Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಹರಕೆಯ ಕುರಿಯಾದ ಯಡಿಯೂರಪ್ಪ

Monday, 21.05.2018, 3:05 AM       No Comments

| ಆರ್.ಪಿ. ಜಗದೀಶ್

ನಿರೀಕ್ಷೆಯಂತೆ ಅತಂತ್ರ ವಿಧಾನಸಭೆಯ ಫಲವಾಗಿ ಬಿ.ಎಸ್. ಯಡಿಯೂರಪ್ಪ ಅವರು ಹರಕೆಯ ಕುರಿಯಾದರೆ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿಯವರು ಕಿಂಗ್​ವೆುೕಕರ್ ಹೆಸರಿನಲ್ಲಿ ತಾವೇ ಕಿಂಗ್ ಆದದ್ದು ಈ ಚುನಾವಣೆಯ ವಿಶೇಷ.

ಸಂಖ್ಯಾಬಲ ನೋಡಿದ ಮೇಲೂ, ವಸ್ತುಸ್ಥಿತಿಯ ಸ್ಪಷ್ಟ ಅರಿವಿದ್ದೂ ಬಿಎಸ್​ವೈ ಅವರನ್ನು ಕಣಕ್ಕಿಳಿಸಿ ನಡುನೀರಿನಲ್ಲಿ ಕೈಬಿಟ್ಟಿದ್ದು ಬಿಜೆಪಿ ವರಿಷ್ಠರು ಮಾಡಿದ ಅಪರಾಧ. ಆದರೆ, ಸೋತರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಜೆಡಿಎಸ್ ಜತೆ ತರಾತುರಿಯಲ್ಲಿ ಕೈ ಜೋಡಿಸಿ ಹಿಂಬಾಗಿಲಿನಿಂದ ಮತ್ತೆ ಅಧಿಕಾರ ಹಿಡಿದದ್ದು 130 ವರ್ಷಗಳ ಇತಿಹಾಸವುಳ್ಳ ಕಾಂಗ್ರೆಸ್​ನ ಶೋಚನೀಯ ಸ್ಥಿತಿಗೆ ಹಿಡಿದ ಕೈಗನ್ನಡಿ.

ಮ್ಯಾಜಿಕ್ ನಂಬರ್ 113 ಬಾರದಿದ್ದರೆ ಕಾಂಗ್ರೆಸ್ ಹಾಗೂ ಬಿಜೆಪಿ ಜತೆ ಸಮಾನ ಅಂತರ ಕಾಯ್ದುಕೊಂಡು ವಿರೋಧ ಪಕ್ಷದಲ್ಲಿ ಕೂರುವ ಮಂತ್ರ ಜಪಿಸುತ್ತಿದ್ದ ಜೆಡಿಎಸ್​ಗೆ, ಕಾಂಗ್ರೆಸ್ ತನ್ನೆರಡೂ ಬಾಗಿಲುಗಳನ್ನು ತೆರೆದು ಷರತ್ತಿಲ್ಲದೆ ಶರಣಾದದ್ದು ಜೆಡಿಎಸ್​ಗೆ ಬಯಸಿದಂತೆಯೇ ಬಂದ ಭಾಗ್ಯದಂತಾಯಿತು. ಇದರಿಂದ ಜೆಡಿಎಸ್ ಮತ್ತಷ್ಟು ಚಿಗುರೊಡೆದರೆ, ಕಾಂಗ್ರೆಸ್ ಇನ್ನಷ್ಟು ಸೊರಗಲಿದೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ 20 ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಲಕ್ಷಾಂತರ ಅಭಿಮಾನಿಗಳ ಹಷೋದ್ಗಾರದೊಂದಿಗೆ ಅಧಿಕಾರ ಸ್ವೀಕರಿಸುವ ಆಸೆ ಹೊಂದಿದ್ದ ಬಿಎಸ್​ವೈಗೆ ಮೂರೇ ದಿನಗಳಲ್ಲಿ ಕನಸು ಭಗ್ನವಾಯಿತು. ಇನ್ನೊಂದೆಡೆ, ರಾಷ್ಟ್ರದ ವಿವಿಧ ಪಕ್ಷಗಳ ರಾಷ್ಟ್ರೀಯ ನಾಯಕರು ಹಾಗೂ ಬಿಜೆಪಿಯೇತರ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕ ಮಾಡಿಸಿಕೊಳ್ಳುವುದು ಕುಮಾರಸ್ವಾಮಿಗೆ ಒಲಿದು ಬಂದ ಅದೃಷ್ಟ.

