More

    ವಿವೇಚನೆಯಿಂದ ಕಾಯ್ದೆ ರೂಪಿಸಿ: ಲಾ & ಆರ್ಡರ್​

    ವಿವೇಚನೆಯಿಂದ ಕಾಯ್ದೆ ರೂಪಿಸಿ: ಲಾ & ಆರ್ಡರ್​ಕೇರಳ ಸರ್ಕಾರವು ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಲು ಮುಂದಾದ ಪ್ರಕರಣ ಈಚೆಗೆ ಭಾರಿ ಸದ್ದು, ವಿವಾದ ಉಂಟುಮಾಡಿದ್ದು ಗೊತ್ತೇ ಇದೆ. ಕೇರಳ ರಾಜ್ಯಪಾಲರು ಕೇರಳ ಪೊಲೀಸ್ (ತಿದ್ದುಪಡಿ) ಸುಗ್ರೀವಾಜ್ಞೆ, 2020ಕ್ಕೆ ಅನುಮೋದನೆಯನ್ನೂ ನೀಡಿದ್ದರು. ಈ ಕಾಯ್ದೆ ವಾಕ್ ಸ್ವಾತಂತ್ರ್ಯದ ಮೇಲಿನ ಮಾರಕ ಪ್ರಹಾರ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದ್ದರಿಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸುಗ್ರೀವಾಜ್ಞೆ ಜಾರಿಗೊಳಿಸುವುದಿಲ್ಲ ಎಂದು ಹಿಂದೆಸರಿದರು. ಸದ್ಯ ಈ ಪ್ರಕರಣ ಮುಗಿದಿದ್ದರೂ ಚರ್ಚೆ, ಪ್ರಶ್ನೆಗಂತೂ ಅವಕಾಶವಿದೆ.

    ಸುಗ್ರೀವಾಜ್ಞೆಯಲ್ಲಿ, 2011ರ ಕೇರಳ ಪೊಲೀಸ್ ಕಾಯ್ದೆಗೆ 118ಎ ಎಂಬ ಹೊಸ ಪರಿಚ್ಛೇದ ಸೇರಿಸಲಾಗಿತ್ತು. ಅದು ಹೀಗಿತ್ತು- ‘ಯಾವುದಾದರೂ ವ್ಯಕ್ತಿಯ ಅಥವಾ ವ್ಯಕ್ತಿಗಳ ಸಮೂಹವನ್ನು ಬೆದರಿಸುವುದಕ್ಕಾಗಿ, ಶೋಷಿಸುವುದಕ್ಕಾಗಿ, ನಿಂದಿಸುವುದಕ್ಕಾಗಿ ಅಥವಾ ಅವಮಾನಿಸುವುದಕ್ಕಾಗಿ ಯಾವುದೇ ವಿಷಯ ಅಥವಾ ವಿಚಾರವನ್ನು ಅದು ತಪ್ಪು ಎಂದೂ ಮತ್ತು ಅದು ಆ ವ್ಯಕ್ತಿಯ ಅಥವಾ ವ್ಯಕ್ತಿಗಳ ಸಮೂಹದ ಅಥವಾ ಆ ವ್ಯಕ್ತಿಗೆ ಸಂಬಂಧಪಟ್ಟ ಮತ್ತಾವುದಾದರೂ ವ್ಯಕ್ತಿಯ ಮನಸ್ಸಿಗೆ, ಪ್ರತಿಷ್ಠೆಗೆ ಅಥವಾ ಸ್ವತ್ತಿಗೆ ಹಾನಿಯನ್ನುಂಟುಮಾಡುತ್ತದೆ ಎಂದು ಅರಿತೂ ಯಾವುದೇ ರೀತಿಯ ಸಂಪರ್ಕಸಾಧನಗಳ ಮೂಲಕ ಹೇಳುವ, ವ್ಯಕ್ತಪಡಿಸುವ, ಪ್ರಕಾಶಿಸುವ ಅಥವಾ ಪ್ರಸಾರಮಾಡುವ ವ್ಯಕ್ತಿಯು, ಅಪರಾಧ ಸಾಬೀತಾದಲ್ಲಿ, ಮೂರು ವರ್ಷಗಳವರೆಗಿನ ಬಂಧನ ಅಥವಾ 10 ಸಾವಿರ ರೂಪಾಯಿಗಳವರೆಗಿನ ದಂಡ ಅಥವಾ ಎರಡೂ ಶಿಕ್ಷೆಗಳಿಂದ ಶಿಕ್ಷಿಸಲ್ಪಡತಕ್ಕದ್ದು’

