ವಿಜಯಪುರ: ಪ್ರಾರ್ಥನೆ, ಕರ್ಮ, ವೇದಗಳು, ತಪಸ್ಸು, ಯೋಗಾಭ್ಯಾಸ ಸೇರಿ ಎಲ್ಲದರಲ್ಲೂ ಅಪಾರ ಜ್ಞಾನಿ ಪಡೆದಿದ್ದ ವ್ಯಾಸ ಮಹರ್ಷಿಗಳು ಮಹಾಭಾರತ ಎನ್ನುವ ಬಹುದೊಡ್ಡ ಮಹಾಕಾವ್ಯ ನೀಡಿ ಜ್ಞಾನದ ಸುಧೆಯನ್ನು ಉಣಬಡಿಸಿದ್ದಾರೆ. ಮಹಾನ್ ಋಷಿ ವ್ಯಾಸರು ಸೃಷ್ಟಿಯ ಎಲ್ಲ ರಹಸ್ಯವನ್ನು ತಿಳಿದಿದ್ದಾರೆ. ವ್ಯಾಸ ಋಷಿ ಭಾರತ ದೇಶದ ಅದಮ್ಯ ಚೇತನ ಎಂದು ಚೇತನಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ರಾಜಶ್ರೀ ಜುಗತಿ ಹೇಳಿದರು.
ನಗರದ ಚೇತನಾ ಶಿಕ್ಷಣ ಸಂಸ್ಥೆಯ ಚೇತನಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಭಾರತೀಯ ಶಿಕ್ಷಣ ಮಂಡಲದ ವತಿಯಿಂದ ಶನಿವಾರ ನಡೆದ ವ್ಯಾಸ ಪೂಜಾ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖ್ಯಗುರು, ಸಾಹಿತಿ ಎ.ಎಚ್. ಕೊಳಮಲಿ ಮಾತನಾಡಿ, ಮಹಾನ್ ಮೇಧಾವಿ ವ್ಯಾಸ ಮಹರ್ಷಿಗಳು ಭಾರತ ದೇಶದ ಪರಂಪರೆಯನ್ನು ಇಡೀ ಜಗತ್ತಿಗೆ ತಿಳಿಸಿಕೊಟ್ಟರು. ನಮ್ಮ ದೇಶದ ಸಂಸತಿ ವಿಶ್ವಕ್ಕೆ ಮಾದರಿಯಾಗಿದ್ದು, ನಮ್ಮಲ್ಲಿನ ಶರಣರು, ಸಂತರು, ದಾಸರು, ಮಹರ್ಷಿಗಳು ನಮಗೆಲ್ಲ ಜ್ಞಾನದ ಬುತ್ತಿ ಕೊಟ್ಟು ಹೋಗಿದ್ದು, ಅದನ್ನು ಬಿಚ್ಚಿ ಉಣ್ಣುವ ಕಾರ್ಯ ಯುವಜನತೆ ಮಾಡಬೇಕಾಗಿದೆ ಎಂದರು.
ಭಾರತೀಯ ಶಿಕ್ಷಣ ಮಂಡಲ ಜಿಲ್ಲಾ ಟಕದ ಪ್ರಾಂತ ಸಹಕಾರ್ಯದರ್ಶಿ ಸಿದ್ದು ಮದರಖಂಡಿ ಮಾತನಾಡಿ, ಇಡೀ ಜಗತ್ತೆ ಪೂಜಿಸುವಂತಹ ಪುಣ್ಯದ ರಾಷ್ಟ್ರ ನಮ್ಮದು. ವ್ಯಾಸ ಮಹರ್ಷಿಗಳು ತಮ್ಮ ಜ್ಞಾನದಿಂದ ಭಾರತದ ಶಕ್ತಿಯನ್ನು ವಿಶ್ವಕ್ಕೆ ತೋರಿಸಿದ್ದಾರೆ ಎಂದರು.
ಭಾರತೀಯ ಶಿಕ್ಷಣ ಮಂಡಲದ ಜಿಲ್ಲಾ ಉಪಾಧ್ಯಕ್ಷೆ ಶೀಲಾ ಬಿರಾದಾರ, ಭಾರತೀಯ ಶಿಕ್ಷಣ ಮಂಡಲದ ಅಧ್ಯಕ್ಷ ಬಿ.ಎಸ್. ಬಾಪಗೊಂಡ ಮಾತನಾಡಿದರು.
ಉಪಾಧ್ಯಕ್ಷ ರೋಹಿತ್ ಜುಗತಿ, ನಿರ್ದೇಶಕ ಡಾ. ನಾಗರಾಜ ಹೇರಲಗಿ, ಸಂಯೋಜಕ ಸಾಗರ ಕುಲಕರ್ಣಿ, ಸಿ.ಎಸ್. ವಾಲಿ, ಸಿಬ್ಬಂದಿ ವರ್ಗ ಮತ್ತಿತರರಿದ್ದರು.