ಮುಂದಾಗುವುದನ್ನು ಇಂದೇ ಊಹಿಸಬಲ್ಲ ರಾಜಕೀಯ ಚಾಣಾಕ್ಷ ಎಚ್.ಡಿ. ದೇವೇಗೌಡರು ಕೇವಲ 16 ಸಂಸದರನ್ನು ಹೊಂದಿದ್ದರೂ ರಾಷ್ಟ್ರದ ಪ್ರಧಾನಿಯಾದದ್ದು ಪವಾಡವೇ ಸರಿ. ಅದರಂತೆ ಮಗ ಕುಮಾರಸ್ವಾಮಿ 2005ರಲ್ಲಿ ಕಾಂಗ್ರೆಸ್ ನಂಟು ಕಿತ್ತುಕೊಂಡು ಬಿಜೆಪಿ ಜತೆ ಕೈಜೋಡಿಸಿ ಅಧಿಕಾರದ ಗದ್ದುಗೆಗೆ ಏರಿದಾಗ ‘ಇವನು ನನ್ನ ಮಗನೇ ಅಲ್ಲ..’ ಎಂದು ಗೌಡರು ಪುತ್ರನನ್ನು ದೂಷಿಸಿದ್ದರು. ಕೆಲ ದಿನಗಳ ನಂತರ ‘ನನ್ನ ಮಗ ಮಾಡಿದ್ದೇ ಸರಿ. ಇಲ್ಲದಿದ್ದರೆ ಜೆಡಿಎಸ್ ಛಿದ್ರ-ಛಿದ್ರವಾಗುತ್ತಿತ್ತು..’ ಎಂದು ಮಗನ ಆಟವನ್ನು ಮೆಚ್ಚಿಕೊಂಡಿದ್ದರು.

ಮಗ ಕುಮಾರಸ್ವಾಮಿ ಬಿಜೆಪಿ ಜತೆಗಿನ ಒಪ್ಪಂದದ ಪ್ರಕಾರ ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡಬೇಕಾದ ಸನ್ನಿವೇಶದಲ್ಲಿ ಅವರನ್ನು ತಡೆದು, ಕೊನೆಗೂ ಕೈಕೊಟ್ಟಿದ್ದು ಇತಿಹಾಸ. ಇದರಂತೆ ದೇವೇಗೌಡರು ಪ್ರಧಾನಿಯಾಗಿದ್ದಾಗ ಕಾಂಗ್ರೆಸ್ ಏಕಾಏಕಿ ಬೆಂಬಲ ವಾಪಸ್ ಪಡೆದಾಗ, ‘ಆತುರದ ಈ ಮುದುಕನಿಂದ (ಅಂದಿನ ಎಐಸಿಸಿ ಅಧ್ಯಕ್ಷ ಸೀತಾರಾಂ ಕೇಸರಿ) ಎಲ್ಲವೂ ಹಾಳಾಯಿತು..’ ಎಂದು ಗೊಣಗಿಕೊಂಡು ಗೌಡರು ಪ್ರಧಾನಿಪಟ್ಟ ತ್ಯಜಿಸಿದ್ದರು. ಈ ಕಹಿ ಅನುಭವದ ಹಿನ್ನೆಲೆಯಿದ್ದರೂ ಈಗ ಮತ್ತೆ ಕಾಂಗ್ರೆಸ್ ಸಹವಾಸಕ್ಕೆ ಕೈಚಾಚಿ, ಮಗನನ್ನು ಮುಖ್ಯಮಂತ್ರಿ ಮಾಡಬೇಕೆಂಬ ಕನಸನ್ನು ನನಸು ಮಾಡಿಕೊಂಡಿದ್ದು ದೈವಲೀಲೆ. ದೇವರನ್ನು ನಂಬಿದ ಗೌಡರ ಕುಟುಂಬಕ್ಕೆ ಆ ಭಗವಂತ ಕೈಹಿಡಿಯುತ್ತಲೇ ಬಂದಿದ್ದಾನೆ ಎಂಬುದಕ್ಕೆ ಇತ್ತೀಚಿನ ಘಟನಾವಳಿಗಳೇ ಸಾಕ್ಷಿ.

