ಸಂಭಾವನೆ ತಿರಸ್ಕರಿಸಿದ ಸಾಯಿ ಪಲ್ಲವಿ!

ಸಾಮಾನ್ಯವಾಗಿ ಸಿನಿಮಾಗಳು ಹಿಟ್ ಆದಂತೆಲ್ಲ ಅದರಲ್ಲಿ ನಟಿಸುವ ಕಲಾವಿದರ ಸಂಭಾವನೆ ಗಗನಕ್ಕೇರುತ್ತಲೇ ಹೋಗುತ್ತದೆ. ಕೆಲ ನಟ-ನಟಿಯರಂತೂ ಸಂಭಾವನೆ ವಿಚಾರದಲ್ಲಿ ಶಿಸ್ತಿನ ಸಿಪಾಯಿಗಳಾಗಿರುತ್ತಾರೆ. ಮೊದಲು ದುಡ್ಡು ಆಮೇಲೆ ಕೆಲಸ ಎನ್ನುವಂತಹ ವರ್ತನೆ ಅವರದ್ದು. ಅಂಥದ್ದರಲ್ಲಿ ಸಿನಿಮಾ ಸೋತಿದ್ದಕ್ಕಾಗಿ ಮಿಕ್ಕ ಸಂಭಾವನೆಯನ್ನೇ ತಿರಸ್ಕರಿಸಿದ್ದನ್ನು ಎಲ್ಲಾದರೂ ಕೇಳಿದ್ದೀರಾ? ಅಶ್ಚರ್ಯ ಎನಿಸಿದರೂ ಇದು ನಿಜ. ನಟಿ ಸಾಯಿ ಪಲ್ಲವಿ ದಕ್ಷಿಣ ಭಾರತದಲ್ಲಿ ಬೇಡಿಕೆಯ ನಟಿ. ಕಳೆದ ಡಿ.21ರಂದು ಅವರು ನಟಿಸಿದ್ದ ತಮಿಳಿನ ‘ಮಾರಿ 2’ ಹಾಗೂ ತೆಲುಗಿನ ‘ಪಡಿ ಪಡಿ ಲೇಚೇ ಮನಸು’ ಸಿನಿಮಾಗಳು ಒಟ್ಟಿಗೆ ತೆರೆಗೆ ಬಂದಿದ್ದವು. ಬಾಕ್ಸ್ ಆಫೀಸ್​ನಲ್ಲಿ ಸಾಧಾರಣ ಪ್ರತಿಕ್ರಿಯೆ ಈ ಸಿನಿಮಾಗಳಿಗೆ ಸಿಕ್ಕಿತ್ತು. ಅದರಲ್ಲೂ ‘ಪಡಿ ಪಡಿ..’ ಗಳಿಕೆ ತೀವ್ರ ಕುಸಿತ ಉಂಟಾಗಿತ್ತು.

ಅಂದಹಾಗೆ, ‘ಪಡಿ ಪಡಿ..’ ಚಿತ್ರದ ನಿರ್ವಪಕರು ಪಲ್ಲವಿಗೆ ಕೊಡಬೇಕಿದ್ದ 40 ಲಕ್ಷ ರೂ. ಸಂಭಾವನೆಯಲ್ಲಿ ಒಂದಷ್ಟು ಹಣವನ್ನು ಬಾಕಿ ಉಳಿಸಿಕೊಂಡಿದ್ದರು. ಆದರೆ, ಸಿನಿಮಾ ಉತ್ತಮ ಗಳಿಕೆ ಮಾಡದ್ದರಿಂದ ಸಾಯಿ ಪಲ್ಲವಿ ಆ ಹಣವನ್ನು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪೋಷಕರನ್ನು ಭೇಟಿಯಾದ ನಿರ್ವಪಕರು, ‘ನಿಮ್ಮ ಮಗಳು ಪೂರ್ತಿ ಸಂಭಾವನೆ ಪಡೆದಿಲ್ಲ. ನೀವಾದರೂ ತೆಗೆದುಕೊಳ್ಳಿ’ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೂ, ಅದ್ಯಾವುದೂ ಉಪಯೋಗವಾಗಿಲ್ಲ. ಪೋಷಕರು ಸಹ ಸಾಯಿ ಪಲ್ಲವಿಗೆ ನಿಲುವಿಗೆ ಬದ್ಧರಾಗಿದ್ದಾರೆ. ‘ಫಿದಾ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಸಾಯಿ ಪಲ್ಲವಿ ಮೊದಲ ಚಿತ್ರದಲ್ಲಿ ಭರ್ಜರಿ ಅಭಿಮಾನಿಗಳನ್ನು ಪಡೆದುಕೊಂಡರು. ಇದೀಗ ಸಂಭಾವನೆ ಪಡೆಯದಿರುವ ನಿರ್ಧಾರ ಫ್ಯಾನ್ಸ್​ಗೆ ಅವರ ಮೇಲಿನ ಗೌರವವನ್ನು ಇನ್ನಷ್ಟು ಹೆಚ್ಚಿಸಿದೆ.

Leave a Reply

Your email address will not be published. Required fields are marked *