ಓರ್ವ ಮಠಾಧಿಪತಿಯಾಗಿ ಪೇಜಾವರ ಮಠವನ್ನು ಸರ್ವತೋಮುಖವಾಗಿ ಬೆಳೆಸಿದರು. ವಿಶ್ವದಾದ್ಯಂತ ಪರಿಚಯಿಸಿದರು. ಮಠಗಳೆಂದರೆ ಬರೀ ಊಟದ ಕೇಂದ್ರಗಳಾಗಬಾರದು; ಆಧ್ಯಾತ್ಮಿಕ, ಧಾರ್ವಿುಕ, ಶೈಕ್ಷಣಿಕ- ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಾಮರಸ್ಯವನ್ನು ಬೆಸೆಯುವ ಕೇಂದ್ರಗಳಾಗಬೇಕೆಂದು ಬಯಸಿ ಅದರಂತೆ ಬೆಳೆಸಿದವರು ಶ್ರೀ ವಿಶ್ವೇಶತೀರ್ಥರು.
ಏಳನೇ ವಯಸ್ಸಿನಲ್ಲೇ ಸನ್ಯಾಸ ದೀಕ್ಷೆ ಪಡೆದು, ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಪಂಚಮ ಪರ್ಯಾಯಗಳನ್ನು ಪೂರೈಸಿದ ಮೊದಲನೆಯ ಯತಿಯಾಗಿ ಇತ್ತೀಚೆಗೆ (ಡಿಸೆಂಬರ್ 29) ವೃಂದಾವನಸ್ಥರಾದ ವಿಶ್ವಸಂತ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಈ ಶತಮಾನ ಕಂಡ ಮಹಾನ್ ಶಕ್ತಿ. ಓರ್ವ ಯತಿ ಅಸ್ತಂಗತರಾದಾಗ ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಇಷ್ಟೊಂದು ಸಂಖ್ಯೆಯಲ್ಲಿ ಮಠಾಧೀಶರುಗಳು, ಧರ್ವಧಿಕಾರಿಗಳು, ಪಕ್ಷಾತೀತವಾಗಿ ರಾಜಕಾರಣಿಗಳು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಕಂಬನಿ ಮಿಡಿದುದು ಇದೇ ಮೊದಲ ಬಾರಿ. ಕಾರಣ, ಶ್ರೀಗಳು ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಪ್ರೇರಕಶಕ್ತಿಯಾಗಿದ್ದರು. ಓರ್ವ ಯತಿಯಾಗಿ ಯತಿಕುಲಧರ್ಮವನ್ನು ಅಕ್ಷರಶಃ ಪಾಲಿಸಿದರು. ಅಧರ್ಮವನ್ನು ಖಂಡಿಸಿದರು. ಗುಣಸ್ವಭಾವದಲ್ಲಿ, ಇವರದು ಮಕ್ಕಳಂತಹ ಮನಸ್ಸು. ಅದಕ್ಕೇ ಶ್ರೀಗಳು ಹೇಳುತ್ತಿದ್ದರು- ‘ಹುಟ್ಟುವಾಗ ಭಗವಂತ ನಮಗೆ ಮಕ್ಕಳಂತಹ ಮನಸ್ಸನ್ನು ಕೊಟ್ಟ. ದುರ್ಗಣ-ದುರಾಸೆಗಳಿಂದ ಅದನ್ನು ಕೆಡಿಸಿಕೊಳ್ಳದೆ, ಬಾಳ ಕೊನೇತನಕ ಮಕ್ಕಳಂತಹ ಮನಸ್ಸೇ ಇರುವಂತೆ ನೋಡಿಕೊಳ್ಳಿ. ಕಾರಣ ಮನುಷ್ಯನ ಮನಸ್ಸೆಂದರೆ ಗುಣದ ತೊಟ್ಟಿಲೂ ಆಗಬಹುದು. ಕಸದ ಬುಟ್ಟಿಯೂ ಆಗಬಹುದು?’ ‘ವಯಸ್ಸಾಗೋದು ಬರೀ ಮುಪ್ಪಿನಿಂದಲ್ಲ; ನಮ್ಮೊಳಗಿನ ಲವಲವಿಕೆಯ ಚಿಲುಮೆ ಒತ್ತಿದಾಗ ಮಾತ್ರ’. ಜ್ಞಾನ-ಪರಿಜ್ಞಾನಗಳಲ್ಲಿ ಇವರಿಗಿತ್ತು ಜ್ಞಾನವೃದ್ಧರ ವರ್ಚಸ್ಸು. ಈ ಎಲ್ಲ ಕಾರಣಗಳಿಂದ ಅವರ ಮುಖದಲ್ಲಿ ಸದಾ ಇತ್ತು ಒಂದು ತೇಜಸ್ಸು! ಆ ಸಣ್ಣ ಶರೀರದಲ್ಲಿ ಅಷ್ಟೊಂದು ಚೈತನ್ಯವಿತ್ತು. ಎಲ್ಲಿಂದ ಬಂತು ಎಂಬುದೇ ಒಂದು ವಿಸ್ಮಯ.
ಓರ್ವ ಮಠಾಧಿಪತಿಯಾಗಿ ಪೇಜಾವರ ಮಠವನ್ನು ಸರ್ವತೋಮುಖವಾಗಿ ಬೆಳೆಸಿದರು. ವಿಶ್ವದಾದ್ಯಂತ ಪರಿಚಯಿಸಿದರು. ಮಠಗಳೆಂದರೆ ಬರೀ ಊಟದ ಕೇಂದ್ರಗಳಾಗಬಾರದು; ಆಧ್ಯಾತ್ಮಿಕ, ಧಾರ್ವಿುಕ, ಶೈಕ್ಷಣಿಕ- ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಾಮರಸ್ಯವನ್ನು ಬೆಸೆಯುವ ಕೇಂದ್ರಗಳಾಗಬೇಕೆಂದು ಬಯಸಿ ಅದರಂತೆ ಬೆಳೆಸಿದವರು. ದೇಶದ ಹಲವೆಡೆ ಅವರು ಸ್ಥಾಪಿಸಿದ ಆರೋಗ್ಯಧಾಮ, ಅನಾಥಾಶ್ರಮ, ವೃದ್ಧಾಶ್ರಮ, ವಿದ್ಯಾಪೀಠ, ಸೇವಾಶ್ರಮಗಳೇ ಇದಕ್ಕೆ ಸಾಕ್ಷಿ. ಓರ್ವ ಧಾರ್ವಿುಕ ಗುರುವಾಗಿ ಮಧ್ವಮತವನ್ನು ಪಸರಿಸಿದರು. ಓರ್ವ ವಿದ್ಯಾಗುರುವಾಗಿ ಇದುವರೆಗೂ ಯಾರೂ ನಡೆಸದ 38 ಸುಧಾ ಮಂಗಳೋತ್ಸವವನ್ನು ನಡೆಸಿದರು.
