More

    ತನಿಖಾ ಕಾರ್ಯಕ್ರಮಗಳಿಗೆ ಬೇಕು ಪ್ರೋತ್ಸಾಹ : ಸಜನ್ ಪೂವಯ್ಯ ಅವರ ಲಾ & ಆರ್ಡರ್ ಅಂಕಣ

    ತನಿಖಾ ಕಾರ್ಯಕ್ರಮಗಳಿಗೆ ಬೇಕು ಪ್ರೋತ್ಸಾಹ : ಸಜನ್ ಪೂವಯ್ಯ ಅವರ ಲಾ & ಆರ್ಡರ್ ಅಂಕಣ 2020ರಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾದ/ಪ್ರಸಾರವಾದ ಬಹುತೇಕ ಸುದ್ದಿಗಳು ಅದರ ಸಂಪೂರ್ಣ ವೃತ್ತಾಂತ ಹೊರತರುವ ಬದಲು ಯಾವುದೋ ಒಂದು ಅಭಿಪ್ರಾಯವನ್ನು ಹೇರುವ ರೀತಿಯಲ್ಲಿ ಇದ್ದವು. ಅವುಗಳು ಬಿತ್ತಿದ ಪರಿಕಲ್ಪನೆಯಿಂದಾಗಿ ವೀಕ್ಷಕರ ಮನಸ್ಸಿನ ಮೇಲೆ ಅವುಗಳ ಪ್ರಭಾವ ಹೆಚ್ಚಾಗುತ್ತಿದೆ. ಇಂಥ ಸೆನ್ಸೇಶನಲ್ ಅಭಿಪ್ರಾಯಗಳು ವೀಕ್ಷಕರನ್ನು ಸಮ್ಮೋಹಗೊಳಿಸುತ್ತವೆ ಹಾಗೂ ಮನರಂಜನೆ ನೀಡುತ್ತವೆ. ಅಲ್ಲದೆ ಆ ಅಭಿಪ್ರಾಯಗಳೇ ಸರಿ ಎಂದು ವೀಕ್ಷಕರೂ ಅಂಗೀಕರಿಸುತ್ತಾರೆ. ಹೀಗಾಗಿ, ಯಾವುದೇ ಒಂದು ನಿರ್ದಿಷ್ಟ ವಿಷಯದ ಮೇಲೆ ಜನರಲ್ಲಿ ಅಭಿಪ್ರಾಯ ರೂಪಿಸುವಲ್ಲಿ ಮಾಧ್ಯಮ ದೊಡ್ಡ ಪಾತ್ರ ವಹಿಸುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಅದನ್ನು ಯಾವ ರೀತಿಯಲ್ಲಿ ಬಳಸಬೇಕು ಎನ್ನುವ ವಿವೇಚನೆ ಇರಬೇಕು.

