ಜಕಾರ್ತ: ಒಲಿಂಪಿಕ್ಸ್ ಪದಕ ವಿಜೇತ ಭಾರತದ ತಾರೆಯರಾದ ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್ ಮಂಗಳವಾರ ಆರಂಭವಾಗಲಿರುವ ಇಂಡೋನೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ 2ನೇ ಸುತ್ತಿನಲ್ಲೇ ಮುಖಾಮುಖಿಯಾಗುವ ನಿರೀಕ್ಷೆ ಇದೆ. ವರ್ಷದ ಮೊದಲ ಸವಾಲಾದ ಮಲೇಷ್ಯಾ ಮಾಸ್ಟರ್ಸ್ನಲ್ಲಿ ಕ್ವಾರ್ಟರ್ಫೈನಲ್ನಲ್ಲೇ ಎಡವಿದ್ದ ಸಿಂಧು ಮತ್ತು ಸೈನಾ ಈ ಟೂರ್ನಿಯಲ್ಲಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದರೂ, ಇಬ್ಬರಲ್ಲಿ ಒಬ್ಬರಷ್ಟೇ ಮೂರನೇ ಸುತ್ತಿಗೇರಲಿದ್ದಾರೆ. 5ನೇ ಶ್ರೇಯಾಂಕಿತೆ ಸಿಂಧು ಮೊದಲ ಸುತ್ತಿನಲ್ಲಿ ಜಪಾನ್ನ ಅಯಾ ಒಹೊರಿ ವಿರುದ್ಧ ಸೆಣಸಲಿದ್ದಾರೆ. ಒಹೊರಿ ವಿರುದ್ಧ ಸಿಂಧು ಕಳೆದ ವಾರದ ಟೂರ್ನಿಯ 2ನೇ ಸುತ್ತಿನಲ್ಲಿ ಜಯ ದಾಖಲಿಸಿದ್ದರು. ಸೈನಾ ಮೊದಲ ಸುತ್ತಿನಲ್ಲಿ ಜಪಾನ್ನ ಸಯಕಾ ಟಕಹಶಿ ವಿರುದ್ಧ ಕಾದಾಡಲಿದ್ದಾರೆ. ಸಿಂಧು ಪಿಬಿಎಲ್ನಲ್ಲಿ ಸೈನಾ ವಿರುದ್ಧ ಕೆಲ ಪಂದ್ಯ ಗೆದ್ದ ಸಾಧನೆ ಮಾಡಿದ್ದರೂ, ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ನಲ್ಲಿ 1 ಜಯ, 3 ಸೋಲಿನ ಹಿನ್ನಡೆ ಹೊಂದಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಿಡಂಬಿ ಶ್ರೀಕಾಂತ್ ಇಂಡೋನೇಷ್ಯಾದ ಶೆಸರ್ ಹಿರೆನ್ ರುಸ್ತಾವಿಟೊ ವಿರುದ್ಧ ಆಡಲಿದ್ದಾರೆ. ಕಳೆದ ಮಲೇಷ್ಯಾ ಮಾಸ್ಟರ್ಸ್ನಲ್ಲಿ ಶ್ರೀಕಾಂತ್ ಮೊದಲ ಸುತ್ತಿನಲ್ಲೇ ಮುಗ್ಗರಿಸಿದ್ದರು. ಸಾಯಿ ಪ್ರಣೀತ್, ಪಿ. ಕಶ್ಯಪ್, ಸಮೀರ್ ವರ್ಮ ಮತ್ತು ಎಚ್ಎಸ್ ಪ್ರಣಯ್ ಕೂಡ ಕಣದಲ್ಲಿದ್ದಾರೆ. -ಪಿಟಿಐ
ಅಪಘಾತದಲ್ಲಿ ಕೆಂಟೊಗೆ ಗಾಯ
ಕೌಲಾಲಂಪುರ: ವಿಶ್ವ ನಂ. 1 ಬ್ಯಾಡ್ಮಿಂಟನ್ ಆಟಗಾರ ಜಪಾನ್ನ ಕೆಂಟೊ ಮೊಮೊಟಾ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯ ಪ್ರಶಸ್ತಿ ಗೆಲುವಿನ ಬೆನ್ನಲ್ಲೇ ಸೋಮವಾರ ಮುಂಜಾನೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಅವರಿದ್ದ ವ್ಯಾನ್ ವಿಮಾನನಿಲ್ದಾಣದ ಸಮೀಪ ಲಾರಿಗೆ ಢಿಕ್ಕಿಯಾದ ಕಾರಣ ಮುಖಕ್ಕೆ ಸಣ್ಣಪುಟ್ಟ ಗಾಯ ಮತ್ತು ಮೂಗಿಗೂ ಗಾಯವಾಗಿದೆ. ಇದರಿಂದ ಮುಂಬರುವ ಟೋಕಿಯೊ ಒಲಿಂಪಿಕ್ಸ್ಗೆ ಅವರ ಸಿದ್ಧತೆಗೆ ತೀವ್ರ ಹಿನ್ನಡೆಯಾಗಿದೆ. ಅಪಘಾತದಲ್ಲಿ ವ್ಯಾನ್ ಚಾಲಕ ಮೃತಪಟ್ಟಿದ್ದಾನೆ. ಮೊಮೊಟಾ ಜತೆಗಿದ್ದ ಜಪಾನ್ ತಂಡದ ಸಹಾಯಕ ಕೋಚ್, ಫಿಸಿಯೋ, ಕೆಲ ಬ್ಯಾಡ್ಮಿಂಟನ್ ಅಧಿಕಾರಿಗಳೂ ಸಣ್ಣಪುಟ್ಟ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಂಟೊ ಇಂಡೋನೇಷ್ಯಾ ಮಾಸ್ಟರ್ಸ್ ನಿಂದ ಹೊರಗುಳಿಯಲಿದ್ದಾರೆ. -ಪಿಟಿಐ