    ಯಾವುದೇ ದೂರು ಇಲ್ಲದಿದ್ದರೂ ತಾವಾಗಿಯೇ ಕ್ರಮ ತೆಗೆದುಕೊಳ್ಳುವ ಅಧಿಕಾರವೂ ಸೇರಿದಂತೆ ಯಥೇಚ್ಛವಾದ ಅಧಿಕಾರಗಳನ್ನು ಇದು ಪೋಲೀಸರಿಗೆ ನೀಡುವಂತಿತ್ತು. ಹೀಗಾಗಿ, ಯಾವುದೇ ವಿವಾದಾಸ್ಪದ ವಿಚಾರದ ಬಗ್ಗೆ ಮತ್ಯಾವುದೇ ವಿಚಾರದ ಬಗ್ಗೆಯಾಗಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಯಸುವ ಕೇರಳದ ನಾಗರಿಕರನ್ನು ಬೆದರಿಸುವುದಕ್ಕಾಗಿಯೇ ಈ ಪರಿಚ್ಛೇದವನ್ನು ರೂಪಿಸಲಾಗಿತ್ತು ಎಂಬುದು ಸುಸ್ಪಷ್ಟ. ಈ ತೆರನಾದ ಕಾನೂನುಗಳು ಸರ್ಕಾರಗಳು ಅಧಿಕಾರ ದುರುಪಯೋಗ ಮಾಡುವುದಕ್ಕೆ ಬಹುವಿಧದ ಸಾಧ್ಯತೆಗಳನ್ನು ಸೃಷ್ಟಿಸುತ್ತವೆ ಹಾಗೂ ಸುದ್ದಿ ಮತ್ತು ಮಾಧ್ಯಮ ಸಂಸ್ಥೆಗಳನ್ನು ತೊಂದರೆಗೆ ಗುರಿಯಾಗಿಸುವುದಕ್ಕೆ ಆಸ್ಪದ ನೀಡುತ್ತವೆ.

    ಈ ರೀತಿಯ ಕಾನೂನಿನ ಸಮಸ್ಯೆಯೇನೆಂದರೆ ಕಾನೂನು ಕ್ರಮ ಎದುರಿಸಬೇಕಾಗಬಹುದೆಂಬ ಭಯದಿಂದ ತಮ್ಮ ಅಭಿಪ್ರಾಯಗಳು ವಾಕ್ ಸ್ವಾತಂತ್ರ್ಯದ ಹಕ್ಕಿನ ಎಲ್ಲೆಯೊಳಗೆ ಇದ್ದರು ಸಹ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅಥವಾ ಪ್ರಕಟಿಸಲು ಜನರು ಇಷ್ಟಪಡುವುದಿಲ್ಲ. ಇದರಿಂದ ವಾಕ್ ಸ್ವಾತಂತ್ರ್ಯದ ಹಕ್ಕಿನ ಮೇಲೆ ಮಾರಕ ಹೊಡೆತ ಬೀಳುವುದು. ಇದು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವ ಮುಕ್ತ ಪ್ರಜಾಪ್ರಭುತ್ವದ ಆಶಯವನ್ನು ಹಾಳುಗೆಡವುತ್ತದೆ ಎಂಬುದನ್ನು ನಾವು ಗಮನಿಸಬೇಕು.