    ಇಂಥ ಸನ್ನಿವೇಶದಲ್ಲಿ, ಮಾಧ್ಯಮ ಪ್ರಕಟಿಸುವ ವಿಚಾರಕ್ಕಿಂತ ಪರ್ಯಾಯ ವಾಸ್ತವ ಸಂಗತಿ ಏನಿದೆ ಎಂಬುದನ್ನು ತಿಳಿಯಲು ಓದುಗರಿಗೆ, ವೀಕ್ಷಕರಿಗೆ ಸಾಧ್ಯವಿಲ್ಲ ಎನ್ನುವಂಥ ಸ್ಥಿತಿ ನಿರ್ವಣವಾಗಿದೆ. ಸುದ್ದಿ ಕುರಿತಂತೆ ವೀಕ್ಷಕರ ಅಭಿಪ್ರಾಯವನ್ನು ತಿಳಿಯಲು ಮಾಧ್ಯಮ ಸಂಸ್ಥೆಗಳು ಸಂರ್ಪಸದಿದ್ದರೆ ಮಾಧ್ಯಮದಲ್ಲಿ ಬಂದ ಅಭಿಪ್ರಾಯವನ್ನು ಕೌಂಟರ್ ಮಾಡಲು ಸಾಧ್ಯವೇ ಆಗುವುದಿಲ್ಲ. ಕೆಲವೊಮ್ಮೆ ಪ್ರಕಟಿತ ಸುದ್ದಿ ನಿಜವಾಗಿದ್ದರೂ ಸುದ್ದಿಗಳಿಗೆ ಒಳಪಟ್ಟ ಜನರ ವಿಚಾರ ಜನಪ್ರಿಯವಾಗಿ ಅವರ ದುಷ್ಕೃತ್ಯಗಳು ಸಾರ್ವಜನಿಕವಾಗಿವೆ ಎಂಬ ವಾಸ್ತವತೆಯನ್ನು ಅರಿತಿರುವುದಿಲ್ಲ. ಪರಿಶೀಲಿಸದೇ ಪ್ರಕಟಿಸಲಾದ ಈ ರೀತಿಯ ಸುದ್ದಿಯಿಂದ ಸಂತ್ರಸ್ತರಾದವರು ತಮ್ಮ ಪ್ರತಿಷ್ಠೆಯ ರಕ್ಷಣೆಗಾಗಿ ಕಾನೂನಿನ ಮೊರೆ ಹೋಗುತ್ತಾರೆ. ಆದರೆ ಮಾಧ್ಯಮದ ಮೇಲೆ ಯಾವುದೇ ರೀತಿಯ ನಿರ್ಬಂಧ ಹೇರಿದರೆ ಸಂವಿಧಾನ ಖಾತರಿಪಡಿಸಿರುವ ವಾಕ್ ಸ್ವಾತಂತ್ರ್ಯಕ್ಕೆ ಸವಾಲು ಹಾಕಿದಂತಾಗುತ್ತದೆ. ಯಾವುದಾರೊಂದು ಸುದ್ದಿಯನ್ನು ಪ್ರಕಟಿಸುವುದರ ಮೇಲೆ ನಿರ್ಬಂಧ ಹೇರಿದರೆ ಅಥವಾ ಪ್ರಕಟಣೆ-ಪೂರ್ವ ಇಂಜಂಕ್ಷನ್ ನೀಡಿದರೆ ಭವಿಷ್ಯದಲ್ಲಿ ಸುದ್ದಿ ಪ್ರಕಾಶಕರು ಅಂಥ ಸುದ್ದಿಗಳನ್ನು ಪ್ರಕಟಿಸುವುದಕ್ಕೆ ಕಡಿವಾಣ ಬೀಳಬಹುದು. ಸಾರ್ವಜನಿಕ ಹಿತದಲ್ಲಿ ಅಗತ್ಯವಿದ್ದರೂ ಕಾನೂನು ನಿರ್ಬಂಧದ ಭೀತಿಯಿಂದ ಅಂಥ ಸುದ್ದಿಯನ್ನು ಪ್ರಕಟಿಸದಿರುವ ಸಾಧ್ಯತೆಯೂ ಇದೆ.

    ನೆಟ್​ಫ್ಲಿಕ್ಸ್ ಶೋ: 2020 ಅಕ್ಟೋಬರ್ 5ರಂದು ‘ಬ್ಯಾಡ್​ಬಾಯ್ ಬಿಲಯನೇರ್ಸ್: ಇಂಡಿಯಾ’ ಎಂಬ ಸಾಕ್ಷ್ಯಚಿತ್ರ ವೆಬ್ ಸರಣಿಯನ್ನು ನೆಟ್​ಫ್ಲಿಕ್ಸ್ ಬಿಡುಗಡೆ ಮಾಡಿತ್ತು. ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ, ಸುಬ್ರತಾ ರಾಯ್ ಮತ್ತು ಸತ್ಯಂ ಮಾಜಿ ಸಿಇಒ ರಾಮಲಿಂಗ ರಾಜು ಅವರ ಜೀವನ ಹಾಗೂ ಉದ್ಯಮದಲ್ಲಿ ಮಾಡಿದ ಸಾಧನೆ ಮೇಲೆ ಈ ಶೋ ಗಮನ ಕೇಂದ್ರೀಕರಿಸಿತ್ತು. ಈ ಎಲ್ಲರೂ ಸಾಧಕರು ನಂತರದ ಹಂತಗಳಲ್ಲಿ ಆರ್ಥಿಕ ದುರ್ವ್ಯವಹಾರ ನಡೆಸಿದ ಆರೋಪಕ್ಕೆ ಒಳಗಾಗಿದ್ದರು. ಇಲ್ಲಿ ಹೆಸರಿಸಲಾದ ವ್ಯಕ್ತಿಗಳಿಂದಾಗಿ ಭಾರತದಲ್ಲಿ ನಡೆದ ಪ್ರಮುಖ ಆರ್ಥಿಕ ಹಗರಣಗಳನ್ನು ಬ್ಯಾಡ್​ಬಾಯ್ ಬಿಲಿಯನೇರ್​ನಲ್ಲಿ ವಿವರಿಸಲಾಗಿತ್ತು.

