ರಾಷ್ಟ್ರೀಯ ಸೀನಿಯರ್​ ಬ್ಯಾಡ್ಮಿಂಟನ್​ ಚಾಂಪಿಯನ್​ಷಿಪ್​: ಸಿಂಧು ಸೋಲಿಸಿ ಪ್ರಶಸ್ತಿ ಗೆದ್ದ ಸೈನಾ

ಗುವಾಹಟಿ: ಲಂಡನ್ ಒಲಿಂಪಿಕ್ ಕಂಚು ಪದಕ ವಿಜೇತೆ ಸೈನಾ ನೆಹ್ವಾಲ್ 83ನೇ ರಾಷ್ಟ್ರೀಯ ಸೀನಿಯರ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸತತ 2ನೇ ಬಾರಿ ಚಾಂಪಿಯನ್​ಪಟ್ಟ ಅಲಂಕರಿಸಿದರು. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮಧ್ಯಪ್ರದೇಶದ ಸೌರಭ್ ವರ್ಮ 3ನೇ ಬಾರಿಗೆ ರಾಷ್ಟ್ರೀಯ ಚಾಂಪಿಯನ್​ಪಟ್ಟಕ್ಕೇರಿದರು.

ಭಾರತದ ಅಗ್ರ ಆಟಗಾರ್ತಿಯರ ಕದನ ವೀಕ್ಷಿಸಲು ಕಿಕ್ಕಿರಿದು ತುಂಬಿದ್ದ ಟಿಆರ್​ಪಿ ಒಳಾಂಗಣ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸೈನಾ 21-18, 21-15 ನೇರ ಗೇಮ್ಳಿಂದ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ವಿರುದ್ಧ ಸುಲಭ ಜಯ ದಾಖಲಿಸಿ ಕಳೆದ ವರ್ಷದ ಫಲಿತಾಂಶ ಪುನರಾವರ್ತಿಸಿದರು. ಕಳೆದ ವರ್ಷ ನಾಗ್ಪುರದಲ್ಲಿ ನಡೆದ ಟೂರ್ನಿಯಲ್ಲೂ ಸೈನಾ, ಸಿಂಧು ಅವರನ್ನು ಮಣಿಸಿ ಚಾಂಪಿಯನ್ ಆಗಿದ್ದರು.

ವಿಶ್ವ ಚಾಂಪಿಯನ್​ಷಿಪ್ ಬೆಳ್ಳಿ ಪದಕ ವಿಜೇತೆ ಸಿಂಧು ಕಳೆದ ವರ್ಷ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್್ಸ ಫೈನಲ್​ನಲ್ಲೂ ಸೈನಾ ಎದುರು ಪರಾಭವಗೊಂಡಿದ್ದರು. ಇದರೊಂದಿಗೆ 23 ವರ್ಷದ ಪಿವಿ ಸಿಂಧು ಹೈದರಾಬಾದ್​ನವರೇ ಆದ ಸೈನಾ ಎದುರು ಸೇಡು ತೀರಿಸಿಕೊಳ್ಳಲು ವಿಫಲರಾದರು. ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದ ಸಿಂಧು, ಅನುಭವಿ ಆಟಗಾರ್ತಿಯ ಚಾಣಾಕ್ಷ ಹೋರಾಟದ ಎದುರು ಮಂಡಿಯೂರಿದರು. -ಪಿಟಿಐ/ಏಜೆನ್ಸೀಸ್

ಸೌರಭ್ ವರ್ಮಗೆ ಮೂರನೇ ಗರಿ

26 ವರ್ಷದ ಸೌರಭ್ ವರ್ಮ 21-18, 21-13 ನೇರ ಗೇಮ್ಳಿಂದ 17 ವರ್ಷದ ಲಕ್ಷ್ಯ ಸೇನ್ ವಿರುದ್ಧ ಸುಲಭ ಜಯ ದಾಖಲಿಸಿದರು. ಸೌರಭ್ 2011 ಹಾಗೂ 2017ರಲ್ಲಿ ಈ ಸಾಧನೆ ಮಾಡಿದ್ದರು. ಪುರುಷರ ಡಬಲ್ಸ್ ವಿಭಾಗದಲ್ಲಿ 2ನೇ ಶ್ರೇಯಾಂಕಿತ ಪ್ರಣವ್ ಚೋಪ್ರಾ ಹಾಗೂ ಚಿರಾಗ್ ಶೆಟ್ಟಿ ಜೋಡಿ 21-13, 22-20ರಿಂದ ಅರ್ಜುನ್ ಎಂಆರ್ ಹಾಗೂ ಶ್ಲೋಕ್ ರಾಮಚಂದ್ರನ್ ವಿರುದ್ಧ ಜಯ ದಾಖಲಿಸಿ ಚಾಂಪಿಯನ್ ಆದರೆ, ಮಿಶ್ರ ಡಬಲ್ಸ್ ವಿಭಾಗದಲ್ಲಿ ಮನು ಅತ್ರಿ ಹಾಗೂ ಮನೀಷಾ ಕೆ. ಚಾಂಪಿಯನ್​ಪಟ್ಟ ಅಲಂಕರಿಸಿತು.

ಅಶ್ವಿನಿ-ಶಿಖಾ ಜೋಡಿಗೆ ಪ್ರಶಸ್ತಿ

ಕರ್ನಾಟಕದ ಅಶ್ವಿನಿ ಕೆ. ಭಟ್ ಹಾಗೂ ಶಿಖಾ ಗೌತಮ್ ಜೋಡಿ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್​ಪಟ್ಟ ಅಲಂಕರಿಸಿತು. ತೀವ್ರ ಕುತೂಹಲ ಕೆರಳಿಸಿದ್ದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅಶ್ವಿನಿ-ಶಿಖಾ ಜೋಡಿ 21-16, 22-20 ನೇರಗೇಮ್ಳಿಂದ ಕರ್ನಾಟಕದ ಮತ್ತೋರ್ವ ಆಟಗಾರ್ತಿ ಪೂರ್ವಿಶಾ ಎಸ್. ರಾಮ್ ಹಾಗೂ ಆಂಧ್ರದ ಮೇಘನಾ ಜಕ್ಕಂಪುಡಿ ಜೋಡಿ ಎದುರು ಜಯ ದಾಖಲಿಸಿತು. 38 ನಿಮಿಷ ನಡೆದ ಪಂದ್ಯದ ಮೊದಲ ಗೇಮ್ಲ್ಲಿ ಕರ್ನಾಟಕದ ಜೋಡಿ ಸುಲಭ ಜಯ ದಾಖಲಿಸಿತು. 2ನೇ ಗೇಮ್ಲ್ಲಿ ಪ್ರಬಲ ಪ್ರತಿರೋಧ ಎದುರಿಸಿದರೂ ಜಯ ದಾಖಲಿಸಿ ಸಂಭ್ರಮಿಸಿತು.