Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಅನನ್ಯ ಭಕ್ತಿ ಚಳವಳಿಯ ಹರಿಕಾರ ಚೈತನ್ಯಪ್ರಭುಗಳು

Friday, 02.03.2018, 3:05 AM       No Comments

 ಚೈತನ್ಯರ ತತ್ತ್ವಾದರ್ಶನಗಳಿಂದ ಪ್ರಭಾವಿತರಾಗಿ, ಪ್ರೇರಿತರಾದ ಶ್ರೀಲ ಪ್ರಭುಪಾದರು ಆ ಭಕ್ತಿಯ ಹಾದಿಯನ್ನು ತುಳಿದು; ಪ್ರಾಪಂಚಿಕರ ಹೃದಯದಲ್ಲಿ ಕವಿದಿರುವ ಕಲ್ಮಶವನ್ನು ತೊಳೆದು ಶುಚಿರ್ಭತರನ್ನಾಗಿ ಮಾಡುವ ಪಣತೊಟ್ಟರು. ಆ ಮುಖೇನ ಭಕ್ತಿಚಳವಳಿಗೆ ಬಲ ತುಂಬಿದರು.

| ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ

ಭಾರತದಲ್ಲಿ ಆಗಿಹೋದ ನೂರಾರು ದಾರ್ಶನಿಕರಲ್ಲಿ ಚೈತನ್ಯ ಮಹಾಪ್ರಭುಗಳು ಒಬ್ಬರು. ಮಧ್ಯಕಾಲೀನ ಭಾರತದ ಸಂದರ್ಭದಲ್ಲಿ ಭಕ್ತಿಯುಗವನ್ನು ಸಮರ್ಥವಾಗಿ ಮುನ್ನಡೆಸಿದ ಹಿರಿಮೆ ಚೈತನ್ಯ ಮಹಾಪ್ರಭುಗಳದು. ಕರ್ನಾಟಕದಲ್ಲಿ ದಾಸಪರಂಪರೆ ಮೂಲಕ ಕೃಷ್ಣಭಕ್ತಿಯನ್ನು ಪಸರಿಸಿದಂತೆ, ಸರಿಸುಮಾರು ಅದೇ ಕಾಲದಲ್ಲಿ ಬಂಗಾಳದಲ್ಲಿ ಚೈತನ್ಯಪ್ರಭುಗಳು ಜನಮಾನಸದಲ್ಲಿ ಭಕ್ತಿಯ ಬೀಜ ಬಿತ್ತುವುದರ ಮೂಲಕ ಸಾಮಾಜಿಕ ಪರಿವರ್ತನೆಯ ಹರಿಕಾರರಾದರು. ಜನಸಾಮಾನ್ಯರ ಬದುಕಿನಲ್ಲಿ ಆಧ್ಯಾತ್ಮಿಕ ಒರತೆಯನ್ನು ಚಿಮ್ಮಿಸಿದರು. ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಹಿಂದೂಸಮಾಜ ಸಂಕೀರ್ಣ ಪರಿಸ್ಥಿತಿ ಎದುರಿಸುತ್ತಿದ್ದ ಸಂದರ್ಭದಲ್ಲಿ ಬರುವ ಚೈತನ್ಯ ಪ್ರಭುಗಳು ಬೆಳಕಿನ ಕಿರಣವಾಗಿ ಕಾಣಿಸಿಕೊಂಡರು. ಕ್ರಿ.ಶ. 18.02.1486 ರಿಂದ 14.06.1534ರ ನಡುವಿನ ಅವಧಿಯಲ್ಲಿದ್ದ ಚೈತನ್ಯ ಮಹಾಪ್ರಭುಗಳು ಭಕ್ತರ ದೃಷ್ಟಿಯಲ್ಲಿ ಕೃಷ್ಣನ ಅವತಾರವೇ ಆಗಿದ್ದರು. ವೈಷ್ಣವ ಪಂಥದ ಭಕ್ತಿಯೋಗದ ವಾತಾವರಣವನ್ನು ತಮ್ಮ ಪರಿಸರದಲ್ಲಿ ನಿರ್ವಿುಸಿದ ಅವರ ಜನ್ಮದಿನವನ್ನು ಗೌರಪೂರ್ಣಿಮಾ ಎಂಬ ಹೆಸರಿನಲ್ಲಿ ಆಚರಿಸುವ ಪದ್ಧತಿಉಂಟು. ಚೈತನ್ಯರ ಬದುಕಿನ ಬಗೆಗೆ ಮಾಹಿತಿ ನೀಡಬಲ್ಲ ಅನೇಕ ಗ್ರಂಥಗಳು ಇಂದು ಲಭ್ಯವಿವೆ. ಇವುಗಳಲ್ಲಿ ‘ಚೈತನ್ಯ ಚರಿತಾಮೃತ’ ಕೃತಿಗೆ ಮಹತ್ವದ ಸ್ಥಾನವಿದೆ.

