ನಾರಾಯಣಾಚಾರ್ಯರ ಪುಸ್ತಕ ಕೊಂಡ್ರೆ ಕಪಾಟು ಉಚಿತ

ಹುಬ್ಬಳ್ಳಿ: ಪುಸ್ತಕ ಓದುವವರ ಸಂಖ್ಯೆ ಹೆಚ್ಚಿಸುವ ಸಲುವಾಗಿ ಹುಬ್ಬಳ್ಳಿಯ ‘ಸಾಹಿತ್ಯ ಪ್ರಕಾಶನ’ ವಿನೂತನ ಯೋಜನೆಯೊಂದನ್ನು ಘೊಷಿಸಿದ್ದು, ಪ್ರೊ. ಕೆ.ಎಸ್. ನಾರಾಯಣಾಚಾರ್ಯರ ಸಮಗ್ರ ಕೃತಿ (95 ಪುಸ್ತಕ)ಗಳನ್ನು ಕೊಂಡರೆ ಎಂಟು ಸಾವಿರ ರೂಪಾಯಿ ಮೌಲ್ಯದ ಕಪಾಟು ಉಚಿತವಾಗಿ ನೀಡುತ್ತಿದೆ.

ವಿಜಯವಾಣಿ ಅಂಕಣಕಾರ ಹಾಗೂ ವಿದ್ವಾಂಸರಾದ ನಾರಾಯಣಾಚಾರ್ಯರ ಪುಸ್ತಕಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ ಇದೆ. 20 ಸಾವಿರ ರೂ. ಮೌಲ್ಯದ ಅವರ ಎಲ್ಲ ಕೃತಿಗಳನ್ನು ಒಂದೇ ಬಾರಿಗೆ ಕೊಂಡರೆ ಸಾಹಿತ್ಯ ಪ್ರಕಾಶನ ಉಚಿತವಾಗಿ ಕಪಾಟು ನೀಡಲಾರಂಭಿಸಿದೆ.

ಯಾಕೀ ಕಲ್ಪನೆ?: ಇಂಥ ಕೊಡುಗೆ ಸೃಷ್ಟಿಯಾಗಿದ್ದರ ಕಥೆಯೂ ಅದ್ಭುತ. ಓದುಗರಾದ ಗುರುರಾಜ ರೋಣದ, ಬಸವರಾಜ ಬ್ಯಾಳಿಹಾಳ ಅವರು ನಾರಾಯಣಾಚಾರ್ಯರ ಕೃತಿಗಳನ್ನು ಕೊಂಡು ಓದಿದ್ದರು. ಇಂಥ ಅದ್ಭುತ ಸಾಹಿತ್ಯ ನಮಗಷ್ಟೇ ಅಲ್ಲ; ಎಲ್ಲರೂ ಓದಬೇಕೆಂಬ ಸದುದ್ದೇಶ ಹೊಂದಿದ್ದರು. ಅಂತೆಯೇ ದುಡಿಮೆಯ ಲಾಭದಲ್ಲಿ ಪುಸ್ತಕಗಳೊಟ್ಟಿಗೆ ಕಪಾಟು ಖರೀದಿಸಿ ಉಚಿತವಾಗಿ ಕೊಡಲಾರಂಭಿಸಿದರು. ಮೊದಲು ಎರಡು ಕಪಾಟು ಮಾಡಿಸಿ ಹುಬ್ಬಳ್ಳಿಯ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ ಹಾಗೂ ಮನಗುಂಡಿಯ ಬಸವಾನಂದ ಶ್ರೀಗಳಿಗೆ ನೀಡಿದರು. ಇದು ಸಾಹಿತ್ಯ ಪ್ರಕಾಶನದ ಗಮನಕ್ಕೆ ಬಂತು. ನಾರಾಯಣಾಚಾರ್ಯರ ಎಲ್ಲ ಪುಸ್ತಕಗಳನ್ನು ಒಮ್ಮೆಲೇ ಕೊಂಡವರಿಗೆ ತಾವೂ ಉಚಿತವಾಗಿ ಕಪಾಟು ನೀಡಲು ಸಾಹಿತ್ಯ ಪ್ರಕಾಶನದವರು ನಿರ್ಧರಿಸಿದರು.

ಬಹು ಬೇಡಿಕೆ: ನಾರಾಯಣಾಚಾರ್ಯರು ಅದಾಗಲೇ ತಮ್ಮದೇ ಆದ ಓದುಗರ ವಲಯ ಸೃಷ್ಟಿಸಿದ್ದಾರೆ. ಕಥೆ, ಕಾದಂಬರಿಯತ್ತ ದೃಷ್ಟಿ ನೆಟ್ಟಿದ್ದ ಓದುಗರು, ಕ್ಲಾಸಿಕ್ ಓದುಗರಾಗಿ ಬದಲಾಗಿದ್ದಾರೆ. ಈ ವಲಯ ಮೊದಲಿನಿಂದಲೂ ಇದೆ, ಈಗ ಮತ್ತಷ್ಟು ವೃದ್ಧಿಸಿದೆ. ಅವರ ಪುಸ್ತಕಗಳನ್ನು ಕೊಂಡರೆ ಉಚಿತ ಕಪಾಟು ನೀಡಲಾಗುವುದು ಎಂಬ ಸಂದೇಶವನ್ನು ಕರಪತ್ರ, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚುರಪಡಿಸಿದ್ದರ ಫಲವಾಗಿ ಈಗ ಬಹು ಬೇಡಿಕೆ ಸೃಷ್ಟಿಯಾಗಿದೆ. ವರ್ಷದಲ್ಲಿ 60 ಕಪಾಟುಗಳೊಟ್ಟಿಗೆ ಪುಸ್ತಕ ಖರೀದಿಯಾಗಿವೆ. ಸದ್ಯ 6 ಆರ್ಡರ್ ಕೈಯಲ್ಲಿವೆ. ಒಂದೇ ಸಲಕ್ಕೆ 10 ಕಪಾಟು ಮಾಡಿಸಲಾಗುತ್ತಿದೆ.

ಶಾಲೆ, ಮಠಗಳಿಗೆ ದೇಣಿಗೆ: ತಾವಷ್ಟೇ ಓದುವುದಲ್ಲ, ಇತರರು ನಾರಾಯಣಾಚಾರ್ಯರ ಪುಸ್ತಕಗಳನ್ನು ಓದಲೆಂದು ಕೆಲವರು 95 ಕೃತಿಗಳು ಹಾಗೂ ಕಪಾಟನ್ನು ದೇಣಿಗೆ ನೀಡುತ್ತಿದ್ದಾರೆ. ವಿವಿಧ ಮಠ, ಶಾಲೆ, ಊರಿನ ಗ್ರಂಥಾಲಯ ಹಾಗೂ ಆಪ್ತರಿಗೆ ಈ ಪುಸ್ತಕ ನೀಡಲು ಶುರುವಿಟ್ಟುಕೊಂಡಿದ್ದಾರೆ. ಹೀಗಾಗಿ ಪ್ರತಿ ವರ್ಷ 30 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಪುಸ್ತಕಗಳು ಮಾರಾಟವಾಗುತ್ತಿವೆ ಎಂದರೆ ನಂಬಲಸಾಧ್ಯ.

ಕಪಾಟು ಬೊಂಬಾಟ್

ಒಂದು ಕಪಾಟಿನಲ್ಲಿ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿಡಬಹುದು. ಇದನ್ನು ಪಶ್ಚಿಮ ಬಂಗಾಳದ ಶಫೀ ಎಂಬುವರು ತಯಾರಿಸಿಕೊಡುತ್ತಿದ್ದಾರೆ. ಫ್ಲೈವುಡ್ ಬಳಸಲಾಗಿರುವ ಈ ಒಂದು ಕಪಾಟಿನ ಬೆಲೆ 8 ಸಾವಿರ ರೂ. ಇದೆ. ಇದು ಉಚಿತವಾಗಿ ಸಿಗುತ್ತಿರುವುದೇ ಸಂತಸದ ವಿಷಯ. ಕಪಾಟಿಗೆ ಅಂಟಿಸಲು ಆಚಾರ್ಯರ ಹೆಸರಿನ ಸ್ಟಿಕ್ಕರ್ ಕೂಡ ನೀಡಲಾಗುತ್ತಿದೆ. ಮಾಹಿತಿಗೆ ದೂ. ಸಂ. 0836-2367676, 9448110034ಗೆ ಸಂರ್ಪಸಿ.

ಓದುಗರ ವಲಯದಲ್ಲಿ ಒಂದು ಟ್ರೆಂಡ್ ನಿರ್ಮಾಣವಾಗಿದೆ. ಪ್ರೊ.ಕೆ.ಎಸ್. ನಾರಾಯಣಾಚಾರ್ಯರ ಪುಸ್ತಕದೊಟ್ಟಿಗೆ ಕಪಾಟು ಉಚಿತವಾಗಿ ನೀಡಲಾಗುತ್ತಿದೆ ಎಂಬ ಸುದ್ದಿ ಎಲ್ಲೆಡೆ ಹರಡಿದೆ. ವಾರಕ್ಕೆ 1 ಕಪಾಟು, ಇದರೊಟ್ಟಿಗೆ ಪುಸ್ತಕ ಖರೀದಿ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ. ನಾರಾಯಣಾಚಾರ್ಯರು ಇಷ್ಟೊಂದು ಓದುಗ ವಲಯ ಸೃಷ್ಟಿಸಿರುವುದು ನೋಡಿ ಅದ್ಭುತವೆನಿಸುತ್ತಿದೆ.

| ಎಂ.ಎ. ಸುಬ್ರಹ್ಮಣ್ಯ, ಸಾಹಿತ್ಯ ಪ್ರಕಾಶನದ ಮಾಲೀಕ, ಹುಬ್ಬಳ್ಳಿ