವನ್ನೇ ಬಹುತೇಕ ಮಂಗಮಾಯವಾಗಿಸಿರುವ ಇಂದಿನ ಚಲನಚಿತ್ರಗಳ ಸಂತೆಯಲ್ಲಿ ಸದಭಿರುಚಿಯ ಪ್ರೇಕ್ಷಕರಿಗೆ ಪುಟ್ಟಣ್ಣನವರು ಪದೇಪದೆ ನೆನಪಾದರೆ ಅದು ಸಹಜವೇ. ಅದೇಕೋ, ದುಪ್ಪಟ್ಟು ಹಣ ಕೊಟ್ಟರೂ ಗುಣಮಟ್ಟದ ವಸ್ತುವೇ ಸಿಗುತ್ತಿಲ್ಲ. ಅದಕ್ಕೆ ಪುಟ್ಟಣ್ಣನವರೇ ಮತ್ತೆ ಹುಟ್ಟಿಬರಬೇಕೋ ಏನೋ?! ಅವರು ಹೆಸರಿಗೆ ‘ಪುಟ್ಟಣ್ಣ’ ಆದರೂ ಚಂದನವನದ ಪಾಲಿಗೆ ಮರೆಯಲಾಗದ ‘ದೊಡ್ಡಣ್ಣ’.

(ಲೇಖಕರು ವಿಜಯವಾಣಿ ಮುಖ್ಯ ಉಪಸಂಪಾದಕರು)

Leave a Reply

Your email address will not be published. Required fields are marked *

Back To Top