ಸಹಜಾನಂದರ ಪ್ರವಚನದಲ್ಲಿದೆ ಮಧುರತ್ವ

ಮಹಾಲಿಂಗಪುರ: ದೈವಿ ಶಕ್ತಿ, ಗುರುನಿಷ್ಠೆ, ತಪಸ್ಸು, ಸೇವಾ ಮನೋ ಭಾವವೇ ಸಹಜಾನಂದರನ್ನು ಎತ್ತರಕ್ಕೆ ಬೆಳೆಸಿದೆ ಎಂದು ಬೀದರದ ಶ್ರೀ ಚಿದಂಬರಾಶ್ರಮದ ಸಿದ್ದಾರೂಢ ಮಠದ ಶಿವಕುಮಾರ ಮಹಾಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಸಹಜಯೋಗಿ ಸಹಜಾನಂದ ಸ್ವಾಮಿಗಳ ಅಮೃತ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಹಜಾನಂದರ ಬರವಣಿಗೆ ಹಾಗೂ ಪ್ರವಚನದಲ್ಲಿ ರಸವಿದೆ. ಅದಕ್ಕೂ ಮೇಲಾಗಿ ಮಧುರತ್ವ ಇದೆ, ಸರಸ್ವತಿ ಕೃಪೆ ಇದ್ದುದ್ದರಿಂದಾಗಿ ಇಷ್ಟು ಗ್ರಂಥ ರಚಿಸಿದ್ದಾರೆ. ಇಂಥ ಯಶಸ್ವಿ ಕಾರ್ಯಕ್ರಮ ಮಾಡಿದ ಮಹಾಲಿಂಗಪುರ ಜನತೆಯ ಕಾರ್ಯ ಶ್ಲಾಘನೀಯ ಎಂದರು.

ಸ್ವಾಗತ ಸಮಿತಿ ಗೌರವಾಧ್ಯಕ್ಷ ಶಿರೋಳ ರಾಮಾರೂಢಮಠದ ಶಂಕರಾರೂಢ ಮಹಾ ಸ್ವಾಮಿಗಳು ಮಾತನಾಡಿ, ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಶ್ರೀಗಳು ಮುಮುಕ್ಷಗಳ ಕಲ್ಯಾಣಕ್ಕಾಗಿ ಜೀವ ಸವೆಸಿ ಸಾರ್ಥಕತೆ ಮೆರೆದಿದ್ದಾರೆ ಎಂದರು.

ಜಮಖಂಡಿಯ ರುದ್ರಾವಧೂತ ಮಠದ ಸಹಜಾನಂದ ಅವಧೂತ ಸ್ವಾಮಿಗಳು ಮಾತನಾಡಿ, ಅಜ್ಞಾನಿಗಳಿಗೆ ಮಾತ್ರ ಹೆಣ್ಣು, ಹೊನ್ನು ಮತ್ತು ಮಣ್ಣು ಅಲ್ಲೋಲಕಲ್ಲೋಲ ಮಾಡುತ್ತವೆ ಎಂದರು.

ಕಲಬುರಗಿಯ ಸಿದ್ಧಾರೂಢಮಠದ ಲಕ್ಷ್ಮೀ ತಾಯಿಯವರು ಮಾತನಾಡಿದರು. ಸಹಜಾನಂದ ಸ್ವಾಮಿಗಳಿಗೆ ನಾಣ್ಯಗಳ ತುಲಾಭಾರ ನೆರವೇರಿಸಲಾಯಿತು.

ಗದಗ ಕದಳಿವನಮಠದ ಅಕ್ಕಮಹಾದೇವಿ ತಾಯಿಯವರು, ಬೀದರ್ ಗುರುದೇವ ಆಶ್ರಮದ ಸಿದ್ಧೇಶ್ವರಿ ಮಾತಾಜಿ, ಬುರಣಾಪುರ ಸಿದ್ಧಾರೂಢ ಮಠದ ಯೋಗೀಶ್ವರಿ ತಾಯಿ, ಮುನವಳ್ಳಿಯ ಮಕ್ತಾನಂದ ಸ್ವಾಮಿಗಳು ಪ್ರವಚನ ನೀಡಿದರು.

ರನ್ನಬೆಳಗಲಿ ಋಷಿ ಯೋಗಾಶ್ರಮದ ಸದಾಶಿವ ಗುರೂಜಿ, ಕಂಕಣವಾಡಿಯ ಮಾರುತಿ ಶರಣರು, ಸದಸ್ಯರಾದ ಡಾ. ಬಿ.ಡಿ. ಸೋರಗಾಂವಿ, ಮಲ್ಲಪ್ಪ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಶಾಮಾನಂದ ಪೂಜೇರಿ, ಅಲ್ಲಪ್ಪ ಗುಂಜಿಗಾಂವಿ, ಮಲ್ಲಪ್ಪ ಕಟಗಿ, ಬಾಬು ಹಾದಿಮನಿ, ಗುರುಪಾದ ಅಂಬಿ, ಗೋಲೇಶ ಅಮ್ಮಣಗಿ, ಎಸ್.ಕೆ. ಗಿಂಡೆ, ಅಶೋಕ ಬಾಣಕಾರ, ಸುರೇಶ ಹೊಸೂರ, ನ್ಯಾಯವಾದಿ ಬಿ.ವಿ. ಕೆರೂರ, ರವಿ ಜವಳಗಿ, ಪ್ರಭು ಬೆಳಗಲಿ ಮತ್ತಿತರರಿದ್ದರು.