    ಕಾರ್ಯಕ್ರಮದ ಉದ್ದೇಶ: ಇದೊಂದು ತನಿಖಾ ಸಾಕ್ಷ್ಯಚಿತ್ರ ಸರಣಿ. ಭಾರತದ ಕುಖ್ಯಾತ ಉದ್ಯಮಿಗಳ ಅಧೋಗತಿಗೆ ಕಾರಣವಾದ ದುರಾಸೆ, ವಂಚನೆ ಮತ್ತು ಭ್ರಷ್ಟಾಚಾರವನ್ನು ಎಳೆಎಳೆಯಾಗಿ ಬಿಚ್ಚಿಡುವುದು ಕಾರ್ಯಕ್ರಮದ ಉದ್ದೇಶ ಎಂಬುದು ನೆಟ್​ಫ್ಲಿಕ್ಸ್ ವಿವರಣೆ. ಉಲ್ಲೇಖಿತ ಬಿಲಿಯಾಧಿಪತಿಗಳ ವಾಸ್ತವತೆಗಳು, ಮಾಹಿತಿ, ಫೂಟೇಜ್ ಮತ್ತು ಸುದ್ದಿ ತುಣುಕುಗಳನ್ನು ಆಧರಿಸಿ ಸರಣಿ ರೂಪಿಸಲಾಗಿದೆ ಎಂದೂ ಅದು ಹೇಳಿದೆ. ಈ ಎಲ್ಲವೂ ಸಾರ್ವಜನಿಕ ವಲಯದಲ್ಲಿ ಲಭ್ಯವಿರುವಂಥದ್ದೇ ಆಗಿದೆ ಎಂಬುದು ಅದರ ಸಮರ್ಥನೆ. ಈಗಾಗಲೇ ಜನರಿಗೆ ಗೊತ್ತಿರುವ ಹಾಗೂ ಚೆನ್ನಾಗಿ ದಾಖಲಾಗಿರುವ ಅಂಶಗಳೇ ವೆಬ್ ಸರಣಿಗೆ ಆಧಾರ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಆದರೆ, ನೆಟ್​ಫ್ಲಿಕ್ಸ್​ನ ಈ ಸರಣಿಯ ಪಯಣ ಕಾನೂನು ತೊಡಕುಗಳಿಂದ ಕೂಡಿದ್ದಾಗಿದೆ.