ಸಾಮಾಜಿಕ ಚಿಂತಕನಾಗಿ, ದಲಿತರ ಕೇರಿಗೆ ಹೋದ ಯತಿಯಾಗಿ, ಅಸ್ಪಶ್ಯತೆ, ಅಸಮಾನತೆಯ ವಿರುದ್ಧ ಜಾತ್ಯತೀತ ಮನೋಭಾವವನ್ನು ವ್ಯಕ್ತಪಡಿಸಿದರು. ಅಂತೆಯೇ ಸಾಮಾಜಿಕ ಶಾಂತಿ, ಐಕ್ಯತೆಗೆ ಧಕ್ಕೆ ಉಂಟಾದಾಗ ಯಾವುದೇ ಭಯಭೀತಿ ಇಲ್ಲದೆ ದನಿ ಎತ್ತಿದರು. ವೀರಶೈವ-ಲಿಂಗಾಯತ ಧರ್ಮಗಳೆರಡೂ ಒಂದೇ ಹಿಂದೂ ಧರ್ಮದ ಶಾಖೆಗಳು ಎಂದು ಧೈರ್ಯವಾಗಿ ಪ್ರತಿಪಾದಿಸಿದರು. ಧರ್ಮ ಸೂಕ್ಷ್ಮಗಳ ಬಗ್ಗೆ ಕಟುವಾಗಿ ಮಾತನಾಡುವವರನ್ನು ಮಾತಿನ ಪಂಥಕ್ಕೆ ಆಹ್ವಾನಿಸಿದರು. ಪ್ರಕೃತಿವಿಕೋಪಗಳ ಸಂತ್ರಸ್ತರಿಗೆ ಸೂರು ಕಲ್ಪಿಸಿದರು. ಪ್ರಗತಿಶೀಲ ಸಾಮಾಜಿಕ ಪರಿವರ್ತಕರಾಗಿ ಮುಸ್ಲಿಂರಿಗೆ ಈದ್ ಉಪಾಹಾರವನ್ನು ಏರ್ಪಡಿಸಿದರು.
ಶ್ರೀಗಳ ಆಧ್ಯಾತ್ಮಿಕ ಪ್ರಜ್ಞೆ ಎಷ್ಟು ಬಲವಾಗಿತ್ತೋ, ಸಾಮಾಜಿಕ ಪ್ರಜ್ಞೆಯೂ ಅಷ್ಟೇ ದೃಢವಾಗಿತ್ತು. ಇವೆರಡನ್ನೂ ಸಮಕಾಲಕ್ಕೆ ಹೊಂದಿಸಿಕೊಂಡು ಹೋಗುತ್ತಿದ್ದರು. ಶ್ರೀಗಳು ಎಷ್ಟು ಅಂತರ್ವುುಖಿಯಾಗುತ್ತಿದ್ದರೋ ಅಷ್ಟೇ ಸಮಾಜಮುಖಿಯಾಗಿದ್ದರು. ಏಕಾಂತ, ಲೋಕಾಂತಗಳೆರಡನ್ನೂ ಅನುಭವಿಸಿ ಬದುಕಿನಲ್ಲಿ ಧನ್ಯತೆಯನ್ನು ಪಡೆದರು. ದೇಶದ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ, ವಿವರವಾಗಿ ತಿಳಿದುಕೊಂಡಿದ್ದರು. ಆದರೆ ಎಂದೂ ರಾಜಕಾರಣವನ್ನು ಮಾಡಿದವರಲ್ಲ, ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ ಸೇರಿ ತಪ್ಪು ಕೆಲಸಗಳನ್ನು ಮಾಡುವ ರಾಜಕಾರಣಿಗಳನ್ನು ಎಚ್ಚರಿಸಿದರು. ಹಾಗೂ ಪಕ್ಷಾತೀತವಾಗಿ ಎಲ್ಲ ರಾಜಕಾರಣಿಗಳಿಗೂ ಕಾಲಕಾಲಕ್ಕೆ ಮಾರ್ಗದರ್ಶನ ಮಾಡುತ್ತಲೇ ಬಂದರು. ದೇಶಹಿತವನ್ನೇ ಸದಾ ಬಯಸಿದರು. ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಶ್ರೀಗಳ ಕನಸಾಗಿತ್ತು. ಅದು ನನಸಾಗುವ ಹೊತ್ತಿಗೆ ಅವರೇ ಇಲ್ಲವಲ್ಲ ಎಂಬುದು ದುಃಖದ ಸಂಗತಿ.
