Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ವ್ಯಾಸಸಾಹಿತ್ಯದ ಅಭಿಷಿಕ್ತ ದೊರೆ ವ್ಯಾಸತೀರ್ಥರು

Monday, 05.03.2018, 3:05 AM       No Comments

| ಡಾ. ಸುನೀಲ್​ ಕೆ.ಎಸ್​.

ವಿಜಯನಗರದ ಅರಸನ ಒಕ್ಕಲಿಗೆ ಸಂಭವಿಸಿದ ಕುಹಯೋಗದ ಸಂದರ್ಭದಲ್ಲಿ ಸ್ವಯಂಸಿಂಹಾಸನವನ್ನಲಂಕರಿಸಿದ ವ್ಯಾಸರಾಜರು ರಾಜ್ಯಾಡಳಿತವನ್ನು ಮಾಡಿ ಸಂನ್ಯಾಸಿಯಾದವ ಸಮಾಜಮುಖಿಯಾಗಿಯೂ ಇರಬೇಕೆಂಬ ‘ನಾನಾಜನಸ್ಯ ಶುಶ್ರೂಷಾ ಕರ್ತವ್ಯಾಕರವನ್ವಿತೇ’ ಎಂಬ ಮಾತನ್ನು ಪಾಲಿಸಿ ತಿಳಿಸಿಕೊಟ್ಟರು.

ಒಂದು ನಿರ್ದಿಷ್ಟವಾದ ಸಾಹಿತ್ಯಪ್ರಕಾರ ಪ್ರಚುರತೆ ಪಡೆಯಬೇಕಿದ್ದಲ್ಲಿ ಅದರ ಹರವು ಅಗಾಧತೆ ಹಾಗೂ ತೀಕ್ಷ್ಣತೆಗಳೆಲ್ಲವೂ ಕಾರಣವಾಗುವುವು. ಮುಖ್ಯವಾಗಿ ಆ ಬಗೆಯ ಸಾಹಿತ್ಯಪ್ರಕಾರವು ಜನಮಾನಸವನ್ನು ಸೇರಿ ಸಾಮಾಜಿಕವಾಗಿ ಕ್ರಾಂತಿಕಾರಕವಾಗಿ ಸನ್ಮಾರ್ಗದಲ್ಲಿ ಪ್ರೇರೇಪಿಸಬೇಕು. ಅದನ್ನೇ ಜ್ಞಾನಿಗಳು ಶಾಸ್ತ್ರವೆನ್ನುವರು. ಇಂತಹ ಶಾಸ್ತ್ರದ ಒಳಪಟ್ಟುಗಳನ್ನು ತಿಳಿಸಿಕೊಟ್ಟ ಮಹನೀಯರು ವ್ಯಾಸರ ಹೃದಯವೆಂದೇ ಪೂಜಿಸಲ್ಪಡುವ

ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು. ಅವರ ಮಾರ್ಗದರ್ಶನದಲ್ಲಿ ಚಿಮ್ಮಿದ ತೇಜೋಪುಂಜಗಳು ಎಂದಿಗೂ ಮರೆಯಲಾಗದ ಮಹಿಮಾನ್ವಿತರು ಹಲವು ನೂರುಗಳನ್ನು ದಾಟುವರು. ಅದರಲ್ಲಿ ಅಧಿಕೃತವಾಗಿ ವ್ಯಾಸಸಾಹಿತ್ಯಕ್ಕೆ ರಾಜನ ಮೊಹರನ್ನು ಪಡೆದ ಪ್ರಾತಃಸ್ಮರಣೀಯರು ‘ಶ್ರೀವ್ಯಾಸರಾಜರು’.

ದಾಸಸಾಹಿತ್ಯವೆಂಬ ಪ್ರಕಾರವನ್ನು ಸರಳೀಕರಿಸಿದ, 1447ರಲ್ಲಿ ಮೈಸೂರಿನ ಬಳಿಯಿರುವ ಬನ್ನೂರಿನಲ್ಲಿ ರಾಮಾಚಾರ್ಯ-ಲಕ್ಷ್ಮೀದೇವಿ ದಂಪತಿಯಲ್ಲಿ ಅವತರಿಸಿದ ‘ಯತಿರಾಜ’ನು ತರುವಾಯ ಚೆನ್ನಪಟ್ಟಣದ ಬಳಿಯಲ್ಲಿರುವ ಅಬ್ಬೂರಿನಲ್ಲಿ ಇಂದಿಗೂ ಬಳಿಬರುವ ಭಕ್ತರನ್ನು ಹರಸುವ ಪ್ರಾತಃಸ್ಮರಣೀಯ ಬ್ರಹ್ಮಣ್ಯತೀರ್ಥರಿಂದ ಸಂನ್ಯಾಸದೀಕ್ಷೆಯನ್ನು ಪಡೆದರು. ಸಾಮಾನ್ಯವಾಗಿ ಜ್ಞಾನಿಗಳನ್ನು ಎರಡುಬಗೆಯಲ್ಲಿ ಸ್ಮರಿಸುವುದು ವಾಡಿಕೆ. ಹಿನ್ನೆಲೆ-ಬಾಲ್ಯ-ಜೀವನದ ಪ್ರಮುಖ ಘಟ್ಟಗಳು-ಕಾಲಿಕ ಮಹಾಪುರುಷರು ಇತ್ಯಾದಿಗಳನ್ನು ಕೂಲಂಕಷವಾಗಿ ವಿಚಾರಮಾಡಿ ಆರಾಧಿಸುವುದು ಒಂದು ಬಗೆಯಾದರೆ, ಮತ್ತೊಂದು ಅವರ ಜೀವನಪದ್ಧತಿ- ವೈಚಾರಿಕ ನಿಲುವುಗಳು-ಪ್ರಾಚೀನರ ಪಾರಂಪರಿಕ ಚಿಂತನಾದೃಷ್ಟಿ ಮುಂತಾದವುಗಳು ಎನ್ನಬಹುದು. ಎರಡನೆಯ ಬಗೆಯೊಂದಿಗೆ ಶ್ರೀವ್ಯಾಸತೀರ್ಥರ ವಿಚಾರಗಳತ್ತ ಮನಮಾಡೋಣ.

ಪ್ರಹ್ಲಾದಾವತಾರಿಗಳು ವ್ಯಾಸರಾಜರು: ಶಂಕುಕರ್ಣನೆಂಬ ದೇವನೇ ಮುಂದೆ ಕಯಾದುಪುತ್ರನಾಗಿ ಬಳಿಕ ವ್ಯಾಸರಾಜರಾಗಿ ತರುವಾಯ ರಾಘವೇಂದ್ರಸ್ವಾಮಿಗಳಾಗಿ ಭೂಭಾರಕ್ಕೆ ಮೂಲವೆನಿಸಿದ ಆಸುರೀವಿದ್ಯೆಯನ್ನು ತೊಲಗಿಸುವರೆಂಬ ಉಲ್ಲೇಖವು ನೃಸಿಂಹಪುರಾಣದಲ್ಲಿ ಸ್ಪಷ್ಟವಾಗಿರುವ ಕಾರಣ ವ್ಯಾಸರಾಜರು ಮಹಿಮಾತಿಶಯರೆಂಬ ಮಾತು ಅತಿಶಯೋಕ್ತಿಯಲ್ಲ. ಅಲ್ಲದೆ, ಚತುಃಷಷ್ಠಿಕಲಾನಿಪುಣರೆನಿಸಿದ

ವಿಜಯೀಂದ್ರತೀರ್ಥರು ವ್ಯಾಸರಾಜರನ್ನು ಸ್ತುತಿಸುವ ಸಂದರ್ಭದಲ್ಲಿ ‘ಪ್ರಹ್ಲಾದಸ್ಯಾವತಾರೋಸೌ’ ಎಂದು ಗುರುಗಳ ಸ್ವರೂಪ ನಿರ್ದೇಶಿಸಿ ಅವರ ವಾಗ್ಝರಿ ಕುರಿತಂತೆ ‘ಪಾಠಯಂತಂ ಮಧ್ವನಯಂ ಮೇಘಗಂಭೀರಯಾ ಗಿರಾ| ಧ್ಯಾಯನ್ನವರ್ತಯೇದ್ಯಸ್ತು ಭಕ್ತಯ ಮೇಧಾಂ ಸ ವಿಂದತಿ’ ಎಂದು ಆಚಾರ್ಯಮಧ್ವರು ಉಲ್ಲೇಖಿಸಿರುವ ಶೃತ್ಯಾದಿಗಳನ್ನು ನಯಕ್ಕೆ ಚ್ಯುತಿಬಾರದಂತೆ ಅಮೋಘವಾಗಿ ವ್ಯಾಖ್ಯಾನಿಸುವುದರೊಂದಿಗೆ ಪಂಡಿತಮಂಡಲಿಗೆ ಮಹದುಪಕಾರವನ್ನು ಮಾಡಿದ್ದಾರೆಂದು ಸಂಸ್ಮರಿಸುವರು. ವಿಜಯದಾಸರೂ ತಮ್ಮ ಸುಳಾದಿಯಲ್ಲಿ ‘ಪ್ರಹ್ಲಾದನೇ ವ್ಯಾಸಮುನಿಯೇ ರಾಘವೇಂದ್ರ ಅಹುದೆಂದು ಭಜಿಸಿರೋ ವಿಜಯ ವಿಠ್ಠಲ ಒಲಿವಾ’ ಎಂದು ಪ್ರಾರ್ಥಿಸಿದ್ದಾರೆ.

ಭಗವಾನ್ ವ್ಯಾಸರ ನಿಲುವುಗಳೆಲ್ಲವೂ ಸತ್ಯಕ್ಕೆ ಪರವಾದಂಥವು ಹಾಗೂ ಅನುಭವಕ್ಕೆ ಒರೆಹಚ್ಚುವಂತಹವು. ಅದಕ್ಕೆ ವಿಪರೀತವಾಗಿ ಅನುಭವವನ್ನೇ ಸುಳ್ಳೆಂದು ಪ್ರತಿಪಾದಿಸಿದ ವೇದಾಂತದ ಸೊಗಡಲ್ಲಿ ಹೊರಳಿದ ಇಸಂಗಳು ಕಾಲಘಟ್ಟದಲ್ಲಿ ಬಂದುಹೋದವು. ನೆನಪಲ್ಲಿ ಉಳಿದ ಮತಗಳು ಕೆಲವಾದರೂ ತಾತ್ತಿ್ವಕವಾಗಿ ಎತ್ತರಕ್ಕೇರಿದ್ದು ತತ್ತ್ವವಾದವೊಂದೇ ಎನ್ನಬಹುದು. ಅದಕ್ಕೆ ಕಾರಣವಿಷ್ಟೇ ಕಾಣುವ ಜಗತ್ತು, ಅದರ ಹಿಂದಿನ ವ್ಯಾಪಾರಗಳು, ಅದರಲ್ಲಿ ಭಾಗವಹಿಸುವ ಜೀವಗಳು, ಅವುಗಳ ಬಯಕೆಗೆ ವಸ್ತುವಾದ ಪದಾರ್ಥಗಳು ಹೀಗೆ ಎಲ್ಲವೂ ಪರಸ್ಪರ ಒಂದಕ್ಕಿಂತ ಒಂದು ಭಿನ್ನಭಿನ್ನವಾಗಿರುವುದು ಬುದ್ಧಿಬಲಿತ ವ್ಯಕ್ತಿಗೆ ಅನುಭವವಾಗುವುದಷ್ಟೇ. ಅದನ್ನೇ ಪ್ರಶ್ನಿಸಿದ ಮನುಷ್ಯ ಉತ್ತರಕ್ಕೆ ಮನಮಾಡದೆ ತಾನೇ ದೇವರೆಂದು ಕರೆದುಕೊಂಡು ಮೆರೆದಿದ್ದು ಸಣ್ಣತನವಲ್ಲವೇ? ಆಚಾರ್ಯ ಮಧ್ವರು ಸಾದರಪಡಿಸಿದ ಪಂಚಭೇದ ಸಿದ್ಧಾಂತವನ್ನು ಇನ್ನಷ್ಟು ವಿಸ್ತರಿಸಿದ ಶ್ರೇಯಸ್ಸು ವ್ಯಾಸತೀರ್ಥರಿಗೆ ಸಲ್ಲುವುದು. ವ್ಯಾಸರಾಜರ ‘ಶ್ರೀಮನ್ಮಧ್ವಮತೇ… ಅಖಿಲಾಮ್ನಾಯೈಕವೇದ್ಯೋ ಹರಿಃ’ ಎಂಬ ಪ್ರಮೇಯನವಮಾಲಿಕಾಸ್ತೋತ್ರದಲ್ಲಿ ತತ್ತ್ವವಾದದ ಸಾರವೆನಿಸಿದ ಒಂಭತ್ತು ಪ್ರಮೇಯಗಳನ್ನು ಸಂಗ್ರಹಮಾಡಿ ಇದನ್ನು ಅನುಸರಿಸಿದರೆ ಜನುಮ ಸಾರ್ಥಕವೆಂದು ಉದ್ಧಾರದ ಹೆದ್ದಾರಿ ತೋರಿದ್ದಾರೆ. ವ್ಯಾಸತ್ರಯಗಳೆಂದೇ ಪ್ರಥಿತವಾದ ಚಂದ್ರಿಕಾ, ತರ್ಕತಾಂಡವ, ನ್ಯಾಯಾಮೃತವು ಕೇವಲ ದುರ್ವಾದಿಗಳ ಹುಟ್ಟಡಗಿಸುವ ಗ್ರಂಥಗಳಾಗಿರದೆ ತತ್ತ್ವವಾದದ ತೀಕ್ಷ್ಣತೆಯನ್ನೂ ಬಿಂಬಿಸುವ ವಿಚಾರಸರಣಿಗಳಾಗಿವೆ. ಇದನ್ನೇ ಗುರುಗುಣಸ್ತವನದಲ್ಲಿ ವಾದೀಂದ್ರತೀರ್ಥರು- ‘ನೇತ್ರಾಣೀವ ತ್ರಯೋಪಿ ತ್ರಿಭುವನಮಿಂಧತೇ ಯತ್ಪ್ರಬಂಧಾಃ’ ಎಂದು ಧನ್ಯತೆಯೊಂದಿಗೆ ಕೊಂಡಾಡಿದ್ದಾರೆ. ಇಂದಿಗೂ ಪಂಡಿತಮಂಡಲಿಗೆ ಈ ಗ್ರಂಥಗಳ ಆಂತರ್ಯವರಿವ ಹಸಿವು ತಣಿಯದಿರುವುದು ಇದರ ಹರವಿಗೆ ಸಾಕ್ಷಿಯಾಗಿದೆ. ತಾತ್ಪರ್ಯಚಂದ್ರಿಕಾ, ಭೇದೋಜ್ಜೀವನ ಮುಂತಾದ 21 ಕೃತಿರತ್ನಗಳನ್ನು ಅನುಗ್ರಹಿಸುವ ಮೂಲಕ ತತ್ತ್ವವಾದದ ವಿಚಾರಸರಣಿಯನ್ನು ಯೋಗ್ಯತಾನುಸಾರವರಿಯಲು ಅನುಗ್ರಹಿಸಿದ್ದಾರೆ.

ದಾಸಸಾಹಿತ್ಯದ ಬೆರಗಿಗೆ ಆಸರೆಯಾದವರು: ವ್ಯಾಸತೀರ್ಥರು ತಾವು ಸಂನ್ಯಾಸ ಪಡೆದಾಗಲೇ ಅವರ ಮೇಲೆ ಹರಿದಾಸಯತಿಯೆಂದೇ ಪ್ರಥಿತರಾದ ಶ್ರೀಪಾದರಾಜರ ಪ್ರಭಾವ ಅಗಾಧವಾಗಿ ಬೀರಿತ್ತು. ವ್ಯಾಸತ್ರಯಗಳಲ್ಲಿನ ಭಾಷೆ ಜಟಿಲವಾದುದು. ಕಾರಣ ಅಲ್ಲಿ ರ್ಚಚಿಸಲ್ಪಟ್ಟ ವಿಚಾರಗಳು ಕತೆಗಳಾಗಿರದೆ ವೇದಾಂತದ ಅಂತಃಸತ್ತ್ವವೆನಿಸಿದ ಪೂವೋತ್ತರಮೀಮಾಂಸಾ ವಿಚಾರಗಳು. ಮಾಯಾವಾದಿಗಳ ಹುಟ್ಟಡಗಿಸುವ ವಾದಸರಣಿಯನ್ನು ಶಾಸ್ತ್ರನಿಷ್ಠರಿಗೆ ರಸವತ್ತಾಗಿ ಉಣಬಡಿಸಿದ ವ್ಯಾಸತೀರ್ಥರು ತರುವಾಯ ಸಾಮಾನ್ಯರಿಗೂ ಅರ್ಥವಾಗುವಂತೆ ತಮ್ಮ ಭಾಷೆಯನ್ನು ಸರಳೀಕರಿಸಿ ‘ಸಿರಕೃಷ’ವೆಂಬ ಅಂಕಿತದಲ್ಲಿ ಅನೇಕ ಕೃತಿರಸಾಯನವನ್ನು ಕನ್ನಡದಲ್ಲಿ ಉಣಬಡಿಸಿದ್ದಾರೆ. ವ್ಯಾಸತೀರ್ಥರಿಗೆ ತಮ್ಮ ಬಳಿ ಶಿಷ್ಯವೃತ್ತಿಯನ್ನು ಬಯಸಿ ಬಂದ ಪುರಂದರರು ಹಾಗೂ ಕನಕದಾಸರ ಪ್ರಭಾವವಿತ್ತೆನ್ನಬಹುದು. ಗುರುವಾದವನು ಶಿಷ್ಯನಿಂದ ಸೋಲುಣಲು ಹವಣಿಸುತ್ತಾನೆಂಬ ಮಾತು ಇಲ್ಲಿ ಅಕ್ಷರಶಃ ಸಾಬೀತಾದಂತಿದೆ. ಇಲ್ಲಿ ಸೋಲೆಂದರೆ ಮನಸೋತರೆಂದಷ್ಟೇ ಗ್ರಹಿಸಬೇಕು. ಪುರಂದರರಿಗಿಂತಲೂ ಮೊದಲು ಅಂತೇವಾಸಿಯೆನಿಸಿದ್ದ ಕನಕದಾಸರು ವ್ಯಾಸತೀರ್ಥರ ವಿದ್ವತ್ತಿಗೆ ಕಣ್ಣಾಲಿಗಳನ್ನು ತುಂಬಿಕೊಂಡು ಎಲ್ಲೆಡೆ ಅವರ ಮಹಿಮೆಯನ್ನು ಸಾರುತ್ತಿದ್ದರೆಂದು ಅವರ ಅನೇಕ ಕೀರ್ತನೆಗಳಲ್ಲಿ ಕಾಣಬಹುದಾಗಿದೆ.

ಪುರಂದರದಾಸರು- ‘ವ್ಯಾಸರಾಯರ ಚರಣ ಕಮಲ ದರ್ಶನವೆನಗೇಸು ಜನ್ಮದ ಸುಕೃತ ಫಲದಿ ದೊರಕಿತೊ, ಎನ್ನ ಸಾಸಿರ ಕುಲಕೋಟಿ ಪಾವನವಾಯಿತು-ಶ್ರೀಶನ ಭಜಿಸುವುದಕಧಿಕಾರಿ ನಾನಾದೆ ದೋಷರಹಿತನಾದ ಪುರಂದರವಿಠಲನ ದಾಸರ ಕರುಣವು ಎನ್ನ ಮೇಲೆ ಇರಲಾಗಿ’ ಎಂದು ಕೊಂಡಾಡುವರು. ಸಂಗ್ರಹಾತ್ಮಕವಾಗಿ ಹೇಳುವುದಾದರೆ ಸಂಗೀತಕ್ಕೊಂದು ಆಯಾಮ ಕಲ್ಪಿಸಿದ ದಾಸಶ್ರೇಷ್ಠರೆಲ್ಲರೂ ವ್ಯಾಸತೀರ್ಥರ ಸನ್ನಿಧಾನವಿಶೇಷದಿಂದ ಬಂದವರಲ್ಲದೆ ನಿಜವಾದ ‘ಜಾತ್ಯತೀತ’ರಾಗಿ ಹರಿಪದಗಳನ್ನು ಹಾಡಿ ನಡೆದಾಡಿದವರೆನ್ನಬಹುದು. ಸೋಮನಾಥನೆಂಬ ಕವಿಸಿಂಹನು ಬರದಿರುವ ‘ವ್ಯಾಸಯೋಗಿಚರಿತ’ವೆಂಬ ಗ್ರಂಥ ವ್ಯಾಸತೀರ್ಥರ ವಾಕ್ಪಟುತ್ವಕ್ಕೆ, ಔದಾರ್ಯಕ್ಕೆ, ರಾಜ್ಯಾಡಳಿತದ ಬಗೆಗಿನ ಅಪಾರವಾದ ವಿದ್ವತ್ತೆಗೆ ಹಿಡಿದ ಕನ್ನಡಿಯಾಗಿದೆ. ತಿರುಪತಿಯ ಶ್ರೀನಿವಾಸನನ್ನು 12 ವರುಷಗಳ ತನಕ ನಿರಂತರ ಪೂಜಿಸಿ ತರುವಾಯ ವಿಜಯನಗರ ಸಿಂಹಾಸನಾಧೀಶನಾದ ಕೃಷ್ಣದೇವರಾಯನಿಗೆ ರಾಜಗುರುವೆನಿಸಿದವರು ವ್ಯಾಸತೀರ್ಥರು. ವಿಜಯನಗರದ ಅರಸನ ಒಕ್ಕಲಿಗೆ ಸಂಭವಿಸಿದ ಕುಹಯೋಗದ ಸಂದರ್ಭದಲ್ಲಿ ಸ್ವಯಂಸಿಂಹಾಸನವನ್ನಲಂಕರಿಸಿ ರಾಜ್ಯಾಡಳಿತವನ್ನು ಮಾಡಿ ಸಂನ್ಯಾಸಿಯಾದವ ಸಮಾಜಮುಖಿಯಾಗಿಯೂ ಇರಬೇಕೆಂಬ ‘ನಾನಾಜನಸ್ಯ ಶುಶ್ರೂಷಾ ಕರ್ತವ್ಯಾಕರವನ್ವಿತೇ’ ಎಂಬ ಮಾತನ್ನು ಪಾಲಿಸಿ ತಿಳಿಸಿಕೊಟ್ಟರು.

ಹರಿವಾಯುಗಳ ಅಂತರಂಗ ಭಕ್ತರಾದ ವ್ಯಾಸರಾಜರು 732 ಮುಖ್ಯಪ್ರಾಣದೇವರುಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಸ್ಥಾಪಿಸಿ ಹರಿಸವೋತ್ತಮತ್ವವನ್ನು ಹಾಗೂ ವಾಯುಜೀವೋತ್ತಮತ್ವವನ್ನು ಸಾದರಪಡಿಸಿದ್ದಾರೆ.

ಸಂಸ್ಮರಣೆ ತರುವ ಬದಲಾವಣೆ: ಚಂದ್ರಿಕಾಚಾರ್ಯರೆಂದೇ ಪ್ರಸಿದ್ಧರಾದ ವ್ಯಾಸರಾಜರು ಕ್ರಿ.ಶ.1539ರಲ್ಲಿ ಹಂಪೆಯ ತುಂಗಭದ್ರಾತೀರದಲ್ಲಿನ ಆನೆಗೊಂದಿಯೆಂಬ ಕ್ಷೇತ್ರದಲ್ಲಿ ವೃಂದಾವನಸ್ಥರಾಗಿ ವ್ಯಾಸತೀರ್ಥರ ಗುರುಗಳಾದ ಶ್ರೀಪಾದರಾಜರು ‘ಇದಿರದಾವನು ನಿನಗೀ ಧರೆಯೊಳು ಪದುಮನಾಭನ ದಾಸ ಪರಮೋಲ್ಲಾಸಾ’ ಎಂಬ ಪದ್ಯದಲ್ಲಿ ತುಂಬು ಅಭಿಮಾನದಿಂದ ಹೊಗಳುತ್ತ ನಿಮ್ಮ ಸ್ಮರಣೆಯಿಂದ ಸಿಗಲಾರದ ಸಂಪತ್ತಾವುದಿಹುದೆಂದು ಪ್ರಶ್ನಿಸಿ ಉತ್ತರಕ್ಕೆ ತಡಮಾಡದೆ ನಿಮ್ಮ ಕಡೆ ಬೊಟ್ಟುಮಾಡಿಹರು. ಇಂದು(ಸೋಮವಾರ) ನಡೆಯುತ್ತಿರುವ ವ್ಯಾಸರಾಜರ ಆರಾಧನಾಂಗವಾಗಿ ಅವರ ಸ್ಮರಣೆ, ಕಾರ್ಯಚಿಂತನೆಗಳನ್ನೆಲ್ಲ ಅವರ ಕುರಿತಂತೆ ಮಾಡಲಾದ

ಈ ಸ್ತೋತ್ರದೊಂದಿಗೆ ನೆನೆದು ಧನ್ಯರಾಗೋಣ.

ಅರ್ಥಿಕಲ್ಪಿತ ಕಲ್ಪೋಯಂ ಪ್ರತ್ಯರ್ಥಿ ಗಜಕೇಸರೀ |

ವ್ಯಾಸತೀರ್ಥ ಗುರುರ್ಭಯಾತ್ ಅಸ್ಮದಿಷ್ಥಾರ್ಥ ಸಿದ್ದಯೇ|

 (ಲೇಖಕರು ಸಂಸ್ಕೃತ ಪ್ರವಾಚಕರು ಹಾಗೂ ವಿಮರ್ಶಕರು)

Leave a Reply

Your email address will not be published. Required fields are marked *

Back To Top