ಸಕಲೇಶಪುರ ಘಾಟಿ ಯಾನ ಸವಾಲು

ಪ್ರಕಾಶ್ ಮಂಜೇಶ್ವರ ಮಂಗಳೂರು

ಆಕಾಶದೆತ್ತರದ ಬೆಟ್ಟ, ಕಾಡು, ಹಾದಿಯುದ್ದಕ್ಕೂ ಕಾಣುವ ಹಸಿರು, ನದಿ, ತೊರೆಗಳು, ಥ್ರಿಲ್ ಹುಟ್ಟಿಸುವ ಸುರಂಗ ಮಾರ್ಗ… ಹೀಗೆ ಪ್ರಯಾಣಿಕರಿಗೆ ನಿಸರ್ಗ ಚೆಲುವಿನ ದರ್ಶನ ಒದಗಿಸುವ ಸುಬ್ರಹ್ಮಣ್ಯ ರೋಡ್ ಮತ್ತು ಸಕಲೇಶಪುರ ನಡುವಿನ ಘಾಟಿ ಪ್ರದೇಶ ಸುರಕ್ಷತೆ ಕಾರಣಗಳಿಂದ ಇತ್ತೀಚೆಗೆ ಭಾರಿ ಸುದ್ದಿಯಾಗುತ್ತಿದೆ.
ಮಳೆಗಾಲದಲ್ಲಿ ಹಳಿಯ ಬದಿ ಆಗಾಗ ಸಂಭವಿಸುವ ಭೂಕುಸಿತ, ಬೆಟ್ಟದಿಂದ ಜಾರುವ ಬಂಡೆ, ಮಣ್ಣು, ಕಲ್ಲುಗಳು ರೈಲು ಪ್ರಯಾಣಕ್ಕೆ ಆತಂಕ ಒಡ್ಡುತ್ತಿವೆ. ಆತಂಕ ಎದುರಾಗುವ ಸಂದರ್ಭದಲ್ಲೆಲ್ಲ ಇಲಾಖೆ ತಕ್ಷಣ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ತಾತ್ಕಾಲಿಕವಾಗಿ ಈ ಮಾರ್ಗದ ರೈಲು ಸೇವೆ ಸ್ಥಗಿತಗೊಳಿಸಲಾಗುತ್ತದೆ. ಹಳಿ ಮೇಲೆ ಬಿದ್ದ ಮಣ್ಣು, ಕಲ್ಲು ತೆರವು ಬಳಿಕವಷ್ಟೇ ಮತ್ತೆ ರೈಲು ಪ್ರಯಾಣಕ್ಕೆ ಅವಕಾಶ ಒದಗಿಸಲಾಗುತ್ತದೆ. ಮಳೆಗಾಲ ಈ ಹಾದಿ ರೈಲು ಸಂಚರಿಸುವ ವೇಗ ಕಡಿತ ಮಾಡಲಾಗುತ್ತದೆ. ಕಳೆದ ಎರಡು ವರ್ಷಗಳಲ್ಲಿ ಇಂತಹ ಸಂದರ್ಭಗಳು ಅಧಿಕ ಬಾರಿ ಎದುರಾಗಿವೆ.

ಸುಬ್ರಹ್ಮಣ್ಯ ರೋಡ್ ಮತ್ತು ಶಿರಿಬಾಗಿಲು ನಡುವಿನ ರೈಲ್ವೆ ಹಾದಿ ದುರ್ಗಮವಾಗಿದ್ದು, ಎತ್ತರದ ಗುಡ್ಡ, ಬೆಟ್ಟಗಳನ್ನು ಸೀಳಿಕೊಂಡು ಸಾಗಿರುವ ಇಲ್ಲಿನ ಹಳಿಯನ್ನು ಜತನದಿಂದ ಕಾಯುವುದು ಸವಾಲಾಗಿದೆ. ಇಲಾಖೆ ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳಿಂದ ಇಲ್ಲಿವರೆಗೆ ಮಾರ್ಗದಲ್ಲಿ ಯಾವುದೇ ಅನಾಹುತಗಳು ಸಂಭವಿಸಿಲ್ಲ.

ಸುರಕ್ಷತಾ ಕ್ರಮ: ಘಾಟಿ ಪ್ರದೇಶದಲ್ಲಿ ಸಾಕಷ್ಟು ಬಾರಿ ಭೂಕುಸಿತ ಸಂಭವಿಸಿದ್ದರೂ ಇಲ್ಲಿವರೆಗೆ ಈ ಮಾರ್ಗದಲ್ಲಿ ಯಾವುದೇ ದೊಡ್ಡ ಅನಾಹುತ ಸಂಭವಿಸದೆ ಇರಲು ಇಲಾಖೆ ಕೈಗೊಂಡಿರುವ ಮುಂಜಾಗ್ರತಾ ಕ್ರಮ ಕಾರಣ. ಹಳಿ ಪಹರೆ ಕಾಯುವ ಗ್ಯಾಂಗ್‌ಮೆನ್‌ಗಳು, ಸುರಂಗ ಮಾರ್ಗದ ಇಕ್ಕೆಲ ನೇಮಿಸಲಾಗಿರುವ ಹೆಚ್ಚುವರಿ ಸಿಬ್ಬಂದಿ ನೆರವಾಗಿದ್ದಾರೆ.
ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೆಲ ಅಧಿಕಾರಿಗಳಿಗೂ ಇಚ್ಛೆ ಇದ್ದಂತಿಲ್ಲ. ಕಾಮಗಾರಿ ಸಿಗುತ್ತಿದ್ದರೆ ಕೆಲವರಿಗೆ ಲಾಭವೂ ಇದೆ ಎಂದು ಆಕ್ಷೇಪ ಹೊರಿಸುವವರೂ ಇದ್ದಾರೆ, ಆದರೆ ಈ ಆಕ್ಷೇಪಕ್ಕೆ ಇನ್ನೂ ಆಧಾರ ದೊರೆತ್ತಿಲ್ಲ.

ಕೊಂಕಣ ರೈಲ್ವೆ ಮಾದರಿ: 2004ರ ಜೂ.17ರಂದು ಭಾರಿ ಮಳೆ ಸಂದರ್ಭ ಕೊಂಕಣ ರೈಲ್ವೆ ಮಾರ್ಗದಲ್ಲಿ ಮಂಗಳೂರು- ಮುಂಬೈ ಮತ್ಸೃಗಂಧ ಎಕ್ಸ್‌ಪ್ರೆಸ್ ಮುಂಬೈ ತಲುಪುವ ಮೊದಲು ಭೂಕುಸಿತ ಸಂಭವಿಸಿ 20 ಪ್ರಯಾಣಿಕರು ಮೃತಪಟ್ಟರು. 2003ರ ಜೂ.23ರಂದು ಮುಂಬೈ- ಕಾರವಾರ ನಡುವೆ ರಜಾ ಕಾಲದ ವಿಶೇಷ ರೈಲು ಸಂಚರಿಸುತ್ತಿದ್ದ ಸಂದರ್ಭ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಭೂಕುಸಿತದಿಂದ ಬಂಡೆ ಉರುಳಿದ ಕಾರಣ 52 ಪ್ರಯಾಣಿಕರು ಪ್ರಾಣ ಕಳೆದುಕೊಂಡರು. ಇವೆರಡು ದುರ್ಘಟನೆಗಳಿಂದ ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ (ಕೆಆರ್‌ಸಿಎಲ್) ಪಾಠ ಕಲಿತಿದೆ. ಬಳಿಕ ಕೊಂಕಣ ರೈಲ್ವೆ ಮಾರ್ಗದಲ್ಲಿ ಯಾವುದೇ ಗಮನಾರ್ಹ ದುರ್ಘಟನೆಗಳು ಸಂಭವಿಸಿಲ್ಲ. ರೈಲ್ವೆ ಹಳಿ ಸಾಗುವ ಬದಿಯ ಗುಡ್ಡವನ್ನು ಮೆಟ್ಟಿಲುಗಳ ರೀತಿ ಕೊರೆಯಲಾಗಿದೆ. ಜತೆಗೆ ಕಬ್ಬಿಣದ ಬೇಲಿ, ಅಗತ್ಯ ಪ್ರಮಾಣದ ಗ್ಯಾಂಗ್‌ಮೆನ್‌ಗಳ ನೇಮಕ, ಹಳಿ ಮೇಲೆ ಯಾವುದೇ ಭಾರದ ವಸ್ತು ಉರುಳಿದರೆ ಹತ್ತಿರದ ರೈಲು ನಿಲ್ದಾಣಗಳಿಗೆ ಸ್ವಯಂಚಾಲಿತವಾಗಿ ಸಂದೇಶ ರವಾನೆಯಾಗುವ ವ್ಯವಸ್ಥೆ ಒದಗಿಸಲಾಗಿದೆ.

ಸುಬ್ರಹ್ಮಣ್ಯ ರೋಡ್- ಶಿರಿಬಾಗಿಲು ಮಾರ್ಗ ವಿಶಿಷ್ಟ ಭೌಗೋಳಿಕ ಲಕ್ಷಣಗಳನ್ನು ಹೊಂದಿದೆ. ಇಲಾಖೆಯ ತಾಂತ್ರಿಕ ವಿಭಾಗವು ಈ ಮಾರ್ಗದಲ್ಲಿ ಕೈಗೊಳ್ಳಬಹುದಾದ ಅಲ್ಪಾವಧಿ ಹಾಗೂ ದೀರ್ಘಾವಧಿಯ ಯೋಜನೆಗಳನ್ನು ಹೊಂದಿದೆ.
-ಅಪರ್ಣಾ ಗರ್ಗ್, ವಿಭಾಗೀಯ ರೈಲ್ವೆ ಪ್ರಬಂಧಕಿ, ನೈರುತ್ಯ ರೈಲ್ವೆ

ನಿರ್ದಿಷ್ಟ ಪ್ರದೇಶದಲ್ಲಿ ಬೆಟ್ಟಗಳ ನಡುವೆ ಹಳಿ ದ್ವಿಗುಣಗೊಳಿಸಿ ರೈಲು ಸುರಂಗ ಮಾರ್ಗ ರೂಪಿಸುವುದರಿಂದ ಬಹುಶಃ ಈ ಸಮಸ್ಯೆಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ದೊರೆಯಬಹುದು. ಶಿರಾಡಿ ಮಾರ್ಗದಲ್ಲಿ ಸುರಂಗ ರಸ್ತೆ ಮಾರ್ಗ ಪ್ರಸ್ತಾವನೆ ಈಗಾಗಲೇ ಸರ್ಕಾರದ ಮುಂದೆ ಬಂದಿದೆ. ಇರುವ ವ್ಯವಸ್ಥೆಯಲ್ಲಿ ಘಾಟಿ ಪ್ರದೇಶದಲ್ಲಿ ರೈಲ್ವೆ ಹಳಿಯಲ್ಲಿ ಇಲಾಖೆ ತಂತ್ರಜ್ಞಾನ ಮೂಲಕ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
– ಅನಿಲ್ ಹೆಗ್ಡೆ, ತಾಂತ್ರಿಕ ಸಲಹೆಗಾರ, ರೈಲ್ವೆ ಯಾತ್ರಿ ಸಂಘ

Leave a Reply

Your email address will not be published. Required fields are marked *