ಕೌಲಾಲಂಪುರ: ಭಾರತದ ಅಗ್ರ ಆಟಗಾರ್ತಿ ಯರಾದ ಪಿವಿ ಸಿಂಧು ಹಾಗೂ ಸೈನಾ ನೆಹ್ವಾಲ್ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಎಂಟರ ಘಟ್ಟದಲ್ಲೇ ನಿರ್ಗಮಿಸಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಕೂಡ ಅಂತ್ಯಗೊಂಡಂತಾಗಿದೆ.
ಶುಕ್ರವಾರ ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ 6ನೇ ಶ್ರೇಯಾಂಕಿತ ಆಟಗಾರ್ತಿ ಹಾಗೂ ವಿಶ್ವ ಚಾಂಪಿಯನ್ ಪಿವಿ ಸಿಂಧು 21-16, 21-16 ನೇರ ಗೇಮ್ಳಿಂದ ಚೀನಾ ತೈಪೆಯ ತೈ ಜಿ ಯಿಂಗ್ ಎದುರು ಕೇವಲ 36 ನಿಮಿಷಗಳ ಹೋರಾಟದಲ್ಲಿ ಸೋಲನುಭವಿಸಿದರು. ಕಳೆದ ಆಗಸ್ಟ್ನಲ್ಲಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಪಿವಿ ಸಿಂಧು ಸತತ ಸೋಲಿನ ಸರಣಿ ಮುಂದುವರಿದಂತಾಗಿದೆ. ವಿಶ್ವ ನಂ.1 ಆಟಗಾರ್ತಿ ಎದುರು ಪಿವಿ ಸಿಂಧುಗೆ ಸತತ 2ನೇ ಹಾಗೂ 13ನೇ ಸೋಲು ಇದಾಗಿದೆ. ಇದಕ್ಕೂ ಮೊದಲು ಕಳೆದ ಅಕ್ಟೋಬರ್ನಲ್ಲಿ ನಡೆದ ಫ್ರೆಂಚ್ ಓಪನ್ ಟೂರ್ನಿಯ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಶರಣಾಗಿದ್ದರು. ಮತ್ತೋರ್ವ ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್ 8-21, 7-21 ರಿಂದ ಒಲಿಂಪಿಕ್ ಚಾಂಪಿಯನ್ ಕ್ಯಾರೊಲಿನಾ ಮರಿನ್ ಎದುರು ಸೋಲು ಕಂಡರು. ಪಂದ್ಯ ಆರಂಭಕ್ಕೂ ಮುನ್ನ ಉಭಯ ಆಟಗಾರ್ತಿಯರು ಮುಖಾಮುಖಿಯಲ್ಲಿ 6-6 ರಿಂದ ಸಮಬಲ ಹೊಂದಿದ್ದರು.