ಕುಮಾರಣ್ಣನವರ ಪಟ್ಟಾಭಿಷೇಕದ ನೆಪದಲ್ಲಿ ಮುಂದಿನ ಲೋಕಸಭಾ ಚುನಾವಣೆಗೆ ಮಿತ್ರಪಕ್ಷಗಳ ಮೈತ್ರಿಕೂಟದ ವೇದಿಕೆಗೆ ನಾಂದಿ ಹಾಡುವುದು ಈ ಪಟ್ಟಾಭಿಷೇಕದ ಬೃಹತ್ ಸಮಾವೇಶ ಅವಕಾಶ ಕಲ್ಪಿಸಿದೆ. ಜತೆಗೆ ಮಗನನ್ನು ಮತ್ತೆ ಮುಖ್ಯಮಂತ್ರಿಯಾಗಿ ನೋಡಬೇಕೆಂಬ ಗೌಡರ ಬಹುವರ್ಷಗಳ ಬೇಡಿಕೆಗೆ ಕಣ್ಣಿಗೆ ಕಾಣದ ದೇವರು ಅಸ್ತು ಎಂದಿದ್ದಾನೆ.

ಈ ಬೆಳವಣಿಗೆಗಳಿಂದ ದೊಡ್ಡಗೌಡರು ರಾಜ್ಯದ ರಾಜಕೀಯ ಗುರುವಾಗಿದ್ದಾರೆ. ಹೀಗಾಗಿಯೇ ಪಕ್ಷಭೇದ ಮರೆತು, ವಿಶೇಷವಾಗಿ ಸ್ವಜಾತಿ ರಾಜಕಾರಣಿಗಳು ಗೌಡರ ಮನೆಗೆ ಬಂದು ಆಶೀರ್ವಾದ ಪಡೆಯುವುದು ನಿರಂತರವಾಗಿ ನಡೆದಿದೆ. ಈಗ ಗೌಡರು ದೇಶದ ಮೈತ್ರಿಕೂಟದ ಭೀಷ್ಮರಾಗಿ ಹೊರಹೊಮ್ಮಿದ್ದಾರೆ. ಇದರ ಹಿಂದೆ ಗೌಡರ ದೂರಾಲೋಚನೆಯೂ ಅಡಗಿದೆ. ಮತ್ತೆ ಪ್ರಧಾನಿ ಅಥವಾ ರಾಷ್ಟ್ರಪತಿ ಗದ್ದುಗೆಯ ಕನಸು ಕಾಣುತ್ತಿದ್ದಾರೆ. ಅವರು ನಂಬಿದ ಅನೇಕ ದೇವರುಗಳು ಆಶೀರ್ವದಿಸಿದರೆ ಯಾವುದೂ ಅಸಾಧ್ಯವಲ್ಲ. ಇದು ಸಾಧ್ಯವಾದರೆ ನಾಡಿಗೂ ನಮಗೂ ಹೆಮ್ಮೆಯ ಸಂಗತಿಯೇ ಸರಿ.

ಇನ್ನೊಂದೆಡೆ, ‘ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ..’ ಎಂಬ ಮೋದಿ-ಶಾ ಜೋಡಿಯ ಮೋಡಿಗೆ ರಾಜ್ಯದಲ್ಲಿ ದಕ್ಕಿದ್ದು 104 ಸ್ಥಾನಗಳು ಮಾತ್ರ. ಆದರೂ, ಸರ್ಕಾರ ರಚಿಸುವಂತೆ ಬಿಎಸ್​ವೈಗೆ ತೆರೆಮರೆಯಲ್ಲಿ ಸೂಚನೆ ನೀಡಿ, ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಕೆಲಸ ಮಾಡಿ, ತಮಗೇನೂ ತಿಳಿಯದವರಂತೆ ಮೌನಕ್ಕೆ ಶರಣಾಗಿದೆ ಈ ಜೋಡಿ.