    ಕೇರಳದ ಕಾಯ್ದೆಯ ಹೊಸ ಪರಿಚ್ಛೇದವು ಹಲವು ರೀತಿಗಳಲ್ಲಿ ಶ್ರೇಯಾ ಸಿಂಘಾಲ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸವೋಚ್ಚ ನ್ಯಾಯಾಲಯವು ಅನೂರ್ಜಿತಗೊಳಿಸಿದ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಪರಿಚ್ಛೇದ 66ಎ ನಂತೆಯೇ ಇತ್ತು. ಪರಿಚ್ಛೇದ 66ಎ ಪ್ರಕಾರ, ಕಂಪ್ಯೂಟರ್ ಅಥವಾ ಇತರ ಸಂಪರ್ಕ ಸಾಧನಗಳ ಮೂಲಕ ಆಕ್ರಮಣಕಾರಿ ಸಂದೇಶಗಳನ್ನು ಕಳುಹಿಸುವುದು ಅಪರಾಧವಾಗುತ್ತದೆ. ವಿಶೇಷ ವಿಷಯವೆಂದರೆ, ಅದೇ ಪ್ರಕರಣದಲ್ಲಿ ನ್ಯಾಯಾಲಯವು ಕೇರಳ ಪೊಲೀಸ್ ಕಾಯ್ದೆಯ ಪರಿಚ್ಛೇದ 118(ಡಿ) ಯನ್ನು ಅಸಾಂವಿಧಾನಿಕವೆಂದು ಹೇಳಿತ್ತು. ಆ ಪರಿಚ್ಛೇದ ಕೂಡ ಈಗಿನ 118 ಎ ಪರಿಚ್ಛೇದದ ಭಾಷೆಯನ್ನೇ ಬಳಸಿತ್ತು. ಪರಿಚ್ಛೇದ 118(ಡಿ) ಹೀಗಿತ್ತು: ‘ಯಾವುದೇ ವ್ಯಕ್ತಿಗೆ ಅಸಭ್ಯ ರೀತಿಯಲ್ಲಿ ಹೇಳಿಕೆಗಳ ಅಥವಾ ಮಾತುಗಳ ಅಥವಾ ದೂರವಾಣಿ ಕರೆಗಳ ಅಥವಾ ಇನ್ಯಾವುದೇ ಕರೆಗಳ ಮೂಲಕ ಅಥವಾ ಸಂದೇಶಗಳ ಮೂಲಕ ಅಥವಾ ಯಾವುದೇ ತೆರನಾದ ಇಮೇಲ್​ಗಳ ಮೂಲಕ ಕಿರುಕುಳ ಉಂಟುಮಾಡುವ ವ್ಯಕ್ತಿಗೆ, ತಪ್ಪಿತಸ್ಥನೆಂದು ಸಾಬೀತಾದಲ್ಲಿ, 3 ವರ್ಷಗಳ ಅವಧಿಯವರೆಗಿನ ಬಂಧನ ಅಥವಾ 10 ಸಾವಿರ ರೂಪಾಯಿಗಳವರೆಗಿನ ದಂಡ ಅಥವಾ ಇವೆರಡನ್ನೂ ವಿಧಿಸಬಹುದು’.

    ಶ್ರೇಯಾ ಸಿಂಘಾಲ್ ಪ್ರಕರಣದಲ್ಲಿ ಸವೋಚ್ಚ ನ್ಯಾಯಾಲಯವು ಸೆಕ್ಷನ್ 66ಎ ಮತ್ತು 118(ಬಿ) ಎರಡೂ ನಮ್ಮ ಸಂವಿಧಾನದಲ್ಲಿ ರಕ್ಷಣೆ ಪಡೆದಿರುವ ವಾಕ್ ಸ್ವಾತಂತ್ರ್ಯದ ಮೇಲೆ ಸಕಾರಣವಾದ ನಿರ್ಬಂಧ ವಿಧಿಸುವಂತಹವಾಗಿಲ್ಲ ಎಂದು ತೀರ್ಪು ನೀಡಿತ್ತು. ಕೇರಳ ಪೊಲೀಸ್ ಕಾಯ್ದೆಯ ಹೊಸ 118ಎ ಸೆಕ್ಷನ್ ಅಸಾಂವಿಧಾನಿಕವಾದ ಸೆಕ್ಷನ್ 118(ಡಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎಗಳನ್ನೇ ಪರೋಕ್ಷವಾಗಿ ಜಾರಿಗೆ ತರುವ ಪ್ರಯತ್ನವಾಗಿತ್ತು ಎಂಬುದು ಸುಗೋಚರ. ಆದ್ದರಿಂದ ಈ ಸುಗ್ರೀವಾಜ್ಞೆಯು ಶ್ರೇಯಾ ಸಿಂಘಾಲ್ ಪ್ರಕರಣದಲ್ಲಿ ಸವೋಚ್ಚ ನ್ಯಾಯಾಲಯ ನೀಡಿದ್ದ ನಿರ್ಣಯವನ್ನು ಅಲ್ಲಗಳೆಯುವ ಪ್ರಯತ್ನವಾಗಿತ್ತೆಂದು ವ್ಯಾಖ್ಯಾನಿಸಬಹುದು.

    ಮಹಿಳೆಯರು, ತೃತೀಯ ಲಿಂಗಿಗಳು ಮತ್ತು ಮಕ್ಕಳ ವಿರುದ್ಧದ ಸೈಬರ್ ಅಪರಾಧ ತಡೆಗಟ್ಟುವುದು ಹೊಸ ಕಾನೂನಿನ ಉದ್ದೇಶವಾಗಿತ್ತು ಎಂದು ಕೇರಳ ಸರ್ಕಾರ ಹೇಳಿಕೊಂಡಿತ್ತು. ಆದರೆ ಈಗ ಇರುವ ಕಾನೂನುಗಳಿಂದಲೇ ಈ ಉದ್ದೇಶಸಾಧನೆ ಸಾಧ್ಯ ಎಂಬ ಪ್ರತಿವಾದವೂ ಕೇಳಿಬಂತು. ಪ್ರಸ್ತುತ, ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ದ ಸೆಕ್ಷನ್ 67ರ ಪ್ರಕಾರ, ಮಹಿಳೆಯರು, ತೃತೀಯಲಿಂಗಿಗಳು ಮತ್ತು ಮಕ್ಕಳಿಗೆ ಸಂಬಂಧಿಸಿದಂತೆ ಅಸಂಬದ್ಧ, ಅಶ್ಲೀಲ ಅಥವಾ ಅಸಭ್ಯ ವಿಷಯಗಳನ್ನು ಅಥವಾ ಚಿತ್ರಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ, ಇಂಟರ್ನೆಟ್​ನಲ್ಲಿ ಅಪ್​ಲೋಡ್ ಮಾಡುವುದು ಶಿಕ್ಷಾರ್ಹ ಅಪರಾಧ. ಭಾರತೀಯ ದಂಡಸಂಹಿತೆ, 1960 ಕೂಡ ಹಲವಾರು ರೀತಿಯಲ್ಲಿ ರಕ್ಷಣೆಯನ್ನು ಒದಗಿಸುತ್ತದೆ – ಸೆಕ್ಷನ್ 506 ಅಪರಾಧಿಕ ಭಯಪಡಿಸುವಿಕೆ(ಬೆದರಿಕೆ)ಯನ್ನು ಶಿಕ್ಷೆಗೊಳಪಡಿಸುತ್ತದೆ; ಸೆಕ್ಷನ್ 509 ಮಹಿಳೆಯರ ಗೌರವಕ್ಕೆ ಕುಂದುತರುವ ಮಾತು, ವರ್ತನೆ ಮತ್ತು ಕ್ರಿಯೆಗಳನ್ನು ನಿರ್ಬಂಧಿಸುತ್ತದೆ; ಮತ್ತು ಸೆಕ್ಷನ್ 600 ಮಾನನಷ್ಟಕ್ಕೆ ಶಿಕ್ಷೆ ವಿಧಿಸುತ್ತದೆ. ಇನ್ನೂ ಒಂದು ವಿಶೇಷವೆಂದರೆ, ಕೇರಳ ಪೊಲೀಸ್ ಕಾಯ್ದೆಯಲ್ಲೇ ಸೆಕ್ಷನ್ 119(ಬಿ) ಮಹಿಳೆಯರ ಏಕಾಂತತೆಯನ್ನು ಉಲ್ಲಂಘಿಸುವಂತಹ ಚಿತ್ರಗಳನ್ನು ತೆಗೆಯುವುದನ್ನು, ವಿಡಿಯೋ ಚಿತ್ರೀಕರಣ ಮಾಡುವುದನ್ನು, ಅವುಗಳ ಪ್ರಸಾರ ಮಾಡುವುದನ್ನೂ ನಿರ್ಬಂಧಿಸುತ್ತದೆ. ಈ ಕಾನೂನುಗಳು ಆಗಲೇ ಇರುವಾಗ, ಹೊಸದಾಗಿ ಸುಗ್ರೀವಾಜ್ಞೆ ಹೊರಡಿಸುವ ಅವಶ್ಯಕತೆ ಇರಲಿಲ್ಲ. ಒಟ್ಟಿನಲ್ಲಿ, ಸದ್ಯಕ್ಕೆ ಕೇರಳದಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಎದುರಾಗಿದ್ದ ಸವಾಲು ಕರಗಿದೆಯಾದರೂ, ಸರ್ಕಾರಗಳು ಹೊಸ ಕಾಯ್ದೆ ಅಥವಾ ಸುಗ್ರೀವಾಜ್ಞೆಗಳನ್ನು ಹೊರಡಿಸುವಾಗ ಬಹಳ ವಿವೇಚನೆಯಿಂದ ಹೆಜ್ಜೆ ಇರಿಸಬೇಕಾಗುತ್ತದೆ ಎಂಬುದನ್ನಂತೂ ಈ ಪ್ರಕರಣ ಶ್ರುತಪಡಿಸಿದೆ.

    (ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts