ಸಹಕಾರ ನಮ್ಮ ಜೀವನ ಪದ್ಧತಿ

ಶಿರಸಿ: ಮೀಟರ್ ಬಡ್ಡಿ ದಂದೆಗೆ ಸಹಕಾರಿ ಸಂಸ್ಥೆಗಳಿಲ್ಲದಿದ್ದರೆ ಕಡಿವಾಣ ಸಾಧ್ಯವಾಗುತ್ತಿರಲಿಲ್ಲ. ಸಹಕಾರ ಎನ್ನುವುದು ನಮ್ಮ ಜೀವನ ಪದ್ಧತಿಯಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶಚಂದ್ರ ಹೇಳಿದರು.

ನಗರದ ತೋಟಗಾರ್ಸ್ ಸೇಲ್ಸ್ ಸೊಸೈಟಿ (ಟಿಎಸ್​ಎಸ್) ಸಂಸ್ಥೆ ವ್ಯಾಪಾರಿ ಪ್ರಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 65ನೇ ಸಹಕಾರಿ ಸಪ್ತಾಹದಲ್ಲಿ ಅವರು ಮಾತನಾಡಿದರು. ವ್ಯಕ್ತಿಯಲ್ಲಿ ಆಕಾಂಕ್ಷೆ ಸಾವಿರಾರು ಇರುತ್ತದೆ. ಆದರೆ, ಮಾಡಿದ ಸಾಧನೆ ಸದಾ ಇರುತ್ತದೆ. ಸಹಕಾರಿ ಸಂಸ್ಥೆಗಳು ಸಾಮಾಜಿಕ ಬದ್ದತೆಯ ಆಧಾರದ ಮೇಲೆ ಕೆಲಸಮಾಡುವ ಮೂಲಕ ಜನತೆಯನ್ನು ತಲುಪುತ್ತಿವೆ. ಕಷ್ಟ ಕಾಲದಲ್ಲಿಯೂ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಸಹಕಾರಿ ಸಂಸ್ಥೆಗಳು ತಮ್ಮ ವ್ಯವಹಾರವನ್ನು ಸ್ಥಗಿತಗೊಳಿಸಿಲ್ಲ, ಸದಸ್ಯರ ಕುಂದು ಕೊರತೆಗೆ ಸ್ಪಂದಿಸುವುದನ್ನು ಸ್ಥಗಿತಗೊಳಿಸಿಲ್ಲ’ ಎಂದರು.

ಟಿಎಸ್​ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಮಾತನಾಡಿ,‘ಸಹಕಾರಿ ಸಂಘಗಳಲ್ಲಿ ವ್ಯವಹಾರ ನಡೆಸುವವರು ಸಾಲ ಮಾಡುತ್ತಾರೆ ಎಂಬ ಅಗೌರವ ಬಹು ಹಿಂದಿತ್ತು. ಇಂತಹ ಯಾವುದೇ ಸಂಗತಿಗಳಿಗೆ ತಲೆಕೆಡಿಸಿಕೊಳ್ಳದೇ ಸದಸ್ಯರು ಸಂಘದಲ್ಲಿಯೇ ವ್ಯವಹಾರ ನಡೆಸಿದ್ದರಿಂದಾಗಿ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಗಟ್ಟಿಯಾಗಿದೆ. ಸದಸ್ಯರ ಋಣ ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದರು.

ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್, ಟಿಎಸ್​ಎಸ್ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ನಿರ್ದೇಶಕ ಗಣಪತಿ ರಾಯ್ಸದ್, ವ್ಯವಸ್ಥಾಪಕ ನಿರ್ದೇಶಕ ರವೀಶ ಹೆಗಡೆ ಇತರರಿದ್ದರು.

ಗೌರವ ಸಲ್ಲಿಕೆ : ಈ ವೇಳೆ ಸಂಘದಲ್ಲಿ ದೀರ್ಘಕಾಲದಿಂದ ವ್ಯವಹಾರ ನಡೆಸಿದ 51 ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ನಾರಾಯಣ ಸುಬ್ರಾಯ ಹೆಗಡೆ ಕುಂದರಗಿ, ಗೋಪಾಲಕೃಷ್ಣ ಹೆಗಡೆ ಕಲ್ಮನೆ ಮಾತನಾಡಿದರು. ಟಿಎಸ್​ಎಸ್ ಸಂಸ್ಥೆ ಆಯೋಜಿಸಿದ್ದ ಲಕ್ಕಿ ಡ್ರಾದಲ್ಲಿ ವಿಜೇತರಾದ 300ಕ್ಕೂ ಅಧಿಕ ಜನರಿಗೆ ಬಹುಮಾನ ವಿತರಿಸಲಾಯಿತು.

30 ಕೋಟಿ ರೂ. ವೆಚ್ಚದಲ್ಲಿ ಪ್ರತಿ ದಿನ 1 ಲಕ್ಷ ತೆಂಗಿನ ಕಾಯಿಗಳ ಸಂಸ್ಕರಣಾ ಘಟಕ ನಿರ್ವಣಕ್ಕೆ ಕ್ಯಾಂಪ್ಕೋ ಸಂಸ್ಥೆ ಮುಂದಾಗಿದೆ. ಕ್ಯಾಂಪ್ಕೋ ಕೈಗೆತ್ತಿಕೊಂಡನ ಕೆಲಸ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ರೈತರಲ್ಲಿ ಬಂದಿದೆ. | ಎಸ್. ಆರ್. ಸತೀಶಚಂದ್ರ ಕ್ಯಾಂಪ್ಕೋ ಅಧ್ಯಕ್ಷ