ಉಪಾಂತ್ಯದಲ್ಲಿ ಮುಗ್ಗರಿಸಿದ ಸೈನಾ

ಕೌಲಾಲಂಪುರ: ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಹೊಸ ವರ್ಷದ ಮೊದಲ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ಭಾರತದ ಅನುಭವಿ ಷಟ್ಲರ್ ಸೈನಾ ನೆಹ್ವಾಲ್ ನಿರಾಸೆ ಕಂಡಿದ್ದಾರೆ. ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್ ತಾರೆ ಕ್ಯಾರೊಲಿನಾ ಮರಿನ್​ಗೆ ಸೈನಾ ನೆಹ್ವಾಲ್ ನೇರ ಗೇಮ್ಳಿಂದ ಶರಣಾದರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.

2017ರ ಚಾಂಪಿಯನ್ ಸೈನಾ 40 ನಿಮಿಷಗಳ ಉಪಾಂತ್ಯ ಹೋರಾಟದಲ್ಲಿ 16-21, 13-21ರಿಂದ ಒಲಿಂಪಿಕ್ ಸ್ವರ್ಣ ಪದಕ ವಿಜೇತೆ ಹಾಗೂ ವಿಶ್ವ ಚಾಂಪಿಯನ್ ಮರಿನ್​ಗೆ ಮಣಿದರು. ಈ ಮೂಲಕ ಮರಿನ್ ವಿರುದ್ಧದ 11ನೇ ಮುಖಾಮುಖಿಯಲ್ಲಿ ಸೈನಾ 6ನೇ ಸೋಲು ಕಂಡರು. ಉಳಿದ 5ರಲ್ಲಷ್ಟೇ ಗೆದ್ದಿದ್ದಾರೆ.

ಮೊದಲ ಗೇಮ್ಲ್ಲಿ 2-5 ಹಿನ್ನಡೆಯೊಂದಿಗೆ ಆಟ ಆರಂಭಿಸಿದ್ದ ಸೈನಾ ನಂತರ 5-5 ಸಮಬಲದೊಂದಿಗೆ ಲಯಕ್ಕೆ ಮರಳಿದ್ದರು. ಆದರೆ ಆಕ್ರಮಣಕಾರಿ ಆಟದ ಮೂಲಕ ಸತತ ಅಂಕ ಸಂಪಾದಿಸಿದ ಮರಿನ್ 13-9ರಿಂದ ಮೇಲುಗೈ ಕಂಡರು. ಮತ್ತೆ ತಿರುಗೇಟು ನೀಡಿದ 28 ವರ್ಷದ ಸೈನಾ 14-14 ಸಮಬಲ ಸಾಧಿಸಿದರು. ಆದರೆ ಮುಂದಿನ ಅವಕಾಶಗಳಲ್ಲಿ ಮರಿನ್ ಎದುರಾಳಿಗೆ ಮುನ್ನಡೆಯಲು ಅವಕಾಶ ನೀಡಲಿಲ್ಲ. 2ನೇ ಗೇಮ್ಲ್ಲಿ ಮರಿನ್ 6-1 ಮುನ್ನಡೆಯೊಂದಿಗೆ ಸಂಪೂರ್ಣ ಪ್ರಭುತ್ವ ಸಾಧಿಸಿದರಲ್ಲದೆ, ಬಿರುಸಿನ ಸ್ಮ್ಯಾಷ್​ಗಳ ಮೂಲಕ ಗೆಲುವಿನ ನಗೆ ಬೀರಿದರು.