ನಾಳೆಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಮಹಾಲಿಂಗಪುರ:ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು, ಬಾಗಲಕೋಟೆ ಜಿಲ್ಲಾ ಘಟಕ ಹಾಗೂ ರಬಕವಿ-ಬನಹಟ್ಟಿ ತಾಲೂಕು ಘಟಕ ಸಂಯಕ್ತ ಆಶ್ರಯದಲ್ಲಿ ಬಾಗಲಕೋಟೆ ಜಿಲ್ಲಾ 7ನೇ ಸಾಹಿತ್ಯ ಸಮ್ಮೇಳನ ಡಿ.30 ಹಾಗೂ 31ರಂದು ಮಹಾಲಿಂಗಪುರದ ಶ್ರೀ ಬನಶಂಕರಿದೇವಿ ಸಾಂಸ್ಕೃತಿಕ ಭವನದಲ್ಲಿ ಜರುಗಲಿದೆ.

ಸಾಹಿತಿ ಎಂ.ಎಸ್. ಸಿಂಧೂರ ಸಮ್ಮೇಳನಾಧ್ಯಕ್ಷ ರಾಗಿ ಆಯ್ಕೆಯಾಗಿದ್ದು, ಮಹಾಮಂಟಪಕ್ಕೆ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ, ಮಹಾದ್ವಾರಕ್ಕೆ ಸಂಗಮೇಶ ಕೋಟಿ, ಪುಸ್ತಕ ಮಳಿಗೆಗೆ ದು.ನಿಂ. ಬೆಳಗಲಿ, ಕಲಾ ಮಳಿಗೆಗೆ ಜಾನಪದ ಕಲಾವಿದ ಶ್ರೀ ಚನ್ನಪ್ಪ ಕರಡಿ ಅವರ ನಾಮಕರಣ ಮಾಡಲಾಗಿದೆ.

30ರಂದು ಬೆಳಗ್ಗೆ 7.30ಕ್ಕೆ ಸಚಿವ ಆರ್.ಬಿ. ತಿಮ್ಮಾಪುರ ರಾಷ್ಟ್ರ ಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ಶ್ರೀಶೈಲ ಕರಿಶಂಕರಿ ಪರಿಷತ್ ಧ್ವಜಾರೋಹಣ, ಕಸಾಪ ರಬಕವಿ-ಬನಹಟ್ಟಿ ತಾಲೂಕು ಅಧ್ಯಕ್ಷ ವೀರೇಶಕುಮಾರ ಆಸಂಗಿ ಕನ್ನಡ ಧ್ವಜಾರೋಹಣ ನೆರವೇರಿಸುವರು. ಜಾನಪದ ಪರಿಷತ್ ಮಹಾಲಿಂಗಪುರ ವಲಯ ಅಧ್ಯಕ್ಷ ಬಸವರಾಜ ಮೇಟಿ ಸ್ವಾಗತಿಸುವರು. 8.30ಕ್ಕೆ ಸಮ್ಮೇಳನಾಧ್ಯಕ್ಷರ ನೇತೃತ್ವದಲ್ಲಿ ನಡೆಯುವ ತಾಯಿ ಭುವನೇಶ್ವರಿ ದೇವಿ ಮೆರವಣಿಗೆಗೆ ಮುಧೋಳ ರಸ್ತೆಯ ಮಹಾಲಿಂಗೇಶ್ವರ ಮಹಾದ್ವಾರದಲ್ಲಿ ಜಿ.ಪಂ. ಅಧ್ಯಕ್ಷೆ ವೀಣಾ ಕಾಶಪ್ಪನವರ ಮೆರವಣಿಗೆಗೆ ಚಾಲನೆ ನೀಡುವರು. ಮೆರವಣಿಗೆ ನಡುಚೌಕಿ ಮಹಾಲಿಂಗೇಶ್ವರ ದೇವಸ್ಥಾನ ಮಾರ್ಗವಾಗಿ ಬನಶಂಕರಿ ಸಾಂಸ್ಕೃತಿಕ ಭವನಕ್ಕೆ ತಲುಪಲಿದೆ.

ಮಧ್ಯಾಹ್ನ 11ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ ಜರುಗಲಿದ್ದು, ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಸಿದ್ದು ಸವದಿ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವೆ ಡಾ.ಲೀಲಾದೇವಿ ಆರ್. ಪ್ರಸಾದ ಉದ್ಘಾಟಿಸುವರು. ಜಿಲ್ಲಾ ಕಸಾಪ ಅಧ್ಯಕ್ಷ ಶ್ರೀಶೈಲ ಕರಿಶಂಕರಿ ಪ್ರಾಸ್ತಾವಿಕ ಮಾತನಾಡುವರು.

ಸಮ್ಮೇಳನಾಧ್ಯಕ್ಷ ಸಾಹಿತಿ ಎಂ.ಎಸ್. ಸಿಂಧೂರ ಹಾಗೂ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸಾಹಿತಿ ಅಬ್ಬಾಸ ಮೇಲಿನಮನಿ ಮಾತ ನಾಡುವರು. ದಿ.ಸಂಗಮೇಶ ಕೋಟಿ ಅವರ ‘ವಜ್ರ ಬೀಜಗಳ ನಡುವೆ’ ಪುಸ್ತಕವನ್ನು ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಡಾ.ಅಶೋಕ ನರೋಡೆಯವರ ‘ಡಾ.ಬಿ. ಆರ್. ಹಿರೇಮಠ’ ಪುಸ್ತಕವನ್ನು ಸಚಿವ ಆರ್.ಬಿ. ತಿಮ್ಮಾಪುರ, ಪ್ರಕಾಶ ಪಟ್ಟಣಶೆಟ್ಟಿಯವರ ’ಕವಿ ಸ್ವರ್ಗ’ ಪುಸ್ತಕವನ್ನು ಸಂಸದ ಪಿ.ಸಿ.ಗದ್ದಿಗೌಡರ, ಟಿ.ಬಿ. ಮುಕಾಸೆ ಅವರ ‘ಸಿದ್ಧೇಶ್ವರ ನಡೆ ಜ್ಞಾನದೆಡೆಗೆ’ ಪುಸ್ತಕವನ್ನು ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ, ಸಾಧಿಕ್ ದಬಾಡಿ ಇವರ ‘ಅಗ್ನಿ ಪರ್ವ’ ಪುಸ್ತಕವನ್ನು ಶಾಸಕ ಮುರುಗೇಶ ನಿರಾಣಿ, ಲಿಂಗಾರೂಢ ಹಳ್ಳೂರ ಅವರ ‘ಜೀವ ಜೀತದ ಹಕ್ಕಿ’ ಪುಸ್ತಕವನ್ನು ವಿ.ಪ. ಸದಸ್ಯ ಅರುಣ ಶಹಾಪುರ ಬಿಡುಗಡೆಗೊಳಿಸುವರು. ಶಾಸಕ ಗೋವಿಂದ ಕಾರಜೋಳ ಪುಸ್ತಕ ಮಳಿಗೆ ಉದ್ಘಾಟಿಸುವರು. ಶಾಸಕ ವೀರಣ್ಣ ಚರಂತಿಮಠ ಚಿತ್ರಕಲೆ ಪ್ರದರ್ಶನ ಉದ್ಘಾಟಿಸುವರು. ಕಸಾಪ ತಾಲೂಕು ಅಧ್ಯಕ್ಷ ವೀರೇಶಕುಮಾರ ಆಸಂಗಿ ಸ್ವಾಗತಿಸುವರು. ಕಲಾಚಿಂತನ ಸಂಗೀತ ಪಾಠಶಾಲೆ ಹಾಗೂ ಆರೂಢ ಜ್ಯೋತಿ ಸಂಗೀತ ಕಲಾ ತರಬೇತಿ ವಿದ್ಯಾರ್ಥಿಗಳು ನಾಡಗೀತೆ ಹಾಗೂ ರೈತಗೀತೆ ಹಾಡುವರು.

ಮುಖ್ಯ ಅತಿಥಿಗಳಾಗಿ ಬಾದಾಮಿ ಶಾಸಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ವಿ.ಪ. ಸದಸ್ಯರಾದ ಸನೀಲಗೌಡ ಪಾಟೀಲ ಹಾಗೂ ಹನುಮಂತ ನಿರಾಣಿ ಆಗಮಿಸುವರು. ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ., ಜಿಪಂ ಸಿಇಒ ಗಂಗೂಬಾಯಿ ಮಾನಕರ ವಿಶೇಷ ಆಮಂತ್ರಿತರಾಗಿ ಆಗಮಿಸುವರು. ಡಿ.31ರಂದು ಸಾಹಿತ್ಯಾವಲೋಕನ, ಬಹುತ್ವ ಭಾರತ ವರ್ತಮಾನ, ಶ್ರಮಿಕ ಹೀಗೆ 3 ಗೋಷ್ಠಿಗಳು ಜರುಗಲಿದ್ದು, ಸೋಮವಾರ ಸಹ ಗೋಷ್ಠಿಗಳು ಜರುಗಲಿವೆ ಎಂದು ಪರಿಷತ್ ಪ್ರಕಟಣೆ ತಿಳಿಸಿದೆ.