ಇನ್ನು, ಕಡುವೈರಿಗಳಂತೆ ಹಾವು ಮುಂಗುಸಿ ರೀತಿ ನಡುಬೀದಿಯಲ್ಲಿ ಕಚ್ಚಾಡುತ್ತ, ನಿಮ್ಮಪ್ಪನಾಣೆ ನಿಮ್ಮಪ್ಪನಾಣೆ ಎಂದು ಪರಸ್ಪರ ಹಳಿಯುತ್ತ, ಮತದಾರರಿಗೆ ಮನರಂಜನೆ ನೀಡುತ್ತಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಈಗ ದಿಢೀರನೆ ಎಲ್ಲವನ್ನೂ ಮರೆತು, ರಾಮ-ಹನುಮನಂತೆ ಅಪ್ಪಿಕೊಂಡು ಪರಸ್ಪರ ಕೊಂಡಾಡುತ್ತಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗಿ, ಮುಂದೇನು ಎಂಬ ಕುತೂಹಲದಿಂದ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಡೆಯುತ್ತಿದ್ದುದು ಒಂದೆಡೆಯಾದರೆ, ಇನ್ನೊಂದೆಡೆ ತವರು ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 30 ಸಾವಿರಕ್ಕಿಂತಲೂ ಅಧಿಕ ಮತಗಳ ಅಂತರದ ಸೋಲು ಕಂಡ ಸಿದ್ದುವಿನ ನಿದ್ದೆಗೆ ಭಂಗವಾಗಲಿಲ್ಲ ಎಂಬುದು ವಿಪರ್ಯಾಸವೇ ಸರಿ.

ರಾಜ್ಯದ ಮತದಾರ ಬಿಜೆಪಿಗೆ ಬಹುಮತ ನೀಡದಿದ್ದರೂ, ಹಿಂದಿನ ಆಡಳಿತ ಪಕ್ಷ ಕಾಂಗ್ರೆಸ್ಸನ್ನು ತಿರಸ್ಕರಿಸಿದ್ದು ಹಾಗೂ ಜೆಡಿಎಸ್​ಗೆ ಕೇವಲ 38 ಸ್ಥಾನ ನೀಡಿದ್ದು ಇತಿಹಾಸ. ಆದರೆ, ಸೋತವರೇ ಒಂದಾಗಿ ರೆಸಾರ್ಟ್​ನಿಂದ ರೆಸಾರ್ಟ್​ಗೆ ಚುನಾಯಿತ ಪ್ರತಿನಿಧಿಗಳನ್ನು ‘ಕುರಿಗಳು ಸಾರ್ ಕುರಿಗಳು..’ ಎಂಬಂತೆ ಅಟ್ಟಾಡಿಸುತ್ತಿರುವುದು ಪ್ರಜಾಪ್ರಭುತ್ವದ ಅಣಕವೇ ಸರಿ. ಈಗ ಕಾಂಗ್ರೆಸ್-ಜೆಡಿಎಸ್ ನಡುವೆ ಆಗಿರುವುದು ಹಿಂದಿನಂತೆ ಕೂಡಾವಳಿಯೇ ಹೊರತು, ಜನಾಶೀರ್ವಾದವಲ್ಲ.

ಒಟ್ಟಾರೆ, ಈ ಚುನಾವಣೆಯ ಫಲಿತಾಂಶವೆಂದರೆ ದೊಡ್ಡಗೌಡರು ಒಬ್ಬ ವ್ಯಕ್ತಿಯಲ್ಲ, ಶಕ್ತಿ. ರಾಷ್ಟ್ರದ ಬಿಜೆಪಿಯೇತರ ಪಕ್ಷಗಳ ಕೇಂದ್ರ ಬಿಂದು ಆಗಿದ್ದಾರೆ. ತಮ್ಮನ್ನು ನಂಬಿದ ಈ ಪಕ್ಷಗಳಿಗೆ ಗೌಡರು ರಾಜಕೀಯ ಜ್ಯೋತಿಷಿಗಳು, ಸಂಖ್ಯಾಶಾಸ್ತ್ರ ಪ್ರವೀಣರೂ ಆಗಿ ಹೊರಹೊಮ್ಮಿದ್ದಾರೆ. ಇನ್ನು ಮುಂದೆ ಲೋಕಸಭಾ ಚುನಾವಣೆಯಲ್ಲೂ ಇವರ ಶಾಸ್ತ್ರ ಫಲ ನೀಡಬಹುದು.