ಇನ್ನು ಸಂದಭೋಚಿತವಾಗಿ ಸ್ವಾರಸ್ಯಕರವಾಗಿ, ವೇದ, ಶಾಸ್ತ್ರ, ಪುರಾಣಗಳ ಕಥೆಯನ್ನಾಧರಿಸಿ ಮಾತನಾಡುತ್ತಿದ್ದ ಶ್ರೀಗಳು ಅತ್ಯುತ್ತಮ ವಾಗ್ಮಿಯಾಗಿದ್ದರು, ದಶಕಗಳಿಂದ, ದಿನದಲ್ಲಿ ನಾಲ್ಕಾರು ಕಾರ್ಯಕ್ರಮಗಳಲ್ಲಿದ್ದರೂ ಸಮಯೋಚಿತವಾಗಿ ಅವರು ಆಡಿದ ಒಂದೊಂದು ಮಾತುಗಳು ಅತಿಸುಂದರ, ಅಷ್ಟೇ ಅರ್ಥಗರ್ಭಿತ. ಈ ನುಡಿಮುತ್ತುಗಳ ಪೈಕಿ ಕೆಲವನ್ನಷ್ಟೇ ಬರೆಯುತ್ತಿದ್ದೇನೆ.
ಹಿಂದೂ ಧರ್ಮವೆಂದರೆ, ಒಂದು ಮಹಾ ವೃಕ್ಷವಿದ್ದಂತೆ, ಈ ವೃಕ್ಷವನ್ನು ಉಳಿಸಿ ಬೆಳೆಸ ಬೇಕಾದರೆ, ಮರದಕೊಂಬೆಗಳಿಗೆ ನೀರೆರೆದರೆ ಪ್ರಯೋಜನ ವಾಗಲಾರದು; ಬುಡಕ್ಕೆ ನೀರೆರೆಯಬೇಕು. ಮಂತ್ರಗಳ ಹಿರಿಮೆಯನ್ನು ಸಾರುತ್ತ ಹೇಳಿದರು. ‘ಯಂತ್ರಗಳ ಶಬ್ದದಿಂದ ಪರಿಸರ ಮಲಿನವಾದರೆ, ಮಂತ್ರಗಳ ಶಬ್ದದಿಂದ ಪಾವನವಾಗುತ್ತದೆ’. ಯತಿಗಳಾದವರು ಮೋಡಗಳಂತಿರಬೇಕು. ಹೇಗೆ ಮೋಡಗಳು, ಭೂಮಿಯ ಮೇಲಿನ ಉಪ್ಪುನೀರು, ಕೊಚ್ಚೆನೀರು ಎಲ್ಲವನ್ನೂ ಹೀರಿ, ಸ್ವಚ್ಛಗೊಳಿಸಿ, ಅಲ್ಲಲ್ಲಿ ಆಗಾಗ ಸಿಹಿನೀರನ್ನು ಸುರಿಸುತ್ತವೋ, ಅಂತೆಯೇ, ಕಷ್ಟಕರವಾದ ಕ್ಲಿಷ್ಟಕರವಾದ ವಿಷಯಗಳನ್ನು ಅಧ್ಯಯನಮಾಡಿ, ಸರಳೀಕರಿಸಿ ತಮ್ಮ ಶಿಷ್ಯರಿಗೆ ತಿಳಿಯಪಡಿಸಬೇಕು. ಇತರೆ ಧರ್ಮಗಳನ್ನು ಪ್ರೀತಿಸಿ ಅನುಸರಿಸಲಾಗದಿದ್ದರೂ ಪರವಾಗಿಲ್ಲ! ಗೌರವಿಸೋಣ. ಇದುವೇ ಪರಧರ್ಮ ಸಹಿಷ್ಣುತೆ. ರಾಜಕೀಯ ಕ್ಷೇತ್ರದಲ್ಲಿ ಧರ್ಮದ ಅಂಕುಶವಿರಬೇಕು. ಆದರೆ ಧಾರ್ವಿುಕ ಕ್ಷೇತ್ರದಲ್ಲಿ ರಾಜಕಾರಣವಿರಬಾರದು. ಸಮಾಜಸೇವೆ ಬಗ್ಗೆ ತಿಳಿಸುತ್ತ, ‘ನಾವು ಸರ್ಕಾರದಿಂದ ಪಡೆದ ಸೌಕರ್ಯ, ಸೌಲಭ್ಯಗಳಿಗೆ ಟ್ಯಾಕ್ಸ್ ಕಟ್ಟುವಂತೆ, ಭಗವಂತನಿಂದ ಪಡೆದ ಕೃಪಾಕಟಾಕ್ಷಗಳಿಗೆ ನಾವು ಅವನಿಗೆ ನೀಡುವ ಟ್ಯಾಕ್ಸ್ ಎಂದರೆ ಸಮಾಜಸೇವೆ. ಅದುವೇ ಸ್ವರ್ಗಕ್ಕೆ ಹೋಗಲು ಬೇಕಾದ ವೀಸಾ. ಆದುದರಿಂದ ದೇವರ ಹುಂಡಿಗೆ ಹಾಕುವ ದೊಡ್ಡ ಕಾಣಿಕೆ ಎಂದರೆ, ಅದು ಸಮಾಜಸೇವೆ’. ಭೌತಿಕ ಪ್ರಗತಿಯ ಜೊತೆ ಆಧ್ಯಾತ್ಮಿಕ ಪ್ರಗತಿಯೂ ಇರಲಿ; ಕಾರಣ ಅದು ಆತ್ಮದ ಪ್ರಗತಿ. ಎರಡರ ಪ್ರಗತಿಯಾದಾಗ ಮಾತ್ರ ನಿಜವಾದ ಪ್ರಗತಿ ಸಾಧ್ಯ. ಈ ಹಿನ್ನೆಲೆಯಲ್ಲಿ, ನಮ್ಮ ಸೌಕರ್ಯ ಸೌಲಭ್ಯಗಳು ಅತ್ಯಾಧುನಿಕವಾಗಿರಲಿ, ನವನವೀನವಾಗಿರಲಿ. ಆದರೆ ನಮ್ಮ ಮೌಲ್ಯಗಳು ಪ್ರಾಚೀನವಾಗಿರಲಿ; ಕಾರಣ ಅವು ಸರ್ವಕಾಲಿಕ, ಸರ್ವಮಾನ್ನಿಕ ಸತ್ಯಗಳು. ಜೀವನದ ಬಗ್ಗೆ ಹೇಳುತ್ತ, ‘ಆಧುನಿಕತೆಗೆ ಕೊಂಚ ಆಧ್ಯಾತ್ಮಿಕತೆಯನ್ನು, ಲೌಕಿಕತೆಗೆ ಧಾರ್ವಿುಕತೆಯನ್ನು ಪ್ರಾಪಂಚಿಕತೆಗೆ ಪಾರಮಾರ್ಥಿಕತೆಯನ್ನು ವಿಜ್ಞಾನಕ್ಕೆ ಸುಜ್ಞಾನವನ್ನು ಬೆರೆಸಿಕೊಂಡರೆ ಮಾತ್ರ ಜೀವನ ಸಹ್ಯ ಸುಂದರ’. ಮಕ್ಕಳ ಕುರಿತಾಗಿ ಹೇಳಿದರು-‘ನಮ್ಮ ಭವಿಷ್ಯವನ್ನು ನಿರ್ಧರಿಸೋದು ಆಕಾಶದಲ್ಲಿರುವ ನಕ್ಷತ್ರಗಳಾದರೆ, ನಮ್ಮ ದೇಶದ ಭವಿಷ್ಯವನ್ನು ನಿರ್ಧರಿಸುವವರು, ಭೂಮಿಯ ಮೇಲಿರುವ ನಮ್ಮ ಮಕ್ಕಳು. ಅವರ ಬಗ್ಗೆ ಚಿಂತನೆ ಇರಲಿ’.
‘ಉತ್ತಮರು ಮತ್ತು ಅತ್ಯುತ್ತಮರು ಎಂದರೆ ಯಾರು?’ ಎಂಬ ಸಭಿಕರ ಪ್ರಶ್ನೆಗೆ ಶ್ರೀಗಳ ಉತ್ತರ ಹೀಗಿತ್ತು-‘ಕಷ್ಟದಲ್ಲಿರುವವರ ಕಣೀರನ್ನು ಒರೆಸುವವರು ಉತ್ತಮರು. ಆದರೆ ಕಣ್ಣೀರೇ ಬಾರದಂತೆ ನೋಡಿಕೊಳ್ಳುವವರು ಅತ್ಯುತ್ತಮರು!’ ‘ಸಿರಿತನ ಬದುಕನ್ನು ಬದಲಿಸುತ್ತದೆ ಆದರೆ, ಬಡತನ ಬದುಕೋದನ್ನು ಕಲಿಸುತ್ತದೆ’-ಎಂಬುದು ಶ್ರೀಗಳ ಕಿವಿಮಾತಾಗಿತ್ತು.
ಶ್ರೀಗಳಲ್ಲಿ ನಯವಾದ ಹಾಸ್ಯಪ್ರಜ್ಞೆಯೂ ಇತ್ತು.
ಒಂದು ಸಮಾರಂಭದಲ್ಲಿ ಸ್ವಾಗತ ಮಾಡುವವರು, ‘ಈ ಜಗತ್ತಿಗೇ ಅತಿ ದೊಡ್ಡ ಯತಿ ಶ್ರೇಷ್ಠರು ಪೇಜಾವರ ಶ್ರೀಗಳು’ ಎಂದಾಗ ‘ಹಾಗೆಲ್ಲ ಹೇಳಿ, ಈ ಜಗತ್ತನ್ನೇ ಚಿಕ್ಕದು ಮಾಡಬೇಡಿ’ ಎಂದು ನಗುತ್ತ ಹೇಳಿದರು. ಒಮ್ಮೆ ಖ್ಯಾತ ಸಂಗೀತಗಾರರಾದ ವಿದ್ಯಾಭೂಷಣರ ಜತೆ ವೇದಿಕೆ ಹಂಚಿಕೊಂಡಾಗ ಶ್ರೀಗಳು ಹೇಳಿದರು ‘ಇವರು ಹಾಡುವ ಸ್ವಾಮಿಗಳು; ನಾನು ಹಾರಾಡುವ ಸ್ವಾಮಿ’. ‘ಏಕೆ ಇಷ್ಟೊಂದು ಓಡಾಟ ಸ್ವಾಮೀಜಿ?’ ಎಂಬ ಪ್ರಶ್ನೆಗೆ ಶ್ರೀಗಳ ಉತ್ತರ-‘ಒಂದೇ ಕಡೆ ಇದ್ದರೆ ಬ್ಯಾಟರಿ ಡೌನ್ ಆಗುತ್ತದೆಯಲ್ಲ. ನಿಮ್ಮನ್ನೆಲ್ಲ ನೋಡಿ ಬ್ಯಾಟರಿ ರೀಚಾರ್ಜ್ ಮಾಡಿಕೊಳ್ಳಲು ಓಡಾಡುತ್ತಿರುತ್ತೇನೆ’. ‘ಪರದೇಶಕ್ಕೆ ಹೋಗುವಿರಾ?’ ಎಂಬ ಪ್ರಶ್ನೆಗೆ, ‘ಬಿಲ್ಲು ಎಲ್ಲಿ ಇರಬೇಕೋ ಅಲ್ಲೇ ಇರಬೇಕು, ಬಾಣಗಳು ಮಾತ್ರ ದಿಕ್ಕು ದಿಕ್ಕುಗಳಿಗೆ ಹೋಗಬೇಕು’ ಎಂದು ಹೇಳುತ್ತ ‘ನಾನು ಭಾರತದಲ್ಲೇ ಇರುತ್ತೇನೆ, ನನ್ನ ಸಂದೇಶಗಳು ಎಲ್ಲ ಕಡೆ ಹೋಗಲಿ’ ಎಂಬ ಸಂದೇಶವನ್ನು ನೀಡಿದರು. ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯರ ಸನ್ಮಾನ ಸಮಾರಂಭದಲ್ಲಿ ಶ್ರೀಗಳು ಹೇಳಿದ ಮಾತು- ‘ಬನ್ನಂಜೆಯವರು ಪದ್ಮಶ್ರೀ, ನಾ ಬರೇ ಶ್ರೀ’!-ಎಂತಹ ಹಾಸ್ಯಪ್ರಜ್ಞೆ.
ಒಟ್ಟಿನಲ್ಲಿ ಹೂಭಾರದ ಈ ಸನ್ಯಾಸಿ ಸರಳರಲ್ಲಿ ಸರಳರಾಗಿದ್ದರು; ಆದುದರಿಂದಲೇ ವಿರಳರಲ್ಲಿ ವಿರಳರಾದರು. ಇವರಿಗೆ ಶಾರೀರಿಕ ಬೊಜ್ಜು, ಮಾನಸಿಕ ಬೊಜ್ಜು ಎರಡೂ ಇಲ್ಲವಾಗಿತ್ತು. ಇವರದು ಪ್ರದರ್ಶನದ ಬದುಕಲ್ಲ; ನಿದರ್ಶನದ ಬದುಕಾಯಿತು. ಇಷ್ಟಕ್ಕೆ ಕಾರಣ ಇವರಿಗಿದ್ದ ಸಮದೃಷ್ಟಿ-ಪ್ರೇಮದೃಷ್ಟಿ-ವಿಶಾಲದೃಷ್ಟಿ. ಯಾವತ್ತೂ ಶ್ರೀಗಳು ಸಿಟ್ಟಿಗೆದ್ದವರಲ್ಲ; ಸಿಟ್ಟನ್ನು ಗೆದ್ದವರಾಗಿದ್ದರು. ‘ಶ್ರೀರಾಮ ವಿಠಲ ಪ್ರಶಸ್ತಿ ನೀಡಿ ಗೌರವಿಸಿದ ಹಾಗೂ ಇವರು ಬರೇ ಪುತ್ತೂರಾಯರಲ್ಲ; ಮುತ್ತಿನಂತಹ ಮಾತುಗಳನ್ನಾಡುವ ಮುತ್ತೂರಾಯರು’ ಎಂದು ಹರಸಿ ಕೊಂಡಾಡಿದ ಶ್ರೀಗಳ ಬಗ್ಗೆ ಬರೆಯುವಾಗ ಹೃದಯ ತುಂಬಿ ಬರುತ್ತದೆ. ಅವರ ಜತೆಗಿನ 50 ವರುಷಗಳ ಒಡನಾಟದ ನೆನಪುಗಳು ಇನ್ನೂ ಹಸಿರಾಗಿವೆ. ಈ ಸಂತ ಶಿರೋಮಣಿ ಬರೀ ವಿಶ್ವೇಶತೀರ್ಥರಲ್ಲ ವಿಶ್ವವ್ಯಾಪಿ, ವಿಶ್ವಪ್ರಿಯ, ವಿಶ್ವಮಾನ್ಯ ತೀರ್ಥರು. ಆದುದರಿಂದ ಬರೀ ಪೇಜಾವರ ಶ್ರೀಗಳು ಮಾತ್ರವಲ್ಲ; ಎಂದೆಂದಿಗೂ ಎಲ್ಲರಿಗೂ ‘ಪೂಜಾವರ’ ಶ್ರೀಗಳು!