    ಉದ್ಯಮಿಗಳ ನಡುಕ: ತಮ್ಮ ಕುಕೃತ್ಯಗಳನ್ನು ಜನರಿಗೆ ನೆನಪಿಸಲು ಈ ಸರಣಿ ನೆರವಾಗಬಹುದು ಮತ್ತು ತಾವು ಇನ್ನೊಂದು ಸುತ್ತಿನ ಛೀಮಾರಿಗೆ ಒಳಗಾಗಬಹುದು ಎಂಬ ಭೀತಿಯಿಂದಾಗಿ ಸರಣಿ ಪ್ರಸಾರ ತಡೆಯಲು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ನಡೆಸಲಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ನೀರವ್ ಮೋದಿಯೊಂದಿಗೆ ಸಹ-ಆರೋಪಿಯಾದ ಮೆಹುಲ್ ಚೋಕ್ಸಿ, ಮೋದಿಗೆ ಸಂಬಂಧಿಸಿದ ಸಂಚಿಕೆಯನ್ನು ತನಗೆ ವೈಯಕ್ತಿಕವಾಗಿ ತೋರಿಸುವಂತೆ ಕೋರಿ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ತನ್ನ ಕುರಿತ ಮಾಹಿತಿ ಸರಿಯಿದೆಯೇ ಎಂಬುದನ್ನು ಪರಿಶೀಲಿಸಲು ಇದು ಅಗತ್ಯ ಎನ್ನುವುದು ಅವರ ವಾದ. ಆದರೆ ಈ ಬೇಡಿಕೆ ‘ಸಂಪೂರ್ಣವಾಗಿ ತಪು್ಪ ತಿಳಿವಳಿಕೆಯಿಂದ’ ಕೂಡಿದ್ದು ಎಂದು ನೆಟ್​ಫ್ಲಿಕ್ಸ್ ಹೇಳಿದೆ.

    ಇದನ್ನು ಪುರಸ್ಕರಿಸಿದ ಕೋರ್ಟ್, ಚೋಕ್ಸಿ ಅರ್ಜಿಯನ್ನು ವಜಾ ಮಾಡಿದೆ. ಬಿಹಾರದ ಅರಾರಿಯಾ ಜಿಲ್ಲಾ ಕೋರ್ಟ್​ನಲ್ಲಿ ಸುಬ್ರತಾ ರಾಯ್ ಅರ್ಜಿ ಸಲ್ಲಿಸಿದ್ದಾರೆ. ಸರಣಿಯ ಟ್ರೇಲರ್ ಹಾಗೂ ತನಗೆ ಸಂಬಂಧಿಸಿದ ಸಂಚಿಕೆಯ ಪ್ರಸಾರಕ್ಕೆ ತಡೆ ನೀಡಬೇಕೆಂಬುದು ಅವರ ಕೋರಿಕೆ. ಸಂಚಿಕೆಯ ಪ್ರಸಾರದಿಂದ ರಾಯ್ರ ವ್ಯಕ್ತಿತ್ವಕ್ಕೆ ಕುಂದುಂಟಾಗಬಹುದೆಂಬ ಆಧಾರದಲ್ಲಿ ನೆಟ್​ಫ್ಲಿಕ್ಸ್ ಅಧಿಕಾರಿಗಳು ತನ್ನ ಮುಂದೆ ಹಾಜರಾಗುವವರೆಗೆ ಪ್ರಸಾರ ಮಾಡದಂತೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಇದು ಮಧ್ಯಂತರ ತಡೆಯಾಗಿದ್ದು ಎರಡೂ ಕಡೆಗಳ ವಾದ ಆಲಿಸಿದ ನಂತರ ವಿವಾದ ಇತ್ಯರ್ಥ ಪಡಿಸುವುದಾಗಿ ಕೋರ್ಟ್ ಸ್ಪಷ್ಟಪಡಿಸಿದೆ.

    ರಾಯ್ ಅರ್ಜಿಯನ್ನು ವಜಾ ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್​ಗೆ ನೆಟ್​ಫ್ಲಿಕ್ಸ್ ಮನವಿ ಮಾಡಿದೆ. ಆದರೆ ಅದನ್ನು ವಜಾ ಮಾಡಿರುವ ಸವೋನ್ನತ ನ್ಯಾಯಾಲಯ, ಪಾಟ್ನಾ ಹೈಕೋರ್ಟ್​ಗೆ ಹೋಗುವಂತೆ ನೆಟ್​ಫ್ಲಿಕ್ಸ್​ಗೆ ಸೂಚಿಸಿದೆ. ಅಂತಿಮವಾಗಿ, ರಾಯ್ ಕುರಿತ ಸಂಚಿಕೆ ಬಿಡುಗಡೆಯಾಗುವುದಕ್ಕೂ ಒಂದು ದಿನದ ಮುಂಚೆ ಅರಾರಿಯಾ ಕೋರ್ಟ್ ತಾನು ಕೊಟ್ಟ ತಡೆಯನ್ನು ತೆರವು ಮಾಡಿ ಸಂಚಿಕೆ ಪ್ರಸಾರಕ್ಕೆ ಅನುವು ಮಾಡಿಕೊಟ್ಟಿದೆ.

    ಸತ್ಯಂನ ಮಾಜಿ ಸಿಇಒ ರಾಮಲಿಂಗ ರಾಜುಗೆ ಸಂಬಂಧಿಸಿದ ಸಂಚಿಕೆಯನ್ನು ಮಾತ್ರವೇ ಬಿಡುಗಡೆ ಮಾಡಲು ನೆಟ್​ಫ್ಲಿಕ್ಸ್​ಗೆ ಸಾಧ್ಯವಾಗಿಲ್ಲ. ಟ್ರೇಲರ್​ನಲ್ಲಿ ತನ್ನನ್ನು ವಂಚಕ ಎಂದು ಬಿಂಬಿಸಲಾಗಿದೆ ಹಾಗೂ ‘ಬ್ಯಾಡ್​ಬಾಯ್’ ಎಂದು ಹಣೆಪಟ್ಟಿ ಕಟ್ಟಲಾಗಿದೆ ಎಂದು ಹೈದರಾಬಾದ್ ಜಿಲ್ಲಾ ಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯಲ್ಲಿ ರಾಜು ಹೇಳಿದ್ದಾರೆ. ಈ ರೀತಿಯ ಚಿತ್ರಣದಿಂದ ವೀಕ್ಷಕರಲ್ಲಿ ತಪು್ಪಭಾವನೆ ಮೂಡುತ್ತದೆ ಎಂದಿದ್ದಾರೆ. ಅವರ ಪರವಾಗಿ ಕೊರ್ಟ್ ಮಧ್ಯಂತರ ಇಂಜಂಕ್ಷನ್ ನೀಡಿದೆ. ಇದನ್ನು ಪ್ರಶ್ನಿಸಿ ನೆಟ್​ಫ್ಲಿಕ್ಸ್ ಸಲ್ಲಿಸಿರುವ ಅರ್ಜಿಯನ್ನು ತೆಲಂಗಾಣ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.

