ರಸ್ತೆ ಸುರಕ್ಷತೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಅಧಿಕಾರಿಗಳಿಗೆ ಸೂಚನೆ
ಕೋಲಾರ: ರಾಜ್ಯದಲ್ಲಿ ಶೇ.60 ಜನರು ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದು, ಸುರಕ್ಷತಾ ಕ್ರಮ ಕೈಗೊಳ್ಳುವುದು ಮತ್ತು ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ವಹಿಸುವ ಮೂಲಕ ಅಪಘಾತಗಳು ಆಗದಂತೆ ತಡೆಗಟ್ಟಬೇಕಿದೆ ಎಂದು ರಸ್ತೆ ಸುರಕ್ಷತೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದರು.
ದಕ್ಷಿಣ ಭಾರತದ ಮೊದಲ ಬೆಂಗಳೂರು-ಚೆನ್ನೈ ಕಾರಿಡಾರ್ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಗುರುವಾರ ಹೊಸಕೋಟೆಯಿಂದ ಪರಿಶೀಲಿಸಿದ ನಂತರ ಮಾಲೂರು & ಬಂಗಾರಪೇಟೆ ವ್ಯಾಪ್ತಿಯ ಮಾರ್ಗ ನಿಮಾರ್ಣದ ಆಡಳಿತ ಕಚೇರಿಯಲ್ಲಿ ಯೋಜನೆ ಸಂಬಂಧ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರು ರಸ್ತೆಯಲ್ಲಿ ವಾಹನ ಚಲಾಯಿಸುವ ಮುನ್ನ ಸುರಕ್ಷತೆ ಕ್ರಮಗಳನ್ನು ಪಾಲಿಸುವ ಬಗ್ಗೆ ಎಚ್ಚರ ವಹಿಸಬೇಕು. ಕಾರಾದರೆ ಸೀಟ್ ಬೆಲ್ಟ್, ದ್ವಿಚಕ್ರವಾಹನಕ್ಕೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಮೊಬೈಲ್ನಲ್ಲಿ ಮಾತನಾಡುತ್ತಾ, ಮದ್ಯಪಾನ ಮಾಡಿ ವಾಹನ ಚಲಾಯಿಸಿದಂತೆ ಪೊಲೀಸರು ಜಾಗೃತಿ ಮೂಡಿಸಬೇಕಿದೆ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸದೆ ವಾಹನ ಚಲಾಯಿಸುವವರ ವಾಹನ ಪರವಾನಗಿ ರದ್ದುಗೊಳಿಸಬೇಕು. ಆರ್ಟಿಒ ಅಧಿಕಾರಿಗಳು ಕಚೇರಿ ಬಿಟ್ಟು ಬರುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿದ್ದು, ಜನರ ಜೀವ ಉಳಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಲೋಕ್ಕುಮಾರ್ ಸೂಚಿಸಿದರು.
ಮಧ್ಯಾಹ್ನ 3ರಿಂದ ರಾತ್ರಿ 9ರ ವರೆಗೆ ಮದ್ಯಪಾನ ಮಾಡಿ ವಾಹನ ಚಲಾಯಿಸುವ ಪ್ರಕರಣಗಳು ಹೆಚ್ಚು ಕಂಡು ಬರುತ್ತಿವೆ. ಆದ್ದರಿಂದ ಆಲ್ಕೋಹಾಲ್ ಸೇವಿಸಿ ವಾಹನ ಚಲಾಯಿಸುವ ಪ್ರಕರಣಗಳನ್ನು ಆಲ್ಕೋಹಾಲ್ ಪತ್ತೆಹಚ್ಚುವ ಮೀಟರ್ ಬಳಸಿ ಪ್ರಕರಣಗಳನ್ನು ಪತ್ತೆಹಚ್ಚಬೇಕು. ಟೋಲ್ಗೇಟ್ ಮತ್ತು ಆಯಕಟ್ಟಿನ ಜಾಗದಲ್ಲಿ ವಾಹನಗಳನ್ನು ತಪಾಸಣೆ ನಡೆಸಿ ಮದ್ಯಸೇವನೆ ಮಾಡಿರುವುದು ಕಂಡುಬಂದರೆ ಪ್ರಕರಣಗಳನ್ನು ದಾಖಲಿಸಿ ಎಂದು ಪೊಲೀಸರಿಗೆ ಸಲಹೆ ನೀಡಿದರು.
ಸೂಕ್ಷ್ಮ ಕ್ಯಾಮರಾಗಳನ್ನು ಅಳವಡಿಸಿ: ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ಹೆದ್ದಾರಿಯ ಲೋಕಾರ್ಪಣೆ ಸಂದರ್ಭಕ್ಕೆ ಅಪಘಾತಗಳನ್ನು ತಡೆಯಲು ಪ್ರತಿ 10 ಕಿಮೀಗೆ 4 ಸೂಕ್ಷ್ಮ ಕ್ಯಾಮರಾಗಳನ್ನು ಅಳವಡಿಸಿ ವಾಹನಗಳ ವೇಗ ಪರಿಶೀಲಿಸಬೇಕು. ರಸ್ತೆಯ ತಡೆಗೋಡೆಗಳ ಎತ್ತರವನ್ನು ಹೆಚ್ಚಿಸಬೇಕು. ಮಳೆ ಬಂದಾಗ ರಸ್ತೆ ಮೇಲೆ ನೀರು ನಿಲ್ಲದಂತೆ ಈಗಲೇ ಕ್ರಮ ಜರುಗಿಸಬೇಕು. ಪಾದಚಾರಿ, ವಾಹನಗಳು ರಸ್ತೆ ದಾಟಲು ತೊಂದರೆಯಾಗದಂತೆ ಕಾಮಗಾರಿ ಮಾಡಿಸಿ, ಇದರಿಂದ ರಸ್ತೆಯಲ್ಲಿ ಆಗುವ ಅಪಘಾತಗಳನ್ನು ತಡೆಯಬಹುದು ಎಂದು ಹೆದ್ದಾರಿ ಯೋಜನಾ ನಿರ್ದೇಶಕಿ ಅರ್ಚನಾಗೆ ಅಲೋಕ್ ಕುಮಾರ್ ಸಲಹೆ ನೀಡಿದರು.
ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಕಾರಿಡರ್ ರಸ್ತೆ ಕಾಮಗಾರಿ ಕುರಿತು ನಾಮಫಲಕಗಳನ್ನು ಅಳವಡಿಸಬೇಕು. ಅಂಡರ್ ಪಾಸ್ ಕಾಮಗಾರಿಗಳನ್ನು ಮಾಡಿಸಿ ಅದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಆಗುವ ರಸ್ತೆ ಅಪಘಾತಗಳನ್ನು ತಡೆಯಬಹುದು ಎಂದು ಲೋಕೋಪಯೋಗಿ ಅಧಿಕಾರಿಗಳಿಗೆ ಸಲಹೆ ನೀಡಿದರು. ಸಭೆಯಲ್ಲಿ ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್, ಬೆಂಗಳೂರು ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್, ರಾಷ್ಟ್ರೀಯ ಹೆದ್ದಾರಿ ಯೋಜನ ನಿರ್ದೇಶಕ ಜೈಕುಮಾರ್, ಕೋಲಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಫೆಬ್ರವರಿ ಅಂತ್ಯಕ್ಕೆ ಕಾರಿಡಾರ್ ಲೋಕಾರ್ಪಣೆ? ಬೆಂಗಳೂರು & ಚೆನ್ನೈ ಕಾರಿಡಾರ್ ಹೆದ್ದಾರಿ 2024ರ ಫೆಬ್ರವರಿ ಅಂತ್ಯಕ್ಕೆ ಲೋಕಾರ್ಪಣೆ ಮಾಡಬೇಕಿದೆ. ಇದಕ್ಕಾಗಿ ಈಗಾಗಲೇ ಹೆದ್ದಾರಿ ಪ್ರಾಧಿಕಾರ, ಗುತ್ತಿಗೆದಾರರು ಕಾಮಗಾರಿಗೆ ವೇಗ ನೀಡಿದ್ದು, ರಸ್ತೆ ಸುರಕ್ಷತೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಸಂಬಂಧಿಸಿದ ಎಲ್ಲ ಅಧಿಕಾರಿಗಳು, ಗುತ್ತಿಗೆದಾರ ಸಂಸ್ಥೆಯಾದ ಡಿಬಿಎಲ್ನ ಅಧಿಕಾರಿಗಳೊಂದಿಗೆ ರಸ್ತೆ ಸುರಕ್ಷತೆ ಕುರಿತು ಮಾಹಿತಿ ಸಂಗ್ರಹಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ನಾಲ್ಕು ತಿಂಗಳ ಹಿಂದೆಯಷ್ಟೆ ಮೈಸೂರು&ಬೆಂಗಳೂರು ಹೆದ್ದಾರಿ ಲೋಕಾರ್ಪಣೆಯಾಗಿದ್ದು ಹೆದ್ದಾರಿ ಅವೈಜ್ಞಾನಿಕವಾಗಿದೆ, ಅಪಘಾತಗಳ ಕೂಪವಾಗಿದೆ ಎಂಬ ದೂರುಗಳು ಕೇಳಿ ಬಂದಿದ್ದು, ದ್ವಿಚಕ್ರ ವಾಹನಗಳಿಗೆ ನಿಷೇಧ ವಿಧಿಸಿರುವುದು, ವಾಹನಗಳಿಗೆ ವೇಗ ಮಿತಿ ಹೇರಿರುವುದು ತಿಳಿದ ಸಂಗತಿಯೇ. ಇದರ ಪರಿಣಾಮವೋ ಎಂಬಂತೆ ಪೊಲೀಸ್ ಅಧಿಕಾರಿಗಳು ಇನ್ನೂ ಕಾಮಗಾರಿ ನಡೆಯುತ್ತಿರುವಾಗಲೆ ಪರಿಶೀಲಿಸಿ ಸೂಚನೆಗಳು ಹಾಗೂ ಮಾರ್ಗದರ್ಶನ ನೀಡಿರುವುದು ವಿಶೇಷ ಎನ್ನಬಹುದು. ಇನ್ನೂ ಈ ಮಾರ್ಗದ ಕಾಮಗಾರಿ ಶೇ.70 ರಷ್ಟು ಮುಗಿದಿದ್ದು, ಭೂಮಿ ವಶಪಡೆಯುವುದು ತಡವಾದ ಹಿನ್ನೆಲೆ ಕೆಲವೆಡೆ ಕಾಮಗಾರಿ ಈಗಷ್ಟೇ ಪ್ರಾರಂಭವಾಗಿದೆ. ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನ ಕೈಗೊಂಡು ಯೋಜನೆ ನಡೆಸಲಾಗುತ್ತಿದೆ ಎಂಬುದು ಅಧಿಕಾರಿಗಳ ಮಾತು.