ನಮ್ಮ ದೇಶದಲ್ಲಿಯೇ ಕನ್ನಡ ಶ್ರೀಮಂತ ಭಾಷೆ

ಮಹಾಂತ ಶ್ರೀಗಳ ಪ್ರಧಾನ ವೇದಿಕೆ ಇಳಕಲ್ಲ: ನಾಡಿನ ಹಿರಿಯ ಸಾಹಿತಿಗಳ, ಶರಣರ, ಸೂಫಿ- ಸಂತರ ಕೊಡುಗೆಯಿಂದಾಗಿ ಕನ್ನಡ ಸಮೃದ್ಧ ಮತ್ತು ಶ್ರೀಮಂತ ಭಾಷೆಯಾಗಿ ಬೆಳೆದಿದೆ ಎಂದು ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.

ನಗರದ ಎಸ್. ಗೊಂಗಡಶೆಟ್ಟಿ ಕಲ್ಯಾಣ ಮಂಟಪದಲ್ಲಿ ಇಳಕಲ್ಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಪುರುಷರು ಮಹಿಳೆಯರಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದ ಅವರು ಸ್ವರಚಿತ ಚುಟುಕು ಕವನ ವಾಚಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ದೊಡ್ಡನಗೌಡ ಪಾಟೀಲ, ಕನ್ನಡ ಭಾಷೆಗೆ ಅನೇಕರು ಸಾಕಷ್ಟು ಕೊಡುಗೆ ನೀಡುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಭಾಷೆ, ನೆಲ, ಜಲ, ಗಡಿ ಸಮಸ್ಯೆ ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಜಯ ಸಿಗುವುದು ಖಂಡಿತ ಎಂದರು.

ಕಸಾಪ ಕೈಗೊಳ್ಳುವ ನಿರ್ಣಯ ಇಳಕಲ್ಲ ತಾಲೂಕು ಅಭಿವೃದ್ಧಿಗೆ ಪೂರಕವಾಗಿರಬೇಕು. ನಿರ್ಣಯ ಪ್ರತಿಯನ್ನು ತಮಗೆ ನೀಡಿದರೆ ಸರ್ಕಾರದ ಮಟ್ಟದಲ್ಲಿ ಒತ್ತಡ ತಂದು ಕೆಲಸ ಮಾಡಿಸಿಕೊಂಡು ಎಲ್ಲರೂ ಒಟ್ಟಾಗಿ ಅಭಿವೃದ್ಧಿ ಪಡಿಸೋಣ ಎಂದು ಭರವಸೆ ನೀಡಿದರು. ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಇಳಕಲ್ಲ ಪತ್ತಿನ ಸಂಘದ ಅಧ್ಯಕ್ಷ ಡಾ.ಮಹಾಂತೇಶ ಕಡಪಟ್ಟಿ, ಸಾಹಿತ್ಯ ಕಾರ್ಯಗಳು ಜ್ಞಾನವನ್ನು ಹೆಚ್ಚಿಸಿ, ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗುತ್ತವೆ ಎಂದು ಹೇಳಿದರು.

ವಿಜಯ ಚಿತ್ರಕಲಾ ಕಾಲೇಜಿನ ಚಿತ್ರಕಲಾ ಪ್ರದರ್ಶನಕ್ಕೆ ಸಿದ್ಧಾರ್ಥ ಪ್ರೌಢಶಾಲೆ ಚೇರ್ಮನ್ ಸಿದ್ದಣ್ಣ ಆಮದಿಹಾಳ ಚಾಲನೆ ನೀಡಿದರು. ಡಾ. ಶಂಭು ಬಳಿಗಾರ ಮಾತನಾಡಿದರು. ಸಮ್ಮೇಳನದ ಸರ್ವಾಧ್ಯಕ್ಷ ಗುರುದಾಸ ನಾಗಲೋಟಿ, ಗುರುಮಹಾಂತ ಶ್ರೀಗಳು, ಜಿ.ಪಿ. ಪಾಟೀಲ, ಚಂದಮ್ಮ ಓಲೇಕಾರ, ಎಂ.ವಿ. ಪಾಟೀಲ, ದಿಲೀಪ ದೇವಗಿರಿಕರ, ಎಂ.ಜಿ. ಪಟ್ಟಣಶೆಟ್ಟರ, ಅಮರೇಶ ಕೌದಿ, ಸುಭಾಷ ಕಠಾರಿಯಾ, ಪಿ.ವಿ. ದೇಸಾಯಿ, ಬಸವರಾಜ ಗವಿಮಠ, ಮಲ್ಲಣ್ಣ ಬೊಮ್ಮಸಾಗರ, ತಿಮ್ಮಣ್ಣ ಬೋಗಾಪುರ, ಕೆ.ಎಸ್. ಕಂದಿಕೊಂಡ, ಮಹಾಬಳೇಶ ಮರಟದ, ವೈಶಾಲಿ ಘಂಟಿ, ಮಹಾಂತೇಶ ಕರ್ಜಗಿ ಇತರರಿದ್ದರು.

ಲೇಖಕಿ ನಿಂಗಮ್ಮ ಭಾವಿಕಟ್ಟಿ ರಚಿಸಿದ ಆಧುನಿಕ ವಚನ ಸಂಭ್ರಮ, ಜಗದೀಶ ಬೆನ್ನೂರ ರಚನೆಯ ಜನಕಪ್ಪೆ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಕಸಾಪ ತಾಲೂಕಾಧ್ಯಕ್ಷ ಸಂಗಣ್ಣ ಗದ್ದಿ ಸ್ವಾಗತಿಸಿದರು. ಜೆ.ಎಸ್. ಅಡವಿ, ಪ್ರವೀಣ ಮುದಗಲ್ಲ, ಇಂದುಪತಿ ಪುರಾಣಿಕ ನಿರೂಪಿಸಿದರು. ಮುತ್ತು ಬೀಳಗಿ ವಂದಿಸಿದರು