ಬಿಜೆಪಿ ರಾಜ್ಯದಲ್ಲಿ ಬಹುಮತ ಗಳಿಸಿ ಮತ್ತೆ ಅಧಿಕಾರಕ್ಕೆ ಬಂದರೆ ಯಡಿಯೂರಪ್ಪ ತಮ್ಮದೇ ಸಾಮ್ರಾಜ್ಯ ಕಟ್ಟುತ್ತಾರೆ. ಅದರ ಬದಲು ಅತಂತ್ರ ವಿಧಾನಸಭೆಯಾದರೆ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡು ಇಂದಲ್ಲ ನಾಳೆ ತಾವೂ ಮುಖ್ಯಮಂತ್ರಿಯಾಗಬಹುದು ಎಂಬುದು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು ಹಾಗೂ ಅವರ ಹಿತೈಷಿಗಳು ಮಾಡಿದ ಕುತಂತ್ರ. ಇಷ್ಟು ಸಾಲದೆಂಬಂತೆ, ಹೈಕಮಾಂಡ್​ನ ಸರ್ವಾಧಿಕಾರಿ ಧೋರಣೆ, ರಾಜ್ಯದ ಜನತೆಯ ನಾಡಿ ಮಿಡಿತ ಬಲ್ಲ ಯಡಿಯೂರಪ್ಪ ಅವರ ಮಾತಿಗೆ ಮನ್ನಣೆ ನೀಡದಿರುವುದು, ಸೀಟು ಹಂಚಿಕೆ ವಿಚಾರದಲ್ಲಿ ಅವರನ್ನು ದೂರವಿಟ್ಟಿದ್ದು ಈ ಸೋಲಿಗೆ ಕಾರಣ. ಅಲ್ಲದೆ, ಸಂಸದ ಶ್ರೀರಾಮುಲು ಅವರಿಗೆ ಎರಡು ಕ್ಷೇತ್ರಗಳಲ್ಲಿ ಸ್ಥಾನ ನೀಡಿ, ಅದನ್ನು ಸಮರ್ಥಿಸಿಕೊಂಡ ಹೈಕಮಾಂಡ್, ಶೋಭಾ ಕರಂದ್ಲಾಜೆ, ಕರಡಿ ಸಂಗಣ್ಣ ಹಾಗೂ ಬಿಎಸ್​ವೈ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ನೀಡದಿದ್ದುದು ಇನ್ನೂ ಹತ್ತು ಹಲವು ಸ್ಥಾನ ಗೆಲ್ಲುವ ಅವಕಾಶ ತಪ್ಪುವಂತಾಯಿತು.

ಬಿಜೆಪಿ ವರಿಷ್ಠರ ದ್ವಂದ್ವ ನಿಲುವು, ಹಠ, ಹೆಡ್​ವಾಸ್ಟರ್ ನಡವಳಿಕೆ ಇಷ್ಟಕ್ಕೆಲ್ಲ ಮುಳುವಾಯಿತು. ಅಲ್ಲದೆ ಓಡುವ ಕುದುರೆ (ರೇಸ್ ಹಾರ್ಸ್) ಯಡಿಯೂರಪ್ಪ ಅವರಿಗೆ ಕಡಿವಾಣ ಹಾಕಿ ಎಡವಟ್ಟು ಮಾಡಿದ್ದೇ ಹೈಕಮಾಂಡ್. ಈಗ ಮಾಡಿದ್ದುಣ್ಣೋ ಮಾರಾಯ ಎನ್ನುವಂಥ ಸ್ಥಿತಿ ನಿರ್ವಣವಾಗಿದೆ. ಸಿದ್ದು ಹಾಗೂ ಬಿಎಸ್​ವೈ ಇಬ್ಬರನ್ನೂ ಮುಖ್ಯಮಂತ್ರಿ ಸ್ಥಾನದಿಂದ ಔಟ್ ಮಾಡಬೇಕೆಂಬ ಎರಡೂ ಪಕ್ಷಗಳ ಹುನ್ನಾರ ಫಲಿಸಿದೆ. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭವಾಗಿದೆ.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top