ಅಪ್ಪನ ಮದುವೆಗೆ ಹೋಗುವಾಗ ನನಗೆ ಅಮ್ಮನೇ ಅಲಂಕಾರ ಮಾಡಿದ್ದರು ಎಂದ್ರು ಈ ನಟಿ!

ಮುಂಬೈ: ಬಾಲಿವುಡ್​ನ ಜನಪ್ರಿಯ ಶೋ ‘ಕಾಫಿ ವಿತ್​ ಕರಣ್​’ ಸೀಸನ್​- 6 ನ ಇತ್ತೀಚಿಗಿನ ಎಪಿಸೋಡ್​ನಲ್ಲಿ ನಟ ಸೈಫ್​ ಅಲಿ ಖಾನ್​ ಹಾಗೂ ಅವರ ಮೊದಲ ಪತ್ನಿಯ ಮಗಳು ಸಾರಾ ಅಲಿ ಖಾನ್​ ಅತಿಥಿಗಳಾಗಿ ಬಂದು ತಮ್ಮ ಸಂಬಂಧ, ಬಾಂಧವ್ಯದ ಬಗ್ಗೆ ಮಾತನಾಡಿದರು.

ಈ ವೇಳೆ ಮಾತನಾಡಿದ ಸಾರಾ, ನನ್ನ ತಂದೆಯ ಮದುವೆಗೆ ನನ್ನ ಅಮ್ಮ ನನಗೆ ಅಲಂಕಾರ ಮಾಡಿದ್ದರು ಎಂದು ತಿಳಿಸಿದ್ದಾರೆ.

ಇದಕ್ಕೂ ಮೊದಲು ಕರೀನಾ ಅವರೊಂದಿಗೆ ವಿವಾಹ, ತಮ್ಮ ಮದುವೆಗೆ ತಮ್ಮ ಮಕ್ಕಳಾದ ಸಾರಾ, ಇಬ್ರಾಹಿಂ ಅಲಿ ಖಾನ್​ ಆಗಮಿಸಿದ್ದ ಬಗ್ಗೆ ಮಾತನಾಡಿದ ಸೈಫ್​ ಅಲಿ ಖಾನ್​, ನಾನು ಮತ್ತು ಕರೀನಾ ಮದುವೆಯಾಗಲು ನಿರ್ಧರಿಸಿದ್ದೆವು. ನಮ್ಮ ಮದುವೆಗೆ ಆಗಮಿಸಲು ಸಾರಾ ತುಂಬ ಉತ್ಸುಕಳಾಗಿದ್ದಳು ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ನಾನು ಅಮೃತಾಗೆ ಒಂದು ಪತ್ರ ಬರೆದಿದ್ದೆ. ನಿನಗೂ ಗೊತ್ತು ನಾವು ಒಂದು ಹೊಸ ಅಧ್ಯಾಯ ಪ್ರಾರಂಭ ಮಾಡುತ್ತಿದ್ದೇವೆ. ನಾವಿಬ್ಬರೂ ಒಂದಾಗಿದ್ದಿದ್ದು ಈಗ ಇತಿಹಾಸ. ಇನ್ನು ಮುಂದೆ ನಮ್ಮಿಬ್ಬರಿಗೂ ಒಳಿತಾಗುತ್ತದೆ ಎಂದು ನಿರೀಕ್ಷಿಸುತ್ತೇನೆ ಎಂದು ಬರೆದು, ಶುಭಾಶಯ ಕೋರಿದ್ದೆ. ಇದನ್ನು ಮೊದಲು ಕರೀನಾಗೆ ತೋರಿಸಿದ್ದೆ. ಅದನ್ನು ನೋಡಿದ ಕರೀನಾ, ಇದು ತುಂಬ ಒಳ್ಳೆಯ ಬರವಣಿಗೆ ಎನಿಸುತ್ತದೆ ಎಂದು ಹೇಳಿದ್ದರು. ನಂತರ ಅದನ್ನು ಅಮೃತಾಗೆ ಕಳಿಸಿದ್ದೆ. ನಂತರ ಸಾರಾ ನನಗೆ ಫೋನ್​ ಮಾಡಿ, ನಾನು ನಿಮ್ಮ ಮದುವೆಗೆ ಬರುತ್ತಿದ್ದೆ. ಆದರೆ ಈಗ ತುಂಬ ಸಂತಸದಿಂದ ಆಗಮಿಸುತ್ತಿದ್ದೇನೆ ಎಂದಿದ್ದಳು. ಅದರಂತೆ ಆಕೆ ನಮ್ಮ ವಿವಾಹಕ್ಕೆ ಆಗಮಿಸಿ ಶುಭಕೋರಿದ್ದಳು ಎಂದು ಸೈಫ್​ ಅಲಿ ಖಾನ್​ ಹೇಳಿದ್ದಾರೆ.

ಮದುವೆ ಸಮಯದಲ್ಲಿ ನನ್ನ ತಾಯಿಯ ಬಗ್ಗೆ ಹಾಗೂ ಕರೀನಾ ಅವರ ಕುರಿತು ಜನರು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು ಎಂದೂ ಸಾರಾ ನೆನಪುಗಳನ್ನು ಹಂಚಿಕೊಂಡಿದ್ದಾರೆ.