    ಭಾರಿ ಪರಿಹಾರಧನಕ್ಕೆ ಅವಕಾಶ: ಈ ರೀತಿಯ ಪ್ರಕಟಣೆ-ಪೂರ್ವ ಇಂಜಂಕ್ಷನ್​ಗಳು ಅಥವಾ ನಿರ್ಬಂಧಗಳು ಭವಿಷ್ಯದಲ್ಲಿ ಇಂಥ ತನಿಖಾ ಸರಣಿಗಳನ್ನು ನಿರ್ವಿುಸುವ ನೆಟ್​ಫ್ಲಿಕ್ಸ್​ನಂಥ ನಿರ್ಮಾಣ ಸಂಸ್ಥೆಗಳಿಗೆ ಕಳವಳ ಉಂಟು ಮಾಡಬಹುದು. ಪ್ರಕಟಿತ/ಪ್ರಸಾರಿತ ಕಾರ್ಯಕ್ರಮ/ವರದಿಯಲ್ಲಿ ಮಾನಹಾನಿಕರ ಅಂಶವಿದೆ ಎಂಬುದು ಸ್ಪಷ್ಟವಾದಲ್ಲಿ ಸಂತ್ರಸ್ತರು ದೊಡ್ಡ ಪ್ರಮಾಣದ ಆರ್ಥಿಕ ಪರಿಹಾರ ಕೋರಲು ಕಾನೂನಿನಲ್ಲಿ ಅವಕಾಶವಿದೆ. ನಮ್ಮ ಸಾಂವಿಧಾನಿಕ ಚೌಕಟ್ಟಿಗೆ ಸಂಪೂರ್ಣ ವಿರೋಧವಾಗುವುದರಿಂದ ಪ್ರಕಟಣೆ-ಪೂರ್ವ ಸೆನ್ಸಾರ್​ಶಿಪ್​ಗೆ ಅವಕಾಶವಿಲ್ಲ. ರಾಷ್ಟ್ರೀಯ ಭದ್ರತೆಯ ರಕ್ಷಣೆ, ವ್ಯಕ್ತಿಗಳ ಖಾಸಗಿತನದಲ್ಲಿ ಕಾನೂನುಬಾಹಿರ ಹಸ್ತಕ್ಷೇಪ, ವಾಣಿಜ್ಯ ರಹಸ್ಯಗಳ ಪ್ರಕಟಣೆ ವಿರುದ್ಧ ನಿರ್ಬಂಧ ಮುಂತಾದ ಕೆಲವು ವಿಚಾರಗಳಲ್ಲಿ ಮಾತ್ರ ಇದಕ್ಕೆ ವಿನಾಯಿತಿ ಇದೆ. ಹೀಗಾಗಿ, ‘ಬ್ಯಾಡ್​ಬಾಯ್ ಬಿಲಿಯನೇರ್ಸ್’ ಪ್ರಕರಣದಲ್ಲಿ ಪ್ರಕಟಣೆ-ಪೂರ್ವ ಸೆನ್ಸಾರ್​ಶಿಪ್ ಅನ್ವಯವಾಗುವುದಿಲ್ಲ.

    ಇಂಥ ತನಿಖಾ ಕಾರ್ಯಕ್ರಮಗಳನ್ನು ನಿರ್ವಿುಸಲು ಪ್ರೋತ್ಸಾಹ ನೀಡಬೇಕೇ ಹೊರತು ನಿರುತ್ಸಾಹಗೊಳಿಸಬಾರದು. ಅಂಧವಾಗಿ ಸೆನ್ಸೇಶನಲ್ ಸುದ್ದಿಗಳನ್ನು ಅಂಗೀಕರಿಸದೆ ಪ್ರಸಾರವಾಗುವ ಕಾರ್ಯಕ್ರಮಗಳ ಬಗ್ಗೆ ತಮ್ಮದೇ ಆದ ವಸ್ತುನಿಷ್ಠ ಅಭಿಪ್ರಾಯ ರೂಪಿಸಿಕೊಳ್ಳುವ ಸಾಮರ್ಥ್ಯವಿರುವ ಜವಾಬ್ದಾರಿಯುತ ವೀಕ್ಷಕಕರಿಗೆ ಇಂಥ ಕಾರ್ಯಕ್ರಮ ನೋಡುವ ಹಕ್ಕಿದೆ. ಏಕಪಕ್ಷೀಯವಾಗಿ ಅಭಿಪ್ರಾಯ ರೂಪಿಸುವುದನ್ನು ನಿಯಂತ್ರಿಸುವುದು ಅಗತ್ಯ. ನಿಜವಾದ ಜ್ಞಾನಪ್ರಸಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕು. ಏಕಮುಖ ವರದಿಗಿಂತ ಸುದ್ದಿಯ ಎಲ್ಲ ಆಯಾಮಗಳನ್ನು ಜನತೆಯ ಮುಂದೆ ಬಿಚ್ಚಿಡುವುದು ಮಾಧ್ಯಮದ ಕರ್ತವ್ಯ. ಇಂಥ ಕಾರ್ಯಕ್ರಮಗಳಿಂದ ಮಾಧ್ಯಮದ ಘನತೆಯೂ ಹೆಚ್ಚುತ್ತದೆ. ಅದರ ಪಾತ್ರದ-ಮಹತ್ವದ ಕುರಿತು ಇರುವ ಜನರಲ್ಲಿರುವ ಗೌರವ ಭಾವನೆಯೂ ಸಾರ್ಥಕವಾಗುತ್ತದೆ.

    (ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್​) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts