20 ಸಾವಿರ ರೂಗೆ ನಡೆಯಿತು ಕೊಲೆ

ಶಹಾಪುರ: ಇತ್ತಿಚೆಗೆ ತಾಲೂಕಿನ ಸಗರ ಗ್ರಾಮದ ಹೊರವಲಯದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವ್ಯಕ್ತಿಯ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಶಹಾಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಸಗರ ಗ್ರಾಮದ ಮಂಜುನಾಥ ಊರುಕಾಯಿ (23) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕೊಲೆಗೆ ಕಾರಣ?: ಸುಟ್ಟು ಕರಕಲಾದ ಶವ ಗ್ರಾಮದ ಸೋಪಣ್ಣ ಮ್ಯಾಳಗಿ (27) ಎಂದು ಗುರುತಿಸಲಾಗಿದ್ದು, ಕೊಲೆಯಾದ ವ್ಯಕ್ತಿ ವಿಕಲಚೇತನನಾಗಿದ್ದ. ಅಲ್ಲದೆ ಅದೇ ಗ್ರಾಮದ ಮಂಜುನಾಥ ಎಂಬಾತನಿಗೆ 20 ಸಾವಿರ ರೂ. ಸಾಲ ನೀಡಿದ್ದ. ತನ್ನ ಸಾಲದ ಹಣವನ್ನು ಕೊಡುವಂತೆ ಮಂಜುನಾಥನಿಗೆ ಸೋಪಣ್ಣ ಪದೇಪದೆ ಕೇಳಿದ ಕಾರಣ ಮಂಜುನಾಥ ಕೋಪಗೊಂಡು ಸೋಪಣ್ಣನನ್ನು ಗ್ರಾಮದ ಹೊರವಲಯಕ್ಕೆ ಕರೆದುಕೊಂಡು ಹೋಗಿ ಕಟ್ಟಿಗೆಯಿಂದ ಹೊಡೆದು ಕೊಂದಿದ್ದಾನೆ. ಈ ವಿಷಯ ಯಾರಿಗೂ ತಿಳಿಯದಂತೆ ತೊಗರಿ ಬಣಿಮೆಯಲ್ಲಿ ಪೆಟ್ರೋಲ್ ಸುರಿದು ಶವವನ್ನು ಸುಟ್ಟು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೊನಾವಣೆ ರಿಷಿಕೇಶ ಭಗವಾನ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಶಿವನಗೌಡ, ಪಿ.ಐ. ನಾಗಾರಾಜ ತಂಡ ತನಿಖೆ ನಡೆಸಿ ಪ್ರಕರಣ ಬೇಧಿಸಿದೆ.