ಚೈತನ್ಯ ಮಹಾಪ್ರಭುಗಳ ತಂದೆ ಜಗನ್ನಾಥಮಿಶ್ರರು ವಿದ್ವದ್ ಬ್ರಾಹ್ಮಣರು. ಸಿಲ್ಹೆಟ್ ಜಿಲ್ಲೆಯವರಾದ ಜಗನ್ನಾಥಮಿಶ್ರರು ಆ ಕಾಲಕ್ಕೆ ಶಿಕ್ಷಣ ಮತ್ತು ಸಾಂಸ್ಕೃತಿಕ ಕೇಂದ್ರವೆಂದು ಹೆಸರುವಾಸಿಯಾಗಿದ್ದ ನವದ್ವೀಪದಲ್ಲಿ ವಿದ್ಯಾರ್ಥಿಯಾಗಿ ಬಂದು ನೆಲೆಸಿದರು. ನವದ್ವೀಪದ ಮಹಾನ್ ವಿದ್ವಾಂಸರಾದ ನೀಲಾಂಬರ ಚಕ್ರವರ್ತಿಯವರ ಪುತ್ರಿ ಶಚೀದೇವಿಯನ್ನು ವಿವಾಹ ಮಾಡಿಕೊಂಡ ಅವರು ಗಂಗಾತೀರದಲ್ಲಿ ವಾಸ್ತವ್ಯ ಹೂಡಿದರು. ಹತ್ತನೆಯ ಹಾಗೂ ಕೊನೆಯ ಮಗನಾದ ವಿಶ್ವಂಭರನು ಮುಂದೆ ನಿಮಾಯಿ ಪಂಡಿತನೆಂದೂ ಸಂನ್ಯಾಸಾಶ್ರಮ ಸ್ವೀಕರಿಸಿದ ಅನಂತರ ಭಗವಾನ್ ಚೈತನ್ಯ ಮಹಾಪ್ರಭು ಎಂದೂ ವಿಖ್ಯಾತಗೊಂಡನು.

ಮಹಾಪ್ರಭುಗಳ ಅವತರಣ ಮತ್ತು ಚಂದ್ರಗ್ರಹಣಗಳು ಏಕಕಾಲದಲ್ಲಿ ಸಂಭವಿಸಿದವು. ಇದು ಚೈತನ್ಯ ಮಹಾಪ್ರಭುಗಳು ನಿರ್ವಹಿಸಲಿದ್ದ ಕಾರ್ಯದ ಸ್ಪಷ್ಟ ಸೂಚನೆಯಾಗಿತ್ತು. ಕಲಿ (ಕಲಹ) ಯುಗದಲ್ಲಿ ಭಗವಂತನ ನಾಮಸಂಕೀರ್ತನೆಯ ಮಹತ್ವವನ್ನು ಬೋಧಿಸುವುದೇ ಆ ಕಾರ್ಯವಾಗಿತ್ತು. ಈ ಯುಗದಲ್ಲಿ ಕ್ಷುಲ್ಲಕ ವಿಷಯಗಳಿಗೂ ಕಲಹಗಳಾಗುತ್ತವೆ. ಆದ್ದರಿಂದಲೇ ಶಾಸ್ತ್ರಗಳ ಸಾಕ್ಷಾತ್ಕಾರಕ್ಕಾಗಿ ಭಗವಂತನ ‘ನಾಮಸಂಕೀರ್ತನೆ’ ಎಂಬ ಸರ್ವಸಮಾನ ವೇದಿಕೆಯನ್ನು ಈ ಯುಗಕ್ಕೆ ಎತ್ತಿ ಹೇಳಲಾಗಿದೆ.

ಬಾಲ್ಯಲೀಲೆ: ತಾಯಿಯ ತೊಡೆಯ ಮೇಲೆ ಪವಡಿಸಿದ್ದಾಗ ಸುತ್ತ ಇದ್ದ ಮಹಿಳೆಯರು ದಿವ್ಯನಾಮ ಸಂಕೀರ್ತನೆ ಮಾಡಿ ಚಪ್ಪಾಳೆ ತಟ್ಟಿದೊಡನೆಯೇ ಮಹಾಪ್ರಭುಗಳು ಅಳುವುದನ್ನು ನಿಲ್ಲಿಸುತ್ತಿದ್ದರಂತೆ. ಈ ಲೀಲೆಗಳನ್ನು ಚೈತನ್ಯ ಭಾಗವತದಲ್ಲಿ ಹೀಗೆ ವರ್ಣಿಸಲಾಗಿದೆ: ‘‘ತಮ್ಮ ಸುಂದರ ನಯನಗಳಿಂದ ಪ್ರಭುಗಳು ಅಳಲುಪಕ್ರಮಿಸುತ್ತಿದ್ದರು. ಆದರೆ (ಹೆಂಗಸರು) ಹರೇಕೃಷ್ಣ ಮಹಾಮಂತ್ರ ಸಂಕೀರ್ತಿಸುವುದನ್ನು ಕೇಳಿದೊಡನೆ ಅವರ ಅಳು ನಿಂತುಹೋಗುತ್ತಿತ್ತು. ಅಳಲು ಪ್ರಾರಂಭಿಸುವುದು, ಹರೇಕೃಷ್ಣ ಮಂತ್ರ ಕಿವಿಗೆ ಬಿದ್ದೊಡನೆ ಅಳು ನಿಲ್ಲುವುದು- ಪ್ರಭುಗಳು ಆಡುತ್ತಿದ್ದ ಈ ತಮಾಷೆಯ ಆಟವು ಹೆಂಗಸರಿಗೆ ಅರ್ಥವಾಗಿ ಹೋಯಿತು. ಸರಿ, ಇತ್ತ ಪ್ರಭುಗಳು ಅಳಲು ಆರಂಭಿಸಿದೊಡನೆ ಹರೇಕೃಷ್ಣ ಮಂತ್ರವನ್ನು ಸಂಕೀರ್ತಿಸುವ ಒಂದು ಉಪಾಯವನ್ನು ಹೆಂಗಸರು ಕಂಡುಕೊಂಡರು. ಮುಂದೆ ಇದೇ ಒಂದು ಕ್ರಮವಾಗಿಬಿಟ್ಟಿತು. ಅತ್ತ ಪ್ರಭುಗಳು ಅಳಲು ಪ್ರಾರಂಭಿಸುವರು. ಇತ್ತ ಹೆಂಗಸರು ಚಪ್ಪಾಳೆ ತಟ್ಟುತ್ತ ಹರೇಕೃಷ್ಣ ಮಂತ್ರದ ಸಂಕೀರ್ತನೆ ಪ್ರಾರಂಭಿಸುವರು. ಈ ಪರಿಯಲ್ಲಿ ನೆರೆಹೊರೆಯ ಎಲ್ಲ ಹೆಂಗಸರೂ ಸಂಕೀರ್ತನೆಯಲ್ಲಿ ಭಾಗವಹಿಸಲು ಶಚೀಮಾತೆಯ ಮನೆಯಲ್ಲಿ ದಿನದ ಇಪ್ಪತ್ನಾಲ್ಕು ಗಂಟೆಯೂ ಹರೇಕೃಷ್ಣ ಮಹಾಮಂತ್ರವನ್ನು ಜಪಿಸುತ್ತಿದ್ದರು’.

ಭಕ್ತಿಯ ಶಕ್ತಿ ತೋರಿಸಿಕೊಟ್ಟರು: ಮೂಲತಃ ದೂರದ ಬಂಗಾಳದ ನವದ್ವೀಪದಿಂದ ಬಂದು ಒಡಿಶಾದ ಪುರಿಯಲ್ಲಿ ನೆಲೆ ಸ್ಥಾಪಿಸಿಕೊಂಡುದಕ್ಕೆ ಮತ್ತು ದಿನೇದಿನೇ ತನ್ನನ್ನು ಮೀರಿಸುವಂತೆ ಪ್ರಸಿದ್ಧಿಗೆ ಬರುತ್ತಿದ್ದುದಕ್ಕೆ ಚೈತನ್ಯರ ಬಗ್ಗೆ ಪುರಿ ಮಹಾರಾಜನಿಗೆ ಒಳಗೊಳಗೇ ಅಸಮಾಧಾನ ಇದ್ದಿತ್ತು. ಆದರೆ, ಚೈತನ್ಯರ ಭಕ್ತಿಚಳವಳಿಯ ಮುಂದೆ, ಸಾತ್ತಿ್ವಕವಾದ ನಿಶ್ಶಸ್ತ್ರ ಬದುಕಿನ ಮುಂದೆ, ರಾಜನ ಸಾಮ್ರಾಜ್ಯ ವೈಭವ ಮಂಡಿಯೂರಬೇಕಾಯಿತು.

ಆ ಕಾಲಕ್ಕೆ ಅತ್ಯಂತ ಪ್ರಬಲರಾಗಿ ಸಾಮ್ರಾಜ್ಯವನ್ನಾಳುತ್ತಿದ್ದ ಕಳಿಂಗವಂಶದ ಕಾಕತೀಯ ದೊರೆ ಪ್ರತಾಪರುದ್ರನನ್ನು ಖೆಡ್ಡಾಕ್ಕೆ ಬೀಳಿಸಿದ, ನಿಧಾನವಾಗಿ ಪಳಗಿಸಿ ಭಕ್ತಿಮಾರ್ಗಕ್ಕೆ ಹಚ್ಚಿದ ಶ್ರೇಯಸ್ಸು ಚೈತನ್ಯರದು. ಯುದ್ಧ ಮಾಡದೆಯೇ ಸಾಮ್ರಾಜ್ಯ ಗೆದ್ದ ಯಶಸ್ಸು ಅವರದು. ರಾಜಕೀಯವು ಧರ್ಮದ ತಳಹದಿಯಲ್ಲಿರಬೇಕು. ಆದರೆ ಅವು ಅಪವಿತ್ರ ಮೈತ್ರಿ ಮಾಡಿಕೊಳ್ಳಬಾರದು. ಧರ್ಮವು ರಾಜಕೀಯಕ್ಕೆ ಅಡಿಯಾಳಾಗಬಾರದು ಎಂಬ ಬಹುದೊಡ್ಡ ದೃಷ್ಟಾಂತವನ್ನು ಚೈತನ್ಯರು ಆಡದೆಯೇ ಇಂಥ ಪ್ರಸಂಗದಲ್ಲಿ ಮಾಡಿ ತೋರಿಸಿಬಿಟ್ಟಿದ್ದಾರೆ.

ಭಕ್ತಿಪಾರಮ್ಯ ಮತ್ತು ಐಹಿಕಭೋಗ ಸಾಮ್ರಾಜ್ಯದೆಡೆಗಿನ ವಿರಕ್ತಿಯನ್ನು ‘ಚೈತನ್ಯ ಚರಿತಾಮೃತ’ ಕಾವ್ಯದ ಉದ್ದಕ್ಕೂ ಕಾಣಬಹುದಾಗಿದೆ. ಎರಡು ಅತಿಗಳನ್ನು ಚಿತ್ರಿಸುತ್ತ ಅಂತಿಮವಾಗಿ ಐಹಿಕವು ಕ್ಷುಲ್ಲಕ ಎಂಬುದನ್ನು ಈ ಕಾವ್ಯವು ಹೇಳುತ್ತದೆ. ಅಹಂಕಾರ, ಕಾಮ, ಕ್ರೋಧ, ಮದ, ಮತ್ಸರಾದಿಗಳು ವ್ಯಷ್ಟಿರೂಪದಲ್ಲಿರುವ ವ್ಯಕ್ತಿಯು, ಸಮಷ್ಟಿರೂಪದಲ್ಲಿರುವ ಕೃಷ್ಣನಲ್ಲಿ ಹೇಗೆ ಐಕ್ಯವಾಗಬೇಕು ಎಂಬ ತತ್ತ್ವವನ್ನು ಚೈತನ್ಯರ ಪರಮಶಿಷ್ಯರಾಗಿರುವ ‘ಕೃಷ್ಣದಾಸ ಕವಿರಾಜ’ ವಿರಚಿತ ಈ ಕೃತಿಯು ಬಹುಸುಂದರವಾಗಿ ನಿರೂಪಿಸುತ್ತದೆ. ಬಯಲು (ಚೈತನ್ಯರು) ಮತ್ತು ಆಲಯ (ಪ್ರತಾಪರುದ್ರ) ಎರಡೂ ಸ್ವರೂಪಗಳು ಕೊನೆಯಲ್ಲಿ ಒಂದಾಗುವ ಸನ್ನಿವೇಶವು ಹೃದಯಂಗಮವಾಗಿ ಚಿತ್ರಿತವಾಗಿದೆ.

ಚೈತನ್ಯ ಪ್ರಭುಗಳು ಬರೆದದ್ದು ಎಂಟು ಶ್ಲೋಕಗಳು, ಅದನ್ನು ‘ಶಿಕ್ಷಾಷ್ಟಕ’ ಎಂದು ಕರೆಯಲಾಗುತ್ತದೆ. ಉಳಿದಂತೆ ಅವರ ಜೀವನದ ವಿವರಗಳು, ಸಾಧನೆಗಳು ಲಭ್ಯವಾಗುವುದು ಮುಖ್ಯವಾಗಿ ಕೃಷ್ಣದಾಸ ಕವಿರಾಜ ವಿರಚಿತ ‘ಚೈತನ್ಯ ಚರಿತಾಮೃತ’ ಎಂಬ ಕಾವ್ಯಕೃತಿಯ ಮೂಲಕವೇ. ಈ ಶ್ಲೋಕಕಾವ್ಯವು ಬಂಗಾಳಿ ಭಾಷೆಯಲ್ಲಿದ್ದು ಹಲವಾರು ಭಾಷೆಗಳಿಗೆ ಅನುವಾದವಾಗಿದೆ. ಇದು ಕನ್ನಡಕ್ಕೆ ಇಸ್ಕಾನ್ ಸಂಸ್ಥೆಯ ಮೂಲಕ ಈ ಹಿಂದೆ ಪ್ರಕಟವಾಗಿದೆ. ಸತ್ತ್ವಪೂರ್ಣವಾದ, ಬದುಕಿಗೊಂದು ಪಾಠವನ್ನು ಒದಗಿಸಬಲ್ಲ, ಪ್ರಾತಿನಿಧಿಕವಾಗಿ ಮುಖ್ಯವಾದ ಕೆಲವು ದೃಷ್ಟಾಂತಗಳನ್ನಷ್ಟೇ ಆಯ್ದು ಬರೆದಿರುವ ‘ಶ್ರೀ ಚೈತನ್ಯ ಚರಿತಾಮೃತ’ ಮಹಾಕಾವ್ಯವು ಭಕ್ತಿಪಂಥದ ಒಂದು ಪ್ರಮುಖ ಕೃತಿಯಾಗಿದೆ.

ಭಾರತದಲ್ಲಿ ಐನೂರು ವರ್ಷಗಳ ಹಿಂದೆ ಪ್ರಾರಂಭವಾದ ಒಂದು ಮಹಾನ್ ಸಾಮಾಜಿಕ ಮತ್ತು ಧಾರ್ವಿುಕ ಆಂದೋಲನಕ್ಕೆ ಚೈತನ್ಯ ಮಹಾಪ್ರಭುಗಳು ನಾಂದಿ ಹಾಡಿದರು. ಅದು ಭಾರತದಲ್ಲಷ್ಟೇ ಅಲ್ಲದೆ ಜಗತ್ತಿನಾದ್ಯಂತ ಮುಂದಿನ ಧಾರ್ವಿುಕ ಮತ್ತು ದಾರ್ಶನಿಕ ಚಿಂತನಾಕ್ರಮದ ಮೇಲೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪ್ರಭಾವವನ್ನು ಬೀರಿತು. ಚೈತನ್ಯ ಮಹಾಪ್ರಭುಗಳು ಕೃಷ್ಣನಿಗೆ ಅನುರೂಪವಾಗಿದ್ದು, ಅಧಃಪತನಕ್ಕಿಳಿದ ಕಲಿಯುಗದ ಪತಿತಾತ್ಮರಿಗೆ ‘ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ/ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ, ಹರೇ’ ಎಂಬ ಮಹಾಮಂತ್ರವನ್ನು ಸಾಮೂಹಿಕವಾಗಿ ಉದಾರವಾಗಿ ಅನುಗ್ರಹಿಸಿದರು.

ಕನ್ನಡದಲ್ಲಿ ಚೈತನ್ಯ ಸಾಹಿತ್ಯ ಹೆಚ್ಚಾಗಿಲ್ಲ. ಕುವೆಂಪು ಅವರು ತಮ್ಮ ನಾಡಗೀತೆಯಲ್ಲಿ ಚೈತನ್ಯರನ್ನು ಮೊದಲು ಪ್ರಸ್ತಾಪಿಸಿದ್ದಾರೆ. ನಮ್ಮ ಕನ್ನಡ ಕವಿಗಳು ಚೈತನ್ಯ ಮಹಾಪ್ರಭುಗಳ ಮೇಲುನೆಲೆಯನ್ನು ಮಾತ್ರ ರ್ಸ³ಸಿದ್ದಾರೆ. ಇಸ್ಕಾನ್ ಸಂಸ್ಥೆ ತಂದಿರುವ ಪರಿಚಯಾತ್ಮಕ ಕಿರುಪುಸ್ತಿಕೆಯು ಸಾಮಾನ್ಯವಾದ ವಿವರಗಳನ್ನು ನೀಡುತ್ತದೆ. ಚೈತನ್ಯರ ಭಕ್ತಿ ಪ್ರವಾಹದ ಚಳವಳಿ ಬಡವರೆನ್ನದೆ, ಶ್ರೀಮಂತರೆನ್ನದೆ ಸಮಸ್ತರನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

‘ಚೈತನ್ಯ ಚರಿತಾಮೃತ’ ಮಹಾಕಾವ್ಯದಲ್ಲಿ ಅನೇಕ ಪ್ರಸಂಗಗಳು ಬರುವುದುಂಟಷ್ಟೆ. ಅಂಥ ಪ್ರಸಂಗಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಆಯ್ದುಕೊಳ್ಳ ಲಾಗಿದೆ. ಈ ಪ್ರಸಂಗಗಳಲ್ಲಿ ಮೂರ್ನಾಲ್ಕು ಮುಖ್ಯ ತತ್ತ್ವಗಳು ಹುದುಗಿವೆ.

1. ಭಕ್ತಿಗೆ ಅತಿ ಪಾಂಡಿತ್ಯ ರ್ವ್ಯಜ 2. ಕೃಷ್ಣನ ಆರಾಧನೆಗೆ ಸಗುಣೋಪಾಸನೆಯೇ ಅತ್ಯಾವಶ್ಯಕ. 3. ಜಾತಿ-ಮತಗಳಿಲ್ಲದೆ ಭಕ್ತನು ಭಗವಂತನನ್ನು ಆರಾಧಿಸಬಹುದು. 4. ಮಾನಸಿಕ ಕಲ್ಮಶಗಳನ್ನು ತೊರೆದರೆ ಭಗವಂತನ ಅನುಗ್ರಹ ಎಂದಿಗೂ ಸಾಧ್ಯ.

ಈ ಅಂಶಗಳನ್ನು ಇಲ್ಲಿ ಆಯ್ದುಕೊಂಡಿರುವ ಪ್ರಸಂಗಾವಧಾನಗಳಿಂದ ಹೆಚ್ಚು ಮನವರಿಕೆ ಆಗುತ್ತದೆ. ನಮ್ಮ ಈ ಕಾಲದಲ್ಲಿ ಸಂಕೀರ್ಣ ಭಾವದಲ್ಲಿಯೇ ಅನೇಕರಿದ್ದಾರೆ. ‘ತಾವು ಯಾವ ಕಡೆ ಹೋಗಬೇಕು? ನಾವು ಯಾವ ತತ್ತ್ವವನ್ನು ಸ್ವೀಕರಿಸಿ ಮುಂದುವರಿಯಬೇಕು? ಯಾವ ತತ್ತ್ವ ಮಾನ್ಯ?’ ಇಂಥ ಅನೇಕ ಪ್ರಶ್ನೆಗಳು ಯುವಕ-ಯುವತಿಯರಲ್ಲಿವೆ. ಇವೆಲ್ಲ ಸಂಗತಿಗಳಿಗೂ ಚೈತನ್ಯರ ಜೀವನಾದರ್ಶದಲ್ಲಿ ಉತ್ತರಗಳುಂಟು.

ಚೈತನ್ಯ ಮಹಾಪ್ರಭುಗಳು ಚಾರಿತ್ರಿಕ ಮಹಾಪುರುಷರು. ಇವರ ಅನೇಕ ಶಿಷ್ಯರು ಮಹಾಪ್ರಭುಗಳ ತತ್ತೊ್ವೕಪದೇಶಗಳನ್ನು ಉತ್ತರ ಭಾರತದಾದ್ಯಂತ ಪಸರಿಸಿದರು. ಇದು ಆಧುನಿಕ ಪೂರ್ವ ಕಾಲಘಟ್ಟದಲ್ಲಿ ಸಂಭವಿಸಿದ ಸಾಂಸ್ಕೃತಿಕ -ಧಾರ್ವಿುಕ ಭಕ್ತಿಪ್ರವಾಹದ ನೆಲೆಗಳೆನಿಸಿವೆ. ಶ್ರೀಲ ಪ್ರಭುಪಾದರು ಚೈತನ್ಯರ ಮಹಾತತ್ತ್ವಗಳನ್ನು ಆಧುನಿಕ ಕಾಲದಲ್ಲಿ ದೇಶ, ವಿದೇಶಗಳಲ್ಲಿ ಹರಡಿದ ಮಹಾಸಂತರು. ಇಂಗ್ಲಿಷ್ ಮುಂತಾದ ದೇಶ-ವಿದೇಶದ ನಾನಾ ಭಾಷೆಗಳಲ್ಲಿ ಚೈತನ್ಯರ ಸಾಹಿತ್ಯವು ಜನಮಾನಸಕ್ಕೆ ತಲುಪಿಸಲು ಶ್ರೀಲ ಪ್ರಭುಪಾದರ ಕೊಡುಗೆ ಅನನ್ಯ.

ಮಾ.4ರಂದು ಚೈತನ್ಯ ಸಂಭ್ರಮೋತ್ಸವ

ಉಡುಪಿ ಪಲಿಮಾರು ಮಠ ಮತ್ತು ಬೆಂಗಳೂರಿನ ಇಸ್ಕಾನ್ ಮಾರ್ಚ್ 4ರಂದು ಬೆಳಗ್ಗೆ 7.30ರಿಂದ ಮಧ್ಯಾಹ್ನ 1.30ರವರೆಗೆ ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲಿ ಚೈತನ್ಯ ಸಂಭ್ರಮೋತ್ಸವ ಆಯೋಜಿಸಿವೆ. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ‘ಶ್ರೀ ಚೈತನ್ಯ ಸಂಭ್ರಮ’ ಗ್ರಂಥ ಲೋಕಾರ್ಪಣೆ ಗೊಳಿಸಲಿದ್ದಾರೆ. ಪರ್ಯಾಯ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಇಸ್ಕಾನ್ ಅಧ್ಯಕ್ಷ ಮಧು ಪಂಡಿತ ದಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರೊ.ಮಲ್ಲೇಪುರಂ ವೆಂಕಟೇಶ ಪ್ರಸಂಗಾವಧಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Leave a Reply

Your email address will not be published. Required fields are marked *

Back To Top